ಭಾಗ – 62
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೬೨ ಮಹಾಭಾರತ
ಮಾತೆ ಕುಂತಿಯ ಸ್ಮೃತಿಯಲ್ಲಿ ಅಚ್ಚಳಿಯದೆ ಉಳಿದ ನೆನಪು ಮತಿಯನ್ನು ಕಲಕಿ ಕೆಡಹಿತು. ಬಿಸಿಲಿದ್ದರೂ ಚಪ್ಪರದಿಂದ ನೆರಳು, ಚಾಮರ ಸೇವಕಿಯರಿಂದ ಗಾಳಿ ಬೀಸಲ್ಪಟ್ಟರೂ ಚೇತರಿಸಲು ಆಘಾತವಾಗಿರುವುದು ಶರೀರಕ್ಕಲ್ಲವಲ್ಲ? ಮನಸ್ಸಿನ ವೇದನೆಗೆ ಬಾಹ್ಯ ಸುಶ್ರೂಷೆ ಸಮಾಧಾನ, ಚೈತನ್ಯ ನೀಡೀತೇ? ಕುಂತಿ ಹೇಗೆ ಸಹಿಸಿ ಕೊಂಡಾಳು? ಒಂದೆಡೆ ಕರ್ಣ, ಎದುರಾಳಿ ಅರ್ಜುನ -ಎರಡೂ ವೀರರೂ ತನ್ನ ಮಕ್ಕಳಾಗಿರುವಾಗ ಮೂರ್ಛೆಗೊಳ್ಳದೆ ಇನ್ನೇನಾಗಬಹುದು. ಅತ್ತಿಗೆಯ ಸಹಾಯಕ್ಕೆ ಧಾವಿಸಿದ ವಿದುರನೂ ಸೇವೆ ಮಾಡಿದ. ಸಾವರಿಸಿಕೊಂಡ ಕುಂತಿ ಮನದೊಳಗಿನ ಮರ್ಮ ಹೊರಗೆಡಹದೆ ಮೌನವಾಗಿಯೇ ಕುಳಿತಳು.
ದ್ವಂದ್ವ ಯುದ್ದಕ್ಕೆ ಸಂಪ್ರದಾಯಗಳಿವೆ. ಹಾಗೆಯೇ ಕೃಪಾಚಾರ್ಯರು ಬಂದು ವೀರರ ಪರಿಚಯ ಹೇಳ ತೊಡಗಿದರು.ಅರ್ಜುನ ಪಾಂಡು ಚಕ್ರವರ್ತಿ -ಕುಂತಿ ದೇವಿಯ ಸುಪುತ್ರ. ಚಂದ್ರವಂಶ ಸಂಜಾತ, ಹಸ್ತಿನಾವತಿಯ ರಾಜಕುಮಾರ ಎಂಬ ವಿವರ ನೀಡಿದರು. ಕರ್ಣನ ಪರಿಚಯ ಹೇಳುವಲ್ಲಿ ಆತನ ವಿವರ ಕೇಳಿದರು – ನಿನ್ನ ಮಾತಾ ಪಿತರು, ವಂಶ, ಯಾವ ರಾಷ್ಟ್ರದ ರಾಜಕುಮಾರ? ಎಂದು ಕೇಳಿದರು. ಕರ್ಣ ನಿರುತ್ತರನಾಗಿ ಯೋಗ್ಯತೆ ಸಂಪಾದಿಸಿದ್ದರೂ ಯೋಗವಿಲ್ಲದ ಹತಭಾಗ್ಯ ನಾನಾದೆನಲ್ಲಾ ಎಂಬ ಪರಿವೇದನೆ ಅನುಭವಿಸಿ ನೆಲನೋಟಕನಾದ.
ಆಗ ಎದ್ದು ನಿಂತ ದುರ್ಯೋಧನ, ದ್ವಂದ್ವಕ್ಕೆ ಸಾಮರ್ಥ್ಯ ಸಾಕಾಗುವುದಿಲ್ಲವೇ? ರಾಜಕುಮಾರನೇ ಆಗಬೇಕೇ? ಎಂದು ಕೇಳಿದ. ಹೌದು ಶಾಸ್ತ್ರ ಪ್ರಕಾರ ಸಮರ, ಸರಸ, ವಿರಸಕ್ಕೆ ಸಮಾನತೆ ಬೇಕು ಎಂದರು ಕೃಪಾಚಾರ್ಯರು. ತಕ್ಷಣ ಕರ್ಣನನ್ನು ಅಂಗದೇಶದ ರಾಜನಾಗಿ ಘೋಷಿಸಿ, ನಾನೇ ಕರ್ಣನಿಗೆ ಅಂಗಾಧಿಪತಿಯಾಗಿ ಪಟ್ಟಾಭಿಷೇಕ ಮಾಡಿಸುತ್ತೇನೆ ಎಂದು ದುರ್ಯೋಧನ ಅನುಕೂಲ ಕಲ್ಪಿಸಿದನು. ಕರ್ಣನ ಪರಿಚಯದ ಜೊತೆ, ಸ್ಥಾನ ಗೌರವವಾಗಿ ಅಂಗ ದೇಶದ ರಾಜ ಎಂದು ಉದ್ಘೋಷಿಸಿ ಸಮತೂಕ ಕಲ್ಪಿಸಿದ.
