29.6 C
Udupi
Saturday, April 11, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 481

ಭರತೇಶ ಶೆಟ್ಟಿ, ಎಕ್ಕಾರು

ಬ್ರಹ್ಮದತ್ತನ ಅರಮನೆಯಲ್ಲಿ ‘ಪೂಜಿನಿ’ ಎಂಬ ಒಂದು ವಿಶೇಷ ಹಕ್ಕಿ ಗೂಡು ಕಟ್ಟಿ ವಾಸವಾಗಿತ್ತು. ಅದು ತಿರುಗಾಟಕ್ಕೆ ಹೊರ ಹೋದರೂ ಮರಳಿ ಬಂದು ಅರಮನೆಯಲ್ಲಿರುವ ತನ್ನ ಗೂಡಿನಲ್ಲಿ ವಾಸವಾಗಿರುತ್ತಿತ್ತು. ಹೀಗಿರಲು ಬ್ರಹ್ಮದತ್ತನ ಮಡದಿ ಆ ರಾಜ್ಯದ ರಾಣಿ ಗರ್ಭಿಣಿಯಾದಳು. ಕಾಲ ಕಳೆದು ರಾಣಿ ಒಂದು ಗಂಡು ಮಗುವಿಗೆ ಜನ್ಮ ನೀಡಿದಳು.ಕೆಲ ಸಮಯ ಕಳೆಯಲು ಹಕ್ಕಿಯೂ ಗೂಡಿನಲ್ಲಿ ಮೊಟ್ಟೆ ಇಟ್ಟಿತು. ದಿನಗಳು ಕಳೆಯುತ್ತಿದ್ದಂತೆ ಕಾವು ಕೊಟ್ಟು ಮೊಟ್ಟೆಯೊಡೆದು ಮರಿಯೊಂದು ಹೊರ ಬಂತು. ಪೂಜಿನಿ ಹಕ್ಕಿ ಅರಸನ ಪ್ರೀತಿ ಪಾತ್ರವಾಗಿದ್ದ ಕಾರಣ ಅರಮನೆಯ ವಾಸಿಗಳ್ಯಾರೂ ಅದಕ್ಕೆ ತೊಂದರೆ ನೀಡದೆ ಗೌರವದಿಂದ ಕಾಣುತ್ತಿದ್ದರು. ಹೀಗಿರಲು ಒಂದು ದಿನ ಪೂಜಿನಿ ಮರಿಯನ್ನು ಗೂಡಿನಲ್ಲಿ ಬಿಟ್ಟು ಬಹುದೂರ ಹಾರಿ ಹೋಗಿ, ಅಮೃತದ ಸವಿಯುಳ್ಳ ವಿಶಿಷ್ಟವಾದ ಎರಡು ಹಣ್ಣುಗಳನ್ನು ತಂದಿತು. ಒಂದು ಹಣ್ಣನ್ನು ತನ್ನ ಮರಿಗೂ ಇನ್ನೊಂದನ್ನು ರಾಜನ ಮಗನಿಗೂ ನೀಡಿತು. ಪೂಜಿನಿ ತಂದ ಹಣ್ಣು ಅದ್ಬುತ ಶಕ್ತಿ ಹೊಂದಿದ್ದ ಕಾರಣ ರಾಜಕುಮಾರನೂ ಪೂಜಿನಿಯ ಮರಿ ಹಕ್ಕಿಯೂ ಆರೋಗ್ಯಯುತವಾಗಿ ಬೆಳೆಯತೊಡಗಿದರು.

