ಮೂರು ವರ್ಷಗಳಲ್ಲಿ ನಾಲ್ಕು ಬಜೆಟ್, ಕರಾವಳಿ ಭಾಗಕ್ಕೆ ನಯಾಪೈಸೆಯೂ ಅನುದಾನವಿಲ್ಲ: ಶಾಸಕ.ವಿ ಸುನಿಲ್ ಕುಮಾರ್

ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಕರಾವಳಿ ಭಾಗದ ನಿರ್ಲಕ್ಷ್ಯವನ್ನು ಖಂಡಿಸಿ, ಶಾಸಕ ವಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು.
ಬಜಗೋಳಿಯಲ್ಲಿ ಮುಡಾರು ಗ್ರಾಮ ಸಮಿತಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಶಾಸಕ ವಿ. ಸುನಿಲ್ ಕುಮಾರ್, ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ತೀವ್ರವಾಗಿ ಟೀಕಿಸಿದರು. ಮೂರು ವರ್ಷಗಳಲ್ಲಿ ನಾಲ್ಕು ಬಜೆಟ್ ಮಂಡಿಸಿದರೂ ಕರಾವಳಿ ಭಾಗಕ್ಕೆ ನಯಾಪೈಸೆಯೂ ಅನುದಾನ ನೀಡಿಲ್ಲ. ಬಿಜೆಪಿ ಆಡಳಿತಾವಧಿಯಲ್ಲಿ ಕಾರ್ಕಳದಲ್ಲಿ ನಡೆದ ಅಭಿವೃದ್ಧಿ ಪರ್ವಕ್ಕೆ ಈಗಿನ ಸರ್ಕಾರ ಬ್ರೇಕ್ ಹಾಕಿದೆ,” ಎಂದು ಕಿಡಿಕಾರಿದರು.
ವಿದ್ಯುತ್ ಬಿಲ್ ಗಗನಕ್ಕೇರಿದೆ, ಆರ್.ಟಿ.ಸಿ ದರ ಹೆಚ್ಚಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡವರಿಗೆ ಆಶ್ರಯ ಮನೆಗಳು ಸಿಗುತ್ತಿಲ್ಲ. ಮರಳು ಸಮಸ್ಯೆಯಿಂದ ಕಟ್ಟಡ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ದೇಗುಲಗಳ ಅಭಿವೃದ್ಧಿಗೆ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸಲಾಗಿದೆ ಎಂದು ಅವರು ಆರೋಪಿಸಿದರು.


ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ ಹೆಗ್ಡೆ ಮಾತನಾಡಿ, ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಅಭಿವೃದ್ಧಿ ಕಾರ್ಯಗಳ ಕ್ರೆಡಿಟ್ ಪಡೆಯಲು ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದರು. ಪ್ರವಾಸೋದ್ಯಮ ಕ್ಷೇತ್ರಕ್ಕೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜನಪ್ರತಿನಿಧಿಗಳು, ಗ್ರಾ.ಪಂ ಸದಸ್ಯರು, ಪಕ್ಷದ ಹಿರಿಯರು, ಹಾಗೂ ಕಾರ್ಯಕರ್ತರು, ಭಾಗವಹಿಸಿದ್ದರು