ದುರ್ಯೋಧನ ಅಭಿಷಿಕ್ತ. ಯುವರಾಜನೂ ಅಲ್ಲ. ಹಾಗೆಂದು ಅವನ ಪಿತ ಧೃತರಾಷ್ಟ್ರನೂ ಕಾರ್ಯಕಾರಿಣಿ ರಾಜ ಪ್ರತಿನಿಧಿಯಷ್ಟೇ! ಹೀಗಿರುವಾಗ ಸಾಮ್ರಾಜ್ಯದ ಭಾಗವನ್ನು ಇನ್ನೊಬ್ಬನಿಗೆ ಕೊಡುವ ಅಧಿಕಾರ ಈತನಿಗೆ ಹೇಗೆ ಬಂತು? ಭೀಷ್ಮಾಚಾರ್ಯರು ಹೀಗೆ ತರ್ಕಿಸುತ್ತಿದ್ದರಾದರೂ, ಈ ಕುರಿತು ವಿವೇಚಿಸಿ ತೀರ್ಮಾನ ನೀಡಬೇಕಾದ ಸ್ಥಾನಿ ಧೃತರಾಷ್ಟ್ರ. ಆತನೇ ಸುಮ್ಮನಿರುವಾಗ, ಮೌನವೇ ಸಮ್ಮತಿ ಲಕ್ಷಣವೆಂದು ಸುಮ್ಮನೆ ಕುಳಿತು ಕೊಳ್ಳಬೇಕೇ? ಹಾಗೆಂದು ಮತ್ತೊಂದೆಡೆ ಪಾಂಡು ಸಾಧನೆಯಿಂದ ಮಹಾರಾಜ ಪದವಿಯಿಂದ ಚಕ್ರವರ್ತಿಯಾದವನು. ಅವನ ಮಕ್ಕಳೇ ಮುಂದೆ ಸಾಮ್ರಾಜ್ಯದ ಹಕ್ಕುದಾರರು. ಆದರೆ ಪಾಂಡು ಸರ್ವ ಅಧಿಕಾರ, ದ್ಯೋತಕಗಳೆಲ್ಲವನ್ನೂ ತ್ಯಜಿಸಿ ಮರಳಿಸಿ ವಿರಕ್ತನಾದ ಮೇಲೆ ಪಾಂಡವರಿಗೆ ಹಕ್ಕಿದೆಯೇ? ಇತ್ತ ಪಾಂಡು ತ್ಯಾಗ ಮಾಡಿದ ಸಾಮ್ರಾಜ್ಯಕ್ಕೆ ಕುರುಡನೆಂಬ ಕಾರಣದಿಂದ ಹಿರಿಯನಾದರೂ, ಸಿಂಹಾಸನ ಏರುವ ಯೋಗ್ಯತೆ ನಷ್ಟವಾಗಿರುವ ಧೃತರಾಷ್ಟ್ರ ಪ್ರತಿನಿಧಿ ಮಾತ್ರವೇ ಹೊರತು, ಪೂರ್ಣಾಧಿಕಾರ ಹೊಂದಿಲ್ಲ. ಪಾಂಡುಪುತ್ರರು ಬಂದ ಮೇಲೆ ಅಧಿಕಾರ ಮರಳಿಸಬೇಕಾದದ್ದು ಕಾರ್ಯಕಾರಣ ನಿಯುಕ್ತನಾದ ಧೃತರಾಷ್ಟ್ರನ ಧರ್ಮವಲ್ಲವೇ? ಪಾಂಡವ -ಕೌರವರು ಅವರ ಹಿರಿಯರ ಹಕ್ಕು ಲೋಪವಾಗುವ ಮೊದಲು ಹುಟ್ಟಿದವರಲ್ಲ. ಹಾಗಾದರೆ ಸಾಮ್ರಾಜ್ಯದ ಹಕ್ಕು ಯಾರಿಗೆ ಸೇರಬೇಕು? ಹೀಗೆ ಜಟಿಲ ವಿಚಾರ ಮಂಥಿಸುತ್ತಾ ಕುಳಿತ ಭೀಷ್ಮರು ಎದ್ದು ಮಾತನಾಡಿದರೆ ಗೊಂದಲವಾದೀತು ಎಂದು ಮೌನಕ್ಕೆ ಶರಣಾದರು. ಇತ್ತ ಕುಂತಿಯನ್ನು ಉಪಚರಿಸುತ್ತಾ ಇದ್ದ ವಿದುರನ ಸ್ಥಿತಿಯೂ ಇದೇ ಹಾದಿಯಲ್ಲಿದ್ದು, ಈ ಸಂಕೀರ್ಣ ಸ್ಥಿತಿಯ ಉತ್ತರ ವಿಧಿಯ ವಿಧಾನದಲ್ಲಿ ಹೇಗೆ ಅನಾವರಣ ಆದೀತು? ಎಂದು ಕಾದು ನೋಡುವ ತೀರ್ಮಾನಕ್ಕೆ ಮುಟ್ಟಿ ಸುಮ್ಮನಾಗಿದ್ದ.
