22.5 C
Udupi
Tuesday, December 16, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 374

ಭರತೇಶ ಶೆಟ್ಟಿ , ಎಕ್ಕಾರ್

ಸಂಚಿಕೆ ೩೭೪ ಮಹಾಭಾರತ

“ಭೂರಿಶ್ರವಸಾ! ನೀನು ಅಸಮ ವೀರನು ಹೌದು. ಇಲ್ಲವೆಂದಾದರೆ ಸಾತ್ಯಕಿಯಂತಹ ವಿಕ್ರಮಿಯನ್ನು ಈ ತೆರನಾಗಿ ಸಮರಾಂಗಣದಲ್ಲಿ ಮಣಿಸಿ ಪರಾಕ್ರಮ ಮೆರೆಯಲು ಸಾಧ್ಯವಾಗುತ್ತಿರಲಿಲ್ಲ. ಯಾದವ ವೀರನಾದ ಸಾತ್ಯಕಿ ನನ್ನ ಶಿಷ್ಯನಾಗಿ ನನ್ನಿಂದಲೆ ಸಕಲ ಯುದ್ದ ಪರಿಕ್ರಮಗಳನ್ನು ಕಲಿತವನಿದ್ದಾನೆ. ಶೌರ್ಯದಲ್ಲಿ ಅರ್ಜುನನಾದ ನನ್ನ ಪ್ರತಿರೂಪ ಎಂದು ಬಿಂಬಿತನಾಗಿದ್ದ ಸಾತ್ಯಕಿಯನ್ನು ಸೋಲಿಸಿದ ನಿನ್ನ ಸಾಧನೆಗೆ ನನ್ನ ಮನದಲ್ಲೂ ಗೌರವವಿದೆ. ಆದರೆ ಯುದ್ಧಧರ್ಮವನ್ನು ಮೀರಿ ವಿಕೃತ ವರ್ತನೆ ತೋರಿದ ನಿನ್ನನ್ನು ದಂಡಿಸಬೇಕಾದ ಅನಿವಾರ್ಯತೆ ನನ್ನದಾಯಿತು. ಮೂರ್ಛಿತನಾಗಿ ನಿನ್ನ ಮೇಲೆ ಪ್ರತಿ ಆಕ್ರಮಣ ಮಾಡಲು ಅಶಕ್ತನಾದ ಸಾತ್ಯಕಿಯನ್ನು ನೀನು ಮನಬಂದಂತೆ ಹಿಂಸಿಸಿದೆ. ಮಾತ್ರವಲ್ಲ ಆತನ ಸೇವೆಗೆ ಧಾವಿಸಿದ ಪರಿಚಾರಕರ ಮೇಲೆ ದಾಳಿ ಮಾಡುವುದು ಯುದ್ಧಧರ್ಮ ಸಮ್ಮತವಲ್ಲ. ಆತನ ಸೇವೆಗಾಗಿ ಬಂದವರನ್ನು ಹೊಡೆದು ಓಡಿಸಿ ನೀನು ಮತ್ತೂ ಹಿಂಸೆಗೆ ಮುಂದಾದೆ. ಆತ ಚೇತರಿಸಿಕೊಳ್ಳಲು ಅವಕಾಶ ನೀಡಿ, ಆ ಬಳಿಕ ಸಮರ್ಥನಾಗಿ ಹೋರಾಡಬಲ್ಲ ಸ್ಥಿತಿಯಲ್ಲಿ ಆತನ ವಧೆಗೈಯುತ್ತಿದ್ದರೆ ನಿನಗೆ ಶ್ರೇಯಸ್ಸು ಸಲ್ಲುತ್ತಿತ್ತು. ನಿರಾಯುಧನೂ, ಮೂರ್ಛಿತನೂ ಆಗಿರುವ ಸಾತ್ಯಕಿಯ ಮೇಲೆ ನೀನು ಯುದ್ಧ ಧರ್ಮ ಮೀರಿ ಅತಿರೇಕದ ವರ್ತನೆ ತೋರಿದೆ. ಮಾತ್ರವಲ್ಲ ನನ್ನ ಕೃತ್ಯವನ್ನು ಪ್ರಶ್ನಿಸುವ ನೈತಿಕತೆ ನಿನಗಿಲ್ಲ. ಯಾಕೆಂದರೆ ನನ್ನ ಪಕ್ಷದ ಯೋಧರ ರಕ್ಷಣೆ ನನ್ನ ಹೊಣೆಗಾರಿಕೆ. ಆ ಕೆಲಸದಲ್ಲಿ ಹಿಂದಿನಿಂದ ನಿನ್ನ ಮೇಲೆ ಪ್ರಹಾರಗೈದುದನ್ನು ಆಕ್ಷೇಪಿಸುತ್ತಿರುವೆ. ಅಂತಹ ಪ್ರಶ್ನೆ ಮಾಡುವ ಹಕ್ಕೂ ನಿಮಗಿಲ್ಲ. ವೀರ ಕುಮಾರ ಅಭಿಮನ್ಯುವನ್ನು ನೀವು ನಿರಾಯುಧ, ರಥ ಹೀನ, ಕವಚಹೀನನಾಗಿ ಯುದ್ದ ಮುಂದುವರಿಸುವ ಯಾವುದೆ ಸಾಮರ್ಥ್ಯವಿಲ್ಲದೆ, ಮಾರಣಾಂತಿಕವಾಗಿ ಗಾಯ ಗೊಂಡಿದ್ದ ಸಮಯ ನಿಷ್ಕರುಣಿಗಳಾಗಿ, ಅಧರ್ಮಿಗಳಾಗಿ ದಯೆ ತೋರದೆ, ಧರ್ಮಪಾಲನೆಯನ್ನೂ ಮಾಡದೆ ಕೇವಲ ವೈರಿ ಎಂಬ ದೃಷ್ಟಿಯಲ್ಲಿ ಚಿತ್ರಹಿಂಸೆ ನೀಡಿ ಕೊಂದವರಿದ್ದೀರಿ. ಆ ರೀತಿ ವ್ಯವಹರಿಸಿದ ನೀವು ಈಗ ಪ್ರಶ್ನೆ ಮಾಡುವ ನೀತಿಯನ್ನು ಹೊಂದಿಲ್ಲ. ಸಾತ್ಯಕಿ ಚೇತರಿಸಿಕೊಂಡು ಎದ್ದು ಹೋರಾಡುವವರೆಗೆ ಕಾಲವಕಾಶ ನೀಡಿರುತ್ತಿದ್ದರೆ ನಿನ್ನದ್ದು ಅಪರಾಧವಾಗುತ್ತಿರಲಿಲ್ಲ. ಅಥವಾ ಆತ ಮತಿ ಹೊಂದಿರುವಾಗ ನೀನು ಆತನ ಹತ್ಯೆ ಗೈಯುತ್ತಿದ್ದರೂ ಅಪವಾದ ಬರುತ್ತಿರಲಿಲ್ಲ. ನೀನು ಅಕ್ಷಮ್ಯ ಕೃತ್ಯಗಳನ್ನು ಮತ್ತೆ ಮತ್ತೆ ಮಾಡುತ್ತಾ ಸಾಗಿದೆ. ಆ ಕಾರಣದಿಂದಲೂ, ನನಗೆ ಕರ್ತವ್ಯವಾಗಿಯೂ, ದಂಡನೆಯ ಸ್ವರೂಪದಿಂದ ನಿನ್ನ ಮೇಲೆ ಪ್ರಹಾರಗೈದಿದ್ದೇನೆ. ನಾನು ಅರಿತು, ಸರಿಯಾಗಿ ವಿವೇಚಿಸಿ ಮುಂದುವರಿದಿದ್ದೇನೆ. ನನ್ನ ಯುದ್ಧ ಧರ್ಮ ಪಾಲನೆಯ ಬಗ್ಗೆ ನನಗೆ ಎಳ್ಳಿನಿತೂ ಸಂದೇಹವಿಲ್ಲ. ನಾನಿರುತ್ತಾ ನನ್ನ ಸಮ್ಮುಖದಲ್ಲಿ ಪಾಂಡವ ಪಕ್ಷೀಯರ ರಕ್ಷಣೆ ಮಾಡಬೇಕಾದ ಬಾಧ್ಯತೆ ನನಗಿದೆ. ಆದರೆ ನೀನು ದೂಷಿಸಬೇಕಾದದ್ದು ನಿನ್ನನ್ನು! ಇಲ್ಲಿ ಇಂದಿನ ದಿನ ಸಾತ್ಯಕಿ ದಿನದ ಅರ್ಧ ಭಾಗಕ್ಕಿಂತಲೂ ಹೆಚ್ಚು ಸಮಯ ದ್ರೋಣಾಚಾರ್ಯರ ವಿರುದ್ದ ಘೋರ ಸಂಗ್ರಾಮ ನಿರತನಾಗಿ ದಣಿದು ಬಂದಿದ್ದವನು. ಹಾಗೆಯೆ ನೀನು ಪಾಂಡವ ಪಕ್ಷದ ವಿರುದ್ದ ಹೋರಾಡುತ್ತಲಿದ್ದೆ. ಅಂದರೆ ಈ ಯುದ್ದ ಕೇವಲ ನಿಮಿಬ್ಬರ ಮಧ್ಯೆ ಸಾಗುತ್ತಿಲ್ಲ. ಎರಡೂ ಪಕ್ಷದಲ್ಲಿ ಬಹಳಷ್ಟು ವೀರಾದಿವೀರರು ಇದ್ದಾರೆ ಎಂಬ ಪರಿಜ್ಞಾನ ನಿನಗಿರಬೇಕಿತ್ತು. ಹಾಗಿರುತ್ತಿದ್ದರೆ, ನಿನ್ನ ಸ್ವ ರಕ್ಷಣೆಯ ವಿಚಾರದಲ್ಲಿ ಮೈಮರೆತು ಇಂತಹ ಸ್ಥಿತಿಗೆ ಅವಕಾಶ ನೀಡುತ್ತಿರಲಿಲ್ಲ. ಹೀಗಿರಲು ನೀನು ದೂಷಣೆ ಮಾಡುವೆಯಾದರೆ ಮೊದಲು‌ ನಿನ್ನಿಂದಾದ ಲೋಪಗಳನ್ನು ವಿವೇಚಿಸಿ ನೋಡು” ಎಂದು ಅರ್ಜುನ ಸಮರ್ಥನೆ ನೀಡಿದನು.

