ಭಾಗ – 372
ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೩೭೨ ಮಹಾಭಾರತ
ಇತ್ತ ಹಸ್ತಿನಾವತಿಯಲ್ಲಿ ಧೃತರಾಷ್ಟ್ರ ಗಾಬರಿಯಾಗಿದ್ದಾನೆ. ಸಂಜಯನಲ್ಲಿ ಪ್ರಶ್ನೆಗಳ ಸುರಿಮಳೆ ಸುರಿಸುತ್ತಾ ಕೇಳುತ್ತಿದ್ದಾನೆ “ಸಂಜಯಾ ನನಗೆ ಶ್ರೀಕೃಷ್ಣನ ಬಗ್ಗೆ ನಂಬಿಕೆಯಿದೆ. ಆತ ನಿರಾಯುಧನಾಗಿದ್ದಾನೆ – ಭಯವಿಲ್ಲ. ಆ ಅರ್ಜುನ ಅಸದಳ, ಅತುಲ ವೀರಾಗ್ರಣಿ ಹೌದು. ಆದರೆ ಧರ್ಮಯುದ್ಧ ನಿರತನಾಗಿರುವ ಆತನ ಬಗ್ಗೆ ವಿಶ್ವಾಸವಿದೆ ಹೊರತು ಭಯವಿಲ್ಲ. ಇನ್ನು ಸಾತ್ಯಕಿ ಅಪ್ರತಿಮ ಮಹಾರಥಿಯಾದರೂ, ಶಾಂತಚಿತ್ತ ಸ್ವಭಾವದವನು, ಹಾಗಾಗಿ ಭಯವಿಲ್ಲ. ದೃಷ್ಟದ್ಯುಮ್ನ ಅತಿಮಾನುಷ ರೀತಿಯಲ್ಲಿ ಯಾಗಾಗ್ನಿಯಿಂದ ಸಂಭವಿತನಾದವನಾದರೂ, ಧರ್ಮ ಪರಾಯಣನೇ ಹೌದು. ಆತನ ಬಗೆಗೂ ಭಯವಿಲ್ಲ. ಇವರೆಲ್ಲರೂ ಪ್ರಳಯ ಸದೃಶ ಪ್ರತಾಪಿಗಳು ಆಗಿದ್ದರೂ, ಅವರಲ್ಲಿ ಸಮಯ ಒದಗಿ ಬಂದಾಗ ವೈರಿಗಳಿಗಾದರೂ ಕ್ಷಮೆ, ಕಾರುಣ್ಯ ತೋರುವ ಸದ್ಗುಣ ಸ್ವಭಾವವಿದೆ. ಆದರೆ ಭೀಮಸೇನ ಹಾಗಲ್ಲ! ಒಂದೊಮ್ಮೆಗೆ ರೌದ್ರನಾದರೆ, ಆತ ಯಾರ ಬಗ್ಗೆ, ಯಾವುದರ ಬಗ್ಗೆ, ಬಿಡು ಕನಿಷ್ಟ ಆತನ ಬಗ್ಗೆಯೂ ಯೋಚಿಸಲಾರನು. ತನ್ನ ಕೋಪ ಉಪಶಮನಗೊಳಿಸಲು ಮನಬಂದತೆ ನುಗ್ಗಿ ಸರ್ವನಾಶಗೊಳಿಸಬಲ್ಲ ಕ್ರೌರ್ಯ ಆತನಲ್ಲಿದೆ. ಅಂತಹ ಕ್ರೋಧಾವೇಶ ಆತನಲ್ಲಿ ಉತ್ಪನ್ನವಾದ ಈ ಹೊತ್ತು ವಿವೇಕ ಮತ್ತು ವಿವೇಚನೆ ಎರಡೂ ಆತನಲ್ಲಿ ಇರಲಾರದು. ಹಾಗಾಗಿ ಭೀಮನ ಬಗ್ಗೆ ನನ್ನ ಮನದಲ್ಲಿ ವಿಪರೀತ ಭಯ ಆವರಿಸಿದೆ. ಸಂಜಯಾ! ಭೀಮನೆಲ್ಲಿದ್ದಾನೆ? ಏನು ಮಾಡುತ್ತಿದ್ದಾನೆ? ಬೇಗ ಹೇಳು…” ಎಂದು ಅವಸರಿಸತೊಡಗಿದನು.
