ಭಾಗ – 462
ಭರತೇಶ ಶೆಟ್ಟಿ, ಎಕ್ಕಾರ್

ಕೃಷ್ಣನು ಅರ್ಜುನನ ಮುಖ ನೋಡುತ್ತಾ ವಿವರಿಸತೊಡಗಿದನು “ಪಾರ್ಥಾ! ನಿನ್ನ ರಥ ಭೀಷ್ಮಾಚಾರ್ಯ, ದ್ರೋಣಾಚಾರ್ಯ, ಕರ್ಣಾದಿಗಳು ಪ್ರಯೋಗಿಸಿದ ಮಂತ್ರಾಸ್ತ್ರಗಳಿಂದ ಯಾವಾಗಲೊ ದಗ್ದವಾಗಿ ಹೋಗಿತ್ತು. ಯೋಗಶಕ್ತಿಯಿಂದ ಈ ರಥವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದ್ದೆನು. ಈಗ ನಾವು ಕಾರ್ಯ ಪೂರ್ಣಗೊಳಿಸಿ ಇಳಿದ ಕೂಡಲೆ ಅದು ದಹಿಸಲ್ಪಟ್ಟು ಅಗ್ನಿಯ ವಶವಾಯಿತು.” ಎಂದು ವಿವರಿಸಿ ಕಾರಣ ತಿಳಿಸಿದನು.
ಕೃಷ್ಣನು ಇದಿಷ್ಟನ್ನು ಹೇಳುತ್ತಿದ್ದಂತೆಯೆ ಅರ್ಜುನ ಮೂಕ ವಿಸ್ಮಿತನಾದನು. ಮತ್ತೆ ಮುಂದುವರಿಸಿದ ಕೃಷ್ಣ ಇಂದಿನ ರಾತ್ರಿ ನೀವು ಪಾಂಡವರೈವರೂ ನಿತ್ಯದಂತೆ ನಿಮ್ಮ ಬಿಡಾರದಲ್ಲಿ ಮಲಗಬಾರದು. ಶಿಬಿರದಿಂದ ಹೊರಗಿದ್ದು ಇಲ್ಲಿಯೆ ಸನಿಹದಲ್ಲಿರುವ ಓಘವತೀ ತೀರಕ್ಕೆ ನಡೆಯಿರಿ. ಅಗತ್ಯ ಕೆಲಸವೊಂದು ನನಗಿದೆ. ಅದನ್ನು ಪೂರೈಸಿ ನಾನು ಅಲ್ಲಿಗೆ ಬಂದು ನಿಮ್ಮನ್ನು ಸೇರಿಕೊಳ್ಳುತ್ತೇನೆ” ಎಂದನು. ಕೃಷ್ಣನ ಆಜ್ಞೆಯಂತೆ ಮುಸ್ಸಂಜೆಯ ಆ ಹೊತ್ತಿನಲ್ಲಿ ಓಘವತೀ ನದಿ ತೀರದತ್ತ ಧರ್ಮರಾಯ, ಭೀಮ, ಅರ್ಜುನ, ನಕುಲ ಮತ್ತು ಸಹದೇವಾದಿಗಳು ನಡೆದರು. ಕೃಷ್ಣ ನೇರವಾಗಿ ಹಸ್ತಿನಾವತಿಯ ಅರಮನೆಯತ್ತ ತೆರಳಿದನು.
ಶ್ರೀ ಕೃಷ್ಣ ಹಸ್ತಿನಾವತಿಗೆ ಬಂದು ಮಹಾರಾಜ ಧೃತರಾಷ್ಟ್ರ ಮತ್ತು ರಾಣಿ ಗಾಂಧಾರಿಯನ್ನು ಕಂಡನು. ಕೊನೆಯದಾಗಿ ಉಳಿದಿದ್ದ ಮಗ ದುರ್ಯೋಧನನ ಸ್ಥಿತಿಯ ಕಥನವನ್ನು ಸಂಜಯನಿಂದ ಕೇಳಿದ ಧೃತರಾಷ್ಟ್ರ ಧೃತಿ ಕಳಕೊಂಡು ಬಿದ್ದಿದ್ದಾನೆ. ಗಾಂಧಾರಿ ಸ್ವಯಂ ತಾನು ನಿಸ್ತೇಜಳಾಗಿದ್ದರೂ ಪತಿಯ ಆರೈಕೆಯಲ್ಲಿ ನಿರತಳಾಗಿದ್ದಾಳೆ. ಮಕ್ಕಳು ಅಳಿದಿದ್ದಾರೆ. ಪತಿಯೂ ಇನ್ನಿಲ್ಲವಾದರೆ ಎಂಬಂತೆ ಆತಂಕಿತಳಾಗಿ ಸಂಭಾಳಿಸಿಕೊಂಡು ಸೇವೆಗೈಯುತ್ತಿದ್ದಾಳೆ. ಆಕೆಯ ಸ್ಥಿತಿಯನ್ನು ಕಂಡು ಕೃಷ್ಣನ ಕಣ್ಣಂಚುಗಳು ಒದ್ದೆಯಾದವು. ಗಾಂಧಾರಿ ತಣ್ಣೀರ ಸಿಂಚನಗೈಯುತ್ತಾ ಧೃತರಾಷ್ಟ್ರನ್ನು ಉಪಚರಿಸಿದಾಗ ಚೇತರಿಸಿಕೊಂಡು ಕಣ್ತೆರೆದನು. ಆಗ ಬಳಿಬಂದು “ಮಹಾರಾಜಾ! ನಿನ್ನನ್ನು ಹೀಗೆ ನೋಡಲು ನನಗೂ ಮರುಕವಾಗುತ್ತಿದೆ. ನಿನ್ನ ಈಗಿನ ವೇದನೆ ನನಗೆ ಅರಿವಾಗುತ್ತಿದೆ. ಆದರೆ ನಿನಗೂ ಏನಾಗಿದೆ, ಯಾಕಾಗಿದೆ ಎಂಬ ಪೂರ್ಣ ವಿವೇಚನೆ ಇದ್ದೇ ಇದೆ. ನಿನ್ನ ತಮ್ಮ ಈ ಪುರದ ಚಕ್ರವರ್ತಿ. ಆತನ ಮಕ್ಕಳು ಅಧಿಕಾರದ ಭಾಗಿಗಳು ಹೌದು. ಮೇಲಾಗಿ ಯುಧಿಷ್ಠಿರ ಜೇಷ್ಠನೂ ಆಗಿದ್ದಾನೆ. ಆದರೂ ದುರ್ಯೋಧನ ಹಠವಾದಿಯಾಗಿ ನಿಂತನು. ಧರ್ಮ ಬಿಡದ ಧರ್ಮರಾಯ ಇಂದಿನ ಈ ದುಃಖಕರ ಸ್ಥಿತಿ ನಿರ್ಮಾಣ ಆಗಬಾರದು ಎಂದು ಪುರುಷ ಪ್ರಯತ್ನದಿಂದ ಏನೇನು ಮಾಡಬಹುದಿತ್ತೊ ಅದೆಲ್ಲವನ್ನೂ ಮಾಡಿದ್ದಾನೆ. ಕೇವಲ ಐದು ಗ್ರಾಮಗಳ ಕನಿಷ್ಠ ಬೇಡಿಕೆ ಇಟ್ಟಾಗಲೂ ಮನ್ನಿಸಲಿಲ್ಲ. ಕೊನೆಗೆ ಅನ್ಯ ಮಾರ್ಗವಿಲ್ಲದೆ ಪದೇ ಪದೇ ಯುದ್ದಕ್ಕೆ ಆಹ್ವಾನವಿತ್ತಾಗ ಕ್ಷತ್ರಿಯರಾಗಿ ಹೋರಾಡಿ ಗೆದ್ದಿದ್ದಾರೆ. ಅವರು ಪಾಲಿಸಿದ ಧರ್ಮವೇ ಅವರಿಗೆ ಶಕ್ತಿಯಾಗಿ ಅವರನ್ನು ರಕ್ಷಿಸಿದೆ. ಮಹಾರಾಜಾ! ಪಿತನಿಲ್ಲದ ಮಕ್ಕಳು ಪಾಂಡವರು. ನಿನ್ನ ಬಗ್ಗೆ ಅಪಾರ ಗೌರವ, ಭಕ್ತಿಯನ್ನು ಹೊಂದಿದ್ದಾರೆ. ನಿನ್ನ ಸ್ವಂತ ಮಕ್ಕಳು ಬದುಕಿರುತ್ತಿದ್ದರೆ ನಿನಗೆ ಯಾವ ರೀತಿಯ ಮಾನ್ಯತೆ ನೀಡುತ್ತಿದ್ದರೋ ಊಹಿಸಲಾಗದು. ಆದರೆ ಪಾಂಡುಸುತರು ನಿಮ್ಮೀರ್ವರನ್ನು ಬಹಳಷ್ಟು ಗೌರವದಿಂದ ಕಾಣುತ್ತಾರೆ ಎಂಬ ವಿಶ್ವಾಸವಿದೆ. ಈ ಹೊತ್ತು ನಿಮ್ಮ ಮಕ್ಕಳನ್ನು ಸಂಹರಿಸಿದ ಪಾಪ ಪ್ರಜ್ಞೆಯಿಂದ ಇಲ್ಲಿ ಬರಲಾಗದೆ ಉಳಿದಿದ್ದಾರೆ. ನೀನು ನಿನ್ನ ಸತ್ತ ಅಧರ್ಮಿ ಮಕ್ಕಳ ಪಿತನಾಗಿ ಉಳಿಯದೆ, ನಿಜ ಮಹಾರಾಜನಾಗಿ ಆಲೋಚಿಸಿ ವಿಜಯಿಗಳಾದ ಪಾಂಡವರನ್ನು ಹಸ್ತಿನೆಗೆ ಕರೆಸಿಕೊಳ್ಳಬೇಕು. ರಾಜ್ಯದ ಸುರಕ್ಷತೆಗೆ ಏನೇನು ಬೇಕೊ ಅದನ್ನು ಮಾಡಿಸುವ ಪೂರ್ಣ ಜವಾಬ್ದಾರಿ ನಿನಗಿದೆ. ವ್ಯಾಕುಲ ಚಿತ್ತನಾಗಿ ಉಳಿಯದೆ ವಿವೇಕಿಯಾಗು. ವ್ಯಥೆ ತೊರೆದು ವಾಸ್ತವವನ್ನು ಅರಿತು ಉಚಿತವಾದುದನ್ನು ನಡೆಸಿಕೊಡು” ಎಂದು ಬೇಡಿಕೊಂಡನು. ನಂತರ ಬಹಳಷ್ಟು ವಿಚಾರಗಳನ್ನು ಅವರಿಬ್ಬರ ಜೊತೆ ಚರ್ಚಿಸಿ ಧೈರ್ಯ ತುಂಬಿದನು. ಅವರ ಮನದ ಸಂಕಟವನ್ನು ಬಹುಭಾಗ ಉಪಶಮನಗೊಳಿಸಿದನು. ನಂತರ ಗಾಂಧಾರಿ ಹಾಗು ಧೃತರಾಷ್ಟ್ರನ ಪಾದ ಸ್ಪರ್ಶಿಸಿ ನಮಿಸಿ ಹೊರಡಲು ಅನುಮತಿ ಕೇಳಿದನು. ಧೃತರಾಷ್ಟ್ರ ಮತ್ತು ಗಾಂಧಾರಿ ಇಬ್ಬರೂ ಸತ್ಯ ಅರಿತು “ದೈವಚಿತ್ತ ಏನಿತ್ತೋ ಅದು ನಡೆದಿದೆ. ಆಗಬೇಕಾದುದು ಏನಿತ್ತೋ ಅದು ಆಗಿ ಹೋಯಿತು. ಪುತ್ರವಿಯೋಗದ ದುಃಖ ಮಾಸುವಂತಹುದಲ್ಲ, ಆದರೆ ಅದಕ್ಕಾಗಿ ಇನ್ನೂ ಮರುಗಿ ಕೂರುವುದು ನಿಷ್ಪ್ರಯೋಜಕ” ಎಂದು ನುಡಿದು ಕಣ್ಣೀರನ್ನು ಒರಸಿಕೊಳ್ಳುತ್ತಾ, ಕೃಷ್ಣನನ್ನು ಹರಸಿ ಬೀಳ್ಕೊಟ್ಟರು.
