
ಸುವರ್ಣಸೌಧ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಕನ್ನಡ ಶಾಲೆಗಳನ್ನು ಮುಚ್ಚುವುದಾಗಿ ಸಾಮಾಜಿಕ ಮಾಧ್ಯಮ ಹಾಗೂ ಪತ್ರಿಕಾ ಮಾಧ್ಯಮಗಳಲ್ಲಿ ಬರುವ ಸುದ್ದಿ ಸರಿಯಲ್ಲ, ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಶಾಲೆ ಆರಂಭಿಸಲು ಯಾವುದೇ ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಹೇಳಿದ್ದಾರೆ.
ಈವರೆಗೆ ಯಾವುದೇ ಶಾಲೆ ಮುಚ್ಚುವುದಾಗಿ ತಾವು ಹೇಳಿಲ್ಲ. ಗ್ರಾಮೀಣ ಭಾಗದ ಮಕ್ಕಳು ಉತ್ತಮವಾದ ಶಿಕ್ಷಣ ಪಡೆಯಬೇಕು, ಪೂರ್ವ ಪ್ರಾಥಮಿಕದಿಂದ ಪದವಿಪೂರ್ವ ಶಿಕ್ಷಣ ಒಂದೇ ಸೂರಿನಡಿ ಸಿಗಬೇಕು ಎಂಬ ಕಾರಣದಿಂದ ಕೆಪಿಎಸ್ ಶಾಲೆ ಆರಂಭಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 309 ಕೆಪಿಎಸ್ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. 2025-26ನೇ ಸಾಲಿನಲ್ಲಿ 900 ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸಲಾಗುತ್ತಿದೆ ಎಂದು ಹೇಳಿದರು.



















