ಭಾಗ – 482
ಭರತೇಶ ಶೆಟ್ಟಿ,ಎಕ್ಕಾರು

“ವತ್ಸಾ ಧರ್ಮರಾಯಾ! ರಾಜನಿಗೆ ಮುಖ್ಯವಾದ ಸಾಧನ ದಂಡ. ದೊಣ್ಣೆಯನ್ನೆತ್ತಿಕೊಂಡು ನಿಂತವನಿಗೆ ಜನ ಹೆದರುತ್ತಾರೆ. ವಿಪತ್ತು ಬಂದಾಗ ವಿಚಾರ ಮಾಡುತ್ತಾ ಕಾಲಕಳೆಯುವುದಲ್ಲ, ಬಾಯಿಯಲ್ಲಿ ವಿನಯವಿದ್ದರೂ, ಹೃದಯವು ಕತ್ತಿಯಂತಿರಬೇಕು. ಅಗತ್ಯ ಬಿದ್ದು ಸಂಧಿ ಮಾಡಿಕೊಂಡರೂ, ನಿಶ್ಚಿಂತೆಯಿಂದ ಇರಬಾರದು. ಮನೆಯಲ್ಲಿ ಹಾವು ಇದ್ದರೆ ಹೇಗೆ ಭಯವೋ? ಹಾಗೆಯೇ ಅಂತಹ ವೈರಿಗಳಿಂದ ಭಯವು ಇದ್ದೇ ಇರುತ್ತದೆ. ಆದುದರಿಂದ ಅಂತಹ ಶತ್ರುಗಳನ್ನು ನಯ ವಿನಯಗಳಿಂದಲೂ, ದುಃಖ ಪ್ರದರ್ಶನದಿಂದಲೂ, ಅಥವಾ ಏನನ್ನಾದರೂ ಕೊಟ್ಟು, ಉಪಕಾರ ಮಾಡಿಯಾದರೂ ಶಾಂತಗೊಳಿಸಬೇಕು. ಮತ್ತೆ ಅವಕಾಶ ಸಿಕ್ಕಿದಾಗ ಶತ್ರುವಿನಲ್ಲಿ ದಯ ದಾಕ್ಷಿಣ್ಯ ತೋರಬಾರದು. ಇದು ಸನ್ಮಾರ್ಗವೇ ಎಂಬ ಜಿಜ್ಞಾಸೆ ನಿನ್ನ ಮನ ಮಾಡಬಹುದು. ವೈಯಕ್ತಿಕವಾಗಿ ಓರ್ವ ವ್ಯಕ್ತಿಯಾಗಿ ಯೋಚಿಸುವುದಾದರೆ, ವೈಯಕ್ತಿಕ ಸಂಬಂಧದಲ್ಲಿ ಇದು ವಂಚನೆ ಎಂದಾಗುತ್ತದೆ. ಆದರೆ ರಾಜನಿಗೆ ಆತನ ಸಾಮ್ರಾಜ್ಯ ಮತ್ತು ಪ್ರಜೆಗಳ ರಕ್ಷಣೆಗಾಗಿ ಇಂತಹ ಮಾರ್ಗ ಅವಲಂಬಿಸುವುದು ರಾಜಕಾರಣ ಮಾರ್ಗವಾಗುತ್ತದೆ. ಹಾಗೆಂದು ಅರಸನಾದವ ಅಕಾರಣವಾಗಿ ಯಾರ ಜೊತೆಗೂ ವೈರ ಬೆಳೆಸಬಾರದು. ದೇಶದ ಹಿತಚಿಂತಕನಾಗಿ, ರಕ್ಷಕನಾಗಿದ್ದು ದೇಶಕ್ಕೆ ತೊಂದರೆ ನೀಡಬಲ್ಲ, ನೀಡುತ್ತಿರುವ ವೈರಿಯನ್ನು ಕ್ಷಣಕಾಲವೂ ಅವಕಾಶ ನೀಡದೆ ಮಣ್ಣಿನ ಮಡಕೆಯನ್ನು ಬಂಡೆಯ ಮೇಲೆತ್ತಿ ಹೊಡೆದಂತೆ ಸರ್ವನಾಶ ಮಾಡಿ ಬಿಡುತ್ತಿರಬೇಕು. ಬಕನಂತೆ ತಾಳ್ಮೆಯ ಧ್ಯಾನ, ತೋಳನಂತಹ ಹೊಂಚು, ಸಿಂಹದಂತಹ ಪರಾಕ್ರಮ ಹೊಂದಿ ಸಿಕ್ಕ ಅವಕಾಶದಲ್ಲಿ ವೈರಿಯ ಮೇಲೆ ಹರಿತವಾದ ಬಾಣದಂತೆ ಎರಗಿ ನಾಶಗೊಳಿಸುವುದು ರಕ್ಷಣಾ ತಂತ್ರ. ಈ ರೀತಿಯ ಕಟು ನೀತಿಯನ್ನು ತನ್ನ ಶತ್ರುಗಳ ಬಗೆಯಲ್ಲಿ ನಿರ್ದಾಕ್ಷಿಣ್ಯವಾಗಿ ರಾಜ ಪಾಲಿಸಬೇಕೆಂದು ಮಹರ್ಷಿ ಭರದ್ವಾಜರು ರಾಜ ಶತ್ರುತಂಪನಿಗೆ ಉಪದೇಶ ಮಾಡಿದ್ದಾರೆ.
