30.1 C
Udupi
Tuesday, February 17, 2026
spot_img
spot_img
HomeBlogಮಹಾಭಾರತ

ಮಹಾಭಾರತ

spot_imgspot_img

ಭಾಗ – 437

ಭರತೇಶ ಶೆಟ್ಟಿ ,ಎಕ್ಕಾರ್

ಸಂಚಿಕೆ ೪೩೭ ಮಹಾಭಾರತ

ದುರ್ಯೋಧನನ ಸ್ಥಿತಿ ಈಗ ಹೇಳತೀರದು. ಮಿತ್ರ ಕರ್ಣ, ದುಶ್ಯಾಸನ ಸಹಿತ ತೊಬ್ಬತ್ತೆಂಟು ಮಂದಿ ಸೋದರರು, ಜಯದ್ರಥ, ಮಾವ ಶಕುನಿ, ಬೆಂಬಲಿತ ರಾಜರು ಎಲ್ಲ ಸೇರಿ ಹನ್ನೊಂದು ಅಕ್ಷೋಹಿಣಿ ಸೇನಾಬಲವೂ ಈ ಹೊತ್ತು ಸರ್ವನಾಶವಾಗಿದೆ. ರೈತನೋರ್ವ ತನ್ನ ಕೃಷಿ ಭೂಮಿಯ ಕಾರ್ಯಾರಂಭ ಮೊದಲು ಸುತ್ತ ಮುತ್ತಲಿನ ಗಿಡಗಂಟಿಗಳನ್ನೆಲ್ಲಾ ಕಡಿದು ರಾಶಿ ಹಾಕಿ, ಗದ್ದೆಯೊಳಗಿರುವ ಎಲ್ಲ ನಿರುಪಯುಕ್ತ ವಸ್ತುಗಳನ್ನೂ ಸೇರಿಸಿ ಅಗ್ನಿಸ್ಪರ್ಶ ಮಾಡಿ ಸ್ವಚ್ಚಗೊಳಿಸುತ್ತಾನೆ. ಅಂತೆಯೆ ದುರ್ಯೋಧನ ಆರ್ಯಾವರ್ತ ಎಂಬ ಕ್ಷೇತ್ರದ ಸಮಸ್ತ ಕ್ಷಾತ್ರ ವೀರರನ್ನು, ಅಸುರ, ಮ್ಲೇಚ್ಚ, ಚಾಂಡಾಲ, ವೃಷ್ಣಿ ಹೀಗೆ ಎಲ್ಲಾ ವರ್ಗಗಳನ್ನೂ ಏಕತ್ರಗೊಳಿಸಿ ಒಂದೆಡೆ ರಾಶಿ ಹಾಕಿ ಸರ್ವನಾಶಕ್ಕೆ ಸುಸೂತ್ರಗೊಳಿಸುವ ಕಾರ್ಯವನ್ನು ದುರ್ಯೋಧನ ಮಾಡಿದಂತಾಗಿದೆ. ಈಗ ಕೌರವನ ಬಳಿ ಉಳಿದಿರುವುದು ಬೆರಳೆಣಿಕೆಯ ಬಳಗ. ಭ್ರಮನಿರಸನಕ್ಕೊಳಗಾಗಿ ಏನು ಮಾಡುವುದೆಂದು ತೋಚದೆ ಕಂಗೆಟ್ಟಿದ್ದಾನೆ. ಕೃಪ, ಅಶ್ವತ್ಥಾಮ, ಕೃತವರ್ಮ ಮತ್ತು ನಾಲ್ಕು ಸೈನಿಕರು ಮಾತ್ರ ಉಳಿದಿದ್ದಾರೆ. ದುರ್ಯೋಧನನ ದುಸ್ಥಿತಿ ಯಾವ ಮಟ್ಟಕ್ಕೆ ಜಾರಿದೆ ಎಂದರೆ ಕುದುರೆ, ಆನೆಗಳಾಗಲಿ, ತನಗೆ ರಥವಾಗಲಿ ಯಾವುದೂ ಉಳಿದಿಲ್ಲ. ಹೆಚ್ಚೇಕೆ ಆತನ ಕೈಯಲ್ಲಿ ಗದೆಯೊಂದನ್ನು ಬಿಟ್ಟರೆ ಬೇರೆ ಆಯುಧಗಳೂ ಇಲ್ಲ. ಪರಿಚಾರಕರು, ಅಂಗರಕ್ಷಕರು, ಸೇವಕರು ಯಾರೂ ಇಲ್ಲದ ಹೀನಾಯ ಸ್ಥಿತಿ. ಅಗ್ನಿಗಾಹುತಿಯಾಗಿ ಸುಟ್ಟು ಕರಕಲಾದ ಗುಡ್ಡದಲ್ಲಿ ಅಲ್ಲಲ್ಲಿ ಅರೆಸುಟ್ಟು ಉಳಿದ ನಾಲ್ಕಾರು ಮರಗಳಂತಾಗಿದೆ ಇವರ ಸ್ಥಿತಿಗತಿ. ಈ ಕಡೆ ಹೀಗಿರಲು ಅತ್ತ ಕಡೆ ಭೀಮಗರ್ಜನೆ, ಅರ್ಜುನನ ಗಾಂಭೀರ್ಯ, ಸಾತ್ಯಕಿಯ ಪೌರುಷ, ದೃಷ್ಟದ್ಯುಮ್ನನ ಪರಾಕ್ರಮ, ಪಾಂಡವರ ವಿಕ್ರಮ, ಸೇನಾಬಲದ ಸಾಂಘಿಕ ಹೋರಾಟದ ಕಿಚ್ಚು ಕಾಣುವಾಗ ಸಮಗ್ರವಾಗಿ ವೈರಿಪಾಳಯದ ಅಟ್ಟಹಾಸ ಕೌರವನ ಎದೆಯಲ್ಲಿ ರೌರವ ನಡುಕ ಹುಟ್ಟಿಸುತ್ತಿದೆ. ಛಲದಂಕ ಮಲ್ಲ ನಿಶ್ಚಲನಾಗಿದ್ದಾನೆ. ಸಂಜೆಯ ಹೊತ್ತು ನಡು ವಾಲಿದೆ, ಸೂರ್ಯನೂ ಅತ್ತ ಪಾಂಡವ ಪಕ್ಷದ ಪರವಹಿಸಿದಂತೆ ಪಶ್ಚಿಮ ದಿಕ್ಕಿನತ್ತ ಸಾಗುತ್ತಿದ್ದಾನೆ. ಏನು ಮಾಡುವುದೆಂದು ತೋಚದಾದ ದುರ್ಯೋಧನ ಪೂರ್ವಾಭಿಮುಖವಾಗಿ ಓಡತೊಡಗಿದನು.