ದಿನಂಪ್ರತಿ ಹುಣ್ಣಿಮೆಯಿರದು, ಆದರೆ ಒಂದು ದಿನ ಚಂದ್ರನೂ ಪೂರ್ಣ ಪ್ರಭೆ ಹೊಂದಿ ಪರಿಪೂರ್ಣನಾಗಿ ಗೋಚರಿಸುತ್ತಾನೆ. ಹಾಗೆಯೆ ಇಂದು ಭೀಮಸೇನ ಯಾವ ಮಗ್ಗುಲಿಂದ ಎದ್ದಿದ್ದಾನೋ? ಯಾರ ಮುಖಾವಲೋಕನ ಮಾಡಿದ್ದಾನೋ ಅರಿಯದು! ಮಾರುತನಂತೆ ಅತಿವೇಗ ಹೊಂದಿ ಎಲ್ಲೆಡೆ ಬಿರುಗಾಳಿಯಾಗಿ ಬೀಸಿ ಹಾರಿಸುತ್ತಿದ್ದಾನೆ. ಗುರು ದ್ರೋಣರ ರಥವನ್ನು ತನ್ನ ಗದಾದಂಡದಿಂದ ಪುಡಿಗೈದ ಕ್ಷಣ ಕುರು ಸೇನಾಪತಿಯ ರಕ್ಷಣೆಗೆ ಸನಿಹವಿದ್ದ ಧೃತರಾಷ್ಟ್ರ ಪುತ್ರರು ಧಾವಿಸಿ ಭೀಮನನ್ನು ಸುತ್ತುವರಿದಿದ್ದಾರೆ. ದುಶ್ಯಾಸನ ಸ್ವಭಾವತಃ ಮುಂಗೋಪಿ. ಭೀಮನ ಆರ್ಭಟ ಸಹಿಸಲಾಗದೆ ಮುರಿದು ಬಿದ್ದಿದ್ದ ರಥವನ್ನೆತ್ತಿ ಅದನ್ನೇ ಬೀಸಿ ಭೀಮನ ಮೇಲೆ ಅಪ್ಪಳಿಸಿದನು. ಶರೀರ ಬಿಗಿಗೊಳಿಸಿ ಘಾತಕ್ಕೆ ಎದೆಯೊಡ್ಡಿ ನಿಂತ ಭೀಮ ಕದಲಲಿಲ್ಲ. ಮೊದಲೇ ಮುರಿದ ರಥ ಈಗ ಪುಡಿಪುಡಿಯಾಗಿ ಹಾರಿ ಚದುರಿ ಬಿದ್ದಿತು ಹೊರತು ಬೇರೇನೂ ಆಗಲಿಲ್ಲ. ತಕ್ಷಣ ಭೀಮ ತಿರುಗಿ ದುಶ್ಯಾಸನನತ್ತ ಗದೆ ಬೀಸುತ್ತಾ ಮುನ್ನುಗ್ಗಿದಾಗ ದುಶ್ಯಾಸನನೂ ಅಂಜದೆ ಹೋರಾಡತೊಡಗಿದನು. ಕ್ಷಣ ಕ್ಷಣಕ್ಕೂ ಭೀಮನ ರುಧಿರಮುಖಿ ಗದೆಯ ಮಾರಣಾಂತಿಕ ಹೊಡೆತಗಳನ್ನು ಸಹಿಸಿ ನಿಲ್ಲಲಾಗದೆ, ಪ್ರಾಣ ಉಳಿಸಲು ದುಶ್ಯಾಸನ ಓಡಿ ಮರೆಯಾಗಬೇಕಾಯ್ತು. ಆಗ ಎದುರಾದವರು ದುರ್ಯೋಧನನ ತೊಂಭತ್ತೊಂಬತ್ತು ಸೋದರರಲ್ಲಿ ಕೆಲವರಾದ ಸುಷೇಣ, ದೀರ್ಘನೇತ್ರ, ವೃಂದಾರಕ, ಅಭಯ, ರೌದ್ರಕರ್ಮ, ದುರ್ವಿಲೋಚನ, ವಿಂದ, ಅನುವಿಂದ, ಸುವರ್ಮಾಣ, ಸುದರ್ಶನ. ಈ ಹತ್ತೂ ಜನ ಗಾಂಧಾರಿ ಪುತ್ರರು ಅತ್ಯುತ್ಸಾಹದಿಂದ ಸಮಷ್ಟಿಯಾಗಿ ಆರಂಭದಲ್ಲಿ ಒಗ್ಗಟ್ಟಿನಿಂದ ಭೀಮನ ಮೇಲೆ ಆಯುಧ ಪ್ರಯೋಗ ಮಾಡಿದರಾದರೂ, ಒಂದೊಮ್ಮೆ ಭೀಮ ಹಿಡಿತ ಸಾಧಿಸಿ ಒಬ್ಬೊಬ್ಬರನ್ನು ಹೆಕ್ಕಿ ಹೆಕ್ಕಿ ಅಪ್ಪಳಿಸಿದಾಗ ಯಾರಿಗೂ ಪ್ರತಿರೋಧ ತೋರಿಸಲಾಗಲಿಲ್ಲ. ಕೆಲವರು ಗದಾಘಾತಕ್ಕೆ ಪ್ರಾಣ ಬಿಟ್ಟರು. ಹಿಂದಿನಿಂದ ಬಂದು ಹೊಡೆಯಲು ನೋಡಿದವನನ್ನು ಹಿಮ್ಮಡಿಯಿಂದ ಒದ್ದು ಕಾಲಡಿಗೆ ಹಾಕಿ ತುಳಿದು ಅಪ್ಪಚ್ಚಿಗೊಳಿಸಿ ಕೊಂದರೆ, ಬಿಡಿಸಲು ಬಂದವರು ಭೀಮನ ಕಂಕುಳೆಡೆಯಲ್ಲಿ ಸಿಲುಕಿ ಉಸಿರುಗಟ್ಟಿ ಹತ ಪ್ರಾಣನಾದರು. ಬಲಗೈಯಿಂದ ಗದೆ ಬೀಸುತ್ತಾ ಬರುತ್ತಿದ್ದ ಭೀಮನೆದುರು ಮುಂದೊತ್ತಿ ಬಂದವರ ಕಪಾಲ ಒಡೆದು ಕೊಲ್ಲಲ್ಪಟ್ಟರು. ಹೀಗೆ ಬಂದ ಹತ್ತೂ ಮಂದಿ ಕೌರವ ಸೋದರರೂ ಭೀಮನಿಗೆ ಸುಲಭದ ತುತ್ತಾಗಿ ಕ್ಷಣಾರ್ಧದಲ್ಲಿ ಚಿರನಿದ್ರೆಗೆ ನಿರ್ದಾಕ್ಷಿಣ್ಯವಾಗಿ ದೂಡಲ್ಪಟ್ಟಿದ್ದಾರೆ. ಮತ್ತೆ ಭೀಮ ಪದಾತಿಯಾಗಿ ಕುರು ಸೇನೆಯನ್ನು ಸುಂಟರಗಾಳಿಯ ತೆರದಲ್ಲಿ ತರಗೆಲೆ ಸಹಿತ ಹೆಮ್ಮರಗಳನ್ನೂ ಬುಡಸಹಿತ ಸೆಳೆದು ಹಾರಿಸುವಂತೆ ಸರ್ವನಾಶಗೈಯ ತೊಡಗಿದ್ದಾನೆ. ಆಗ ಕುರು ಸೇನಾಪತಿ ದ್ರೋಣಾಚಾರ್ಯರು ಹೊಸ ರಥ ಏರಿ ಬಂದು ಭೀಮನ ಮೇಲೆ ಶರವರ್ಷಗೈಯತೊಡಗಿದರು. ಮಾರುತಿ ನಂದನ ಹನುಮ ವಜ್ರಕಾಯ. ಈಗ ಕುರುಕ್ಷೇತ್ರದಲ್ಲಿ ಕೌಂತೇಯ ಭೀಮ ಜನ್ಮ ಕಾರಣದಿಂದ ಮಾರುತೇಯ. ದ್ರೋಣರ ಶರಗಳು ತನ್ನ ಮಾಂಸ ಮಜ್ಜೆಗಳ ಕಾಯ ಖಂಡನ ಮಾಡುತ್ತಿದ್ದರೂ, ಲಕ್ಷಿಸದೆ ಮುನ್ನುಗ್ಗುತ್ತಿದ್ದಾನೆ. ದ್ರೋಣರ ತೀಕ್ಷ್ಣ ಶರವೊಂದು ಚುಚ್ಚಿ ಆಳಕ್ಕಿಳಿದು ತನ್ನ ಮತಿಗೆ ಅಗೋಚರನಾಗಿ ಸ್ವಯಂಚಾಲಿತನಂತೆ ಹೋರಾಡುತ್ತಿದ್ದ ಭೀಮನನ್ನು ಎಚ್ಚರಿಸಿತು. ತಿರುಗಿ ನೋಡಿದರೆ ಆಚಾರ್ಯ ದ್ರೋಣರ ಶರಹತಿಯ ಗಾಯ. ಎರಡೂ ಕೈಗಳನ್ನೂ ಎದೆಗಾವರಿಸಿ ಬಿಗಿದು ಹಿಡಿದನು. ಶಿರವನ್ನು ಬಾಗಿಸಿ ಎದೆಗವುಚಿ ಹುದುಗಿಸಿದನು. ಗೂಳಿ ಹೇಗೆ ಜಡಿ ಮಳೆಗೆ ಮೈಯೊಡ್ಡುತ್ತಾ ಓಡುತ್ತದೋ! ಹಾಗೆ ದ್ರೋಣಾಚಾರ್ಯರ ರಥದತ್ತ ಓಡತೊಡಗಿದನು. ಮಳೆಯಂತೆ ಬಾಣಗಳು ಮೈಯೆಲ್ಲಾ ಮುತ್ತಿಕೊಳ್ಳುತ್ತಿದ್ದರೂ ತನ್ನ ಬಾಹು, ಎದೆ, ಶಿರದ ರಕ್ಷಣೆ ಮಾಡುತ್ತಾ ದ್ರೋಣ ರಥದ ಮುಂಭಾಗ ತಲುಪಿದನು. ರಥದ ನೊಗ ಮೂತಿಯನ್ನು ಸಹಸ್ರ ಗಜ ತ್ರಾಣದ ತನ್ನ ಅಜಾನುಬಾಹುಗಳಿಂದ ಹಿಡಿದು ಜಗ್ಗಿ ಬೀಸಿ ಬಿಸುಟನು. ರಥ ಎತ್ತ ಹಾರಿ ಬಿತ್ತೋ! ಆದರೂ ಸಾರಥಿ ಮತ್ತು ರಥಿಕ ದ್ರೋಣಾಚಾರ್ಯರು ಹೇಗೋ ಹಾರಿ ಬದುಕಿಕೊಂಡರು. ಗುರು ದ್ರೋಣರೇನು ಸಾಮಾನ್ಯರೆ? ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಮತ್ತೊಂದು ರಥವೇರಿ ಭೀಮನ ಮುಂದೆ ಕಾಣಿಸಿಕೊಂಡರು. ಅವರ ಸಾರಥಿಯೂ ಅಷ್ಟೇ ಕುಶಲಿಗನು ಆಗಿದ್ದನು. ವೃಕೋದರನ ಕೋಪ ನೆತ್ತಿಗೇರಿತು ಮತ್ತೆ ಅದೇ ರೀತಿಯ ಪುನಾರವರ್ತನೆ. ದ್ರೋಣರ ರಥವನ್ನು ಹಿಡಿದು ಗಿರಗಿರನೆ ತಿರುಗಿ ಕುರುಸೇನೆಯನ್ನು ಗುರಿಯಾಗಿಸಿ ಎಸೆದನು. ರಥದಡಿ ಬಿದ್ದು ಕೆಲವರು ಸತ್ತು ಬಿದ್ದರು. ಈ ಬಾರಿಯೂ ಸಾರಥಿ ಸಹಿತ ದ್ರೋಣಚಾರ್ಯರು ಜಾರಿ ಹಾರಿ, ಬೇರೆ ರಥವೇರಿಯಾಗಿದೆ. ಹೀಗೆ ಸತತ ಎಂಟು ಭಾರಿ ದ್ರೋಣರ ರಥ ನಾಶಗೈದು ಭೀಮ ತನ್ನ ಆಕ್ರೋಶದ ಅವತಾರವನ್ನು ರಣಕ್ಷೇತ್ರದಲ್ಲಿ ಅನಾವರಣಗೊಳಿಸಿದ್ದಾನೆ. ಭೀಮಸೇನನ ದೃಷ್ಟಿ ಜಯದ್ರಥ ರಕ್ಷಿತನಾಗಿರುವ ಪದ್ಮವ್ಯೂಹದತ್ತ ತಿರುಗಿದಾಗ, ಅಣ್ಣ ಧರ್ಮಜನ ಆತಂಕ ನೆನಪಾಗಿ, ನೇರವಾಗಿ ಬೊಬ್ಬಿರಿದು ಅಬ್ಬರಿಸುತ್ತಾ ಅತ್ತ ಧಾವಿಸಿದನು. ಉಪಮೆಯಾಗಿ ಹೇಳುವುದಾದರೆ ಯಮನ ಕಾಲಪಾಶದಂತೆಯೋ! ಇಂದ್ರನ ವಜ್ರಾಯುಧಕ್ಕೆ ಸಮತುಲ್ಯವಾಗಿಯೋ! ತನ್ನ ದಿವ್ಯಾಯುಧ ಗದೆಯನ್ನು ವೃತ್ತಾಕಾರದಲ್ಲಿ ಬೀಸುತ್ತಾ, ಶಿರವನ್ನಾವರಿಸಿ ಬೆಂಗಡೆಯಿಂದ ಮುಂದೆ, ಎಡಬಲ ಹೀಗೆ ದಶದಿಕ್ಕುಗಳಿಗೂ ಅದ್ಬುತ ವೇಗದಿಂದ ತಿರುವುತ್ತಾ ಮಹಾವಿಷ್ಣುವಿನ ಸುದರ್ಶನದಂತೆ ತನಗೆದುರಾದ ವೀರರ ಶಿರ, ಆಯುಧಗಳ ಹತಿಯನ್ನು ಛಿದ್ರಗೊಳಿಸುತ್ತಾ ವ್ಯೂಹದೊಳಗೆ ವಾಯುವೇಗದಲ್ಲಿ ಸಂಚಲನ ಮೂಡಿಸುತ್ತಾ ಸಂಚರಿಸಿದನು.
