31.8 C
Udupi
Saturday, April 11, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 485

ಭರತೇಶ ಶೆಟ್ಟಿ,ಎಕ್ಕಾರು

ಸಂಚಿಕೆ ೪೮೫ ಮಹಾಭಾರತ

ಈ ತನಕ ದೇಹಕ್ಕಾಗುತ್ತಿದ್ದ ಹಸಿವೆಯಿಂದ, ಕೊರೆಯುವ ಚಳಿಯಿಂದ ಬಾಧಿತನಾಗಿದ್ದ ಬೇಟೆಗಾರನಿಗೆ ಒಮ್ಮೆಗೆ ಎಲ್ಲವೂ ಮರೆತು ಹೋದದಂತಾಯಿತು. ಕಪೋತ – ಕಪೋತಿಗಳ (ಪಾರಿವಾಳ) ಸಂಭಾಷಣೆ, ತಮಗೊದಗಿರುವ ಆಪತ್ತು, ಪ್ರಾಣ ಭಯವನ್ನೂ ಮರೆತು ನಿಸ್ವಾರ್ಥಿಯಾಗಿ ಪಾಲಿಸಿದ ಧರ್ಮಬುದ್ಧಿ, ಸೇವೆಗಾಗಿ ತೋರಿದ ಪರಿಶ್ರಮ ಎಲ್ಲವನ್ನೂ ನೋಡಿ, ಕೇಳಿ ಮನನ ಮಾಡಿ ಕುಬ್ಜನಾಗಿ ಹೋದಂತೆ ಭಾಸವಾಯಿತು. ಹೇಳುವುದಕ್ಕೆ ಲೋಕಮುಖದಲ್ಲಿ ಸಂಸ್ಕಾರವುಳ್ಳ ಜೀವಜಂತು ಮನುಷ್ಯ. ಆದರೆ ಮನುಷ್ಯನೇ ಈ ಸಮಯ ನನಗೊದಗಿ ಬರುತ್ತಿದ್ದರೂ ಈ ತೆರನಾದ ಚಾಕರಿ, ಸಮರ್ಪಣೆ ಖಂಡಿತಾ ಮಾಡುತ್ತಿರಲಿಲ್ಲ ಎಂಬ ಸತ್ಯ ಕಣ್ಮುಂದೆ ಮಿಂಚಿ ಹೋದಾಗ ಮನ ಕರಗಿತು. ಕೂಡಲೆ ಲುಬ್ಧಕನು (ಬೇಟೆಗಾರ) “ಹೇ ಪಾರಿವಾಳವೇ ತುಸು ಸೈರಿಸು. ನಿನ್ನ ಮಾಂಸ ಸುಟ್ಟು ತಿಂದರೆ ನನಗೆ ಈ ಜನ್ಮದಲ್ಲಿ ಬಿಡು, ಸತ್ತು ಆ ಲೋಕ ಸೇರಿದರೂ ಸದ್ಗತಿ ಪ್ರಾಪ್ತವಾಗದು. ನಿಮ್ಮ ಧರ್ಮಪೂರಿತವಾದ ನಡೆಯನ್ನು ಕಂಡು ನನ್ನ ಮನ, ಹೊಟ್ಟೆ ಎಲ್ಲವೂ ತುಂಬಿ ಹೋಗಿದೆ. ಮಾತ್ರವಲ್ಲ ನನ್ನ ಇನ್ನುಳಿದ ಬದುಕು ಹೀಗೆ ಸಾಗಬೇಕು ಎಂಬ ನೀತಿಪಾಠವೂ ಆಗಿದೆ. ದಯಮಾಡಿ ನೀನು ದುಡುಕದಿರು. ದೇವರು ನಿನಗಿತ್ತಿರುವ ಆಯುಷ್ಯಕಾಲವನ್ನು ಸಂತೋಷದಿಂದ ಜೀವಿಸು. ನೀನು ಈಗಾಗಲೆ ಮಾಡಿರುವ ಸೇವೆಗೆ ನಾನು ಚಿರ ಋಣಿಯಾಗಿದ್ದೇನೆ. ನಿಮ್ಮ ಋಣ ಸಂದಾಯ ಮಾಡಲು ನಾನೇನು ಮಾಡಿದರೂ ಕಡಿಮೆಯಾಗುತ್ತದೆ” ಎಂದು ಹೇಳುತ್ತಾ ಎದ್ದು ಬಂದು ತನ್ನ ಚೀಲದ ಬಾಯ್ತೆರೆದು ಬಂಧಿಯಾಗಿದ್ದ ಪಾರಿವಾಳಗಳನ್ನು ಮುಕ್ತಗೊಳಿಸಿ ಹಾರಿ ಹೋಗಬಿಟ್ಟನು. “ಹೇ ಪಾರಿವಾಳಗಳೇ, ನಿಮ್ಮನ್ನು ಕೊಂಡೊಯ್ದು ಕೊಂದು ತಿನ್ನುತ್ತಿದ್ದರೆ ನನ್ನ ಒಂದು ದಿನದ ಹಸಿವೆ ನಿವಾರಣೆಯಾಗುತ್ತಿತ್ತು. ಆದರೆ ಒಮ್ಮೆ ಜೀರ್ಣವಾದ ಬಳಿಕ ಮತ್ತೆ ಹಸಿವೆಯಾಗದೆ ಉಳಿಯದಿರದು. ಆದರೆ ನೀವಿಂದು ಜಾಗೃತಗೊಳಿಸಿದ ಸುಜ್ಞಾನ, ಧರ್ಮ ಬುದ್ಧಿ ನನ್ನ ಅಜ್ಞಾನದ ಅಂಧಕಾರವನ್ನು ತೊಲಗಿಸಿದೆ. ಜೀವನಾಂತ್ಯದವರೆಗೂ ನಿತ್ಯನೂತನವಾಗಿ ಉಳಿಯಲಿರುವ ಈ ದಿವ್ಯ ದಾನ ನನ್ನಿಂದ ಕಳಚಿಕೊಳ್ಳಲಾಗದ ಅಕ್ಷಯ ನಿಧಿಯಾಗಿದೆ. ನಿಮ್ಮನ್ನು ಬಂಧ ಮುಕ್ತಗೊಳಿಸಿ ನಾನು ಔದಾರ್ಯ ತೋರುತ್ತಿಲ್ಲ. ನೀವು ಗುರುಗಳಂತೆ ನನಗಿತ್ತ ಸದ್ಬುದ್ಧಿಯನ್ನು ಬಳಸಲು ಇಲ್ಲಿಂದಲೆ ಆರಂಭಿಸಿದ್ದೇನೆ” ಎಂದು ಕೈ ಮುಗಿದು ನಿಂತನು. ನಂತರ ಬೇಟೆಗಾರ ತನ್ನ ಪಾಡಿಗೆ ತಾನು ಮನೆಯತ್ತ ಹೆಜ್ಜೆ ಹಾಕುತ್ತಾ ಸಾಗಿದನು.

