ಭಾಗ – 392
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೩೯೩ ಮಹಾಭಾರತ
ಭಗವಾನ್ ವ್ಯಾಸರು ಶಿವನ ಮಹತ್ತರವಾದ ಕಥನವನ್ನು ಅರ್ಜುನನ ಅಪೇಕ್ಷೆಯನ್ನು ಮನ್ನಿಸಿ ಹೇಳತೊಡಗಿದರು. “ಹಿಂದೊಮ್ಮೆ ದಿಕ್ಪಾಲಕರು ಕೈಗೊಂಡಿದ್ದ ಯಾಗ ಮಂಟಪಕ್ಕೆ ಮಹಾದೇವ ಪರಮೇಶ್ವರ ಹೋಗಿದ್ದನು. ಅಲ್ಲಿಗೆ ದಕ್ಷ ಪ್ರಜಾಪತಿಯ ಆಗಮನವಾಯಿತು. ಹಿರಿಯನು, ಈಶನಿಗೆ ಮಾವನೂ ಆಗಿದ್ದರೂ, ಆತನಿಗೆ ಗೌರವಪೂರ್ವಕವಾಗಿ ಹಿರಿತನದ ಗೌರವ ನೀಡುವ ಬದಲಾಗಿ ಈಶ್ವರ ಪ್ರಧಾನ ಎಂದು ತೀರ್ಮಾನಿಸಿ ಯಾಗದ ಅಗ್ರ ಪೀಠ ನೀಡಲ್ಪಟ್ಟಿದ್ದನ್ನು ಆಕ್ಷೇಪಿಸಿ ಬಗ್ಗೆ ಆಕ್ರೋಶಿತನಾಗಿದ್ದನು. ಮಾತ್ರವಲ್ಲ ಯಾಗಾಧ್ಯಕ್ಷನಾಗಿದ್ದ ಈಶ್ವರ ತನಗೆ ಹೆಣ್ಣು ಕೊಟ್ಟ ಮಾವ ಬಂದಾಗ ಎದ್ದು ನಿಂತು ಗೌರವ ನೀಡಲಿಲ್ಲ ಎಂಬ ಕಾರಣದಿಂದ ಉಗ್ರನಾಗಿ ಮನ ಬಂದಂತೆ ಶಿವನನ್ನು ನಿಂದಿಸಿದನು. ಆ ಬಳಿಕ ಯಾಗ ಕಾರ್ಯಕ್ರಮವನ್ನು ತಿರಸ್ಕರಿಸಿ ಅಲ್ಲಿಂದ ಸಭಾತ್ಯಾಗ ಮಾಡಿ ಹೊರಟು ಹೋದನು. ಈ ಪ್ರಕರಣಕ್ಕೆ ಪ್ರತಿಕಾರವಾಗಿ ನಿರೀಶ್ವರ ಯಾಗವನ್ನು ವಿರಚಿಸುವ ತೀರ್ಮಾನ ಕೈಗೊಂಡನು. ಪರಶಿವನನ್ನು ಹೀನಾಯವಾಗಿ ನಿಂದಿಸಿ, ಮಹಾದೇವನ ದೇವತ್ವವನ್ನು ಧಿಕ್ಕರಿಸಿ ದಕ್ಷ ಉದ್ಧಟತನ ಮೆರೆಯಲು ಮುಂದಾದನು. ಯಾಗಕ್ಕೆ ತನ್ನ ಅಳಿಯನಾದ ಈಶ್ವರನೋರ್ವನನ್ನುಳಿದು ಮತ್ತೆಲ್ಲಾ ದೇವಾನುದೇವತೆಗಳು ಆಹ್ವಾನಿತರಾಗಿದ್ದರು. ಮಹೇಶ್ವರನನ್ನು ಅಪಮಾನಿಸಿ, ತೇಜೋವಧೆಗೈಯುವ ಉದ್ದೇಶ ದಕ್ಷನದ್ದಾಗಿತ್ತು, ಮಾತ್ರವಲ್ಲ ಶಿವಬಪರಮಾತ್ಮನಿಗಿಂತ ಆತನ ಮಾವ ಪ್ರಜಾಪತಿಯಾದ ತಾನು ಶ್ರೇಷ್ಟನು ಎಂಬ ಭಾವನೆ ಆತನದ್ದಾಗಿತ್ತು.