ಅರ್ಜುನನ ಯುಕ್ತಿಯುಕ್ತವಾದ ಮಾತುಗಳನ್ನು ಕೇಳಿ ಭೂರಿಶ್ರವಸನು ನಿರುತ್ತರನಾದನು. ವೈರಾಗ್ಯ ಭಾವ ಮನಮಾಡಿತು. ಪರಿಣಾಮವಾಗಿ ರಣಾಂಗಣದಲ್ಲಿ ಧ್ಯಾನಸ್ಥನಾಗಿ ಕುಳಿತು ಅಮರಣಾಂತ ಉಪವಾಸ ಸಂಕಲ್ಪ ಮಾಡಿ ಹಾಗೆಯೆ ಮುಂದುವರಿಯಲು ಸಿದ್ಧನಾದನು.

ನಿಷ್ಕಲ್ಮಷ ಮನದಿಂದ ಹಾಗೆ ಮಾಡಲು ಮುಂದಾಗಿರುವ ಸೋಮದತ್ತ ಪುತ್ರ ಭೂರಿಶ್ರವಸನಿಗೆ ಶ್ರೀಕೃಷ್ಣ “ಭಕ್ತನೇ, ನನಗೆ ಯಾರಲ್ಲೂ ಭೇದ ಭಾವವಿಲ್ಲ. ನಿನ್ನ ಕರ್ಮವನ್ನು ನೀನು‌ಮಾಡಿರುವೆ. ಅಂತ್ಯಕಾಲದ ಈ ಹೊತ್ತು ಮನಸಾರೆ ಒಪ್ಪಿ, ಪಶ್ಚಾತ್ತಾಪ ಪಡುತ್ತಾ, ಸ್ವಯಂ ದಂಡನೆ ನೀಡಿ ಪ್ರಾಣತ್ಯಾಗಕ್ಕೆ ಮುಂದಾಗಿರುವೆ. ನಿನಗೆ ಪುಣ್ಯ ಪುರುಷರಿಗೆ ಪ್ರಾಪ್ತವಾಗುವ ದಿವ್ಯಲೋಕ ಪ್ರಾಪ್ತವಾಗಲಿ” ಎಂದು ಆಶೀರ್ವದಿಸಿದನು.

ಇಷ್ಟಾಗುತ್ತಲೇ ಎಚ್ಚೆತ್ತ ಸಾತ್ಯಕಿ ರೋಷಾವಿಷ್ಟನಾಗಿ ಖಡ್ಗಧಾರಿಯಾಗಿ ಭೂರಿಶ್ರವಸನ ಮೇಲೆರಗಲು ಮುಂದಾದನು. ಆಗ ಕೃಪಾಚಾರ್ಯ, ಅಶ್ವತ್ಥಾಮಾದಿಗಳು ತಡೆದು “ಅಧರ್ಮ ಕಾರ್ಯ ಎಸಗಬೇಡ ಸಾತ್ಯಕಿ. ತಪೋನಿರತನಾಗಿತ್ತಿರುವ ಭೂರಿಶ್ರವಸನನ್ನು ವಧಿಸಬಾರದು” ಎಂದು ಎಚ್ಚರಿಸಿದರು.

