ಭಾಗ – 415
ಭರತೇಶ್ ಶೆಟ್ಟಿ, ಎಕ್ಕಾರ್

ಭೀಮ ರೌದ್ರಾವತಾರದಲ್ಲಿ ಅತಿಹೃಷ್ಟನಾಗಿದ್ದು ದುಶ್ಯಾಸನನ ರಕ್ತಪಾನ ಮಾಡುತ್ತಿರುವುದನ್ನು ನೋಡುತ್ತಿದ್ದ ಉಭಯ ಪಕ್ಷಗಳ ಸೈನಿಕರು ವೈರ ವಿಸ್ಮರಣೆಯಾಗಿದೆಯೊ ಎಂಬಂತೆ, ಮೈಮರೆತು ಆಯುಧಗಳನ್ನು ಕೆಳಗಿರಿಸಿ ಹೆದರಿ ಮೂಕವಿಸ್ಮಿತರಾಗಿದ್ದಾರೆ. ಕೆಲವರಂತೂ ಭೀಭತ್ಸ ದೃಶ್ಯ ನೋಡಲಾಗದೆ ಕಣ್ಮುಚ್ಚಿದ್ದಾರೆ. ಇನ್ನು ಕೆಲವರು ವಿಮುಖರಾಗಿ ನೋಡಲಾಗದೆ ತಿರುಗಿ ನಿಂತಿದ್ದಾರೆ. ಇನ್ನು ಹಲವರು ಆ ಸ್ಥಳದಿಂದ ಓಡಿ ದೂರ ಸರಿದು ಕಾಣದಂತೆ ಮರೆಗೆ ಸರಿದು ನಿಂತಿದ್ದಾರೆ. ಮತ್ತೆ ಕೆಲವರು ಅಮಾನುಷವಾದ ಕೃತಿಯನ್ನು ಕಂಡು ಕುಸಿದು ಬಿದ್ದಿದ್ದಾರೆ. ಈ ಸ್ಥಿತಿಯಲ್ಲೂ ಗಟ್ಟಿ ಹೃದಯದವರು ಸಹಿಸಿಕೊಂಡು ನೋಡುತ್ತಾ ಉದ್ಘಾರಪೂರ್ಣವಾದ ಮಾತುಗಳನ್ನು ಹೇಳುತ್ತಿದ್ದಾರೆ “ಈ ಭೀಮಸೇನ ಕೇವಲ ರಾಕ್ಷಸಿಯ ಗಂಡನಲ್ಲ ಸ್ವಯಂ ರಾಕ್ಷಸನೇ ಆಗಿ ಹೋಗಿದ್ದಾನೆ” ಮತ್ತೆ ಕೆಲವರು “ರಾಕ್ಷಸನಾದರೂ ಇಷ್ಟು ಭೀಕರನಾಗಲಾರ, ಹಸಿವಿಗಾಗಿ ಮಾಂಸ ಭಕ್ಷಣೆ ಮಾಡುವುದಿದ್ದರೂ ತಿನ್ನುವ ಕ್ರಮದಲ್ಲಿ ತಿನ್ನಬಹುದೇನೋ! ಆದರೆ ಈತ ಕ್ರೂರ ಮೃಗದಂತೆ ಚಿತ್ರ ಹಿಂಸೆ ನೀಡುತ್ತಾ ಜೀವಂತ ಶರೀರವನ್ನು ಭಕ್ಷಿಸುತ್ತಿದ್ದಾನೆ” ಎಂದು ಪರಮಾಶ್ಚರ್ಯ, ಅತಿಭಯಾನ್ವಿತರಾಗಿ ನುಡಿಯುತ್ತಿದ್ದಾರೆ. ಇನ್ನುಳಿದವರಲ್ಲಿ ಪ್ರಾಜ್ಞರಾದವರು ತುಲನೆ ಮಾಡಿ ವಿಮರ್ಶಾತ್ಮಕವಾಗಿ ಹೇಳತೊಡಗಿದ್ದಾರೆ “ಅರ್ಜುನಷ್ಟು ಭೀಮ ರಣ ಭೀಕರನಲ್ಲ. ಕೋಟಿಗಿಂತಲೂ ಅಧಿಕ ಸಂಶಪ್ತಕರನ್ನು, ಬಹು ಅಕ್ಷೋಹಿಣಿ ಸೇನೆಯನ್ನು, ರಥಿಕ ಮಹಾರಥಿಯಾದಿಗಳ ವಧೆಯ ಸಂಖ್ಯೆಯ ಲೆಕ್ಕ ನೋಡಿದರೆ, ಅರ್ಜುನ ಮಹಾ ಸೇನಾ ನಾಶಗೈದವನು. ಭೀಭತ್ಸು ಎಂಬ ಹೆಸರುಳ್ಳ ಅರ್ಜುನ ಯಾರನ್ನೂ ಚಿತ್ರಹಿಂಸೆ ನೀಡದೆ ಕೊಂದು ಹೆಸರಿಗೆ ತಕ್ಕ ವರ್ತನೆ ತೋರುತ್ತಾನೆ, ಆದರೆ ಈ ಭೀಮ!” ಎನ್ನುತ್ತಾ ಆಶ್ಚರ್ಯ ಚಕಿತರಾಗಿದ್ದಾರೆ. ಇನ್ನೂ ಕೆಲವರು “ಈತ ಪರಮ ಸಾತ್ವಿಕ, ಧರ್ಮಿಷ್ಟ ಧರ್ಮರಾಯನನ್ನು ಹೆತ್ತ ಕುಂತಿಯ ಗರ್ಭದಲ್ಲಿ ಬೆಳೆದು ಹುಟ್ಟಿ ಬಂದವನೋ!” ಎಂಬಂತೆ ಸಂದೇಹ ವ್ಯಕ್ತ ಪಡಿಸುತ್ತಿದ್ದಾರೆ. “ನ ವೈ ಮನುಷ್ಯೋsಯಂ” “ಇವನು ಖಂಡಿತವಾಗಿಯೂ ಮನುಷ್ಯನಾಗಿರಲು ಸಾಧ್ಯವೇ ಇಲ್ಲ. ಮಾನುಷ ಕೋಪ ಯಾವ ಮಟ್ಟದ ಅತಿರೇಕ ತಲುಪಿದರೂ ಈ ರೀತಿ ವ್ಯವಹರಿಸಲು ಸಾಧ್ಯವೇ ಇಲ್ಲ” ಎಂಬ ನಿಖರ ತೀರ್ಪನ್ನು ಉಚ್ಚರಿಸತೊಡಗಿದ್ದಾರೆ.
ಭೀಮನಿಗೆ ಇದ್ಯಾವುದರ ಗೊಡವೆಯೂ ಇಲ್ಲ. ಅಂತರ ಕಾಯ್ದು ಸುತ್ತ ನೆರೆದಿರುವ ಎಲ್ಲರನ್ನು ಒಮ್ಮೆ ದಿಟ್ಟಿಸಿ ನೋಡುತ್ತಾ ಯಾರು ತನ್ನ ಪಕ್ಷ, ಯಾರು ವಿರೋಧಿ ಪಕ್ಷ ಎಂಬ ಅರ್ಥ ವ್ಯತ್ಯಾಸವನ್ನೂ ಪರಿಗಣಿಸದೆ ಸಮಗ್ರವಾಗಿ ಸವಾಲೆಸೆಯತೊಡಗಿದ್ದಾನೆ “ಹೇ ಅರ್ಜುನಾ! ನನಗೆ ಈ ದುಶ್ಯಾಸನ ಕೇವಲ ಪರಮ ವೈರಿ. ಅದೂ ಮನ ಕಲಕುವ ಪಾತಕಗೈದ ಮಹಾಪಾಪಿ. ನಿನಗೇನಾದರು ಇವ ದೊಡ್ಡಪ್ಪನ ಮಗ ಎಂಬ ಭಾವದಿಂದ ಸೋದರ ಎಂಬಂತೆ ಮಮಕಾರ ಹುಟ್ಟಿದ್ದರೆ ಎತ್ತು ನಿನ್ನ ಗಾಂಡೀವ, ಬಾ ಸಾಧ್ಯವಾದರೆ ರಕ್ಷಿಸಿಕೋ!,
ಹೇ ಕೃಷ್ಣಾ! ನೀನು ಲೀಲಾ ಮಾನುಷ ಪುರುಷ ಸ್ವರೂಪದ ಅತಿಮಾನುಷ ಶಕ್ತಿಯಿರುವವನಲ್ಲವೇ? ನಿನಗೇನಾದರು ನನ್ನ ಕೃತ್ಯ ಅಸಹ್ಯ ಎಂದಾಗಿದೆಯೇ? ಬಾ! ನನ್ನನ್ನು ತಡೆಯುವ ಪ್ರಯತ್ನ ಮಾಡು…
ಹೇ! ಪಾಪಿ ಕರ್ಣಾ! ದ್ಯೂತ ಭವನದಲ್ಲಿ ಗೌಃ ಗೌಃ ಎಂದು ಕೇಕೆ ಹಾಕಿ ವಿಕಟ ನಗೆಯಾಡುತ್ತಾ ಈ ದುಶ್ಯಾಸನನಿಗೆ ಸಹಚರನಾಗಿ ದ್ರೌಪದಿಯನ್ನು ಹಸು ಎಂದೂ, ನಾವೈವರನ್ನು ಹಸುವಿನ ಬೆಂಬತ್ತಿ ಹೋಗುವ ಎತ್ತುಗಳೆಂದೂ ಹೋಲಿಕೆ ಮಾಡಿ ಹೀಯಾಳಿಸಿದ ನೀಚನೇ ಬಾ ನೀನು. ನಿನ್ನಲ್ಲಿ ಸಾಮರ್ಥ್ಯವಿದ್ದರೆ ನಿನ್ನ ಸಹಚಾರಿಯನ್ನು ರಕ್ಷಿಸು…
ಹೇ ಕುತಂತ್ರಿ ಶಕುನಿಮಾಮಾ! ಬಾ ನಿನ್ನದೇನಾದರು ತಂತ್ರವಿದೆಯೋ? ಈ ವೃಕೋದರನಿಗೆ ತಿನಿಸುವ ವಿಷವಿದೆಯೋ, ಸುಡುವ ಲಾಕ್ಷಗೃಹವಿದೆಯೋ? ಬಾ ತಂದು ಕೊಡು ಇಲ್ಲಾ ತೋರಿಸು. ನಿನ್ನ ಪ್ರೀತಿಯ ತಂಗಿಯ ಮಗ, ನಿನ್ನ ಮುದ್ದು ಅಳಿಯನನ್ನು ರಕ್ಷಿಸಬಲ್ಲೆಯಾ? ಬಾ ಓ ಕಪಟೀ ಬಾ!…
ಮಹಾಛಲಗಾರ, ಹಠವಾದಿ ದುಷ್ಟ ದುರ್ಯೋಧನ ನೋಡು ನಿನ್ನ ತಮ್ಮ ವಿಲವಿಲ ಒದ್ದಾಡುತ್ತಾ ಕೊನೆಯ ಕ್ಷಣದ ಕೆಲವೇ ಕೆಲವು ಉಸಿರುಗಳನ್ನೆಯುತ್ತಿದ್ದಾನೆ. ಹಠವಿದೆಯೋ ನಿನ್ನೆದೆಯಲ್ಲಿ? ಕೆಚ್ಚಿದೆಯೋ ನಿನಗೇನಾದರು? ಬಾರೋ ಹೇ ಕುರು ಕುನ್ನಿ! ನಿನ್ನ ತಮ್ಮನನ್ನು ಉಳಿಸಿಕೋ” ಎಂಬಂತೆ ಎಲ್ಲ ಪ್ರಮುಖರನ್ನೂ ಕರೆಕರೆದು ತೋರಿಸುತ್ತಾ ದುಶ್ಯಾಸನನ ಸ್ಯಾಯು, ಮಾಂಸ, ಮಜ್ಜೆ ಹರಿದು ಕಿತ್ತು ತಿನ್ನುತ್ತಾ, ಎದೆ ಸೀಳಿ ಬೊಗಸೆ ಬೊಗಸೆ ಬಗೆದು ರಕ್ತ ಕುಡಿಯುತ್ತಾ ಕೇಳತೊಡಗಿದನು. ನಿಸ್ತೇಜನಾಗಿ ಕೈಕಾಲು ಅಲುಗಾಡಿಸಲೂ ಆಗದೆ, ಉಸಿರೆಳೆದು ಬಿಡಲೂ ತ್ರಾಣವಿಲ್ಲದ ದುಶ್ಯಾಸನ ಬಿದ್ದಿದ್ದಾನೆ. ಜೀವನ್ಮರಣ ಹೋರಾಟದಲ್ಲಿರುವ ದುಶ್ಯಾಸನನ ಗಲ್ಲವನ್ನಾವರಿಸಿ ಎಡಗೈಯಲ್ಲಿ ಹಿಡಿದು, ಹೆಗಲ ಭಾಗದಲ್ಲಿ ಬಲಗೈಯನ್ನು ಇಟ್ಟು ಬಲವಾಗಿ ಒತ್ತಿ ವಿರುದ್ದ ದಿಕ್ಕಿಗೆ ಜಗ್ಗಿದ. ತೋರವಾಗಿದ್ದ ದುಶ್ಯಾಸನನ ಕೊರಳು, ಭೀಮಬಲನ ಹಿಡಿಯ ಸೆಳೆತದ ಭರದಲ್ಲಿ ಸಪೂರವಾಗುತ್ತಾ ತುಂಡಾಗಿ ರುಂಡ ಮುಂಡ ಬೇರ್ಪಡಿಸಲ್ಪಟ್ಟಿತ್ತು. ಜಗ್ಗಿದ ವೇಗಕ್ಕೆ ರುಂಡ ಕೈಯಿಂದ ಜಾರಿ ಚಿಮ್ಮಿ ಹಾರಿ ದೂರ ಬಿದ್ದು, ಚೆಂಡಿನಂತೆ ಪುಟಿದು, ನೆಗೆದು, ಹೊರಳುತ್ತಾ ಹೋಯಿತು. ಒಮ್ಮೆಗೆ ಕಾಲುಗಳನ್ನು ತುಸು ಅಲುಗಾಡಿಸಿದ ದುಶ್ಯಾಸನ ಹತ ಪ್ರಾಣನಾದ. ರುಂಡವಿಲ್ಲದ ಮುಂಡದ ಕೊರಳ ಸೆರೆಗಳ ನರನಾಡಿಗಳಿಂದ ಬಿಸಿರಕ್ತ ಕಾರಂಜಿಂತೆ ಚಿಮ್ಮುತ್ತಿದೆ. ಭುಜಭಾಗದಲ್ಲಿ ಮುಂಡವನ್ನು ಎತ್ತಿ ಮುಂದಕ್ಕೆ ಮಡಚಿದಂತೆ ಬಾಗಿಸಿ ಚಿಮ್ಮುವ ರುಧಿರವನ್ನು ಭೀಮ ತನ್ನ ಮುಖಕ್ಕೆ ಬೀಳುವಂತೆ ಹಿಡಿದನು. ಬಾಯಿಯನ್ನು ಅಗಲಿಸಿ ಚಿಮ್ಮುವ ರಕ್ತ ಚಿಲುಮೆಯನ್ನು ಹೀರತೊಡಗಿದನು. ದುರ್ಯೋಧನ ತನ್ನ ರಥದಲ್ಲೇ ಕುಸಿದು ಕುಳಿತು” ತಮ್ಮಾ… ದುಶ್ಯಾಸನಾ…” ಎಂದು ಬೊಬ್ಬಿರಿದು ಅಳತೊಡಗಿದನು. ಅಸಹಾಯಕ ಶೂರನಂತಾಗಿ, ಆಹ್ವಾನವಿತ್ತು “ಬಾ ನಿನ್ನ ತಮ್ಮನನ್ನು ರಕ್ಷಿಸು” ಎಂದು ಭೀಮ ಪಂಥಾಹ್ವಾನ ನೀಡಿದರೂ ಏನೂ ಮಾಡಲಾಗದೆ ಹೋಗಿದ್ದಾನೆ.
ಈಗಂತೂ ಕಲ್ಲು ಹೃದಯ ಹೊಂದಿದವರಂತೆ, ನೋಡುತ್ತಾ ನಿಂತಿದ್ದ ಕ್ಷತ್ರಿಯರೂ ದಿಗ್ಭ್ರಾಂತರಾಗಿ ಕಣ್ಣುಗಳನ್ನು ಕೈಗಳಿಂದ ಮುಚ್ಚಿ ಕೊಂಡರು. “ಈತ ಮೃಗವೂ ಅಲ್ಲ, ರಾಕ್ಷಸನೂ ಅಲ್ಲ. ಅವೆಲ್ಲವನ್ನೂ ಮೀರಿದ ಪ್ರತ್ಯೇಕ ಅತಿ ಕ್ರೂರ ಜಂತು” ಎಂದು ಛೀಮಾರಿ ಹಾಕುತ್ತಾ, “ವೈರವಿರಲಿ, ಆದರೆ ಈ ತೆರನಾದ ವಿಕೃತಿ, ಅಮಾನುಷ, ಅಸಂಸ್ಕೃತ, ಅನಾಗರಿಕ ವರ್ತನೆ ಚಂದ್ರವಂಶೀಯ ರಾಜಕುಮಾರನಿಂದ ಅನಿರೀಕ್ಷಿತ” ಎಂದು ಹೇಳುತ್ತಾ ಹೇಯ ಕೃತ್ಯವೆಂದು ಖಂಡಿಸತೊಡಗಿದರು.
ಭೀಮನೋ ಬಲು ತೋಷಗೊಂಡು ಯಾವ ಪರಿವೆಯಾಗಲಿ, ಯಾರ ಅಭಿಮತಕ್ಕಾಗಲಿ ತಲೆಕೆಡಿಸಿಕೊಂಡಿಲ್ಲ. ವೃಕೋದರ ಪರಮ ಸಂತುಷ್ಟನಾಗಿ ಹೆಣದ ರಕ್ತ ಬಸಿದು ಬಗೆದು ಬೊಗಸೆಯಲ್ಲಿ ಹಿಡಿದು “ತಾನು ಗೈದ ಪ್ರತಿಜ್ಞೆ ಪೂರೈಸಿದೆ. ಅಧರ್ಮ ಎಸಗಿದವರಿಗೆ, ಸ್ತ್ರೀಯ ಮಾನ ಹರಣ ಮಾಡಿದವರಿಗೆ, ಮಾನವಂತ ಹೆಣ್ಣಿನ ಸೆರಗಿಗೆ ಕೈಯಿಕ್ಕಿ ಆಚಾರಹೀನನಾದವರಿಗೆ, ಅಂತಹ ನೀಚ ವಿಕೃತಿ ಮೆರೆದವರಿಗೆ ಎಂತಹ ಘೋರ ದಂಡನೆ ಒದಗುತ್ತದೆ ಎಂಬ ಪಾಠ ಲೋಕಕ್ಕಾಗಲಿ, ಅದರಿಂದ ಎಲ್ಲರೂ ಭಯಗೊಂಡು ಮುಂದೆಂದೂ ಈ ದುಶ್ಯಾಸನನಂತೆ ಅತ್ಯಾಚಾರಕ್ಕೆ ಮುಂದಾಗದಿರಲಿ” ಎಂದು ಹೇಳ ತೊಡಗಿದ. ಕೈಯಲ್ಲಿ ಹಿಡಿದ ರಕ್ತ ಲೋಳೆಯಂತೆ ಮುಂಗೈವರೆಗೆ ಇಳಿದು ತೊಟ್ಟಿಕ್ಕುತ್ತಿದೆ. ಆ ಬೊಗಸೆ ರಕ್ತವನ್ನು ನೋಡುತ್ತಾ, “ಶ್ರೇಷ್ಟತೆಯಲ್ಲಿ ತಾಯಿಯ ಎದೆಯಿಂದ ಸುರಿಯುವ ಮಮತೆ ಪ್ರೀತಿಭರಿತ ಸ್ತನ್ಯಕ್ಕಿಂತಲೂ, ಉತ್ಕೃಷ್ಟತೆಯಲ್ಲಿ ಸುರಲೋಕದ ಅಮರ ಅಮೃತಕ್ಕಿಂತಲೂ, ಸವಿಯಲ್ಲಿ ಭೂಲೋಕದ ತುಪ್ಪ ಜೇನಿನ ಮಿಶ್ರಣಕ್ಕಿಂತಲೂ, ಮೋಜಿನಲ್ಲಿ ಸಂಸ್ಕರಿಸಿದ ದ್ರಾಕ್ಷಾರಸದಿಂದ ಸಿದ್ಧವಾದ ಪಾನೀಯಕ್ಕಿಂತಲೂ, ಸಂತುಷ್ಟ ರುಚಿಯಲ್ಲಿ ಹಾಲು ಮೊಸರುಗಳಿಂದ ಕಡೆದು ಬರುವ ಮಜ್ಜಿಗೆಗಿಂತಲೂ, ಇಷ್ಟೇ ಅಲ್ಲ ಲೋಕ ಲೋಕಗಳಲ್ಲಿ ಸುಧಾಮೃತ, ಸ್ವಾದರಸಗಳುಲ್ಲ ಇನ್ನೇನೆಲ್ಲಾ ಶ್ರೇಷ್ಟಾತಿ ಶ್ರೇಷ್ಟ ಪೇಯಗಳಿವೆಯೋ… ಅದೆಲ್ಲವುಗಳಿಗಿಂತ ನನ್ನ ಮನದೊಳಗೆ ಜ್ವಲಿಸುತ್ತಿದ್ದ ಆಕ್ರೋಶಾಗ್ನಿಯನ್ನು ಉಪಶಮನಗೊಳಿಸಿದ ನನ್ನ ಜೀವಮಾನದ ಶತ್ರುವಿನ ಈ ರಕ್ತರಸವೇ ಅತ್ಯಂತ ರುಚಿಯೂ, ಶುಚಿಯೂ, ಸ್ವಾದವೂ, ಶ್ರೇಷ್ಟವೂ, ಆಸ್ವಾದನೀಯವೂ ಆಗಿದೆ. ಛೇ! ಎಲ್ಲರನ್ನೂ ಕರೆದು ಕರೆದು ಕೂಗಿ ಹೇಳಿದರೂ ಯಾರೂ ರಕ್ಷಣೆಗೆ ಬರಲಿಲ್ಲ. ಆ ಮೃತ್ಯುವೇ ಬಂದು ಈ ದುಷ್ಟನಿಗೆ ನನ್ನ ಕೈಯಿಂದ ರಕ್ಷಣೆ ನೀಡಿದಂತೆ ಪ್ರಾಣವನ್ನು ಕಿತ್ತುಕೊಂಡಿದೆ. ಪಾಪಿ ಬದುಕಿರುತ್ತಿದ್ದರೆ ಇನ್ನೂ ಒಂದಿಷ್ಟು ಪೀಡನೆ ನೀಡುತ್ತಿದ್ದೆ. ಆದರೂ ಈ ಮಹಾದುಷ್ಟ ಗೈದ ಪಾತಕಗಳಿಗೆ ಶಿಕ್ಷೆ ಕಡಿಮೆಯೇ ಆಗುತ್ತಿತ್ತು. ಹೇ ಪ್ರಿಯೇ ದ್ರೌಪದಿ! ರಾಜಾಸೂಯಾಧ್ವರದ ಅವಭೃತ ಕಲಶಾಭಿಷಿಕ್ತೆ, ನಿನ್ನ ಆ ಪುಣ್ಯ ಸುಕೋಮಲ ಕೇಶವನ್ನಿನ್ನು ಕಟ್ಟಿ ವಿನ್ಯಾಸಗೊಳಿಸಿ ಅಲಂಕರಿಸು. ಪವಿತ್ರ ಮುಡಿಗೆ ಕೈಯಿಕ್ಕಿದ ಈ ದುರುಳನ ಕೈಬೆರಳುನ್ನು ಮುರಿದು ಜಜ್ಜಿದ್ದೇನೆ. ತೋಳನ್ನು ಸಿಗಿದು ನೆಲಕ್ಕಪ್ಪಳಿಸಿದ್ದೇನೆ. ಎದೆ ಬಗೆದು ರಕ್ತ ಪಾನಮಾಡಿದ್ದೇನೆ. ಉದರ ಸೀಳಿ ಕರುಳನ್ನು ಮಾಲೆಯಾಗಿ ಧರಿಸಿ, ಮನಬಂದಂತೆ ಮಾಂಸ ಮೆದ್ದಿದ್ದೇನೆ. ಕುಲೀನೆಯಾದ ಸ್ತ್ರೀಯ ಮಾನದ ಬೆಲೆ ಏನೆಂದು ಪೂರ್ಣ ಮೌಲ್ಯ ರೂಪದಲ್ಲಿ ಕುರುಕ್ಷೇತ್ರದಲ್ಲಿ ತೋರಿದ್ದೇನೆ. ಇನ್ನು ನೀನೂ ಶಾಂತಳಾಗು” ಎಂದು ಆರ್ಭಟಿಸಿ ಹೇಳುತ್ತಾ ಅಟ್ಟಹಾಸದ ನಗೆ ಬೀರಿ ಚಿಂದಿಯಾಗಿದ್ದ ದುಶ್ಯಾಸನನ ಹೆಣದ ಮೇಲೆ ತನ್ನ ಮನಶಾಂತಿಗಾಗಿ ಮತ್ತೊಂದಷ್ಟು ಸಹಸ್ರ ಗಜತ್ರಾಣದ ವಜ್ರ ಮುಷ್ಟಿಯಲ್ಲಿ ಗುದ್ದಿದನು. ದುಶ್ಯಾಸನನಿಂದ ನಡೆದು ಹೋಗಿದ್ದ ಅನ್ಯಾಯಗಳಿಗೆ ಅದರಲ್ಲೂ ಕುಲವಧು, ಪರಮ ಪತಿವೃತೆ, ಯಾಜ್ಞಸೇನಿ ದ್ರೌಪದಿಯ ಮಾನಭಂಗ ಯತ್ನಕ್ಕೆ ಶಿಕ್ಷೆಯೆಂಬಂತೆ, ಅಣು ಅಣುವಾಗಿ ಹಿಂಸೆ ಅನುಭವಿಸುತ್ತಾ ದುಶ್ಯಾಸನ ಕಗ್ಗೊಲೆಯಾಗಿ ಹೋದನು.
