ಭಾಗ 395
ಭರತೇಶ್ ಶೆಟ್ಟಿ ಎಕ್ಕಾರ್

ಸಂಚಿಕೆ ೩೯೫ ಮಹಾಭಾರತ
ದುರ್ಯೋಧನನಿಗೀಗ ಗುರುಪುತ್ರ ಅಶ್ವತ್ಥಾಮ ಹಾಗು ಮಿತ್ರ ಕರ್ಣನ ಬಗ್ಗೆ ಕಿಂಚಿತ್ ವಿಶ್ವಾಸ ಉಳಿದಿದೆ. ಹದಿನೆಂಟು ಅಕ್ಷೋಹಿಣಿ ಸೇನೆಯಲ್ಲಿ ಬಹು ಅಂಶ ನಾಶವಾಗಿದೆ. ಅಳಿದುಳಿದ ರಾಜರು, ಸೈನಿಕರನ್ನು ಬಂಡವಾಳವಾಗಿಸಿ ನಾಳಿನ ದಿನದಿಂದ ಜಯ ಸಂಪಾದನೆಗಾಗಿ ಹೋರಾಡಬೇಕಾಗಿದೆ. ಹೀಗಿರಲು ಅಶ್ವತ್ಥಾಮನನ್ನು ಕರೆದು “ಅಯ್ಯಾ ಗುರುಪುತ್ರ ಅಶ್ವತ್ಥಾಮಾ ಇಂದಿನ ದಿನ ನಿನ್ನ ಪಿತ, ನಮ್ಮ ಗುರುಗಳೂ ಆಗಿದ್ದ ಮಹಾತ್ಮರಾದ ದ್ರೋಣಾಚಾರ್ಯರ ಅಂತ್ಯವಾಗಿದೆ. ಆ ಬಳಿಕ ನೀನು ಉಗ್ರನಾಗಿ ಆಕ್ರಮಿಸಿದೆ. ಆದರೆ ಅರ್ಜುನನೆದುರು ಹೋರಾಡಲಾಗದೆ, ನಾವು ನಿಸ್ತೇಜರಾಗಿ ಪ್ರಾಣಭಯಕ್ಕೊಳಗಾಗಿ ಹೆದರಿ ಓಡುವ ಸ್ಥಿತಿ ನಿರ್ಮಾಣವಾಯಿತು. ನೀನು ಅದ್ಬುತ ಧೈರ್ಯ ಸಾಹಸ ಮೆರೆದು, ಶಸ್ತ್ರಾಸ್ತ್ರ ವಿದ್ಯಾ ಕೌಶಲದಿಂದ ತೋರಿದ ಉಗ್ರ ಸಂಗ್ರಾಮ ಇಂದಿನ ದಿನದ ತುಸು ಸಮಾಧಾನಕರ ಸಂಗತಿ. ಆದರೂ ನಮ್ಮ ಪಕ್ಷದ ಸೇನೆ ಬಹುವಾಗಿ ಇಂದು ನಾಶಗೊಂಡಿದೆ. ಯಾಕೆ ಹೀಗಾಗುತ್ತಿದೆ? ಮೇಲ್ನೋಟಕ್ಕೆ ಪಾಂಡವರಿಗಿಂತ ಸೈನ್ಯವೂ ನಮ್ಮ ಬಳಿ ಅಧಿಕವಾಗಿತ್ತು. ಪ್ರಮುಖ ವೀರರ ಲೆಕ್ಕಾಚಾರದಲ್ಲೂ ನಾವು ಅವರಿಗಿಂತ ಬಹುಪಾಲು ಬಲಿಷ್ಟರಾಗಿದ್ದೆವು. ಹಾಗಿದ್ದೂ ನಮ್ಮ ಪಾಲಿಗೆ ಪರಾಭವ ಸರಮಾಲೆಯಾಗಿ ಬೆಂಬತ್ತಿ ಬರುತ್ತಿದೆ. ಈ ರೀತಿಯ ದುರ್ಗತಿ ಒದಗುತ್ತಿದೆಯೆಂದರೆ ನಾವು ಎಡವಿದ್ದೆಲ್ಲಿ? ನಮ್ಮ ರಣತಂತ್ರ ಎಲ್ಲಿ ವಿಫಲವಾಗುತ್ತಿದೆ? ಮುಂದಿನ ನಮ್ಮ ಯೋಜನೆಯಾದರು ಏನು? ನಮ್ಮ ಸೇನೆಗೆ ನಾಯಕ ಯಾರು? ಈ ಬಗ್ಗೆ ನಾವು ಯೋಚಿಸ ಬೇಕು. ಯೋಜನೆ ರೂಪಿಸಬೇಕು.” ಎಂದನು.
ಕೇಳಿಸಿಕೊಂಡ ಅಶ್ವತ್ಥಾಮ ಗುರುವೂ, ಮಾವನೂ ಆಗಿರುವ ಕೃಪಾಚಾರ್ಯರಿಗೆ ನಮಿಸಿದನು. ಶಕುನಿಯ ಕಡೆ ನೋಡುತ್ತಾ “ನಾವು ಬಹಳಷ್ಟು ದೋಷಗಳನ್ನು, ಅಧರ್ಮಗಳನ್ನು ಬೆನ್ನ ಮೇಲೆ ಹೊತ್ತುಕೊಂಡು ಹೋರಾಡುತ್ತಿದ್ದೇವೆ. ಪಾಂಡವರು ಏನು ಕಷ್ಟ ಎದುರಾದಾಗಲೂ ತಾಳ್ಮೆಯಿಂದ ಸಹಿಸಿದರು, ಸುಖ ಭೋಗಗಳನ್ನು ತ್ಯಾಗ ಮಾಡಿದರು. ಆದರೂ ಧರ್ಮವನ್ನು ಬಿಡದೆ ಆಚರಿಸಿದ್ದಾರೆ. ಈಗ ಅಂತಹ ಧರ್ಮ ಅವರಿಗೆ ಜಯವಾಗಿ ಪರಿವರ್ತನೆಗೊಳ್ಳುತ್ತಿದೆ. ಕಪಟದ ದ್ಯೂತ ನಮಗೆ ಮಹಾ ಪಾತಕವಾಗಿ ಪರಿಣಮಿಸಿದೆ. ಸುಗುಣೆ, ಸುಶೀಲೆ ದ್ರೌಪದಿಯ ಮಾನಭಂಗದ ಯತ್ನ ನಮ್ಮ ತಲೆಯೇರಿ ದುರಾದೃಷ್ಟವಾಗಿ ಕುಳಿತಿದೆ. ಮೂಢರಂತೆ ಹಠಕ್ಕೆ ನಿಂತು ಪಾಂಡವರು ಕೇಳಿದ ಕನಿಷ್ಟ ಐದು ಗ್ರಾಮಗಳ ಬೇಡಿಕೆಯನ್ನೂ ಮನ್ನಿಸದ ನಾವೀಗ ಯಾಕೆ ಹೀಗಾಗುತ್ತಿದೆ ಎಂದು ವಿವೇಚಿಸುವ ಅರ್ಹತೆ ಹೊಂದಿಲ್ಲ. ಚಂದ್ರವಂಶ ಅದರ ಆಧಾರ ಸ್ಥಂಭ ಭೀಷ್ಮಾಚಾರ್ಯರನ್ನು ಧರೆಗುರುಳಿಸಿದೆ. ನಾನು ನನ್ನ ಪಿತಾಶ್ರೀಯವರನ್ನು ಕಳಕೊಂಡಿದ್ದೇನೆ. ದುರ್ಯೋಧನನೂ ಅವನ ಸೋದರರು, ಭಾವ ಜಯದ್ರಥ, ಅನೇಕ ಆಪ್ತಮಿತ್ರರ ಪ್ರಾಣವನ್ನು ಬಲಿಕೊಟ್ಟಿದ್ದಾನೆ. ಇವೆಲ್ಲಾ ಕೇವಲ ಐದು ಗ್ರಾಮಗಳನ್ನು ಉಳಿಸಿಕೊಳ್ಳುವ ಹಠವನ್ನು ಸರಿದೂಗಿಸಿದ ಮೌಲ್ಯಗಳೆ? ಇಷ್ಟಕ್ಕೇ ಈ ಸರಣಿ ಮುಗಿಯದು, ಇನ್ನೂ ಪೂರ್ಣಗೊಳ್ಳಲು ಬಹಳಷ್ಟಿದೆ ಎಂದೆಣಿಸುತ್ತಿದೆ. ಕೃಷ್ಣ ಸಹಿತವಾಗಿ ಋಷಿಮುನಿಗಳು, ಹಿರಿಯರಾದ ಭೀಷ್ಮ, ದ್ರೋಣ, ಕೃಪ, ವಿದುರಾದಿಗಳೆಲ್ಲರೂ ಸೇರಿ ಬುದ್ದಿ ಮಾತು ಹೇಳಿ ಸಂಧಾನ ಮಾಡಿಕೊಳ್ಳಿ, ಸಂಗ್ರಾಮ ಬೇಡ ಎಂದಾಗ ನಾವು ಒಪ್ಪಿರಲಿಲ್ಲ. ಈಗ ಒದಗುತ್ತಿರುವ ಪರಿಭವ ಯಾಕಾಗುತ್ತಿದೆ ಎಂಬ ಜಿಜ್ಞಾಸೆ ಮಾಡಿ ಪ್ರಯೋಜನವೂ ಇಲ್ಲ, ಅದಕ್ಕೆ ಇದು ಸಕಾಲವೂ ಅಲ್ಲ. ನೀರಿಗಿಳಿದವ ಚಳಿ ಎಂದರೆ ಆಗುತ್ತದೆಯೆ? ನಮ್ಮೊಳಗೆ ನಾಳೆಯ ದಿನದ ಯುದ್ದ ಸಿದ್ಧತೆ ಆಗಬೇಕು. ಈ ಸಮಾಲೋಚನೆಯಲ್ಲಿ ನನ್ನ ಅಭಿಪ್ರಾಯ ಕೇಳುವಿರಾದರೆ, ಗುರು ಕೃಪಾಚಾರ್ಯರು, ಮಾದ್ರಾದೀಶ ಶಲ್ಯ, ಕೃತವರ್ಮ, ಸ್ವಯಂ ನಾನು ಸಮರ್ಥರಾಗಿ ಇರುವೆವಾದರೂ, ಮಹಾನ್ ಧನುರ್ಧರ ಕರ್ಣನು ಕುರು ಸೇನಾಧಿಪತ್ಯಕ್ಕೆ ಸೂಕ್ತ ಆಯ್ಕೆ. ನೀವು ನಿಮ್ಮ ಸಹಮತ, ಅಭಿಪ್ರಾಯಗಳಿದ್ದರೆ ಸೂಚಿಸಿ, ಆದಷ್ಟು ಶೀಘ್ರವಾಗಿ ನಿರ್ಣಯ ಕೈಗೊಳ್ಳುವ ಅನಿವಾರ್ಯತೆ ಇದೆ. ಈಗಾಗಲೆ ರಾತ್ರಿಯ ಪೂರ್ವಾರ್ಧ ಭಾಗ ಸರಿದು ಸಾಗಿದೆ.” ಎಂದನು.
