31.1 C
Udupi
Thursday, December 12, 2024
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 39

ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೩೯ ಮಹಾಭಾರತ

ಭೀಷ್ಮಾಚಾರ್ಯರ ಶಿಕ್ಷಣದಲ್ಲಿ ಪರಿಣಿತನಾಗುತ್ತಾ ವಿಚಿತ್ರವೀರ್ಯ ಬೆಳೆಯುತ್ತಿದ್ದ. ಆಳ್ವಿಕೆಗೂ ಭೀಷ್ಮಾಚಾರ್ಯರನ್ನೇ ಗುರುಗಳಾಗಿ ಅವರ ನಿರ್ಣಯದಂತೆ ತೀರ್ಮಾನಗಳು ಅನುಷ್ಠಾನಗೊಳ್ಳುವುದೇ ವಿಚಿತ್ರವೀರ್ಯನ ಅಪೇಕ್ಷೆಯಾಯಿತು.

ಹೀಗೆ ಎಲ್ಲವೂ ಸುಕ್ಷೇಮ ಸುಭಿಕ್ಷವಾಗಿ ಸಾಗುತ್ತಿದ್ದರೂ, ಹಸ್ತಿನಾವತಿಯ ಸಾಮ್ರಾಜ್ಯದಲ್ಲಿ ಒಂದು ವರ್ಗ ಆಡಳಿತ ವಿರೋಧಿ ಮನೋಭಾವ ತಳೆಯುತ್ತಿತ್ತು. ಕಾರಣ ಭೀಷ್ಮನಿದ್ದರೂ, ಕ್ಷಾತ್ರ ವಂಶವಲ್ಲದ ಸತ್ಯವತಿಯ ಸಂತಾನ ಅಧಿಕಾರದಲ್ಲಿರುವುದು ಅವರಿಗೆ ಅಸಹ್ಯವಾಗಿತ್ತು. ಅವರ ಪ್ರಕಾರ ಆಕೆ ಬೆಸ್ತ ಕನ್ಯೆ, ವಾಸ್ತವದಲ್ಲಿ ಆಕೆ ಯಾರೆಂದು ತಿಳಿಯದೆ ಅವರು ಹಾಗೆ ಭಾವಿಸಿದ್ದರು. ಆ ವರ್ಗ ವಿರೋಧಿ ಭಾವ ಹೊಂದಿದ್ದರೂ ಭೀಷ್ಮರಿಗೆ ಹೆದರಿ ಸುಮ್ಮನಾಗಿತ್ತು. ಇದೇ ಕಾರಣದಿಂದಲೋ ಏನೋ ಪ್ರಾಪ್ತ ವಯಸ್ಕನಾದರೂ ವಿಚಿತ್ರವೀರ್ಯನಿಗೆ ರಾಜಕುಮಾರಿಯರ ವಿವಾಹ ಪ್ರಸ್ತಾವ ಬರುತ್ತಿರಲಿಲ್ಲ.

ಇತ್ತ ಕಾಶೀರಾಜ ಪ್ರತಾಪಸೇನ ರೂಪ ಲಾವಣ್ಯಕ್ಕೆ ಸುಪ್ರಸಿದ್ದರಾಗಿದ್ದ ತನ್ನ ಮೂವರು ಪುತ್ರಿಯರಿಗೆ ವಿವಾಹ ಮಾಡಲು ಸ್ವಯಂವರವನ್ನು ಇರಿಸಿದ್ದ. ಬಾಲ್ಯದಿಂದ ಜೊತೆಯಾಗಿ ಬೆಳೆದ ತನ್ನ ಹೆಣ್ಮಕ್ಕಳು ವಿವಾಹ ಕಾರಣದಿಂದ ಬೇರ್ಪಡದೆ ಸಮರ್ಥನೋರ್ವನ ಆಶ್ರಯದಲ್ಲಿರಲಿ ಎಂದು ಬಯಸಿದ್ದ. ಅದೇ ಕಾರಣದಿಂದ ತಂದೆಯಾಗಿ ಮಕ್ಕಳ ಸಂತೋಷಕ್ಕೆ ಅವಕಾಶ ಕಲ್ಪಿಸಲು ಯೋಚಿಸಿ ಸ್ವಯಂವರದ ಯೋಜನೆ ಸಿದ್ಧಪಡಿಸಿದ್ದ.

