
ಬೆಂಗಳೂರು: ಗಾಂಧಿ ಭವನ ಸಭಾಂಗಣದಲ್ಲಿ ನಡೆದ ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ಅವರ “ಕರಾವಳಿ ರಕ್ತ ಕಣ್ಣೀರು”ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಪ್ರಿಯಾಂಕ ಖರ್ಗೆ, ರಾಷ್ಟ್ರೀಯ ಸ್ವಯಂ ಸೇವಾ ಸಂಘ ಒಂದು ದೈವವಾದರೆ ,ಬಿಜೆಪಿ ಅದರ ನೆರಳು ನಾವು ನೆರಳಿನ ಜೊತೆ ಗುದ್ದಾಡುತ್ತಿದ್ದೇವೆ. ದೈವದ ಜೊತೆ ಗುದ್ದಾಡಿದರೆ ದೇಶ ಉದ್ಧಾರವಾಗುತ್ತದೆ. ಆರ್ ಎಸ್ ಎಸ್ ಹಿಂದೆ ಬಹುದೊಡ್ಡ ಅಕ್ರಮ ಹಣ ವರ್ಗಾವಣೆ ದಂಧೆ ಇದೆ ಎಂದು ಆರೋಪಿಸಿದ್ದಾರೆ.
ಆರ್ ಎಸ್ ಎಸ್ ನವರಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಕೇಳಿದರೆ ಅವರಲ್ಲಿ ಉತ್ತರವೇ ಇಲ್ಲ. ಆರ್ ಎಸ್ ಎಸ್ ಅನ್ನು ನೋಂದಣಿ ಮಾಡಬೇಕೆಂದು ಹೇಳಿದಾಗ ನೋಂದಣಿ ಮಾಡಿಸುವ ಅಗತ್ಯವಿಲ್ಲ ನಮ್ಮದು ವ್ಯಕ್ತಿಗಳ ಸಂಸ್ಥೆ ಎಂದು ಆರ್‌ಎಸ್ ಮುಖ್ಯಸ್ಥ ತಿಳಿಸುತ್ತಾರೆ. ಬೆಂಗಳೂರು ಕ್ಲಬ್ ಸಹ ವ್ಯಕ್ತಿಗಳ ಸಂಸ್ಥೆ ಅದು ತೆರಿಗೆ ಮತ್ತು ಸಂವಿಧಾನದ ವ್ಯಾಪ್ತಿಗೆ ಬರುತ್ತದೆ. ನಾನು ಈಗ ಆರ್ ಎಸ್ ಎಸ್ ಬಗ್ಗೆ ಸ್ವಲ್ಪ ಆಳವಾಗಿ ಅಧ್ಯಯನ ಮಾಡುತ್ತಿದ್ದೇನೆ. ಇವತ್ತಲ್ಲ ನಾಳೆ ಆರ್ ಎಸ್ ಎಸ್ ನೊಂದಣಿಯಾಗಲೇಬೇಕು ಎಂದು ತಿಳಿಸಿದ್ದಾರೆ.
ಇಂಗ್ಲೆಂಡ್ ನಿಂದ ಆರ್ ಎಸ್ ಎಸ್ ದುಡ್ಡು ತೆಗೆದುಕೊಳ್ಳುತ್ತದೆ. ನಾವೆಲ್ಲ ತೆರಿಗೆ ಪಾವತಿಸುತ್ತೇವೆ .ಆದರೆ ಆರ್ ಎಸ್ ಎಸ್ ಮಾತ್ರ ತೆರಿಗೆ ವಿನಾಯಿತಿ ಕೇಳುತ್ತದೆ. ಆರ್ ಎಸ್ ಎಸ್ 2500 ಸಂಘಟನೆಗಳ ನೆಟ್ವರ್ಕ್ ಹೊಂದಿದೆ. ಇನ್ನು ಆರ್ ಎಸ್ ಎಸ್ ಮುಖ್ಯಸ್ಥ ನಾವು ಯಾರ ಬಳಿಯು ದೇಣಿಗೆ ಪಡೆಯುವುದಿಲ್ಲ. ಕೇವಲ ಗುರುದಕ್ಷಿಣೆ ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಇದನ್ನು ಕೇಳಿ ನನಗೆ ಅಚ್ಚರಿಯಾಗಿದೆ. ಗುರು ಎಂದರೆ ಧ್ವಜ, ಇವರು ಧ್ವಜದ ಹೆಸರಿನಲ್ಲಿ ದುಡ್ಡು ತೆಗೆದುಕೊಳ್ಳುತ್ತಾರೆ. ಹಾಗಾದರೆ ನಾನು ಕೂಡ ನೀಲಿ ಧ್ವಜ ಹಾಕಿ ಹಣ ತೆಗೆದುಕೊಳ್ಳಲು ಸಾಧ್ಯವೇ..? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.




