31.9 C
Udupi
Monday, April 13, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 487

ಭರತೇಶ ಶೆಟ್ಟಿ, ಎಕ್ಕಾರು

ಸಂಚಿಕೆ ೪೮೭ ಮಹಾಭಾರತ

ಧರ್ಮರಾಯನು ಶ್ರೀಕೃಷ್ಣ ಸಹಿತನಾಗಿ ಭೀಷ್ಮಾಚಾರ್ಯರಲ್ಲಿಗೆ ಬಂದು ಬಹಳಷ್ಟು ಧರ್ಮ ವಿಚಾರಗಳು, ಆಚಾರ ಕ್ರಮಗಳನ್ನು, ಬಹುವಿಧ ಉಪದೇಶಗಳನ್ನು, ತತ್ಸಂಬಂಧವಾದ ಕಥೆಗಳನ್ನು ಕೇಳಿ ರಾಜನಾಗಿ ತಾನು ಹೇಗಿರಬೇಕೆಂದು ಅರಿತುಕೊಂಡನು. ಹೀಗೆ ಕೆಲದಿನಗಳು ಕಳೆದಾಗ ಭೀಷ್ಮಾಚಾರ್ಯರು ಧರ್ಮರಾಯನಲ್ಲಿ “ಮಗನೇ ನಾನು ಹೇಳಬೇಕೆಂದು ಕೊಂಡಿದ್ದನ್ನು ಸಂಪೂರ್ಣವಾಗಿ ನಿನಗೆ ತಿಳಿಯಪಡಿಸಿದ್ದೇನೆ. ಇನ್ನೂ ನಿ‌ನ್ನ ಮನದಲ್ಲೇನಾದರು ಸಂದೇಹಗಳು ಉಳಿದಿದ್ದರೆ ಕೇಳಿಕೋ” ಎಂದು ಅವಕಾಶವಿತ್ತರು.

ಆಗ ಯೋಚಿಸಿ ಧರ್ಮರಾಯನು “ಅಜ್ಜಾ ನಾನು ನಮ್ಮ ಬಂಧುಗಳನ್ನೂ, ಹಿತವರನ್ನೂ ಕೊಂದ ಜ್ಞಾತಿವಧೆಯಿಂದಾಗಿ ಬಹಳ ದುಃಖಕ್ಕೊಳಗಾಗಿದ್ದೇನೆ. ಸಹಿಸಿಕೊಳ್ಳುವುದಕ್ಕೆ ಕಷ್ಟವಾಗಿ ನನಗೆ ಪಾಪ ಪ್ರಜ್ಞೆ ಕಾಡುತ್ತಿದೆ. ಇದಕ್ಕೆ ಪರಿಹಾರವೇನು?”

ಆಗ ಭೀಷ್ಮಾಚಾರ್ಯರು “ಮಗನೇ! ದುಃಖ ಹಲವು ಕಾರಣಕ್ಕಾಗಿ ಹುಟ್ಟಿಕೊಳ್ಳುತ್ತದೆ. ತಾಯಿ, ತಂದೆ, ಹೆಂಡತಿ, ಮಕ್ಕಳು, ಬಂಧುಗಳು ಮಾತ್ರವಲ್ಲ ಸಂಪತ್ತು ಇವುಗಳಲ್ಲಿ ಯಾವುದು ನಾಶವಾದರೂ, ಕಳಕೊಂಡರೂ ಅತೀವ ವೇದನೆ, ದುಃಖ ಆಗುತ್ತದೆ. ಆದರೆ ವಿವೇಕಿಯಾಗಿ ಮನೋಬಲ ಧೃಡಗೊಳಿಸಿದರೆ ಇಂತಹ ದುಃಖವನ್ನು ಸಹಿಸಿಕೊಳ್ಳಲು ಕಷ್ಟವಾಗದು. ಇದಕ್ಕೆ ಪೂರಕವಾಗಿ ನಿನಗೊಂದು ಕಥೆಯನ್ನು ಹೇಳುತ್ತೇನೆ ಕೇಳು. ಸೇನಜಿತ್ತನೆಂಬ ಒಬ್ಬ ಧರ್ಮಾತ್ಮನು ಮಗನನ್ನು ಕಳೆದುಕೊಂಡು