ಭಾಗ – 486
ಭರತೇಶ ಶೆಟ್ಟಿ,ಎಕ್ಕಾರು

ಗೌತಮನು ಬಕಪಕ್ಷಿ ನಾಳೀಜಂಘನನ್ನು ಕೊಂದು ತಿಂದ ವರ್ತಮಾನ ಕೇಳಿ ತಿಳಿದ ರಾಕ್ಷಸ ನಾಯಕ ವಿರೂಪಾಕ್ಷನು ಅತ್ಯುಗ್ರನಾದನು. ಕರುಣೆದೋರಿ ಊಟೋಪಚಾರವಿತ್ತು, ಆತನ ಬದುಕಿಗೆ ಬೇಕಾದ ವ್ಯವಸ್ಥೆಯನ್ನು ಕೂಡ ಮಾಡಿಸಿದಂತಹ ನಾಳೀಜಂಘನನ್ನು ಕೊಂದು ತಿಂದ ಆ ಕೃತಘ್ನ ಗೌತಮ ಬದುಕಲು ಅರ್ಹನಲ್ಲ ಎಂದು ತೀರ್ಮಾನಿಸಿ ಗೌತಮನನ್ನು ಹುಡುಕಿ ಹಿಡಿದನು. “ಎಲೈ ದುಷ್ಟನೇ, ಮಿತ್ರದ್ರೋಹಿಯೆ ನೀನು ದಾರಿದ್ರ್ಯದಿಂದ ಬಳಲಿರುವೆ ಎಂದು ನನ್ನಿಂದ ಯಾಚಿಸಿ ನಿನಗೆ ಹೊನ್ನು ನೀಡಿದ, ಊಟೋಪಚಾರವಿತ್ತು ಸಲಹಿದ ಆ ಸದ್ಬುದ್ಧಿಯ ಬಕಪಕ್ಷಿಯನ್ನು ಕೊಂದು ತಿಂದೆಯಾ? ನಿನ್ನಂತಹ ಕ್ರೂರಿ ಇನ್ನು ಈ ಜಗತ್ತಿನಲ್ಲಿ ಇರ ಬಾರದು ” ಎಂದು ಅಬ್ಬರಿಸಿ ಗೌತಮನನ್ನು ಹಿಡಿದು ಹಿಸುಕಿ, ಹರಿದು ಸೀಳಿ ಎಸೆದುಬಿಟ್ಟನು. ಸತ್ತುಬಿದ್ದ ಗೌತಮನ ಹೆಣದ ಮಾಂಸವನ್ನು ಮಾಂಸಾಹಾರಿ ಪ್ರಾಣಿಪಕ್ಷಿಗಳೂ ಮುಟ್ಟಲಿಲ್ಲ. ಕಾರಣ ಮಿತ್ರದ್ರೋಹಿಯಾದ, ವಿಶ್ವಾಸ ಘಾತುಕನಾದ ಆ ಶರೀರವನ್ನು ತಿನ್ನುವುದೂ ಅಧರ್ಮವೆಂದು ತೀರ್ಮಾನಿಸಿ ಖಗ ಮೃಗಗಳೂ ಹಾಗೆಯೆ ಬಿಟ್ಟು ಬಿಟ್ಟವು.
ರಾಕ್ಷಸ ನಾಯಕ ವಿರೂಪಾಕ್ಷನು ದೇವರಾಜ ಇಂದ್ರನ ಅನುಗ್ರಹ ಪಡೆದಿದ್ದನು. ತನ್ನ ಧರ್ಮಾತ್ಮ ಮಿತ್ರ ಬಕಪಕ್ಷಿಯ ಜೀವ ಉಳಿಸಲು ಇಂದ್ರನ ಮೊರೆ ಹೋದನು. ದೇವೇಂದ್ರನ ಕೃಪೆಯಿಂದ ಸತ್ತು ಗೌತಮನ ಉದರ ಸೇರಿ, ಉಳಿದ ಅರ್ಧ ಬುತ್ತಿಯಲ್ಲಿದ್ದರೂ ಕ್ರೋಢೀಕರಣಗೊಂಡು ಮರು ಜೀವ ಪಡೆದು ಮೊದಲಿನಂತೆಯೆ ನಾಳೀಜಂಘನಾಗಿ ಪ್ರಕಟಗೊಂಡಿತು.