ಆದರೆ ಹಸ್ತಿನೆಗೆ ಆಮಂತ್ರಣ ನೀಡಲಿಲ್ಲ. ಕಾರಣ ಆ ಆಡಳಿತ ವಿರೋಧಿ ವರ್ಗಕ್ಕಿದ್ದ ಸಮಾನ ಭಾವವೇ ಆತನಿಗಿತ್ತೋ, ಇಲ್ಲ ಹಸ್ತಿನೆಯಲ್ಲಿ ಸಕ್ಷಮ ರಾಜಕುಮಾರನಿಲ್ಲ ಎಂದು ಭಾವಿಸಿದನೋ! ಅಥವಾ ವೀರಾಗ್ರಣಿ ರಾಜಕುಮಾರರನ್ನು ಆರಿಸಿ ಚಕ್ರವರ್ತಿ ಪೀಠವೇರಿದ್ದ ಹಸ್ತಿನೆಗೆ ಪ್ರತಿಸ್ಪರ್ಧಿಯಾಗಬಲ್ಲವನನ್ನು ಆಯ್ಕೆ ಮಾಡುವ ಉದ್ದೇಶವೋ! ಹೀಗೆ ಯಾವುದೋ ಕಾರಣದಿಂದ ಈ ಸ್ವಯಂವರಕ್ಕೆ ಹಸ್ತಿನಾವತಿ ನಿಮಂತ್ರಿತವಾಗಿರಲಿಲ್ಲ.

ಕಾಶೀರಾಜನ ಪುತ್ರಿಯರ ಬಗ್ಗೆ ಕೇಳಿ ತಿಳಿದಿದ್ದ ಸತ್ಯವತಿ ಭೀಷ್ಮನನ್ನು ಕರೆದು “ಸ್ವಯಂವರಕ್ಕೆ ಹಸ್ತಿನೆಯ ಪ್ರತಿನಿಧಿಯಾಗಿ ಹೋಗಿ ಆ ರಾಜಕುಮಾರಿಯರನ್ನು ಗೆದ್ದು ತಂದು, ನಿನ್ನ ತಮ್ಮನಿಗೆ ವಿವಾಹ ಮಾಡಿಸು” ಎಂದು ಆದೇಶ ನೀಡಿದಳು. ಭೀಷ್ಮನಿಗೆ ಆಮಂತ್ರಣವಿಲ್ಲದೆ ಹೋಗಲು ಒಪ್ಪಿಗೆ ಇಲ್ಲದಿದ್ದರೂ ರಾಜಮಾತೆಯ ಆದೇಶ ಪಾಲನೆಗೆ ಹೊರಡಲೇ ಬೇಕಾಯ್ತು.

ಅತ್ತ ಕಾಶೀದೇಶದ ಪ್ರತಾಪ ಸೇನನ ಮಕ್ಕಳಲ್ಲಿ ಹಿರಿಯಳಾದ ಅಂಬೆ ಹಾಗು ಸಾಲ್ವ ದೇಶದ ರಾಜಕುಮಾರ ಬ್ರಹ್ಮದತ್ತ ಸ್ವಯಂವರಕ್ಕೆ ಮೊದಲೇ ಪರಸ್ಪರ ಆಕರ್ಷಿತರಾಗಿ ವಿವಾಹವಾಗಲು ಒಪ್ಪಿಕೊಂಡಿದ್ದರು. ಹಾಗೆಯೇ ಸ್ವಯಂವರಕ್ಕೆ ಸಾಲ್ವ ದೇಶದ ರಾಜಕುಮಾರನೂ ಬಂದಿದ್ದನು.

ಭೀಷ್ಮಾಚಾರ್ಯರು ಸ್ವಯಂವರ ಮಂಟಪದ ಅನತಿ ದೂರದವರೆಗೆ ಬಂದಿದ್ದರೂ, ಆಮಂತ್ರಣವಿಲ್ಲದೆ ಹೋಗುವ ಬಗೆ ಹೇಗೆಂದು ತರ್ಕಿಸುತ್ತಿದ್ದರು.

ಇತ್ತ ಸ್ವಯಂವರದ ಸ್ಪರ್ಧೆ ಆರಂಭವಾಗಿ ಯುದ್ದ ಕೌಶಲ ಪ್ರದರ್ಶನದಲ್ಲಿ ಎಲ್ಲರನ್ನೂ ಸೋಲಿಸುತ್ತಾ ಸಾಲ್ವಾಧಿಪ ಗೆದ್ದು ಅಂಬೆಯ ಆಕಾಂಕ್ಷೆಯಂತೆ ವರಿಸಲು ಯೋಗ್ಯ ಅಜೇಯನಾಗಿ ಇರುವ ವೇಳೆ ಆರ್ಭಟಿಸಿದ – ನನ್ನನ್ನು ಎದುರಿಸುವ ಸಾಹಸಿ ಹೋರಾಡಬಲ್ಲ ವಿಕ್ರಮಿ ರಾಜಕುಮಾರರು ಯಾರಿದ್ದೀರಿ? ಎದೆಗಾರಿಕೆ ಇದ್ದರೆ ಬನ್ನಿ ಬನ್ನಿ ಎಂದು ಅಬ್ಬರಿಸುತ್ತಿದ್ದ.

