23.9 C
Udupi
Saturday, January 31, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 421

ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೪೨೧ ಮಹಾಭಾರತ

ನಾಗ ಅಶ್ವಸೇನ ಬಹಳಷ್ಟು ವಿಚಾರ ಮಂಥನ ಮಾಡಿ, ಇಚ್ಚಾರೂಪ ಧಾರಣ ಶಕ್ತಿ ಇರುವುದರಿಂದ ಬಾಣದ ರೂಪ ಧರಿಸಿ ಕರ್ಣನ ಬತ್ತಳಿಕೆ ಸೇರಿಕೊಂಡನು. ತನ್ನ ವೈರಿ ಅರ್ಜುನನ ಶಿರಚ್ಚೇದನಗೈಯುವ ಮನದಾಸೆಯನ್ನು ಬಲಪಡಿಸುತ್ತಾ ಅವಕಾಶಕ್ಕಾಗಿ ಕಾಯತೊಡಗಿದನು.

ಕರ್ಣಾರ್ಜುನರ ಯುದ್ದ ಭರದಿಂದ ಸಾಗುತ್ತಿದೆ. ಕರ್ಣನು ಪೂರ್ಣ ಶ್ರಮವಹಿಸಿ ಅರ್ಜುನನನ್ನು ವಧಿಸಬೇಕು ಎಂಬಂತೆ ಉಗ್ರನಾಗಿ ಕಾದಾಡುತ್ತಿದ್ದಾನಾದರೂ, ಅರ್ಜುನ ಮೇಲುಗೈ ಸಾಧಿಸುತ್ತಾ ಇದ್ದಾನೆ. ನಿರಂತರ ಶರಹತಿಗಳಿಂದ ಕರ್ಣ ಬಹುವಾಗಿ ಪೀಡಿತನಾಗುತ್ತಾ ಬಳಲಿಕೆ ಅನುಭವಿಸತೊಡಗಿದ್ದಾನೆ. ಈ ಸಮಯ ಕರ್ಣನಿಗೆ ತಾನು ಅರ್ಜುನನ ಎದುರಾಗಿ ಹೋರಾಡುವ ದಿನಕ್ಕಾಗಿ ಎಂದು ಸಂಚಯ ಮಾಡಿಕೊಂಡು ಇಟ್ಟಿದ್ದ ಸರ್ಪಾಸ್ತ್ರವನ್ನು ತೂಣಿರದಿಂದ ಸೆಳೆದನು. ಸರ್ಪ ಮುಖವನ್ನು ಹೊಂದಿದ್ದ, ಪ್ರಜ್ವಲಿಸುತ್ತಿದ್ದ, ಬಾಗಿ ಹಾವಿನ ಶರೀರದಾಕೃತಿಯುಳ್ಳ, ನೋಡುಗರಿಗೆ ಭಯಂಕವಾಗಿ ಗೋಚರಿಸುವ ರೂಪಿನ, ಎಣ್ಣೆಯಿಂದ ಹದ ಮಾಡಲ್ಪಟ್ಟಿದ್ದ, ಅರ್ಜುನನ ಎದುರು ಯಾವಾಗ ಹಣಾಹಣಿಯಾಗುವುದೋ ಅಂತಹ ಬಹುನಿರೀಕ್ಷಿತ ದಿನಕ್ಕಾಗಿ ಉಳಿಸಿ ಇಟ್ಟಿದ್ದ ಮಹಾಮಾರಕ ಅಸ್ತ್ರ ವನ್ನು ಕೈಗೆತ್ತಿಕೊಂಡನು. ಬತ್ತಳಿಕೆಯೊಳಗೆ ಸೇರಿ, ಶರದ ರೂಪದಲ್ಲಿ ಕಾಯುತ್ತಿದ್ದ ಅಶ್ವಸೇನ ಕೂಡಲೆ ಕರ್ಣನ ಸರ್ಪಾಸ್ತ್ರದಲ್ಲಿ ಸ್ಥಿತನಾದನು. ದಿವ್ಯಾಸ್ತ್ರ ಈಗ ಸಜೀವ ಶರವಾಗಿ ಬದಲಾಯಿತು ಎಂದು ಹೇಳಬಹುದು.

ಕರ್ಣ ಮಹೋಲ್ಲಾಸದಿಂದ ಸರ್ಪಾಸ್ತ್ರವನ್ನು ಸೆಳೆದು ಅರ್ಜುನನ ಕೊರಳಿಗೆ ಗುರಿಯಾಗಿ ದಿವ್ಯ ಶರವನ್ನು ಅನುಸಂಧಾನ ಮಾಡಿದನು. ಯಾವಾಗ ಕರ್ಣ ಸರ್ಪಾಸ್ತ್ರವನ್ನು ಪ್ರಯೋಗಿಸಲು ಅನುಸಂಧಾನ ಮಾಡಿದನೋ, ಆ ಕೂಡಲೆ ಬಹಳ ವೈಪರೀತ್ಯಗಳು ಆಗತೊಡಗಿದವು. ಸರ್ಪಾಸ್ತ್ರ ವಿಷ ಜ್ವಾಲೆ ಹೊರ ಹೊಮ್ಮುತ್ತಿದೆ. ಕಾರುತ್ತಿರುವ ವಿಷದ ತೀವ್ರತೆಗೆ ಸೇನೆಯ ಸೈನಿಕರು ಸ್ಮೃತಿ ತಪ್ಪಿ ಬೀಳತೊಡಗಿದರು. ಗಗನ ಮಾರ್ಗದಲ್ಲಿ ಹಾರುತ್ತಿದ್ದ ಪಕ್ಷಿಗಳು ನಿಸ್ತೇಜಗೊಂಡು ಧರೆಗುರುಳ ತೊಡಗಿದವು. ಈ ಶರದ ಜ್ವಾಜಾಲ್ಯಮಾನ ಪ್ರಭೆಗೆ ದಶದಿಕ್ಕುಗಳೂ, ಆಕಾಶವೂ ಪ್ರಜ್ವಲಿಸತೊಡಗಿದವು. ಕರ್ಣನು ಬಾಣವನ್ನು ಪಾರ್ಥನ ಕೊರಳಿಗೆ ಗುರಿಯಾಗಿಸಿದ್ದಾನೆ. ಆ ಶರದಲ್ಲಿ ಸರ್ಪರಾಜ, ಐರಾವತ ವಂಶ ಜಾತ ಅಶ್ವಸೇನ ಅವ್ಯಕ್ತ ರೂಪದಲ್ಲಿ ಸ್ಥಿತನಾಗಿದ್ದಾನೆ. ಕರ್ಣನಿಗೆ ಈ ಬಾಣದಲ್ಲಿ ಅಶ್ವಸೇನ ನಾಗ ಸ್ಥಿತನಾಗಿದ್ದಾನೆ ಎಂಬ ವಿಚಾರ ತಿಳಿದಿಲ್ಲ.

ಅಂತರಿಕ್ಷದಲ್ಲಿ ಸಮರ ವೀಕ್ಷಣೆ ನಿರತರಾಗಿದ್ದ ದಿವ್ಯಾತ್ಮರಲ್ಲಿ ಇಂದ್ರನೂ ಇದ್ದಾನೆ. ಕರ್ಣನ ಕೈಯಲ್ಲಿ ಸರ್ಪಾಸ್ತ್ರವನ್ನು ಕಂಡು ದೇವರಾಜ ಇಂದ್ರನು ಭಯಗ್ರಸ್ಥನಾದನು‌. ನನ್ನ ಮಗ ಪಾರ್ಥನು ಈಗ ಹತನಾಗಬಹುದು. ನಾಗಮುಖಿ ಸಜೀವ ಶರವನ್ನು ತಪ್ಪಿಸುವುದಕ್ಕೆ ಅರ್ಜುನನಿಂದ ಸಾಧ್ಯವಾದೀತೊ? ಸೂರ್ಯ ಪುತ್ರ ನನ್ನ ಪುತ್ರ ಅರ್ಜುನನನ್ನು ಸಂಹರಿಸಿದರೆ ಆಗ ಏನು ಮಾಡುವುದು? ಈ ಪ್ರಕರಣಕ್ಕೆ ಕುತೂಹಲಕಾರಿ ತಿರುವು ನೀಡಿ ಪಾರ್ಥನನ್ನು ಬದುಕುಳಿಸುವುದಾದರು ದಾರಿ ಹೇಗೆ?” ಎಂದು ವಿಚಾರ ಮಾಡತೊಡಗಿದನು. ಆಗ ಋಷಿ ಮಂಡಲದ ಪರಮ ತಪಸ್ವಿಗಳು ‘ಅಯ್ಯಾ ಅರ್ಜುನನೆದುರು ಕರ್ಣ ಯಾವ ವಿಭಾಗದಿಂದ ಸೆಣಸಿದರೂ ಗೆಲ್ಲಲಾರ. ಸರ್ಪಾಸ್ತ್ರಕ್ಕೆ ಪ್ರತಿಯಾಗಿ ಪ್ರತ್ಯಸ್ತ್ರ ಪಾರ್ಥನಲ್ಲಿ ಇದೆಯಾದರೂ, ಅಶ್ವಸೇನ ಸೇರಿಕೊಂಡ ಕಾರಣ ಅದು ಇನ್ನಷ್ಟು ಬಲ ಪಡಕೊಂಡಿದೆ ಹೊರತು ಅರ್ಜುನನಿಗೆ ಅಭೇದ್ಯವೇನಲ್ಲ” ಎಂದರು.