ಹೀಗಿರಲು ಒಂದು ದಿನ ರಾಜನ ಮಗನು ಮರಿ ಹಕ್ಕಿಯೊಂದಿಗೆ ಆಟವಾಡುತ್ತಾ ಇರುವಾಗ ಹೊಡೆದು ಕೊಂದು ಬಿಟ್ಟನು. ಅದನ್ನು ನೋಡಿದ ಪೂಜಿನಿಯ ಮನಸ್ಸು ಅತೀವ ದುಃಖಕ್ಕೊಳಗಾಯಿತು. ದುಃಖ ಕ್ರೋಧವಾಗಿ, ಕ್ರೋಧ ರೋಷವಾಗಿ ಬದಲಾಗಿ ರಾಜಕುಮಾರನತ್ತ ತಿರುಗಿತು. ಆ ಮಗುವಿನ ಕಣ್ಣುಗಳೆರಡನ್ನು ತನ್ನ ಹರಿತವಾದ ಉಗುರು ಮತ್ತು ಕೊಕ್ಕಿನಿಂದ ಪರಚಿ ಕುಕ್ಕಿ ಸೀಳಿ ಹಾಕಿತು. ಪರಿಣಾಮ ಮಗು ವಿಪರೀತ ಗಾಯಗೊಂಡು ದೃಷ್ಟಿಯನ್ನು ಕಳಕೊಂಡು ಕುರುಡಾಗಿ ಹೋಯಿತು.

ಹೀಗಾದರೂ ಪೂರ್ಣ ಸಂಗತಿ ತಿಳಿದ ರಾಜ ಪೂಜಿನಿಯನ್ನು ಕರೆಸಿ ವಿಚಾರಿಸಿದನು. ಆಗ ಮಾತೃ ಹೃದಯದ ಪೂಜಿನಿ “ಹೇ ರಾಜನ್! ನಿನ್ನ ಮಗು, ನನ್ನ ಮಗು ಎಂಬ ಭೇದವಿಲ್ಲದೆ ಹಣ್ಣುಗಳನ್ನು ತಂದು ನಾನು ತಿನ್ನಿಸುತ್ತಿದ್ದೆ. ನೀನು ನನಗೆ ಆಶ್ರಯ ರಕ್ಷಣೆಯಿತ್ತು ಕಾಪಾಡುವ ಪೋಷಕ ಎಂಬ ಕೃತಜ್ಞತೆ ನನಗೂ ಇದೆ. ಆದರೆ ನಿನ್ನ ಮಗ ಇದೆಲ್ಲವನ್ನೂ ಮರೆತು ನನ್ನ ಮರಿಯನ್ನು ಹೊಡೆದು ಕೊಂದು ಬಿಟ್ಟನು. ನಾನು ತೋರಿದ ಪ್ರೀತಿಗೆ ರಾಜ ಪರಿವಾರ ನನಗಿತ್ತ ಪ್ರತಿಫಲ ಘೋರವಾಯಿತು. ಇದು ನ್ಯಾಯವೇ?” ಎಂದು ಕೇಳಿತು.

ಆಗ ರಾಜನು ಯೋಚಿಸಿ “ಹೇ ಪೂಜಿನಿ! ಮಗು ತಿಳಿಯದೆ ಹಾಗೆ ಮಾಡಿರಬಹುದು. ಆದರೆ ಮಾತೆಯಾದ ನಿನಗಾಗಿರುವ ನೋವು ನನಗೆ ಅರ್ಥವಾಗುತ್ತದೆ. ರಾಜನಾಗಿ ಅನ್ಯಾಯವಾದಾಗ ವಿಚಾರಣೆ ಮಾಡಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡುವ ಹೊಣೆಗಾರಿಕೆ ನನಗಿದೆ. ಆದರೆ ನೀನು ತಾಳ್ಮೆ ತೋರದೆ ಪ್ರತಿಕಾರ ತೀರಿಸಿ ಬಿಟ್ಟೆ. ಅದು ಹಾಗಿರಲಿ, ನೀನು ನಮ್ಮ ಅರಮನೆಯಲ್ಲಿ ಬಹುಕಾಲದಿಂದ ವಾಸವಾಗಿರುವೆ. ಈಗ ಏನಾಗಿದೆಯೊ ಅದನ್ನು ನಾನು ಮರೆತು ಬಿಡುತ್ತೇನೆ. ನೀನು ಸಮಾಧಾನಗೊಂಡು ಮೊದಲಿನಂತೆ ಇಲ್ಲಿಯೆ ಇದ್ದು ಬಿಡು” ಎಂದು ಹೇಳಿದನು.