ರಕ್ತದೋಕುಳಿಯಲ್ಲಿ ಮಿಂದಂತೆ ಕಾಣುತ್ತಿರುವ ಭೀಮ ಎದ್ದು ನಿಂತನು. ಭೂರಿ ಭೋಜನವಾದ ಬಳಿಕ ತೇಗನ್ನು ಹೊರ ಹಾಕಿ ಸಂತುಷ್ಟತೆ ತೋರುವಂತೆ, ರೌರವ ಸ್ವರದಲ್ಲಿ, ಕರ್ಣ ಕರ್ಕಶವಾದ ಉಚ್ಚ ಏರು ಧ್ವನಿಯಲ್ಲಿ ಆರ್ಭಟವಿಟ್ಟನು. ಧ್ವನಿಯ ತೀವ್ರತೆ ಎಷ್ಟಿತ್ತೆಂದರೆ ಸ್ವರ ತರಂಗಗಳು ಅಲೆಅಲೆಯಾಗಿ ಸುತ್ತುವರಿದು, ನಿಂತಿದ್ದ ಉಭಯ ಪಕ್ಷಗಳ ಸೇನೆಯನ್ನು ಎರಡು ಹೆಜ್ಜೆ ಹಿಂದೆ ದೂಡುತ್ತಾ ಸಾಗಿತೋ ಎಂಬಂತೆ ಭಾಸವಾಯಿತು. ಆ ಸ್ವರ ಕಂಪನ ತರಂಗಗಳು ದಶದಿಕ್ಕುಗಳಲ್ಲೂ ವ್ಯಾಪಿಸಿ,ಅಪ್ಪಳಿಸಿ ಹಲವು ಬಾರಿ ಪ್ರತಿಧ್ವನಿಸಿತು. ಭೀಮ ಬೊಬ್ಬಿಡುತ್ತಲೇ ಇದ್ದಾನೆ ಎಂಬಂತೆ ತುಸುಹೊತ್ತು ಭ್ರಾಂತಿಯಾಯಿತು.
ಹೀಗಾಗುತ್ತಿದ್ದಂತೆಯೇ ಚಿತ್ರಸೇನ ವಿಪರೀತ ಭಯಗೊಂಡನೋ, ನನಗಿನ್ನು ಯುದ್ಧವೇ ಬೇಡ ಎಂಬಂತೆ ನಿರ್ಣಯಿಸದನೋ ಏನೋ! ಕರ್ಣನ ಸೋದರನೂ ಆದ, ರಾಧೆ – ಅಧಿರಥರ ಪುತ್ರನೂ ಆಗಿರುವ ಚಿತ್ರಸೇನ ರಣಾಂಗಣ ತೊರೆದು, ರಥದಲ್ಲಿ ಸಾಗುತ್ತಿರಬೇಕಾದರೆ ಪಾಂಚಾಲ ರಾಜಕುಮಾರ ಯುಧಾಮನ್ಯು ದೃಷ್ಟದ್ಯುಮ್ನ ತಡೆದನು. ಆಗಲೂ ನಿಲ್ಲದೆ ಓಡಿ ಹೋಗಲು ಯತ್ನಿಸಿದ ವೀರನಾದ ಚಿತ್ರಸೇನನನ್ನು ನಿಂದಿಸಿದನು. ಅಷ್ಟಕ್ಕೂ ಸ್ಪಂದಿಸದೆ ಪಲಾಯನ ನಿರತನಾದ ಚಿತ್ರಸೇನನ ರಥವನ್ನು ಬೆಂಬತ್ತಿ ತಡೆದು ಶರ ಪ್ರಯೋಗಿಸಿ ಯುದ್ಧಾಹ್ವಾನ ನೀಡಿದ ದೃಷ್ಟದ್ಯುಮ್ನ,. ಹೇ ಹೇಡಿ! ನಿನ್ನ ಅಣ್ಣನ ಸೇನಾಧಿಪತ್ಯದಲ್ಲಿ ನೀನು ರಣ ಹೇಡಿಯಾಗಿ ಓಡಿ ಬದುಕುವಷ್ಟು ಸ್ವಾರ್ಥಿಯಾದೆಯಾ? ನಿನ್ನದೂ ಒಂದು