ಭಾಗ – 425
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೪೨೫ ಮಹಾಭಾರತ
“ಹೇ ಕರ್ಣಾ! ನೀನು ಹಗಲುಗನಸು ಕಾಣುತ್ತಿರುವೆ. ಒದಗಿ ಬಂದ ಅವಕಾಶ ನಿನ್ನ ಕೈಯಲ್ಲಿ ಇರುವಾಗ, ನಿನಗೆ ಸಾಕಷ್ಟು ತಿಳಿ ಹೇಳಿದೆ. ಆದರೆ ತಿದ್ದಿಕೊಳ್ಳುವ ಗುಣ ಇಲ್ಲದ ನೀನು ಈಗ ಅರ್ಜುನನನ್ನು ಕೊಲ್ಲುವೆ ಎಂಬ ಮೂರ್ಖತನದ ಮಾತು ಆಡುತ್ತಿರುವೆ. ಸರ್ವ ಸಮರ್ಥನಾದ ಪಾರ್ಥನನ್ನು ವಧಿಸುವುದು ನೀನಂದುಕೊಂಡಷ್ಟು ಸುಲಭ ಸಾಧ್ಯವಾದ ವಿಚಾರವಲ್ಲ. ನಾನು ಮೊದಲೆ ನಿನಗೆ ತಿಳಿಸಿರುವೆ, ನಿನ್ನ ಎದುರಾಳಿ ಅರ್ಜುನ ಕೃಷ್ಣನ ಒಂದು ಮಾತನ್ನೂ ಮೀರಿ ವ್ಯವಹರಿಸುವುದಿಲ್ಲ. ಹಾಗೆಯೆ ನೀನೂ ನನ್ನ ಆಜ್ಞಾನುವರ್ತಿಯಾಗಿ ಇರುವಲ್ಲಿವರೆಗೆ ನಿನಗೆ ಪೂರ್ಣ ಸಹಕಾರಿಯಾಗಿರುತ್ತೇನೆ. ಈಗ ನೀನು ಅಂತಹ ನಿಬಂಧನೆಯನ್ನು ಧಿಕ್ಕರಿಸಿ ನಿನ್ನದ್ದಾದ ಸ್ವಂತ ಬುದ್ಧಿಯನುಸಾರ ಮುಂದುವರಿದು ನನ್ನ ಅಭಿಪ್ರಾಯ ತಿರಸ್ಕರಿಸಿ ಅಪಮಾನಿಸಿರುವೆ. ಇನ್ನು ನನ್ನಿಂದಲೂ ಅಂತಹ ತಿರಸ್ಕಾರಗಳು ನಿನಗೆ ಪ್ರಾಪ್ತವಾಗಲಿದೆ.” ಎಂದು ಶಲ್ಯ ಕ್ರೋಧದಿಂದ ನುಡಿದನು.
ಅರ್ಜುನ ಸಮರ ಸನ್ನದ್ಧನಾಗಿ ಕರ್ಣನ ಮೇಲೆ ಪ್ರಹಾರ ಮಾಡಲು ಶರಸಂಧಾನ ಮಾಡಿದನು. ಕರ್ಣನೂ ಪ್ರತಿ ಪ್ರಹಾರಕ್ಕೆ ಮಹಾಸ್ತ್ರ ಹೂಡಿ ಅಭಿಮಂತ್ರಿಸಲು ತೊಡಗಿದನು. ಕರ್ಣನಿಗೆ ಮಂತ್ರಾಸ್ತ್ರ ಪ್ರಯೋಗ ವಿಧಾನವೆ ಸ್ಮರಣೆಗೆ ಬರುತ್ತಿಲ್ಲ. ತೀರಾ ಖಿನ್ನತೆಗೊಳಗಾಗಿ ಮತ್ತೆ ಮತ್ತೆ ಪ್ರಯತ್ನಿಸಿದರೂ ಮಹಾಸ್ತ್ರ ಸಂಧಾನ ಮಾಡಲು ವಿಫಲನಾಗುತ್ತಿದ್ದಾನೆ. ಕರ್ಣನ ತೇಜಸ್ಸು ಭಂಗಗೊಂಡಿದೆ. ಗುರುಶಾಪದಂತೆ ಅಗತ್ಯ ಕಾಲದಲ್ಲೀಗ ಕಲಿತ ವಿದ್ಯೆ ವಿಸ್ಮರಣೆಯಾಗಿದೆ. ವಿದ್ಯಾರ್ಥಿಯಾಗಿ ಭಾರ್ಗವರ ಆಶ್ರಮದಲ್ಲಿ ತಾನು ಬ್ರಾಹ್ಮಣ ಎಂಬ ಮಿಥ್ಯವನ್ನಾಡಿ ಶಿಷ್ಯತ್ವ ಪಡೆದಿದ್ದ. ಅಲರ್ಕ ಎಂಬ ಬಲಿಷ್ಟ ಕೀಟ ತೊಡೆ ಕೊರೆದು ರಕ್ತ ಧಾರೆಯಾಗಿ ಇಳಿದು ಹರಿದ ಕ್ಷಣ, ಕರ್ಣನ ತೊಡೆಯನ್ನಾಶ್ರಯಿಸಿ ಮಲಗಿದ್ದ ಪರಶುರಾಮರಿಗೆ ರಕ್ತ ಸೋಕಿದೊಡನೆ ಈತ ಕ್ಷತ್ರಿಯ ಎಂಬ ಸತ್ಯ ತಿಳಿದು “ಹೇ ಮೋಸಗಾರನೇ! ಕಪಟಮಾರ್ಗದಿಂದ ನನ್ನ ಬಳಿ ಬಂದು ಕಲಿತ ವಿದ್ಯೆ ನಿನ್ನ ಜೀವನದ ಉಚ್ಛ್ರಾಯ ಮತ್ತು ಅತ್ಯಗತ್ಯ ಕಾಲದಲ್ಲಿ ಮರೆತು ಹೋಗಲಿ” ಎಂದು ಶಪಿಸಿದ್ದರು. ಆ ದಿನದ ಶಾಪ ಇಂದು ಪ್ರಕಟಗೊಂಡಿದೆ. ಹೀಗಿರಲು ಕುದುರೆಗಳು ಒಂದೆರಡಡಿ ಚಲಿಸಿದಾಗ ರಥದ ಎಡಭಾಗದ ಚಕ್ರ ರಣಾಂಗಣದಲ್ಲಿ ಹರಿದ ರಕ್ತದಿಂದಾದ ಕೆಸರಲ್ಲಿ ಹೂತು ಹೋಯಿತು. ಕುದುರೆಗಳು ಸರ್ವ ತ್ರಾಣದಿಂದ ಶ್ರಮಿಸಿದರೂ ರಥ ಮೇಲೆ ಬರಲಿಲ್ಲ. ಕರ್ಣನಿಂದಾದ ಗೋ ಹತ್ಯಾ ದೋಷಕ್ಕಾಗಿ ‘ವಿಜಯ’ ಎಂಬ ಬ್ರಾಹ್ಮಣನಿತ್ತ ಶಾಪವೂ ಈ ಸಮಯ ಊರ್ಜಿತಗೊಂಡಿದೆ. ಕರ್ಣನಿಗೆ ಮೇಲಿಂದ ಮೇಲೆ ಆಘಾತಗಳು – ವಿದ್ಯೆ ಮರೆತಿದೆ, ಸಾರಥಿ ಸಹಕರಿಸುತ್ತಿಲ್ಲ, ದಿವ್ಯ ಸರ್ಪಾಸ್ತ್ರವೂ ವ್ಯರ್ಥಗೊಂಡಿದೆ – ಈಗ ರಥ ಚಕ್ರವೂ ಹೂತು ಹೋಗಿದೆ.
ಈಗ ಕರ್ಣನ ಮನಸ್ಥಿತಿ ಬದಲಾಗಿದೆಯೋ ಇಲ್ಲವೋ! ಆದರೂ ತಾನಾಡುವ ಮಾತನ್ನು ಮೃದುಗೊಳಿಸಿದ. ವಾಸ್ತವವನ್ನು ವಿಮರ್ಷೆ ಮಾಡುತ್ತಾ, ತನ್ನ ಸ್ಥಿತಿಯನ್ನು ತರ್ಕಿಸಿ, ಹಿಂದೆ ಆಚಾರ್ಯ ಭೀಷ್ಮ, ಗುರು ದ್ರೋಣರಂತೆ ತಾನೂ ಈ ರಣಾಂಗಣದಲ್ಲಿ ಧರಾಶಾಯಿಯಾಗುವುದು ನಿಸ್ಸಂಶಯ ಎಂಬ ವಿಚಾರ ಮನದಲ್ಲಿ ಮೂಡಿತು. ಆದರೂ ಅರ್ಜುನನಿಗೆ ಸಮಾನನಾಗಿ ಉಸಿರುವವರೆಗೆ ಹೋರಾಡಬೇಕೆಂಬ ಆಸೆ ಉತ್ಪನ್ನವಾಯಿತು. ಆ ವಿಧಾನದಿಂದಲಾದರೂ ಪರಾಕ್ರಮಿ ಎಂಬ ಖ್ಯಾತಿ ನನಗೊದಗಲಿ ಎಂಬ ಆಶಯ ಕರ್ಣನದ್ದಾಗಿದೆ. ಅದಕ್ಕಾಗಿ ಕರ್ಣ ಅರ್ಜುನನ್ನು ಶ್ಲಾಘಿಸುತ್ತಾ “ಹೇ ಅರ್ಜುನಾ! ನೀನು ಸತ್ಕುಲ ಪ್ರಸೂತ, ಉತ್ತಮ ಗುರುಗಳಿಂದ ಶಿಕ್ಷಣ ಪಡೆದಿರುವೆ. ದೇವಾನುದೇವತೆಗಳಿಂದ ಅನುಗ್ರಹಿತನೂ ಆಗಿರುವೆ. ಶಸ್ತ್ರ – ಶಾಸ್ತ್ರ ಪ್ರವೀಣನಾದ ನೀನು ಉತ್ತಮನೇ ಆಗಿರುವೆ. ಈ ಸಮಯ ನನ್ನ ರಥಚಕ್ರ ಹೂತು ಹೋಗಿರುವ ಕಾರಣ ನಾನು ಅಸಹಾಯಕನಾಗಿರುವೆ. ನಾನೇ ಇಳಿದು ರಥವನ್ನು ಮೇಲೆತ್ತಿ ಸುಸ್ಥಿತಿಗೆ ತರುವವರೆಗೆ ನನಗೆ ಅವಕಾಶ ನೀಡಬೇಕು. ಅದಕ್ಕಾಗಿ ತಾತ್ಕಾಲಿಕ ಯುದ್ಧ ವಿರಾಮವನ್ನು ಕೇಳಿಕೊಳ್ಳುತ್ತಿದ್ದೇನೆ. ಭೀಬತ್ಸುವಾದ ನೀನು ಅಧರ್ಮ ಪಥದಲ್ಲಿ ಮುಂದುವರಿಯಲಾರೆ. ಶತ್ರುವಿನ ಮೇಲೂ ಕರುಣೆ ತೋರುವ ಸದ್ಗುಣಶೀಲನಾಗಿರುವೆ. ಧರ್ಮಪಾಲಕನಾದ ಧರ್ಮರಾಯನ ಸೋದರನಾಗಿ, ಅದೇ ಪಥದಲ್ಲಿ ಬದುಕಿ ನೀನು ಧರ್ಮಾತ್ಮನೇ ಆಗಿರುವೆ. ನನ್ನ ಪಾಲಿಗೆ ದೈವವೂ ಈ ಸಮಯ ಮುನಿದಿದೆ ಎಂದೇ ಹೇಳಬಹುದು. ಆದರೂ ನಾನು ಯುದ್ದಕ್ಕೆ ಅಂಜುವವನಲ್ಲ, ಅಸಹಾಯಕನಾದ ನನಗೀಗ ರಥ ಚಕ್ರ ಎತ್ತಲು ಅವಕಾಶ ನೀಡುವೆ ಎಂದು ನಂಬಿರುವೆ” ಎಂಬಂತೆ ಪ್ರಾರ್ಥಿಸಿದನು.
ಹೀಗೆ ಬೇಡಿಕೊಂಡ ಕರ್ಣ ಹೂತು ಹೋಗಿದ್ದ ತನ್ನ ರಥ ಚಕ್ರ ಎತ್ತುವುದಕ್ಕೆ ಇಳಿಯಲು ಸಿದ್ದನಾದನು. ಈ ಸಮಯ ಕರ್ಣನ ಮನವಿ ಆಲಿಸಿದ ಕೃಷ್ಣ “ಹೇ ವೀರ ಕರ್ಣನೇ! ಅರ್ಜುನ ಪರಾಕ್ರಮಿಯೂ ಹೌದು, ಧರ್ಮಾತ್ಮನೂ ಹೌದು. ಆದರೆ ಈ ತನಕ ನೀನೇನು ಮಾಡಿರುವೆ ಎಂದು ಯೋಚಿಸು ಕರ್ಣಾ! ಕುರು ಸೇನಾಪತಿ! ನಿನ್ನ ಬದುಕಿನಲ್ಲಿ ನಿನ್ನಿಂದ ಪಾಲಿತವಾದ ಅಧರ್ಮಗಳನ್ನೊಮ್ಮೆ ಸ್ಮರಿಸಿ ನಂತರ ಧರ್ಮದ ಬಗ್ಗೆ ವಾದ ಮಂಡಿಸು. ಧರ್ಮ ರಕ್ಷಿಸಿದವರನ್ನು ಧರ್ಮವೆ ರಕ್ಷಿಸುತ್ತದೆ. ಜೊತೆಗೆ ಅಧರ್ಮಿಗಳ ನಾಶಕ್ಕೂ ಕಾರಣವಾಗುತ್ತದೆ. ಕೀಳು ಜನರು ಮಾತ್ರ ಅವರಿಗೆ ಸಂಕಟ ಒದಗಿದಾಗ ಧರ್ಮವನ್ನು ಮತ್ತು ದೇವರನ್ನು