ಹೇಳಿದಂತೆ ತೊಡಗಿದ ಕೌರವ ಮಾಡುವ ಅಂಗರಾಜ್ಯದ ದಾನ ಅನಧಿಕೃತ, ಅಥವಾ ಇಲ್ಲದ ಅಧಿಕಾರವನ್ನು ಕಲ್ಪಿಸಿ ದುರುಪಯೋಗಪಡಿಸಿದಂತಾಗಿದೆ. ಹಿರಿಯರಾದ ಭೀಷ್ಮ, ಧೃತರಾಷ್ಟ್ರ, ವಿದುರರೂ ಆಕ್ಷೇಪಿಸದ ಕಾರಣ ಅಧಿಕೃತವೆಂದೇ ಭಾವಿಸುವಂತಾಯಿತು. ಇತ್ತ ಪಾಂಡವರೂ ನಮ್ಮಪ್ಪನ ಸಾಮ್ರಾಜ್ಯದ ಭಾಗವನ್ನು ದಾನ ಮಾಡಲು ಈತನ್ಯಾರು ಎಂದು ಪ್ರಶ್ನಿಸುವ ಅಧಿಕಾರ ಹೊಂದಿದ್ದರೂ, ಸೌಜನ್ಯತೆಯಿಂದ ಶಾಂತರಾಗಿ ಹಿರಿಯರು ಇರುವಾಗ ನಮ್ಮ ಮಧ್ಯಪ್ರವೇಶ ಅಸಂಬದ್ಧವಾದೀತು ಎಂದು ಕೇವಲ ವೀಕ್ಷಕ – ಪ್ರೇಕ್ಷಕರಾಗಿಯೇ ಉಳಿದರು.
ದುರ್ಯೋಧನ ಬ್ರಾಹ್ಮಣರಿಗಿತ್ತ ಆದೇಶದಂತೆ ಮಂತ್ರಪೂರ್ವಕ ಕಲಶೋದಕ ಅಭಿಷೇಕ ಸಹಿತ ಕಿರೀಟಧಾರಣೆಯಾದಿ ವಿಧಿವತ್ತಾಗಿ ರಾಜ್ಯಾಧಿಕಾರ ನೀಡಲ್ಪಟ್ಟಿತು. ಛತ್ರ ಚಾಮರ, ಮಂದಿ ಮಾಗದ, ಸೇವಕ – ಚಾರಕರಾದಿ ಬಳಗವೂ ಸೇವಾ ನಿರತತೆಗೆ ನಿಯುಕ್ತವಾಯಿತು. ಕರ್ಣ ಅಂಗದೇಶದ ರಾಜನಾದ. ಮಹಾರಾಜ ಕರ್ಣ ಹಿರಿಯರ, ಸಭೆಯಲ್ಲಿದ್ದ ಅಧಿರಥ ರಾಧೆಯರಿಗೆ ನಮಿಸಿ ಆಶೀರ್ವಾದ ಪಡೆದನು. ಅಧಿರಥನ ಮನಸ್ಸು ಹಸ್ತಿನೆಯ ನಿಯಮಕ್ಕೆ ಒಗ್ಗೂಡಿದ ಸ್ಥಿತಿ ಹೊಂದಿದ್ದರಿಂದ ಮಗನ ಜೊತೆ ನಡೆದ ಈ ಬೆಳವಣಿಗೆ ಇಷ್ಟವಾಗದೇ ಉಳಿದರೂ, ತನ್ನ ಮಗನ ತೇಜಸ್ಸು ಕಿರೀಟ, ರಾಜ ಪೋಷಾಕು, ಸರ್ವಾಲಂಕೃತ ಆಭರಣಗಳಿಂದ ಶೃಂಗರಿಸಲ್ಪಟ್ಟದ್ದನ್ನು ಮನದಣಿಯೆ ನೋಡಿ ಮೈಮರೆಯುವಂತೆ ಮಾಡಿತು.