ಹೀಗಿರಲು ದಕ್ಷನ ಕ್ಷೇತ್ರ ಪ್ರಾಚೀನಬಹ್ರಿಯಲ್ಲಿ ಯಾಗಾರಂಭವಾಯಿತು. ವೈಭವೋಪೇತವಾಗಿ ಸಾಗುತ್ತಿರುವ ಯಾಗ, ಅಲ್ಲಿ ನೀಡಲಾಗುವ ಅಮಿತ ದಾನದ ವಿಚಾರ ತಿಳಿದು ತಂಡೋಪತಂಡವಾಗಿ ವಿಪ್ರರು ಅತ್ತ ಪಯಣಿಸಲು ತೊಡಗಿದರು. ಹೀಗೆ ಅತ್ತ ಹೋಗುತ್ತಿರುವ ಯಾತ್ರಿಕರಿಂದ ಶಿವನ ಪತ್ನಿಯಾದ ದಾಕ್ಷಾಯನಿ ಸಕಲ ವಿಚಾರವನ್ನು ಕೇಳಿ ತಿಳಿದುಕೊಂಡಳು. ದಕ್ಷ ಪುತ್ರಿಯಾದ ದಾಕ್ಷಾಯನಿ ತಾನು ತನ್ನ ತವರು ಮನೆಯಲ್ಲಾಗುತ್ತಿರುವ ಈ ಯಾಗದಲ್ಲಿ ಭಾಗಿಯಾಗಲು ಹೋಗುವೆನೆಂದು ಪತಿ ಪರಮೇಶ್ವರನಲ್ಲಿ ಅನುಮತಿ ಬೇಡಿದಳು. ಆದರೆ ಆಮಂತ್ರಣವಿಲ್ಲದೆ ಹೋಗುವುದು ಸರಿಯಲ್ಲ, ನೀನು ಹೋಗಕೂಡದು ಎಂದು ಎಷ್ಟು ವಿಧ ವಿಧವಾಗಿ ವಿವರಿಸಿ ಹೇಳಿದರೂ ಆಕೆ ಕೇಳಲಿಲ್ಲ. ಹೇಗೇಗೋ ಕಾಡಿ ಬೇಡಿದರೂ ಪತಿದೇವ ಒಪ್ಪದೆ ಇದ್ದಾಗ, ಆತನ ಮೌನವನ್ನು ಸಮ್ಮತಿಯೆಂದು ಪರಿಭಾವಿಸಿ ಆಕೆ ತನ್ನ ತವರು ಮನೆಗೆ ಹೋಗಿ ಬಿಟ್ಟಳು. ತನ್ನ ತಂದೆಯಾದ ದಕ್ಷ ಪ್ರಜಾಪತಿಯ ಯಾಗಮಂಟಪ ಪ್ರವೇಶಿಸಿದಾಗ, ಅಲ್ಲಿಗೆ ಆಮಂತ್ರಣವಿಲ್ಲದೆ ಬಂದಿರುವ ಕಾರಣ ಗೌರವ, ಆದರ ಸಿಗಲಿಲ್ಲ. ಬದಲಾಗಿ ಹೀನಾಯವಾದ ಅಪಮಾನ ತೀವ್ರವಾಗಿ ಮನನೊಂದಳು. ಪತಿಯ ಸಮ್ಮತಿ ಇರದಿದ್ದರೂ, ಆತ ಎಷ್ಟು ಬುದ್ದಿಯ ಮಾತುಗಳಿಂದ ಸಂತೈಸಿದರೂ ಕೇಳದೆ ಒತ್ತಾಸೆಯಿಂದ ಬಂದ ತನ್ನ ಸ್ಥಿತಿ ಹೀಗಾಗಿ ಹೋಯಿತಲ್ಲ ಎಂದು ಮರುಗಿದಳು. ಇನ್ನು ಬದುಕುವುದು ನಿರರ್ಥಕವೆಂದು ದಕ್ಷನ ಯಾಗ ಕುಂಡಕ್ಕೆ ಹಾರಲು ಮುಂದಾದಳು. ದಕ್ಷ ಪ್ರಜಾಪತಿ ಬಹಿಷ್ಕೃತಳು, ಅಸ್ಪೃಶ್ಯಳಾದ ದಾಕ್ಷಾಯನಿಯನ್ನು ಸ್ಪರ್ಶಿಸದಂತೆ ಅಗ್ನಿಗೆ ಆಜ್ಞಾಪಿಸಿದನು. ಇದರಿಂದ ಕೆರಳಿದ ಆಕೆ ತನ್ನ ದೇಹದಿಂದ ಯೋಗಾಗ್ನಿಯನ್ನು ಸೃಜಿಸಿ ಸ್ವಯಂ ದಹಿಸಿಕೊಂಡು ಪ್ರಾಣ ತ್ಯಾಗ ಮಾಡಿ ಬಿಟ್ಟಳು.