ಪಾಂಡವರು ದುರ್ಯೋಧನನಿಂದ ಪ್ರತಿರೋಧ ಮತ್ತು ಯುದ್ದಾಹ್ವಾನ ನಿರೀಕ್ಷಿದ್ದರು. ಅನಿರೀಕ್ಷಿತವಾಗಿ ಆತ ಓಡತೊಡಗಿದಾಗ ಆಶ್ಚರ್ಯವಾಗುತ್ತಿದೆ.

ಕೌರವನ ಓಟ ಯಾವ ಮಟ್ಟಕ್ಕೆ ಭಯಭೀತಗೊಂಡಿದೆ ಎಂದರೆ ಸತ್ತು ಬಿದ್ದ ಕುದುರೆ, ಆನೆಗಳನ್ನು ದಾಟಿ ಹಾರಿ ಬಿದ್ದು ಎದ್ದು ಕ್ರಮಿಸುತ್ತಿದ್ದಾನೆ. ವಿರುದ್ದ ದಿಕ್ಕು ಪೂರ್ವಾಭಿಮುಖವಾಗಿ ಸಾಗುವ ಆ ಓಟದಲ್ಲಿ ಬಿದ್ದು ಏಳುವ ಸಮಯ ಸತ್ತು ಬಿದ್ದ ಹೆಣಗಳನ್ನು ಕಂಡೋ, ಇಲ್ಲ ಆ ಹೆಣವೂ ಎದ್ದು ತನಗೆ ಹೊಡೆಯುತ್ತದೆ ಎಂಬಂತೆಯೋ ಹೆದರಿ ಕಿರುಚುತ್ತಾ, ಕಿರುಚಿದರೆ ಪಾಂಡವರಿಗೆ ಕೇಳುತ್ತದೆ ಎಂದು ತಕ್ಷಣ ಬಾಯಿ ಮುಚ್ಚುತ್ತಾ ಓಡುತ್ತಿದ್ದಾನೆ. ಎದೆ ಬಡಿತ, ಕಾಲುಗಳ ವೇಗಕ್ಕಿಂತ ಇಮ್ಮಡಿಯಾಗಿದೆ. ರಕ್ತ ಮಾಂಸಗಳು ಕೆಸರಾಗಿ ಹರಿದು ಕದಡಿ ಆದ ಹೊಂಡಗಳಲ್ಲಿ ಜಾರಿ ಬಿದ್ದು, ಮುಳುಗೇಳುತ್ತಾ ಕೌರವ ಓಡುತ್ತಾ ಇದ್ದಾನೆ. ಪ್ರಾಣ ಭಯದ ಮೌಲ್ಯ ಅವನಿಗೀಗ ಆಗುತ್ತಿದೆ. ರಣಹದ್ದುಗಳು, ತೋಳ ನರಿಗಳು ಬಂದು ಸತ್ತು ಬಿದ್ದ ಹೆಣಗಳನ್ನು ಕಿತ್ತು ತಿನ್ನುವಾಗಿನ ಭೀಕರ ದೃಶ್ಯ ಮತ್ತಷ್ಟು ಭಯ ಹೆಚ್ಚಿಸುತ್ತಿದೆ. ಅವುಗಳನ್ನು ಕಂಡಾಗ ತನ್ನವರನ್ನು ಕುಕ್ಕಿ, ಕಿತ್ತು ಹರಿದು ತಿನ್ನದಂತೆ ಮಾಡಲು ಗದೆ ಬೀಸಿ ಓಡಿಸಿದರೂ ಅವು ಮತ್ತೆ ತಿರು ತಿರುಗಿ ಬಂದು ಮತ್ತೆ ಮೊದಲ ಕಾರ್ಯದಲ್ಲಿ ನಿರತವಾಗುತ್ತಿವೆ. ಸಾಗುತ್ತಿರಬೇಕಾದರೆ ಛಿದ್ರವಾದ ದುಶ್ಯಾಸನನ ಕಳೇಬರ, ರುಂಡ ಮುಂಡ ಪ್ರತ್ಯೇಕವಾದ ಕರ್ಣ, ಸತ್ತು ಬಿದ್ದಿರುವ ವೀರ ಅಭಿಮನ್ಯು, ಪಕ್ಕದಲ್ಲಿ ಪುತ್ರ ಲಕ್ಷಣಕುಮಾರ, ರಾಶಿ ರಾಶಿಯಾಗಿ ಬಿದ್ದ ಅರೆಕೊಳೆತ ಮುದ್ದಿನ ಸೋದರರ ಹೆಣ, ಮುರಿದ ರಥದ ಪಕ್ಕದಲ್ಲಿ ಗುರು ದ್ರೋಣರ ಕಾಯ, ಮಿತ್ರ ರಾಜರು, ಕೈ ಕಾಲು ಕತ್ತರಿಸಲ್ಪಟ್ಟು ಹತ ಪ್ರಾಣರಾದ ಸೈನಿಕರು ಅಯ್ಯೋ ಇದನ್ನೆಲ್ಲಾ ನೋಡುತ್ತಾ ಕೊರಗಿ ಮರುಗಿ ಬೊಬ್ಬಿರಿದು ಅಳ ತೊಡಗಿದನು. ತನ್ನವರ ಹೆಣಗಳ ಪಕ್ಕ ಒಮ್ಮೆ ಬಿಗಿದಪ್ಪಿ ಅಳುತ್ತಾ, ಮಂಡಿಯೂರಿ ಕುಳಿತನಾದರೂ… ಎಲ್ಲಿ ಪಾಂಡವರು ಬೆನ್ನಟ್ಟಿ ಬರುವರೊ ಎಂದು ಮತ್ತೆ ಎದ್ದು ಸಾಗುತ್ತಿದ್ದಾನೆ. ಹದಿನೇಳು ದಿನಗಳ ಹಿಂದೆ ಕಿಕ್ಕಿರಿದು ತುಂಬಿದ್ದ ಸೇನೆ ಇಂದಿಗೆ ಆಗುವಾಗ ಹೆಣಗಳ ರಾಶಿಯಾಗಿ ಕೊಳೆತು ನಾರುತ್ತಿದೆ. ಕರಾಳ ವಿಕರಾಳ ಪಿಶಾಚಿಗಳು ಬಿಸಿ ರಕ್ತ ಹೀರಲು ತನ್ನನ್ನು ಹಿಡಿಯಲು ಬರುತ್ತಿವೆ, ರಣಹದ್ದುಗಳಿಗೆ ಕೊಳೆತ ಮಾಂಸ ಹಿಡಿಸದೆ ತನ್ನ ಹಸಿ ಮಾಂಸ ಕುಕ್ಕಲು ಬಂದು ತಲೆಯೇರಿ ಕುಳಿತು ಉಗುರಿನಿಂದ ಪರಚಿ ಹಾರುತ್ತಿವೆ. ಈ ಓಟದ ಮಧ್ಯೆ ಹೆಣಗಳನ್ನು ಅರಸುತ್ತಾ ತನ್ನವರ ಅಂತಿಮ ದರುಶನ ಮಾಡತೊಡಗಿ ದಿಕ್ಕು ದಾರಿ ತಪ್ಪಿ ರಣಾಂಗಣಕ್ಕೆ ಒಂದು ಸುತ್ತು ಹೊಡೆದನು. ಮತ್ತೆ ಗೋಳಾಡಿ ಅಳುತ್ತಾ ಸಾವರಿಸಿಕೊಂಡು ಪೂರ್ವಾಭಿಮುಖವಾಗಿ ಓಡತೊಡಗಿದನು. ತನಗಾಗಿ ಹೋರಾಡಿ ಕೀರ್ತಿಕಾಯರಾದ ವೀರರಿಗೆ ಕೃತಜ್ಞತಾ ಭಾವದಿಂದ ನಮಿಸುತ್ತಾ, ನಿಮ್ಮ ಈ ಸ್ಥಿತಿಗೆ ನಾನು ಕಾರಣ ಎಂದು ಪರಿತಪಿಸತೊಡಗಿದ್ದಾನೆ. ಮತ್ತೆ ಪಾಂಡವರ ಬಗ್ಗೆ ಅಮಿತ ಮತ್ಸರ, ಕ್ರೋಧ ಆವರಿಸತೊಡಗಿತು. ತನ್ನ ಅಸಹಾಯಕ ಸ್ಥಿತಿಗೆ ಮರುಗುತ್ತಾ ಆಚಾರ್ಯ ಭೀಷ್ಮರು ಶರಶಯ್ಯೆಗೊರಗಿರುವತ್ತಾ ಓಡಿ ಬಂದನು.

ಮುಂದುವರಿಯುವುದು…

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page