ಪುನರಪಿ ಜೀವ ಪಡೆದ ನಾಳೀಜಂಘ ವಾಸ್ತವ ವಿಚಾರಗಳನ್ನು ತಿಳಿದು ತನಗೆ ಪುನರ್ಜನ್ಮ ಅನುಗ್ರಹಿಸಿದ ದೇವರಾಜನಿಗೆ ವಂದಿಸಿತು. ಈ ಸಾಧನೆಗಾಗಿ ಶ್ರಮಿಸಿದ ಮಿತ್ರ ರಾಕ್ಷಸನಿಗೂ ಕೃತಜ್ಞತೆ ಸಲ್ಲಿಸಿತು. ತನ್ನನ್ನು ಕೊಂದಿದ್ದ ಗೌತಮ ಏನಾದನು ಎಂದು ಕೇಳಿ ತಿಳಿದ ಬಕಪಕ್ಷಿ ತನ್ನ ಮಿತ್ರ ರಕ್ಕಸನನ್ನು ಮತ್ತು ಇಂದ್ರ ದೇವನನ್ನು ಉದ್ದೇಶಿಸಿ “ಅಯ್ಯಾ ಮಹಾತ್ಮರೆ! ಬಡತನವು ಎಂತಹ ಸುಗುಣಶೀಲನ ಮನೋಧರ್ಮವನ್ನೂ ಹಾಳು ಮಾಡಬಲ್ಲುದು. ದಾರಿದ್ರ್ಯದ ಬೇಗೆಯಿಂದ ಮನುಜನಾದ ಗೌತಮನು ದುರಾಸೆಗೊಳಗಾದನು. ಆತನನ್ನು ಕಾಡುತ್ತಿದ್ದ ಹಸಿವೆ ಏನು ಮಾಡಲು ಹೇಸದಂತಹ ಕ್ರೌರ್ಯವನ್ನು ಆತನೊಳಗೆ ಹುಟ್ಟು ಹಾಕಿತ್ತು. ಹೇಗಾದರೂ ತನ್ನ ಹಸಿವೆ ನಿವಾರಿಸುವ ಕಾಯಕವನ್ನು ಜೀವನಾಧಾರ ಆಗುವಂತೆ ಪ್ರಚೋದಿಸಿತ್ತು. ಈ ಕಾರಣದಿಂದ ಮರಳಿ ಬಂದಾಗ ನನ್ನ ಬಳಿ ಆಹಾರದ ಆಸೆ ಹೊಂದಿದ್ದನು. ಸಿಗದಾಗ ನನ್ನನ್ನು ಕೊಂದು ತಿನ್ನುವುದಕ್ಕೂ ಹೇಸಲಿಲ್ಲ. ಇಲ್ಲಿ ಆತನ ತಪ್ಪು ಏನೂ ಇಲ್ಲ. ದುಸ್ತರ ಬದುಕು ಒದಗಿದ ಕಾರಣ ಆತ ಕಟು ಮನಸ್ಕನಾಗಿ ಹೋಗಿದ್ದಾನೆ. ರಾಕ್ಷಸ ವೀರನೇ! ನೀನು ಒಲಿದು ಆತನಿಗೆ ದಾನವಿತ್ತಿರುವೆ. ನಾವಿತ್ತ ದಾನ ಪಡೆದವನಿಗೆ ಉಪಯೋಗಕ್ಕೆ ಬಂದರೆ ಮಾತ್ರ ಸಾರ್ಥಕತೆ ಒದಗುತ್ತದೆ. ಆ ಗೌತಮ ನೀನಿತ್ತ ಹೊನ್ನನ್ನು ಬಳಸಬೇಕಾದರೆ ಜೀವಿಸಬೇಕು. ನಿನ್ನ ದಾನವೂ ನಿರರ್ಥವಾಗಬಾರದು. ನನಗೂ ಅಂತಹ ಸ್ಥಿತಿ ಒದಗಿದೆ. ಆತನ ಸೇವೆಗೈದು ಆತನ ಆಯಾಸಕ್ಕೆ ಉಪಚಾರ ಮಾಡಿದೆ. ಹಸಿವೆಗೆ ಆಹಾರವಿತ್ತೆ. ದಾರಿದ್ರ್ಯ ನಿವಾರಣೆಗೆ ನಿನ್ನ ಮೂಲಕ ಉಪಶಾಂತಿ ಮಾಡಿಸಿದೆ. ನಾನು ಮಾಡಿದ ಈ ಎಲ್ಲಾ ಕರ್ಮಗಳು