ಪ್ರಿಯ ಪತ್ನಿಯ ಮರಣದ ವಿಚಾರ ತಿಳಿದ ಶಿವ ಪರಮಾತ್ಮ, ತನ್ನನ್ನು ತಿರಸ್ಕರಿಸಿ, ಈಗ ಪತ್ನಿಯ ಸಾವಿಗೂ ಕಾರಣನಾದ ದಕ್ಷನ ಮೇಲೆ ಕ್ರೋಧಾವೇಶಕ್ಕೊಳಗಾದನು. ಭಗವಾನ್ ಶಂಕರನ ಬಗ್ಗೆ ವೈರ ಭಾವ ಹೊಂದಿದ್ದ ದಕ್ಷನ ಯಾಗ ಹೇಗೂ ಹಾಳಾಯಿತು. ಈಗ ಸ್ವಯಂ ಶಿವನು ಮುನಿದು ನಿಂತರೆ ಕಾಯುವವರಾದರು ಯಾರು? ಪರಿಣಾಮದಲ್ಲಿ ಕೋಪಾವಿಷ್ಟನಾದ ಶಿವ ಪರಮಾತ್ಮನಿಂದ ಆದೇಶ ಹೊತ್ತು ಹೋದ ವೀರಭದ್ರನಿಂದ ಶಿಕ್ಷಾ ರೂಪದಲ್ಲಿ ದಕ್ಷ ಪ್ರಜಾಪತಿಯ ಶಿರಚ್ಛೇದನ ಆಗಿ ಹೋಯಿತು. ಆ ಬಳಿಕ ದೇವತೆಗಳೆಲ್ಲರೂ ಸೇರಿ ಶಿವಸ್ತುತಿಯ ಮೂಲಕ ಪ್ರಸನ್ನೀಕರಿಸಿ ಮಹಾದೇವನನ್ನು ಬೇಡಿದರು. ಯಾಗ ಪೂರ್ಣಾಹುತಿಯಾಗದೆ ಉಳಿದರೆ ಲೋಕಕ್ಕೆ ಅಮಂಗಲಕರವಾಗುತ್ತದೆ. ಹಾಗಾಗಿ ಯಾಗ ದೀಕ್ಷಿತನಾಗಿರುವ ದಕ್ಷ ಪ್ರಜಾಪತಿಗೆ ಜೀವದಾನ ನೀಡಿ ಯಾಗ ಸಂಪನ್ನತೆಗೆ ಅವಕಾಶ ಮಾಡಿಕೊಡಬೇಕೆಂದು ಪರಿ ಪರಿಯಾಗಿ ಪ್ರಾರ್ಥಿಸಿದರು. ಒಲಿದ ಕಾರುಣ್ಯ ಮೂರ್ತಿ ಸದಾಶಿವ ಕೃಪಾಕರನಾಗಿ ತನ್ನ ಕೃಪೆಯಿಂದ ದಕ್ಷನಿಗೆ ಪರ್ಯಾಯ ವ್ಯವಸ್ಥೆಯ ಮುಖೇನ ಆಡೊಂದರ ಶಿರ ಜೋಡಿಸಿ ಜೀವ ಮರು ಪೂರಣಗೊಳಿಸಲಾಯಿತು. ನಿರೀಶ್ವರವಾಗಿದ್ದ ಯಾಗ ಈಶ್ವರ ಯಾಗವಾಗಿ ಪೂರ್ಣಾಹುತಿ ಸಮರ್ಪಣೆಯೊಂದಿಗೆ ಸಂಪೂರ್ಣವಾಯಿತು. ಲೋಕಕ್ಕೂ, ಯಾಗ ದೀಕ್ಷಿತ ದಕ್ಷ ಪ್ರಜಾಪತಿಗೂ ಮಂಗಳಕರವಾಯಿತು. ಹೀಗೆ ಶಿವನ ವಿರೋಧ ಮಾಡಿದವರು ಘೋರ ದಂಡನೆಗೆ ಒಳಗಾಗುತ್ತಾರೆ ಎಂಬ ಪಾಠ ಸಕಲ ಲೋಕಗಳಿಗೂ ಬಿತ್ತರಿಸಲ್ಪಟ್ಟಿತು.”