“ಮಗನೇ ಧರ್ಮರಾಯಾ! ಧರ್ಮ ಎನ್ನುವುದು ಕಣ್ಣಿಗೆ ಕಾಣಿಸದ, ಅಳತೆಗೆ ಸಿಗದ, ತೂಕಕ್ಕೆ ತೂಗಲಾಗದ ಅಮಿತ ಶಕ್ತಿಯುಳ್ಳ ದಿವ್ಯ ಚೇತನ. ಅದು ಪಾಲಿಸಿದವರ ಪಾಲಕನಾಗಿ ಸದಾ ಸಂರಕ್ಷಕನಾಗಿ ಜೊತೆಗಿರುತ್ತದೆ. ರಾಜನಾದವನು ಕೂಡ ಸದಾ ಶತ್ರುಗಳಿಂದ ಸುತ್ತುವರಿದಿದ್ದು ಬದುಕಬೇಕಾಗುವುದು ಪ್ರಾಪಂಚಿಕ ಸತ್ಯ. ಆದರೂ ಪ್ರಾಣ ಸಂಕಟಕ್ಕೊಳಗಾದ ಸ್ಥಿತಿಯಲ್ಲಿ ಶತ್ರುವೇ ಸಿಕ್ಕಿದರೂ ಕೃಪೆದೋರಿ ಸಹಾಯ ಮಾಡಬೇಕು. ಯಾಕೆಂದರೆ ಯಾರಾದರೂ ಸಾವಿನಂಚಿಗೆ ತಲುಪಿ ಮರಣ ಭಯವನ್ನು ಅನುಭವಿಸುತ್ತಾನೋ ಆತ ದ್ವೇಷ ಪ್ರತಿಕಾರದ ಭಾವವನ್ನು ಕಳಕೊಳ್ಳುತ್ತಾನೆ. ಆಸೆ ಆಕಾಂಕ್ಷೆಗಳಿಂದ ಆ ಕ್ಷಣ ಮುಕ್ತನಾಗುತ್ತಾನೆ. ಅಂತಹ ಸ್ಥಿತಿಯಲ್ಲಿರುವವನ್ನು ಕಾಪಾಡುವುದು ಧರ್ಮ. ಪರಿಣಾಮ ಧರ್ಮ ಬುದ್ಧಿ ಜಾಗ್ರತವಾಗಿ ಆತನಿಂದ ಕೇಡಾಗುವ ಸಾಧ್ಯತೆ ಬೇಟೆಗಾರನ ಮನ ಪರಿವರ್ತನೆಯಾದಂತೆ ಕಡಿಮೆ ಆಗುತ್ತದೆ. ಇದು ಧರ್ಮ ಶಕ್ತಿಗೆ ಒಂದು ನಿದರ್ಶನ. ತನಗೆ ಎಷ್ಟೇ ಕಷ್ಟ ಬಂದರೂ ಮನುಷ್ಯನಾದವ ಕೃತಘ್ನ, ಮಿತ್ರಘಾತಕನಾಗ ಬಾರದು.”