ಈ ಆಹ್ವಾನ ಭೀಷ್ಮರಿಗೆ ಅವಕಾಶ ಒದಗಿಸಿ ಧನುಷ್ಟೇಂಕಾರ ಮಾಡುತ್ತಾ ಒಳ ಬಂದರು. ನಾನಿದ್ದೇನೆ… ಎಂದವರೇ ದಿವ್ಯ ಧನುಸ್ಸಿನ ಪ್ರತ್ಯಂಚವನ್ನೆಳೆದು ಬಿಟ್ಟು ಟೇಂಕಾರ ಮಾಡಿದರು. ಅರೆಕ್ಷಣದಲ್ಲಿ ಎಗರಿದ ಸಾಲ್ವದ ರಾಜಕುಮಾರ ಬ್ರಹ್ಮದತ್ತ ಭೀಷ್ಮರೆದುರು ಸೋತು ಶರಣಾಗಿದ್ದ. ಹಸ್ತಿನೆಗೆ ಆಮಂತ್ರಣ ನೀಡದ್ದನ್ನು ಪ್ರಶ್ನಿಸಿ, ಹಸ್ತಿನಾವತಿ ಬಂಜೆಯೆಂದು ಭಾವಿಸಿದಿರೇನು? ಎಂದು ಕೇಳಿದಾಗ ಪ್ರತಾಪಸೇನ ನೆಲನೋಟಕನಾದ.

ಸರ್ವ ಸಮರ್ಥನಾಗಿ ಗೆದ್ದ ಭೀಷ್ಮರು ರಾಜಕುಮಾರಿಯರಿಗೆ ರಥವೇರಲು ಆಜ್ಞಾಪಿಸಿದರು. ಆಜ್ಞಾನುವರ್ತಿಗಳಾಗಿ ಹಾಗೆಯೇ ಮಾಡಿದರು. ಸಿಂಹನಾದ ಮಾಡಿ.. ಹೊರಡಲನುವಾದರೆ. ಸೋತ ಯುವರಾಜರೆಲ್ಲಾ ಸಮಗ್ರವಾಗಿ ಆಮಂತ್ರಣವಿಲ್ಲದೆ ಬಂದ ಭೀಷ್ಮನ ಮೇಲೆ ಆಕ್ರಮಣ ಮಾಡಿದರು. ಕ್ಷಣಾರ್ಧದಲ್ಲಿ ಎಲ್ಲಾ ವೀರರು ನಿರಾಯುಧರಾಗಿ ಕೈಯೆತ್ತಿ ಶರಣಾಗತರಾಗುವಂತೆ ಮಾಡಿತ್ತು ಭೀಷ್ಮರ ಧನುರ್ವಿದ್ಯೆ.

ಹಸ್ತಿನೆಗೆ ಬಂದು ರಾಜಕುವರಿಯರನ್ನು ಸತ್ಯವತಿಯ ಮುಂದೆ ಕರೆ ತಂದಾಗ, ನೋಡಿ ಆನಂದಭರಿತಳಾದಳು ರಾಜ ಮಾತೆ. ಮಂಗಳಾರತಿ ಬೆಳಗಿ ಅವರನ್ನು ವಿಶ್ರಾಂತಿ ಗ್ರಹದತ್ತ ಕರೆದೊಯ್ದಳು. ಸುಮೂಹೂರ್ತದಲ್ಲಿ ಮಹಾರಾಜ ವಿಚಿತ್ರವೀರ್ಯನನ್ನು ವರಿಸಿ ಸಾಮ್ರಾಜ್ಞಿಯರಾಗಿ ಎಂದು ಭೀಷ್ಮ ರಾಜಕುಮಾರಿಯರಿಗೆ ಸೂಚಿಸಿದಾಗ ಮೂವರಲ್ಲಿ ಅಂಬಿಕೆ ಅಂಬಾಲಿಕೆಯರು ಒಪ್ಪಿದರು. ಆದರೆ ಅಂಬೆ ಮಾತ್ರ….

ಮುಂದುವರಿಯುವುದು.

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page