29.5 C
Udupi
Monday, December 22, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 385

ಭರತೇಶ ಶೆಟ್ಟಿ, ಎಕ್ಕಾರ್

ಉಗ್ರ ತೇಜಸ್ಸಿನಿಂದ ಶೋಭಿಸುತ್ತಿರುವ ಗುರುಪುತ್ರನನ್ನು ನಿಬ್ಬೆರಗಾಗಿ ದುರ್ಯೋಧನ ನೋಡುತ್ತಿದ್ದಾನೆ. ಕೌರವನನ್ನು ಕಂಡು ಅಶ್ವತ್ಥಾಮ ನುಡಿಯಲಾರಂಭಿಸಿದ “ಹೇ ಕುರುಪತಿ! ಈವರೆಗೆ ಮರೀಚಿಕೆಯಾಗಿದ್ದ ನಿನ್ನ ಪಾಲಿನ ಜಯ ಇಂದು ನಿನಗೆ ಲಭಿಸಿತೆಂದು ತಿಳಿದು ಕೊಳ್ಳಬಹುದು. ವಿದ್ಯಾದಾನವಿತ್ತ ಆಚಾರ್ಯರ ಬಗ್ಗೆ ಕೃತಜ್ಞತಾ ಭಾವವನ್ನು ತೋರದೆ ನಿಷ್ಕಾರುಣ್ಯದಿಂದ ಹೀನಾಯವಾಗಿ ನಡೆಸಿಕೊಂಡು, ಮುಡಿಗೆ ಕೈಯಿಕ್ಕಿ, ಶಿರಗಡಿದ ಆ ಪಾಂಡವ ಸೇನೆ ಕೈಯಾರೆ ಅವರ ಅಂತ್ಯಕ್ಕೆ ಮುಹೂರ್ತವಿಟ್ಟಂತಾಗಿದೆ. ಹಿಂದೆ ಸಾಕ್ಷಾತ್ ಶ್ರೀಮನ್ನಾರಾಯಣನು ಒಲಿದು ನನ್ನ ಪಿತಾಶ್ರೀಯವರಿಗೆ ಅನುಗ್ರಹಿಸಿದ ನಾರಾಯಣಾಸ್ತ್ರ ನನಗೆ ನನ್ನ ತಂದೆಯಿಂದ ಉಪದೇಶಿತವಾಗಿದೆ. ಈ ಮಹಾಸ್ತ್ರವನ್ನು ಅಧರ್ಮಿಯ ನಾಶಕ್ಕೆ ಪ್ರಯೋಗಿಸಬೇಕು. ಇದಕ್ಕಿದಿರಾಗಿ ಹೋರಾಡಬಲ್ಲವರು ಮನು, ದೇವ, ದಾನವ, ಗಂಧರ್ವರಲ್ಲಿ ಯಾರೂ ಇಲ್ಲ. ಆದರೆ ಈ ಮಹಾಸ್ತ್ರವನ್ನು ಪೂರ್ಣ ವಿಚಾರ ಮಾಡದೆ ಪ್ರಯೋಗಿಸುವಂತಿಲ್ಲ. ಈಗ ಆ ಸೂಕ್ತ ಸಮಯ ಕೂಡಿ ಬಂದಿದೆ. ಈ ಒಂದೇ ಒಂದು ದಿವ್ಯಾಸ್ತ್ರ ಸಮಗ್ರವಾಗಿ ಶತ್ರುಗಳ ವಧೆಗೈಯದೆ ಹಿಂದಿರುಗದು. ಯಾರನ್ನು ಸಂಹರಿಸುತ್ತದೆ, ಯಾರನ್ನು ಬಿಡುತ್ತದೆ ಎಂಬ ಲೆಕ್ಕಾಚಾರವನ್ನು ಯಾರೂ ಮಾಡಲಾಗದು. ಈ ಶಸ್ತ್ರದಿಂದ ಬದುಕುಳಿಯಬೇಕಾದರೆ ಇರುವ ಉಪಾಯವೆಂದರೆ ರಥದಿಂದ ಕೆಳಗಿಳಿದು ಶರಣಾಗತರಾಗಿ, ಶಸ್ತ್ರ ತ್ಯಾಗ ಮಾಡಿದರಷ್ಟೆ ಸಾಧ್ಯ. ಅನ್ಯಥಾ ಇದನ್ನು ಖಂಡಿಸಲು ಪ್ರತ್ಯಸ್ತ್ರ ಪ್ರಯೋಗಿಸಿದರೆ, ಆಯುಧಧಾರಣೆ ಮಾಡಿ ಸೆಟೆದು ನಿಂತರೆ ಬದುಕುಳಿಯಬಲ್ಲವರು ಯಾರೂ ಇಲ್ಲ. ಹೀಗೆ ಸಂಪೂರ್ಣ ಪೂರ್ವಾಪರ ಬೋಧಿಸಿಯೆ ನನ್ನ ತಂದೆ ಈ ಮಂತ್ರಾಸ್ತ್ರವನ್ನು ನನಗಿತ್ತಿದ್ದಾರೆ. ಈಗ ಕೇವಲ ಏಕಶರ ಪ್ರಯೋಗದಿಂದ ನಿನ್ನೆದುರಿಗಿರುವ ಪೂರ್ಣ ಪಾಂಡವ ಪಕ್ಷ ಸರ್ವನಾಶ ಹೊಂದುವುದನ್ನು ನೋಡಲು ಸಿದ್ಧನಾಗು. ನಿನ್ನ ಕನಸಿನ ನಿಷ್ಪಾಂಡವ ಪೃಥ್ವಿ ಇನ್ನು ಕೆಲವು ಸಮಯದಲ್ಲಿ ಸಾಧಿಸಲ್ಪಡಲಿದೆ. ಈ ನಾರಾಯಣಾಸ್ತ್ರ ಪ್ರಯೋಗದಿಂದ ಶತ್ರು ಸೈನ್ಯದ ಮೇಲೆ ಬಹುಭಾರದ ಗುಂಡುಕಲ್ಲಿನ ಮಳೆಗರೆಯುತ್ತೇನೆ. ಅದರಿಂದ ಬಹುವಾಗಿ ಗಾಯಗೊಳ್ಳುವ ಅವರನ್ನು ಲೋಹಮಯವಾದ ಕ್ರೂರ ಪಕ್ಷಿಗಳಿಂದ ಕುಕ್ಕಿಸಿ ಪೀಡಿಸುತ್ತೇನೆ. ಹೀಗೆ ಮಾಡಿದಾಗ ಹೆದರಿ ಪಲಾಯನಗೈಯುವ ಶತ್ರು ಸೇನೆಯ ಮೇಲೆ ಹರಿತವಾದ, ಗಿರ ಗಿರನೆ ತಿರುಗುವ ಗಂಡು ಕೊಡಲಿಗಳ ಮಳೆಗರೆದು, ನನ್ನ ಪಿತನ ಶಿರಚ್ಛೇದನಕ್ಕೆ ಪ್ರತಿಯಾಗಿ ಸಮಗ್ರ ಸೇನೆಯ ಮುಂಡವನ್ನು ಚೆಂಡಾಡುವಂತೆ ಮಾಡಿ ತೋರಿಸುವೆ. ಕುಲಾಧಮ, ನೀಚ, ಅತಿನಿಂದ್ಯನಾದ ಆ ದೃಷ್ಟದ್ಯುಮ್ನನನ್ನು ಮತ್ತಷ್ಟು ಪೀಡನೆ ನೀಡಿ ಪ್ರತಿಕಾರ ಪೂರೈಸಲಿದ್ದೇನೆ” ಎಂದು ಪ್ರಳಯಾಂತನಂತೆ ಬರಸಿಡಿಲಿನೋಪಾದಿಯಲ್ಲಿ ಘರ್ಜಿಸಿದನು.

