ಭಾಗ – 380
ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೩೮೦ ಮಹಾಭಾರತ
ಗುರು ಅಗ್ನಿವೇಶ್ಯರ ಆಶ್ರಮದಲ್ಲಿ ಜೊತೆಯಾಗಿ ವಿದ್ಯಾರ್ಥಿಗಳಾಗಿದ್ದು, ಬಳಿಕ ಆತ್ಮೀಯ ಮಿತ್ರರಾಗಿದ್ದ ದ್ರೋಣ ದ್ರುಪದರು ಇಂದು ಬದ್ದ ವೈರಿಗಳಾಗಿ ರಣಕಣದಲ್ಲಿ ಎದುರು ಬದುರಾಗಿದ್ದಾರೆ. ಆಪ್ತ ಮಿತ್ರರಾಗಿ ಬೆಳೆದು, ಹಿಂದೆ ಆಪತ್ಕಾಲ ಒದಗಿದಾಗ ದ್ರುಪದ ಮಿತ್ರನಾದ ದ್ರೋಣನಿಂದಲೆ ರಕ್ಷಿಸಲ್ಪಟ್ಟಿದ್ದನು. ಆದರೆ ಇಂದು ದ್ರುಪದ ದ್ರೋಣರು ವಿಪತ್ತಿನಲ್ಲಿ ಆಯುಧಧಾರಣೆ ಮಾಡಿದ್ದಾರೆ. ತನ್ನ ಬಡತನದ ನಿವಾರಣೆಗಾಗಿ ಮಿತ್ರನ ಬಳಿ ಬಂದಾಗ ಅಪಮಾನಿತನಾಗಿ ಪ್ರತಿಜ್ಞೆಗೈದು ಶಿಷ್ಯ ಅರ್ಜುನನ ಮುಖೇನ ಗುರುದಕ್ಷಿಣೆಯಾಗಿ ದ್ರುಪದನನ್ನು ಸೋಲಿಸಿ ತನ್ನ ಕಾಲಬುಡದಲ್ಲಿ ಕೆಡಹಾಕಿ, ಮಂಚದ ಕಾಲಿಗೆ ಬಂಧಿಸಿದ್ದನು. ಅರ್ಜುನ ಶತ್ರುವಾಗಿ ಅಂದು ದ್ರುಪದನ ಹೆಡೆಮುರಿ ಕಟ್ಟಿ ಎಳೆದು ತಂದಿದ್ದವನು. ರಾಜಕಾರಣರಂಗ – ತನ್ನೊಳಗೆ ರಣರಂಗವನ್ನು ಅಂತರ್ಗತವಾಗಿರಿಸಿದೆ. ಯಾವ ಮಿತ್ರನೂ ಈ ಜೀವನಯಾನದಲ್ಲಿ ಮಿತ್ರನಾಗಿಯೆ ಉಳಿಯಲಾರ. ಶತ್ರುವೂ ಶತ್ರುವಾಗಿಯೆ ಉಳಿಯಲಾರ ಎಂಬುವುದಕ್ಕೆ ದೃಷ್ಟಾಂತವಾಗಿದೆ. ದ್ರುಪದ ದ್ರೋಣರು ಪರಮಮಿತ್ರರಾಗಿದ್ದರೆ, ಅರ್ಜುನ ದ್ರೋಣನಿಗೆ ಪ್ರಿಯಶಿಷ್ಯನಾಗಿದ್ದಾನೆ. ಆ ಬಳಿಕದ ಬೆಳವಣಿಗೆಯಲ್ಲಿ ಈ ದ್ರುಪದ ತನ್ನ ಮಗಳು ದ್ರೌಪದಿಯನ್ನು ಪಾಂಡವರಿಗೆ ಸತಿಯಾಗಿತ್ತು, ಅರ್ಜುನ ದ್ರುಪದರೊಳಗೆ ಮೈತ್ರಿಯಾಗಿದೆ. ಪ್ರಿಯ ಶಿಷ್ಯ ಅರ್ಜುನ ಗುರು ದ್ರೋಣಾಚಾರ್ಯರಿಗೆ ಪ್ರತಿಸ್ಪರ್ಧಿಯಾಗಿದ್ದಾನೆ. ರಾಜಕೀಯ ಮತ್ತು ಜೀವನದಲ್ಲಿ ಮಿತ್ರನೂ ಶತ್ರುವಾಗಬಲ್ಲ. ಶತ್ರುವೂ ಪರಮ ಮಿತ್ರನಾಗಬಲ್ಲ ಎಂಬುವುದಕ್ಕೆ ಇದೂ ಒಂದು ಉತ್ತಮ ನಿದರ್ಶನವಾಗಿದೆ.
