21.1 C
Udupi
Sunday, February 1, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 403

ಭರತೇಶ ಶೆಟ್ಟಿ ಎಕ್ಕಾರ್

ಸಂಚಿಕೆ ೪೦೩ ಮಹಾಭಾರತ

ಕರ್ಣ ಈ ರೀತಿ ಘೋಷಣೆ ಮಾಡಿ ಅರ್ಜುನನನ್ನು ಎದುರಿಸಲು ಉತ್ಸುಕನಾದಾಗ, ಶಲ್ಯ ಆತನನ್ನು ತಡೆದು “ಕರ್ಣಾ! ಏನು ದುರ್ಬುದ್ದಿ ನಿನ್ನದು? ಕೃಷ್ಣಾರ್ಜುನರು ಎಷ್ಟು ಹೊತ್ತು ಅನ್ಯ ವೀರರ ಜೊತೆ ಕಾಳಗದಲ್ಲಿ ವ್ಯಸ್ಥರಾಗಿದ್ದು ನೀನು ಮುಕ್ತನಾಗಿರುತ್ತಿಯೋ ಅದು ನಮಗೆ ದೊಡ್ಡ ಲಾಭ. ಅದನ್ನು ಬಿಟ್ಟು ನೀನು ಪಾರ್ಥನನ್ನು ಅರಸುತ್ತಾ ಹೋದರೆ ಜ್ವಾಲೆಯಿಂದ ಆಕರ್ಷಿತವಾದ ಪತಂಗದಂತಾದೀತು ನಮ್ಮ ಕಥೆ. ಧನಂಜಯ ಒಬ್ಬನನ್ನುಳಿದು ಮಿಕ್ಕ ಪಾಂಡುಪುತ್ರರು ಯಾರು ಇದಿರಾದರೂ ನೀನು ಗೆಲ್ಲಬಲ್ಲೆ. ಮೊದಲು ಸಾಧ್ಯವಾದಷ್ಟು ಸೇನಾನಾಶಗೈದು ನಮ್ಮ ಜಯದ ಮಾರ್ಗವನ್ನು ಸರಳಗೊಳಿಸುವತ್ತ ಮನಮಾಡು” ಎಂದು ನಿರ್ದೇಶಿಸಿದನು.

ಕರ್ಣನಿಗೆ ಮಹಾಭಾರತ ಯುದ್ದ ಎನ್ನುವುದು ಕೌರವನಿಗೆ ಗೆಲುವು ನಿರ್ಣಯಿಸುವುದು ಎಷ್ಟು ಅಗತ್ಯವೋ ಅದಕ್ಕಿಂತಲೂ ತಾನು ಅರ್ಜುನನಿಗಿಂತ ಶ್ರೇಷ್ಟ ಧನುರ್ಧಾರಿ ಎಂದು ಸಾಬೀತು ಪಡಿಸುವುದು ಮುಖ್ಯ ಎಂಬ ಉತ್ಕಟ ಆಸೆ ಮೂಡಿಸಿದೆ ಎನ್ನಬಹುದಾದ ರೀತಿ ವರ್ತಿಸುತ್ತಿದ್ದಾನೆ.