ಯುಧಿಷ್ಠಿರಾ! ಇನ್ನು ಮಳೆ, ಬೆಳೆ ಮಾತ್ರವಲ್ಲ ದೇಶದ ಎಲ್ಲಾ ರೀತಿಯ ಯೋಗಕ್ಷೇಮಗಳಿಗೂ ರಾಜನು ಕಾರಣ. ಕಷ್ಟಕಾಲದಲ್ಲಿ ಪ್ರತಿಯೊಬ್ಬರೂ ತಮ್ಮ ಬುದ್ಧಿಯನ್ನು ಉಪಯೋಗಿಸಿ ಹೇಗಾದರು ಮಾಡಿ ಜೀವ ಒಂದನ್ನು ಉಳಿಸಿಕೊಳ್ಳಬೇಕು ಪ್ರಜೆಗಳನ್ನು ಈ ನಿಟ್ಟಿನಲ್ಲಿ ಅರಸನ ಆಜ್ಞೆ ಪಾಲಿಸುವ, ಸ್ವಂತ ವಿವೇಚನೆ, ಸುರಕ್ಷತೆಯಿಂದ ಬದುಕುವ ತರಬೇತಿ ನೀಡಿ ಸಜ್ಜುಗೊಳಿಸಬೇಕು. ಇದಕ್ಕೆ ಪೂರಕವಾದ ಒಂದು ಕಥೆ ಹೇಳುತ್ತೇನೆ ಕೇಳು. ಒಮ್ಮೆ ಒಂದು ಬೂರುಗದ ಮರಕ್ಕೂ, ಬಿರುಗಾಳಿಗೂ ವಾದ ವಿವಾದವಾಗಿ ಸ್ಪರ್ಧೆ ಉಂಟಾಯಿತಂತೆ. ಆಗ ಮರ ವಿವೇಚನೆ ಮಾಡಿಕೊಂಡು ಬಿರುಗಾಳಿಯ ಶಕ್ತಿಯ ಬಗ್ಗೆ ತನ್ನಲ್ಲಿ ತರ್ಕಿಸಿಕೊಂಡು ತನ್ನ ಎಲೆಯ ತೊಟ್ಟುಗಳ ಹಿಡಿತ ಸಡಿಲಿಸಿ ಬಿಟ್ಟಿತಂತೆ. ಚಿಗುರನ್ನಷ್ಟೆ ಬಿಗಿ ಹಿಡಿತದಲ್ಲಿ ಉಳಿಸಿ ನಿಂತಿತಂತೆ. ಬಿರುಗಾಳಿ ವೇಗವಾಗಿ ಬೀಸಿದೊಡನೆ ಆ ಮರದ ಎಲೆಗಳೆಲ್ಲಾ ಉದುರಿ ಬೋಳು ಮರವಾಗಿ ನಿಂತಿತಂತೆ. ಬಿರುಗಾಳಿ ಏನೇ ಮಾಡಿದರೂ ಆ ಬೋಳು ಮರವನ್ನು ಏನೇನೂ ಮಾಡಲಾಗದೆ ಸೋತು ಹೋಯಿತು. ಕಾರಣ ಬೀಸುವ ಬಿರುಗಾಳಿಯನ್ನು ತಡೆದು ಪ್ರತಿರೋಧ ತೋರಬಲ್ಲ ಎಲೆಗಳು ಉದುರಿ ಹೋದ ಕಾರಣ ಎಷ್ಟೇ ಪ್ರಬಲವಾಗಿ ಬೀಸಿದರೂ ಗಾಳಿ ಗೆಲ್ಲುಗಳ ಮಧ್ಯೆ ಹಾಯ್ದು ಹೋಗಿ ಬಿಡುತ್ತಿತ್ತು. ಈ ರೀತಿ ಪ್ರಜೆಗಳು ವಿಪತ್ತು ಬಂದಾಗ ತಮ್ಮ ಆಸೆಗಳನ್ನು ತೊರೆದು ಕನಿಷ್ಟ ಅಗತ್ಯಗಳನ್ನಷ್ಟೇ ಉಳಿಸಿ ಮತ್ತೆಲ್ಲವನ್ನೂ ಬದಿಗಿರಿಸಿ ಸಹಯೋಗ ನೀಡಿದರೆ ರಾಜನಿಗೆ ಪಾಲನೆ ಅತಿ ಸುಲಭವಾಗುತ್ತದೆ. ಬೂರುಗದ ಮರವೂ ಅಗತ್ಯವಿರುವ ಚಿಗುರನ್ನು ಉಳಿಸಿ, ಬಿರುಗಾಳಿ ಸೋತು ಹೋದ ನಂತರ ಚುರುಕಾಗಿ ಚಿಗುರಿ ಮತ್ತೆ ಮೈತುಂಬಿ ಸೊಂಪಾಗಿ ಬೆಳೆದು ನಿಂತಿತಂತೆ. ಈ ರೀತಿ ಪ್ರಜೆಗಳೂ ರಾಜನ ಮನವರಿತು ನಡೆದರೆ ವಿಪತ್ತು ಸುಲಭದಲ್ಲಿ ನಿವಾರಣೆಯಾಗಿ ಬಳಿಕ ಕಳಕೊಂಡದ್ದನ್ನು ಮರಳಿ ಪಡೆಯುವಲ್ಲಿ ಸುಲಭ ಸಾಧ್ಯವಾಗುತ್ತದೆ. ಹಾಗಾಗಿ ರಾಜನಾದವ ಪ್ರಜೆಗಳ ಪೂರ್ಣ ವಿಶ್ವಾಸ ಗಳಿಸಿ ತುರ್ತು ಸಮಯದಲ್ಲಿ ಆಜ್ಞಾನುವರ್ತಿಗಳಾಗಿ ಸಹಕರಿಸುವಂತೆ ಸಿದ್ಧಗೊಳಿಸಿರಬೇಕು. ಒಂದು ವೇಳೆ ಆ ಸಮಯ ಅರಸನ ಮಾತು ಕೇಳದೆ ತದ್ವಿರುದ್ಧವಾಗಿ ವರ್ತಿಸಿದರೆ ಬಿರುಗಾಳಿಗೆ ವೃಕ್ಷದ ಕೊಂಬೆಗಳೆಲ್ಲ ಮುರಿದೋ, ಇಲ್ಲ ಮರವೇ ಬುಡಮೇಲಾಗಿ ಬಿದ್ದೋ ಹೋಗಬಹುದಾದ ಸಾಧ್ಯತೆಯಂತೆ ದುರಂತ ಸಂಭವಿಸುವ ಅಪಾಯವಿರುತ್ತದೆ.
ಹಿಂದೆ ಒಮ್ಮೆ ಭೀಕರ ಕ್ಷಾಮವು ತಲೆದೋರಿತು. ಆಗ ಮಹರ್ಷಿ ವಿಶ್ವಾಮಿತ್ರರು ತಿನ್ನುವುದಕ್ಕೆ ಏನೂ ಸಿಗದೆ ಹಸಿವನ್ನೂ ತಾಳಲಾರದೆ ಒಬ್ಬ ಕಾಡ ಕಿರಾತನ ಮನೆಯಿಂದ ಮಾಂಸವನ್ನು ಕದ್ದು ತಿಂದರಂತೆ….
ಮುಂದುವರಿಯುವುದು…








