30.2 C
Udupi
Friday, March 20, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 463

ಭರತೇಶ ಶೆಟ್ಟಿ,ಎಕ್ಕಾರ್

ತೊಡೆ ಮುರಿದು, ಮೈಮೂಳೆಗಳು ಭೀಮನ ಗದಾಘಾತದಿಂದ ಮುರಿಯಲ್ಪಟ್ಟು ಕೈಕಾಲುಗಳನ್ನು ಅಲ್ಲಾಡಿಸಲಾಗದೆ ಬಿದ್ದುಕೊಂಡು, ಗಾಯಗಳು ರಕ್ತಕಾರಿ ಕೊಳೆತು ಕೀವು ತುಂಬಿ ಯಾತನಾಮಯ ನೋವು ನೀಡುತ್ತಿರುವ ಅತಿ ನಿಕೃಷ್ಟ ಸ್ಥಿತಿಯಲ್ಲಿಯೂ ಉಸಿರೊಂದನ್ನು ಉಳಿಸಿಕೊಂಡಿದ್ದ ಕೌರವನಿಗೆ ಅಶ್ವತ್ಥಾಮನ ಆಕ್ರೋಶದ ನುಡಿಗಳಿಂದ ಆಶಾಭಾವ ಮೂಡಿತು. ಒಮ್ಮೆಗೆ ಸಕಲ ಸಂಕಷ್ಟ ಸಂಕಟಗಳು ಮರೆತು ಎದ್ದು ಬಿಗಿದಪ್ಪುತ್ತೇನೆ ಎಂಬ ಮನಸಾಯಿತು. ಹಾಗೆ ಮಾಡೋಣ ಎಂದು ಭಾವವನ್ನು ಕ್ರಿಯೆಯಲ್ಲೂ ಪ್ರಕಟಿಸಲು ಹೊರಟರೆ, ಉಲ್ಲಾಸವಾಗಿದ್ದು ಕೇವಲ ಮನಸ್ಸಿಗೆ ಮಾತ್ರ, ಶರೀರ ನಿಸ್ತೇಜವಾಗಿದೆ. ಕಂಗಳಲ್ಲಿ ನೀರಿಳಿಸುತ್ತಾ ಕಣ್ತುಂಬಿ ಹರಸಿ ಗುರುಪುತ್ರನನ್ನು ಕಳುಹಿಸಿಕೊಟ್ಟನು.

ಕೃತವರ್ಮ, ಕೃಪಾಚಾರ್ಯರೊಡನೆ ಹೊರಟ ಕೃಪಿಯ ಸೂನು ಅಶ್ವತ್ಥಾಮ ಕತ್ತಲಾಗುವುದನ್ನು ಕಾಯುತ್ತಿದ್ದನು. ಸೂರ್ಯ ಮುಳುಗಿ ಹೊತ್ತು ಕಳೆದಿದ್ದರೂ ಮಲಗಿ ನಿದ್ರೆ ಹೋಗುವ ಹೊತ್ತಾಗದೆ ಇದ್ದ ಕಾರಣ ಕಾರ್ಯ ಸಾಧನೆಗಾಗಿ ಕಾಯುತ್ತಿದ್ದನು. ಹಾಗೆ ಕಾದು ಕುಳಿತಿರುವಾಗ ರೋಷ ಭರಿತ ಮನಸ್ಸಿಗೆ ಮತ್ತಷ್ಟು ವ್ಯಗ್ರ ಪ್ರಚೋದನೆ ನೀಡುವಂತೆ ಅರಚುತ್ತಾ ಓಡಿಬರುವ ನರಿ ತೋಳಗಳು, ರೆಕ್ಕೆ ಬಡಿಯುತ್ತಾ ಕಿರುಚುವ ಮಾಂಸಾಹಾರಿ ಪಕ್ಷಿಗಳು, ನಿಶಾಚರಿ ಪಿಶಾಚಿಗಳು ಕಣ್ಣಿಗೆ ಕಾಣದಿದ್ದರೂ ಚೀರಾಟ ಮಾಡುತ್ತಾ ಕುರುಕ್ಷೇತ್ರದೆಲ್ಲೆಡೆ ಕೋಲಾಹಲ ಎಬ್ಬಿಸುತ್ತಿವೆ. ಸತ್ತು ಬಿದ್ದಿರುವ ವೀರರ ಹೆಣಗಳ ಕಣ್ಣು ಕುಕ್ಕಿ, ಮಾಂಸ ಹರಿದು, ರಕ್ತ ಹೀರುತ್ತಾ ಸಂಭ್ರಮಿಸುತ್ತಿವೆ. ಈ ರೌದ್ರ ವಾತಾವರಣದಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಮಲಗಿರುವ ದುರ್ಯೋಧನನ ದುರ್ಗತಿಯನ್ನು ಯೋಚಿಸಿ ಅಶ್ವತ್ಥಾಮ ಮತ್ತಷ್ಟು ಉದ್ರಿಕ್ತನಾದನು. ಅಮವಾಸ್ಯೆಯ ರಾತ್ರಿಯದು, ಎಂದಿಗಿಂತಲೂ ತುಸು ಹೆಚ್ಚು ಕತ್ತಲಿದೆ. ಮನಸ್ಸೂ ಎಲ್ಲಾ ವಿಚಾರಗಳಿಂದ ವಿಮುಖವಾಗಿ ದ್ವೇಷ ಸಾಧನೆಯ ಏಕೈಕ ಉದ್ದೇಶ ತುಂಬಿಕೊಂಡು ವಾಸ್ತವವನ್ನು ಮರೆತಿದ್ದಾನೆ ದ್ರೌಣಿ.

ಮಧ್ಯರಾತ್ರಿಯಾಯಿತು, ಪಾಂಡವ ಶಿಬಿರದತ್ತ ಬಂದರೆ ಅಲ್ಲಿ ನಿಶ್ಯಬ್ದ ತುಂಬಿದೆ. ಮಧ್ಯೆ ಮಧ್ಯೆ ಗೊರಕೆಯ ಸದ್ದು ಬಿಟ್ಟರೆ ಬೇರೇನೂ ಕೇಳಿಸುತ್ತಿಲ್ಲ. ಅಶ್ವತ್ಥಾಮ ತನ್ನ ಜೊತೆಗಾರರಾಗಿ ಬಂದ ಕೃತವರ್ಮ ಕೃಪಾಚಾರ್ಯರಿಗೆ ಕೌರವ ಸೇನಾಧಿಪತಿಯಾಗಿ ಆಜ್ಞೆ ಮಾಡಿದ “ನೀವಿಬ್ಬರೂ ಇಲ್ಲಿ ದ್ವಾರದಲ್ಲಿ ನಿಲ್ಲಬೇಕು. ಯಾರಾದರು ಸರಿ ಒಳ ಬರುವವರಿದ್ದರೆ ಯಾರು ಏನು ಎಂಬುವುದನ್ನು ನೋಡದೆ ತಲೆಗಡಿದು ಬಿಡಿ. ಅಂತೆಯೆ ಒಳಗಿನಿಂದ ಯಾರಾದರು ನನ್ನ ಕೈತಪ್ಪಿಸಿ ಓಡಿ ಹೊರಬಂದರೆ ಅವರನ್ನೂ ಸವರಿ ಬಿಡಿ. ಅಂತೂ ಪಾಂಡವ ಶಿಬಿರದ ಯಾರೊಬ್ಬರೂ ನಾಳಿನ ಸೂರ್ಯೋದಯ ನೋಡಲು ಉಳಿಯಬಾರದು.” ಅವರೂ ಸರಿಯೆಂಬಂತೆ ಆಜ್ಞಾನುವರ್ತಿಗಳಾಗಿ ಖಡ್ಗಧಾರಿಗಳಾಗಿ ದ್ವಾರದಲ್ಲಿ ನಿಂತರು.