ಮನಸ್ಥಿತಿ ಹೀಗಿದ್ದರೂ ಶಲ್ಯನಿಗೆ ಮರು ಮಾತನಾಡಲಾಗದೆ ರಥ ಓಡಿಸಿದತ್ತ ಪಾಂಡವ ಸೇನೆಯನ್ನು ಧ್ವಂಸಗೈಯುತ್ತಾ ಸಾಗತೊಡಗಿದನು. ಇಂದು ಕರ್ಣ ಪೂರ್ಣಬಲದಿಂದ ಮೆರೆಯುತ್ತಿದ್ದಾನೆ. ಗುರು ಭಾರ್ಗವರ ಶಾಪ ಶಲ್ಯ ಸಾರಥ್ಯದಲ್ಲಿ ವಿಮೋಚನೆಗೊಳಗಾದ ಪರಿಣಾಮ ಹೀಗಾಗಿರಬಹುದು. ಕರ್ಣನಿಂದಾಗುತ್ತಿರುವ ವಿಧ್ವಂಸ ತಡೆಯಲು ಮೊದಲು ನಕುಲ ಮುಂದೊತ್ತಿ ಬಂದು ಎದುರಾದನು. ನಿನ್ನೆಯ ದಿನ ನಕುಲನೆದುರು ಹೀನಾಯವಾಗಿ ಸೋತಿದ್ದ ರಾಧೇಯ, ಇಂದು ಮಾತ್ರ ಶಲ್ಯ ಸಾರಥ್ಯದಲ್ಲಿ – ಮಹಾರಥಿಯಾಗಿ ಮೆರೆಯುತ್ತಿದ್ದಾನೆ. ನಕುಲನ ಸಾಹಸವನ್ನು ಖಂಡಿಸುತ್ತಾ ಸಮದಂಡಿಯಾಗಿ ಹೋರಾಡತೊಡಗಿದನು. ಅಶ್ವಿನಿಕುಮಾರ ನಕುಲ ಏನೇನೆಲ್ಲ ಶೌರ್ಯ ಪ್ರದರ್ಶಿಸಿ ಕಾದಾಡಿದರೂ ಕೈಸಾಗುತ್ತಿಲ್ಲ. ನಿನ್ನೆಗಿಂತಲೂ ಉಗ್ರವಾದ ಸಮರ ಸಾರಿದರೂ, ನಿಷ್ಫಲವಾಗಿ ಕೈಸೋತು ನಿಸ್ತೇಜನಾದನು. ಗತದಿನದ ಪರಾಭವದ ಪರಿಭವಕ್ಕೆ ಮುಯ್ಯಿ ತೀರಿಸಿಕೊಳ್ಳುವಂತೆ ಕರ್ಣ ನಕುಲನನ್ನು ಹೀನಾಯವಾಗಿ ಗಾಯಗೊಳಿಸಿದನು. ಹೀಗಾದ ಸ್ಥಿತಿಯಲ್ಲಿ ನಕುಲ ಹಿಂದೆ ಸರಿಯ ಬೇಕಾಯಿತು. ಇದಾದ ಬಳಿಕ ಧರ್ಮರಾಯ, ಸಹದೇವ, ಭೀಮ ಎಲ್ಲರೂ ಒಬ್ಬರಾದ ಬಳಿಕ ಒಬ್ಬರು ಸರತಿಯಲ್ಲಿ ಕರ್ಣನಿಗೆದುರಾದರು. ಅದ್ಬುತವಾದ ರಣಕೌಶಲದಿಂದ ಹೋರಾಡಿದರೂ ಇಂದು ಕರ್ಣನ ಮುಂದೆ ಕೈಸಾಗುತ್ತಿಲ್ಲ. ಅತುಲವಾದ ಧನುರ್ವೇದ ಪಾಂಡಿತ್ಯ ಭಾರ್ಗವ ಶಿಷ್ಯನಿಂದ ಪ್ರಕಟವಾಗುತ್ತಿದೆ. ಸೂರ್ಯ ಪುತ್ರ ಪ್ರತಿ ಸೂರ್ಯನಂತೆ ಪ್ರಜ್ವಲಿಸುತ್ತಿದ್ದಾನೆ. ಇದಿರಾದ ಕುಂತಿಪುತ್ರರ ಪ್ರಾಣ ಒಂದನ್ನು ಉಳಿಸಿ, ಮನಸೋ ಇಚ್ಚೆ ದಂಡಿಸಿದ್ದಾನೆ. ಮಾತೆ ಕುಂತಿಗಿತ್ತ ವಚನದ ಪಾಲನೆಯೊ ಎಂಬಂತೆ ಈ ನಾಲ್ವರಲ್ಲಿ ಯಾರನ್ನೂ ವಧಿಸದೆ ಜೀವದಾನವಿತ್ತು ಬಿಟ್ಟಂತಿದೆ. ಸುಸ್ಪಷ್ಟವಾಗಿ ಮಾತೆಗಿತ್ತ ವಚನದಂತೆ ಕರ್ಣನ ಗುರಿ ಏನಿದ್ದರೂ ಅರ್ಜುನನೋರ್ವನೆ! ಎಂಬ ಸತ್ಯ ಗೋಚರಿಸುತ್ತಿದೆ. ಧರ್ಮರಾಯನಂತೂ ಕರ್ಣನಿಂದ ಹೀನಾಯವಾಗಿ ದಂಡಿಸಲ್ಪಟ್ಟು, ಶರೀರದ ಅಂಗಾಂಗಗಳೂ ಭೀಭತ್ಸಕರ ರೀತಿಯಲ್ಲಿ ಶರಾಘಾತಗಳಿಂದ ಘಾಸಿಗೊಂಡಿದೆ. ತ್ರಾಣವಿದ್ದಷ್ಟು ಹೋರಾಡಿದನಾದರೂ, ಪ್ರಾಣ ಮಾತ್ರ ಉಳಿದು ಕೊನೆಗೆ ಮೂರ್ಛಿತನಾಗಿ ರಥದಿಂದ ಕೆಳಗೆ ಬಿದ್ದು ಬಿಟ್ಟನು. ಪರಿಚಾರಕರು ಆ ಕೂಡಲೆ ಧಾವಿಸಿ ಬಂದು ಶುಶ್ರೂಷೆಗಾಗಿ ಯುಧಿಷ್ಟಿರನನ್ನು ಶಿಬಿರಕ್ಕೊಯ್ಯಬೇಕಾದ ಸ್ಥಿತಿ ನಿರ್ಮಾಣವಾಯಿತು.

ಇತ್ತ ರಕ್ಷಣೆಗೆ ಒದಗಬೇಕಾಗಿದ್ದ ಅರ್ಜುನ ಅಶ್ವತ್ಥಾಮನ ಜೊತೆ ಯುದ್ದ ಮಾಡುತ್ತಿದ್ದಾನೆ. ನಿರಂತರವಾಗಿ ಸಾಗಿದ ಘೋರ ಸಮರದಲ್ಲಿ ಗುರುಪುತ್ರನನ್ನು ಸೋಲಿಸಿ, ಮುಕ್ತನಾದ ಅರ್ಜುನ ತಿರುಗಿ ಬರುತ್ತಿರಬೇಕಾದರೆ, ಕರ್ಣನಿಂದಾದ ಪಾಂಡವ ಸೇನೆಯ ನಾಶ ಮತ್ತು ಧರ್ಮರಾಯನಿಗಾದ ದುಸ್ಥಿತಿಯ ವಾರ್ತೆ ಕೃಷ್ಣಾರ್ಜುನರಿಗೆ ಮುಟ್ಟಿತು. ಆ ಕ್ಷಣವೆ ಕೃಷ್ಣಾರ್ಜುನರು ರಣರಂಗದಿಂದ ಶಿಬಿರದತ್ತ ರಥ ಓಡಿಸಿದರು. ಇತ್ತ ಕರ್ಣನನ್ನು ಸಾತ್ಯಕಿ ಎದುರಿಸಿ ರಣ ಭಯಂಕರನಾಗಿ ಹೋರಾಡುತ್ತಿದ್ದಾನೆ. ದೃಷ್ಟದ್ಯುಮ್ನ ಕೃತವರ್ಮನ ಜೊತೆ ಕಾಳಗ ನಿರತನಾಗಿದ್ದಾನೆ.