ಆಗ ಆಲೋಚನೆ ಮಾಡಿದ ಪೂಜಿನಿ “ಹೇ ರಾಜನ್! ಕ್ಷತ್ರಿಯರಿಗೆ ಶಾಶ್ವತ ಸ್ನೇಹ ಎಂಬುವುದು ಇರದು. ತಮಗೆ ನೋವು ಯಾರಿಂದ ಆಗಿದೆಯೊ ಅವರ ಬಗ್ಗೆ ಯೋಚಿಸದೆ ಶತ್ರು ಎಂದು ಪರಿಗಣಿಸುವುದು ನಿಮ್ಮ ಗುಣ. ಸಮಯಸಾಧಿಸಿ ಆ ವೈರಿಯನ್ನು ಕೊಂದು ಮುಗಿಸಿ ಬಿಡುವುದು ನಿಮ್ಮ ಯೋಚನೆ ಮತ್ತು ಯೋಜನೆ ಆಗಿ ಬಿಡುತ್ತದೆ. ಹೀಗಿರಲು ನಿನ್ನ ಪ್ರೀತಿಯ ಬಗ್ಗೆ ನನಗೆ ವಿಶ್ವಾಸ ತೋರಲು ಸಾಧ್ಯವಾಗದು. ತಮ್ಮ ಕಾರ್ಯ ಸಾಧನೆಗಾಗಿ ಸಮಯೋಚಿತ ಹಿತವಚನಗಳನ್ನಾಡಿ ಮರುಳುಗೊಳಿಸಿ ತಮ್ಮ ಉದ್ದೇಶಿತ ಕೆಲಸ ಸಾಧಿಸದೆ ನಿಮಗೆ ನಿದ್ದೆ ಬೀಳದು. ರಾಜಾ! ಇಂದು ನೀನು ನನ್ನಲ್ಲಿ ಇಲ್ಲಿಯೆ ಇದ್ದು ಬಿಡು ಎನ್ನುತ್ತಿರಬಹುದು. ನನ್ನ ಮರಿ ಹೇಗೂ ಸತ್ತು ಕಣ್ಮರೆಯಾಗಿದೆ. ಆದರೆ ನಿನ್ನ ಮಗು ನಿನ್ನ ಕಣ್ಮುಂದೆ ಇದ್ದಾನೆ. ಆತನ ಸ್ಥಿತಿಯನ್ನು ಕಾಣುವಾಗ ನಿನಗೆ ನನ್ನ ಬಗ್ಗೆ ವೈರ ಬೆಳೆಯುತ್ತಲೆ ಹೋಗುತ್ತದೆ. ಅಂತಹ ಸ್ಥಿತಿಯಲ್ಲಿ ನೀನು ಮರೆತು ಬಿಡುತ್ತೇನೆ ಎಂದು ಹೇಳಿದ್ದರೂ ಮತ್ತೆ ಮತ್ತೆ ನೆನಪಾಗಿ ನನಗೆ ಸಂಚಕಾರ ಉಂಟುಮಾಡದೆ ಬಿಡಲಾರೆ. ಯಾಕೆಂದರೆ ಪುತ್ರ ವಾತ್ಸಲ್ಯ ಎನ್ನುವುದು ಪಕ್ಷಿಯಾದ ನನಗೂ, ಮನುಷ್ಯರಾದ ನಿಮಗೂ ಒಂದೇ ಸಮನಾಗಿರುತ್ತದೆ. ಒಂದು ವೇಳೆ ನಾನು ನಿನ್ನಲ್ಲಿ ನನ್ನ ಮರಿಯ ಸ್ಥಿತಿಯ ಬಗ್ಗೆ ದೂರು ನೀಡಿರುತ್ತಿದ್ದರೂ ಪುತ್ರ ವಾತ್ಸಲ್ಯದಿಂದ, ಅಥವಾ ಮಗು ಎಂಬ ಕಾರಣದಿಂದ ಶಿಕ್ಷೆ ನೀಡುವಲ್ಲಿ ಹಿಂದೆ ಉಳಿದು ಬಿಡುತ್ತಿದ್ದೆ. ಅದನ್ನರಿತು ನನ್ನಿಂದ ಸಾಧ್ಯವಾಗುವ ವಿಧಾನದಲ್ಲಿ ನ್ಯಾಯವನ್ನು ಸ್ವಯಂ ನಾನು ತೀರ್ಮಾನಿಸಬೇಕಾಯಿತು. ಇನ್ನು ನಾನು ಇಲ್ಲಿ ಇರಲು ಸಾಧ್ಯವಿಲ್ಲ ಯಾಕೆಂದರೆ ಮನುಷ್ಯನಿಗೆ ಪಕ್ಷಿಯ ಉಪಯೋಗ ಒಂದೋ ಕೊಂದು ತಿನ್ನುವುದಕ್ಕೆ, ಇಲ್ಲ ಪಂಜರದಲ್ಲಿಟ್ಟು ಅಂದ ನೋಡುವುದಕ್ಕೆ. ಇಲ್ಲಿ ನನ್ನಿಂದ ಇನ್ಯಾರಿಗೂ ತೊಂದರೆ ಆಗದಿರಲಿ ಎಂಬ ನೆಪ ಕಾರಣವಾಗಿ ನನಗೆ ಬಂಧನದ ಸಾಧ್ಯತೆಯೆ ಹೆಚ್ಚು. ನೀವು ಮನುಷ್ಯರು ಆ ರೀತಿ ಪಂಜರದೊಳಗೆ ಅಂದರೆ ಸೆರೆಮನೆಯೊಳಗೆ ಸೇರಿಸಲ್ಪಡುವುದು ಮಹಾಪರಾಧ ಮಾಡಿದರೆ ಮಾತ್ರ. ಹಾಗಾಗಿ ನಾನಿಲ್ಲಿ ನಿನ್ನ ಕೋರಿಕೆಯಂತೆ ಉಳಿದರೆ ಒಂದೋ ಪ್ರಾಣ ಭಯ ಅದಲ್ಲವಾದರೆ ಬಂಧನ. ಅದನ್ನುಳಿದು ಇನ್ನೇನೂ ಆಗದು. ಕೆಟ್ಟ ಹೆಂಡತಿ(/ಗಂಡನಲ್ಲಿ)ಯಲ್ಲಿ ಸುಖವಿಲ್ಲ, ಕೆಟ್ಟ ಮಗನಲ್ಲಿ ಪ್ರೀತಿಯಿಲ್ಲ. ಕೆಟ್ಟ ರಾಜನ ಆಳ್ವಿಕೆಯಲ್ಲಿ ಕ್ಷೇಮವಿಲ್ಲ. ಆದುದರಿಂದ ಇಂತಹ ಸಮಯ ಹೊರಬಂದು ದೂರವಿರುವುದು ವಿಹಿತ ಕಾರ್ಯ. ರಾಜ ಸರಿಯಾಗಿದ್ದರೆ ಮೊದಲು ಆತನ ಮಡದಿ ಮಕ್ಕಳು ಸರಿಯಿರುತ್ತಾರೆ. ಪರಿಣಾಮ ಪ್ರಜೆಗಳಿಗೆ ರಕ್ಷಣೆ ಸಿಗುತ್ತದೆ. ಇದಾಗದೆ ಹೋದರೆ ಆ ಅರಸ ರಾಜಪದವಿಗೆ ಅನರ್ಹನು ಆಗುತ್ತಾನೆ. ಆತ ಕೇವಲ ದುಡಿವ ಪ್ರಜೆಗಳ ಸಂಪಾದನೆಯನ್ನು ಕಪ್ಪದ ರೂಪದಲ್ಲಿ ಕಿತ್ತು ತಿನ್ನುವ ಕಳ್ಳ ಆಗಿಬಿಡುತ್ತಾನೆ. ಇಂತಹ ಸಮಯ ತಿಳುವಳಿಕೆಯುಳ್ಳ ಪ್ರಜೆಗಳು ಆ ಅರಸನನ್ನು ತೊರೆದು ದೂರ ಹೋಗುವುದು ಪ್ರಶಸ್ತವಾಗುತ್ತದೆ. ಹಾಗಾಗಿ ನಾನು ಇನ್ನು ನಿನ್ನ ಬಳಿ ಇರಲಾರೆ” ಎಂದು ಹೇಳಿ ಹಾರಿ ಹೋಯಿತು.