ಅಶ್ವತ್ಥಾಮ ದ್ವಾರ ದಾಟಿ ಶಿಬಿರದ ಬಾಗಿಲಿಗೆ ಬಂದರೆ ದ್ವಾರಪಾಲಕರು ಮಲಗಿ ಆರಾಮದ ನಿದ್ರೆಗೆ ಜಾರಿದ್ದಾರೆ. ಶಿಬಿರದ ಒಳಗೆ ನೋಡಿದರೆ, ಎಂದಿನಂತೆ ದೊಂದಿಗಳೂ ಇಲ್ಲ, ಅಲ್ಲೋ ಇಲ್ಲೋ ದೂರ ಬಹುದೂರದಲ್ಲಿ ಒಂದೊಂದು ಪಂಜುಗಳಷ್ಟೆ ಉರಿಯುತ್ತಾ ತೀರಾ ಮಸುಕು ಮಂದ ಬೆಳಕನ್ನು ಸೂಸುತ್ತಿವೆ. ಎತ್ತ ನೋಡಿದರೂ ನಿರಾಳರಾಗಿ, ಚಿಂತೆಯಿಲ್ಲದೆ ಗಾಢ ನಿದ್ರೆಗೆ ಜಾರಿದ್ದಾರೆ. ಅಂಗರಕ್ಷಕ ಪಡೆಯಾಗಲಿ, ಜಾಗೃತರಾಗಲಿ, ಆಯುಧಗಳಾಗಲಿ ಯಾವುದೂ ಯಾರ ಬಳಿಯೂ ಇಲ್ಲ. ಕಾರಣ ಯುದ್ದ ಮುಗಿದಿದೆ. ಎದುರಾಳಿಗಳು ಇಲ್ಲ, ಯಾವ ಅಪಾಯವೂ ಇಲ್ಲ ಎಂಬ ನಿರಾತಂಕ ಭಾವ ಎಲ್ಲರನ್ನೂ ನಿಶ್ಚಿಂತರಾಗಿ ಬಹುದಿನದ ಆಯಾಸ, ದಣಿವು ನಿವಾರಣೆಯ ನಿದ್ದೆಗೆ ಜಾರಿಸಿದೆ. ಒಂದೊಮ್ಮೆಗೆ ಜಾಡಿಸಿ ಒದ್ದರೂ ಯುದ್ದದ ಕನಸೆಂದು ಮಗ್ಗುಲು ಬದಲಿಸಿ ಮಲಗುವ ಸ್ಥಿತಿಯಲ್ಲಿ ಮಲಗಿದ್ದಾರೆ.

ಅಶ್ವತ್ಥಾಮ ತನ್ನ ಎಡಕೈಯಲ್ಲಿ ದೀವಟಿಕೆ, ಬಲಗೈಯಲ್ಲಿ ಖಡ್ಗ ಹಿಡಿದುಕೊಂಡು ಕೆಲ ಹೆಜ್ಜೆ ನಡೆದು ಪಾಂಡವರೆಲ್ಲಿ ಮಲಗಿದ್ದಾರೆ ಎಂದು ಹುಡುಕುತ್ತಿದ್ದಾನೆ. ಅಲ್ಲೊಬ್ಬ ಮೈಮೇಲೆ ವಸ್ತ್ರಗಳನ್ನೂ ಧರಿಸದೆ ಕೈಕಾಲು ಚಾಚಿ ಸುಖನಿದ್ರೆಗೆ ಜಾರಿದ್ದಾನೆ. ಯಾರೆಂದು ನೋಡಿದರೆ ಪಿತಾಶ್ರಿ ದ್ರೋಣಾಚಾರ್ಯರ ಶಿರಚ್ಚೇದನ ಗೈದ ಪಾತಕಿ ದೃಷ್ಟದ್ಯುಮ್ನ. ನೋಡಿದೊಡನೆ ಬಿರುಸಿನ ಎರಡು ಹೆಜ್ಜೆಯಲ್ಲಿ ಬಳಿ ಸಾಗಿ ಎಡಗಾಲು ಜಾಡಿಸಿ ಬಲವಾಗಿ ಆತನ ಹೊಟ್ಟೆಗೆ ಒದ್ದು ಬಿಟ್ಟನು. ಆ ಕೂಡಲೆ ಏಳಲು ಯತ್ನಿಸುವ ಆತನ ಎದೆಗೆ ಮತ್ತೊಂದು ಒದೆತ ಬಿತ್ತು. ಮತ್ತೆ ನೆಲಕ್ಕೆ ಬಿದ್ದ ದೃಷ್ಟದ್ಯುಮ್ನನ ಮೇಲೆ ಜಿಗಿಯುವಾಗ ಕೈಯಲ್ಲಿದ್ದ ದೀವಟಿಗೆ, ಖಡ್ಗಗಳನ್ನು ಕೆಳಗೆಸೆದು ಹೊಟ್ಟೆಯ ಮೇಲೆ ಕುಳಿತು ಕೊರಳನ್ನು ಬಿಗಿಯಾಗಿ ಅಮುಕಿ ಹಿಡಿದು ಹಿಸುಕತೊಡಗಿದನು. ಆತನಿಗೆ ಉಸಿರಾಡಲು – ಕೊಸರಾಡಲು ಯಾವುದೂ ಆಗುತ್ತಿಲ್ಲ. ಬಲಗೈಯನ್ನು ಮೆಲ್ಲ ಜಾರಿಸಿ ಎಡಗೈಯಲ್ಲಿ ಮತ್ತೆ ಗಂಟಲನ್ನು ಒತ್ತಿ ಹಿಡಿದು ಉಸಿರುಗಟ್ಟಿಸುತ್ತಾ ಬಲಗೈಯನ್ನು ವಜ್ರ ಮುಷ್ಟಿಯಾಗಿಸಿ ಎದೆಗೆ ಬಲಯುತ ಹೊಡೆತಗಳನ್ನು ಅಪ್ಪಳಿಸತೊಡಗಿದನು. ಒಂದೆಡೆ ಘಾತಕ ಘಾತಗಳು, ಮತ್ತೊಂದೆಡೆ ಕುತ್ತಿಗೆ ಅಮುಕಿ ಒತ್ತಿ ಉಸಿರುಗಟ್ಟಿಸಿರುವುದರಿಂದ, ಮಲಗಿ ನಿದ್ರೆಯಲ್ಲಿದ್ದ ಪಾಂಡವ ಸೇನಾಪತಿ ದೃಷ್ಟದ್ಯುಮ್ನನಿಗೆ ಪ್ರತಿರೋಧ ತೋರಲು ಅವಕಾಶ ಇಲ್ಲದಾಯಿತು. ಆಯಾಸ ಪರಿಹಾರದ ನಿದ್ದೆಯಲ್ಲಿದ್ದ ದ್ರುಪದ ರಾಜಕುಮಾರ ಚಿರನಿದ್ರೆಗೆ ಜಾರಿದನು. ಅಶ್ವತ್ಥಾಮನಿಗೆ ತನ್ನ ಪಿತನ ಹತ್ಯೆ ಮಾಡಿದಾತನ ಮೇಲೆ ಪ್ರತಿಕಾರ ತೀರಿಸಿದ ಮಹಾದಾನಂದದ ಜೊತೆ ಮಹತ್ಸಾಧನೆ ಮಾಡಿದ ಕೃತಾರ್ಥ ಭಾವವೂ ಒದಗಿದಂತಾಯಿತು.

