ಭಾಗ 386
ಭರತೇಶ್ ಶೆಟ್ಟಿ , ಎಕ್ಕಾರ್

“ಅಣ್ಣಾ! ಪಾಂಡವ ಸೇನೆಯ ಪ್ರಮುಖನಾಗಿ ಸೇನೆಯ ಸಂರಕ್ಷಣೆಯ ಹೊಣೆ ಹೊತ್ತಿರುವ ಧರ್ಮಾತ್ಮನಾದ ನಿನ್ನ ಮನದಲ್ಲಿ ಮೂಡಿರುವ ಗೊಂದಲ ಸಹಜವಾದದ್ದೆ ಆಗಿದೆ. ಈ ಎಲ್ಲಾ ವಿಕೋಪಗಳಿಗೆ ಮತ್ತು ಕುರು ಸೇನೆ ತಳೆದಿರುವ ಧೈರ್ಯಕ್ಕೆ ಗುರುಪುತ್ರ ಅಶ್ವತ್ಥಾಮ ಕಾರಣ. ನಮ್ಮೆಲ್ಲರಿಗೂ ಆಚಾರ್ಯರಾದ ದ್ರೋಣರು ಎಂಬತ್ತೈದು ವರ್ಷ ಪ್ರಾಯದಲ್ಲಿದ್ದರೂ, ವಯೋಸಹಜ ಗುಣಗಳಿಗಿರಬೇಕಾದ ವೃದ್ಧಾಪ್ಯವನ್ನು ಮೀರಿದ ಸಾಹಸಿಯಾಗಿ ನಾವೆಷ್ಟು ಪ್ರಯತ್ನಿಸಿದರೂ ಅವರಿಂದ ನಮ್ಮ ಪಕ್ಷದ ಮೇಲಾದ ನಾಶ ಅಸಾಮಾನ್ಯವಾದುದು. ಈಗ ಅವರ ಮಗ ಅಶ್ವತ್ಥಾಮ ನಮಗೆ ಪ್ರತಿ ದ್ರೋಣನಾಗಿ ಸಮಾನ ಬಲ ಸಂಪನ್ನನಾಗಿ ಎದುರಾಗಿದ್ದಾನೆ. ಗುರು ದ್ರೋಣರಿಗೆ ಪ್ರಿಯ ಪುತ್ರನೂ, ಶಿಷ್ಯನೂ ಆಗಿ ಬೆಳೆದ ಈತನಿಗೆ ತನ್ನೆಲ್ಲಾ ವಿದ್ಯೆ ಅಸ್ತ್ರ, ಶಸ್ತ್ರ, ಶಾಸ್ತ್ರಗಳನ್ನು ಧಾರೆಯೆರೆದಿದ್ದಾರೆ. ಪಾಂಚಾಲಾಧಿಪ ನಮ್ಮ ಮಾವ ದ್ರುಪದ ಮಹಾರಾಜ ದ್ರೋಣ ವಧೆಗೆಂದು ಸಂಕಲ್ಪ ಮಾಡಿ ಪುತ್ರ ದೃಷ್ಟದ್ಯುಮ್ನನನ್ನು ಪಡೆದರೆ, ಅಂತಹ ದೃಷ್ಟದ್ಯುಮ್ನನನ್ನು ವಧಿಸುವುದಕ್ಕಾಗಿ ಅಶ್ವತ್ಥಾಮನನ್ನು ಸಂಪೂರ್ಣ ಸಿದ್ಧಗೊಳಿಸಿದ್ದಾರೆ. ಈಗ ಗುರು ದ್ರೋಣರ ವಧೆಯಾದ ವಿಷಯ ತಿಳಿದು ಆತ ಕ್ರುದ್ಧನಾಗಿ ಯಮಸದೃಶನಾಗಿದ್ದಾನೆ. ಪ್ರಕೃತಿಯಲ್ಲಾಗಿರುವ ಈ ವಿಪರೀತ ವ್ಯತ್ಯಯಗಳಿಗೆ ಗುರುಪುತ್ರ ದ್ರೌಣಿ ಸಂಧಾನಗೊಳಿಸಿರುವ ದಿವ್ಯಾಸ್ತ್ರವೇ ಕಾರಣವಾಗಿದೆ. ಅಸಾಮಾನ್ಯ ವೀರನಾಗಿರುವ ದ್ರೋಣಾಚಾರ್ಯರ ಪುತ್ರ ಧನುರ್ವೇದ ಪಾರಂಗತನೂ ಹೌದು. ಈತನಿಗೆ ಜ್ಞಾನ, ಬುದ್ಧಿ, ವಿವೇಕ ಎಲ್ಲವೂ ಇದೆ. ಆದರೆ ಕ್ರೋಧಾವೇಶಕ್ಕೆ ಒಳಗಾದರೆ ದ್ವೇಷ ಸಾಧನೆಗೆ ನಿಂತರೆ ಘಟಸರ್ಪದಂತಾಗುತ್ತಾನೆ. ಕ್ರೂರಿಯೂ, ಸಂಕುಚಿತ ಮನಸ್ಸುಳ್ಳವನೂ ಆಗಿ ಉಚಿತಾನುಚಿತ ಮರೆತು ಏನನ್ನಾದರೂ ಮಾಡಿ ತನ್ನ ಕಾರ್ಯ ಸಾಧನೆಗೆ ಮನಮಾಡುತ್ತಾನೆ. ಈಗ ಆತನ ಮನಸ್ಸು – ಸತ್ಯಾತ್ಮ ಎಂದು ಪರಿಗಣಿತನಾಗಿದ್ದರೂ, ಅಶ್ವತ್ಥಾಮ ಎಂಬ ಆನೆಯ ಸಾವನ್ನು ಅರಿತು ಉದ್ದೇಶಪೂರ್ವಕ ದ್ವಂದ್ವಾರ್ಥದಲ್ಲಿ ಹೇಳಿದ ನಿನ್ನ ವಚನ : ತಿಳಿದು ಹೇಳಿದ ಸುಳ್ಳೇ ಆಗುತ್ತದೆ ಎಂಬ ಕಾರಣಕ್ಕೆ ನಿನ್ನ ಮೇಲೂ ಕುಪಿತನಾಗಿದ್ದಾನೆ. ಘೋರನಾಗಿದ್ದು ತನ್ನ ಪಿತ ದ್ರೋಣರ ವಧೆಗೈದ ದೃಷ್ಟದ್ಯುಮ್ನನ ಮೇಲೂ ವಿಪರೀತವಾಗಿ ಹಗೆ ಕಾರುತ್ತಿದ್ದಾನೆ. ತನ್ನ ತಂದೆಯ ಮನಶಾಂತಿಗಾಗಿ ಅವರಿಗೆ ವಿದ್ರೋಹಗೈದ ನಿಮ್ಮೀರ್ವರ ನಾಶಗೈಯಲು ಮುಂದಾಗಿದ್ದಾನೆ. ನಮ್ಮ ಪೂರ್ಣ ಸೇನೆಯ ನಾಶವನ್ನು ಆತ ಸಂಕಲ್ಪ ಮಾಡಿದಂತಿದೆ. ಯಾರೇ ಆಗಲಿ ವಿಚಲಿತ ಮನಸ್ಕರಾಗಿ ಕ್ರೋಧ ಮತ್ತು ದ್ವೇಷದ ಪ್ರತಿಕಾರಕ್ಕೆ ತೊಡಗಿ ಬುದ್ದಿಯನ್ನು ತೊರೆದರೆ, ಅಂತಹ ವ್ಯಕ್ತಿ ವಿವೇಕ ಶೂನ್ಯನಾಗಿ ಬಿಡುತ್ತಾನೆ ಈಗ ಅಶ್ವತ್ಥಾಮನ ಸ್ಥಿತಿಯೂ ಹಾಗೆಯೆ ಆಗಿ ಅಪಾಯಕಾರಿಯಾಗಿದೆ. ಅಣ್ಣಾ ದೃಷ್ಟದ್ಯುಮ್ನನಿಂದ ಆಗಬಹುದಾದ ಅಧರ್ಮವನ್ನು ಅರಿತು ತಡೆಯುವ ಪ್ರಯತ್ನ ಪ್ರಾಮಾಣಿಕವಾಗಿ ನಾವು ಮಾಡಿದ್ದೇವೆ. ಕೂಗಿ ಬೊಬ್ಬಿರಿದು ಹೇಳಿದರೂ, ಸ್ವಯಂ ಶಿಷ್ಯನಾಗಿದ್ದರೂ ಆತನ ಗುರುವಾಗಿದ್ದ ದ್ರೋಣಾಚಾರ್ಯರ ಮೇಲೆ ಶಿಷ್ಯಧರ್ಮ ಮೀರಿ, ಕರುಣೆ ತೋರದೆ, ತನ್ನ ಹುಟ್ಟಿನ ಸಂಕಲ್ಪ ಕಾರ್ಯವನ್ನು ಪೂರೈಸಿ ಬಿಟ್ಟನು. ಆತನ ಜೀವನಕ್ಕೂ ಶಾಶ್ವತವಾದ ಕಳಂಕವನ್ನು ಮೆತ್ತಿಕೊಂಡನು. ಆಚಾರ್ಯ ದ್ರೋಣರು ವೈರಿ ಪಕ್ಚದಲ್ಲಿದ್ದರೂ ನಮ್ಮನ್ನು ಅವರ ಶಿಷ್ಯರು ಎಂಬ ಮಮಕಾರದಲ್ಲಿ ಕಾಣುತ್ತಿದ್ದರು. ವಿದ್ಯೆ ನೀಡಿ ಗುರುವಾಗಿ, ರಕ್ಷಣೆ ಮಾಡುತ್ತಾ ತಂದೆಯ ಸ್ಥಾನದಲ್ಲಿ ಸ್ಥಿತರಾಗಿದ್ದ ಗುರು ದ್ರೋಣರ ಬಗ್ಗೆ ನನಗೀಗಲೂ ಅತಿಯಾದ ಒಲವಿದೆ. ಅವರ ಮರಣಕ್ಕೆ ಪ್ರತಿಯಾಗಿ ಬಹಳ ಖೇದವಿದೆ. ಜಯ ಸಾಧಿಸಬೇಕೆಂಬ ಲೋಭಕ್ಕೆ ಬಲಿಯಾಗಿ ಭೀಷ್ಮಾಚಾರ್ಯ – ದ್ರೋಣಾಚಾರ್ಯರಂತಹ ಮಹಾತ್ಮರನ್ನು ಹಿಂಸಿಸಿ ಪಾಪಕರ್ಮ ಮಾಡಿದ್ದೇವೆ ಎಂಬ ಹಾಗೆ ಪಶ್ಚಾತ್ತಾಪ ನನ್ನ ಮನದಲ್ಲಿದೆ. ಈಗ ಕಾಲ ಮಿಂಚಿ ಹೋಗಿದೆ. ಧರ್ಮ ಅನುಸಾರ ಎದುರಾಗುವ ಗುರುಪುತ್ರನನ್ನು ಎದುರಿಸಬೇಕು.” ಎಂದನು.