ಹೀಗೆ ಅಶ್ವತ್ಥಾಮ ವೀರೋಕ್ತಿಯನ್ನು ಘೋಷಿಸಿದಾಗ ಕೌರವ ಸೇನೆ ನೂರ್ಮಡಿ ಬಲ ಪಡೆದು ಮಹಾಶಂಖಗಳನ್ನೂ, ರಣಭೇರಿಗಳನ್ನೂ ಮೊಳಗಿಸುತ್ತಾ ಆಕ್ರಮಣಕ್ಕೆ ಮುಂದಾಯಿತು.

ಕೌರವ ಸೇನೆ ಮಹೋತ್ಸಾಹದಿಂದ ರುದ್ರ ಭಯಂಕರವಾಗಿ ಪಾಂಡವ ಸೇನೆಯ ಮೇಲೆರಗಿ ಪ್ರತಿದಾಳಿಗೈಯಲು ವೇಗದಿಂದ ಪ್ರವಾಹದಂತೆ ಹರಿದು ಬರುತ್ತಿದೆ. ಅಬ್ಬರ, ಬೊಬ್ಬೆ, ಆರ್ಭಟಗಳ ಕೋಲಾಹಲ ದಶದಿಕ್ಕುಗಳನ್ನು ಆವರಿಸುತ್ತಿದೆ. ಇತ್ತ ಗುರುಪುತ್ರ ಅಶ್ವತ್ಥಾಮ ಜಲಪ್ರೋಕ್ಷಣೆ ಮಾಡಿ ವಿಧಿವತ್ತಾಗಿ ಆಚಮನ ಮಾಡಿ, ಮಹಾ ನಾರಾಯಣಾಸ್ತ್ರವನ್ನು ಪ್ರಕಟಿಸಿದನು.