ಕ್ಷಣಾರ್ಧದಲ್ಲಿ ಕೃಷ್ಣಾರ್ಜುನರ ಬಳಿ ಸಾಗಿ ಬಿಟ್ಟನು. ಸಾತ್ಯಕಿಯೂ ಅಲ್ಲಿ ಅತಿ ಸಾಹಸದ ಯುದ್ದ ನಿರತನಾಗಿ ವಿಕ್ರಮ ಮೆರೆಯುತ್ತಿರುವುದನ್ನು ಕಂಡಾಗ ಮತ್ತೆ ಅಣ್ಣ ಧರ್ಮರಾಯನ ನೆನಪಾಯ್ತು. ಸಾತ್ಯಕಿ ಮತ್ತು ಕೃಷ್ಣಾರ್ಜುನರು ಕ್ಷೇಮದಿಂದಿದ್ದು ಹೋರಾಡುತ್ತಿದ್ದಾರೆ ಎಂಬ ಸಂದೇಶ ನೀಡಲು ರೌರವ ಸ್ವರದಲ್ಲಿ ಘರ್ಜನೆ ಮಾಡುತ್ತಾ ಸಿಂಹನಾದವನ್ನು ಗೈದನು. ಭೀಮನ ಈ ನಡೆ ನಮ್ಮವರಿಗೆ ಸೂಚನೆ ನೀಡುವುದಕ್ಕಾಗಿ ಎಂಬ ಸೂಕ್ಷ್ಮ ಅರ್ಜುನನಿಗೂ ಅರ್ಥವಾಯಿತು. ಭೀಮನನ್ನು ಅನುಸರಿಸಿ ಅರ್ಜುನನೂ, ಸಾತ್ಯಕಿಯೂ ದಶದಿಕ್ಕುಗಳೂ ಪ್ರತಿಧ್ವನಿಸುವಂತೆ ಆರ್ಭಟಿಸಿ ಉದ್ಘೋಷಗೈದರು. ಈ ರೌದ್ರತೆಯ ಸ್ವರ ಕೇಳಿ ಧರ್ಮರಾಯನ ಸ್ಥೈರ್ಯ ನೂರ್ಮಡಿ ಗುಣಿಸಲ್ಪಟ್ಟರೆ, ಕೌರವ ಪಾಳಯಕ್ಕೆ ಯಾಕಾಗಿ? ಯಾವ ಸಾಧನೆಗಾಗಿ ಈ ಬೊಬ್ಬೆ ಎಂದರಿಯಲಾಗದೆ ಎದೆಗುಂದಿ ಅಂಜಿ ನಡುಗುವಂತಾಯಿತು. ಛಲದಂಕಮಲ್ಲ ದುರ್ಯೋಧನನೂ ಒಂದೊಮ್ಮೆಗೆ ಈ ಕ್ಷಣ ಅಳುಕಿ ಅವಲೋಕಿಸುತ್ತಾ ಹಿಂದಡಿಯಿಡುವ ಮನಸ್ಥಿತಿ ಹೊಂದಿದಾಗ, ಆತನನ್ನು ರಕ್ಷಿಸುತ್ತಾ ಕಾದಾಡುತ್ತಿದ್ದ ಮಹಾರಥಿ ಕರ್ಣ ನೇರವಾಗಿ ಭೀಮಸೇನನ ಮೇಲೆ ಆಕ್ರಮಣ ಮಾಡಿದನು.
ಭೀಮ – ಕರ್ಣರ ನಡುವೆ ಅತ್ಯುಗ್ರ ಸಮರ ಸಾಗುತ್ತಿದೆ. ಇತ್ತ ಸಮಯ ಕೈಮೀರಿ ಸಂಧ್ಯಾಕಾಲವಾಗುತ್ತಿದೆ. ಸೂರ್ಯಾಸ್ತಮಾನಕ್ಕೆ ಕೆಲಗಳಿಗೆಗಳಷ್ಟೆ ಉಳಿದಿದೆ. ಜಯದ್ರಥ ಇನ್ನೂ ಸಂರಕ್ಷಿತನಾಗಿ ಬದುಕುಳಿದಿದ್ದಾನೆ. ಸಾತ್ಯಕಿ – ಕೃಪ ಭೂರಿಶ್ರವಸನ ಜೊತೆ, ಭೀಮಸೇನ – ದುರ್ಯೋಧನ, ಕರ್ಣನ ಜೊತೆ, ಅರ್ಜುನ – ಅಶ್ವತ್ಥಾಮ ಶಲ್ಯಾದಿಗಳ ಜೊತೆ ಕಾಲಾಂತಕ ರೀತಿಯ ಸಂಗ್ರಾಮ ನಿರತರಾಗಿದ್ದಾರೆ. ಪದ್ಮವ್ಯೂಹದ ಅಂತಿಮ ದಳವ್ಯೂಹವೂ ಭೇದಿಸಲ್ಪಟ್ಟು ಚದುರಿ ಹೋಗುತ್ತಿದೆ.
ಮುಂದುವರಿಯುವುದು…



