ಈ ಮಧ್ಯೆ ಕುರು ಸೇನಾಪತಿಯನ್ನು ದುರ್ಯೋಧನ ಅಪಮಾನಿಸಿ ಕೆರಳಿಸಿದ್ದಾನೆ. “ಗುರುಗಳೇ, ನೀವು ವಿದ್ರೋಹವನ್ನು ಮಾಡುತ್ತಿರುವಿರಿ. ರಾತ್ರಿಯುದ್ಧಕ್ಕೆ ತೊಡಗಿ ನೀವಾಗಿ ನಮ್ಮ ಪಕ್ಷದ ನಾಶಕ್ಕೆ ಕಾರಣರಾಗಿದ್ದೀರಿ. ನೀವೂ ಅರ್ಜುನನ ವಧೆಗೈಯುತ್ತಿಲ್ಲ. ಆ ಕಾರ್ಯ ಸಾಧನೆಯಾಗ ಬಹುದಾಗಿದ್ದ ಕರ್ಣನ ಶಕ್ತ್ಯಾಯುಧದ ನಷ್ಟಕ್ಕೂ ನಿಮ್ಮ ಈ ರಾತ್ರಿ ಯುದ್ಧ ಕಾರಣವಾಯಿತು. ರಾತ್ರಿ ರಾಕ್ಷಸರು ಪ್ರಬಲರು, ಆದರೂ ಘಟೋತ್ಕಚನ ವಧೆ ಮಾಡಬಹುದಾಗಿದ್ದ ಶಕ್ತಿ ನಿಮಗಿತ್ತು. ನೀವು ಕನಿಷ್ಟ ಪಕ್ಷ ಹಾಗೂ ಮಾಡದೆ ಅತೀ ದೊಡ್ಡ ನಷ್ಟಕ್ಕೆ ನೇರ ದಾರಿ ತೋರಿದವರಾಗಿದ್ದೀರಿ.”ಎಂದು ದೂಷಣೆ ಆರೋಪಗಳನ್ನು ಮಾಡಿದ್ದನು. ಉದ್ರಿಕ್ತರಾದ ದ್ರೋಣಾಚಾರ್ಯರು “ಕುರುಶ್ರೇಷ್ಟನೇ, ಸ್ವಾರ್ಥ ಸಹಜ ಸ್ವಭಾವ. ಆದರೆ ಕರ್ಣನಿಗೆ ಆತನೇ ಸೇನಾಪತಿಯಾಗಬೇಕೆಂಬ ಉತ್ಕಟ ಅಪೇಕ್ಷೆಯಿತ್ತು. ಆದರೆ ಅದು ಆಗದೆ ಹೋದಾಗ, ಆ ಸಮಯಕ್ಕಾಗಿ ಕಾಯುತ್ತಾ ಶಕ್ತಿ ಆಯುಧವನ್ನು ಉಳಿಸಿಕೊಂಡಿದ್ದನು. ತನಗೆ ಸೇನಾಧಿಪತ್ಯ ಒದಗಿ ಬಂದ ಕಾಲದಲ್ಲಿ, ಈ ಇಂದ್ರದತ್ತ ಶಕ್ತ್ಯಾಯುಧದಿಂದ ಅರ್ಜುನನ ವಧೆಗೈದು ತಾನು ಸಾಧಿಸಿದೆ ಎಂದು ತೋರುವ ಸ್ವಾರ್ಥ ಬುದ್ಧಿ ಪ್ರಬಲವಾಗಿತ್ತು. ಆತನ ಮಿತ್ರನಾದ ನಿನ್ನ ಜಯಕ್ಕಿಂತಲೂ ವೈಯಕ್ತಿಕ ಸ್ವಾರ್ಥ ಸಾಧನೆಯೆ ಬಲವಾದ ಕಾರಣ ಈ ತನಕ ಪ್ರಯೋಗಿಸದೆ ಶಕ್ತ್ಯಾಯುಧವನ್ನು ಉಳಿಸಿಕೊಂಡಿದ್ದ. ಇನ್ನೂ ಒಂದು ಸತ್ಯ ನೀನು ತಿಳಿಯಬೇಕು ಕೃಷ್ಣನ ಸಾರಥ್ಯದಲ್ಲಿ ಇರುವ ಪಾರ್ಥನನ್ನು ಕರ್ಣನೂ ಏನೂ ಮಾಡಲಾರ, ಇನ್ಯಾರೂ ಜಯಿಸಲಾರರು” ಎಂದರು. ಈ ರೀತಿ ಅವರು ಹೇಳಿಕೊಂಡಾಗ, ಮತ್ತಷ್ಟು ಕ್ರೋಧಿತನಾದನು ದುರ್ಯೋಧನ. ತಮ್ಮ ಗೆಲುವಿಗಾಗಿ ಹೊಸ ಯೋಜನೆಯೊಂದನ್ನು ರೂಪಿಸಿದನು. ಪಾಂಡವ ಸೇನೆಯನ್ನು ಪಾಂಚಾಲದ ಸೇನೆ ಮತ್ತು ಉಳಿದ ಪಾಂಡವ ಮೈತ್ರಿಯ ಸೇನೆ ಎಂದು ಎರಡು ವಿಭಾಗವಾಗಿ ಗುರುತಿಸಿಕೊಂಡನು. “ಪಾಂಚಾಲದ ಸೇನೆ ಮತ್ತು ಮಹಾರಥಿಗಳನ್ನು ನೀವು ನಾಶಗೈಯಬೇಕು. ಆ ತನಕ ನಾನು, ಕರ್ಣ, ಕೃಪ, ಕೃತವರ್ಮ ಕರ್ಣ ಮತ್ತು ಅಶ್ವತ್ಥಾಮಾದಿ ವೀರರು ಪಾಂಡವರ ಉಳಿದ ಸೇನೆಯ ಮೇಲೆ ಆಕ್ರಮಣ ಮುಂದುವರಿಸಿ, ಅರ್ಜುನನ ವಧೆಗೈಯುತ್ತೇವೆ ಎಂದನು. ಪಾಂಚಾಲದ ಒಂದು ವಿಭಾಗ ನಿಮ್ಮಿಂದ ನಾಶ ಹೊಂದಿದರೆ ಆಗ ಪಾಂಡವ ಸೇನೆಯ ಬಹು ಭಾಗ ಸೇನಾ ನಾಶವಾಗಿ ದುರ್ಬಲಗೊಳ್ಳುತ್ತದೆ. ನಮ್ಮಿಂದ ಪಾಂಡವರಲ್ಲೊಬ್ಬನ ವಧೆ ಸಾಧ್ಯವಾದರೆ ಅರ್ಧ ಯುದ್ಧ ಗೆದ್ದಂತೆ” ಎಂಬ ಯೋಜನೆ ಕೌರವನದ್ದು.
ಅಂತೆಯೆ ಕರ್ಣ, ಕೃಪ, ಅಶ್ವತ್ಥಾಮ, ಶಕುನಿ, ಶಲ್ಯ, ದುಶ್ಯಾಸನ ದುರ್ಯೋಧನಾದಿಗಳು ಪಾಂಚಾಲ ಸೇನೆಯನ್ನುಳಿದ ಪಾಂಡವ ಸೇನೆಯನ್ನು ಗುರಿಯಾಗಿ ವ್ಯಸ್ಥಗೊಳಿಸಿ ಹೋರಾಡತೊಡಗಿದರು. ಪರಿಣಾಮ ನಕುಲ – ದುರ್ಯೋಧನ, ಸಾತ್ಯಕಿ – ದುಶ್ಯಾಸನ, ಕೃತವರ್ಮ – ಸಹದೇವ, ಯುಧಿಷ್ಟಿರ – ಶಲ್ಯ, ಹೀಗೆ ಒಬ್ಬೊಬ್ಬರು ಪ್ರತಿಯಾಗಿ ಹೋರಾಟ ನಿರತರಾದರು. ಭೀಮ ಉಳಿದ ಕೌರವ ಮೈತ್ರಿ ಸೇನೆಯ ಧ್ವಂಸಗೈಯತೊಡಗಿದನು. ಅರ್ಜುನನೂ ಅಶ್ವತ್ಥಾಮನ ಜೊತೆ ವ್ಯಸ್ಥನಾಗಿದ್ದರೂ ಆ ಮಧ್ಯೆಯೆ ಬಹುಭಾಗ ಕುರು ಸೇನೆಯ ನಾಶಗೈಯತೊಡಗಿದನು.
