
ಸಿಎಂ ಸಿದ್ದರಾಮಯ್ಯ ಅವರು ರಾಘವೇಂದ್ರ ಸ್ವಾಮಿಗಳ ಫೋಟೋ ಸ್ವೀಕರಿಸಲು ನಿರಾಕರಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗುತ್ತಿದ್ದು ಇದು ಭಕ್ತರ ವಲಯದಲ್ಲಿ ಅಸಮಾಧಾನ ಮೂಡಿಸಿ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.
ಈ ವಿಚಾರಕ್ಕೆ ನಟ ಜಗ್ಗೇಶ್ ಎಕ್ಸ್ ಖಾತೆಯ ಮೂಲಕ ಪ್ರತಿಕ್ರಿಯಿಸಿ ಇಂತಹ ನಡೆ ಯೋಗ ಕೊನೆಗಾಣುವ ಸೂಚನೆ ಎಂದೂ ಎಚ್ಚರಿಕೆ ನೀಡಿರುವ ಅವರು ‘ರಾಯರನ್ನು ಅವಮಾನಿಸಿದವರು ಇತಿಹಾಸದಲ್ಲಿ ಉದ್ಧಾರವಾಗಿಲ್ಲ. ಭಕ್ತಿಯಿಂದ ನೀಡುವ ರಾಯರ ಫೋಟೋ ಅಥವಾ ವಿಗ್ರಹವನ್ನು ಗೌರವದಿಂದ ಸ್ವೀಕರಿಸಬೇಕು. ಒಂದು ವೇಳೆ ಅದನ್ನು ತಿರಸ್ಕರಿಸಿದರೆ ಅಂತಹ ವ್ಯಕ್ತಿಗೆ ಯೋಗ ಕೊನೆ ಆಗುವ ದಿನಗಳು ಸಮೀಪಿಸಿದೆ ಎಂದರ್ಥ’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಘಟನೆ ಹಿನ್ನೆಲೆ:
ವೈರಲ್ ವಿಡಿಯೋದಲ್ಲಿ ಸಿಎಂ ಅವರು ಕಾರಿನಲ್ಲಿ ಕುಳಿತು ಸಾರ್ವಜನಿಕರ ಅಹವಾಲು ಸ್ವೀಕರಿಸುವ ವೇಳೆ ರಾಘವೇಂದ್ರ ಸ್ವಾಮಿಗಳ ಫೋಟೋವನ್ನು ಹಿಂದಿರುಗಿಸುತ್ತಾರೆ. ಆದರೆ ಮತ್ತೊಬ್ಬರು ನೀಡಿದ ‘ಚಾಣಕ್ಯ ನೀತಿ’ ಪುಸ್ತಕವನ್ನು ಅವರು ಸ್ವೀಕರಿಸಿರುವುದು ಕಂಡುಬಂದಿದೆ. ಈ ಘಟನೆ ಬಳಿಕ ರಾಘವೇಂದ್ರ ಸ್ವಾಮಿಗಳ ಭಕ್ತರು ಸಿಎಂ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.