ಕೃಷ್ಣಾರ್ಜುನರು ವೇಗವಾಗಿ ಶಿಬಿರದತ್ತ ಬಂದರು. ಅರ್ಜುನ ಗಾಂಡೀವ ಧಾರಿಯಾಗಿಯೆ ರಥದಿಂದಿಳಿದು ಅವಸರದಲ್ಲಿ ಓಡುತ್ತಾ ಬಂದು ನೋಡಿದರೆ, ಅತ್ಯಂತ ಭೀಕರ ಗಾಯಾಳುವಾಗಿದ್ದ ಧರ್ಮಜನಿಗೆ ಪರಿಚಾರಕ ವೈದ್ಯ ಪಂಡಿತರು ಆರೈಕೆ ಮಾಡುತ್ತಿದ್ದಾರೆ. ಅಣ್ಣ ಧರ್ಮರಾಯ ನಿಸ್ತೇಜನಾಗಿ ಜರ್ಜರಿತ ಶರೀರಿಯಾಗಿ ಮಲಗಿದ್ದಾನೆ. ರಕ್ತ ಸಿಕ್ತ ಗಾಯಗಳಿಂದ ಅಣ್ಣ ಧರ್ಮಜನ ಸ್ಥಿತಿ ಚಿಂತಾಜನಕವಾಗಿದೆ.

ಅಣ್ಣನ ಬಳಿ ಬಂದ ಪಾರ್ಥ “ಅಣ್ಣಾ! ಯಾರಿಂದ ಹೀಗಾಯಿತು? ಹೇಳು. ನಿನ್ನನ್ನು ಈ ಸ್ಥಿತಿಗೆ ತಂದವರನ್ನು ಇಂದಿನ ಸೂರ್ಯಾಸ್ಥಮಾನದೊಳಗೆ ಶಿರಚ್ಛೇದನ ಮಾಡದೆ ಬಿಡಲಾರೆ” ಎಂದು ಪ್ರತಿಜ್ಞೆ ಮಾಡಿದನು.

ಸ್ಥಿತ ಪ್ರಜ್ಞನು ಹೌದಾದರೂ ಯುಧಿಷ್ಟಿರ ಈಗ ಸಂಯಮ ಕಳಕೊಂಡವನಾಗಿದ್ದಾನೆ. ತೀವ್ರವಾದ ನೋವಿನ ಕಾರಣವೋ, ಇಲ್ಲ ಸೋಲಿನ ಮುಖಭಂಗವೋ! ಅಂತೂ ತನ್ನ ಸಹಜ ತಾಳ್ಮೆಯನ್ನು ಮರೆತು “ಅರ್ಜುನಾ! ನಿನಗೇಕೆ ಆ ಗಾಂಡೀವ? ಅದನ್ನು ಕೃಷ್ಣನಿಗೆ ಕೊಡು. ಆ ಕುರು ಸೇನಾಪತಿ ಕರ್ಣ ನಿನ್ನ ನಾಲ್ವರು ಸೋದರರನ್ನೂ ಈ ರೀತಿ ಸೋಲಿಸಿ, ಮನ ಬಂದಂತೆ ದಂಡಿಸಿದಾಗ ಎಲ್ಲಿದ್ದೆ ನೀನು? ದಿವ್ಯ ಧನುಸ್ಸು ಗಾಂಡೀವವಿದ್ದೂ ರಕ್ಷಿಸಲಾಗದೆ ಹೋದ ನಿನಗಿನ್ನು ಯಾವ ಮಹತ್ಕಾರ್ಯ ಸಾಧನೆಗಾಗಿ ಆ ಗಾಂಡೀವ ಹೇಳು?” ಎಂದು ವ್ಯಗ್ರನಾಗಿ ಜರೆದನು.

ಅರ್ಜುನನಿಗೊಂದು ಉಪಾಂಶು ವ್ರತವಿದೆ. ಯಾರೇ ಆಗಿರಲಿ ತನ್ನ ಎದುರಲ್ಲಿ ಗಾಂಡೀವ ನಿಂದನೆಗೈದರೆ ಆ ಕ್ಷಣವೇ ಅವರ ವಧೆಗೈಯಬೇಕು. ಈಗ ಅಂತಹ ಕೃತ್ಯ ತನ್ನ ಅಗ್ರಜನಿಂದ ಮಾಡಲ್ಪಟ್ಟಿದೆ. ತನ್ನ ಈ ವ್ರತಪಾಲನೆ ಮಾಡಲಾಗದೆ ಹೋದರೆ ಆ ಕೂಡಲೆ ಅಗ್ನಿ ಪ್ರವೇಶಗೈದು ಪ್ರಾಣತ್ಯಾಗ ಮಾಡುವೆ ಎಂದೂ ಪ್ರತಿಜ್ಞೆ ಮಾಡಿದ್ದಾನೆ.

