ಭಾಗ 352
ಭರತೇಶ ಶೆಟ್ಟಿ , ಎಕ್ಕರ್

ಸಂಜಯನು ಹಸ್ತಿನೆಯಲ್ಲಿ ಧೃತರಾಷ್ಟ್ರನಿಗೆ ಇಂದಿನ ಹನ್ನೆರಡನೆಯ ದಿನದ ಸಮರ ವಿಶ್ಲೇಷಣೆ ವಿವರಿಸುತ್ತಿದ್ದಾನೆ. ಧೃತರಾಷ್ಟ್ರ ಕುಸಿದಿದ್ದ ತನ್ನ ಧೃತಿಯನ್ನು ಒಗ್ಗೂಡಿಸಿ ಇಂದೇನಾದರೂ ಶುಭಪ್ರದ ಸುದ್ದಿ ಕರ್ಣಾನಂದಕರವಾಗಿ ಲಭಿಸೀತು. ಶಾಪಾದಪಿ – ಶರಾದಪಿ ಭಾರಾದ್ವಜ ಪುತ್ರ ಗುರುದ್ರೋಣ ಅತುಲ ವೀರನು ಹೌದು. ಶಸ್ತ್ರ – ಶಾಸ್ತ್ರ, ತಂತ್ರ – ಪ್ರತಿತಂತ್ರ, ಅಸ್ತ್ರ – ಪ್ರತ್ಯಸ್ತ್ರ, ವ್ಯೂಹ ರಚನೆ – ಭೇದನೆ ಸಕಲವನ್ನು ಬಲ್ಲವನಾಗಿರುವ ಕಾರಣ ಈ ವಿಶ್ವಾಸ ಮನ ಮಾಡಿದೆ.
ತ್ರಿಗರ್ತದ ಸಂಶಪ್ತಕ ಪಂಚ ಸೋದರರ ನಾಯಕತ್ವದಲ್ಲಿ ಕುರುಕ್ಷೇತ್ರದ ದಕ್ಷಿಣ ದಿಕ್ಕಿನ ಸಮತಟ್ಟಾದ ಬಯಲು ಪ್ರದೇಶದಲ್ಲಿ ಚಂದ್ರ ವ್ಯೂಹ ರಚಿಸಿ ಸನ್ನದ್ದಗೊಂಡು, ಅರ್ಜುನನ ಬೇಟೆಗೆ ಸಿದ್ದರಾಗಿ ನಿಂತಿದೆ.
ಶ್ರೀ ಕೃಷ್ಣನ ಪಾಂಚಜನ್ಯ – ಅರ್ಜುನನ ದೇವದತ್ತ ಶಂಖದ ನಿನಾದ ಮೊಳಗಿದ ತರಂಗಗಳು ಒಮ್ಮೆಗೆ ಸಂಶಪ್ತಕರ ವ್ಯೂಹವನ್ನು ಒಂದಡಿಯಷ್ಟು ಹಿಂದೊತ್ತಿ ಕಂಪಿಸುವಂತೆ ಮಾಡಿತು. ಶಂಖಧ್ವನಿ ದಶದಿಕ್ಕುಗಳನ್ನಾವರಿಸಿ ಉಪದಿಕ್ಕುಗಳಲ್ಲೂ ಗುಂಜನೆ ಮಾಡತೊಡಗಿತು. ವೈರಿ ಪಾಳಯದ ಗಜತುರಗಗಳೂ ಈ ಶಂಖ ಧ್ವನಿಯ ತೀವ್ರತೆಗೆ ಅಂಜಿ ಕಿರುಚಿ ಅರಚುತ್ತಾ ಘೀಳಿಟ್ಟವು.
ಏಕಾಂಗಿಯಾಗಿ ಪಾರ್ಥಸಾರಥಿಯೊಂದಿಗೆ ಬಂದಿದ್ದ ಮಧ್ಯಮ ಪಾಂಡವನನ್ನು ಕಂಡು ತ್ರೈಗರ್ತ್ಯರಿಗೆ ಸೇನೆ ಇಲ್ಲದೆ ಬಂದ ಧನಂಜಯನನ್ನು ಕಂಡು ಸಂತಸವಾಯಿತು. ಅತಿ ವಿಶ್ವಾಸ ಆತನಿಗೆ ಮುಳುವಾಗಲಿದೆ ಎಂಬ ಭ್ರಮೆ ಆವರಿಸಿ, ಅರ್ಧ ಗೆದ್ದಷ್ಟು ಸಂಭ್ರಮ ಮೂಡಿತು. ನೋಡುತ್ತಿದ್ದಂತೆಯೆ ಪ್ರಚೋದನೆ ಪ್ರತಿಕ್ರಿಯೆ ಸಾಗಿ ಯುದ್ದಾರಂಭವಾಗಿ ಬಿಟ್ಟಿತು. ಅತ್ತ ಲಕ್ಷೋಪಾದಿಯಲ್ಲಿದ್ದ ಸಂಶಪ್ತಕ ಸೇನೆ ಅರ್ಜುನನನ್ನು ಗುರಿಯಾಗಿ ವಿವಿಧಾಯುಧ ಪ್ರಯೋಗಿಸಿದಾಗ, ಅರ್ಜುನ ಅಕ್ಷಯಾಸ್ತ್ರ ಸಂಧಾನ ಮಾಡಿದ. ತೊಡುವಾಗ ಒಂದು, ಸೆಳೆದಾಗ ಹತ್ತು, ಚಿಮ್ಮಿದಾಗ ನೂರು, ಹಾರಿದಾಗ ಸಾವಿರ, ಲಕ್ಷ್ಯ ಮುಟ್ಟುವಾಗ ಲಕ್ಷವಾಗುತ್ತಾ ವೈರಿ ಪಾಳಯದ ಮೇಲೆ ಶರವರ್ಷವಾಗಿ ಸುರಿಯ ತೊಡಗಿತು. ಇದಿರಾಗಿ ಪ್ರಯೋಗಿಸಲ್ಪಟ್ಟ ಆಯುಧಗಳು ಇನ್ನಿಲ್ಲದಂತೆ ಖಂಡಿಸಲ್ಪಟ್ಟವು. ಕೆಲಕ್ಷಣಗಳು ಕಳೆದಾಗ ಹೆಣಗಳು, ಮುರಿದ ರಥಗಳು, ಖಂಡಿಸಲ್ಪಟ್ಟ ಆಯುಧಗಳು ರಾಶಿಯಾಗಿ ಬೆಟ್ಟದಂತೆ ಬಿದ್ದು ಬೆಳೆಯುತ್ತಿದೆ. ಮಹಾಬಲರಾದ ಸುಬಾಹು, ಸುಶರ್ಮ, ಸುರಥ, ಸುಧನ್ವಾದಿಗಳು ಧರೆಗೊರಗಿದರು. ಸಂಶಪ್ತಕರು ಅಭೇದ್ಯವಾಗಿ ರಚಿಸಿದ್ದ ವ್ಯೂಹ ಚದುರಿ, ದಿಕ್ಕೆಟ್ಟು ಅನಿಯಂತ್ರಿತವಾಗಿ ಹೋಗಿದೆ. ಸಂಘಟಿತ ದಾಳಿಗೆ ಆದೇಶ ನೀಡುವುದಾಗಲಿ, ಶರಾಘಾತದಿಂದ ಶವಗಳಾಗಿ ಬೀಳುವ ಸೇನೆಯ ರಕ್ಷಣೆಯಾಗಲಿ ಸಂಶಪ್ತಕರ ಕೈಮೀರಿದ ವಿಷಯವಾಯಿತು. ಸವ್ಯಸಾಚಿ ಎಡಗೈ ಬಲಗೈ ಬದಲಿಸುತ್ತಾ ಸಮಗ್ರ ಸೇನೆಯನ್ನು ವ್ಯಾಪಿಸಿ ಗಾಂಡೀವದಿಂದ ಮಾಡುತ್ತಿರುವ ದಾಳಿ ಹೇಗಿತ್ತೆಂದರೆ ಅಷ್ಟು ಬೃಹತ್ತಾದ ಸೇನೆಯಿದ್ದೂ ಒಂದು ಸರಳೂ ಪಾರ್ಥನ ರಥದ ಸಾಮಿಪ್ಯಕ್ಕೂ ಬರಲು ಅವಕಾಶವಿಲ್ಲ. ಪಥ ಮಧ್ಯದಲ್ಲಿ ಸೀಳಲ್ಪಟ್ಟು ಸೇನೆಯ ಮೇಲೆರಗಿ ವಿಧ್ವಂಸಗೈಯುತ್ತಿದೆ.