ದುಃಖಿಸುತ್ತಿದ್ದನು. ಆಗ ಮಹಾತ್ಮನಾದ ಓರ್ವ ಬ್ರಾಹ್ಮಣ ಆತನಿಗೆ ಉಪದೇಶ ಮಾಡಿದ್ದನಂತೆ. ಅದನ್ನು ನಿನಗೆ ವಿವರಿಸಿ ಹೇಳುತ್ತೇನೆ. ಮರಣ ದುಃಖಕ್ಕೆ ಅಳುವುದು ಎಂದರೆ ಈಗ ಸತ್ತವರಿಗಾಗಿ ಮುಂದೆ ಸಾಯಲಿರುವವರು ದುಃಖಿಸುವುದು. ಯಾರೇ ಆದರೂ ಕಾಲದ ಅಂತರದಲ್ಲಿ ಸಾವು ಎಂಬುವುದನ್ನು ಸ್ವೀಕರಿಸ ಬೇಕು. ನಾವೆಲ್ಲ ಎಲ್ಲಿಂದ ಬಂದಿದ್ದೇವೋ, ಬಂದ ಕಾರ್ಯ ಮುಗಿಸಿ ಮರಳಿ ಅಲ್ಲಿಗೆ ತಿರುಗಿ ಹೋಗುವುದು ಮರಣ. ಕೆಲವರು ಬೇಗ ಮುಗಿಸಿ ಹೋಗುತ್ತಾರೆ. ಇನ್ನು ಕೆಲವರ ಕಾರ್ಯ ಮುಗಿಸುವಾಗ ಸ್ವಲ್ಪ ಕಾಲಾವಕಾಶ ಹೆಚ್ಚಾಗುತ್ತದೆ. ಇದಿಷ್ಟು ವ್ಯತ್ಯಾಸ. ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ಇಬ್ಬರು ಮನುಷ್ಯರ ಮಧ್ಯೆ ಏರ್ಪಡುವ ಸಖ್ಯವೂ ನಿತ್ಯ ನಿರಂತರವಲ್ಲ. ಹಾಗೆಂದು ಬೇರ್ಪಡುವ ಕಾಲದಲ್ಲಾಗುವ ದುಃಖವೂ ಶಾಶ್ವತವಲ್ಲ. ಎರಡೂ ಸ್ವಲ್ಪ ದಿನ ಇರುವಾಗ ಭಾವನೆಯಲ್ಲಿ ಉಂಟು ಮಾಡುವ ತಾತ್ಕಾಲಿಕ ವ್ಯತ್ಯಾಸ ಸುಖ ಮತ್ತು ದುಃಖ. ಇನ್ನೂ ಒಂದು ಧರ್ಮ ಸೂಕ್ಷ್ಮವನ್ನು ಬಹಳ ಮನನ ಮಾಡಿ ಅರಿತು ಕೊಳ್ಳಬೇಕು. ಸಂತಸಕ್ಕೆ ಸ್ನೇಹವಾಗಲಿ, ದುಃಖಕ್ಕೆ ವೈರವಾಗಲಿ, ಪ್ರಯೋಜನಗಳಿಗೆ ಬುದ್ದಿಯಾಗಲಿ ಕಾರಣವಲ್ಲ. ಅದು ಕರ್ಮ ಫಲದ ಕಾರಣದಿಂದ ಪ್ರಾಪ್ತವಾಗಿರುವುದು. ಹಾಗಾಗಿ ನಮಗೇನು ಒದಗಿದೆಯೊ ಅದು ಆ ಅದೃಷ್ಟದ ಕಾರಣದಿಂದ ಒದಗಿದೆ ಎಂದು ತಿಳಿದು ಧೈರ್ಯದಿಂದ ಅನುಭವಿಸುತ್ತಾ ಬದುಕಬೇಕು. ವಿವೇಕಿಯಾದವರು ಷಡ್ವಿಕಾರಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಆದಿ ಭಾವಗಳನ್ನು ನಿಮಿರಗೊಡದೆ ಉಪಶಮನಗೊಳಿಸಿ ಅಡಗಿಸಿಕೊಂಡು ಶಾಂತನಾದರೆ ಆಗ ಅನರ್ಘ್ಯವಾದ ಆತ್ಮ ಸಂಪತ್ತು ಪ್ರಾಪ್ತವಾಗುತ್ತದೆ. ಅದು ಮುಂದೆ ಸತ್ಯವನ್ನು ಕಾಣಿಸುತ್ತದೆ. ಸತ್ಯ ಅರಿವಾದಾಗ ಅರಿಷಡ್ವರ್ಗಳಿಂದ ಮನದಲ್ಲಿ ಉತ್ಪನ್ನವಾಗಿ ಕಾಡಿದ್ದು ಕೇವಲ ಭ್ರಮೆ ಎಂದು ಖಚಿತವಾಗುತ್ತದೆ. ಇದನ್ನು ದಿವ್ಯಜ್ಞಾನ ಎಂದು ಕರೆಯಲ್ಪಟ್ಟಿದೆ. ಈ ಷಡ್ವಿಕಾರಗಳಿಗೆ ಪ್ರತಿಕ್ರಿಯೆ ತೋರದೆ ಸ್ಥಿತಪ್ರಜ್ಞನಾಗಬೇಕಾದರೆ ಮೊದಲು ಆಸೆಗಳನ್ನು ತೊರೆಯಬೇಕು. ಈ ಆಸೆ ಒಂದು ವಿಚಿತ್ರ ಭಾವನೆ. ಅದಕ್ಕಾಗಿ ಯಾವ ವಿಧದಿಂದಲಾದರೂ ಹೋರಾಡುವಂತೆ ಪ್ರೇರೇಪಿಸಿ ಅತಿ ಆಸೆಯಾಗಿ ಬೆಳೆದು ತನ್ನ ನಿಯಂತ್ರಣಕ್ಕೆ ಸರ್ವಗುಣಗಳನ್ನೂ ಅಧೀನಗೊಳಿಸುತ್ತದೆ. ಈ ಆಸೆ ಎನ್ನುವುದು ಶರೀರಕ್ಕೆ ಸಂಬಂಧಿಸಿದ್ದಲ್ಲ. ಶರೀರ ಮುಪ್ಪಾದರೂ ಆಸೆ ಮುಪ್ಪಾಗದೆ ಚಿಗುರುತ್ತಲಿರುತ್ತದೆ. ಆಸೆಯನ್ನು ನಿಯಂತ್ರಿಸಬೇಕಾದರೆ ಮನಸ್ಸನ್ನು ಹತೋಟಿಗೆ ತರಬೇಕು. ಸಂಪೂರ್ಣ ಹಿಡಿತಕ್ಕೆ ಸಿಕ್ಕ ಮನಸ್ಸಿನಿಂದ ಮೊದಲು ಆಸೆಗಳನ್ನು ತೊರೆಯಬೇಕು. ಆಸೆ ಪಟ್ಟರೂ, ಅದಕ್ಕಾಗಿ ತಡಕಾಡಿದರೂ ಸಿಗಲಾರದ್ದು ಸಿಗುವುದಿಲ್ಲ. ಶಾಂತ ಚಿತ್ತದಿಂದ ದುಡುಕದೆ ಸಾವಧಾನಿಯಾಗಿದ್ದರೂ ಸಿಗ ಬೇಕಾದದ್ದು ಕೈತಪ್ಪಿ ಹೋಗುವುದೂ ಇಲ್ಲ. ಆದರೆ ಅತಿ ಆಸೆಗೊಳಗಾಗಿ ತೃಪ್ತಿ, ಸಂತೋಷಗಳನ್ನು ಹಾಳುಗೆಡಹಿ, ಪ್ರಾಣವನ್ನು ಹಿಂಡುವ ರೋಗವಾಗಿ ಪರಿವರ್ತಿಸಿ ಕೊನೆಯವರೆಗೂ ಬೇರೆ ಬೇರೆ ಕಾರಣಗಳಿಂದ ಹಿಂಸೆ ಅನುಭವಿಸುವುದು ಸಾಮಾನ್ಯ ಮನುಷ್ಯರ ಸಹಜ ಗುಣ ಸೇನಜಿತ್ತನಿಗೆ ಹೀಗೆ ಅಗೋಚರ ಸತ್ಯವನ್ನು ಅರಿವಾಗುವಂತೆ ತಿಳಿಸಿ ವಿವೇಕವನ್ನು ಹುಟ್ಟಿಸಿದ ಬ್ರಾಹ್ಮಣ ಜ್ಞಾನ ಜ್ಯೋತಿಯನ್ನು ಬೆಳಗಿಸಿದನು. ಫಲಸ್ವರೂಪವಾಗಿ ಅತ್ತು ಪರಿಹರಿಸಲು ಆಗದಿರುವ ತನ್ನ ಮಗನ ಮರಣ ದುಃಖವನ್ನು ದೂರ ಮಾಡಿಕೊಂಡನು. ಜೀವನದಲ್ಲಿ ಏನು ಬೇಕಿದ್ದರೂ ದುಃಖ ಮತ್ತು ಆಸೆ ಸಾಧನವಲ್ಲ. ಪರಿಶ್ರಮ ಮತ್ತು ಸಾಧನೆ ಸತ್ಪಥ ತೋರುವ ಮಾರ್ಗೋಪಾಯಗಳು ಎಂದು ತಿಳಿದುಕೊಂಡನು. ಆಸೆಗೆ ವಶನಾದರೆ ಹೃದಯ ಕಲುಷಿತವಾಗುತ್ತದೆ. ಅದರಿಂದ ದುಷ್ಕೃತ್ಯ, ಪಾತಕ, ಪಾಪ ಕೃತ್ಯಗಳನ್ನಾದರು ಮಾಡಿ ಆಸೆ ಈಡೇರಿಸುವ ದುಷ್ಪ್ರೇರಣೆ ಪ್ರಾಪ್ತವಾಗುತ್ತದೆ. ಇದರ ಬದಲಾಗಿ ವಿವೇಕವನ್ನು ಜಾಗೃತಗೊಳಿಸಿ ಕೇವಲ ಆಸೆಗೆ ವಶನಾಗದೆ, ಪರಿಶುದ್ಧ ಹೃದಯವಂತನಾದರೆ ಆಗ ಶ್ರೇಯಸ್ಸಿನ ಹಾದಿ ತೆರೆದುಕೊಳ್ಳುತ್ತದೆ ಎಂಬ ನಿತ್ಯ ಸತ್ಯದ ಪಾಠ ತಿಳಿದುಕೊಂಡನು.

“ಮಗೂ ಧರ್ಮರಾಯ! ನೀನು ಸಂವೇದನಶೀಲ ಗುಣಿಯಾದ ಕಾರಣ ನಿನ್ನ ಮನದಲ್ಲಿ ನಾನು ತಪ್ಪು ಮಾಡಿದೆನೊ? ಬಂಧುಗಳ ಹತ್ಯೆಯಿಂದ ದೋಷ ಬಂದೀತೊ? ಅಥವಾ ಕೇವಲ ನನ್ನ ಅಧಿಕಾರದ ಆಸೆಗಾಗಿ ನಮ್ಮವರನ್ನು ಕಳಕೊಂಡೆನೊ? ಎಂಬಿತ್ಯಾದಿ ಜಿಜ್ಞಾಸೆಗಳು ಮೂಡಿರಬಹುದು. ಒಂದು ವೇಳೆ ನಿನ್ನ ಉದ್ದೇಶ ನಿನ್ನ ಬಂಧು ಜನರನ್ನು ಕೊಂದು ಕ ರಾಜ್ಯದ ಅಧಿಕಾರ ಕಿತ್ತು ಕೊಂಡು ತನ್ನದಾಗಿಸಬೇಕೆಂಬ ಲೋಭವಿದ್ದಿದ್ದರೆ ಆಗ ನೀನು ದೋಷಿಯಾಗುತ್ತಿದ್ದೆ. ಆದರೆ ನೀನು ಸಂಧಾನಕ್ಕಾಗಿ ಶತಪ್ರಯತ್ನ ಮಾಡಿದವನು, ಸರ್ವ ನಾಶಕಾರಿ ಯುದ್ದವಾಗದಂತೆ ನೋಡಿಕೊಳ್ಳುವ ಎಲ್ಲಾ ದಾರಿಗಳನ್ನು ಹುಡುಕಿದವನು. ನಿನ್ನ ಉದ್ದೇಶ ಸರ್ವ ಜನರ ಕ್ಷೇಮವಾಗಿತ್ತು ಹೊರತು ಅನ್ಯ ಯಾವ ಭಾವವೂ ಇರಲಿಲ್ಲ. ಹಾಗಿದ್ದೂ ಯುದ್ಧ ಯಾಕಾಯಿತು? ಸಾಯ ಬೇಕಾದವರು, ಅವರ ಸಾವು ಯುದ್ದವಾಗಿಯೆ ಆಗಬೇಕೆಂದಿತ್ತು. ಅಂತಹ ಜನರ ಯುದ್ಧ ಒತ್ತಾಯದಿಂದಲೆ ಲೋಕನಾಶಕ ಯುದ್ಧ ಆಗಿ ಹೋಯಿತು. ಈ ವಿಚಾರದಲ್ಲಿ ನಿನ್ನ ಆಸೆ ಹೀಗಾಗಬೇಕು ಎಂದಿರಲಿಲ್ಲ. ಹಾಗಿರುತ್ತಿದ್ದರೆ ಈಗ ಸರ್ವ ಸಂಪದ ನಿನ್ನದಾಗಿರುವ ಹೊತ್ತು ನೀನು ದುಃಖಿಸದೆ ಸಂಭ್ರಮಿಸುತ್ತಿದ್ದೆ. ಯಾರು ಸಾಯಬೇಕಿತ್ತೊ ಅವರೆಲ್ಲಾ ಸತ್ತಿದ್ದಾರೆ. ಯಾರು ಬದುಕಬೇಕಿತ್ತೊ ಅವರಷ್ಟೇ ಉಳಿದಿದ್ದಾರೆ. ಇನ್ನೂ ಸರಳವಾಗಿ ಹೇಳಬೇಕೊ? ಈಗಾಗಲೆ ಹೇಳಿದಂತೆ ಯಾರ ಜನ್ಮ ಕಾರಣದ ಕಾರ್ಯ ಪೂರೈಸಿದೆಯೊ ಅವರು ಮರಳಿದ್ದಾರೆ. ಯಾರ ಕೆಲಸ ಇನ್ನೂ ಬಾಕಿಯಿದೆಯೊ ಅವರಷ್ಟು ಮಾತ್ರ ಇನ್ನೂ ಉಳಿದಿದ್ದಾರೆ. ಇಲ್ಲಿ ನೀವು‌ ಮಾಡಿದ್ದು, ನಿಮ್ಮಿಂದಾದದ್ದು ಎಂಬುವುದು ತೋರಿಕೆಯ ಸತ್ಯವಾದರೂ ಅದೊಂದು ರೀತಿಯ ಭ್ರಮೆಯಷ್ಟೆ ಆಗಿದೆ. ಹಾಗಾಗಿ ನೀನು ದುಃಖಿಸಬೇಡ. ಬಂಧು ಹತ್ಯಾ ದೋಷ ಆಗಿದೆ ಎಂಬ ಭಾವ ನಿನಗಿದ್ದರೆ ಅದು ಸೂಕ್ತ ಧರ್ಮಕಾರ್ಯ, ಪರಿಮಾರ್ಜನೆಯಿಂದ ಕ್ಷೀಣಿಸುತ್ತಾ ಹೋಗಬಹುದು. ” ಎಂದು ಸವಿವರವಾಗಿ ವಿಸ್ತರಿಸಿ ಹೇಳಿದರು.

ಇದನ್ನು ಕೇಳಿದ ಧರ್ಮರಾಯನಿಗೆ ತುಸು ಸಮಾಧಾನ ಎಣಿಸಿದರೂ ಹೊಸ ಪ್ರಶ್ನೆ ಮನದಲ್ಲಿ ಮೂಡಿತು. “ಅಜ್ಜಾ! ಎಲ್ಲಾ ವಿಚಾರಗಳೂ ಪೂರ್ವ ನಿರ್ಧಾರಿತವಾಗಿದ್ದರೆ, ಕಾಲದ ಅಧೀನವಾಗಿದ್ದು ಮೃತ್ಯುವಿನತ್ತ ಸೆಳೆಯಲ್ಪಡುವುದು ಅಂತಿಮ ಸತ್ಯ ಎಂದಾದರೆ, ಮನುಷ್ಯ ಪ್ರಯತ್ನಕ್ಕೆ ಏನು ಉಳಿಯುತ್ತದೆ? ನಾವು ಬದುಕಿದ್ದು ಮಾಡಬೇಕಾದ ಕರ್ತವ್ಯ ಏನಿದೆ?” ಎಂದು ತಾರ್ಕಿಕವಾಗಿ ಪ್ರಶ್ನಿಸಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page