30 C
Udupi
Wednesday, February 18, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 438

ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೪೩೮ ಮಹಾಭಾರತ

ಅಜ್ಜ ಭೀಷ್ಮಾಚಾರ್ಯರರನ್ನು ಕಂಡು, ಅವರ ಚಿಂತಾಜನಕ ಸ್ಥಿತಿ ನೋಡಿ ಮಮ್ಮಲ‌ ಮರುಗಿದನು ಕೌರವ. ಕುಸಿದು ಕುಳಿತು ಪಿತಾಮಹನಿಗೆ ಒದಗಿರುವ ಸಂಕಟವನ್ನು ಸಹಿಸಲಾಗದೆ ಕಣ್ಣೀರ್ಗರೆದನು. ಸುಮಾರು ನಾಲ್ಕು ತಲೆಮಾರುಗಳಿಂದ ಚಂದ್ರವಂಶವನ್ನು ಬೆಳಗಿದ ಮಹಾಶಯರು ಅಜ್ಜ ಭೀಷ್ಮಾಚಾರ್ಯರು. ಕದನಕಲಿಯಾಗಿ ರಣಾಂಗಣ ಪ್ರವೇಶಿಸಿದರೆ ಸೋಲು ಅಂದರೆ ಏನೆಂದು ತಿಳಿಯದ ಅಪರಾಜಿತ ಇಂದು ಸರಳುಗಳನ್ನು ತನ್ನ ತನುವಿಗೆ ಚುಚ್ಚಿಸಿಕೊಂಡು ರಕ್ತ ಇಳಿಸುತ್ತಾ ಮಲಗಿದ್ದಾರೆ. ಮನಕರಗಿತು, ಪಿತಾಮಹರನ್ನು ಕರೆದು “ಅಜ್ಜಾ! ನಿಮ್ಮ ಮೊಮ್ಮಗ ದುರ್ಯೋಧನ ಬಂದಿದ್ದೇನೆ. ಸಕಲ ಸೇನೆ, ಮೈತ್ರಿಯ ರಾಜರು, ನನ್ನ ಸೋದರರೆಲ್ಲರನ್ನು ಕಳಕೊಂಡಾಗಿದೆ. ಮುಂದೇನು ಎಂದು ತೋಚದೆ ಕಂಡ ಕಡೆ ಓಡುತ್ತಾ ನಿಮ್ಮ ಬಳಿ ಬಂದಿದ್ದೇನೆ” ಎಂದನು.

ಭೀಷ್ಮಾಚಾರ್ಯರು ಸ್ವರ ಕೇಳಿಸಿಕೊಂಡು “ದುರ್ಯೋಧನಾ! ಕುರು ಸೇನೆ ಸರ್ವನಾಶವಾದರೂ ಕನಿಷ್ಠ ಪಕ್ಷ ನೀನಾದರು ಬದುಕಿರುವೆಯಲ್ಲಾ.. ನಿನ್ನ ವೃದ್ಧ ಮಾತಾ ಪಿತರನ್ನು ಅನಾಥರನ್ನಾಗಿಸಬೇಡ. ಇಬ್ಬರೂ ಬಾಹ್ಯ ಪ್ರಪಂಚ ಕಾಣಲಾಗದ ಅಸಹಾಯಕರು. ಅವರ ಸೇವೆಗಾಗಿಯಾದರೂ ನೀನು ಜೀವ ಉಳಿಸಿಕೋ. ಅಂದು ನಿನಗೆ ಸಾಕಷ್ಟು ಬುದ್ಧಿ ಮಾತು ಹೇಳಿ ಸಂಧಾನ ಮಾಡಿ ಕೊಳ್ಳುವಂತೆ ಪರಿಪರಿಯಾಗಿ ಬೋಧಿಸಿದರೂ ನೀನು ಒಪ್ಪದೆ ಮಹಾ ಮಾರಣಾಧ್ವರದಂತೆ ಸಾಗಿದ ಈ ಸಂಗ್ರಾಮಕ್ಕೆ ಕಾರಣಕರ್ತನಾದೆ. ಈಗಲೂ ನಿನಗೆ ಹೇಳುವುದಿಷ್ಟೆ, ಧರ್ಮರಾಯ ಧರ್ಮಿಷ್ಟ. ನೀನು ಶರಣಾಗತನಾದರೆ ಸಕಲ ಮರ್ಯಾದೆಗಳನ್ನಿತ್ತು ನಿನ್ನನ್ನು ಸಹೋದರನೆಂದು ಆದರಿಸುತ್ತಾನೆ. ನಿನಗೂ ಅದರಿಂದ ಕ್ಷೇಮ” ಎಂದು ಹಿತನುಡಿಗಳನ್ನಾಡಿದರು.