ವ್ಯರ್ಥವಾಗಬಾರದು. ಆ ಪುಣ್ಯಾತ್ಮ ಗೌತಮ ನನಗೆಷ್ಟು ಮುನಿದರೂ, ಕೇಡು ಉಂಟು ಮಾಡಿದರೂ ನಾನು ಆತನಿಗೆ ಎರಡೆಣಿಸಬಾರದು. ಹಾಗೆ ಮಾಡುವುದು ಧರ್ಮವೂ ಅಲ್ಲ. ಒಳ್ಳೆಯ ಯೋಗವನ್ನು ನಾವು ಆತನಿಗೆ ಒದಗಿಸಿ ಕೊಟ್ಟಿದ್ದೇವೆ. ಅನುಭವಿಸುವ ಭಾಗ್ಯದಿಂದ ವಂಚಿತನನ್ನಾಗಿಸುವುದು ಸರಿಯಲ್ಲ. ಹಾಗಾಗಿ ಓ ಇಂದ್ರ ದೇವಾ! ನೀವು ನನ್ನ ಮೇಲೆ ಕೃಪೆದೋರಿದಂತೆ ಈ ಬಡವನ ಮೇಲೂ ಕರುಣೆದೋರಿ ಅನುಗ್ರಹಿಸಬೇಕೆಂದು ನನ್ನಾಸೆ.” ಎಂದು ಬೇಡಿ ಕೊಂಡಿತು. ರಾಕ್ಷಸನೂ ಬಕಪಕ್ಷಿ ನಾಳೀಜಂಘನ ಆಸೆಗೆ ಸಮ್ಮತಿಸಿ ಇಂದ್ರನನ್ನು ಕೇಳಿಕೊಂಡಾಗ ದೇವರಾಜನ ಅನುಗ್ರಹದಿಂದ ಗೌತಮ ಮರು ಜೀವ ಪಡೆದನು.
ಸತ್ತು ಬದುಕಿದ ಗೌತಮ ಘಟಿತ ಘಟನೆಗಳನ್ನು ತಿಳಿದು ಅತೀವ ನಾಚಿಕೆಗೊಳಗಾದನು. ಕ್ರೌರ್ಯ ರಾಕ್ಷಸರ ಗುಣವಾದರೂ ಇಲ್ಲಿ ರಕ್ಕಸ ನನಗೆ ಸಹಕಾರಿಯಾಗಿದ್ದಾನೆ. ಮೃಗಪಕ್ಷಿಗಳಿಗೆ ಸಂಸ್ಕಾರದ ಬಗ್ಗೆ ತಿಳಿದಿಲ್ಲದಿದ್ದರೂ ಧರ್ಮಾತ್ಮರಾಗಿ ನನ್ನನ್ನು ಬದುಕಿಸುವಲ್ಲಿ ಶ್ರಮಿಸಿದ್ದಾರೆ. ನಾನು ಮನುಷ್ಯನಾಗಿ ದೇವರಿತ್ತ ಬುದ್ದಿಯಿದ್ದರೂ ಕೇವಲ ಸ್ವಾರ್ಥಿಯಾಗಿ ಪರಮ ದೌಷ್ಟ್ಯ ಪ್ರದರ್ಶಿಸಿದೆ. ಇನ್ನು ನನಗ್ಯಾವ ಆಸೆಯೂ ಉಳಿದಿಲ್ಲ. ಧರ್ಮ ಏನೆಂಬ ಮಹತ್ತರವಾದ ಪಾಠ ನನಗಾಯಿತು. ನನ್ನ ಬದುಕು ಒಮ್ಮೆಗೆ ಮುಗಿದಾಗಿತ್ತು. ಈಗ ಏನು ಜೀವ ಪಡೆದಿರುವೆನೊ ಅದು ನನ್ನದಲ್ಲ, ದಾನವಾಗಿ ದೊರೆತದ್ದು. ನನ್ನ ಭವಿಷ್ಯತ್ತಿನ ಜೀವನವನ್ನು ಸರ್ವ ಸಂಗ ಪರಿತ್ಯಾಗ ಮಾಡಿ ತಪಸ್ಸನ್ನಾಚರಿಸುತ್ತಾ ಧರ್ಮ ಮಾರ್ಗದಲ್ಲಿ ಕಳೆಯುತ್ತೇನೆ ಎಂದು ತೀರ್ಮಾನಿಸಿದನು. ಬಕ ಪಕ್ಷಿಗೂ ರಕ್ಕಸನಿಗೂ ವಂದಿಸಿ ತಪೋನಿರತನಾಗಲು ಕಾಡಿನೊಳಗೆ ಹೋದನು.
