ಭಾಗ – 419
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೪೧೯ ಮಹಾಭಾರತ
“ಶಲ್ಯ ಭೂಪತಿ! ಇಂದಿನ ಯುದ್ದದಲ್ಲಿ ಎರಡು ಸಾಧ್ಯತೆಗಳಿವೆ. ಒಂದೋ ನಾನು ಪಾರ್ಥನನ್ನು ಸಂಹರಿಸಿ ವಿಜಯಿಯಾಗುವೆ. ಅದಾಗದಿದ್ದರೆ ಅರ್ಜುನನು ನನ್ನ ಸಂಹಾರ ಮಾಡಬಲ್ಲ ಸಮರ್ಥನು ಆಗಿದ್ದಾನೆ. ಹೀಗಿರುವಾಗ ಅರ್ಜುನ ನನ್ನನ್ನೇನಾದರು ವಧಿಸಿದರೆ ಆಗ ನೀನೇನು ಮಾಡುವೆ ಎಂಬ ಕೌತುಕ ನನ್ನ ಮನ ಮಾಡಿದೆ. ಈ ರೀತಿ ಪ್ರಶ್ನಿಸಲು ಕಾರಣವೇನೆಂದರೆ ನೀನು ಕೇವಲ ಓರ್ವ ಸಾಮಾನ್ಯ ಸಾರಥಿಯಲ್ಲ. ಮಾದ್ರಾಧೀಶನೂ, ಮಲ್ಲಯುದ್ದ ಪ್ರವೀಣನೂ, ಮಹಾರಥಿಯೂ, ಸಾರಥ್ಯದಲ್ಲಿ ಖ್ಯಾತ ನಾಮಾಂಕಿತರಲ್ಲಿ ಓರ್ವನೂ, ಗದಾಯುದ್ದ ನಿಪುಣನೂ ಆಗಿರುವೆ. ಶತ್ರುಹಂತಕನಾದ ನೀನು ನನ್ನ ಜೊತೆ ರಥದಲ್ಲಿರುವಾಗ ಒಂದುವೇಳೆ ವಿಪರ್ಯಾಸ ಘಟನೆ ಆದರೆ ಆಗ ನಿನ್ನ ಪ್ರತಿಕ್ರಿಯೆ ಏನೆಂದು ತಿಳಿಯುವ ಕುತೂಹಲ ಮನ ಮಾಡಿದೆ. ತಿಳಿಸುವೆಯಾ?” ಎಂದು ಕೇಳಿದನು.
ಆಗ ಶಲ್ಯನು, “ಹೇ ಕರ್ಣಾ! ಒಂದೊಮ್ಮೆಗೆ ನೀನು ಯುದ್ದದಲ್ಲಿ ಸೋತು, ಜೀವಂತವಾಗುಳಿದೆ ಎಂದಾದರೆ, ಆ ಕ್ಷಣವೇ ನಿನ್ನನ್ನು ಸಾರಥ್ಯ ಪೀಠಸ್ಥನಾಗಿಸಿ ನಾನೇ ರಥಿಕನಾಗಿ ಹೋರಾಡಿ ಕೃಷ್ಣಾರ್ಜುನರ ವಧೆಗೈಯುವೆ. ಹಾಗಾಗದೆ ನೀನೇನಾದರು ವಧಿಸಲ್ಪಟ್ಟು ನಿರ್ಜೀವನಾದರೆ ಆಗಲೂ ನಾನು ಹಿಂಜರಿಯಲಾರೆ. ನೀನಾದರೂ ಕೃಷ್ಣಾರ್ಜುನರ ಎದುರು ಸೋತು ವಧಿಸಲ್ಪಟ್ಟರೂ ಪಡಬಹುದು. ಆದರೆ ನಾನು ಹಾಗಲ್ಲ, ರಥೈಕಸಹಾಯನಾಗಿ (ಸಾರಥಿ – ರಥಿಕ ಎರಡೂ ಒಬ್ಬನೆ ಎರಡೂ ಆಗಿ) ಸಾರಥ್ಯವನ್ನೂ, ಸಮರವನ್ನೂ ಏಕಾಂಗಿಯಾಗಿಯೆ ನಡೆಸಿ ನಾನೇನೆಂಬುದನ್ನು ಜಗಕ್ಕೆ ಪ್ರಕಟಿಸುವೆ. ಆಗಲೂ ಅರ್ಜುನ ನನ್ನೆದುರು ಕಾದಾಡಿ ಬದುಕುಳಿಯಲಾರ” ಎಂದನು.
ಕಾಕಾತಾಳೀಯ ಎಂಬಂತೆ ಅರ್ಜುನನೂ ಇದೇ ರೀತಿಯ ಮನಸ್ಥಿತಿಯನ್ನು ತಳೆದು “ಮಾಧವಾ! ಸಮರ ಎಂದರೆ ಮರಣ ಸಹಿತವಾದದ್ದು. ಹಾಗಾಗಿ ನಾನು ಮತ್ತು ಕರ್ಣ ಈರ್ವರಲ್ಲಿ ಓರ್ವ ಮರಣಿಸಲೇ ಬೇಕು. ಒಂದೊಮ್ಮೆಗೆ ನನ್ನನ್ನು ಮೀರಿಸಿ ಕರ್ಣನೇನಾದರು ನನ್ನನ್ನು ಅಂತ್ಯಗೊಳಿಸಿದರೆ ಸರ್ವಶಕ್ತನಾದ ನೀನೇನು ಮಾಡುವೆ? ಎಂಬ ಜಿಜ್ಞಾಸೆ ಮನಮಾಡಿದೆ. ಪ್ರಾಮಾಣಿಕ ಉತ್ತರವನ್ನು ನಿನ್ನಿಂದ ಅಪೇಕ್ಷಿಸುತ್ತಿದ್ದೇನೆ” ಎಂದು ಕೇಳಿದನು.
“ಧನಂಜಯಾ! ಜಗಚಕ್ಷುವಾದ ಸೂರ್ಯನು ತನ್ನ ಸ್ಥಾನದಿಂದ ಚ್ಯುತನಾಗಿ ಕೆಳಗೆ ಬಿದ್ದರೂ ಬೀಳಬಹುದು, ಮಹಾಸಾಗರವೇ ವಿಪರೀತ ಸ್ಥಿತಿ ನಿರ್ಮಾಣವಾಗಿ ಬತ್ತಿ ಹೋದರೂ ಹೋಗಬಹುದು, ಜ್ವಲಿಸುವ ಅಗ್ನಿಯೇ ಶೀತಲನಾದರೂ ಆಗಬಹುದು. ಆದರೆ ಕರ್ಣ ಮಾತ್ರ ನಿನ್ನನ್ನು ಸಂಹರಿಸಲಾರ – ಇದು ಸತ್ಯ. ಇದನ್ನು ಮೀರಿ ನಿನ್ನ ಕಲ್ಪನೆಯಲ್ಲಿ ಉದ್ಭವಿಸಿದ ಪ್ರಶ್ನೆಯ ಉಪಶಮನಕ್ಕಾಗಿ ಪ್ರಾಮಾಣಿಕ ಉತ್ತರ ನೀಡುತ್ತೇನೆ. ಒಂದೊಮ್ಮೆಗೆ ಕರ್ಣ ನಿನ್ನನ್ನು ಪರಾಜಿತಗೊಳಿಸಿದರೆ, ಆಯುಧ ಧರಿಸಿ ಹೋರಾಡಲಾಗದ ವಚನ ಬಾಧ್ಯತೆ ಗೊಳಗಾದ ನಾನು ಆತನಿಂದ ಪ್ರಯೋಕ್ತವಾಗುವ ಅಸ್ತ್ರ ಶಸ್ತ್ರಗಳು ನಿನ್ನ ಕಾಯ ಸ್ಪರ್ಶಿಸುವ ಮೊದಲು ನನ್ನ ಕರಗಳನ್ನು ಗುರಾಣಿಯಂತೆ ಅಡ್ಡಲಾಗಿಸಿ ತಡೆಯುವೆ. ರಥಿಕನು ಗಾಯಾಳಾಗದಂತೆ ತಡೆಯುವುದು, ಅದಕ್ಕಾಗಿ ಸರ್ವ ಪ್ರಯತ್ನ ಮಾಡುವುದು ಸಾರಥಿಯ ಕರ್ತವ್ಯ. ಇಲ್ಲೂ ಮಿತಿಮೀರಿದರೆ ಕೇವಲ ನನ್ನ ಬಾಹುಗಳನ್ನೇ ಆಯುಧವಾಗಿಸಿ ಕರ್ಣ ಶಲ್ಯರ ವಧೆ ಮಾಡಿ ಮುಗಿಸುವೆ. ಆ ಬಗ್ಗೆ ನಿಸ್ಸಂದೇಹಿತನಾಗು. ಇವೆರಡರಲ್ಲಿ ಮೊದಲು ಹೇಳಿದ ವಿಷಯವೇ ಸತ್ಯವಾಗುವುದು. ಅಂದರೆ ನೀನು ಕರ್ಣನನ್ನು ಸಂಹರಿಸುವೆ, ನನ್ನ ಬಾಹುಬಲ ಪ್ರದರ್ಶನಕ್ಕೆ ಅವಕಾಶ ಒದಗದು” ಎಂದು ಅರ್ಜುನನ್ನು ಉತ್ತೇಜಿಸಿದನು.