“ತಾತಾ! ನಾನು ಸಂಧಾನಕ್ಕೆ ಒಪ್ಪುವವನಾದರೆ ಈ ಯುದ್ದಾರಂಭಕ್ಕೆ ಮೊದಲು ಸಿದ್ಧನಾಗುತ್ತಿದ್ದೆ. ಈಗ ನಿಮ್ಮ ಸಹಿತ, ಗುರುದ್ರೋಣರು, ನನ್ನ ಸಹೋದರರು, ಮಿತ್ರ ಕರ್ಣ, ಮೈತ್ರಿ ರಾಜರು, ಅಸಂಖ್ಯ ವೀರರ ಬಲಿದಾನಕ್ಕೆ ನ್ಯಾಯ ಒದಗಿಸುವ ಹೊಣೆ ಹೊತ್ತಿದ್ದೇನೆ. ಅವರೆಲ್ಲರ ಸಮರ್ಪಣೆ ಮರೆತು ನಾನೊಬ್ಬ ಸ್ವಾರ್ಥಿಯಾಗಿ ಬದುಕಲಾರೆ” ಎಂದು ಹೇಳಿ ಮುತ್ತಾತನಲ್ಲಿ ಕ್ಷಮೆ ಮತ್ತು ಆಶೀರ್ವಾದ ಬೇಡಿ ಅಲ್ಲಿಂದ ಹೊರಟನು.

ಹೋಗುತ್ತಾ ಕೌರವ ಹೆದರುವವನೇ? ಛೇ ಹೆದರಲಾರೆ, ಆದರೆ ನನ್ನ ಜೀವ ಒಂದು ಬದುಕುಳಿದರೆ, ಮತ್ತೆ ಪ್ರಬಲನಾಗಿ ನಮಗೆ ಈ ರೀತಿಯ ಸ್ಥಿತಿ ತಂದಿತ್ತ ಆ ಪಾಂಡವರ ಮೇಲೆ ಪ್ರತಿಕಾರ ತೀರಿಸದೆ ಬಿಡಲಾರೆ. ವೀರಮರಣವನ್ನಪ್ಪಿದ ನಮ್ಮವರ ಮನಶಾಂತಿಗಾಗಿ ಆ ಪಾಂಡವರನ್ನು ಕೊಂದು ಧರ್ಮಜನಿಗೆ ಭ್ರಾತೃ ವಿಯೋಗ ಹೇಗಿರುತ್ತದೆ ಎಂದು ಮನವರಿಕೆ ಮಾಡಿಸದೆ ಬಿಡಲಾರೆ. ಹೀಗೆ ತರ್ಕಿಸುತ್ತಾ ತುಸು ದೂರದಲ್ಲಿ ಕಾಣುತ್ತಿದ್ದ ದ್ವೈಪಾಯನ ಸರೋವರವನ್ನು ನೋಡಿದನು. ಸರೋವರದ ಬಳಿ ಬಂದು ಬೆವರಿದ್ದ ತನು, ರಕ್ತ ಮಾಂಸದ ಕೆಸರಲ್ಲಿ ಮುಳುಗೆದ್ದ ತನ್ನ ಶರೀರವನ್ನು ತೊಳೆದುಕೊಂಡು ಬಾಯಾರಿಕೆ ನಿವಾರಿಸಲು ಒಂದಿಷ್ಟು ನೀರನ್ನೂ ಸೇವಿಸಿದನು. ಮುಂದೇನು ಎಂಬಂತೆ ಯೋಚಿಸಿದಾಗ, ತಾನು ಈ ಹಿಂದೆ ಕಲಿತಿದ್ದ ಜಲಸ್ಥಂಭನ ವಿದ್ಯೆ ನೆನಪಾಯಿತು. ಗದಾಧಾರಿಯಾಗಿಯೇ ನೀರಿಗಿಳಿದು ಮಂತ್ರವನ್ನು ಜಪಿಸುತ್ತಾ ಸರೋವರದ ಆಳದಲ್ಲಿ ಮುಳುಗಿ ಕುಳಿತನು. ದುರ್ಯೋಧನನೀಗ ಸರೋವರದ ಜಲದೊಳಗೆ ಮುಳುಗಿ ಕುಳಿತಿದ್ದಾನೆ.