ಅರ್ಜುನನ ಮಾತುಗಳನ್ನು ಕೇಳುತ್ತಿದ್ದ ಭೀಮಸೇನನಿಗೆ ನಾವು ತಪ್ಪೆಸಗಿದ್ದೇವೆ ಎಂಬ ಅರ್ಜುನನ ಮಾತು ಹಿತವೆಣಿಸದೆ ಸಿಟ್ಟು ಬಂತು ” ಪಾರ್ಥಾ! ದ್ರೌಪದಿಯ ತುರುಬಿಗೆ ಕೈಯಿಕ್ಕಿ ಎಳೆದಾಡಿದ್ದ ಕೌರವರನ್ನು ತಡೆಯದೆ ಉಳಿದದ್ದು ಗುರು ದ್ರೋಣ – ಭೀಷ್ಮಾಚಾರ್ಯರದ್ದು ತಪ್ಪಲ್ಲವೇ? ಈಗ ಬ್ರಹ್ಮಾಸ್ತ್ರ ಪ್ರಯೋಗದ ಶಾಸ್ತ್ರವನ್ನು ಮರೆತು ಗುರು ಸ್ಥಾನದ ಯೋಗ್ಯತೆ ಕಳಕೊಂಡು ವ್ಯವಹರಿಸಿದ ಅಕ್ಷಮ್ಯ ಅಪರಾಧಿಯಾಗಿ ಕಾಣಿಸಿದ ಕುರು ಸೇನಾಪತಿಯನ್ನು ರಣತಂತ್ರದಿಂದ ಮಣಿಸಿದ್ದು ಅಪರಾಧವಾದರೆ, ಪುತ್ರ ಅಭಿಮನ್ಯುವಿನ ಮರಣ ಹೇಗಾಯಿತು? ಆಗ ಗುರುಗಳು ಯುದ್ಧಧರ್ಮ ಪಾಲಿಸಿದ್ದರೆ? ನಾವು ಅಸಹನೀಯ ಕಷ್ಟ ಅನುಭವಿಸಿದ ವನವಾಸ – ಅಜ್ಞಾತವಾಸಕ್ಕೆ ಕಾರಣವಾದ ಮೋಸ ಸಹಿಸಿ, ಆಗ ಮೌನವಾಗಿ ಕುಳಿತಿದ್ದ ಆಚಾರ್ಯದ್ವಯರ ನಡೆಯ ಬಗ್ಗೆ – ಈಗ ನಾವು ಮೌನವಾಗಿ ಉಳಿದರೆ ತಪ್ಪಾಗುತ್ತದೆಯೋ? ಇವರಿಬ್ಬರ ಬಗ್ಗೆ ನನಗೂ ಪ್ರೀತಿ, ಮಮಕಾರ ಗೌರವಗಳಿವೆ. ಅವರ ಮರಣದ ಬಗ್ಗೆ ಅತೀವ ದುಃಖವೂ ಇದೆ. ಹಾಗೆಂದು ಯುದ್ಧ ಎಂದ ಮೇಲೆ ನೋವು ಸಾವು ಅದರ ಭಾಗ. ಒಂದೋ ಅವರು ನಮ್ಮನ್ನು ನಾಶಗೈಯಬೇಕು. ಇಲ್ಲ ಅದಕ್ಕೂ ಮೊದಲು ನಾವು ಅವರ ಅಂತ್ಯಕ್ಕೆ ಕಾರಣರಾಗಬೇಕು. ಇದೇ ಯುದ್ಧ ಧರ್ಮ. ಇದೆಲ್ಲಾ ನಿನ್ನ ಮನಸ್ಸಿಗೆ ವೇದನೆ ಆಗುವುದಾದರೆ ಯುದ್ದಕ್ಕೆ ತೊಡಗುವ ಮೊದಲು ಯೋಚಿಸಬೇಕಿತ್ತು. ಯೋಧಧರ್ಮ ಮರೆತು ಈಗ ಯುದ್ದ ಸಾಗುತ್ತಿರುವ ಸಮಯ ಅನ್ಯ ಮಾರ್ಗದಲ್ಲಿ ತರ್ಕಿಸುವುದು ಅಸಮಂಜಸ. ನಿನಗೆ ಅಂತಹ ಭಾವ ಜಾಗೃತಿಯಿಂದ ಸಂವೇದನೆ ಆಗುತ್ತಿದೆಯಾದರೆ ಅಶ್ವತ್ಥಾಮನನ್ನು ನಾನು ಎದುರಿಸುತ್ತೇನೆ. ನಿನ್ನ ದೃಷ್ಟಿಯಲ್ಲಿ ಅಶ್ವತ್ಥಾಮ ಅತಿ ವಿಕ್ರಮಿ ಎಂದು ಕಾಣುವಾಗ, ನಿನ್ನ ಶಕ್ತಿಯ ಬಗ್ಗೆ ಮರೆವು ಆವರಿಸಿತೇ? ನಿನ್ನೆದುರು ತುಲನೆಯಲ್ಲಿ ಹದಿನಾರನೆಯ ಒಂದಂಶಕ್ಕೂ ಯೋಗ್ಯನಲ್ಲದವನ ಬಗ್ಗೆ ಭಯಗೊಳ್ಳುತ್ತಿರುವೆಯಾ? ನನ್ನ ಬಗ್ಗೆ ನನಗೆ ಅಭಿಮಾನವಿದೆ. ನಾನು ಧರಿಸಿರುವ ಗದೆ ದಿವ್ಯವಾಗಿದೆ. ಆಧರಿಸಿರುವ ಬಾಹುಗಳು ಮಹಾಬಲಶಾಲಿಗಳಾಗಿವೆ. ನನ್ನ ಗದಾಘಾತದಿಂದ ಭೂಕಂಪನವನ್ನೇ ಮಾಡಬಲ್ಲೆ. ಭಯಗೊಂಡಿರುವ ನೀನು ಸರಿದು ನಿಲ್ಲು. ವಾಸುದೇವನಿರುತ್ತಾ ಈ ರೀತಿ ಸೇನೆಯನ್ನು ಭಯಗೊಳಿಸುವ ಮಾತು ಆಡುವುದು ನಿನಗೆ ಭೂಷಣವಲ್ಲ ” ಎಂದು ವೀರಾವೇಶದಿಂದ ನುಡಿದನು.
ಭೀಮ ಮತ್ತು ಅರ್ಜುನರ ಮಾತುಗಳನ್ನು ಕೇಳುತ್ತಿದ್ದ ದೃಷ್ಟದ್ಯುಮ್ನನೂ ಕುಪಿತನಾಗಿ ಮುಂದೆ ಬಂದನು. “ಹೇ ಅರ್ಜುನಾ! ನೀನು ನಮಗೆ ಬಂಧು ಎಂಬ ಕಾರಣಕ್ಕೆ ನಾವು ಪಾಂಚಾಲರು ಈ ಯುದ್ಧದಲ್ಲಿ ಭಾಗಿಗಳಾಗಿದ್ದೇವೆ. ಇಲ್ಲವಾದರೆ ಈ ಯುದ್ದ ನಮಗೆ ಸಂಬಂಧಪಟ್ಟದ್ದಲ್ಲ. ನನ್ನ ಪ್ರೀತಿಯ ಪಿತನ ಹತ್ಯೆಗೈದ ದ್ರೋಣರ ಮೇಲೆ ಪ್ರತಿಕಾರ ತೀರಿಸಿದ ನನ್ನ ನಡೆ ತಪ್ಪೆಂದು ಕಾಣುತ್ತಿದೆಯೋ ನಿನಗೆ? ನಾನು ದ್ರೋಣನನ್ನು ಕೇವಲ ವೈರಿಯೆಂದು ಭಾವಿಸಿ, ಅದೇ ಭಾವನೆಯಿಂದ ವಧಿಸಿ ಸಂತೃಪ್ತನಾಗಿದ್ದೇನೆ. ನಿಜವಾದ ಅಪರಾಧ ನೀನು ಗೈದಿರುವೆ. ಭೀಷ್ಮಾಚಾರ್ಯರನ್ನು ಸರಳಮಂಚಕ್ಕೊರಗುವಂತೆ ಮಾಡುವಲ್ಲಿ ಕಣ್ಣೀರ್ಗರೆಯುತ್ತಾ ಬಾಣ ಪ್ರಯೋಗಿಸುತ್ತಿದ್ದೆ. ಪಿತಾಮಹ ಎಂಬ ಸಂಬಂಧವನ್ನು ಇರಿಸಿಕೊಂಡು ನೀನು ಹಾಗೆ ಮಾಡಿದ್ದೆ. ಹಾಗಿದ್ದೂ ನಿನ್ನನ್ನು ನೀನು ಧರ್ಮಾತ್ಮ ಎಂದು ಭಾವಿಸುವೆ. ನಿನಗೆ ನೀನೇ ಆತ್ಮ ವಂಚನೆಯ ಕೃತ್ಯ ಎಸಗಿ ನನ್ನನ್ನು ಆರೋಪಿ ಎನ್ನುವ ನೈತಿಕತೆ ನಿನಗಿಲ್ಲ. ಮಾತ್ರವಲ್ಲ ಪಾಂಡವ ಜೇಷ್ಟನೂ, ಸತ್ಯಾತ್ಮನೂ ಆದ ಧರ್ಮರಾಯನನ್ನು ಸುಳ್ಳುಗಾರ ಎನ್ನುವ ನಿನ್ನ ಮನಸ್ಥಿತಿ ಅತಿ ಹೀನವಾದದ್ದು. ಧರ್ಮರಾಯ ಸ್ಪಷ್ಟವಾಗಿ ಸತ್ತದ್ದು ಆನೆಯೋ? ನರನೋ ಎಂದು ಪೂರ್ಣವಾಗಿ ಕೇಳಿದ್ದಾನೆ. ರಣತಂತ್ರ ಅರಿಯಲಾಗದೆ ಅಸಮರ್ಥನಾಗಿ ಸೋತ ರಣನಿಪುಣನಾದ ದ್ರೋಣನ ವೈಫಲ್ಯಕ್ಕೆ ಉಳಿದಿರುವವನ್ನು ದೂಷಿಸುವುದು ನಿನ್ನ ಯೋಗ್ಯತೆಗೆ ತಕ್ಕುದಾದುದಲ್ಲ. ಆನೆಯೊಂದು ತನ್ನ ಅಗಾಧವಾದ ಶರೀರವನ್ನು ಬಗ್ಗಿಸಿ ತನ್ನ ಭುಜವೇರಲು ಬಿಡುವುದು ತನ್ನಲ್ಲಿ ಎದುರಿಸುವ ಬಲವಿಲ್ಲದ ಕಾರಣದಿಂದ ಅಲ್ಲ, ಬದಲಾಗಿ ಮಾವುತ ತನ್ನ ಪ್ರೀತಿಪಾತ್ರ ಎಂಬ ಭಾವದಿಂದ. ಈವರೆಗೂ ನಿನಗೆ ಅಂತಹ ಪ್ರೀತಿಯನ್ನು ತೋರಿ ಸರ್ವಸ್ವವನ್ನೂ ಸಮರ್ಪಿಸುತ್ತಿರುವುದು ನೀವು ನನ್ನ ಭಾವಂದಿರು ಎಂಬ ಕಾರಣದಿಂದ, ಮತ್ತು ನನ್ನ ಪ್ರೀತಿಯ ತಂಗಿ ದ್ರೌಪದಿಗೆ ನ್ಯಾಯ ಒದಗಿಸ ಬೇಕೆಂಬ ಛಲದಿಂದ. ಆದರೆ ಇದೆಲ್ಲವನ್ನೂ ಮರೆತು ನನ್ನನ್ನೇ ಅಪರಾಧಿ ಎಂದು ದೂಷಿಸಿದರೆ, ನಿನ್ನನ್ನು ಎದುರಿಸಿ ಪ್ರಶ್ನಿಸುವಲ್ಲಿ ನನಗೆ ಭಯವಾಗಲೀ, ದೌರ್ಬಲ್ಯವಾಗಲಿ ಇಲ್ಲ. ಈ ಸತ್ಯವನ್ನು ತಿಳಿದು ವ್ಯವಹರಿಸು” ಎಂದು ಎಚ್ಚರಿಸಿದನು.
ದೃಷ್ಟದ್ಯುಮ್ನ ಈ ರೀತಿ ಅರ್ಜುನನ್ನು ನಿಂದಿಸಿದಾಗ ಪಾರ್ಥನ ಶಿಷ್ಯನೂ ಪ್ರಿಯ ಸಖನೂ ಆಗಿರುವ ಸಾತ್ಯಕಿ ಕೆರಳಿದ. “ಹೇ ಕ್ರೂರಕರ್ಮಿ, ನರಾಧಮನಾದ ದೃಷ್ಟದ್ಯುಮ್ನಾ! ನೀನು ಕ್ಷಾತ್ರಧರ್ಮವನ್ನು ಮರೆತು ಬ್ರಾಹ್ಮಣ ಕುಲ ಸಂಜಾತನ ವಧೆಗೈದು ಬ್ರಹ್ಮಹತ್ಯಾ ದೋಷಕ್ಕೆ ಗುರಿಯಾಗಿರುವೆ. ದೋಷಿಯಾದ ನಿನ್ನ ಮುಖದರ್ಶನವೂ ನಿಷಿದ್ಧ, ಪ್ರಾಯಶ್ಚಿತ್ತಕ್ಕಾಗಿ ಬಲ್ಲವರು ಹಾಗಾದ ಕೂಡಲೆ ಸೂರ್ಯನ ದರ್ಶನಗೈಯುತ್ತಿದ್ದಾರೆ. ವೃದ್ಧನೂ, ಗುರುವೂ ಪೂಜನೀಯರೂ ಆದ ದ್ರೋಣರ ಕಗ್ಗೊಲೆಗೈದು ಮಹಾ ಪಾತಕಿಯಾಗಿರುವೆ. ಯುದ್ಧದಿಂದ ವಿಮುಖರಾಗಿ, ಶಸ್ತ್ರವನ್ನು ಕೆಳಗಿಟ್ಟು ಸಂನ್ಯಾಸ ಸ್ವೀಕರಿಸಿದವರ, ಮಹಾಮುನಿಯಂತೆ ತಪಸ್ಸಿಗೆ ಕುಳಿತ ಆಚಾರ್ಯರ ಶಿಖೆಗೆ ಕೈಯಿಕ್ಕಿ ಜಗ್ಗಿ ಶಿರ ಕಡಿದ ನಿನ್ನ ಕೃತ್ಯ ನಮ್ಮ ಪಕ್ಷದ ಎಲ್ಲರಿಂದಲೂ ಖಂಡಿಸಲ್ಪಟ್ಟಿದೆ. ಸ್ವಾರ್ಥಿಯಾಗಿ ಕೇವಲ ನಿನ್ನ ಪಿತನ ಹತ್ಯೆಗೆ ಪ್ರತಿಕಾರ ಪೂರೈಸಲು ಘೋರ ಅಧರ್ಮಗೈದು ಈಗ ಅದನ್ನೇ ಸಮರ್ಥಿಸುತ್ತಾ ಮಹಾ ವಿಕ್ರಮಿ ಅರ್ಜುನನನ್ನು ದೂಷಿಸುವೆಯಾ? ಭೀಷ್ಮಾಚಾರ್ಯರ ವಧೆಯ ಬಗ್ಗೆ ಹೇಳುವ ನೀನು ಅದಕ್ಕೆ ಕಾರಣವಾದ ನಿನ್ನ ಸೋದರ ಶಿಖಂಡಿಯ ಬಗ್ಗೆ ಮೊದಲು ಅರಿತು ತರ್ಕಿಸಿಕೊಳ್ಳಬೇಕು. ಆಮೇಲೆ ಶರಪ್ರಯೋಗ ಮಾಡಿದ ಮತ್ತು ಆ ಹೊತ್ತು ಅಧಮ್ಯವಾದ ವೇದನೆ ಅನುಭವಿಸಿದ್ದ ಪಾರ್ಥ ಮಹಾಶಯನ ಧರ್ಮ ಬುದ್ಧಿಯ ಬಗ್ಗೆ ವಿವೇಚಿಸಿಕೊಳ್ಳಬೇಕು. ಧರ್ಮಪಾಲನೆಯ ಕರ್ಮ ಮಾಡಿದ್ದಾನೆ ಅರ್ಜುನ. ಪರಿಮಾರ್ಜನೆ ಆಗಬೇಕಾದರೆ ಪಶ್ಚಾತ್ತಾಪವೂ ಒಂದು ಗುಣಧರ್ಮ ಅದನ್ನು ಅನುಭವಿಸಿದ್ದಾನೆ. ನೀನೀಗ ಉದ್ಧಟತನದಿಂದ ಪಾರ್ಥನನ್ನು ಎದುರಿಸುವ ಸವಾಲೆಸೆಯುವೆಯಾ? ಅದಕ್ಕೂ ಮೊದಲು ಕೃಷ್ಣಾರ್ಜುನರ ಅಂಗರಕ್ಷಕ ಸಾತ್ಯಕಿ ನಾನಿದ್ದೇನೆ. ನಿನ್ನಿಂದ ಕೂಡಿದರೆ ಮೊದಲು ನನ್ನನ್ನು ಸೋಲಿಸಿ ನಂತರ ಪಾರ್ಥನ ಬಗ್ಗೆ ಯೋಚಿಸು. ಘೋರ ಪಾತಕಗೈದು ನಿಕೃಷ್ಟ ಸಾವು ನಿನಗೊದಗಲಿದೆ ಎಂಬುವುದನ್ನು ಮರೆಯಬೇಡ” ಎಂದು ಘರ್ಜಿಸಿದನು.
ಈ ರೀತಿ ಸಾತ್ಯಕಿ ಆಡಿದ ಉಗ್ರವಚನಗಳನ್ನು ಕೇಳಿ ದೃಷ್ಟದ್ಯುಮ್ನನೂ ಕಿಡಿಕಾರತೊಡಗಿದನು “ಹೇ ನೀಚನೇ! ಮೊದಲು ನಿನ್ನ ಬಗ್ಗೆ ಸರಿಯಾಗಿ ವಿಮರ್ಷೆ ಮಾಡಿಕೋ. ತುಚ್ಚವಾದ ಬುದ್ಧಿಯುಳ್ಳ, ಪಾಪಿಯಾದ ನೀನೇನು ಮಾಡಿರುವೆ? ಎಲ್ಲಾ ನಿನಗೆ ಮರೆತು ಹೋಗಿದೆಯೋ? ನಿನ್ನ ಪರಮ ವೈರಿಯಾದ ಭೂರಿಶ್ರವಸನ ಕೈಯಲ್ಲಿ ಹೀನಾಯವಾಗಿ ಸೋತು ಸಾವಿನ ಬಾಗಿಲು ತಟ್ಟಿದ್ದ ನೀನು, ಅರ್ಜುನನಿಂದ ರಕ್ಷಿಸಲ್ಪಟ್ಟೆ. ಭೂರಿಶ್ರವಸನ ತೋಳು ಅರ್ಜುನನಿಂದ ಕತ್ತರಿಸಲ್ಪಟ್ಟ ಬಳಿಕ ಆತ ಏನು ಮಾಡಿದ್ದ? ಅವನೂ ಪ್ರಾಯೋಪವೇಶ ವೃತಸ್ಥನಾಗಿ ಧ್ಯಾನಸ್ಥನಾಗಿ ತಪೋನಿರತನಾಗಲಿಲ್ಲವೇ?. ಆಗ ಒದಗಿದ ವಿರಾಮದ ಅವಧಿಯಲ್ಲಿ ಮತಿಹೀನನಾಗಿ ಬಿದ್ದಿದ್ದ ನೀನು ಚೇತರಿಸಿದ್ದನ್ನು ಮರೆತೆಯಾ? ಎದ್ದು ನೀನಾದರೂ ಮಾಡಿದ್ದೇನು? ಎಲ್ಲರೂ ಕೂಗಿ ನಿಲ್ಲು ಸಾತ್ಯಕಿ ಎಂದು ಬೊಬ್ಬಿರಿದು ಹೇಳಿದರೂ ಕೇಳದೆ, ಶಸ್ತ್ರ ಸನ್ಯಾಸಗೈದು, ತಪೋ ನಿರತನಾಗಿ, ಧ್ಯಾನಾವಸ್ಥೆಯಲ್ಲಿದ್ದ ಭೂರಿಶ್ರವಸನ ಶಿರಚ್ಛೇಧನಗೈದೆಯಲ್ಲಾ? ಇದು ಪಾಪ ಕೃತ್ಯ ವಾಗಿ ನಿನಗೇಕೆ ಕಾಣುತ್ತಿಲ್ಲ? ದ್ರೋಣರ ವಧೆಗೈಯುವ ಮೊದಲು ನಾನು ಅವರ ಜೊತೆ ಯುದ್ಧ ನಿರತನಾಗಿದ್ದೆ. ಅತ್ಯುಗ್ರ ಸಮರವನ್ನು ಸಾರಿದ್ದೆ. ಸಮರ ಸಾಗುತ್ತಿರುವಾಗಲೇ ಯುದ್ಧ ಧರ್ಮ ಮೀರಿ ನಮ್ಮ ಪಾಂಚಾಲ ಸೇನೆಯ ಮೇಲೆ ಅಧರ್ಮಯುಕ್ತವಾಗಿ ಮತ್ತೆ ಮತ್ತೆ ಬ್ರಹ್ಮಾಸ್ತ್ರ ಪ್ರಯೋಗಿಸಿ ನಮ್ಮ ಸೇನೆಯ ಇಪ್ಪತ್ತು ಸಾವಿರ ರಥಿಕರನ್ನೂ, ಲಕ್ಷೋಪಾದಿಯಲ್ಲಿ ಸೈನಿಕರನ್ನೂ ಅನ್ಯಾಯ ಮಾರ್ಗದಿಂದ ಸಂಹರಿಸಿ ದ್ರೋಣರು ಅಪರಾಧಗೈದಿದ್ದರು. ಆದರೂ ಅವರೆದುರು ಹೋರಾಡುತ್ತಾ ನಿಂತಿದ್ದ ನಾನು ಕ್ಷತ್ರಿಯನಾಗಿ, ಕ್ಷಾತ್ರ ಧರ್ಮದಂತೆ ಬ್ರಹ್ಮಾಸ್ತ್ರಕ್ಕೆ ಗೌರವ ನೀಡಿ ನಿಂತಿದ್ದೆ. ಅವರು ಧರ್ಮಯುದ್ಧ ಮುಂದುವರಿಸಿದ್ದರೆ ಅವರ ವಧೆಗಾಗಿಯೆ ನಮ್ಮ ತಂದೆಯ ಸಂಕಲ್ಪ ಯಾಗದಿಂದ ಹುಟ್ಟಿ ಬಂದಿದ್ದ ನಾನು ಯುದ್ದ ಮಾಡಿಯೇ ವಧಿಸುತ್ತಿದ್ದೆ. ಹಾಗೆ ಆಗಗೊಡದೆ, ವಿಮುಖರಾದ ಅವರನ್ನು ಬದುಕುಳಿಯಲು ಬಿಡದೆ ಸಂಹರಿಸಿದ್ದೇನೆ. ಹೇಗೂ ಅವರು ನನ್ನಿಂದಲೆ ಹತರಾಗಲಿದ್ದವರು ವಧಿಸಲ್ಪಟ್ಟಿದ್ದಾರೆ. ನೀನು ಹಾಗಲ್ಲ, ಬಲ ತೋಳು ಕತ್ತರಿಸಲ್ಪಟ್ಟು ಉಪವಾಸ ಸಂಕಲ್ಪದಿಂದ, ಪ್ರಾಯೋಪವೇಶಗೈದು, ದರ್ಭಾಸನ ಸ್ಥಿತನಾಗಿ ಧ್ಯಾನಸ್ಥನಾಗಿದ್ದ ಭೂರಿಶ್ರವಸನನ್ನು ಪ್ರತಿಕಾರ ಪೂರೈಕೆಗಾಗಿ ವಧಿಸದ ಪಾತಕಿ. ಈಗ ನನಗೆ ನೀತಿ ಪಾಠ ಮಾಡಲು ಬಂದಿರುವೆಯಾ? ಆತ ನಿನ್ನನ್ನು ಹೀನಾಯವಾಗಿ ಸೋಲಿಸಿ, ಮತಿಹೀನನಾಗಿಸಿ ಎಸೆದು ಒದ್ದು ನಿನ್ನ ತೇಜೋವಧೆಗೈದಿದ್ದಾನೆ. ನೀನು ಬದುಕಿದ್ದೂ ಆತನಿಂದ ಮಾನಹರಣಕ್ಕೊಳಗಾಗಿರುವ ಹೆಣ ಸಮಾನ. ಈಗ ಸೆಟೆದು ನಿಂತು ಪ್ರೇತಸದೃಶನಾಗಿ ಹಿತೋಪದೇಶ ಮಾಡುವ ಯೋಗ್ಯತೆ ನಿನಗಿದೆಯೋ ತಿಳಿದುಕೋ. ಉಸಿರಾಡುತ್ತಿರುವ ಶವವಾಗಿರುವ ನಿನ್ನ ಶ್ವಾಸಹರಣ ಮಾಡದೆ ಬಿಡಲಾರೆ” ಎಂದು ತುಚ್ಚವಾಗಿ ಹೀಗಳೆದು ಜರೆದು ನುಡಿದನು.