ದೃಷ್ಟದ್ಯುಮ್ನನ ಕೊಲೆಗೈದು ಅಲ್ಲಿಂದ ಎದ್ದು ಖಡ್ಗವನ್ನೆತ್ತಿಕೊಂಡನು. ನಂತರದ ಅಶ್ವತ್ಥಾಮನ ನರಮೇಧ ಅಂತಿಂತಹುದಲ್ಲ. ಖಡ್ಗ ಸವರುತ್ತಲೆ ಹೋಗುತ್ತಿದೆ, ಅಮಾನುಷ, ನಿಷ್ಕಾರುಣ, ಪೈಶಾಚಿಕ ಕ್ರೌರ್ಯ. ಕೋಪೋದ್ರಿಕ್ತನಾಗಿ ಸಾಗುತ್ತಿರುವ ಅಶ್ವತ್ಥಾಮ ಮಹಾವೀರ ಯುಧಾಮನ್ಯುವನ್ನೂ ಸಂಹರಿಸಿದನು. ದ್ರೌಪದಿಯ ಐವರು ಪುತ್ರರು ಒತ್ತಟ್ಟಾಗಿ ಒಂದೆಡೆ ಸುಖನಿದ್ರೆಯಲ್ಲಿದ್ದಾರೆ. ಕಚಕಚನೆ ಕತ್ತರಿಸಿದ ಆತನ ಅರೆಕ್ಷಣದ ಖಡ್ಗದ ಚಲನೆ ಐವರು ಕುಮಾರರ ರುಂಡ ಮುಂಡಗಳನ್ನು ಪ್ರತ್ಯೇಕಿಸಿಯಾಗಿದೆ. ಮೃಗ ಅಥವಾ ರಾಕ್ಷಸ ಎನ್ನೋಣವೆ? ಅವುಗಳಿಗಾದರೂ ಒಂದು ಮಿತಿಯಿದೆ, ಹೊಟ್ಟೆ ತುಂಬಿದ ನಂತರ ಯಾರಿಗೂ ಉಪದ್ರ ಮಾಡಲಾರವು. ಆದರೆ ಅಶ್ವತ್ಥಾಮನಿಗೆ ಮಕ್ಕಳು, ವೃದ್ಧರು, ವೀರರು, ಪರಿಚಾರಕರು ಹೆಚ್ಚೇಕೆ ಆನೆ ಕುದುರೆಗಳು ಎಂಬ ವ್ಯತ್ಯಾಸವೂ ಇಲ್ಲದೆ – ಯಾವುದೆಲ್ಲ ಉಸಿರಾಡುತ್ತಾ ಜೀವಂತ ಇದೆಯೋ, ಅಂತಹ ಪ್ರಾಣ ಇರುವ (ನರ) ಪ್ರಾಣಿಗಳನ್ನು ಕೊಚ್ಚುತ್ತಲೆ ಸಾಗಿದ. ಅಲ್ಲೋ ಇಲ್ಲೋ ಕೆಲವರಿಗೆ ಎಚ್ಚರವಾಗಿ ಜೋರಾಗಿ ಬೊಬ್ಬೆ ಹಾಕುತ್ತಾ ಹೊರ ಓಡಿ ಹೋದರು. ಬದುಕಿದರೆ ಬೇಡಿ ತಿಂದೇವು – ಜೀವ ಒಂದು ಉಳಿಯಲಿ ಎಂದು ಕಂಡತ್ತ ಕಾಲ್ಕಿತ್ತರೆ ಅವರ ದುರಾದೃಷ್ಟ ಬೆಂಬಿಡಲಿಲ್ಲ. ಹೊರಗೆ ಕೃಪ – ಕೃತವರ್ಮರ ಖಡ್ಗಗಳಿಗೆ ಆಹುತಿಯಾದರು. ಆದರೂ ಅಶ್ವತ್ಥಾಮನ ಕ್ರೌರ್ಯ ತಣಿಯುತ್ತಿಲ್ಲ – ಕಾರಣ ಇನ್ನೂ ಪಂಚ ಪಾಂಡವರು ಕಾಣ ಸಿಕ್ಕಿಲ್ಲ. ಆ ಕೃಷ್ಣನೂ ಕಣ್ಮರೆಯಾಗಿದ್ದಾನೆ. ಮತ್ತೊಂದು ಸುತ್ತು ಹುಡುಕಿದರೂ ಅವರೆಲ್ಲೂ ಕಾಣದಾದಾಗ ದೈವೀಗತಿಯು ವಿಚಿತ್ರವಾಗಿದೆ. ಸುದೈವವಶಾತ್ ಹೇಗೋ ಇಲ್ಲಿಂದ ತಪ್ಪಿ ಹೋಗಿದ್ದಾರೆ, ಇಲ್ಲದೆ ಹೋಗಿದ್ದರೆ ಅವರ ಕಥೆಯೂ ಇಂದಿನ ರಾತ್ರಿಗೆ ಮುಕ್ತಾಯವಾಗುತ್ತಿತ್ತು. ಇರಲಿ ಅವರ ಆಯಸ್ಸು ಇನ್ನೂ ಬಲವಾಗಿದೆ ಎಂದಾಯಿತು ಎಂದು ತನಗೆ ತಾನೆ ಅಂದುಕೊಂಡನು. ಮನಸ್ಸಿಗೆ ಸಮಾಧಾನವಾಗುತ್ತಿಲ್ಲ – ಅಲ್ಲೇ ಉರಿಯುತ್ತಿದ್ದ ಬೆಳಕಿನ ಪಂಜನ್ನು ದೂಡಿ ಶಿಬಿರಕ್ಕೆ ಬೆಂಕಿ ಹತ್ತಿಸಿ ಬಿಟ್ಟನು. ಹುಚ್ಚೆದ್ದು ಓಡುತ್ತಾ ಇದ್ದ ಎಲ್ಲಾ ದೀವಟಿಗೆಗಳನ್ನು ಎತ್ತಿ ಶಿಬಿರದ ಛಾವಣಿಗೆಸೆಯುತ್ತಾ, ಸಂಧುಗಳಿಗೆ ಬೆಂಕಿ ಹಬ್ಬಿಸುತ್ತಾ ಹೊರಬಂದು ನಿಂತನು. ಪಾಂಡವರ ಬಿಡಾರ ಅಗ್ನಿಗಾಹುತಿಯಾಗಿದೆ. ಅರೆ ಜೀವ ಇದ್ದವರೂ ಸುಟ್ಟು ಕರಕಲಾಗಿದ್ದಾರೆ. ಅರೆಬೆಂದ ಕರಟಿದ ಶವಗಳ ಕಮಟು ವಾಸನೆಯನ್ನು ಹೋಮಧೂಮದಂತೆ ಆಘ್ರಾಣಿಸುತ್ತಾ ವಿಕೃತ ಸಂತೋಷದ ಉನ್ಮಾದ ಅನುಭವಿಸತೊಡಗಿದನು. ಪ್ರಜ್ವಲಿಸುವ ಜ್ವಾಲೆಯ ಕೆನ್ನಾಲಿಗೆ ಗಗನಾಂಗಣಕ್ಕೆ ಹಬ್ಬಿದೆ. ಎಲ್ಲೆಡೆ ಶುಭ್ರ ಬೆಳಕಿದೆ, ಪ್ರದಕ್ಷಿಣೆ ಬರುವವನಂತೆ ಒಂದು ಸುತ್ತು ಬಿಡಾರದ ಸುತ್ತ ತಿರುಗಿ ಯಾರಾದರು ಬದುಕಿ ಉಳಿದಿದ್ದಾರೋ ಎಂದು ನೋಡಿ ಯಾರೂ ಇಲ್ಲ ಎಂದು ಖಚಿತ ಪಡಿಸಿದನು. ನಂತರ ಪ್ರವೇಶ ದ್ವಾರಕ್ಕೆ ಬಂದು ಕೃಪಾಚಾರ್ಯ ಮತ್ತು ಕೃತವರ್ಮನೊಡನೆ ಅಶ್ವಾರೋಹಿಯಾಗಿ ದ್ವೈಪಾಯನ ಸರೋವರದತ್ತ ಹೊರಟನು.