ನಿನಗೆ ಇನ್ನೊಂದು ಕಥೆಯ ಮೂಲಕ ರಾಜಧರ್ಮ ಸೂಕ್ಷ್ಮವನ್ನು ಹೇಳುತ್ತೇನೆ ಕೇಳು. ಹಿಂದೆ ಗೌತಮನೆಂಬವನು ಗೊಂಡಾರಣ್ಯದ ಮಧ್ಯೆ ಸಿಕ್ಕಿಕೊಂಡನು. ರಾತ್ರಿಯಾಗಿತ್ತು, ಕೊರೆಯುವ ಚಳಿಯೂ ಬೇರೆಯಿತ್ತು. ಹಸಿವೆ, ಮಾರ್ಗಾಯಾಸವೂ ಬಾಧಿಸುತ್ತಿತ್ತು. ಮುಂದೆ ಸಾಗುವಷ್ಟು ತ್ರಾಣವಿಲ್ಲದ ಬಡವನು ಅಲ್ಲಿಯೆ ಒಂದು ಮರದ ಬುಡದಲ್ಲಿ ಮುದುಡಿ ರಾತ್ರಿಯನ್ನು ಹೇಗಾದರು ಕಳೆಯೋಣ ಎಂದು ನಡುಗುತ್ತಾ ಕುಳಿತನು. ಅದೇ ಮರದ ಮೇಲೆ ನಾಳೀಜಂಘನೆಂಬ ಬಕಪಕ್ಷಿಯೊಂದು ವಾಸವಾಗಿತ್ತು. ಅದು ಗೌತಮನ ಸ್ಥಿತಿಯನ್ನು ಕಂಡು ಮರುಗಿ ಆತನಿಗಾಗುತ್ತಿರುವ ಚಳಿಯ ನಿವಾರಣೆಗಾಗಿ ಮರದ ಒಣ ಗೆಲ್ಲುಗಳನ್ನು ಮುರಿದು ರಾಶಿ ಹಾಕಿತು. ಅದೇ ಕಾಡಿನ ಋಷಿ ಆಶ್ರಮದ ಬಳಿಯಿಂದ ಯಾಗಕುಂಡದಿಂದ ಶೇಷಾಗ್ನಿ ಕೆಂಡವನ್ನು ತಂದು ಬೆಂಕಿಯ ವ್ಯವಸ್ಥೆ ಮಾಡಿತು. ನಂತರ ತನ್ನ ಗೂಡಿನಲ್ಲಿ ತನ್ನ ಆಹಾರಕ್ಕಾಗಿ ತಂದು ಶೇಖರಿಸಿಟ್ಟಿದ್ದ ಮೀನುಗಳನ್ನು ಆ ಬೆಂಕಿಯ ಮೇಲೆ ಹಾಕಿತು.

