22.3 C
Udupi
Tuesday, February 3, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 370

ಭರತೇಶ ಶೆಟ್ಟಿ , ಎಕ್ಕಾರ್

ಸಂಚಿಕೆ ೩೭೦ ಮಹಾಭಾರತ

ವ್ಯೂಹದೊಳಗೆ ಪದ್ಮದ ಅಂತಿಮ ದಳ ಸುತ್ತಿನಂತೆ ರಕ್ಷಕರಾಗಿ ನಿಂತಿರುವ ಮಹಾರಥಿಗಳು ಸಾಮಾನ್ಯರಲ್ಲ! ಒಳ ಪ್ರವೇಶಿಸಿರುವ ಅರ್ಜುನ ಅಸಾಮಾನ್ಯ ವೀರ! ಈಗ ಆರು ಮಂದಿ ಮಹಾರಥರು, ಜೊತೆಗೆ ಜಯದ್ರಥ ಮತ್ತು ದುರ್ಯೋಧನನೂ ಸೇರಿ ಏಕಕಾಲದಲ್ಲಿ ಅರ್ಜುನನ ಮೇಲೆ ಆಕ್ರಮಣಗೈಯುತ್ತಾ ಮೇಲೆರಗುತ್ತಿದ್ದಾರೆ. ಒಬ್ಬರಿಗಂತ ಒಬ್ಬರು ಬಲಾಢ್ಯ ವಿಕ್ರಮಿಗಳು. ಅರ್ಜುನನಿಗೆ ಈಗ ನಿಜ ಪರೀಕ್ಷೆ ಎದುರಾಗಿದೆ. ಅಲ್ಲಿ ಗಗನದಲ್ಲಿ ಸೂರ್ಯ ಪಶ್ಚಿಮಾಂಬುದಿಯತ್ತ ಜಾರುತ್ತಿದ್ದಾನೆ. ಇಲ್ಲಿ ಜಯದ್ರಥ ಅರ್ಜುನನ ಕಣ್ಣಿಗೆ ತೋರುತ್ತಿದ್ದಾನೆ. ಆದರೂ ಗುರಿ ಸಾಧಿಸುವ ಯೋಜನೆ ರೂಪುಗೊಳ್ಳಬೇಕು.

ಒಂದೆಡೆ ಶಪಥ ಪೂರೈಕೆಯ ಅವಧಿ ಕ್ಷೀಣಗೊಳ್ಳುತ್ತಿದೆ. ಎಂಟು ಮಹಾರಥರು ತಿರುಗುವ ಚಕ್ರದಂತೆ ಜಯದ್ರಥನ ಸುತ್ತ ಕಾವಲಾಗಿ ಪರಿಭ್ರಮಣ ನಿರತರಾಗಿದ್ದಾರೆ. ಹೀಗಿರುವಾಗ ಗುರು ಪುತ್ರ ಅಶ್ವತ್ಥಾಮ ತೀಕ್ಷ್ಣ ಶರಗಳಿಗೆ ಶ್ರೀ ಕೃಷ್ಣನನ್ನು ಗುರಿಯಾಗಿಸಿದನು. ಇದನ್ನು ಮನಗಂಡ ಪಾರ್ಥ ಛೇದಿಸುವುದರೊಳಗಾಗಿ ಒಂದು ಶರ ಕೃಷ್ಣನನ್ನು ಗಾಯ ಗೊಳಿಸಿ ಬಿಟ್ಟಿತು. ಕೆರಳಿ ಕೆಂಡಾಮಂಡಲವಾದ ಪಾರ್ಥ ಎದುರಾಗಿರುವ ಅಶ್ವತ್ಥಾಮನತ್ತ ಬಾಣಗಳ ಸುರಿಮಳೆಗರೆಯಲು ಆರಂಭಿಸಿದನು. ಆದರೆ ಕೃಪ, ಕರ್ಣ, ಶಲ್ಯ, ದುರ್ಯೋಧನರು ಸಾಂಘಿಕವಾಗಿ ಸೇರಿ ಪಾರ್ಥ ಶರಗಳನ್ನು ಖಂಡಿಸಿದರು. ಎಂತಹ ಘೋರ ಕಾಳಗ! ಎದುರಲ್ಲಿ ಎಂಟು ಮಹಾರಥರು. ಜಯದ್ರಥ ನಿಕಟವಾಗಿ ಕಾಣಿಸುತ್ತಿದ್ದರೂ, ಆತ ಪಾರ್ಥನ ಗುರಿಯಾಗಿದ್ದರೂ ಉಳಿದ ಏಳು ಮಂದಿಯ ಭದ್ರಕೋಟೆಯಂತಹ ರಕ್ಷಣೆಯಿಂದಾಗಿ ಪಾರ್ಥನ ಗುರಿಸಾಧನೆಗೆ ತಡೆಯಾಗಿದೆ.