ಜನ್ಮವೋ? ಛೀ! ಎಂದು ಜರೆದು ನುಡಿದಾಗ ಕುಪಿತನಾದ ಚಿತ್ರಸೇನ ಕ್ಷಣಾರ್ಧದಲ್ಲಿ ಧನುಸ್ಸನ್ನೆತ್ತಿ ದೃಷ್ಟದ್ಯುಮ್ನ, ಆತನ ರಥ, ಸಾರಥಿ ಈ ಮೂರನ್ನೂ ಗುರಿಯಾಗಿಸಿ ಸರಸರನೆ ತೀಕ್ಷ್ಣ ಶರಗಳನ್ನು ಪ್ರಯೋಗಿಸಿದನು. ಅನಿರೀಕ್ಷಿತ ಮತ್ತು ಶೀಘ್ರವಾಗಿ ಪ್ರಯೋಗಿತವಾದ ಬಾಣಗಳನ್ನು ಖಂಡಿಸುವುದರೊಳಗಾಗಿ ಅವು ಸಾರಥಿ, ರಥಿಕ, ರಥವನ್ನು ಚುಚ್ಚಿಯಾಗಿ ಹೋಗಿತ್ತು. ಸಾವರಿಸಿಕೊಂಡ ದೃಷ್ಟದ್ಯುಮ್ನ ಪ್ರತಿ ಪ್ರಹಾರ ಮಾಡತೊಡಗಿದನು. ಕೆಲವೇ ಕೆಲವು ಕ್ಷಣಗಳಲ್ಲಿ ಚಿತ್ರಸೇನನನ್ನು ಸೋಲಿಸಿ, ಆತನ ಶಿರಚ್ಚೇದನಗೈದನು ದೃಷ್ಟದ್ಯುಮ್ನ.
ಕರ್ಣನಿಗೆ ಮೇಲಿಂದ ಮೇಲೆ ಆಘಾತಗಳು – ತನ್ನ ಪುತ್ರರು, ಸೋದರ, ಪರಮ ಮಿತ್ರ ದುಶ್ಯಾಸನ, ಕೌರವ ಸೋದರರ ವಧಾ ಸರಣಿ ತಾಳಿಕೊಳ್ಳಲಾಗದಷ್ಟು ವೇದನೆ ನೀಡಿದವು. ಕೊರಳ ಸೆರೆ ಹಿಗ್ಗಿತು, ತನು ಶೀತಲವಾಯಿತು, ದೃಷ್ಟಿ ಮಂಜಾಯಿತು, ಜಂಘಾಬಲ ಹುದುಗಿ ಹೋಯಿತು, ಬಾಹುಗಳು ಬಲಹೀನವಾದವು. ಆ ಕೂಡಲೆ ಯೋಧರಕ್ತ ಆತನ ಶರೀರದ ನರನಾಡಿಗಳಲ್ಲಿ ಸಂಚರಿಸುತ್ತಾ ಸಂಚಲನ ಮಾಡತೊಡಗಿತು. ಮೈ ಬಿಸಿಯೇರಿತು. ಆಕ್ರೋಶ ಮನಮಾಡಿತು. ಕ್ರೋಧಾವೇಶಕ್ಕೊಳಗಾಗಿ ಸವಾಲೆಸೆಯತೊಡಗಿದ ಹೇ ದೃಷ್ಟದ್ಯುಮ್ನಾ! ಎಂದು ಬೊಬ್ಬಿಡುತ್ತಾ ಪಾಂಡವ ಸೇನೆಯ ಮೇಲೆ ಬಾಣಗಳ ಮಳೆ ಸುರಿಸಿದನು.ವ ವೈರಿ ಸೇನೆ ನಿಲ್ಲಲಾಗದೆ, ಚೆಲ್ಲಾಪಿಲ್ಲಿಯಾಗಿ ಚದುರಿ ಓಡುವಂತೆ ಮಾಡತೊಡಗಿದನು.
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರ್








