
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಅವರ ಪತ್ನಿ ಶಿಲ್ಪಾ ಗಣೇಶ್ ಈಗ ಮೊದಲ ಬಾರಿಗೆ ತುಳು ಸಿನಿಮಾ ನಿರ್ಮಾಣಕ್ಕೆ ಕಾಲಿಟ್ಟಿದ್ದಾರೆ.
ತುಳು ಸಿನಿಮಾಗಳಿಗೆ ಕಳೆದ ಕೆಲ ವರ್ಷಗಳಲ್ಲಿ ಮಾರುಕಟ್ಟೆ ದೊಡ್ಡದಾಗಿದ್ದು ಸ್ವತಃ ಮಂಗಳೂರು ಮೂಲದವರಾದ ಶಿಲ್ಪಾ ಗಣೇಶ್ ಉಡುಪಿ ಬಳಿಯ ಬಾರ್ಕೂರು ಅವರ ಹುಟ್ಟೂರು. ಹಾಗಾಗಿ ತಮ್ಮ ತವರು ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡಬೇಕು ಎಂಬ ಆಸೆ ಮೊದಲಿನಿಂದಲೂ ಇದ್ದು ಹಾಗಾಗಿ ತುಳು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
ಉತ್ತಮ ಬಜೆಟ್ನಲ್ಲಿ ಗುಣಮಟ್ಟದ ಸಿನಿಮಾ ನಿರ್ಮಾಣ ಮಾಡುವ ಉದ್ದೇಶದಿಂದ ಈ ಪ್ರಾಜೆಕ್ಟ್ ಆರಂಭಿಸಿದ್ದು ಸಿನಿಮಾವನ್ನು ಸಂದೀಪ್ ಬೆದ್ರ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ ಕತೆ ಹಾಗೂ ಚಿತ್ರಕತೆಯನ್ನು ಮೋಹನ್ ಭಟ್ಕಳ್ ಬರೆದಿದ್ದಾರೆ. ಜನಪ್ರಿಯ ಕ್ಯಾಮೆರಾಮನ್ ಹಾಗೂ ನಿರ್ದೇಶಕ ಸಂತೋಶ್ ರೈ ಪತಾಜೆ ಅವರು ಈ ಸಿನಿಮಾಕ್ಕೆ ಕ್ಯಾಮೆರಾ ಕೆಲಸ ಮಾಡಲಿದ್ದಾರೆ. ಸಿನಿಮಾದ ನಾಯಕನಾಗಿ ಕರಾವಳಿ ಭಾಗದ ಬಿಜೆಪಿ ಹಾಗೂ ಬಿಲ್ಲವ ಸಮುದಾಯದ ಮುಖಂಡರೂ ಆಗಿರುವ ಹರಿಕೃಷ್ಣ ಬಂಟ್ವಾಳ ಅವರ ಪುತ್ರ ನಿತ್ಯ ಪ್ರಕಾಶ್ ಬಂಟ್ವಾಳ ನಟಿಸಲಿದ್ದು ನಾಯಕಿಯಾಗಿ ಹೊಸ ಮುಖವನ್ನು ಪರಿಚಯ ಮಾಡಲಿದ್ದಾರೆ.
ಶಿಲ್ಪಾ ಗಣೇಶ್ ಸಿನಿಮಾದ ಕತೆ, ಚಿತ್ರಕತೆ, ತಂತ್ರಜ್ಞರು ಅಂತಿಮವಾಗಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಚಾಲ್ತಿಯಲ್ಲಿವೆ. ಸಿನಿಮಾದ ಚಿತ್ರೀಕರಣ ಡಿಸೆಂಬರ್ ತಿಂಗಳಲ್ಲಿ ಪ್ರಾರಂಭವಾಗಲಿದ್ದು, ನಟ ಗೋಲ್ಡನ್ ಸ್ಟಾರ್ ಗಣೇಶ್ ಅತಿಥಿ ಪಾತ್ರದಲ್ಲಿ ನಟಿಸುವ ಸಾಧ್ಯತೆಯೂ ಇದೆ.
ಕೌಟುಂಬಿಕ ಕಥೆಯನ್ನು ಒಳಗೊಂಡು ಹಾಸ್ಯ ಪ್ರಧಾನವಾಗಿರುವ ಈ ಸಿನಿಮಾದ ಚಿತ್ರೀಕರಣ ಮಂಗಳೂರು, ಉಡುಪಿ, ಮೂಡುಬಿದಿರೆ, ಬಂಟ್ವಾಳ ಸೇರಿದಂತೆ ಕರಾವಳಿ ಭಾಗದಲ್ಲಿ ನಡೆಯಲಿದೆ. ಚಿತ್ರದ ಹಾಡುಗಳನ್ನು ಕೆಲವು ಬೇರೆ ಲೊಕೇಶನ್ಗಳಲ್ಲಿ ಚಿತ್ರೀಕರಣ ಮಾಡುವ ಉದ್ದೇಶ ಇದೆ ಎಂದು ನಿರ್ದೇಶಕ ಸಂದೀಪ್ ಹೇಳಿದ್ದಾರೆ.
















































