31.3 C
Udupi
Friday, February 20, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 65

ಭರತೇಶ್ ಶೆಟ್ಟಿ, ಇಕ್ಕಾರ್

ಹೀಗೆ ದ್ರುಪದನ ಹೊಸ ರಾಜಧಾನಿ ಉತ್ತರ ಪಾಂಚಾಲದ, ಕಾಂಪಿಣ್ಯ ನಗರದ ಅರಮನೆಯಲ್ಲಿ ದೃಷ್ಟದ್ಯುಮ್ನ – ಕೃಷ್ಣೆ ಬೆಳೆಯುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣ ಪ್ರಾಪ್ತಿಯಾದ ಬಳಿಕ ಮಗ ದೃಷ್ಟದ್ಯುಮ್ನನನ್ನು ಮಿತ್ರ ದ್ರೋಣನ ಆಶ್ರಮಕ್ಕೆ ಕಳುಹಿಸಿದ. ಶಿಷ್ಯನಾಗಿ ಬಂದು ಸೇರಿದ ದೃಷ್ಟದ್ಯುಮ್ನ ಮಿತ್ರ ದ್ರುಪದನ ಕಾಮ್ಯ ಕರ್ಮ ಕಾಮೇಷ್ಟಿ ಯಾಗದ ಫಲ ಸ್ವರೂಪವಾಗಿ ಆವಿರ್ಭವಿಸಿದವ. ಕಾಲಾಂತರದಲ್ಲಿ ತನಗೆ ಮೃತ್ಯುದೇವತೆಯಾಗುವವ ಎಂಬ ಪೂರ್ಣ ಅರಿವಿದ್ದರೂ, ನಿರ್ವಂಚನೆಯಿಂದ ಶಿಕ್ಷಣ ನೀಡಲಾರಂಭಿಸಿದರು ಗುರು ದ್ರೋಣಾಚಾರ್ಯರು. ಶಿಕ್ಷಕ ಎಂಬುವುದು ಉದರ ಪೋಷಣೆಯ ಕೇವಲ ವೃತ್ತಿಯಲ್ಲ, ತೊಡಗಿಸಿಕೊಂಡ ಪ್ರವೃತ್ತಿಯಿಂದ ಅದೊಂದು ಪವಿತ್ರ ವೃತ ಎಂಬ ಭಾಷ್ಯ ಬರೆದರು ಗುರು ದ್ರೋಣರು.

ಹೀಗಿರಲು ಅತ್ತ ಚಂದ್ರವಂಶದ ರಾಜಾ ಯಯಾತಿ – ಗುರು ಶುಕ್ರಾಚಾರ್ಯ ಪುತ್ರಿ ದೇವಯಾನೆ. ಯಯಾತಿ ತನ್ನ ಮಗಳ ಗಂಡನಾಗಿದ್ದೂ ದಾಸಿಯಾಗಿ ಬಂದ ಶರ್ಮಿಷ್ಠೆಯ ಜೊತೆ ಸಂಸಾರ ಬೆಳೆಸಿ ಸಂತಾನ ಪಡೆದ ವಿಚಾರವಾಗಿ ಅಕಾಲ ವೃದ್ಧಾಪ್ಯ ಪ್ರಾಪ್ತಿಯ ಶಾಪಗ್ರಸ್ಥನಾಗಿದ್ದ. ವಿಮೋಚನೆಗೆ ಶುಕ್ರಾಚಾರ್ಯರು ಯಯಾತಿಯ ಮಕ್ಕಳ ಯೌವ್ವನದ ವಿನಿಮಯದ ದಾರಿ ತೋರಿಸಿದ್ದರು. ಶರ್ಮಿಷ್ಠೆಯ ಪುತ್ರ ಪುರು ತ್ಯಾಗಮಯಿಯಾಗಿ ತಂದೆಗೆ ತನ್ನ ಯೌವ್ವನ ನೀಡಿದ್ದ. ಆದರೆ ದೇವಯಾನೆಯ ಮಕ್ಕಳು ಯಯಾತಿಗೆ ಯೌವನ ನೀಡಲು ನಿರಾಕರಿಸಿದ್ದರು. ಅವರಲ್ಲಿ ಯದು ಕೂಡ ಓರ್ವ. ಯದು ವಿನ ವಂಶದ ಪರಂಪರೆ ಯಾದವ ವಂಶವಾಗಿ ಬೆಳೆಯಿತು. ಈ ವಂಶವೂ ಕವಲೊಡೆಯುತ್ತಾ ಬೆಳೆದು ದೇವ ಮೀಢ ಎಂಬವನ ಪತ್ನಿ ಮಾರೀಷೆ ಗೆ ಹುಟ್ಟಿದ ಮಗ “ಶೂರ ಸೇನ” ಇವನಿಗೆ ಮೂರು ಮಂದಿ ಹೆಣ್ಣು ಮಕ್ಕಳೂ, ಐದು ಮಂದಿ ಗಂಡು ಮಕ್ಕಳೂ ಇದ್ದರು. ಈತನ ಮೂರು ಹೆಣ್ಮಕ್ಕಳಲ್ಲಿ ಹಿರಿಯವಳು ಪೃಥೆ. ಮಕ್ಕಳಿಲ್ಲದ ವ್ಯಥೆಯಲ್ಲಿದ್ದ ಅರಸ ಕುಂತಿಭೋಜ ಶೂರಸೇನನ ಮಗಳಾದ ಪೃಥೆಯನ್ನು ದತ್ತು ಪಡೆದ ಬಳಿಕ ಆಕೆ ಕುಂತಿ ಎಂಬ ನಾಮಧೇಯವನ್ನು ಪಡೆದಳು. ಚಂದ್ರವಂಶದ ಚಕ್ರವರ್ತಿ ಪಾಂಡುವಿನ ಪತ್ನಿಯಾಗಿ ಪಾಂಡವರ ತಾಯಿಯಾಗಿದ್ದಾಳೆ.