“ವತ್ಸಾ ಧರ್ಮರಾಯ! ಈ ಕಥೆಯಲ್ಲಿ ನಿಗೂಢವಾದ ಸತ್ಯವಿದೆ. ಮನುಷ್ಯನನ್ನು ಆತನ ಆಸೆ ನಿಯಂತ್ರಿಸುತ್ತದೆ. ಏನೂ ಇಲ್ಲದಿದ್ದರೆ, ಕಡು ಬಡತನವಿದ್ದಾಗ ಬದುಕಿದರೆ ಸಾಕು ಎಂಬಾಸೆ. ನಂತರ ಒಂದಿಷ್ಟು ಆಹಾರದ ಆಸೆ, ಅದು ಸಿಕ್ಕರೆ ವಸನ ವಸತಿ ಸೌಕರ್ಯದಾಸೆ, ನಂತರ ಮತ್ತೊಂದು, ಇನ್ನೊಂದು ಎಂದು ಗರಿಗೆದರುವ ಆಸೆ. ಹೀಗೆ ಲೋಭ ಮನುಷ್ಯನ ಸಂತೃಪ್ತಿಯನ್ನು ಮಾಯಗೊಳಿಸಿ ಅಲೆದಾಡಿಸುತ್ತದೆ. ರಾಜನಾಗಿ ನೀನೆಷ್ಟು ಸೌಕರ್ಯವಿತ್ತರೂ ಸಾಲದಾಗಿ ಅದಕ್ಕಿಂತ ಅಧಿಕವಾದುದನ್ನು ಜನ ಬಯಸುತ್ತಾರೆ. ಇಂತಹ ವಿಷಮ ಸ್ಥಿತಿಯ ನಿವಾರಣೆಯಾಗದೆ ಆಡಳಿತ ಅಸಾಧ್ಯ. ಈ ಎಲ್ಲಾ ಅನರ್ಥಗಳಿಗೆ ಪೂರಕವೂ ಪ್ರೇರಕವೂ ಆಗುವ ಲೋಭವನ್ನು ಧರ್ಮ ಜಾಗೃತಿಯ ಮೂಲಕ ನಿವಾರಿಸಬೇಕು. ಇಹಲೋಕದ ಬದುಕಿನ ನಂತರ ಪರಲೋಕದ ಸುಖಕ್ಕಾಗಿ ಸತ್ಕರ್ಮ, ದಾನ, ದೇವತಾ ಭಕ್ತಿ, ಪರೋಪಕಾರ, ಸೇವೆ ಮಾಡಬೇಕೆಂಬ ನಿತ್ಯ ಸತ್ಯವನ್ನು ಆಚಾರದಿಂದ ರಾಜನಾದವ ಪಾಲಿಸಿ ತೋರಿದರೆ ಜನರೂ ಅರಿತು ಸಜ್ಜನರಾಗುತ್ತಾರೆ. ವಿವೇಕದಿಂದ ಸಂಸ್ಕರಿಸಲ್ಪಟ್ಟವರು ದುರಾಸೆಯನ್ನು ತೊರೆಯಬಲ್ಲರು. ಲೋಭವಿಲ್ಲದವರು ಮಾತ್ರ ವಿಶ್ವಾಸಕ್ಕೆ ಪಾತ್ರರಾಗಬಲ್ಲರು. ಎಂಬ ನಿಗೂಢ ರಹಸ್ಯವನ್ನು ವಿವರಿಸಿದರು.
ಇಷ್ಟಾಗುತ್ತಿರುವಾಗ ಭೀಷ್ಮಾಚಾರ್ಯರಿಗೆ ದಣಿವಾಗತೊಡಗಿತು. ವಿಶ್ರಾಂತಿಯ ಅಗತ್ಯ ಅವರಿಗಿತ್ತು. ಧರ್ಮರಾಯ ಮತ್ತು ಕೃಷ್ಣ ಭೀಷ್ಮಾಚಾರ್ಯರಿಗೆ ವಂದಿಸಿ ಅರಮನೆಯತ್ತ ನಡೆದರು.
ಮುಂದುವರಿಯುವುದು