ನಾಳೀಜಂಘನು ಗೌತಮನನ್ನು ಉದ್ದೇಶಿಸಿ “ಅಯ್ಯಾ! ಆ ಮೀನುಗಳನ್ನು ತಿಂದು ಹಸಿವೆಯನ್ನು ನಿವಾರಿಸಿಕೊಂಡು ಇಲ್ಲಿಯೆ ಬೆಚ್ಚನೆ ಮಲಗಿರು.” ಎಂದು ಹೇಳಿ ತನ್ನ ಗೂಡು ಸೇರಿತು.

ಬೆಳಗ್ಗೆ ಎದ್ದು ಗೌತಮ ನಾಳಿಜಂಘನಿಗೆ ಕೃತಜ್ಞತೆಗಳನ್ನು ಅರ್ಪಿಸಿ ಹೊರಡಲು ಸಿದ್ಧನಾದನು. ಕುಶಲೋಪರಿ ವಿಚಾರಿಸಿದ ಬಕಪಕ್ಷಿ ತನ್ನ ಅತಿಥಿಯಾಗಿ ಬಂದ ಗೌತಮನ ಬಡತನದ ವ್ಯಥೆಯ ಕಥೆ ಕೇಳಿ “ಹೇ ಗೌತಮನೇ ಈ ಕಾಡಿನಲ್ಲಿ ನನ್ನ ಮಿತ್ರನಾದ ರಾಕ್ಷಸನೋರ್ವನಿದ್ದಾನೆ. ವಿರೂಪಾಕ್ಷ ಎಂದು ಆತನ ಹೆಸರು. ನೀನು ಆತನ ಬಳಿ ಹೋಗಿ ನಾನು ಕಳುಹಿಸಿದ್ದು ಎಂದು ಹೇಳು. ನಿನ್ನ ಬಡತನದ ನಿವಾರಣೆಗೆ ವ್ಯವಸ್ಥೆ ಮಾಡುವಂತೆ ನಾನು ನಾಳೀಜಂಘ ಬೇಡಿಕೊಂಡಿದ್ದೇನೆಂದು ತಿಳಿಸು” ಎಂದು ಹೇಳಿ ಕಳುಹಿಸಿತು.