ಇತ್ತ ದ್ರೋಣಾಚಾರ್ಯರು ಸಾತ್ಯಕಿಯೊಡನೆ ಯುದ್ದಗೈಯುತ್ತಿದ್ದವರನ್ನು ಕೃತವರ್ಮ ಮುಕ್ತಗೊಳಿಸಿದನು. ಸಾತ್ಯಕಿಯನ್ನು ತಡೆದು ಹೋರಾಡತೊಡಗಿದಾಗ ವೃಷ್ಣಿ ವಂಶೀಯರು (ಯಾದವರ ಪಂಗಡ) ಕದನ ಕಲಿಗಳಾಗಿ ಹೊಯ್ದಾಡುವ ಸ್ಥಿತಿ ನಿರ್ಮಾಣವಾಗಿ ಬಿಟ್ಟದ್ದು ವಿಪರ್ಯಾಸ.

ಇಂದಿನ ಯುದ್ಧ ವಿಶೇಷ ಎಂಬಂತೆ ಸೋಮದತ್ತ ಪುತ್ರ ಶಲನನ್ನು ಉಪ ಪಾಂಡವರು ಘೋರ ಸಂಗ್ರಾಮದಲ್ಲಿ ಸೋಲಿಸಿ ಮುನ್ನುಗ್ಗುತ್ತಿದ್ದಾರೆ.