ಇತ್ತ ದುರ್ಯೋಧನ ಮತ್ತು ಭೀಷ್ಮಾಚಾರ್ಯರಿಬ್ಬರು ಕುರುಕ್ಷೇತ್ರದಲ್ಲಿ ಯುದ್ದ ಮುಗಿದ ಈ ರಾತ್ರಿ ಉಸಿರಾಡುತ್ತಾ ಮಲಗಿದ್ದಾರೆ. ಉಳಿದ ದೇಹಗಳು ದಹಿಸಲ್ಪಡುವ ಕಾಯಗಳಷ್ಟೆ ಆಗಿವೆ. ದ್ವೈಪಾಯನ ಸರೋವರದ ದಂಡೆಯಲ್ಲಿ ದುರ್ಯೋಧನ ಅಸದಳ ವೇದನೆ ಸಹಿಸುತ್ತಾ ಬಿದ್ದುಕೊಂಡಿದ್ದಾನೆ. ನರಿತೋಳಗಳು ಸುತ್ತುವರಿದು ಆತನ ದೇಹವನ್ನು ಸೀಳಿ ತಿನ್ನಲು ಸುತ್ತುವರಿದಿವೆ. ಆ ಸ್ಥಿತಿಯಲ್ಲಿ ಆತನನ್ನು ನೋಡಲು ಕೃಪಾಚಾರ್ಯರು, ಕೃತವರ್ಮ, ಮತ್ತು ಅಶ್ವತ್ಥಾಮರು ಬಂದರು. ದುಸ್ಥಿತಿಯಲ್ಲಿ ನರಕಯಾತನೆ ಅನುಭವಿಸುತ್ತಿರುವ ದುರ್ಯೋಧನನ್ನು ಕಂಡು ಅವರೂ ಬಹುವಾಗಿ ಯಾತನೆ ಅನುಭವಿಸಿದರು. ಬಳಿ ಬಂದ ತನ್ನವರಾದ ಈ ಮೂವರನ್ನು ಕಂಡು ದುರ್ಯೋಧನನೂ ಕಣ್ಣೀರ್ಗರೆದನು. ನೋಡುತ್ತಿದ್ದ ಅಶ್ವತ್ಥಾಮನಿಗೆ ತಡೆದುಕೊಳ್ಳಲಾಗಲಿಲ್ಲ. “ಹೇ ಕೌರವೇಶ್ವರಾ! ಏನೆಲ್ಲಾ ಆಗಿ ಹೋಯಿತು! ಆ ದುರುಳರಾದ ನೀಚ ಪಾಂಡವರಿಗೆ ಕರುಣೆ ಇಲ್ಲವೆಂಬುವುದು ಸಾಬೀತಾಗಿದೆ. ಅಮಾನುಷವಾಗಿ ವಿದ್ಯಾದಾನ ಮಾಡಿದ ಅವರ ಗುರುವರ್ಯ, ನನ್ನ ಪಿತಾಶ್ರೀ ದ್ರೋಣಾಚಾರ್ಯರನ್ನು ನಿರಾಯುಧರಾಗಿ ಕುಳಿತ ಸಮಯ ಅಧರ್ಮಿಗಳಾಗಿ ವಧಿಸಿದರು. ಅದಕ್ಕೂ ಮೊದಲು ಸಂಚನ್ನು ಹೂಡಿ ಪೌರುಷರಿಂದ ಗೆಲ್ಲಲಾಗದ ಆಚಾರ್ಯ ಭೀಷ್ಮರನ್ನು ಶರಶಯ್ಯೆಗುರುಳಿಸಿದ್ದಾರೆ. ಮಿತ್ರ ಕರ್ಣನನ್ನೂ ಮೋಸದಿಂದಲೆ ತಲೆಗಡಿದು ಕೊಂದಿದ್ದಾರೆ. ಕೊನೆಗೆ ನಿನಗೂ ಈ ಹೀನಾಯ ಸ್ಥಿತಿ ಒದಗಿಸಿದ್ದಾರೆ. ಅದರಲ್ಲೂ ನನ್ನ ಪ್ರೀತಿಯ ತಂದೆಯನ್ನು ಸಂಹರಿಸಿದ ಆ ಪಾಂಡವರ ಮೇಲಿನ ಕೋಪ ಇನ್ನೂ ಮನಸ್ಸನ್ನು ಕದಡುತ್ತಲೆ ಇದೆ. ಅವರ ಪುತ್ರನಾದ ನಾನು ಇನ್ನೂ ಬದುಕಿದ್ದೇನೆ. ಹಗೆ ತೀರಿಸದೆ ಅವರನ್ನು ಹಾಗೆ ಬಿಡಲು ನನ್ನ ಮನಸ್ಸು ಸರ್ವಥಾ ಒಪ್ಪುತ್ತಿಲ್ಲ. ಇಂದಿನ ರಾತ್ರಿ ಆ ಕೃಷ್ಣನಿದ್ದರೂ ಆ ಐವರು ಪಾಂಡವರನ್ನೂ ಅವರ ಸಮಸ್ತ ಪರಿವಾರವನ್ನೂ, ನನ್ನ ತಂದೆಯ ಶಿರಚ್ಚೇದನ ಗೈದ ಆ ದ್ರುಪದ ಪುತ್ರನನ್ನೂ ವಧಿಸದೆ ನೆಮ್ಮದಿ ಸಿಗದು. ಉಳಿದಿರುವ ಆ ಪಾಂಡವ ಪಕ್ಷವನ್ನು ಆಮೂಲಾಗ್ರವಾಗಿ ಸವರಿ ನಾನು ಉಂಡ ನಿನ್ನ ಅನ್ನದ ಋಣ ತೀರಿಸಬೇಕಾಗಿದೆ. ನನಗೆ ಆಜ್ಞೆಯಿತ್ತು ಕಳುಹಿಸಿದರೆ ಇಂದಿನ ರಾತ್ರಿ ಬೆಳಗಾಗುವುದೊರಳಗೆ ನಿನಗೆ ಅತಿ ಸಂತೋಷವಾಗುವ ಪಾಂಡವರ ಮರಣ ವಾರ್ತೆ ತಿಳಿಸುವೆ. ಕೊಡು ನನಗಪ್ಪಣೆ, ಈ ಸ್ಥಿತಿಯಲ್ಲೂ ನಾನು ನಿನ್ನ ಆಜ್ಞಾನುವರ್ತಿಯೆ ಆಗಿದ್ದೇನೆ” ಎಂದು ಕೇಳಿಕೊಂಡನು.
ಅಶ್ವತ್ಥಾಮನ ವೀರೋಚಿತ ವಚನ ಗಳನ್ನಾಲಿಸಿದ ದುರ್ಯೋಧನನಿಗೆ ಸಾವು ತರಬಲ್ಲ ನೋವಿನ ನಡುವೆಯೂ ಹಿತಾನುಭವವಾಯಿತು. ಕಣ್ಣು ಮುಚ್ಚುವ ಮೊದಲು ಸಿಹಿಸುದ್ದಿ ಕೇಳಿ ಕೊನೆಯುಸಿರೆಳೆಯುವೆ ಎಂಬ ಆಸೆ ಅವನದ್ದಾಯಿತು. ಕೃಪಾಚಾರ್ಯರನ್ನು ಕರೆದು ಕಲಶ ನೀರನ್ನು ತರಿಸಿ ಅಶ್ವತ್ಥಾಮನಿಗೆ ಸೇನಾಧಿಪತಿ ಅಧಿಕಾರ ವಹಿಸಿಕೊಟ್ಟನು. ಕೃತವರ್ಮ ಮತ್ತು ಕೃಪಾಚಾರ್ಯರಲ್ಲಿ ಅಶ್ವತ್ಥಾಮನ ಬೆಂಗಾವಲಿಗರಾಗಿ ಸೇನೆಯಂತೆ ಸಹಕರಿಸಲು ವಿನಂತಿ ಮಾಡಿದನು.
ಸೇನಾನಾಯಕನಾಗಿ ಅಭಿಷಿಕ್ತನಾದ ಗುರುಪುತ್ರ ಅಶ್ವತ್ಥಾಮ “ಇಂದಿನ ಒಂದು ರಾತ್ರಿ ಸೈರಿಸಿಕೋ, ಬೆಳಗಾಗುವುದೊರಳಗೆ ಆ ಪಾಂಡವ ಪಕ್ಷದ ಒಂದು ನರಪಿಳ್ಳೆಯೂ ಉಳಿಯದಂತೆ ಸರ್ವನಾಶಗೈದು ಬರುವೆ” ಎಂದು ಪ್ರತಿಜ್ಞೆಗೈದನು.
ಮುಂದುವರಿಯುವುದು….