ಯದುವಂಶದ ಇನ್ನೊಂದು ಕವಲಿನಲ್ಲಿ ಆಹುಕ ನೆಂಬವನಿಗೆ ಬಹು ಮಂದಿ ಮಕ್ಕಳಿದ್ದರು. ಅವರಲ್ಲಿ ಉಗ್ರಸೇನ ಮತ್ತು ದೇವಕ ಎಂಬವರು ಪ್ರಸಿದ್ದರು. ಉಗ್ರಸೇನನು ಮಥುರಾ ಪಟ್ಟಣದ ಅರಸನಾಗಿದ್ದನು. ದೇವಕನಿಗೆ ಏಳು ಮಂದಿ ಪುತ್ರಿಯರಿದ್ದರು. ಅವರಲ್ಲಿ ದೇವಕಿ ಕಿರಿಯವಳು. ದೇವಕಿಯ ಆರು ಮಂದಿ ಅಕ್ಕಂದಿರನ್ನು ವಸುದೇವನಿಗೆ ವಿವಾಹ ಮಾಡಿಸಿದ್ದರು.

ಹೀಗಿರಲು ಒಂದು ದಿನ ಉಗ್ರಸೇನನ ಪತ್ನಿ – ಮಥುರಾ ಪಟ್ಟಣದ ರಾಣಿ ಸ್ನಾನಾರ್ಥವಾಗಿ ಯಮುನಾ ತೀರಕ್ಕೆ ಹೋಗಿದ್ದಾಗ ಕಾಮ ಪರವಶಳಾಗಿ ತನ್ನ ಪತಿಯನ್ನು ಸ್ಮರಿಸಿಕೊಂಡಳು. ಅದೇ ಸಮಯಕ್ಕೆ ಸಂದರ್ಭವನ್ನು ಅರಿತ ದ್ರವಿಳ ಎಂಬ ರಾಕ್ಷಸ ಉಗ್ರಸೇನನ ರೂಪವನ್ನಾಂತು ಪ್ರಕಟನಾದನು. ಪತಿಯೆಂದೇ ಭಾವಿಸಿ ರಾಣಿ ಈ ರಾಕ್ಷಸನಿಗೆ ಅನುಕೂಲೆಯಾದಳು. ಮಿಲನ ಮಧ್ಯ ಅನುಮಾನಗೊಂಡು, ಕೆಲವೊಂದು ಕುರುಹುಗಳಿಂದ ಪತಿ ಹೌದೇ ಎಂಬ ಸಂದೇಹ ಪರಿಹಾರಕ್ಕಾಗಿ ಪ್ರಶ್ನಿಸಿದಾಗ, ಆತನ ನಿಜ ವಿಚಾರ ತಿಳಿದು ದುಃಖವೂ ಕ್ರೋಧವೂ ಏಕ ಕಾಲದಲ್ಲಿ ಪ್ರಕಟವಾಯಿತು. ಆದರೆ ಕಾಲ ಮಿಂಚಿ ಹೋಗಿತ್ತು. ದುರುಳ ರಾಕ್ಷಸನ ದುರ್ಬೀಜ ಈಕೆಯ ಕ್ಷೇತ್ರ ಸೇರಿಯಾಗಿತ್ತು. ನಿರ್ಮೂಲನೆ ಹೇಗೆಂಬ ದಾರಿ ಕಾಣದೆ ಕ್ರುದ್ದಳಾದ ರಾಣಿ ನಿನ್ನ ಕಪಟದ ಈ ಸಂತಾನ ಯದುವಂಶಜನಿಂದಲೇ ನಾಶವಾಗಲಿ ಎಂಬ ಶಾಪ ನೀಡಿದಳು. ಆದರೆ ಈ ವಿಷಯವನ್ನು ಯಾರಿಗೂ ಹೇಳದೆ ಗೌಪ್ಯವಾಗಿರಿಸಿ ಅರಮನೆ ಸೇರಿದಳು. ಪರಿಣಾಮ ಅಸುರೀ ಸ್ವಭಾವದ ಪುತ್ರನೋರ್ವ ಜನಿಸಿದ. ಆತನಿಗೆ ಕಂಸ ಎಂಬ ಹೆಸರನ್ನಿಟ್ಟರು. ಬಳಿಕ ಎರಡು ಹೆಣ್ಣುಮಕ್ಕಳು ಕಂಸಾ, ಮತ್ತು ಕಂಸಾವತಿಯರು ಜನಿಸಿ ಕಂಸನ ತಂಗಿಯರಾದರು.

