32.8 C
Udupi
Thursday, March 12, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 458

ಭರತೇಶ ಶೆಟ್ಟಿ, ಎಕ್ಕಾರ್

ಬಲಭದ್ರದೇವನು ಬಂದ ಬಳಿಕ ತನ್ನ ಸೋದರ ಕೃಷ್ಣನನ್ನು ನೋಡಿ ಮಾತನಾಡಿಸಿ, ಪಾಂಡವರಿಂದ ಯಥೋಚಿತ ಸತ್ಕಾರ ಸ್ವೀಕರಿಸಿ ಶಿಷ್ಯರಾದ ಭೀಮ ದುರ್ಯೋಧನರನ್ನು ಆಶೀರ್ವದಿಸಿ ತನ್ನ ಯಾತ್ರಾ ಕಥನವನ್ನು ಶ್ರೀಕೃಷ್ಣನಿಗೆ ವಿವರಿಸಿ ಹೇಳಿಯಾಗಿದೆ. ಇನ್ನೇನು ಅಂತಿಮ ಹಣಾಹಣಿ ಗದಾಯುದ್ದ ಆರಂಭವಾಗಬೇಕಿದೆ.

ಬಲರಾಮ ಶ್ರೀ ಕೃಷ್ಣನನ್ನುದ್ದೇಶಿ “ಕೃಷ್ಣಾ! ನಾವೀರ್ವರು ವಾಸ್ತವ ಜೀವನದಲ್ಲಿ ದೇಹ ಎರಡಾದರೂ ನಾವೇನೆಂದು ನಮಗೆ ತಿಳಿದಿದೆ. ನಿನ್ನನ್ನು ಬಿಟ್ಟು ನಾನಿರಲಾರೆ. ಹಾಗಿರುವಾಗ ಎರಡು ಪಕ್ಷಗಳಾಗಿ ನಾವು ಹೋರಾಡುವುದೆಂತು ಸಾಧ್ಯ? ಮೇಲಾಗಿ ಪಾಂಡವ ಕೌರವರು ನಮಗೆ ಸಮಾನ ಬಂಧುಗಳು. ಇವರೊಳಗೆ ಏರ್ಪಟ್ಟ ಕದನದಲ್ಲಿ ನೀನು ಯುದ್ದ ಮಾಡದಿದ್ದರೂ ಪಾಂಡವರ ಪಕ್ಷ ವಹಿಸಿರುವೆ. ನನಗೆ ಬಂಧು ಕಲಹ ನೋಡುವ ಮನಸ್ಸಿಲ್ಲದ ಕಾರಣ ಈ ವಿದ್ಯಮಾನವನ್ನು ಬಹಿಷ್ಕರಿಸಿ ತೀರ್ಥಾಟನೆಗೆ ಹೊರಟವನು ನಾನು. ಆದರೆ ಈಗ ಮರಳಿ ಬಂದರೆ ನಮ್ಮವನಾದ ದುರ್ಯೋಧನ ಆತನ ಪಾಲಿಗಾಗಿರುವ ಸೋಲಿಗೆ ಕೃಷ್ಣಾ ನೀನೇ ಕಾರಣ ಎಂದು ನನ್ನಲ್ಲಿ ದೂರಿಕೊಂಡಿದ್ದಾನೆ. ಆದದ್ದು ಆಗಿ ಹೋಗಿದೆ, ಸಂಧಿ ಮಾಡಿಕೋ ನಾನು ನಿಂತು ಈ ಯುದ್ದವನ್ನು ಒಪ್ಪಂದದ ಮುಖೇನ ಕೊನೆಗೊಳಿಸುವೆ ಎಂದು ಹೇಳಿದೆನಾದರೂ ‘ಈ ತನಕ ನನಗಾಗಿ ಪ್ರಾಣವನ್ನು ಸಮರ್ಪಿಸಿರುವ ಸೇನೆಗೂ, ಮಿತ್ರರಿಗೂ, ಸೋದರರಿಗೂ ನ್ಯಾಯ ಒದಗಿಸಬೇಕಾಗಿದೆ. ತುಂಬಾ ತಡವಾಗಿದೆ, ಇನ್ನು ಮುರಿದ ಸಂಧಿ ಬೆಸೆಯಲಾಗದು’ ಎಂದು ದುರ್ಯೋಧನ ನುಡಿದಿದ್ದಾನೆ. ಹೀಗಿರಲು ನಾನು ಮರಳಿ ಬಂದಿದ್ದರೂ ಈ ರಣಕ್ಷೇತ್ರದಲ್ಲಿ ಸಾಗಲಿರುವ ಬಂಧುಕಲಹ ನೋಡುವ ಮನಸ್ಥಿತಿ ನನಗಿಲ್ಲ. ಮೊದಲಿನಿಂದಲೂ ಇವರ ಕೌಟುಂಬಿಕ ವ್ಯಾಜ್ಯದಿಂದ ನಾನು ದೂರ ಉಳಿದವನು. ಈಗಲೂ ಭಾಗಿಯಾಗಲಾರೆ. ದೈವೇಚ್ಚೆ ಏನಿದೆಯೊ ಅದರಂತೆ ನಡೆಯಲಿ” ಎಂದು ಹೇಳಿ ಅಲ್ಲಿಂದ ನೇರವಾಗಿ ದ್ವಾರಕೆಗೆ ಹೋಗಲು ಸಿದ್ಧನಾದನು. ಸಾತ್ಯಕಿಯೂ ಬಲರಾಮನೊಂದಿಗೆ ದ್ವಾರಕೆಯತ್ತ ಹೊರಟು ಹೋದನು.

ಭೀಮ ದುರ್ಯೋಧನರು ತಮ್ಮ ತಮ್ಮ ಉಡುಗೆಗಳನ್ನು ಬಿಗಿದು ಕಟ್ಟಿ, ಸಡ್ಡು ಹೊಡೆದು ಗದೆಗಳನ್ನು ತೂಗಿ ತಿರುಗಿಸುತ್ತಾ ಒಬ್ಬರನ್ನೊಬ್ಬರು ನೋಡಿಕೊಂಡರು. ಕಣ್ಣಿನ‌ ಎವೆಗಳನ್ನು ಒಂದಿಷ್ಟೂ ಮುಚ್ಚಿಕೊಳ್ಳದೆ ಪರಸ್ಪರ ದ್ವೇಷಾಗ್ನಿ ಸೂಸುತ್ತಾ, ರೋಷಕುಲಿತರಾಗಿ ದುರುಗುಟ್ಟುತ್ತಾ, ಕಂಗಳಿಂದ ಕಿಂಗಿಡಿಗಳನ್ನು ಕಾರುತ್ತಾ ನೊಣೆದು ನುಂಗಿ ಬಿಡುವಂತೆ ಭೀಮ ಕೌರವರು ನೋಡತೊಡಗಿದ್ದಾರೆ. ಮೈಕುಲುಕುತ್ತಾ, ಭುಜ ಬಾಹುಗಳನ್ನು ಅಲುಗುತ್ತಾ ಗದೆಯನ್ನು ತಿರುಗಿಸುತ್ತಾ ವೃತ್ತಾಕಾರದಲ್ಲಿ ಸುತ್ತು ಹೊಡೆದರು. ಈಗಲೆ ಇಲ್ಲ ಇನ್ನು ಮುಂದಿನ ಕ್ಷಣದಲ್ಲಿ ಗದಾಯುದ್ಧ ಆರಂಭವಾಗುತ್ತದೆ ಎಂಬಂತೆ ನೋಟಕರು ಬೆರಗಾಗಿ ಸ್ಥಂಭೀಭೂತರಾಗಿ ವೀಕ್ಷಿಸತೊಡಗಿದ್ದಾರೆ.