ಇತ್ತ ನರ ಮತ್ತು ರಾಕ್ಷಸರಿಗೆ ಭಯಂಕರ ಯುದ್ದವಾಗುತ್ತಿದೆ ಭೀಮಸೇನನೂ ರಾಕ್ಷಸೇಂದ್ರ ಆಲಂಬುಷನಿಗೂ ಭೀಕರ ಯುದ್ಧ ಸಾಗುತ್ತಿದೆ. ಸಹಸ್ರ ಗಜತ್ರಾಣಿಯ ಆಘಾತಗಳು ವೇಗ ಪಡೆದಾಗ ಅದೃಶ್ಯನಾಗುತ್ತಾ ಆಲಂಬುಷ ಮಾಯಾಯುದ್ದ ನಿರತನಾದನು. ಕಣ್ಣಿಗೆ ಕಾಣಿಸದೆ ಅವ್ಯಕ್ತನಾಗಿದ್ದು, ಭೀಮನ ಮೇಲೆ ಶರಾಘಾತಗಳನ್ನು ಆರಂಭಿಸಿದನು. ಆಕಾಶದಿಂದ ಬಾಣಗಳು ತನ್ನನ್ನು ಗುರಿಯಾಗಿಸಿ ಬರುತ್ತಿವೆ ಬಿಟ್ಟರೆ, ಪ್ರಯೋಗಿಸುತ್ತಿರುವ ಆಲಂಬುಷ ಕಾಣದಾಗಿ ಹೋಗಿದ್ದಾನೆ. ಭೀಮಸೇನ ಬಹಳಷ್ಟು ಗಾಯಗೊಳ್ಳತೊಡಗಿದನು. ರುದ್ರಭಯಂಕರನಾಗಿ ಅಬ್ಬರಿಸುತ್ತಾ ವ್ಯೋಮವನ್ನು ಗುರಿಯಾಗಿಸಿ ನಿರಂತರ ಸಹಸ್ರಾಧಿಕ ಬಾಣ ಪ್ರಯೋಗಿಸುತ್ತಿದ್ದಾನೆ. ಅದೃಶ್ಯನಾಗಿದ್ದರೂ ಆಲಂಬುಷನಿಗೆ ಭೀಮನ ಶರಗಳು ಚುಚ್ಚತೊಡಗಿದವು. ಆದರೂ ದೃಶ್ಯನಾಗದೆ ಸಾವರಿಸಿಕೊಳ್ಳುತ್ತಾ ಯುದ್ದ ಮುಂದುವರಿಸಿದನು. ಈ ಸ್ಥಿತಿಯನ್ನು ಕಂಡ ಭೀಮಪುತ್ರ ಘಟೋತ್ಕಚ ತನ್ನ ಪಿತನ ಸಹಾಯಕ್ಕೆ ಬಂದು ಒದಗಿದನು. ಭೈಮಸೇನಿ (ಭೀಮನ ಪುತ್ರ) ರಾಕ್ಷಸ ಅಲಾಯುಧನ ಮಾಯಾಜಾಲ ಭೇದಿಸಿ ಮಣಿಸಿದನು. ಮಾಯಾಯುದ್ದ ಮತ್ತಷ್ಟು ಭೀಕರತೆಯನ್ನು ಪಡೆಯಿತು. ಆಲಂಬುಷ ವಿಷಸರ್ಪಗಳನ್ನು ಸಹಸ್ರ ಸಂಖ್ಯೆಯಲ್ಲಿ ಸೃಜಿಸಿ ಘಟೋತ್ಕಚನ ಮೇಲೆ ಪ್ರಯೋಗಿಸಿದನು. ಆಗ ಘಟೋತ್ಕಚ ಮಾಯಾ ಶಕ್ತಿಯಿಂದ ಪ್ರಬಲ ಗರುಡರನ್ನು ಸೃಜಿಸಿ ಸರ್ಪಗಳನ್ನು ನಿಗ್ರಹಿಸಿದನು. ಆಲಂಬುಷ ತನ್ನ ಶಕ್ತಿಯಿಂದ ಬಹುಸಂಖ್ಯೆಯಲ್ಲಿ ಅತಿಬಲ ಆನೆಗಳನ್ನು ಸೃಜಿಸಿ ಘಟೋತ್ಕಚನ ಮೇಲೆರಗಿ ಹೋಗುವಂತೆ ಮಾಡಿದನು. ಆಗ ಘಟೊತ್ಕಚ ಪ್ರತಿಯಾಗಿ ಕ್ರೂರ ಸಿಂಹಗಳನ್ನು ಸೃಜಿಸಿ ಗಜಪಡೆಯನ್ನು ನಿಗ್ರಹಿಸಿದನು. ಆ ಕೂಡಲೆ ಕುಂಭದ್ರೋಣ ಮಳೆಯಂತೆ ಭೀಕರ ವರ್ಷಾಧಾರೆ ಸುರಿಸಿದ ರಕ್ಕಸ ಆಲಂಬುಷ. ಪ್ರತಿಯಾಗಿ ಜ್ವಾಲಾಮುಖಿಯಂತೆ ಅಗ್ನಿ ಶಕ್ತಿಯನ್ನು ಘಟೋತ್ಕಚ ಪ್ರಯೋಗಿಸಿ ರಕ್ಕಸ ಮಾಯೆಯನ್ನು ಆವಿಯಾಗಿಸಿ ಶಮನಗೊಳಿಸಿದನು. ಹೀಗೆ ಬಹುವಿಧ ಮಾಯೆ ಪ್ರಯೋಗಿಸಲ್ಪಡುತ್ತಾ ಘೋರ ಸಂಗ್ರಾಮ ಸಾಗಿತು. ಘಟೋತ್ಕಚ ಎಲ್ಲವನ್ನೂ ನಿಗ್ರಹಿಸಿ ಅಂತಿಮವಾಗಿ ಆಲಂಬುಷನನ್ನು ಸಂಹರಿಸಿ ಬಿಟ್ಟನು.