ಅರ್ಜುನನಿಗೆ ಧರ್ಮ ಸಂಕಟ ಎದುರಾಗಿದೆ. ಒಂದೋ ಗಾಂಡೀವ ನಿಂದನೆಯ ಅಪರಾಧಕ್ಕಾಗಿ ಅಣ್ಣನ ಶಿರ ಕಡಿಯಬೇಕು. ಅದು ಆಗದೆ ಹೋದರೆ ತಾನು ಪ್ರಾಣತ್ಯಾಗಕ್ಕೆ ಸಿದ್ಧನಾಗಬೇಕು. ಎಂತಹ ವಿಷಮ ದುಸ್ಥಿತಿ ಒದಗಿಬಿಟ್ಟಿದೆ! ಧರ್ಮಾತ್ಮನಾದ ಅಣ್ಣನ ಒಂದಕ್ಷರವನ್ನೂ ಮೀರದೆ ಪಾಲಿಸುತ್ತಾ ಬದುಕಿದ ಅರ್ಜುನ, ತನ್ನ ಪಾಲಿಗೆ ದೇವ ಸಮಾನನಾದ ಪೂಜ್ಯ ಸ್ಥಾನಿ ಅಣ್ಣನ ವಧೆ ಮಾಡಲಾದೀತೆ? ಹಾಗೆಂದು ಇನ್ನೂ ಒಂದು ಪ್ರತಿಜ್ಞಾ ವಾಕ್ಯ ನುಡಿದಿದ್ದಾನೆ. ಅಣ್ಣನಿಗೆ ಈ ಸ್ಥಿತಿ ತಂದಿತ್ತವರನ್ನು ಇಂದಿನ ದಿನಾಂತ್ಯದೊಳಗೆ ವಧಿಸುತ್ತೇನೆಂದು. ಹಾಗೆ ಮಾಡಲು ಹೊರಡೋಣವೆ! ಗಾಂಡೀವ ನಿಂದನೆಗೆ ಪರಿಮಾರ್ಜನೆ? ಮೊದಲು ಉಪಾಂಶು ವ್ರತ (ತನಗೆ ತಾನೇ ನಿರ್ಧರಿಸಿ ವಿಧಿಸಿರುವ ಕಟ್ಟುನಿಟ್ಟಿನ ವೃತ ) ಪಾಲನೆಯಾದರಷ್ಟೆ ಹೋಗಬಹುದು. ಅದು ನಂತರದ ಕಾರ್ಯವಾಗುವ ಕಾರಣ ಈಗ ಉಳಿದಿರುವ ಏಕೈಕ ಪ್ರಾಯಶ್ಚಿತ್ತ ಮಾರ್ಗ ಸ್ವಯಂ ತಾನು ಪ್ರಾಣ ತ್ಯಾಗ ಮಾಡುವುದು. ಯೋಚಿಸಿ ಅರ್ಜುನ ಕೈಯಲ್ಲಿದ್ದ ಗಾಂಡೀವವನ್ನೆತ್ತಿ ಆಗ್ನೇಯಾಸ್ತ್ರವನ್ನು ಅಭಿಮಂತ್ರಿಸಿದನು. ಇದನ್ನು ನೋಡಿದ ಸೇವಾನಿರತರಾಗಿದ್ದ ಪರಿಚಾರಕರು ಹೆದರಿ ಹೌಹಾರಿದರು. “ಗಾಂಡೀವ ನಿಂದನೆಗೈದ ಅಣ್ಣನನ್ನು ದಂಡಿಸಲು ಮುಂದಾಗಿದ್ದಾನೆ ಪಾರ್ಥ ಎಂದು ಬೊಬ್ಬಿರಿದು ಕೂಗಿದರು.”