ಆಗ ಮೊದಲಾಗಿ ಭೀಮಸೇನನು ಮಾತಿಗೆ ತೊಡಗಿ “ಹೇ ದುರ್ಯೋಧನಾ! ನೀನೂ, ನಿನ್ನ ತಂದೆಯೂ ಸೇರಿ ನಮಗೆ ಮಾಡಿದ ಸರ್ವ ಅಪರಾಧಗಳನ್ನು ಸ್ಮರಿಸಿಕೋ. ಪಾಂಚಾಲದ ರಾಜನಂದನೆಯಾದ ದ್ರೌಪದಿ ಕುಲವಧುವಾಗಿ ಆದರಣೀಯಳು, ಅವಳನ್ನು ಅಮಾನುಷವಾಗಿ ರಾಜಸಭೆಗೆ ಹಿಂಸಿಸುತ್ತಾ ಎಳೆದು ತಂದು ಮಾನಭಂಗಕ್ಕೆ ಯತ್ನಿಸಿರುವ ವಿಲಕ್ಷಣ ಕ್ಷಣಗಳನ್ನು ಜ್ಞಾಪಿಸಿಕೋ. ಆ ದಿನ ಮೃಗವಾಗಿ ವರ್ತಿಸಿದ್ದ ನಿನ್ನ ತಮ್ಮ ದುಷ್ಟ ದುಶ್ಯಾಸನನ ಉದರ ಬಗೆದು, ಸೀಳಿ ಕರುಳು ಕಿತ್ತು ರಕ್ತಪಾನ ಮಾಡಿರುವೆ. ಕೇಕೆ ಹಾಕಿ ಸಂಭ್ರಮಿಸಿದ್ದ ನಿನ್ನ ಸೋದರರು, ಮಿತ್ರ ಕರ್ಣ, ದುರುಳ ಮಾವ ಶಕುನಿ ಅವರವರ ಪಾಪ ಕರ್ಮಕ್ಕೆ ಬಲಿಯಾಗಿದ್ದಾರೆ. ನಿನ್ನಾಪ್ತರೂ, ನಿನಗೆ ಸ್ವಜನ ಬಂಧುಗಳೂ ಆಗಿದ್ದವರ ವಿಯೋಗದ ದುಃಖ ಅನುಭವಿಸುವುದು ನಿನ್ನ ಪ್ರಾರಬ್ಧವಾಗಿರಬೇಕು – ಅದಕ್ಕಾಗಿ ನೀನೊಬ್ಬ ಈ ತನಕ ಬದುಕುಳಿದಿರುವೆ. ಅದಕ್ಕೂ ಮೊದಲು ನೀನು ಗೈದಿರುವ ಪಾತಕಗಳೇನು ಕಡಿಮೆಯೆ? ವಿಷದ ಲಡ್ಡುಗೆ ತಿನಿಸಿದೆ, ಅರಗಿನ ಅರಮನೆಯಲ್ಲಿ ನಮ್ಮನ್ನು ಸುಡುವ ಪ್ರಯತ್ನ ಮಾಡಿದೆ, ನಿಷ್ಕರುಣಿಯಾಗಿ ನಮ್ಮನ್ನು ವನವಾಸ ಅಜ್ಞಾತವಾಸ ಅನುಭವಿಸುವಂತೆ ಮಾಡಿದೆ. ಆ ಎಲ್ಲಾ ಮಹಾಪಾಪಗಳ ಫಲಸ್ವರೂಪವಾಗಿ ಈಗ ನೀನೊಬ್ಬನುಳಿದು ಎಲ್ಲ ದುಃಖ ಅನುಭವಿಸುವಂತಾಗಿದೆ. ನಿನ್ನನ್ನೂ ಉಳಿಸಲಾರೆ. ನನ್ನ ರುಧಿರಮುಖಿ ಗದೆ ನಿನ್ನ ರುಧಿರಾಭಿಷೇಚನಕ್ಕೆ ಹಾತೊರೆಯುತ್ತಿದೆ. ನಾನೂ ಸನ್ನದ್ಧನಾಗಿರುವೆ” ಎಂದು ಘರ್ಜಿಸಿದನು.