ಇತ್ತ ಭೀಮಸೇನ ಕೋಪಗೊಂಡು ಅಣ್ಣ ಧರ್ಮರಾಜನ ಅನುಮತಿಗೂ ಕಾಯದೆ ಕರ್ಣನನ್ನು ನಿಂದಿಸಿದ – ” ಸಾಯುವ ಕಾಲಕ್ಕೆ ರಾಜ್ಯಾಭಿಷೇಕವೇ? ಹಿರಿಯರು ಪಾಲಿಸುವ ವರ್ಣಾಶ್ರಮ ಧರ್ಮದಂತೆ ಕರ್ಣ ಸಾರಥ್ಯ ಕಾರ್ಯಕ್ಕೆ ಮೀಸಲಾದವ. ಅದನ್ನು ಮೀರಿ ವ್ಯವಹರಿಸುತ್ತಿರುವುದು ನ್ಯಾಯ ಸಮ್ಮತವೇ? ಎಂದು ಪ್ರಶ್ನಿಸಿದ. ದುರ್ಯೋಧನ ಮಿತ್ರ ಕರ್ಣನ ಬೆಂಬಲಿಗನಾಗಿ ” ವೀರನಿಗೆ ಸಾಮರ್ಥ್ಯವೇ ಕುಲ. ಋಷಿ, ನದಿ, ಹಾಗೆಯೇ ಶೂರರ ಮೂಲ ಹುಡುಕಬಾರದು. ಯಾಕೆ? ನಮ್ಮ ಗುರುಗಳು ಎಲ್ಲಿ ಹೇಗೆ ಹುಟ್ಟಿದರು? ಅವರ ಕುಲ ಯಾವುದು? ಹೆಚ್ಚೇಕೆ.. ನೀವು ಹೇಗೆ ಹುಟ್ಟಿದಿರಿ? ನೀವು ಯಾರ ಮಕ್ಕಳು? ಇದೆಲ್ಲವನ್ನೂ ಅರಿತರೆ ಕರ್ಣನೂ ಅಂಗ ರಾಜ್ಯಾಧಿಕಾರಕ್ಕೆ ಯೋಗ್ಯನೇ ಆಗಿದ್ದಾನೆ. ಅಭಿಷಿಕ್ತ ರಾಜ ಕರ್ಣನೊಡನೆ ಸಾಮರ್ಥ್ಯ ವಿದ್ದರೆ ಅರ್ಜುನ ಹೋರಾಡಲಿ. ಆಗದೇ ಇದ್ದರೆ ಶರಣಾಗಲಿ” ಎಂದನು.
ಒಂದೆಡೆ ಹೌದು ಹೌದು ಸರಿ ಎಂಬಂತೆ ಬೆಂಬಲ ಸೂಚಿಸಲ್ಪಟ್ಟರೆ, ಇನ್ನೊಂದೆಡೆ ಛೆ ಛೇ!! ಎಂತಹ ಅನರ್ಥ ನಡೆಯುತ್ತಿದೆ ಎಂದು ವ್ಯಥೆ ವ್ಯಕ್ತಪಡಿಸುತ್ತಿದ್ದರು. ಇಷ್ಟೆಲ್ಲಾ ಆಗ ಬೇಕಾದರೆ ಹೊತ್ತು ಮುಳುಗಿತು. ಆಚಾರ್ಯರ ಸೂಚನೆಯಂತೆ ರಂಗದ ಕಾಲಾವಧಿ ಮುಗಿದು ಮರುದಿನದ ಸೂರ್ಯೋದಯಕ್ಕೆ ಮುಂದೂಡಲ್ಪಟ್ಟಿತು. ನಾಳೆಯ ದಿನ ಕರ್ಣಾರ್ಜುನರ ದ್ವಂದ್ವ – ಪರಾಕ್ರಮ ನೋಡುವ ಕಾತರ ಪ್ರೇಕ್ಷಕ ವರ್ಗದ್ದಾಗಿತ್ತು.
ಮುಂದುವರಿಯುವುದು…