ಬಕಪಕ್ಷಿ ವಿವರಿಸಿದ ದಾರಿಯಲ್ಲಿ ಸಾಗಿ ರಾಕ್ಷಸರಾಜ ವಿರೂಪಾಕ್ಷನನ್ನು ಕಂಡು ಗೌತಮ ತನ್ನ ಸ್ಥಿತಿ ವಿವರಿಸಿದನು. ಆಗ ಆ ರಕ್ಕಸರಾಜ ಗೌತಮನಿಗೆ ಹೊರಲಾಗುವಷ್ಟು ಹೊನ್ನನ್ನು ನೀಡಿ ಸಂತೋಷದಿಂದ ಬದುಕುವಂತೆ ಹೇಳಿ ಕಳುಹಿಸಿದನು. ತಿರುಗಿ ಬರುತ್ತಾ ಗೌತಮನು ತಾನು ಸಾಗಿ ಹೋಗಿದ್ದ ನಾಳೀಜಂಘನಿರುವ ಮರದ ದಾರಿಯಾಗಿ ಬಂದನು. ರಾಕ್ಷಸನಲ್ಲಿಗೆ ಹೋಗಿ ಬಂದ ದೀರ್ಘ ಪ್ರಯಾಣದ ಪರಿಣಾಮ, ಹೊನ್ನಿನ ಮೂಟೆಯ ಹೊರೆ ಹೊತ್ತು ತಂದ ದಣಿವು, ಹೊಟ್ಟೆಗೆ ಹಸಿವು ಆತನಿಗಾಗಿತ್ತು. ನಿನ್ನೆಯ ರಾತ್ರಿ ಬಕಪಕ್ಷಿ ತನಗಿತ್ತ ಆಹಾರವನ್ನು ಇಂದೂ ತನಗೆ ಅಂತಹ ಉಪಚಾರ ಸಿಕ್ಕೀತೆಂದು ಅಪೇಕ್ಷೆ ಮಾಡುತ್ತಾ ಆ ಮರದಡಿ ಕುಳಿತನು. ಆದರೆ ನಾಳಿಜಂಘನ ಗೂಡಿನಲ್ಲಿ ತನಗಾಗಿ ಶೇಖರಿಸಿದ್ದ ಮೀನುಗಳೆಲ್ಲವನ್ನೂ ನಿನ್ನೆಯ ರಾತ್ರಿ ಗೌತಮನಿಗೆ ನೀಡಿದ್ದ ಕಾರಣ ಏನೂ ಉಳಿದಿರಲಿಲ್ಲ. ಸ್ವತಃ ತಾನು ಹಸಿದಿದ್ದು ಇಂದು ತಾನು ಸುತ್ತಾಡಿ ಏನಾದರು ಸಂಗ್ರಹಿಸಿದರಷ್ಟೆ ತನಗೆ ಆಹಾರ ಎಂಬ ಸ್ಥಿತಿಯಲ್ಲಿತ್ತು.

ಮರದ ಬುಡದಲ್ಲಿ ಕುಳಿತಿದ್ದ ಗೌತಮ ಯಾಕೆ ಇಷ್ಟು ಹೊತ್ತಾದರೂ ತನಗೇನು ತಿನ್ನಲು ಈ ಪಕ್ಷಿ ನೀಡುತ್ತಿಲ್ಲ ಎಂದು ಮೇಲೆ ನೋಡಿದನು. ತಕ್ಷಣ ಆತನ ಹಸಿವು ದುಷ್ಪ್ರೇರಣೆ ನೀಡಿತು. ದಷ್ಟಪುಷ್ಟವಾಗಿರುವ ಈ ಬಕಪಕ್ಷಿಯನ್ನು ಹೊಡೆದು ಬೇಯಿಸಿ ತಿಂದು, ಬುತ್ತಿಯಾಗಿ ದಾರಿಯ ಹಸಿವಿಗೂ ಕಟ್ಟಿಕೊಂಡರೆ ಹೇಗೆ ಎಂದು ಯೋಚಿಸತೊಡಗಿದನು. ತನ್ನ ಚಿಂತನೆಯಂತೆ ಆ ಪಕ್ಷಿಯನ್ನು ಹೊಡೆದು ಕೊಂದು ತಿಂದು ಉಳಿದದ್ದನ್ನು ಪ್ರಯಾಣ ಮಧ್ಯೆ ಹಸಿವು ನಿವಾರಣೆಗೆಂದು ಕಟ್ಟಿಕೊಂಡನು.

ಮುಂದುವರಿಯುವುದು…

✍🏻ಭರತೇಶ್ ಶೆಟ್ಟಿ ಎಕ್ಕಾರು

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page