ಅಶ್ವತ್ಥಾಮನ ಮಾತು ಕೇಳಿದ ಶಕುನಿ ಗೊಂದಲಕ್ಕೆ ಒಳಗಾದವನಂತೆ, “ಗುರುಪುತ್ರ, ನೀನು ದ್ಯೂತವನ್ನು ಆರೋಪಿಸುತ್ತಿರುವೆ. ಆಗಿನ ಉದ್ದೇಶ ಸರಳವಾಗಿ ಸಾಮ್ರಾಜ್ಯ ಸಂಪಾದನೆ ಗುರಿಯಾಗಿತ್ತು. ಪಾಂಡವರನ್ನು ಅಧಿಕಾರದಿಂದ ದೂರ ಇಡುವ ಯೋಜನೆಯಿತ್ತು. ಅದು ಕೆಲಕಾಲ ಸಾಫಲ್ಯವನ್ನೂ ನೀಡಿತ್ತು. ಈಗ ವ್ಯತಿರಿಕ್ತ ಸ್ಥಿತಿ ಬಂದಿದೆ ಎಂಬ ಕಾರಣಕ್ಕೆ, ನಾವು ಮೊದಲೇ ತಪ್ಪಿದ್ದೇವೆ ಎಂಬ ಮಾತು ಸಮಂಜಸವಾಗದು. ಇನ್ನು ಐದು ಗ್ರಾಮಗಳ ವಿಚಾರ ಮಾಡುವುದಾದರೆ, ಪಾಂಡವರು ಗೆದ್ದು ಸಾಧಿಸಲಾಗದು ಎಂಬಷ್ಟು ಬಲಾಢ್ಯತೆ ನಮ್ಮ ಬಳಿ ಇತ್ತು. ಪ್ರಬಲರಾದ ನಾವು ಆ ಹೊತ್ತು ಕೈಗೊಂಡ ನಿರ್ಣಯವೂ ಸ್ಪಷ್ಟವಾಗಿತ್ತು. ಆ ಸಮಯದ ನಿರ್ಣಯಗಳನ್ನು ಧರ್ಮಾಧರ್ಮದ ತಕ್ಕಡಿಯಲ್ಲಿ ತೂಗುವುದು ಅಸಮಂಜಸ. ನಮ್ಮವರ ಶ್ರೇಯಸ್ಸಿಗಾಗಿ ಕೈಗೊಂಡ ರಾಜಕಾರಣದ ನಡೆಗಳು ಅವುಗಳಾಗಿತ್ತು. ಅದಕ್ಕೆಲ್ಲ ಮಿತ್ರರು ಬೆಂಬಲ ಸೂಚಿಸಿದ್ದರು. ನಂತರ ಸಾಗುತ್ತಿರುವ ಯುದ್ಧದಲ್ಲಿ ನಮ್ಮವರು ದೌರ್ಬಲ್ಯ ತೆರೆದಿಟ್ಟರೋ, ಇಲ್ಲ ಅದೇ ಆಗಬೇಕಿತ್ತೋ! ಅಂತೂ ನಮ್ಮೊಳಗಿನ ಒಮ್ಮತದ ಕೊರತೆ ನಮಗೆ ಮುಳುವಾಗುತ್ತಾ ಹೋಯಿತು. ಈಗ ಉಳಿದಿರುವ ನಾವೆಲ್ಲರೂ ಧೃತಿಗೆಡದೆ ಒಗ್ಗಟ್ಟಾಗಿ ಹೋರಾಡಬೇಕಿದೆ. ಆ ಬಗ್ಗೆ ತರ್ಕಿಸುವುದಾದರೆ ಕರ್ಣನ ನಾಯಕತ್ವ ನನಗೂ ಸರಿಯೆಣಿಸುತ್ತಿದೆ” ಎಂದನು.
ಕೃಪಾಚಾರ್ಯರೂ “ಅಶ್ವತ್ಥಾಮಾ, ನಿನ್ನ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಆದಷ್ಟು ಶೀಘ್ರ ಕರ್ಣನಿಗೆ ಅಧಿಪತ್ಯ ವಹಿಸುವ ವಿಧಿಗಳ ಸಿದ್ಧತೆ ಆರಂಭವಾಗಲಿ. ವ್ಯೂಹ ರಚನೆ, ರಣತಂತ್ರಗಳ ವಿಶ್ಲೇಷಣೆ ಚರ್ಚೆಯಾಗಲಿ. ಕಳೆದು ಹೋಗಿರುವುದನ್ನು ಕೆದಕಿ ಕೂರಲು ಈಗ ಸಮಯವಲ್ಲ. ಮಾಡಬೇಕಿರುವುದರ ಬಗ್ಗೆ ಯೋಚಿಸೋಣ. ದೇವರ ಇಚ್ಚೆ ಏನಿದೆಯೋ ಅದೇ ಆಗುತ್ತಾ ಹೋಗುತ್ತದೆ” ಎಂದರು.
ಹಿರಿಯರು, ಮಿತ್ರ ರಾಜರೂ ಒಕ್ಕೊರಳಿನಿಂದ ಕರ್ಣನಿಗೆ ಅಧಿಪತ್ಯ ವಹಿಸುವುದನ್ನು ಅಂಗೀಕರಿಸಿದರು. ಶಲ್ಯಭೂಪನಿಗೆ ಪೂರ್ಣ ಒಪ್ಪಿಗೆಯಿತ್ತೋ ಇಲ್ಲವೋ! ಆದರೂ ಆಕ್ಷೇಪಿಸಲಿಲ್ಲ.
ದುರ್ಯೋಧನ ಎಲ್ಲರ ಅಭಿಮತ ಆಲಿಸಿ, ಕರ್ಣನ ಮನವೊಲಿಸಿ ಸೇನಾಧಿಪತಿಯಾಗಿ ಘೋಷಿಸಿದನು. ಪರಶುರಾಮರ ಶಿಷ್ಯ ಕರ್ಣ ನಾಳೆಯ ದಿನ ಕುರು ಸೇನಾನಾಯಕ. ಉಳಿದ ನಿಶೆಯ ಕಿರುಭಾಗ ವಿರಮಿಸುವ ತೀರ್ಮಾನ ಪ್ರಕಟಿಸಿ ಎಲ್ಲರೂ ವಿಶ್ರಾಂತರಾದರು.
ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಶುಚಿರ್ಭೂತರಾಗಿ ಬಹಳಷ್ಟು ವಿಧಿ, ಶಾಂತಿ ಯಜ್ಞಗಳು, ದೇವತಾ ಸಂಪ್ರೀತಿಗಾಗಿ ಸಮರ್ಪಣೆಗಳು, ಸತ್ಪಾತ್ರರಿಗೆ ಹೇರಳವಾದ ದಾನಧರ್ಮಗಳು ನಡೆದವು. ಕರ್ಣನಂತೂ ಮೊದಲೆ ದಾನಶೂರ. ಮನಶಾಂತಿಯಾಗುವಷ್ಟು ದಾನ ಧರ್ಮ ಮಾಡಿದನು. ಪುಣ್ಯಾಹಗಳು ನಡೆದು ಅಭಿಷಿಕ್ತನಾಗಿ ಕೃಪಾಚಾರ್ಯರ ನಿರ್ದೇಶನದಲ್ಲಿ ಸೇನಾಧಿಪತಿಯಾಗಿ ಪಟ್ಟಾಭಿಷಿಕ್ತನಾದನು. ನಂತರ ನಡೆದ ರಣತಂತ್ರ ಸಮಾಲೋಚನೆಯಲ್ಲಿ ಕರ್ಣನ ಯೋಚನೆಯಂತೆ ಮಕರ ವ್ಯೂಹ ಬಲಿದು ಪಾಂಡವರ ಮೇಲೆ ಆಕ್ರಮಣ ನಡೆಸುವುದೆಂದು ಯೋಜನೆ ನಿರೂಪಿಸಿದನು. ಮಕರದ ಕಣ್ಣಿನ ಸ್ಥಾನದಲ್ಲಿ ಶಕುನಿ ಮತ್ತು ಉಲೂಕರು, ಕೌರವ ವ್ಯೂಹದ ಮಧ್ಯ ಭಾಗದಲ್ಲಿ, ಹಾಗೆಯೆ ಅಶ್ವತ್ಥಾಮ ಕೃಪಾಚಾರ್ಯರು ಮಕರದ ಕೈಗಳಂತೆ ಎಡ ಬಲದಲ್ಲೂ ಸ್ಥಿತರಾಗುವುದೆಂದು ಯೋಜಿಸಲಾಯಿತು. ಅಂತೆಯೇ ವ್ಯೂಹ ರಚನೆಯಾಗಿ ಸೇನಾನಾಯಕನಾಗಿ ಕರ್ಣ ಮಕರದ ಮೂತಿಯ ಭಾಗದಲ್ಲಿದ್ದು ಮುನ್ನಡೆಸಲು ಸಿದ್ಧನಾಗಿದ್ದಾನೆ.
ಇತ್ತ ಪಾಂಡವ ಪಕ್ಷ ಕೃಷ್ಣಾರ್ಜುನರ ನಿರ್ದೇಶನದಲ್ಲಿ, ದೃಷ್ಟದ್ಯುಮ್ನನ ಸೇನಾಪತ್ಯದಲ್ಲಿ ಅರ್ಧ ಚಂದ್ರಾಕೃತಿಯ ವ್ಯೂಹವಾಗಿ ಸಜ್ಜಾಗಿದೆ.
ಮುಂದುವರಿಯುವುದು…