ಇತ್ತ ರಣಾಂಗಣದಲ್ಲಿ ಸೇನಾಬಲವಿಲ್ಲದಿದ್ದರೂ ಸಮರಕ್ಕೆ ವಿರಾಮ ನೀಡದೆ ಹೋರಾಡುತ್ತಿದ್ದ ಕೃತವರ್ಮ, ಕೃಪಾಚಾರ್ಯ, ಅಶ್ವತ್ಥಾಮಾದಿಗಳು ಕೌರವನೆಲ್ಲಿ? ಎಂಬಂತೆ ಪರಸ್ಪರ ಪ್ರಶ್ನಿಸತೊಡಗಿದರು. ಎಲ್ಲೂ ಕಾಣದಾದಾಗ ಅಳಿದುಳಿದ ಸೇನೆಯಿಂದ ಸೈನಿಕನೋರ್ವನನ್ನು ಕರೆದು ಸಂಜಯನಲ್ಲಿ ದುರ್ಯೋಧನ ಏನಾದ ಎಲ್ಲಿ ಹೋದ? ಎಂಬಂತೆ ತಿಳಿದು ಬರಲು ಕಳುಹಿದರು.

ಸಂಜಯನಿಂದ ದುರ್ಯೋಧನನ ಪೂರ್ಣ ವೃತ್ತಾಂತ ತಿಳಿದ ಕೃಪಾಚಾರ್ಯ, ಕೃತವರ್ಮ ಮತ್ತು ಅಶ್ವತ್ಥಾಮದಿಗಳು ದ್ವೈಪಾಯನ ಸರೋವರದ ಬಳಿಗೆ ಧಾವಿಸಿ ಬಂದರು.

“ಹೇ ಕುರುಪತಿಯೇ! ಏನಿದು ನಿನ್ನ ವರ್ತನೆ? ಇನ್ನೂ ಯುದ್ಧ ಪೂರ್ಣವಾಗಿಲ್ಲ. ನಾವು ಒಗ್ಗಟ್ಟಾಗಿ ಯುದ್ಧ ಮಾಡೋಣ. ನೀನು ಅತುಲ ವಿಕ್ರಮಿ. ಯಾಕೆ ಈ ರೀತಿ ಅವಿತು ಕುಳಿತಿರುವೆ? ಅಂದು ನಿನಗೆ ಯುದ್ದವೇ ಬೇಕಾಗಿತ್ತು. ಈಗ ನಿನಗಾಗಿ ಪ್ರಾಣತ್ಯಾಗ ಮಾಡಿದವರನ್ನು ಮರೆತು ಸ್ವಾರ್ಥಿಯಾಗಿ ಅಡಗಿ ಕುಳಿತಿರುವೆ. ನಿನ್ನ ಘನತೆಗಿದು ಶೋಭೆಯಲ್ಲ. ನಾವಿನ್ನೂ ಮೂವರು ಮಹಾರಥಿಗಳಿದ್ದೇವೆ. ಜೀವದ ಹಂಗು ತೊರೆದು ನಿನ್ನ ಜಯಕ್ಕಾಗಿ ಸೆಣಸಲಿದ್ದೇವೆ. ಜಯಿಸಿದರೆ ಮಹಾ ಸಂಭ್ರಮ. ಒಂದೊಮ್ಮೆಗೆ ಸೋತು ಸತ್ತರೂ ಪರಮೋಚ್ಚ ಪದವಿ ವೀರ ಸ್ವರ್ಗ ಪ್ರಾಪ್ತವಾಗಲಿದೆ.” ಎಂದು ಹೇಳುತ್ತಾ ಯುದ್ದಕ್ಕಾಗಿ ಉತ್ತೇಜನ ನೀಡಿ ಪ್ರೋತ್ಸಾಹಿಸಿದರು.

ಆದರೆ ನೀರೊಳಗಿದ್ದ ಕೌರವನು “…..

ಮುಂದುವರಿಯುವುದು…

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page