ನಕುಲ ಮುಂಜಾವದ ಈ ಸಮಯ ದುರ್ಯೋಧನನ ಜೊತೆ ಭೀಕರ ಯುದ್ಧ ನಿರತನಾದನು. ಹೇಗಾದರು ಕನಿಷ್ಟ ನಕುಲನ ವಧೆಯಾದರೂ ಆಗಬೇಕೆಂಬುದು ದುರ್ಯೋಧನನ ಯೋಜನೆ. ಅತಿ ಚಾಣಾಕ್ಷ ಯುದ್ಧ ಗೈಯತ್ತಾ, ವಿಚಿತ್ರ ರೀತಿಯ ವಿಶೇಷ ಯುದ್ದ ತಂತ್ರ ಬಲ್ಲವನಾಗಿದ್ದ ನಕುಲ, ದುರ್ಯೋಧನನನ್ನು ತನ್ನ ಬಲಬದಿಗೆ ಒತ್ತುತ್ತಾ, ಆತನಿಗೆ ಪ್ರತಿಕೂಲವಾಗುವ ಸ್ಥಾನದಲ್ಲಿ ಇರಿಸಿ ಯುದ್ಧ ಮುಂದುವರಿಸಿದನು. ತನಗೆ ವಾಮಭಾಗದ ಎಡೆಯಿಂದ ನಕುಲ ಪ್ರಹಾರಗೈಯುತ್ತಿರುವಾಗ ಸಾವರಿಸಿಕೊಳ್ಳುವ ಅವಕಾಶ ದುರ್ಯೋಧನನಿಗೆ ಸಿಗುತ್ತಿಲ್ಲ. ನಕುಲನ ಶರಾಘಾತಗಳನ್ನು ಖಂಡಿಸುತ್ತಾ ತನ್ನ ರಕ್ಷಣೆ ಮಾಡುವುದರಲ್ಲಿ ತೊಡಗಬೇಕಾಗಿ ಬಂದು, ಪ್ರತಿದಾಳಿ ಮಾಡಲಾಗದೆ ಬಹುವಾಗಿ ಬಳಲಿದನು. ಹೀಗೆ ಬಹು ವಿಧದ ಆಕ್ರಮಣದಿಂದ ಪೀಡಿಸುತ್ತಾ ನಕುಲ ದುರ್ಯೋಧನನನ್ನು ನಿಸ್ತೇಜಗೊಳಿಸಿ ಪರಾಜಿತನನ್ನಾಗಿಸಿದನು.
ಇತ್ತ ಅಗ್ನಿವೇಶ್ಯರ ಗರಡಿಯಲ್ಲಿ ಪಳಗಿದ್ದ ಗುರು ದ್ರೋಣ – ಮಹಾರಾಜ ದ್ರುಪದರು ಕರಗತಗೊಳಿಸಿದ್ದ ವಿದ್ಯಾ ಪ್ರದರ್ಶನ ಕುರುಕ್ಷೇತ್ರದಲ್ಲಿ ಸಾಗುತ್ತಿದೆ. ಆದ್ಯಂತವಾಗಿ ಯುದ್ದ ವಿಕ್ರಮ ಮೆರೆಯುತ್ತಿದೆ. ದ್ರುಪದನನ್ನು ಅರ್ಜುನ ಸೋಲಿಸಿದ್ದು ಹೌದಾದರೂ, ಆತ ಅಸಾಮಾನ್ಯ ವೀರನು ಹೌದು. ಈರ್ವರು ವೃದ್ಧರು ಸಮರ ನಿರತರಾಗಿದ್ದಾರೆ. ವೃದ್ಧ ಎಂಬುವುದು ವಯೋ ವೃದ್ಧಿಯನ್ನೂ ಸೂಚಿಸಿದರೂ, ಜೊತೆಗೆ ಜ್ಞಾನವೃದ್ಧಿಯ ಸಂಕೇತವೂ ಹೌದು. ಅದ್ಬುತ ಸಾಹಸ ವಿಕ್ರಮಗಳ ಅನಾವರಣಕ್ಕೆ ಪುಣ್ಯಕ್ಷೇತ್ರ ಕುರುಕ್ಷೇತ್ರ ಸಾಕ್ಷಿಯಾಗುತ್ತಿದೆ.