ಮಕ್ಕಳು ಬೆಳೆದು ದೊಡ್ಡವರಾದರು. ಕಂಸಾ ಎಂಬವಳನ್ನು ವಸುದೇವನ ತಮ್ಮನಾದ ದೇವಭಾಗನಿಗೂ, ಕಂಸಾವತಿಯನ್ನು ಇನ್ನೋರ್ವ ತಮ್ಮನಾದ ದೇವಶ್ರವನಿಗೂ ವಿವಾಹ ಮಾಡಿದರು.

ಕಂಸಾ – ದೇವಭಾಗರಿಗೆ ಚಿತ್ರಕೇತು, ಬೃಹದ್ಬಲ, ಉದ್ಧವ ರೆಂಬ ಮೂರು ಮಕ್ಕಳು ಹುಟ್ಟಿದರು. ಕಂಸಾವತಿ ದೇವಶ್ರವರಿಗೂ ಇಬ್ಬರು ಗಂಡು ಮಕ್ಕಳಾದರು.

ಕಂಸನು ಬೆಳೆಯುತ್ತಾ ಜಗಜಟ್ಟಿಯಾಗಿ ಮಲ್ಲಯುದ್ದ ಪ್ರವೀಣನಾಗಿ ಬೆಳೆಯುತ್ತಿದ್ದ. ಪ್ರಾಯ ಪ್ರಬುದ್ದನಾದಾಗ ಮಾಗಧ ನ ಮಕ್ಕಳಾದ ‘ಆಸ್ತಿ -ಪ್ರಾಸ್ತಿ’ ಹೆಸರಿನ ಸಹೋದರಿಯರನ್ನು ಮದುವೆ ಮಾಡಿಸಿದರು. ಕಂಸನಿಗೆ ಅರಸನಾಗಿ ರಾಜ್ಯಾಧಿಕಾರ ಪಡೆಯುವ ಉತ್ಕಟ ಹಂಬಲ ಬೆಳೆಯಿತು. ಮಾವ ಮಗಧ ದೇಶದ ಪ್ರಬಲ ಮಹಾರಾಜ ಮಾಗಧನ ಬೆಂಬಲ ಪಡೆದು ತನ್ನ ತಂದೆ ಉಗ್ರಸೇನನ್ನು ಬಲಾತ್ಕಾರದಿಂದ ಸಿಂಹಾಸನದಿಂದ ಕೆಳಗಿಳಿಸಿ ಸೆರೆಮನೆಗೆ ತಳ್ಳಿದ. ಆ ಜಾಗದಲ್ಲಿ ತಾನೇ ಮಥುರಾ ಮಹೀಂದ್ರನಾಗಿ ಆಳ್ವಿಕೆ ನಡೆಸಲಾರಂಭಿಸಿದ. ಯಾದವರಿಗೆ ಕಂಸನ ಕ್ರೌರ್ಯದ ವರ್ತನೆ ಅಹಿತವೂ ಭಯಪ್ರದವೂ ಆಗಿ ಪರಿಣಮಿಸಿದ ಕಾರಣ ಯಾರಿಗೂ ಪ್ರತಿಭಟಿಸುವ ಧೈರ್ಯವಿಲ್ಲದಾಯಿತು. ಕ್ರಮೇಣ ಮಥುರಾ ನಗರ ತೊರೆದು ರಾಜ್ಯದ ಹೊರ ಭಾಗ ಸೇರತೊಡಗಿದರು. ಇದಕ್ಕೆ ಪೂರಕವಾಗಿ ರಾಕ್ಷಸ ಪ್ರವೃತ್ತಿಯ ಕಂಸನಿಗೆ ಅಸುರರ ಸಂಪರ್ಕವೂ ಹಿತವಾಗಿ ಬೆಳೆಯತೊಡಗಿತು. ಕಂಸನ ಕೂಟವೂ ದೌಷ್ಟ್ಯದ ಗಡಣವಾಗುತ್ತಾ ಸಾಗಿತು. ಈ ಬೆಳವಣಿಗೆ ಯಾದವರ ಗುಪ್ತ ವೈರಕ್ಕೂ ಕಾರಣವಾಗುತ್ತಿತ್ತು. ಹೀಗಿರಲು ಯಾದವರ ಓಲೈಕೆಗಾಗಿ ಕಂಸನು ಯಾದವರ ಮಧ್ಯೆ ಪ್ರಭಾವಿಯೂ ಸಜ್ಜನನೂ ಆಗಿದ್ದ ಅಕ್ರೂರನನ್ನು ತನ್ನ ಮಂತ್ರಿಯಾಗಿ ನೇಮಿಸಿದ.

