ಭಾಗ – 383
ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೩೮೨ ಮಹಾಭಾರತ
ಆಗ ದ್ರೋಣಾಚಾರ್ಯರು ರಣ ಭೀಕರ ಮನಸ್ಥಿತಿಯಿಂದ ವಿಚಲಿತರಾಗುತ್ತಾರೆ ಎಂಬ ಶ್ರೀಕೃಷ್ಣ ನಿರ್ದೇಶಿತ ಯೋಜನೆಯನ್ನರಿತು ವೃಕೋದರ ಭೀಮಸೇನನು ಶ್ರೀಹರಿಯ ಸುದರ್ಶನ ಚಕ್ರದಂತೆ ವೇಗವಾಗಿ ರಣರಂಗದಲ್ಲಿ ತಿರುಗುತ್ತಾ ಸುತ್ತಾಡಿದನು. ತನಗೆದುರಾದ ಕೌರವ ಪಕ್ಷದ ಗಜಾರೋಹಿಯೋರ್ವನನ್ನು ಪದಾತಿಯಾಗಿ ನಿಂತು ಕೆಡಹಾಕಿದನು. ಆ ಬಳಿಕ ಅಶ್ವತ್ಥಾಮ ಎಂಬ ಹೆಸರಿನ ಆ ಮಹಾಗಜದ ನೆತ್ತಿಯನ್ನು ಗುರಿಯಾಗಿ ತನ್ನ ದಿವ್ಯಗದೆಯಿಂದ ಅಪ್ಪಳಿಸಿದನು. ಘೋರವಾಗಿ ಘೀಳಿಡುತ್ತಾ ಆನೆ ತಲೆತಿರುಗಿ ಬಿದ್ದು ಬಿಟ್ಟಿತು. ರಕ್ತದೋಕುಳಿಯನ್ನು ಒಸರುತ್ತಾ ಕುರುಭೂಮಿಯ ಮೇಲೆ ರುಧಿರಾಭಿಷೇಕಗೈದು ಅಸುನೀಗಿತು. “ಅಶ್ವತ್ಥಾಮ ಸತ್ತ” “ಅಶ್ವತ್ಥಾಮ ಸತ್ತ” “ಅಶ್ವತ್ಥಾಮ ಸತ್ತ” ಎಂದು ಭೀಮಸೇನ ದಶದಿಕ್ಕುಗಳಲ್ಲೂ ಪ್ರತಿಧ್ವನಿಸಿ ಮಾರ್ದನಿಸುವಂತೆ ಬೊಬ್ಬಿರಿದು ಘೋಷಣೆ ಕೂಗಿದನು.
ದ್ರೋಣಾಚಾರ್ಯರೇನು ಅಷ್ಟು ಸುಲಭದಲ್ಲಿ ನಂಬುವವರೇ? ತನ್ನ ಮಗ ಅಶ್ವತ್ಥಾಮನಿಗೆ ದಿವ್ಯಮಣಿಯನ್ನು ಪ್ರಸಾದಿಸಿ ಮರಣ ಸುಲಭ ಸಾಧ್ಯವಾಗದಂತಹ ರಕ್ಷೆಯನ್ನಿತ್ತಿರುವವರು ಭೀಮನ ಉದ್ಘೋಷಕ್ಕೆ ಕಿಂಚಿತ್ ಗೌರವವನ್ನೂ ನೀಡದೆ, ವಿಚಲಿತರಾಗದೆ ಯುದ್ದ ಮುಂದುವರಿಸಿದರು. ಹೀಗಿರಲು ಸತ್ಯಾತ್ಮ ಧರ್ಮರಾಯ “ಅಶ್ವತ್ಥಾಮ ಹತನಾಗಿದ್ದಾನೆ…….” ಎಂದು ಹೇಳಿದನು. ಇಷ್ಟು ಎಲ್ಲರಿಗೂ ಕೇಳಿಸಿಕೊಂಡ ಕೂಡಲೆ ಜಯಘೋಷ, ಶಂಖನಾದ, ರಣಭೇರಿಗಳು ವಿಜಯ ಸಂಭ್ರಮ ಸೂಚಕವೆಂಬಂತೆ ಮೊಳಗಿದವು. ಧರ್ಮರಾಯ ಮುಂದುವರಿಸಿ “ಹತನಾಗಿರುವುದು ಮನುಷ್ಯನೋ ಅಥವಾ ಆನೆಯೋ ಖಚಿತಪಡಿಸಬೇಕು ಎಂದು ಹೇಳಿದನು. ಈ ಮಾತನ್ನು ಹೇಳುತ್ತಿರಬೇಕಾದರೆ ಮೊಳಗಿದ ವಾದ್ಯ, ವಾದನ ಶಂಖನಾದಗಳ ನಿನಾದದಿಂದ ಯಾರೊಬ್ಬರಿಗೂ ಕೇಳಿಸದಾಯಿತು.
ಯಾವಾಗ ಸತ್ಯಾತ್ಮನಾದ ಧರ್ಮರಾಯ ಅಶ್ವತ್ಥಾಮ ಮರಣದ ವಾರ್ತೆಯನ್ನು ಘೋಷಿಸಿದನೋ! ಗುರು ದ್ರೋಣರಿಗೆ ನಿಸ್ಸಂಶಯವಾಗಿ ಸತ್ಯವಾಗಿಯೂ ಅಶ್ವತ್ಥಾಮನ ಮರಣ ಆಗಿದೆ ಎಂದು ನಂಬಿದರು. ಪರಮಕ್ರುದ್ದರಾಗಿ ಆಚಾರ್ಯ ದ್ರೋಣರು ಬ್ರಹ್ಮಾಸ್ತ್ರವನ್ನು ಅಭಿಮಂತ್ರಿಸಿ ಪಾಂಡವ ಸೇನೆಯ ಮೇಲೆ ಪ್ರಯೋಗಿಸಿದರು. ಆ ಕೂಡಲೆ ಶ್ರೀ ಕೃಷ್ಣನ ನಿರ್ದೇಶನದಂತೆ ಸಮಸ್ತ ಪಾಂಡವ ಸೇನೆ ಆಯುಧ ಕೆಳಗಿರಿಸಿ, ಮಂಡಿಯೂರಿ, ಶಿರಬಾಗಿ ಬ್ರಹ್ಮಶೀರ್ಷಕ್ಕೆ ಮಹಾಗೌರವ ಸಲ್ಲಿಸಿ ಬಾಗಿದರು. ನಿರಾಯುಧರಿಗೆ, ಶರಣಾಗತರಿಗೆ ಹಾನಿ ಮಾಡದೆ ದಿವ್ಯ ಶರ ಹಿಂದಿರುಗಿದಾಗ ಆಚಾರ್ಯ ದ್ರೋಣರು ಮತ್ತೆ ಮತ್ತೆ ಬ್ರಹ್ಮಾಸ್ತ್ರವನ್ನು ವರ್ತುಲಾಕೃತಿಯಲ್ಲಿ ಪಾಂಡವ ಸೇನೆಯ ಮೇಲೆ ಸೆಳೆ ಸೆಳೆದು ಪ್ರಯೋಗಿಸಿದರು. ಆದರೆ ಯಾರೊಬ್ಬರೂ ಆಯುಧ ಧಾರಣೆ ಮಾಡದೆ, ಪ್ರತಿದಾಳಿಯನ್ನೂ ತೋರದೆ ಶರಣಾಗತಿಯಿಂದ ಗೌರವ ತೋರಿದ ಕಾರಣ ಬ್ರಹ್ಮಾಸ್ತ್ರ ಯಾವ ಹಾನಿಯನ್ನೂ ಉಂಟು ಮಾಡದೆ ಹಿಂದಿರುಗಿತು. ಆದರೆ ದ್ರೋಣರು ಮಾತ್ರ ಮತಿ ಭ್ರಾಂತರಂತಾಗಿ, ಯುದ್ಧ ಧರ್ಮ, ಶಸ್ತ್ರ ಶಾಸ್ತ್ರಗಳೆಲ್ಲವನ್ನೂ ಮರೆತು ಹಿಂದೆ ಬರುತ್ತಿದ್ದ ಬ್ರಹ್ಮಾಸ್ತ್ರವನ್ನು ಬಹುಭಾರಿ ನಿರರ್ಥಕವಾಗಿ ಪ್ರಯೋಗಿಸಿದರು. ಈ ರೀತಿ ಆಚಾರ್ಯ ದ್ರೋಣರು ಶಸ್ತ್ರ ಧರ್ಮವನ್ನು ಮರೆತು ನಿಕೃಷ್ಟವಾದ ವರ್ತನೆ ತೋರುವುದನ್ನು ಅಂತರಿಕ್ಷದಲ್ಲಿ ಋಷಿಗಡಣ ಮಧ್ಯೆ ಸ್ಥಿತರಾಗಿದ್ದ ಭಾರದ್ವಾಜಾದಿ ಋಷಿಗಳೇನಕರು ನೋಡಿ ಅಸಹನೆಗೊಳಗಾದರು. “ಎಲೈ ದ್ರೋಣಾ! ನೀನು ಉಭಯಕುಲ ಬಿಲ್ಲೋಜನಾಗಿರುವೆ. ಶಸ್ತ್ರ – ಶಾಸ್ತ್ರಗಳನ್ನು ವಿರಳವಾಗಿ ಸೂಕ್ಷ್ಮಾತಿ ಸೂಕ್ಷ್ಮ ವಿಚಾರಗಳನ್ನೂ ತಿಳಿದವನಾಗಿದ್ದು, ಅಧ್ಯಾಪನ ವೃತ್ತಿ ನಿರತನಾಗಿದ್ದವನು. ನೀನು ಅರಿತು ಅರುಹಿರುವ ಶಾಸ್ತ್ರ ಮರೆತು ಬಿಟ್ಟೆಯಾ? ಧರ್ಮವನ್ನು ಮೀರುತ್ತಿರುವೆಯಾ? ನಿನ್ನ ಆತ್ಮಸಾಕ್ಷಿಯಾಗಿ ನಿನ್ನನ್ನು ನೀನು ಪ್ರಶ್ನಿಸಿ ಯುಕ್ತಾಯುಕ್ತಗಳ ವಿಮರ್ಷೆ ಮಾಡಿಕೋ! ಈ ಕಾಲಕ್ಕೆ ಎಲ್ಲಿದೆ ನಿನ್ನಲ್ಲಿ ಪ್ರಜ್ಞೆ, ವಿವೇಕ? ಒಂದು ವೇಳೆ ಇದ್ದಿದ್ದರೆ ಈ ರೀತಿ ನೀಚ ಅಕ್ಷಮ್ಯ ಕೃತ್ಯದಲ್ಲಿ ನೀನು ತೊಡಗಿಸಿಕೊಳ್ಳುತ್ತಿರಲಿಲ್ಲ. ನಿರಾಯುಧರೂ, ಶರಣಾಗತರೂ ಆಗಿ ಅಸ್ತ್ರಕ್ಕೆ ಸನ್ಮಾನವಿತ್ತು ಶಿರಬಾಗಿ ನಿಂತವರ ಮೇಲೆ ದಿವ್ಯಾಸ್ತ್ರ ಪ್ರಯೋಗಿಸಿರುವುದು ಅಕ್ಷಮ್ಮ. ಅಧರ್ಮವೂ, ಅಸ್ತ್ರ ನೀತಿಗೆ ಅಹಿತವೂ ಆದ ಕೃತ್ಯವೆಸಗಿದ ಬಳಿಕ ನಿನ್ನನ್ನು ಗುರು ಎಂದು ಒಪ್ಪಿ ಮಾನಿಸಲಾಗದು. ಗುರುವಾದವನು ಶಿಷ್ಯರಾಗಿ ಅನುಸರಿಸುತ್ತಿರುವವರಿಗೆ ಬೋಧಿಸಬೇಕಾದುದನ್ನು ಆಚರಿಸಿ, ಸಾಧಿಸಿ ತೋರಿಸಬೇಕಾದ ಜವಾಬ್ದಾರಿಯಿದೆ. ಆದರೆ ಸ್ವಯಂ ನೀನು ಅಧರ್ಮವನ್ನು ಆಚರಿಸಿದ ಬಳಿಕ ಇನ್ನು ಗುರು ಸ್ಥಾನಕ್ಕೆ ಚ್ಯುತಿ ತಂದಿರುವೆ. ಈ ರೀತಿಯ ವಿಕೃತಿ ಸುಸಂಸ್ಕೃತನಾದ ನಿನ್ನ ಮನಸ್ಸನ್ನಾವರಿಸಿದೆ ಎಂದರೆ ಕೊನೆಗಾಲ ಸಮೀಪಿಸಿದೆ ಎಂಬುವುದೇ ಅರ್ಥ. ಹಾಗಾಗಿ ಶಸ್ತ್ರ ಸಂನ್ಯಾಸಕ್ಕೆ ಸಿದ್ಧನಾಗು. ನಿನ್ನ ಅಂತ್ಯಕಾಲ ಬಂತು, ಮೇಲೆ ಬಾ” ಎಂದು ಆದೇಶವಿತ್ತರು.
ದ್ರೋಣಾಚಾರ್ಯರಿಗೆ ತನ್ನ ಪಿತೃವರ್ಗ, ಋಷಿವರೇಣ್ಯರ ಮಾತುಗಳು ಸಹಿಸಲಾಗದಷ್ಟು ನೋವನ್ನು ಉಂಟುವಾಡಿದವು. ಈ ತನಕ ನಿಷ್ಠುರ ನ್ಯಾಯ ಧರ್ಮ ಪಾಲನೆ ಮಾಡಿ ಬದುಕಿರುವ ನಾನು ಇಂದೇಕೆ ದುಡುಕಿ ವಿವೇಕ ಶೂನ್ಯನಾದೆ. ಅಯ್ಯೋ ಮಾಡಿರುವ ಕೃತ್ಯಗಳನ್ನು ನೆನೆದು ನಾಚಿಕೆಯೂ ಆಯಿತು. ಮರುಗಿ ಕೊರಗುತ್ತಾ ನಿಂತಿದ್ದ ಸಮಯ ಯುದ್ದ ಮಾಡದೆ ನಿಶ್ಚಲವಾದ ಸ್ಥಂಭದಂತಾಗಿದ್ದಾರೆ. ದೃಷ್ಟದ್ಯುಮ್ನ ಯುದ್ಧಾಹ್ವಾನ ನೀಡಿ ಸನ್ನದ್ಧನಾದನು. ಖಡ್ಗದ ವರಸೆ ಮಾಡುತ್ತಾ ದ್ರೋಣಾಚಾರ್ಯರ ಬಳಿ ಸಾಗಿ ಬಿಟ್ಟನು. ಖಡ್ಗ ಜಳಪಿಸುತ್ತಾ ಬೀಸಿ ದ್ರೋಣಾಚಾರ್ಯರ ಶಿರಚ್ಛೇದನ ಮಾಡಿ ಬಿಟ್ಟನು. ರುಂಡ ಹಾರಿತು, ಮುಂಡ ನೆಲಕ್ಕೊರಗಿತು. ದ್ರೋಣಾಚಾರ್ಯರು ಮರ್ತ್ಯಲೋಕದ ಯಾತ್ರೆ ಮುಗಿಸಿ ಮೃತ್ಯು ಲೋಕವನ್ನೇರಿದ್ದಾರೆ.
ಮುಂದುವರಿಯುವುದು…