ನೋಡ ನೋಡುತ್ತಿದ್ದಂತೆಯೆ ಇಬ್ಬರೂ ಸಿದ್ದರಾಗಿ ಧನುಸ್ಸನ್ನೆತ್ತಿ ಛಾಪಟಂಕಾರಗೈದು ಶರಸಂಧಾನಕ್ಕೆ ಮುಂದಾದರು. ಕರ್ಣನೂ ಆರಂಭದಲ್ಲಿ ಉದಯದ ಸೂರ್ಯನಂತೆ ಶಾಂತನಾಗಿದ್ದು ಸಾವಧಾನವಾಗಿ ಆಕ್ರಮಣ ಮಾಡುತ್ತಾ ಅರ್ಜುನನ ಕೌಶಲ ಪರೀಕ್ಷೆ ಮಾಡುವವನಂತೆ, ಅರ್ಜುನ ಪ್ರಯೋಕ್ತ ಶಸ್ತ್ರಾಸ್ತ್ರ ಖಂಡನೆ ಮಾಡುತ್ತಾ ಯುದ್ಧ ಆರಂಭಿಸಿದನಾದರೂ, ಹೊತ್ತು ಸಾಗುತ್ತಿದ್ದಂತೆ ಪ್ರಖರತೆ ಏರಿಸುತ್ತಾ ಉರಿಯತೊಡಗಿದ. ದಿವ್ಯಾಸ್ತ್ರ – ಮಹಾಸ್ತ್ರಗಳು ಪ್ರಯೋಗವಾಗತೊಡಗಿದವು. ಒಮ್ಮೆ ಆಕಾಶದಲ್ಲಿ ಶರ ಚಪ್ಪರ ನಿರ್ಮಾಣವಾಗಿ ಕುರುಕ್ಷೇತ್ರ ಕತ್ತಲಾದರೆ ಇಬ್ಬರಿಂದಲೂ ಪರಸ್ಪರ ಮಹಾಸ್ತ್ರಗಳಿಗೆ ಪ್ರತ್ಯಸ್ತ್ರ ಪ್ರಯೋಗವಾಗಿ ಉಪಶಮಿಸಲ್ಪಟ್ಟು ನಿರ್ಮಲ ಆಕಾಶ ಮರು ಕಾಣುವಂತಾಗುತ್ತಿತ್ತು. ಈ ವರೆಗೆ ಎಂದೂ ಕಂಡಿರದ ಅತಿವೇಗದ ಯುದ್ದ ಇಂದು ಕರ್ಣಾರ್ಜುನ ರ ಮಧ್ಯೆ ಬಿರುಸಾಗಿಯೇ ಸಾಗುತ್ತಿದೆ. ತೀವ್ರತೆ ಎಷ್ಟಿದೆಯೆಂದರೆ ಇಬ್ಬರ ಸಾರಥಿಗಳು, ರಥ, ಕುದುರೆಗಳು ಜರ್ಜರಿತವಾದವು. ಈರ್ವರು ಮಹಾರಥಿಗಳೂ ರಕ್ತದೋಕುಳಿಯಲ್ಲಿ ಮಿಂದೆದ್ದವರಂತೆ ರುಧಿರಾಭಿಷಿಕ್ತರಾಗಿದ್ದಾರೆ.
ಮತ್ತಷ್ಟು ಉಗ್ರವಾಗಿ ಸಮರ ಸಾಗತೊಡಗಿದಾಗ ಆಗ್ನೇಯ, ವಾರುಣಾಸ್ತ್ರ, ನಾಗಸ್ತ್ರ, ಗರುಡಾಸ್ತ್ರ, ಪರ್ವತಾಸ್ತ್ರ ವಾಯುವ್ಯಾಸ್ತ್ರಗಳೆಲ್ಲಾ ಪ್ರಯೋಕ್ತವಾದವು. ಒಂದೊಂದು ಅಸ್ತ್ರ ಪ್ರತ್ಯಸ್ತ್ರಗಳು ಪ್ರಯೋಗವಾದಾಗಲೂ ಪ್ರಳಯ ಸದೃಶ ಪ್ರಕೃತಿ ವಿಕೋಪಗಳಾಗಿ ಎಲ್ಲೆಡೆ ಕ್ಷೋಭೆ ಉಂಟಾಗತೊಡಗಿತು. ಕ್ಷುರಪ್ರ, ಆಂಜಲಿಕ, ಅರ್ಧಚಂದ್ರ, ನಾಲೀಕ, ನಾರಾಚ, ವರಾಹಕರ್ಣ ಇವೇ ಮುಂತಾದ ಸಹಸ್ರಾರು ಆಯಧಗಳಿಂದ ಆಕ್ರಮಣ ಮಾಡಿಕೊಂಡರು.