ಇದೆಲ್ಲವನ್ನೂ ಕೇಳಿಸಿಕೊಂಡ ಸಾತ್ಯಕಿ “ಹೇ ದುಷ್ಟನೇ! ಮಾದ್ರಾದೀಶ ಶಲ್ಯನನ್ನು ವಂಚನೆಯಿಂದ ಸೆಳೆದು ಕೊಂಡದ್ದನ್ನು ಮರೆತೆಯಾ? ಯುದ್ಧಾರಂಭದಲ್ಲಿ ಹಿರಿಯ ಭೀಷ್ಮ ದ್ರೋಣರಿಗೆ ವಂದಿಸಲು ಹೋದ ಧರ್ಮರಾಯನನ್ನು ವಧಿಸಲು ಮುಂದಾದದ್ದು ನಿನಗೀಗ ನೆನಪಿಲ್ಲವೇ? ಧರ್ಮಯುದ್ದದ ನಿಯಮ ಮೀರಿ ಅಭಿಮನ್ಯುವನ್ನು ಕ್ರೂರವಾಗಿ ವಧಿಸಿದ್ದು, ಸೂರ್ಯ ಅಸ್ತಮಾನದ ಬಳಿಕವೂ ಯುದ್ದ ಮುಂದುವರಿಸಿದ್ದು, ಅಸ್ತ್ರ ಧರ್ಮ ಮೀರಿ ಗುರುವೇ ಅಧರ್ಮ ಎಸಗಿದ್ದು ಹೀಗೆ ಕೌರವರು ಮಾಡಿದ ಅಧರ್ಮಗಳು ಒಂದೆರಡೇ? ನಮ್ಮಿಂದಲೂ ಕ್ರೋಧ ಆವರಿಸಿದ ಹೊತ್ತು ತಪ್ಪುಗಳಾಗಿವೆ. ಆದರೆ ನೀನು ಪಕ್ಷ ನಿಷ್ಠೆ ಮರೆತು ಹಿತಶತ್ರುವಿನಂತೆ ವ್ಯವಹರಿಸುತ್ತಿರುವೆ. ನಿನಗಿನ್ನು ಮಾತಿನ ಉತ್ತರವಿಲ್ಲ” ಎಂದು ದಿವ್ಯ ಗದಾಧರನಾಗಿ ಸಾತ್ಯಕಿ ದೃಷ್ಟದ್ಯುಮ್ನನನ್ನು ಘಾತಿಸಲು ಮುಂದಾದನು. ಪಾಂಚಾಲನೂ ಸಿದ್ಧನಾಗಿ ಸನ್ನದ್ಧನಾದನು.
ಅಷ್ಟಾಗುತ್ತಲೇ, ವಾಸುದೇವ ಕೃಷ್ಣ ಭೀಮನಿಗೆ ಸಂಜ್ಞೆಯ ಮೂಲಕ ಸೂಚನೆಯಿತ್ತನು. ಅರಿತ ಭೀಮ ಓಡಿ ಹೋಗಿ ರಥದಿಂದೆಳೆದು ಸಾತ್ಯಕಿಯನ್ನು ಆವರಿಸಿ ತನ್ನ ಅಜಾನು ಬಾಹುಗಳಿಂದ ಬಂಧಿಸಿ ಹಿಡಿದನು. ಪರಸ್ಪರ ಎಳೆದಾಡುತ್ತಾ ಹೊಯ್ದಾಟವೇ ಆಗತೊಡಗಿತು. ಮಲ್ಲಬಲ ಭೀಮನಿಗೂ ಸಾತ್ಯಕಿಯನ್ನು ಹಿಡಿದಿಡಲು ಹರಸಾಹಸವೇ ಪಡಬೇಕಾಯಿತು. ಭೀಮನನ್ನು ಎಳೆದುಕೊಂಡು ಸಾತ್ಯಕಿ ನಾಲ್ಕೈದು ಹೆಜ್ಜೆ ಮುಂದೆ ಸೆಳೆದಾಗ ಭೀಮನೂ ಮುಂದೆ ಮುಂದೆ ಬರಬೇಕಾಯಿತು. ಸಾತ್ಯಕಿ ಚಡಪಡಿಸುತ್ತಾ ಬಿಡಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿದ್ದನು. ಭದ್ರವಾಗಿ ಹೆಜ್ಜೆಗಳನ್ನು ಊರಿ ಸ್ಥಿತನಾದ ಭೀಮ ಸಾತ್ಯಕಿ ಆರನೆ ಹೆಜ್ಜೆ ಇಡಲು ಬಿಡದೆ ತಡೆದು ನಿಲ್ಲಿಸಿದನು.
ಆಗ ತನ್ನ ರಥದಿಂದ ಇಳಿದು ಓಡಿ ಬಂದ ಧರ್ಮ ಬುದ್ಧಿಯುಳ್ಳ ಸಹದೇವ ಮಿತ್ರ ಸಾತ್ಯಕಿಯನ್ನು ಕುರಿತು ಮೃದು – ಮಧು ಭಾಷಿಯಾಗಿ ಮಾತನಾಡಿಸತೊಡಗಿದನು.
ಮುಂದುವರಿಯುವುದು…