ಇತ್ತ ಕರ್ಣ ಸರ್ಪಾಸ್ತ್ರವನ್ನು ಹೆದೆಯೇರಿಸಿದ ಹೊತ್ತು ತನಗೆ ಜಯ ಲಭ್ಯವಾಗಲಿದೆ, ಪಾರ್ಥ ಸಾಯುತ್ತಾನೆ ಎಂಬಂತೆ ಪೂರ್ಣ ವಿಶ್ವಾಸ ತಳೆದಿದ್ದಾನೆ. ಶರಸಂಧಾನಗೈದು ತನ್ನ ಸಾರಥಿಯಾದ ಮಾದ್ರೇಶನಲ್ಲಿ ಕೇಳುತ್ತಿದ್ದಾನೆ “ಶಲ್ಯ ಭೂಪತಿ, ಈ ಶರ ಪಾರ್ಥನ ಕೊಲ್ಲಬಲ್ಲುದೇ? ರಾಜಮಾತೆ ಕುಂತಿ ಹತಭಾಗಿನಿ ಆಗಬಹುದೇ? ಮಧ್ಯಮ ಪಾಂಡವ ಧನಂಜಯನ ಪತ್ನಿಗೆ ವೈಧವ್ಯ ಪ್ರಾಪ್ತವಾದೀತೇ?” ಎಂದು ಪ್ರಶ್ನಿಸುತ್ತಾ ಕೇಳಿದನು.

ಆಗ ಶಲ್ಯ ರಥಕಲ್ಪ ವಿದ್ಯಾಬಲವನ್ನು ಕರ್ಣನಿಗೆ ವಿವರಿಸಲು ತೊಡಗಿದನು. “ಹೇ! ಕರ್ಣಾ! ನೀನು ಗುರಿಯಾಗಿಸಿರುವುದು ಕೊರಳಿಗೆ, ಆದರೆ ಅಲ್ಲಿ ಸಾರಥಿಯಾಗಿ ಕುಳಿತವನು ಶ್ರೀ ಕೃಷ್ಣ, ಆತ ವಿಶೇಷ ಶಕ್ತಿ ಸಂಪನ್ನನು. ಹಾಗಾಗಿ ನೀನು ಪಾರ್ಥನ ಕೊರಳನ್ನು ಲಕ್ಷವಾಗಿಸಿ ಪ್ರಯೋಗಿಸುವುದು ಪ್ರಚೋದನಾತ್ಮಕ ಕ್ರಿಯೆ. ಇದಕ್ಕೆ ಪ್ರತಿಕ್ರಿಯೆ ನೀಡುವ ಪ್ರಕ್ರಿಯೆ ಅತ್ತ ಕಡೆಯಿಂದ ನಂತರದಲ್ಲಿ ಆಗಲಿರುವ ವಿಚಾರ. ಹಾಗಾಗಿ ಕೃಷ್ಣ ಆ ಅವಕಾಶ ಬಳಿಸಿ ಧನಂಜಯನನ್ನು ರಕ್ಷಿಸುವ ಪ್ರಯತ್ನ ಮಾಡಲು ಶಕ್ತನಾಗುತ್ತಾನೆ. ಹೀಗಿರುತ್ತಾ ನೀನು ಈಗ ನಿಶ್ಚಯಿಸಿರುವ ಗುರಿ ವ್ಯರ್ಥವಾಗುವ ಸಾಧ್ಯತೆ ಅಧಿಕ. ಅದರ ಬದಲಾಗಿ ಗುರಿ ಬದಲಿಸಿ ಪಾರ್ಥನ ಉದರವನ್ನು ಲಕ್ಷ್ಯವಾಗಿಸಿ ಪ್ರಯೋಗಿಸು. ನೀನು ಹಾಗೆ ಮಾಡಿದೆ ಎಂದಾದರೆ ಶ್ರೀ ಕೃಷ್ಣ ರಥ ತಗ್ಗಿಸಿದರೂ, ಏರಿಸಿದರೂ ನಿನ್ನ ಗುರಿ ತಪ್ಪದು. ಕರ್ಣಾ ನನ್ನ ಸಲಹೆ ನೀನು ಪಾಲಿಸ ಬೇಕು. ನಿನಗೆ ಅಂತಹ ನಿರ್ದೇಶನ ನೀಡುವ ಪೂರ್ಣ ಅಧಿಕಾರ ನನಗಿದೆ. ನನ್ನ ಆದೇಶ ಪಾಲಿಸ ಬೇಕಾದ ಬಾಧ್ಯತೆ ನಿನಗಿದೆ ಎನ್ನುವುದನ್ನು ಮರೆಯದೆ ಪಾಲಿಸುವವನಾಗು” ಎಂದನು.

ಶಲ್ಯನ ಆದೇಶ ಕೇಳಿಸಿಕೊಂಡ ಕರ್ಣನಿಗೆ ವಿಪರೀತ ಸಿಟ್ಟು ನೆತ್ತಿಗೇರಿತು. ಈವರೆಗೆ ನಾನು ಪ್ರಯೋಗಿಸಿದ ಶರಗಳೆಲ್ಲವೂ ನಿಖರವಾಗಿಯೆ ಪ್ರಯೋಗಿತವಾಗಿವೆ. ಹೀಗಿರಲು ನನ್ನ ಗುರಿಯನ್ನು ಅನುಮಾನಿಸುವುದಾಗಲಿ, ಅಪಮಾನಿಸುದಾಗಲಿ ಈ ಸಮಯ ಅನಗತ್ಯ ಎಂದು ಯೋಚಿಸಿ, ಶಲ್ಯನನ್ನು ಕರೆದು ಹೇಳತೊಡಗಿದ “….

ಮುಂದುವರಿಯುವುದು..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page