ಅರ್ಜುನಾ ನಿನಗೆ ಶಿವ ಮಹಾತ್ಮೆಯ ಇನ್ನೂ ಒಂದು ಉತ್ಕೃಷ್ಟವಾದ ಕಥೆಯನ್ನು ಹೇಳುವೆ ಕೇಳು. ” ಹಿಂದೆ ತಾರಕಾಸುರ ಎಂಬ ರಾಕ್ಷಸ ದೇವತೆಗಳನ್ನು ಪೀಡಿಸಿದ ಪರಿಣಾಮ ಹತನಾಗಿದ್ದ. ಆತನಿಗೆ ಮೂವರು ಗಂಡು ಮಕ್ಕಳು ತಾರಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲಿ ಎಂಬವರು. ಇವರು ಅಸುರ ಶಿಲ್ಪಿ ಮಯನ ಸಖ್ಯವನ್ನು ಹೊಂದಿದ್ದರು. ಈ ಮೂವರು ತಾರಕಾಸುರನ ಪುತ್ರರು ಪುಣ್ಯಸ್ಥಳ ಪ್ರಯಾಗಕ್ಷೇತ್ರವನ್ನು ತಪೋಭೂಮಿಯಾಗಿಸಿ ಬ್ರಹ್ಮದೇವನ ಕುರಿತಾಗಿ ಕಠಿಣ ತಪಸ್ಸನ್ನಾಚರಿಸಿದರು. ಬ್ರಹ್ಮದೇವ ಮೈದೋರಿದಾಗ ನಮಗೆ ಯಾರಿಂದಲೂ ಮರಣ ಬಾರದ ಅಮರತ್ವದ ವರ ಕರುಣಿಸಬೇಕೆಂದು ಬೇಡಿದರು. ಬ್ರಹ್ಮ ದೇವರು ಅಂತಹ ವರ ಯಾರಿಗೂ ನೀಡಲಾಗದು, ಕಾರಣ ಮನ್ವಂತರಗಳು ಕಳೆದು ಕಲ್ಪಾಂತ್ಯವಾದಾಗ ಸ್ವತಃ ತನಗೂ ಅಂತ್ಯವೆಂಬುದಿದೆ. ಹಾಗಿರಲು ಅನಂತವಾಗುವ ವರ ನೀಡಲಾಗದು, ಅದರ ಬದಲಾಗಿ ಬೇರೇನಾದರು ವರ ಕೇಳಿಕೊಳ್ಳಿ, ಅನುಗ್ರಹಿಸುವೆ ಎಂದರು. ಆಗ ಈ ಮೂವರು ಸೋದರರು ಸೇರಿ ತರ್ಕಿಸಿ, “ದೇವತೆಗಳಿಗಾಗಲಿ, ಅನ್ಯ ಯಾರೇ ಆಗಿರಲಿ ಯಾರಿಂದಲೂ ಭೇದಿಸಲು ಅಸಾಧ್ಯವಾದ ಮೂರು ಪ್ರತ್ಯೇಕ ಪುರಗಳನ್ನು ನಿರ್ಮಿಸುವ ವರ ನೀಡು ದೇವಾ!” ಎಂದು ಬೇಡಿಕೊಂಡರು. ಬ್ರಹ್ಮದೇವರು “ತಥಾಸ್ತು” ಹಾಗೆಯೇ ಆಗಲಿ ಎಂದು ಅನುಗ್ರಹಿಸಿದರು. ನಂತರ ಒಂದು ಎಚ್ಚರಿಕೆಯ ಮಾತನ್ನೂ ಅವರಿಗೆ ಹೇಳಿದರು. ನೀವು ಮೂವರು ಇನ್ನು ಒಂದೇ ಕಡೆ ಸೇರಬಾರದು. ನಿಮ್ಮ ಪುರಗಳು ಪ್ರತ್ಯೇಕವಾಗಿ ಇರಬೇಕು. ಅಧರ್ಮಕ್ಕೆ ಎಡೆಗೊಡಬಾರದು. ದೇವತೆಗಳನ್ನು ಪೀಡಿಸಬಾರದು. ಒಂದೊಮ್ಮೆಗೆ ನೀವೇನಾದರು ನಿಯಮ ಮೀರಿ ಒಂದೆಡೆ ಸೇರಿದರೆ ಒಂದೇ ಬಾಣದಿಂದ ನೀವು ಮೂವರು ಸಂಹರಿಸಲ್ಪಡುತ್ತೀರಿ. ಎಂದು ನಿರ್ಬಂಧ ವನ್ನು ಸ್ಪಷ್ಟವಾಗಿ ವಿವರಿಸಿದರು.
ಬ್ರಹ್ಮದೇವನ ವರಬಲದಂತೆ ಮಯನು ಪುಷ್ಯಾ ನಕ್ಷತ್ರ ದ ಸುಮೂಹೂರ್ತದಲ್ಲಿ ಮೂರು ಪ್ರತ್ಯೇಕವೂ, ವಿಭಿನ್ನವೂ ಆದ ಅಭೇದ್ಯ ಪುರಗಳನ್ನು ನಿರ್ಮಿಸತೊಡಗಿದನು. ಕ್ರಮವಾಗಿ ಭೂಮಿಯ ಮೇಲೆ ಕಬ್ಬಿಣದ ಪುರವನ್ನೂ, ಅಂತರಿಕ್ಷದಲ್ಲಿ ಬೆಳ್ಳಿಯ ಪುರವನ್ನೂ, ಅದಕ್ಕಿಂತಲೂ ಮೇಲ್ಭಾಗದಲ್ಲಿ ಸುವರ್ಣನಗರವನ್ನೂ ನಿರ್ಮಿಸಿದನು. ಮಯನ ಕೌಶಲ್ಯದಲ್ಲಿ ಮೂರು ಅಭೇದ್ಯ ಪುರಗಳು ನಿರ್ಮಾಣವಾದವು. ಭಿನ್ನ ಪ್ರಕಾರದ ಲೋಹಗಳ ಮೂರು ಪುರಗಳನ್ನು ಅನುಕ್ರಮಣಿಕೆಯಂತೆ ಕಬ್ಬಿಣದ ಪುರವನ್ನು ವಿದ್ಯುನ್ಮಾಲಿಗೂ, ಬೆಳ್ಳಿಯ ಪುರವನ್ನು ಕಮಲಾಕ್ಷನಿಗೂ, ಸುವರ್ಣ ಪುರವನ್ನು ತಾರಾಕ್ಷನಿಗೂ ಇತ್ತನು. ಈ ಮೂರು ಪುರಗಳು ತ್ರಿಪುರಗಳೆಂದು ಖ್ಯಾತಿಯಾದವು. ಇವುಗಳನ್ನು ನೀಡುವಾಗ ಮಯನು ಮತ್ತೆ ಮತ್ತೆ ಎಚ್ಚರಿಸುತ್ತಾ “ಯಾವ ಕಾರಣಕ್ಕೂ ನಿಮ್ಮ ಪುರಗಳನ್ನು ಭೇದಿಸಿ ಯಾರೂ ಒಳ ಪ್ರವೇಶಿಸಲಾರರು. ಹಾಗಾಗಿ ನಿಮಗಿನ್ನು