ನಿಂದಿಸುತ್ತಾರೆ. ಆ ಸಂಕಟಕ್ಕೆ ಕಾರಣವಾದ ಅವರ ಕುಕೃತ್ಯಗಳನ್ನು ಮರೆತು ಬಿಟ್ಟಿರುತ್ತಾರೆ. ಧರ್ಮಾತ್ಮರಾದವರು ಎಂದೂ ದೇವರ ದೂಷಣೆ ಮಾಡಲಾರರು. ಆದರೆ ಕಾಲ ತನ್ನ ಪೌರುಷ ತೋರಲು ಆರಂಭಿಸಿದಾಗ ಕೃತ ಕರ್ಮಗಳು ಪ್ರತಿಫಲಿಸತೊಡಗುತ್ತವೆ. ಈಗ ನಿನ್ನ ಸ್ಥಿತಿಯೂ ಹಾಗೆಯೆ ಆಗಿದೆ. ಕಪಟ ದ್ಯೂತವಾಡಿದ ಸಮಯ ನೀನು ಪಾಂಡವರ ಸೋಲನ್ನು ಸಂಭ್ರಮಿಸಿದ್ದೆ. ಆಗ ನಿನಗೆ ಧರ್ಮಾಧರ್ಮ ವಿವೇಚಿಸುವ ವ್ಯವಧಾನ ಇರಲಿಲ್ಲ. ಪತಿವ್ರತೆ ದ್ರೌಪದಿಯನ್ನು ದೂಷಿಸಿ ನೀಚ ಶಬ್ದಗಳಿಂದ ನಿಂದಿಸುವಾಗ ನಿನಗೆ ಧರ್ಮ ತಡೆಯಾಗಿರಲಿಲ್ಲ. ದ್ರೌಪದಿಯ ವಸ್ತ್ರಾಪಹಾರ ಯತ್ನ ನಿನ್ನ ಕಣ್ಣೆದುರು ನಡೆದಿದ್ದರೂ, ಆಗ ನಿನಗೆ ಧರ್ಮ ಯಾವುದೆಂದು ಗೋಚರಿಸಿರಲಿಲ್ಲ. ಅದಕ್ಕಿಂತಲೂ ಭೀಕರವಾಗಿ ವೀರಕುವರ ಅಭಿಮನ್ಯುವಿನ ಬೆಂಗಡೆಯಲ್ಲಿ ನಿಂತು ಕರಛಾಪವನ್ನು ಕಡಿದು ಕತ್ತರಿಸಿದ ಸಮಯ ನೀಡಿದ್ದ ಚಿತ್ರಹಿಂಸೆ ನಿನ್ನ ಪಾಲಿಗೆ ಅಧರ್ಮ ಎನಿಸಿರಲಿಲ್ಲ. ಈಗ ನಿನಗೆ ಎಲ್ಲಿಂದ ಧರ್ಮದ ಕುರಿತಾಗಿ ಜ್ಞಾನೋದಯವಾಯಿತು?” ಎಂದು ಪ್ರಶ್ನಿಸಿದನು.
ಕೃಷ್ಣನ ಮಾತುಗಳನ್ನು ಕೇಳುತ್ತಾ ನಿಂತಿದ್ದ ಕರ್ಣನಿಗೆ ಅಸಹನೀಯ ಅಪಮಾನವಾಯಿತು. ಅದು ಕ್ರೋಧವಾಗಿ ಪರಿವರ್ತನೆ ಹೊಂದಿ ಯುದ್ಧ ವಿರಾಮ ಬಯಸಿದ್ದ ಕರ್ಣ ಧನುಸ್ಸನ್ನೆತ್ತಿ ಶೀಘ್ರವಾಗಿ ಶರಸಂಧಾನಗೈದು ಅರ್ಜುನನ ಭುಜಕ್ಕೆ ಗುರಿಯಾಗಿಸಿ ತೀಕ್ಷ್ಣ ಶರ ಪ್ರಯೋಗಿಸಿದನು. ಅರ್ಜುನನ ಕೈಯಲ್ಲಿದ್ದ ಗಾಂಡೀವ ಜಾರಿ ಬಿತ್ತು. ಮತ್ತೆ ಶರಗಳನ್ನು ಪ್ರಯೋಗಿಸಿ ನಿರಾಯುಧನಾದ ಪಾರ್ಥನನ್ನು ಕ್ಷಣಾರ್ಧದಲ್ಲಿ ಮೂರ್ಛೆಗೊಳಿಸಿದನು. ಕೃಷ್ಣನನ್ನೂ ಬಿಡದೆ ಆತನ ಮೇಲೂ ಶರ ಪ್ರಯೋಗಿಸಿ ಗಾಯಗೊಳಿಸಿದನು.
ಮುಂದುವರಿಯುವುದು…



