ಇತ್ತ ವಸುದೇವನು ಕೂಡ ಯಾದವರಿಗೆ ಹಿತವನಾಗಿ, ಪ್ರಭಾವಿಯೂ ಆಗಿದ್ದನು. ಕಂಸನ ದೃಷ್ಟಿಯೂ ವಸುದೇವನ ಮೇಲಿದ್ದು ಆತನನ್ನೂ ತನ್ನ ಬಳಗಕ್ಕೆ ಸೆಳೆಯುವ ಯೋಜನೆ ಹೊಂದಿದ್ದ. ಆದರೆ ವಸುದೇವನೂ ಕೂಡ ಮಥುರಾ ನಗರ ತೊರೆದು ಗೋಪಾಲಕ ಗೊಲ್ಲರ ಹಳ್ಳಿ ಸೇರಿ ತನ್ನ ಪತ್ನಿಯರ ಜೊತೆ ಸಂಸಾರ ಸಾಗಿಸುತ್ತಿದ್ದ. ಬಹು ಪತ್ನಿಯರಿದ್ದರೂ ಮಕ್ಕಳಿಲ್ಲದ ಕೊರಗು ಆತನಿಗಿತ್ತು.

ಕಂಸ ನಿರಂಕುಶ ರಾಜನಾಗಿ‌ ಮೆರೆಯುತ್ತಿದ್ದ. ರಾಜಕಾರಣ, ತಂತ್ರಗಾರಿಕೆಯ ನಿಪುಣತೆ ಆತನಿಗೆ ಮಹಾಬಲವಾಗಿತ್ತು. ಹೀಗಿರಲು ದೇವಕನ ಕಿರಿಯ ಮಗಳು ದೇವಕಿಯೂ ಪ್ರಾಯ ಪ್ರಬುದ್ದಳಾದಳು. ತನ್ನ ಚಿಕ್ಕಪ್ಪನ ಮಗಳು ದೇವಕಿ ಕಂಸನಿಗೆ ತಂಗಿ. ದುಷ್ಟ, ಕ್ರೂರ ಸ್ವಭಾವ ಹೊಂದಿದ್ದ ಕಂಸನಿಗೆ ತಂಗಿ ದೇವಕಿಯ ಸದ್ಗುಣ, ಶಾಂತ ಸ್ವಭಾವದಿಂದಾಗಿ ಬಲು ಪ್ರೀತಳಾಗಿದ್ದಳು. ಯಾದವ ವಂಶದ ವಸುದೇವನೂ ಸಜ್ಜನ. ಆತನಿಗೆ ಈಗಾಗಲೇ ಮದುವೆಯಾಗಿದ್ದರೂ ಅವರು ಆರು ಮಂದಿಯೂ ದೇವಕಿಯ ಸ್ವಂತ ಅಕ್ಕಂದಿರೇ ಆಗಿದ್ದರು. ತಂಗಿ ದೇವಕಿಗೂ ಆತನೇ ಸೂಕ್ತ ವರನೆಂದು ತೀರ್ಮಾನಿಸಿ ಪ್ರಸ್ತಾಪ ಕಳುಹಿಸಿದ. ಮಕ್ಕಳಿಲ್ಲದ ಕೊರಗಿನಲ್ಲಿದ್ದ ವಸುದೇವ ಈಕೆಯಿಂದಲಾದರೂ ತನಗೆ ಸಂತಾನ ಪ್ರಾಪ್ತಿಯಾದೀತೇ ಎಂಬ ಆಶಯ ಹೊಂದಿ ಒಪ್ಪಿಗೆ ಸೂಚಿಸಿದ.

ಮುಂದುವರಿಯುವುದು…

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page