ಶತ್ರು ಭಯವಿಲ್ಲ. ನಿಮಗೆ ಬೇಕಾಗುವ ಎಲ್ಲಾ ಸೌಕರ್ಯಗಳೂ ನಿಮ್ಮ ನಿಮ್ಮ ಪುರಗಳಲ್ಲಿ ಇದೆ. ನೀವು ಮರೆಯದೆ ಶಿವ ಭಕ್ತರಾಗಿ ಸದಾ ಶಿವಪೂಜೆ, ಧ್ಯಾನ ಮಾಡುತ್ತಿರಬೇಕು. ಅಧರ್ಮಮಾರ್ಗ ಅನುಸರಿಸಬಾರದು. ದೇವತೆಗಳಿಗೆ ತೊಂದರೆ ನೀಡಬಾರದು. ಎಲ್ಲಿಯವರೆಗೆ ನೀವು ಈ ನಿಯಮ ಮೀರದೆ ಪಾಲಿಸುವಿರೋ, ಅಲ್ಲಿಯವರೆಗೆ ಅಪರಾಜಿತರೂ, ಅವಧ್ಯರೂ ಆಗಿ ಅಮರರಾಗಿ ಬೆಳೆಯುತ್ತೀರಿ” ಎಂದು ಎಚ್ಚರಿಕೆಯ ಮಾರ್ಗದರ್ಶನವಿತ್ತನು.
ಅಂತೆಯೆ ಬಹುಕಾಲ ಮಯನ ನಿರ್ದೇಶನ ಮತ್ತು ಬ್ರಹ್ಮ ದೇವರು ವರಪ್ರದನಾಗುವಾಗ ವಿಧಿಸಿದ್ದ ನಿರ್ಬಂಧದಂತೆ ಸದಾ ಶಿವ ಧ್ಯಾನ, ಪೂಜೆಗೈಯುತ್ತಾ ಯಾರ ಸುದ್ಧಿಗೂ ಹೋಗದೆ ತಮ್ಮ ತಮ್ಮ ಲೋಹನಗರಗಳನ್ನು ಪಾಲಿಸುತ್ತಾ ಬರುತ್ತಿದ್ದರು. ಕ್ರಮೇಣ ನಿಷ್ಠೆಯಿಂದ ವಿರಚಿಸುತ್ತಿದ್ದ ಶಿವ ಧ್ಯಾನ, ಪೂಜೆಯಾದಿ ವಿಧಿಗಳನ್ನು ಅಲಕ್ಷಿಸ ತೊಡಗಿದರು. ಕೊನೆಗೆ ಅಂತಹ ದಿನಚರಿ ಮಾಯವಾಗಿ ಹೋಯಿತು. ತಾವು ಅಜೇಯರು, ನಮ್ಮ ನಗರ ಅಭೇದ್ಯ ಎಂಬ ಅಹಂ ತಲೆಗಡರಿದ ಕಾರಣ ದುರ್ಬುದ್ಧಿ ಅವರನ್ನು ಆವರಿಸಿತು. ದೇವತೆಗಳ ಬಗ್ಗೆ ವೈರ ಭಾವ ಬೆಳೆಸತೊಡಗಿದರು. ಇಂದ್ರಾದಿ ದೇವತೆಗಳಿಗೆ ಬಾಧೆ ನೀಡುತ್ತಾ ಹಿಂಸಿಸತೊಡಗಿದರು. ಪರಿಣಾಮ ಇವರ ಬಾಧೆಯಿಂದ ಬಳಲಿದ ಸುಮನಸರು ಇಂದ್ರನೊಡಗೂಡಿ ಮಹಾದೇವ ಶಿವ ಪರಮಾತ್ಮನ ಮೊರೆ ಹೊಕ್ಕರು.
ಮುಂದುವರಿಯುವುದು…





