
ನವದೆಹಲಿ: ಬಿಹಾರ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ನಿಟ್ಟಿನಲ್ಲಿ ಮಹಾಘಟಬಂಧನ್ ಮೈತ್ರಿಕೂಟದ ವತಿಯಿಂದ ಇಂದು 2 ಕಡೆ ಆಯೋಜಿಸಿದ್ದ ರ‍್ಯಾಲಿಯಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಪಾಲ್ಗೊಂಡು ಮಾತನಾಡಿದ್ದು ಈ ವೇಳೆ ಮೋದಿ ಮತಕ್ಕಾಗಿ ಡ್ಯಾನ್ಸು, ಡ್ರಾಮಾ ಮಾಡ್ತಾರೆ, ಬೇಕಿದ್ರೆ ಭರತನಾಟ್ಯನೂ ಮಾಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮುಜಾಫರ್‌ಪುರದಲ್ಲಿ ನಡೆದ ಜಂಟಿ ರ‍್ಯಾಲಿಯಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಲೇವಡಿ ಮಾಡಿದ್ದಾರೆ. ಮೋದಿ ಅವರು ಚುನಾವಣೆ ಗೆಲ್ಲಲು ಏನ್ ಬೇಕಾದ್ರೂ ಮಾಡ್ತಾರೆ. ಮೋದಿಗೆ ನಿಮ್ಮ ಮತ ಬೇಕಾಗಿದೆ, ಅದಕ್ಕಾಗಿ ನೀವು ಸ್ಟೇಜ್ ಮೇಲೆ ಕುಣೀರಿ ಅಂದ್ರೂ ಕುಣೀತಾರೆ. ಭರತನಾಟ್ಯ ಕೂಡ ಮಾಡ್ತಾರೆ ಎಂದು ಆಕ್ರೋಶ ಹೊರಹಾಕಿದರು.
ಬಿಜೆಪಿ ಮತದಾರರಿಗೆ ವಂಚನೆ ಮಾಡಲು ಹಾಗೂ ರಾಜ್ಯ ಚುನಾವಣೆಯ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು ಚುನಾವಣಾ ಯೋಗದೊಂದಿಗೆ ಒಳಒಪ್ಪಂದ ಮಾಡಿಕೊಂಡಿದೆ. ಈ ಹಿಂದೆ ಮಹಾರಾಷ್ಟ್ರದಲ್ಲಿ ಮತಗಳನ್ನ ಕದ್ದರು, ಹರಿಯಾಣದಲ್ಲಿ ಮತ ಕದ್ದರು ಈಗ ಬಿಹಾರದಲ್ಲಿ ಮತಗಳನ್ನ ಕದಿಯಲು ತಮ್ಮ ಕೈಲಾದಷ್ಟು ಪ್ರಯತ್ನಪಡ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.



















