ಈ ಬೊಬ್ಬೆಯ ಧ್ವನಿ ಕೇಳಿ ಏನಾಗುತ್ತಿದೆ ಶಿಬಿರದಲ್ಲಿ ಎಂದು ಗೊಂದಲಕ್ಕೊಳಗಾದ ಶ್ರೀ ಕೃಷ್ಣ ಪರಮಾತ್ಮ. ಯುದ್ಧದ ಮಧ್ಯದಲ್ಲಿ ಧರ್ಮಜನ ಕುಶಲೋಪರಿ ತಿಳಿದು ಬರಲು ಹೋದ ಪಾರ್ಥನ ಸುಳಿವಿಲ್ಲ. ಇತ್ತ ಶಿಬಿರದಿಂದ ಬೊಬ್ಬೆ, ಗಲಾಟೆಯ ಕೋಲಾಹಲ ಕೇಳುತ್ತಿದೆ. ಕುತೂಹಲಕ್ಕೊಳಗಾದ ಮಾಧವ ರಥದ ಸಾರಥ್ಯ ಪೀಠದಿಂದಿಳಿದು ಶಿಬಿರದೊಳಗೆ ಬಂದನು.

ಆ ಹೊತ್ತಿಗೆ ಪಾರ್ಥ ಅಭಿಮಂತ್ರಿಸಿದ ಆಗ್ನೇಯಾಸ್ತ್ರವನ್ನು ಭೂಮಿಗೆ ಗುರಿಯಾಗಿ ಪ್ರಯೋಗಿಸಿ ಅಗ್ನಿಕುಂಡವನ್ನು ರಚಿಸಿದನು. ಶ್ರೀ ಕೃಷ್ಣ ನೋಡುತ್ತಿರುವಂತೆಯೆ ಗಾಂಡೀವನ್ನು ಅಡ್ಡಲಾಗಿ ತನ್ನೆರಡೂ ಕೈಗಳಲ್ಲಿ ಹಿಡಿದು ಶಿರ ತಾಗಿಸಿ ನಮಿಸಿ ಆಯುಧ ಪೀಠದಲ್ಲಿರಿಸಿದನು. ತನ್ನ ಎಡ ಬಲ ಭುಜಗಳಿಂದ ಬತ್ತಳಿಕೆಯನ್ನು ಬಿಚ್ಚಿ ಅವುಗಳನ್ನೂ ಅಲ್ಲಿಯೆ ಇರಿಸಿದನು. ನಂತರ ಅಗ್ನಿಗುಂಡಕ್ಕೆ ಕೈಮುಗಿದು ಪ್ರಾಣ ತ್ಯಾಗಕ್ಕೆ ಸಿದ್ಧನಾದನು.

ನೋಡುತ್ತಿರುವವ ಕೃಷ್ಣ ಪರಮಾತ್ಮನಾದರೂ ಒಂದೊಮ್ಮೆಗೆ ಈ ಅನಿರೀಕ್ಷಿತ ದೃಶ್ಯ ಕಂಡು ಗೊಂದಲಕ್ಕೊಳಗಾದನು. ತನ್ನ ಕಣ್ಮುಂದೆಯೆ ಪಾರ್ಥ ಕಿರೀಟವನ್ನೂ ತೆಗೆದು ಕೆಳಗಿರಿಸಿ ಅಗ್ನಿಗುಂಡ ಪ್ರದಕ್ಷಿಣೆಗೆ ಸನ್ನದ್ಧನಾಗಿದ್ದಾನೆ. ತಕ್ಷಣ ಅವಸರವಸರವಾಗಿ ನಾಲ್ಕು ಹೆಜ್ಜೆ ಮುಂದೊತ್ತಿ ಬಂದ ಕೃಷ್ಣ, “ಅರ್ಜುನಾ! ಏನಿದು? ಏನಾಗಿದೆ ನಿನಗೆ? ಏನು ಮಾಡುತ್ತಿರುವೆ ನೀನು?” ಎಂದು ಒಂದೇ ಉಸಿರಿನಲ್ಲಿ ಪ್ರಶ್ನಿಸಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page