ಭಾಗ – 434
ಭರತೇಶ ಶೆಟ್ಟಿ,ಎಕ್ಕಾರ್

ಸಂಚಿಕೆ ೪೩೪ ಮಹಾಭಾರತ
ಇತ್ತ ಗಾಂಧಾರ ನರೇಶ ಶಕುನಿ ಸೇನಾ ಸಹಿತನಾಗಿ ನಕುಲ ಸಹದೇವರಿಬ್ಬರನ್ನೂ ಎದುರಿಸಿ ಹೋರಾಡುತ್ತಿದ್ದಾನೆ. ಘನಘೋರ ಸಂಗ್ರಾಮ ಸಾಗುತ್ತಿದೆ. ಮತ್ತೊಂದೆಡೆ ಭೀಮ ರಣಭಯಂಕರನಾಗಿ ಪ್ರಳಯ ಕಾಲದ ರುದ್ರನಂತೆ ತನಗೆದುರಾದವರನ್ನು ಸಂಹರಿಸುತ್ತಾ ಸಾಗುತ್ತಿದ್ದಾನೆ.
ಇದೇ ಸಮಯ ಮಾದ್ರಾದೇಶದ ಏಳು ನೂರು ಮಹಾರಥಿಗಳು ಒಂದೆಡೆ ಒಗ್ಗಟ್ಟಾಗಿ ಸಮಾಲೋಚಿಸಿ ತಮ್ಮ ದೊರೆ ಶಲ್ಯ ಭೂಪತಿಯ ವಧೆಗೆ ಪ್ರತಿಕಾರ ತೀರಿಸಲು ಕಟಿ ಬದ್ದರಾಗಿದ್ದಾರೆ. ಶಲ್ಯಾನುಜನೂ ಮಹಾ ಪ್ರತಾಪಿ. ಧರ್ಮರಾಯನನ್ನು ಹುಡುಕುತ್ತಾ ಆತ ರಣಾಂಗಣದಲ್ಲಿ ಸಂಚರಿಸಿ ತುಡುಕಿದನು. ಧರ್ಮಜನ ಜೊತೆ ಕೆಲಹೊತ್ತು ಉಗ್ರ ಹೋರಾಟ ನೀಡಿದನಾದರೂ ಆತನೂ ಯುಧಿಷ್ಠಿರನ ಕೈಯಿಂದ ಮರಣ ಹೊಂದಿದನು. ಮತ್ತಷ್ಟು ಕ್ರೋಧಾವೇಶಕ್ಕೊಳಗಾದ ಏಳ್ನೂರು ಮಂದಿ ಮಹಾರಥಿಗಳು, ಕೌರವ ಪಕ್ಷ ತೊರೆದು, ವೈಯಕ್ತಿಕ ದ್ವೇಷ ಸಾಧನೆಗಾಗಿ ಮನಮಾಡಿದರು. ವ್ಯೂಹವಾಗಿ ರಚನೆಗೊಂಡು ಧರ್ಮರಾಯನ ಮೇಲೆ ಮುಗಿಬೀಳಲು ಸಿದ್ದರಾದರು. ಅವರ ಉದ್ದೇಶ ಅರಿತ ದುರ್ಯೋಧನ
“ನ ಗಂತವ್ಯಂ – ನ ಗಂತವ್ಯಂ” ಎಂದು ಕೂಗಿ ಹೇಳಿ “ಹೋಗ ಬೇಡಿ – ಹೋಗಬೇಡಿರಿ” ಎಂದು ತಡೆದರೂ, ಆತನ ಮಾತಿಗೆ ಬೆಲೆ ನೀಡದೆ ಆಕ್ರಮಣಶೀಲರಾಗಿ ಮುನ್ನುಗ್ಗಿದರು. ಮದ್ರರಾಜನ ಹತ್ಯೆಗೆ ಪ್ರತಿಯಾಗಿ ಧರ್ಮರಾಯನನ್ನು ಕೊಂದು ಶಲ್ಯನಿಗೆ ಮನಶಾಂತಿ ಕರುಣಿಸುವ ಯೋಜನೆ ಅವರದ್ದಾಗಿತ್ತು. ದುರ್ಯೋಧನ ಮತ್ತೆ ಅವರೆಲ್ಲರಿಗೂ ಅಡ್ಡಲಾಗಿ ರಥ ನಡೆಸಿ ತಡೆದು ನಿಲ್ಲಿಸಿ “ವೀರರೇ! ಇನ್ನು ನಾವು ಕೇಂದ್ರೀಕೃತರಾಗಿ ಒಗ್ಗಟ್ಟಾದ ಕೌರವ ಸೇನೆಯಾಗಿ ಪಾಂಡವರ ಮೇಲೆ ಪ್ರಹರಿಸುವುದೆಂದು ನಿರ್ಣಯಿಸಿದ್ದೇವೆ. ನೀವು ಅದಕ್ಕೊಪ್ಪಿ ವಚನ ನೀಡಿದ್ದೀರಿ. ಈಗ ನೀವು ವಿಭಾಜಿಸಲ್ಪಟ್ಟು ಬೇರೆಯಾಗಿ ಹೋಗಿ ಪಾಂಡವರನ್ನು ಕೆಣಕಿದರೆ ಪರಿಣಾಮ ಕಠೋರವಾದೀತು. ಸುಲಭವಾಗಿ ನಿಮ್ಮೆಲ್ಲರ ವಧೆಗೈಯಲು ಅವಕಾಶ ನೀಡಿದಂತಾದೀತು. ದಯವಿಟ್ಟು ಹಾಗೆ ಮಾಡದಿರಿ” ಎಂದು ಏರು ಧ್ವನಿಯಲ್ಲಿ ವಿನಂತಿಯ ಜೊತೆ – ಎಚ್ಚರಿಕೆಯನ್ನು ನೀಡಿದನು.