“ಮಗೂ ಧರ್ಮರಾಯಾ! ನೀನು ಚಂದ್ರವಂಶದ ಮಹಾರಾಜ ಆಗಿರುವೆ. ಹೀಗಿರಲು ನಿನಗೆ ಶತ್ರುತ್ವ ಎನ್ನುವುದು ನಿನ್ನ ಪ್ರತಿ ಹೆಜ್ಜೆಯಲ್ಲೂ ಎದುರಾಗಲಿರುವ ಸತ್ಯ. ಆ ಸಮಯ ಶತ್ರುಗಳು ಅತಿ ವಿನಯದಿಂದ ವರ್ತಿಸಿ ನಿನ್ನ ವಿಶ್ವಾಸ ಸಂಪಾದನೆಗೆ ಪ್ರಯತ್ನಿಸುತ್ತಾರೆ. ದೊರೆತ ಅವಕಾಶದಿಂದ ಪ್ರಮತ್ತರಾಗಿ ಭವಿಷ್ಯದಲ್ಲಿ ಸಮಯಸಾಧಿಸಿ ಪ್ರಬಲರಾಗಿ ನಿನಗೆ ಕೇಡು ಉಂಟು ಮಾಡುವ ಪ್ರಯತ್ನ ನಿರತರಾಗುತ್ತಾರೆ. ಹಾಗಾಗಿ ರಾಜನಾದ ನೀನು ನಿನ್ನ ಪ್ರಬಲತ್ವ, ನ್ಯಾಯ ಮಾರ್ಗದ ಅನುಸರಣೆಯ ಜೊತೆ ವಿವೇಕವನ್ನೂ, ದೂರದೃಷ್ಟಿಯನ್ನೂ ಜಾಗೃತವಾಗಿರಿಸಿ ನಿರ್ಧಾರ ಕೈಗೊಳ್ಳಬೇಕು.

ಮಗೂ ಧರ್ಮರಾಯ! ಕಾಲ ಸಾಗುತ್ತಾ ಧರ್ಮ ಕ್ಷೀಣಿಸಿ ರಾಜ್ಯದಲ್ಲಿ ಕಳ್ಳಕಾಕರಿಂದಲೂ, ಶತ್ರುಗಳಿಂದಲೂ ಅರಸರಿಗೆ ಬಹುವಿಧ ಪೀಡನೆ ಉಂಟಾಗುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭ ಎದುರಾದರೆ ಏನು ಮಾಡಬೇಕು ಎಂಬುವುದನ್ನು ಪೂಜ್ಯರಾದ ಮಹರ್ಷಿ ಭಾರದ್ವಾಜರು ಹಿಂದೆ ಶತ್ರುತಂಪನೆಂಬ ಅರಸನಿಗೆ ಬೋಧನೆ ಮಾಡಿದ್ದಾರೆ. ಅದನ್ನು ನಿನಗೆ ತಿಳಿಸುತ್ತೇನೆ ಕೇಳು….

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page