ಹೀಗಿರಲು ಕರ್ಣನು ಭಾರ್ಗವಾಸ್ತ್ರವನ್ನು ಪ್ರಯೋಗಿಸಿದನು. ಮಹಾ ಪ್ರಳಯ ಸದೃಶವಾದ ಭಾರ್ಗವಾಸ್ತ್ರಕ್ಕೆ ಪ್ರತಿಯಾಗಿ ಅರ್ಜುನನು ವಜ್ರಾಸ್ತ್ರ ಪ್ರಯೋಗಿಸಿದನು. ಆದರೆ ಭಾರ್ಗವಾಸ್ತ್ರ ಅರ್ಜುನ ಪ್ರಯೋಕ್ತ ಸಕಲಾಸ್ತ್ರಗಳನ್ನೂ ಛೇದಿಸಿ ಮುಂದೊತ್ತಿ ಬರುವಷ್ಟರಲ್ಲಿ ಶ್ರೀಕೃಷ್ಣ ರಥವನ್ನು ವೃತ್ತಾಕಾರದಲ್ಲಿ ತಿರುಗಿಸಿ ಶರಹತಿಯ ಗುರಿ ತಪ್ಪಿಸಿದನು. ಮತ್ತೆ ಕರ್ಣನಿಗೆದುರಾಗಿ ಯಥಾಸ್ಥಿತಿಯಲ್ಲಿ ರಥವನ್ನು ಸ್ಥಿತಗೊಳಿಸಿದನು. ಗುರಿ ತಪ್ಪಿ ಹಾರಿದ ಭಾರ್ಗವಾಸ್ತ್ರ ಪಾಂಚಾಲ ಯೋಧರಿದ್ದಲ್ಲಿಗೆ ಸಾಗಿ ಅಸಂಖ್ಯ ಯೋಧರ ಹತ್ಯೆಗೆ ಕಾರಣವಾಯಿತು.
ಹೀಗಾಗಲು ಕೌರವ ಪಕ್ಷದಿಂದ ಜಯಘೋಷಗಳು ಮೊಳಗಿದವು. “ಭಲೇ ಕರ್ಣ ಭಲಾ…” ಅದ್ಬುತ ಅತ್ಯದ್ಬುತ ಎಂಬಂತೆ ಉದ್ಘಾರಗಳು ಒಮ್ಮಿಂದೊಮ್ಮೆ ಹೆಚ್ಚಾಗತೊಡಗಿತು. ಭೀಮಸೇನನಿಗೆ ವೈರಿಗಳ ಈ ಸಂಭ್ರಮ ಕಂಡು ಅರ್ಜುನನ ಮೇಲೆ ಕೋಪ ಉಕ್ಕೇರತೊಡಗಿತು. “ಹೇ ಅರ್ಜುನಾ! ನೀನೇನು ಮಾಡುತ್ತಿರುವೆ? ಪಾಪಿಷ್ಟನಾದ ಕರ್ಣ ಧರ್ಮ ಮೀರಿ ಪಾಂಚಾಲಯೋಧರನ್ನು ನಿನ್ನೆದುರಲ್ಲಿಯೇ ಹೇಗೆ ಸಂಹರಿಸಲು ಸಾಧ್ಯವಾಯಿತು. ಸಾಕ್ಷಾತ್ ಪರಶಿವನ ಬಾಹುಗಳೊಡನೆ ಸೆಣಸಿದ ನೀನೆಲ್ಲಿ? ಈ ಕರ್ಣನೆಲ್ಲಿ? ಸಶರೀರಿಯಾಗಿ ದೇವಲೋಕ ಏರಿ, ದೇವತೆಗಳಿಗೆ ಅಸಾಧ್ಯವಾಗಿದ್ದ ನಿವಾತಕವಚರನ್ನು ಏಕಾಂಗಿಯಾಗಿ ನಿರ್ನಾಮಗೊಳಿಸಿದ ನಿನ್ನೆದುರು ಈ ಸೂತ ಪುತ್ರ ನಗಣ್ಯನೇ ಆಗಬೇಕಿತ್ತು, ಆದರೆ ನೀನು ಪ್ರಯೋಗಿಸುವ ಶರವರ್ಷವನ್ನೆಲ್ಲ ಈ ರಾಧೇಯ ನುಂಗಿ ಹಾಕುತ್ತಿದ್ದಾನೆ. ನೀನೇಕೋ ಇಂದು ಅತಿ ಸೌಮ್ಯನಾಗಿ ಯುದ್ದ ಮಾಡುತ್ತಿರುವೆ ಎಂದೆಣಿಸುತ್ತಿದೆ. ಅಲ್ಲದಿದ್ದರೆ ಅಂದು ಕೌರವ ಸಹಿತ ಕರ್ಣನನ್ನು ಇನ್ನಿಲ್ಲದಂತೆ ದಂಡಿಸಿ ಕಂಡತ್ತ ಕಡೆ ಓಡಿ ಹೋಗುವಂತೆ ಮಾಡಿದ್ದ ಗಂಧರ್ವ ಚಿತ್ರಸೇನನನ್ನು ನೀನು ಕ್ಷಣಾರ್ಧದಲ್ಲಿ ಸೋಲಿಸಿದ್ದೆ. ಇಂದು ನೀನೇಕೆ ಇಷ್ಟು ದಾಕ್ಷಿಣ್ಯ ತೋರುತ್ತಾ ಯುದ್ದ ಮಾಡುತ್ತಿರುವೆ? ಖಾಂಡವ ವನ ದಹನ ಕಾಲದಲ್ಲಿ ದೇವರಾಜ ಇಂದ್ರನನ್ನೇ ತಡೆ ಹಿಡಿದಿದ್ದ ನಿನಗೆ ಮನುಷ್ಯ ಮಾತ್ರನಾದ ಈತ ಯಾವ ಲೆಕ್ಕ? ಹೇ ಅರ್ಜುನಾ! ಈತನ ಬಗ್ಗೆ ಕರುಣೆ ತೋರಬೇಡ, ನಮ್ಮನ್ನು ಎಣ್ಣೆ ತೆಗೆದ ಎಳ್ಳಿನಂತೆ ನಪುಂಸಕರು ಈ ಪಾಂಡವರು ಎಂದು ಹೀಯಾಳಿಸಿದ್ದ ಕರ್ಣನಿಗೆ ನಿನ್ನ ನಿಜ ಪೌರುಷ ತೋರಿಸು. ಗೌ ಗೌ ಎಂದು ಕೇಕೆ ಹಾಕಿ ನಮ್ಮ ವಲ್ಲಭೆ ದ್ರೌಪದಿಯನ್ನು ಹಸು, ನಾವೈವರು ಬೆಂಬತ್ತಿ ಓಡುವ ಹೋರಿಗಳು ಎಂಬಂತೆ ಸಂಸ್ಕಾರ ಹೀನನಾಗಿ ನಿಂದಿಸಿದ್ದ ಪಾತಕಿಗೆ ತಕ್ಕ ಶಾಸ್ತಿ ಮಾಡು. ನೀನು ಹಾಗೆ ಮಾಡದೆ ಉಳಿದೆಯಾದರೆ ಪ್ರತಿಷ್ಟೆಯ ಕಣವಾಗಿಯೂ – ಪಣವಾಗಿಯೂ ಸಾಗುತ್ತಿರುವ ಈ ಸಮರದಲ್ಲಿ ಕರ್ಣನೇ ಶ್ರೇಷ್ಟ ಎಂಬಂತೆ ಭ್ರಮೆಗೊಳಗಾದ ಕುರು ಸೇನೆ ಜಯಘೋಷ ಹಾಕುತ್ತಿರುವುದು ನಿಜ ಎಂಬಂತೆ ಲೋಕವೂ ಒಪ್ಪಿಕೊಳ್ಳಬೇಕಾದೀತು. ಅರ್ಜುನಾ ಈಗ ಸವ್ಯಸಾಚಿ ಧನಂಜಯನ ನಿಜ ಶಕ್ತಿ ಅನಾವರಣಗೊಳ್ಳಬೇಕಾದ ಸಮಯ ಬಂದಿದೆ. ತಡ ಮಾಡದೆ ಪೂರ್ಣ ಬಲದಿಂದ ಕರ್ಣನ ಸಂಹಾರ ಮಾಡು” ಎಂದನು.
ಭೀಮನ ಮಾತು ಕೇಳುತ್ತಿದ್ದಂತೆ ಅರ್ಜುನನಲ್ಲಿ ಸಂಚಲನವೇ ಉಂಟಾಯಿತು….
ಮುಂದುವರಿಯುವುದು…



