ಪಾಂಡವ ಸೇನೆ ಆಶ್ಚರ್ಯಕ್ಕೊಳಗಾಗುತ್ತಿದೆ. ತತ್ಕ್ಷಣದ ಬದಲಾವಣೆಯಿಂದ ಹೌಹಾರಿ ಹೋಗಿದೆ. ಮಹಾಸ್ತ್ರ ಪ್ರಾದುರ್ಭೂತವಾದಾಗ ತುಂತುರು ಹನಿ ಮಳೆ ಜಿನುಗಲಾರಂಭಿಸಿತು. ಹಿತವಾದ ತಂಗಾಳಿ ಬೀಸಲಾರಂಭಿಸಿತು. ಪರಿಶುದ್ಧವಾದ ಆಗಸದಲ್ಲಿ ಕರಿ ಮೋಡಗಳು ತೇಲಿ ಬರತೊಡಗಿತು., ಮೇಘಘರ್ಷಣೆಯಿಂದ ಸ್ಪೋಟಗೊಂಡ ಕೋಲ್ಮಿಂಚು, ಬರಸಿಡಿಲು ಅಪ್ಪಳಿಸಲಾರಂಭಿಸಿತು. ಈಗಲೆ ಮಹಾಪ್ರಳಯ ಸಂಭವಿಸುತ್ತದೆ ಎಂಬಂತೆ ಭೂಮಿ ಕಂಪಿಸಿತು, ಜಡಿ ಮಳೆ ಸುರಿಯಿತು. ಎಲ್ಲವನ್ನು ಹಾರಿಸಿ ಕೊಂಡೊಯ್ಯಬಲ್ಲ ಶಕ್ತಿಯುತ ಬಿರುಗಾಳಿ ಬೀಸಲಾರಂಭಿಸಿತು. ಸೂರ್ಯನು ಕಾರ್ಮೋಡದಿಂದ ಆವರಿಸಲ್ಪಟ್ಟು ಕಾರ್ಗತ್ತಲು ಆವರಿಸಿತು. ಗಾಢಾಂಧಕಾರ ಕವಿದ ಕುರುಧಾರಿಣಿಯಲ್ಲಿ ಪ್ರತಿಸೂರ್ಯನಂತೆ ನಾರಾಯಣಾಸ್ತ್ರ ಪ್ರಜ್ವಲಿಸುತ್ತಿದೆ. ವಜ್ರಾಯುಧಧರ ಇಂದ್ರನಂತೆ ಅಶ್ವತ್ಥಾಮ ರಾರಾಜಿಸುತ್ತಿದ್ದಾನೆ.

ಈ ವಿದ್ಯಮಾನವನ್ನು ಕಂಡು ಸಕಲಶಸ್ತ್ರ ಶಾಸ್ತ್ರ ಪಾರಂಗತನಾದ ಅರ್ಜುನನತ್ತ ಧರ್ಮರಾಯನ ರಥ ಓಡಿತು. ಧರ್ಮಜ ಅರ್ಜುನನ್ನು ಪ್ರಶ್ನಿಸತೊಡಗಿದ “ಪಾರ್ಥ ಇಲ್ಲಿ ಏನಾಗುತ್ತಿದೆ? ಕೆಲ ಕ್ಷಣಗಳ ಕೆಳಗೆ ದ್ರೋಣರು ಹತರಾದರು. ಇನ್ನು ನಮಗೆ ಉಳಿಗಾಲವಿಲ್ಲ ಎಂದು ಕಂಡ ಕಡೆಗೆಲ್ಲ ಚದುರಿ ಓಡಿ ಹೋಗುತ್ತಿದ್ದ ಕುರು ಸೇನೆ ಒಮ್ಮೆಲೆ ಹೇಗೆ ಧೈರ್ಯತಳೆದು ಹಿಂದಿರುಗುತ್ತಿದೆ? ಈ ಹೊತ್ತು ಉತ್ಪಾತಗಳು, ಭಯಾನಕ ವಾತಾವರಣ ಯಾಕಾಗಿ ನಿರ್ಮಾಣವಾಯಿತು? ಇದು ಸಾಧ್ಯವಾದದ್ದರೂ ಹೇಗೆ? ನಿನ್ನ ವಿವೇಚನೆಗೇನಾದರು ತಿಳಿದಿದೆಯೇ? ಇದಕ್ಕೆ ಪರಿಹಾರೋಪಾಯ ನೀನು ಬಲ್ಲೆಯಾ?” ಹೀಗೆ ಯುಧಿಷ್ಠಿರ ತನ್ನ ಮನದ ಆತಂಕ ಪ್ರಕಟಿಸಿ ಮತ್ತು ಪ್ರತಿ ಯೋಜನೆಯ ಕುರಿತು ಪ್ರಶ್ನಿಸಿದನು.

ಆಗ ಅರ್ಜುನ “ಅಣ್ಣಾ!…

ಮುಂದುವರಿಯುವುದು

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page