ದುರ್ಯೋಧನನ ಶರೀರದಲ್ಲಿ ಕೇವಲ ಶ್ವಾಸ ಮಾತ್ರ ಉಳಿದಿದೆ. ಅಷ್ಟರಿಂದಲೆ ಗುಟುಕು ಜೀವವನ್ನು ಉಳಿಸಿಕೊಂಡಿದ್ದಾನೋ, ಇಲ್ಲ ಅಶ್ವತ್ಥಾಮ ತರಬಹುದಾದ ಶುಭಸುದ್ಧಿಗಾಗಿ ಕಾಯುತ್ತಿದ್ದಾನೊ ಎಂಬಂತೆ ಬದುಕುಳಿದಿದ್ದಾನೆ. ಬಂದ ಅಶ್ವತ್ಥಾಮನು ದುರ್ಯೋಧನನ ಬಳಿನಿಂತು ತನ್ನ ರಕ್ತ ಸಿಕ್ತವಾದ ಖಡ್ಗವನ್ನು ಆತನ ಕಣ್ಣ ನೇರಕ್ಕೆ ಹಿಡಿದು “ಮಿತ್ರಾ ಇದೋ ನನ್ನ ಖಡ್ಗವನ್ನು ನೋಡು. ಪಾಂಡವ ಬಿಡಾರ ಸರ್ವನಾಶಗೊಂಡಿದೆ. ಒಂದು ನರಪಿಳ್ಳೆಯೂ ಬದುಕುಳಿದಿಲ್ಲ. ಸಮಗ್ರವಾಗಿ ಸವರಿ ಬಂದಿದ್ದೇನೆ” ಎಂದು ಕೃತ ಘೋರ ರಕ್ತರಾತ್ರಿಯ ಸಂಹಾರ ಲೀಲಾ ಕಥಾನಕವನ್ನು ವಿವರಿಸಿ ಹೇಳಿದನು.

ದುರ್ಯೋಧನನ ಉಸಿರುಗಟ್ಟತೊಡಗಿತು. ಒದ್ದಾಡುತ್ತಾ “ಕೃತಜ್ಞತೆಗಳು ಪ್ರಿಯ ಮಿತ್ರಾ – ಈಗ ನನಗೆ ತೃಪ್ತಿಯಾಯಿತು” ಎಂದು ತಡೆ ತಡೆದು ಬಹಳ ಪರಿಶ್ರಮದಿಂದ ನುಡಿದನು. ಕೃಪಾಚಾರ್ಯರು ಕಲಶವನ್ನೆತ್ತಿ ದುರ್ಯೋಧನನ ಬಾಯಿಗೆ ತುಸು ನೀರೆರೆದರು. ಅಶ್ವತ್ಥಾಮ ಕೃತವರ್ಮನೂ ಹಾಗೆಯೆ ಮಾಡಿದರು. ಅಂತಿಮವಾಗಿ ಅವರ ಕೈನೀರು ಹೀರಿದ ಕೌರವನ ಪ್ರಾಣ ಪಕ್ಷಿ ಹಾರಿಹೋಯಿತು. ಮೂವರೂ ಮಂಡಿಯೂರಿ ಕುಳಿತು ಭಾಷ್ಪಾಂಜಲಿ ಸುರಿಸುತ್ತಾ ಮೃತ ರಾಜನಿಗಾಗಿ ಮರುಗಿದರು. ಹನ್ನೊಂದು ಅಕ್ಷೋಹಿಣಿ ಕೌರವ ಸೇನೆಯಲ್ಲಿ ಈಗ ಕಟ್ಟ ಕಡೆಯದಾಗಿ ಮೂರೇ ಮೂರು ವೀರಾಗ್ರಣಿಗಳು ಉಳಿದಿದ್ದಾರೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page