
ಬೀಳಗಿ: ನಾಡಿನೆಲ್ಲೆಡೆ ಜನರು ಯುಗಾದಿ ಹಬ್ಬದ ಸಂಭ್ರಮಾಚರಣೆಯಲ್ಲಿದ್ದು ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಜಕನೇರನಕಟ್ಟೆ ವಿಶ್ವದ ಉತ್ತರ ಹಾಗೂ ಮಧ್ಯಭಾಗದಲ್ಲಿ ಭೂಕಂಪವಾಗಲಿದೆ. ಮುಂಬರುವ ದಿನಮಾನದಲ್ಲಿ ರಾಜಕೀಯ ವ್ಯಕ್ತಿಗಳಿಗೆ ಕಂಟಕ ಕಾದಿದೆ ಎಂದು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಹೊರವಲಯದಲ್ಲಿ ರೈತರಿಂದ ಜಕನೇರನಕಟ್ಟೆ ಭವಿಷ್ಯ ನುಡಿಯಲಾಗುತ್ತದೆ. ಮಣ್ಣಿನಿಂದ ಒಂದು ಕಟ್ಟೆ ನಿರ್ಮಿಸಿ ಅದಕ್ಕೆ ಜಕನೇರನಕಟ್ಟೆ ಎಂದು ಕರೆಯುತ್ತಾರೆ. ಕಟ್ಟೆ ಮೇಲೆ ಬಸವಣ್ಣನ ಮಣ್ಣಿನ ಮೂರ್ತಿ ಮುಂದೆ ಬಿಂದಿಗೆಯಲ್ಲಿ ನೀರು ಸಂಗ್ರಹ ಮಾಡುತ್ತಾರೆ. ಕಟ್ಟೆ ಮೇಲೆ ಎಕ್ಕೆ ಗಿಡದ ಎಲೆ ಮತ್ತು ಕಟ್ಟೆಯ ಕೆಳಗೆ ಎತ್ತಿನ ಬಂಡಿ ನೇಗಿಲು ಮಾಡಿ ಪೂಜೆ ಮಾಡಲಾಗುತ್ತದೆ. ಕಟ್ಟೆ ಮುಂದೆ ಮಣ್ಣಿನಿಂದ ಎತ್ತು, ಕೂರಿ, ಮಣ್ಣಿನಲ್ಲಿ ರೈತನ ಮೂರ್ತಿ ಮಾಡಿ ಬಿತ್ತನೆ ಮಾಡುವ ದೃಶ್ಯ ರಚನೆ ಮಾಡುತ್ತಾರೆ. ನೇಕಾರನ ಮಗ್ಗ, ವ್ಯಾಪಾರಿಯ ತಕ್ಕಡಿ, ಊರ ಅಗಸಿಬಾಗಿಲು ನಿರ್ಮಾಣ ಮಾಡುತ್ತಾರೆ. ರಾತ್ರಿ ಬೆಳಗಿನವರೆಗೆ ಯಾರೂ ಸ್ಥಳದಲ್ಲಿ ಇರುವುದಿಲ್ಲ. ಮುಂಜಾನೆ ರೈತರು ಸೇರಿದಂತೆ ಎಲ್ಲರೂ ಬಂದು ಜಮಾಯಿಸುತ್ತಾರೆ. ಕಟ್ಟೆ ಯಾವ ಭಾಗದಲ್ಲಿ ಬಿರುಕು ಬಿಡುತ್ತದೆ ಆ ಭಾಗದಲ್ಲಿ ಭೂಕಂಪವಾಗುತ್ತದೆ ಎಂಬ ನಂಬಿಕೆ ಇದೆ.
ಈ ಬಾರಿ ಉತ್ತರ ಮತ್ತು ಮಧ್ಯ ಭಾಗದಲ್ಲಿ ಜಕನೇರನಕಟ್ಟೆ ಬಿರುಕು ಬಿಟ್ಟಿದ್ದು, ಆದ್ದರಿಂದ ವಿಶ್ವದ ಉತ್ತರ ಹಾಗೂ ಮಧ್ಯಭಾಗದಲ್ಲಿ ಭೂಕಂಪವಾಗಲಿದೆ ಎಂಬ ನಂಬಿಕೆ ಮನೆಮಾಡಿದೆ. ದಕ್ಷಿಣ ಭಾಗದಲ್ಲಿ ಆಹಾರದ ಉಂಡೆಗಳು ಖಾಲಿಯಾಗಿವೆ. ಉತ್ತರ ಭಾಗದಲ್ಲಿನ ಆಹಾರದ ಧಾನ್ಯಗಳು ಖಾಲಿಯಾಗಿಲ್ಲ. ಇದರ ಅರ್ಥ ಉತ್ತರ ಭಾಗದಲ್ಲಿ ಜನಪೀಡೆಯಿದೆ ಎಂದು.
ಬಸವಣ್ಣನ ಮುಂದಿನ ನೀರಿನ ಮಡಿಕೆಯಲ್ಲಿ ಅರ್ಧ ಮಡಿಕೆ ಖಾಲಿಯಾಗಿದ್ದು ಇದರರ್ಥ ಮಳೆ ಸಮೃದ್ಧಿಯಾಗುತ್ತದೆ ಮತ್ತು ಖರ್ಚು ಕೂಡ ಜಾಸ್ತಿಯಾಗುತ್ತದೆ. ತಕ್ಕಡಿ ಬಿದ್ದು ಹೋಗಿದ್ದು ವ್ಯಾಪಾರ ವಹಿವಾಟು ಕುಸಿಯುತ್ತದೆ ಎಂದರ್ಥ. ಅಗಸಿಬಾಗಿಲು ಬಿದ್ದು ಹೋಗಿದ್ದು, ಮುಂಬರುವ ದಿನಮಾನದಲ್ಲಿ ರಾಜಕೀಯ ವ್ಯಕ್ತಿಗಳಿಗೆ ಕಂಟಕ ಕಾದಿದೆ ಎಂದರ್ಥ. ಕೂರಿಗೆ ಕುಂಟೆ ಸ್ತಬ್ದವಾಗಿದ್ದು, ಆಧುನಿಕ ಕೃಷಿಯಿಂದ ರೈತ ಸ್ತಬ್ದನಾಗಿದ್ದು, ಆರಾಮವಾಗಿದ್ದಾನೆ ಎಂಬುದು ಇದರ ಒಳಾರ್ಥವಾಗಿದೆ.