ಇತ್ತ ದ್ರೋಣಾಚಾರ್ಯರು ಧರ್ಮರಾಯನ್ನು ಗುರಿಯಾಗಿಸಿ ತನ್ನ ಹುಡುಕಾಟದಲ್ಲಿ ಮುಂದೊತ್ತಿ ಹೋಗ ತೊಡಗಿದರು. ಹುಡುಕುವ ಬಳ್ಳಿ ಕಾಲಿಗೆ ಸುತ್ತಿಕೊಂಡಂತೆ ಧರ್ಮಜ ಎದುರಾದನು. ಗುರು ಶಿಷ್ಯರ ಜೊತೆ ಅಮಿತ ಪರಾಕ್ರಮದ ಯುದ್ದ ಸಾಗತೊಡಗಿತು. ದ್ರೋಣಾಚಾರ್ಯರು ಕ್ಷಣ ಕ್ಷಣಕ್ಕೂ ಉಗ್ರರಾಗುತ್ತಾ, ಧರ್ಮರಾಯನ ಮೇಲೆ ಅತಿಬಲಯುತ ದಿವ್ಯ ಮಹಾಸ್ತ್ರವನ್ನು ಪ್ರಯೋಗಿದರು. ಆಗ ಭೀತರಾಗಿ ಇನ್ನೇನು ಧರ್ಮರಾಯ ಸತ್ತು ಹೋದನೆಂದು ಪಾಂಡವ‌ ಸೇನೆ ಬೊಬ್ಬಿಟ್ಟು ಆರ್ತಧ್ವನಿಯಲ್ಲಿ ಕೂಗಿದರು. ಆದರೆ ಧರ್ಮರಾಯ ಗುರುಗಳ ದಿವ್ಯಾಸ್ತ್ರಕ್ಕೆ ಸೂಕ್ತ ಪ್ರತ್ಯಸ್ತ್ರ ಪ್ರಯೋಗಿಸಿದನು. ಎರಡೂ ಕಡೆಯಿಂದ ಬಂದ ಮಂತ್ರಾಸ್ತ್ರಗಳು ಘರ್ಷಿಸಿ ಉಪಶಮನಗೊಂಡವು. ದ್ರೋಣಾಚಾರ್ಯರು ಮತ್ತಷ್ಟು ಕ್ರೋಧಕ್ಕೊಳಗಾದರು. ಶರವರ್ಷಗೈಯುತ್ತಾ ಧರ್ಮರಾಯನ, ರಥದ ಕುದುರೆ, ರಥ ರಕ್ಷಕರು, ರಥ ಸಾರಥಿ ಸಹಿತ ಎಲ್ಲರನ್ನೂ ಕೊಂದರು. ರಥ ಹೀನನಾಗಿ ಧರ್ಮರಾಯ ಕೆಳಕ್ಕೆ ಧುಮುಕಿದನು. ನೆಲದ ಮೇಲೆ, ನಿರಾಯುಧನಾಗಿ ಕೈಮೇಲೆತ್ತಿಕೊಂಡು ರಣಾಂಗಣದಲ್ಲಿ ನಿಂತನು. ದ್ರೋಣಾಚಾರ್ಯರು ಇದು ಸುಸಮಯವೆಂದು ಧರ್ಮಜನ ಸುತ್ತ ಶರಪಂಜರ ನಿರ್ಮಿಸಿ ಬಂಧಿಸಲು ಸಿದ್ಧರಾಗುತ್ತಾ ಮತ್ತಷ್ಟು ಸುತ್ತು ಕೋಟೆಗಳಾಗುವಂತೆ ಶರವರ್ಷಗೈದು ದಿಗ್ಬಂಧಿಸಿದರು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page