
ವಾಷಿಂಗ್ಟನ್: ಭಾರತವು ಈಗಾಗಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ನಿಯಮದಿಂದ ಸಂಕಷ್ಟ ಎದುರಿಸುತ್ತಿದ್ದು ಇದೀಗ ಟ್ರಂಪ್ ವಿದೇಶಗಳಿಂದ ಆಮದಾಗುತ್ತಿರುವ ಔಷಧಿಗಳಿಗೇ ಶೇಕಡಾ 100 ತೆರಿಗೆ ವಿಧಿಸುವುದಾಗಿ ಘೋಷಣೆ ಮಾಡಿದ್ದು ಇದರಿಂದ ಭಾರತದದ ಫಾರ್ಮಾ ಕಂಪನಿಗಳಿಗೆ ತೀವ್ರ ಸಂಕಷ್ಟ ಉಂಟು ಮಾಡಲಿದೆ.
ಅಕ್ಟೋಬರ್ 1, 2025 ರಿಂದ ನಾವು ಬ್ರಾಂಡೆಂಡ್ ಅಥವಾ ಪೇಟೆಂಟ್ ಪಡೆದ ಔಷಧ ಉತ್ಪನ್ನದ ಮೇಲೆ 100 ಪ್ರತಿಶತ ತೆರಿಗೆ ವಿಧಿಸುತ್ತೇವೆ. ಅಮೆರಿಕದಲ್ಲಿ ತನ್ನ ಔಷಧ ಉತ್ಪಾದನಾ ಘಟಕವನ್ನು ನಿರ್ಮಿಸದ ಯಾವುದೇ ಕಂಪನಿಗೂ ಈ ತೆರಿಗೆ ಅನ್ವಯವಾಗಲಿದೆ ಎಂದು ಟ್ರಂಪ್ ಹೇಳಿದ್ದು ದೇಶೀಯವಾಗಿ ಉತ್ಪಾದನೆಯನ್ನು ಹೆಚ್ಚಿಸುವಾಗ ಸರ್ಕಾರದ ಬಜೆಟ್ ಕೊರತೆಯನ್ನು ಕಡಿಮೆ ಮಾಡಲು ಈ ತೆರಿಗೆಗಳು ಸಹಾಯ ಮಾಡುತ್ತವೆ ಎಂಬುದು ಟ್ರಂಪ್ ವಿಶ್ವಾಸವಾಗಿದೆ.
ಅಮೆರಿಕದ ಗ್ರಾಹಕರು ಭಾರತದಲ್ಲಿ ತಯಾರಾಗುವ ಕಡಿಮೆ ಬೆಲೆಯ ಜೆನೆರಿಕ್ ಔಷಧಿಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ವರದಿಗಳ ಪ್ರಕಾರ, ಅಮೆರಿಕದಲ್ಲಿ ಬಳಸುವ ಜೆನೆರಿಕ್ ಔಷಧಿಗಳಲ್ಲಿ ಶೇ.45 ಕ್ಕಿಂತ ಹೆಚ್ಚು ಮತ್ತು ಬಯೋಸಿಮಿಲರ್ ಔಷಧಿಗಳಲ್ಲಿ ಶೇ.15 ಕ್ಕಿಂತ ಹೆಚ್ಚು ಔಷಧಿಯನ್ನು ಭಾರತವೇ ಪೂರೈಸುತ್ತದೆ. ಆದರೆ ಅಮೆರಿಕಾ ಔಷಧಿ ಕಂಪನಿಗಳ ಮೇಲೆ ವಿಧಿಸುತ್ತಿರುವ ಹೆಚ್ಚಿನ ಸುಂಕಗಳು ದೇಶದಲ್ಲಿ ಬೆಲೆ ಏರಿಕೆ, ಹಣದುಬ್ಬರ ಮತ್ತು ಔಷಧ ಕೊರತೆಗೆ ಕಾರಣವಾಗಬಹುದು.






















