ದ್ರೋಣ ದ್ರುಪದರು ಮನದಾಳದಲ್ಲಿ ಬಾಲ್ಯದ ಸವಿನೆನಪುಗಳನ್ನು ಇರಿಸಿಕೊಂಡು ಹೋರಾಡುತ್ತಿದ್ದಾರೆ. ಯೌವನ – ಅಧಿಕಾರ ಕೈಸೇರಿದಾಗ ದ್ರುಪದ ತೋರಿದ ಅಹಂಕಾರಕ್ಕೆ ಪ್ರತಿಕಾರ ಎಂಬಂತೆ ದ್ರೋಣಚಾರ್ಯರ ಮನದಲ್ಲಿ ಉದ್ಭವಿಸಿದ ಕ್ರೋಧ ಉಗ್ರ ಸಂಗ್ರಾಮದ ರೂಪ ತಳೆದು ಅತಿಭಯಂಕರ ಯುದ್ಧವಾಗಿ ಸ್ವರೂಪ ಪಡೆಯಿತು. ದ್ರುಪದನೂ ಅತ್ಯುಗ್ರನಾಗಿ ದ್ರೋಣಾಚಾರ್ಯರಿಗೆ ಸಮದಂಡಿಯಾಗಿ ಹೋರಾಡುತ್ತಿದ್ದಾನೆ. ಮುಂಜಾವದ ಬ್ರಾಹ್ಮೀ ಮುಹೂರ್ತವಾಗುತ್ತಾ ಬರುತ್ತಿದೆ, ಬಾನು ಕೆಂಪೇರಿದೆ. ಇತ್ತ ದ್ರುಪದನೂ ದ್ರೋಣಾಚಾರ್ಯರ ಎದುರು ಕೈಸಾಗದೆ, ತೀಕ್ಷ್ಣ ಶರಗಳ ಹತಿಗೆ ರಕ್ತ ಸುರಿಸುತ್ತಾ ಕುಂಕುಮಾಭಿಷಿಕ್ತನಂತೆ ಕಾಣುತ್ತಿದ್ದಾನೆ. ಪಾಂಚಾಲಾಧಿಪ ಕ್ಷತ ವಿಕ್ಷತನಾಗುತ್ತಾ, ದ್ರೋಣರ ಶರಕೌಶಲದೆದುರು ಸೋತು ಉತ್ತಮಾಸ್ತ್ರವೊಂದಕ್ಕೆ ಹತನಾಗಿ ಧರೆಗುರುಳಿದನು. ಅತ್ತ ಮೂಡಣದಲ್ಲಿ ಅರುಣೋದಯವೂ ಆಯಿತು.
ತನ್ನ ಪಿತ ಮಹಾರಾಜ ದ್ರುಪದನ ರಕ್ಷಣೆಗೆ ಧಾವಿಸಿದರೂ, ಬಳಿ ಸಾಗಲಾಗದೆ, ದ್ರೋಣಾಚಾರ್ಯರರಿಂದ ಹತ್ಯೆಯಾಗುತ್ತಿರುವುದನ್ನು ಕಣ್ಣಾರೆ ಕಾಣುತ್ತಾ ಇದ್ದ ದೃಷ್ಟದ್ಯುಮ್ನ ಕಾಳಭೈರವನಂತೆ ಹೂಂಕರಿಸಿ, ದ್ರೋಣರ ಮೇಲೆ ಶರವರ್ಷಗೈಯುತ್ತಾ ಆಕ್ರಮಿಸಿದನು. ಕ್ರೋಧಾವೇಶಕ್ಕೆ ಒಳಗಾಗಿ ಉಗ್ರ ಶಪಥವನ್ನೇ ಮಾಡಿದನು. “ಇಂದಿನ ಯುದ್ಧದಲ್ಲಿ ದ್ರೋಣರನ್ನು ಪರಾಭವಗೊಳಿಸಿ ವಧಿಸದೆ ಹೋದರೆ ಅಂತಹ ನನಗೆ ಈ ತನಕದ ಸುಕೃತಗಳಿಂದ ಪ್ರಾಪ್ತವಾಗಲಿದ್ದ ಶುಭಫಲಗಳು ನಷ್ಟವಾಗಿ ಹೋಗಲಿ. ಕ್ಷಾತ್ರಧರ್ಮದಿಂದಲೂ ಭ್ರಷ್ಟನಾಗಿ ಹೋಗಲಿ” ಹೀಗೆಂದು ಅಬ್ಬರಿಸಿ ಪ್ರಳಯಾಂತಕನಂತೆ ದ್ರೋಣಾಚಾರ್ಯರ ಮೇಲೆರಗಿದನು.
ಮುಂದುವರಿಯುವುದು…