ಆಗ ಈ ಬೆಳವಣಿಗೆಯನ್ನು ಗಮನಿಸುತ್ತಿದ್ದ ಶಕುನಿ, ತನ್ನ ದೇಶದ ಮಹಾರಥಿಗಳನ್ನು ಮುಂದಕ್ಕೆ ಬರಿಸಿಕೊಂಡು ಅಶ್ವಿನಿಕುಮಾರಾದ ನಕುಲ ಸಹದೇವರಿಗೆ ಎದುರಾಗಿಸಿದನು. ತಾನು ನುಸುಳಿ ಹಿಂದಕ್ಕೆ ಸರಿದು ದುರ್ಯೋಧನನಿರುವಲ್ಲಿಗೆ ರಥ ನಡೆಸಿದನು. “ಹೇ ಪುತ್ರಾ! ಸಾವಧಾನಿಸು. ನಿನ್ನ ಮಾತು ಕೇಳುತ್ತಿಲ್ಲವೆಂದು ಮಾದ್ರ ಸೇನೆಯ ಮೇಲೆ ಕೋಪಗೊಳ್ಳಬೇಡ. ಯುದ್ದ ಸಮಯದಲ್ಲಿ ಕ್ರೋಧಾಭಿಭೂತರಾದ ವೀರರು ಸಾಮಾನ್ಯವಾಗಿ ಒಡೆಯನ ಆಜ್ಞೆಯನ್ನು ಪರಿಪಾಲಿಸುವುದಿಲ್ಲ. ಆದುದರಿಂದ ಮಾದ್ರ ದೇಶದ ಮಹಾರಥಿಗಳ ಮೇಲೆ ಕುಪಿತನಾಗಬೇಡ. ಮಹಾಧನುಷ್ಮಂತರಾದ ಏಳ್ನೂರು ಮಂದಿ ರಥಿಕರು ಪರಾಕ್ರಮಿಗಳು ಹೌದಾದರೂ ಪಾಂಡವರನ್ನು ಗೆಲ್ಲಲಾರರು. ಹಾಗಾಗಿ ಅವರು ನಮ್ಮ ಮಾತು ಕೇಳದಿದ್ದರೂ, ಹೋರಾಡುತ್ತಿರುವುದು ನಮ್ಮ ಶತ್ರುಗಳ ವಿರುದ್ಧ. ಹೀಗಿರುವಾಗ ನಮ್ಮ ಯೋಜನೆ ಬದಲಾಯಿಸುವುದು ಸೂಕ್ತ. ಅಂದರೆ ನಮ್ಮನ್ನು ತೊರೆದು ಬಂದಿರುವ ಮಾದ್ರಸೇನೆಯನ್ನು ಬಲಪಡಿಸೋಣ. ನಮ್ಮ ಪಕ್ಷದ ರಥಿಕರು, ಗಜಾಶ್ವ ಪಡೆ ಮಾದ್ರದೇಶದ ಬೆಂಗಾವಲಿಗೆ ಬರುವಂತೆ ಆದೇಶ ನೀಡು. ಹೀಗೆ ಮಾಡಿದರೆ ಪ್ರಾಬಲ್ಯತೆ ಪಡೆದ ಮಾದ್ರಾ ದೇಶದ ರಥಿಕರು ಜಯ ಸಾಧಿಸಲು ಅವಕಾಶ ನೀಡಿದಂತಾಗುತ್ತದೆ. ಅವರ ರಕ್ಷಣೆಗೂ ಪೂರಕವಾಗುತ್ತದೆ.” ಎಂದನು. ತಕ್ಷಣ ತಿರುಗಿ ಗಾಂಧಾರದ ಸೇನೆಯ ರಕ್ಷಣೆಗಾಗಿ ಅತ್ತ ಧಾವಿಸಿದನು.
ಶಕುನಿಯ ರಣತಂತ್ರ ದುರ್ಯೋಧನನಿಗೂ ಒಪ್ಪಿಗೆಯಾಯಿತು. ದುರ್ಯೋಧನನು ವಿಶಾಲವಾಗಿ ಹರಡಿರುವ ತನ್ನ ಸೇನೆಯನ್ನು ಒಗ್ಗೂಡಿಸಿ ಸಿಂಹನಾದ ಮಾಡುತ್ತಾ ಮಾದ್ರದೇಶದ ರಥಿಕರ ಬೆಂಗಾವಲಿಗರಾದರು. ಆಕ್ರಮಣಕ್ಕೆ ಆದೇಶ ನೀಡುತ್ತಾ, ಕೊಲ್ಲಿರಿ, ಛೇದಿಸಿ, ಕತ್ತರಿಸಿ, ಪ್ರಹರಿಸಿ ಎಂಬಂತೆ ಘರ್ಜಿಸುತ್ತಾ ಯುದ್ದ ಸಾಗತೊಡಗಿತು.
ಹೀಗಾಗುತ್ತಿರಲು ಎಲ್ಲಿದ್ದನೋ ರುದ್ರಭೀಮ! ಬಂದವನು ಬಾಳೆತೋಟ ಹೊಕ್ಕ ಮದಗಜದಂತೆ ವ್ಯೂಹ ಭೇದಿಸಿ ಒಳಹೊಕ್ಕನು.
ಮುಂದುವರಿಯುವುದು…



