ಆಗ ದುರ್ಯೋಧನ “ಹೇ ಭೀಮಾ! ಸುಮ್ಮನೆ ವ್ಯರ್ಥ ಪ್ರಲಾಪ ಮಾಡುತ್ತಿರುವೆ. ನಾನೊಬ್ಬ ಯುವರಾಜ, ಸಾಮ್ರಾಜ್ಯಕ್ಕಾಗಿ ರಾಜಕೀಯ ನನಗೆ ಧರ್ಮ. ವೈರಿಗಳನ್ನು ಬೆಳೆಯಲು ಬೊಡದೆ ಮುಗಿಸುವುದು ರಾಜನೀತಿ. ನೀನೇನು ಸಜ್ಜನನೆ? ನಿನ್ನ ಕಾರಣದಿಂದಾಗಿ ವೈರ ಉತ್ಪತ್ತಿಯಾಗಿರುವುದು. ಎಳವೆಯಲ್ಲಿ ನೀನು ಪೀಡಿಸಿದ ಪೀಡನೆ, ಮರ ಕುಲುಕಿ ನಮ್ಮೆಲ್ಲರನ್ನು ಬೀಳಿಸಿ ಕೈಕಾಲು ಮುರಿಯುವಂತೆ ಮಾಡಿದ್ದವನು‌ ನೀನು. ಹೇಗೋ ಅದೃಷ್ಟದಿಂದ ನಾವು ಸಾಯದೆ ಬದುಕುಳಿದೆವು. ನದಿಯ ನೀರಲ್ಲಿ ಮುಳುಗಿಸಿ ಮುಳುಗಿಸಿ ಚಿತ್ರಹಿಂಸೆ ನೀಡಿದ್ದೆ. ಆಗಲೂ ಸುದೈವವಶಾತ್ ನಾವು ಹೇಗೋ ಬದುಕಿಕೊಂಡೆವು. ಅವುಗಳೆಲ್ಲಾ ನಿನ್ನಿಂದಾದ ಕೊಲೆ ಯತ್ನಗಳಲ್ಲವೆ? ಪ್ರತಿಯಾಗಿ ನಾವು ಹೂಡಿದ ತಂತ್ರಗಳು ಮಾತ್ರ ಅಪರಾಧವಾಗಿ ಕಾಣುತ್ತಿವೆ? ಮಯನ ಮಂಟಪದಲ್ಲಿ ಸುಮನಸ್ಕರಾಗಿ ಬಂದಿದ್ದ ನಮ್ಮನ್ನು ಅವಮಾನಿಸಿ ನಗೆಯಾಡಿದ್ದು ವಿಸ್ಮರಣೆಯಾಗಿ ಹೋಗಿದೆಯಾ ನಿನಗೆ? ಆ ಸೇಡು ನನ್ನಲ್ಲಿ ಉಳಿದ ಕಾರಣದಿಂದ ನೀವು ತಿರಸ್ಕೃತರಾದಿರಿ. ಛಲದಿಂದ ಹೋರಾಡಲು ಸಿದ್ದನಾದೆ. ನಿನ್ನ ಅಟ್ಟಹಾಸ ನಿಲ್ಲಿಸು, ನೀರಿಲ್ಲದ ಬರಿಯ ಮೋಡದಂತೆ ಏನೇನೊ ಹರಟುತ್ತಿರುವೆ. ಅಂಜುವವನು ನಾನಲ್ಲ, ಏಕಾಂಗಿಯಾಗಿ ನಿಮ್ಮೆಲ್ಲರ ಅಪರಾಧಗಳಿಗೆ ಶಿಕ್ಷೆಯಿತ್ತು ನನ್ನವರಿಗೆ ಶಾಂತಿ ಒದಗಿಸುವೆ. ನನ್ನ ಸೇಡನ್ನೂ ತೀರಿಸುವೆ. ಬಾ ಮುಂದೆ” ಎಂದು ಆರ್ಭಟಿಸಿದನು.

ಮಾತಿಗೆ ಮಾತು ಬೆಳೆಯಿತು, ವಾದ ವಿವಾದವಾಗಿ ಮುಂಬರಿದು ಮೇರೆ ಮೀರಿತು. ಇಬ್ಬರೂ ಕೈಯೆತ್ತಿದರು. ಗದೆಗಳನ್ನು ತಿರುವಿ ಬೀಸಿ ಅಪ್ಪಳಿಸತೊಡಗಿದರು. ಭಾರವೂ, ಬಲಯುತವೂ ಆದ ಭೀಮ ದುರ್ಯೋಧನರ ಗದೆಗಳು ಒಂದನ್ನೊಂದು ಘರ್ಷಿಸಿ ಕಿಡಿ ಕಾರುತ್ತಾ, ಭೀಕರ ಶಬ್ದವನ್ನು ಹುಟ್ಟಿಸತೊಡಗಿದವು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page