ಆಗ ಸಾತ್ಯಕಿ “ಆಚಾರ್ಯರೇ! ನೀವು ನಿಮಗೆ ಬೇಕಾದಂತೆ ಅನುಕೂಲ ಶಾಸ್ತ್ರ ನಿರೂಪಿಸುತ್ತಿದ್ದೀರಿ. ಇದೇ ಭೂರಿಶ್ರವಸ – ಮೂರ್ಛಿತನಾಗಿ ಬಿದ್ದಿದ್ದ ನನ್ನನ್ನು ಹಿಡಿದೆಳೆದು, ನೆಲದಲ್ಲಿ ಬೀಸಿ ತಿರುಗಿಸುತ್ತಾ, ಎಡಗಾಲಿನಿಂದ ಒದ್ದು, ಜಿಗಿದು ನನ್ನ ಎದೆಗೆ ಮತ್ತೆ ಮತ್ತೆ ಒದೆಯುತ್ತಿರುವಾಗ ಯಾಕೆ ಮೌನ ತಳೆದಿದ್ದಿರಿ? ಕಟಾರಿಯನ್ನು ಸೆಳೆದು ನನ್ನ ಕತ್ತು ಸೀಳಿ ಕೊಂದು ಮುಗಿಸಲು ಮುಂದಾಗಿದ್ದ ಈ ದುರುಳನಿಗೇಕೆ ನೀವು ಎಚ್ಚರಿಕೆ ನೀಡಲಿಲ್ಲ. ನಾನೇದರು ಆ ಕ್ಷಣ ಸತ್ತು ಹೋಗಿರುತ್ತಿದ್ದರೆ? ಅಧರ್ಮವಾಗುತ್ತಿರಲಿಲ್ಲವೆ? ಈಗ ನನ್ನ ಪ್ರತಿಕಾರದ ಕೃತಿ ಅನ್ಯಾಯ – ಅಧರ್ಮವಾಗಿ ಕಾಣಿಸುತ್ತಿದೆಯೆ? ನನ್ನನ್ನು ಆತ ಮೂರ್ಛಿತನಾಗಿದ್ದ ಸಮಯ ಕೊಲೆಗೈಯುತ್ತಿದ್ದರೆ ಆಗ ನೀವೇನು ಹೇಳುತ್ತಿರಲಿಲ್ಲ. ಹಾಗಾಗಿ ಸ್ವಜನ ಪಕ್ಷಪಾತಿಗಳಾಗಿರುವ ನೀವು ಬೋಧನೆ ಮಾಡುವ ನೈತಿಕತೆ ಹೊಂದಲಾರಿರಿ. ಬಹುಕಾಲದ ಹಿಂದೆಯೆ ನಾನು ಪ್ರತಿಜ್ಞೆಗೈದಿದ್ದೆ. ನಾನು ಜೀವಂತ ಇರುವವರೆಗೆ, ಯಾರು ನನ್ನನ್ನು ಅಪಮಾನಿಸಿ ತೇಜೋವಧೆಗೈಯುತ್ತಾರೋ ಅಂತಹವರನ್ನು ಕೊಲ್ಲದೆ ಬಿಡಲಾರೆನೆಂದು. ಎಡಗಾಲಿನಿಂದ ಒದ್ದು, ನನ್ನೆದೆಗೆ ತುಳಿದ ಭೂರಿಶ್ರವಸ ವಧಾರ್ಹನಾಗಿದ್ದಾನೆ. ಪ್ರತಿಜ್ಞಾಪೂರಣ ಕ್ಷತ್ರಿಯ ಧರ್ಮ. ನನಗೀಗ ಈತನ ವಧೆ ಧರ್ಮಪಾಲನೆ. ಹಾಗಾಗಿ ನಿಮ್ಮ ಅಭಿಪ್ರಾಯಗಳು ಅಮಾನ್ಯವಾಗುತ್ತವೆ. ನಿಮಗೆ ಸಾಮರ್ಥ್ಯವಿದ್ದರೆ ಭೂರಿಶ್ರವಸನ ವಧೆ ಮಾಡ ಹೊರಟಿರುವ ನನ್ನನ್ನು ತಡೆದು ಆತನನ್ನು ರಕ್ಷಿಸಿಕೊಳ್ಳಿ” ಎಂದು ಅಬ್ಬರಿಸುತ್ತಾ ಮುಂದೆ ಬಂದು ಧ್ಯಾನಸ್ಥನಾಗಿ ಕುಳಿತಿದ್ದ ಭೂರಿಶ್ರವಸನ ಶಿರ ಛೇದನ ಮಾಡಿದನು. ಚಿರ್ರನೆ ರಕ್ತ ಕಾರಂಜಿ ಚಿಮ್ಮಿತು.ರುಂಡ ಮುಂಡ ಬೇರೆ ಬೇರೆಯಾಗಿ ನೆಲದಲ್ಲಿ ಬಿದ್ದುಕೊಂಡಿತು.

ಅಲ್ಲಿದ್ದವರೆಲ್ಲರೂ ಸಾತ್ಯಕಿಯ ಕೃತ್ಯವನ್ನು ದೂಷಣೆಗೈದು ಖಂಡಿಸಿದರು. ಆಗ ಶ್ರೀ ಕೃಷ್ಣ ಧರ್ಮಾಧರ್ಮದ ವಿವರಣೆ ನೀಡಲಾರಂಭಿಸಿದನು ” ಭೂರಿಶ್ರವಸನಿಗೆ ವೀರಸ್ವರ್ಗ ಸಿಗಬೇಕಾದರೆ ವೀರ ಕ್ಷತ್ರಿಯನ ಕೈಯಿಂದ ಮರಣ ಪ್ರಾಪ್ತವಾಗಬೇಕಿತ್ತು. ಮೇಲಾಗಿ ಈತ ಸಾತ್ಯಕಿಯ ಕೈಯಿಂದ ನಿಗ್ರಹಿಸಲ್ಪಡಬೇಕೆಂಬುದು ವಿಧಿ ಲಿಖಿತ. ಕೇವಲ ಪಾಲನೆಯಷ್ಟೆ ಸಾತ್ಯಕಿಯಿಂದಾಗಿದೆ. ಹಾಗಾಗಿ ಇಲ್ಲಿ ಯಾರೂ ದೋಷಿಯಾಗಲಾರರು. ಮೇಲಾಗಿ ಪ್ರತಿಜ್ಞಾ ಪೂರಣ ಕ್ಷಾತ್ರಧರ್ಮ”. ಎಂದನು

ಮತ್ತೆ ಯುದ್ದ ಮುಂದುವರಿಯ ತೊಡಗಿತು. ಜಯದ್ರಥನನ್ನು ವಧಿಸಲು ಮುಂದಾದ ಪಾರ್ಥನಿಗೆ ಆರೂ ಜನ ಮಹಾರಥಿಗಳು ಒಬ್ಬರಾದ ಬಳಿಕ ಇನ್ನೋರ್ವರು ಸರತಿಯಲ್ಲಿ ಎದುರಾಗುತ್ತಾ ಹೋರಾಡತೊಡಗಿದರು. ಅತ್ಯುಗ್ರನಾಗಿ ಹೋರಾಡಿ ಎಲ್ಲರನ್ನೂ ಸೋಲಿಸುತ್ತಾ ಸರಿಸಿ ಮುನ್ನುಗ್ಗ ತೊಡಗಿದನು.

ಹೀಗಿರಲು ಇನ್ನೇನು ದಿನಾಂತ್ಯವಾಗಲು ಕೆಲವು ಕ್ಷಣಗಳಷ್ಟೇ ಉಳಿದಿದೆ. ಇದನ್ನರಿತ ಕೃಷ್ಣನು ತಂತ್ರ ರೂಪಿಸಿ ಸಂಕಲ್ಪ ಮಾಡಿದನು. ಸೂರ್ಯನ ಕಿರಣಗಳು ಭೂಮಿಯನ್ನು ಸೋಕದಂತೆ ತಡೆದು, ಕತ್ತಲೆ ಆವರಿಸುವಂತೆ ಮಾಡಲು ಸೂರ್ಯನಿಗೊಂದು ಆವರಣ ರಚಿಸಲು ಮುಂದಾದನು. ಅಂತೆಯೆ ತನ್ನ ಯೋಗಮಾಯಾ ಶಕ್ತಿಯಿಂದ ಸೂರ್ಯಸ್ತಮಾನವಾದಾಗಿನ ಕತ್ತಲೆಯನ್ನು ಸೃಜಿಸಿದನು.

ಹೀಗಾದೊಡನೆ ಸೂರ್ಯಾಸ್ತಮಾನವಾಯಿತು. “ಅರ್ಜುನ ತನ್ನ ಪ್ರತಿಜ್ಞೆಯಂತೆ ನನ್ನ ವಧೆಗೈಯಲಾಗಲಿಲ್ಲ. ಬದುಕುಳಿದೆನಲ್ಲಾ !!!” ಎಂದು ಜಯದ್ರಥ ಸಂಭ್ರಮಿಸಲು ಆರಂಭಿಸಿದನು. ಮತ್ತೆ ಮತ್ತೆ ಖಚಿತ ಪಡಿಸಿಕೊಂಡು ಕತ್ತಲೆ ಆವರಿಸಿದ್ದು ಹೌದಲ್ಲವೇ? ಶರ ಪ್ರಯೋಗದಿಂದ ಛಾವಣಿಯಂತೆ ಆದಾಗಲು ಕ್ಷಣಕಾಲ ಹೀಗಾಗುತ್ತದೆ. ಪರೀಕ್ಷಿಸಿ ನೋಡಿದ ಜಯದ್ರಥ ಸೂರ್ಯಾಸ್ತಮಾನ ಆಗಿದೆ ಎಂದು ಖಚಿತಪಡಿಸಿಕೊಂಡನು. ಆದರೆ ಈ ಸಂಭ್ರಮದಲ್ಲಿ ದಿನಾಂತ್ಯ ಮತ್ತು ಯುದ್ಧವಿರಾಮ ಘೋಷಣೆಯ ಶಂಖನಾದ ಆಗಿದೆಯೋ ಇಲ್ಲವೋ? ಎಂದು ತಿಳಿಯುವ ವಿವೇಕವನ್ನು ಮರೆತು ಬಿಟ್ಟಿದ್ದಾನೆ. ಆತನಿಗೆ ಈಗ ಅಮಿತ ಆನಂದ. ಕಾರಣವೇನೆಂದರೆ ಶಪಥ ಪೂರೈಸದ ಅರ್ಜುನ ಅಗ್ನಿ ಪ್ರವೇಶ ಮಾಡಿ ಪ್ರಾಣ ತ್ಯಾಗ ಮಾಡಬೇಕು. ನನಗೀಗ ಅದನ್ನು ನೋಡಬೇಕು ಎಂದು ಸೂಚಿವ್ಯೂಹದೊಳಗಿಂದ ಎದ್ದು ಹೊರಗೆ ಓಡಿ ಬಂದನು.

ತನಗಿರುವ ಷಡ್ರಥರ ರಕ್ಷಾವ್ಯೂಹದಿಂದ ಹೊರಬಂದ ಜಯದ್ರಥನನ್ನು ನೋಡಿ ಅರ್ಜುನನಿಗೆ ಶ್ರೀಕೃಷ್ಣ ಸೂಚನೆ ನೀಡಿದನು. “ಅದೋ ಅದೋ ಬಂದಿದ್ದಾನೆ ಸೈಂಧವ. ನಿನ್ನ ಶಪಥ ಪೂರೈಸಿಬಿಡು” ಎಂದನು. ಆ ಕೂಡಲೆ ಅರ್ಜುನ ದಿವ್ಯ ಶರವೊಂದನ್ನು ಮಂತ್ರಪೂರಿತವಾಗಿ ಸಂಧಾನ ಮಾಡಿ ಜಯದ್ರಥನನ್ನು ಕರೆದು ಎಚ್ಚರಿಸಿ ಪ್ರಯೋಗಿಸಿದನು. ಆಯುಧಧಾರಿಯಾಗಿದ್ದರೂ ಜಯದ್ರಥನಿಗೆ ಖಂಡಿಸುವ ಕಾಲಾವಕಾಶ ಸಿಗಲಿಲ್ಲ. ಶ್ರೀ ಕೃಷ್ಣನು ಮತ್ತೆ ಅರ್ಜುನನಿಗೆ ನಿರ್ದೇಶನ ಮಾಡಿದ “ಪಾರ್ಥಾ! ಜಯದ್ರಥನ ರುಂಡ ನೆಲಕ್ಕೆ ಬೀಳದಂತೆ ಸಂಕಲ್ಪಶರ ಪ್ರಯೋಗಿಸು. ಸ್ಯಮಂತಪಂಚಕದಲ್ಲಿ ಸಂಧ್ಯಾ ವಿಧಿ ನಿರತನಾಗಿರುವ ಜಯದ್ರಥನ ತಂದೆಯಾದ ವೃದ್ಧಕ್ಷತ್ರನ ತೊಡೆಯ ಮೇಲೆ ಬೀಳುವಂತೆ ಪ್ರಯೋಗಿಸು” ಎಂದನು. ಅರ್ಜು‌ನ ಸಂಕಲ್ಪ ಮಂತ್ರಾಸ್ತ್ರ ಪಾಶುಪತವನ್ನು ಅಭಿಮಂತ್ರಿಸಿ ಪ್ರಯೋಗಿಸಿದನು. ಹೀಗೆ ಕೃಷ್ಣ ಹೇಳಲು ಕಾರಣವಿದೆ. ಜಯದ್ರಥನ ಪ್ರಾಣ ರಕ್ಷಣೆಗಾಗಿ ಆತನ ತಂದೆ ಶಾಪವೊಂದನ್ನು ಕೊಟ್ಟಿದ್ದನು. “ಯಾರು ನನ್ನ ಮಗ ಜಯದ್ರಥನ ಶಿರವನ್ನು ನೆಲಕ್ಕುರುಳಿಸುತ್ತಾರೋ? ಅವರ ಶಿರ ಆ ಕೂಡಲೆ ಸಾವಿರ ಹೋಳಾಗಿ ಹೋಗಲಿ”. ಅರ್ಜುನನ ದಿವ್ಯ ಶರ ಹೊತ್ತೊಯ್ದು ಬಿಸುಟ ಜಯದ್ರಥನ ಶಿರ ವೃದ್ಧಕ್ಷತ್ರನ ಮಡಿಲಿಗೆ ಬಿತ್ತು. ಅನಿರೀಕ್ಷಿತವಾಗಿ ರಕ್ತ ಕಾರುತ್ತಿರುವ ರುಂಡವೊಂದು ಬಂದು ಬಿದ್ದಾಗ, ವಿವೇಚಿಸಲೂ ಅವಕಾಶವಿರಲಿಲ್ಲ. ಕೊಡವಿ, ಕೆಳಗೆಸೆದುಬಿಟ್ಟನು. ತಾನಿತ್ತ ಶಾಪ ತನಗೆ ತಿರುಮಂತ್ರವಾಗಿ ಜಯದ್ರಥನ ತಂದೆಯ ತಲೆ ಸಾವಿರ ಹೋಳಾಗಿ ಸಿಡಿಯಿತು. ಅಂದರೆ ಜಯದ್ರಥನ ರುಂಡವನ್ನು ಕೆಳಗೆ ಬೀಳಿಸಿದವರ ಶಿರಸ್ಸು ಛಿದ್ರಗೊಂಡು ಸಾವಿರ ಹೋಳುಗಳಾಗಲಿ ಎಂಬ ಶಾಪವಾಕ್ಯವಿತ್ತು.

ಇಷ್ಟು ಆಗುತ್ತಲೇ, ಕೃಷ್ಣ ಯೋಗಮಾಯಾ ಶಕ್ತಿಯನ್ನು ಉಪಶಮನಗೊಳಿಸಿದನು. ಯಥಾಸ್ಥಿತಿ ಮರುಕಳಿಸಿತು. ಸೂರ್ಯ ಅಸ್ತಂಗತನಾಗುತ್ತಿದ್ದಾನೆ. ಪಶ್ಚಿಮಾಂಬುಧಿಯಲ್ಲಿ ದಿನಕರ ಅಸ್ತಮಿಸುವುದನ್ನು ಕಂಡು ಎರಡೂ ಪಕ್ಷಗಳು ಶಂಖನಾದಗೈದು ಯುದ್ಧವಿರಾಮ ಘೋಷಿಸಲು ಸಿದ್ಧರಾದರು.

ಜಯದ್ರಥ ಮಾತ್ರ ಭ್ರಮೆಗೊಳಗಾಗಿ, ಯುದ್ಧ ದಿನಾಂತ್ಯದ ಶಂಖನಾದ ಆಗಿದೆಯೋ ಇಲ್ಲವೋ ಎಂಬುವುದನ್ನು ಗಮನಿಸದೆ ಅತಿ ಸಂತೋಷದಿಂದ ಕುಣಿದು ಜಿಗಿದು ಸೂಚಿವ್ಯೂಹದಿಂದ ಹೊರಬಂದು ಬಲಿಯಾಗಿದ್ದಾನೆ.

ಯುದ್ಧವಿರಾಮದ ಘೋಷಣೆಯ ಸಿದ್ಧತೆಗಳಾದಾಗ, ಕುರು ಸೇನಾಪತಿ ದ್ರೋಣಾಚಾರ್ಯರಿಗೆ ರಾತ್ರಿಯಾದರೂ ಯುದ್ಧ ನಿಲ್ಲಿಸುವ ಮನಸ್ಸಿಲ್ಲ. ಯುದ್ಧ ಮುಂದುವರಿಸುವ ಅತ್ಯುಗ್ರ ಛಲ ಮೂಡಿದೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page