ತ್ರಿಗರ್ತರಾಜರು ತಮ್ಮ ಪ್ರತಿಜ್ಞೆಯನ್ನು ಪುನರುಚ್ಚರಿಸಿ ಪ್ರಾಣಭಯದಿಂದ ಓಡತೊಡಗಿದ್ದ ಸೇನೆಗೆ ಮರು ಅಭಯ ನೀಡಿ ವೀರಾವೇಶ ತುಂಬುವ ಯತ್ನಗೈಯುತ್ತಿದ್ದಾರೆ. ಆದರೂ ಭೋರ್ಗರೆದು ಧುಮುಕುತ್ತಿರುವ ಪಾರ್ಥನಂಬುಗಳಿಂದ ರಕ್ಷೆಯ ಇಂಬು ನೀಡಲಾಗದೆ ಒದ್ದಾಡುತ್ತಾ ಹೋರಾಡುವ ಸ್ಥಿತಿ ನಿರ್ಮಾಣವಾಗಿದೆ.
ಇತ್ತ ಕುರುಕ್ಷೇತ್ರದಲ್ಲಿ ಗುರುದ್ರೋಣರು ಯೋಜನಾಬದ್ದ ದಾಳಿ ಸಂಘಟಿಸುತ್ತಾ ಪಾಂಡವ ಸೇನೆಯ ನಾಶಗೈಯುತ್ತಿದ್ದಾರೆ. ಭಗದತ್ತ, ದುರ್ಯೋಧನ, ಭೂರಿಶ್ರವಸ್ಸು, ಕೃತವರ್ಮ, ಕರ್ಣ, ದುಶ್ಯಾಸನ, ಶಲ್ಯ, ಅಶ್ವತ್ಥಾಮ, ಕೃಪಾದಿಗಳ ಉತ್ಸಾಹ ಇಮ್ಮಡಿಯಾಗಿ ಸಿಕ್ಕ ಅವಕಾಶವೆಂದು ಧ್ವಂಸಗೈಯತೊಡಗಿದ್ದಾರೆ. ಸಾತ್ಯಕಿ, ಭೀಮಸೇನ, ದ್ರುಪದ, ದೃಷ್ಟದ್ಯುಮ್ನ, ಅಭಿಮನ್ಯು, ಯುಧಿಷ್ಠಿರ, ನಕುಲ, ಸಹದೇವಾದಿಗಳು ಸೇರಿ ಆಕ್ರಮಣ ತಡೆಯುತ್ತಿದ್ದರೂ ಸೇನೆ ಅಡಿಗಡಿಗೆ ಹಿಂಜರಿಯುತ್ತಿದೆ. ದ್ರೋಣಾಚಾರ್ಯರು ಪ್ರಬಲ ಪ್ರತಿರೋಧ ನೀಡುತ್ತಿದ್ದ ಭೀಮನತ್ತ ನರಕಾಸುರ ಪುತ್ರನಾದ, ಸುಪ್ರತೀಕವೆಂಬ ಮಹಾಗಜವೇರಿ ಕುಳಿತ ಭಗದತ್ತನನ್ನು ಕಳುಹಿಸಿ ವ್ಯಸ್ಥಗೊಳಿಸಿದರು. ದ್ರೋಣಾಚಾರ್ಯರು ಅಭಿಮನ್ಯು, ಸಾತ್ಯಕಿಯ ರಕ್ಷಣೆಯೊಳಗಿದ್ದ ಧರ್ಮರಾಯನನ್ನು ಹುಡುಕಿ ತುಡುಕಿ ಬಂಧಿಸಲು ಮುನ್ನುಗ್ಗುತ್ತಿದ್ದಾರೆ. ದ್ರೋಣಾಚಾರ್ಯರು ಮುಂದೆ ನಿಂತು ನಿರ್ಬಂಧಿತರಾಗಿ ಎರಗಿ ಸವರುವಾಗ ತಡೆಯುವರಾರು? ಸರ್ವನಾಶವನ್ನು ಕಾಣತೊಡಗಿದೆ ಪಾಂಡವ ಸೇನೆ. ಧರ್ಮಜನ ಪಾಳಯದ ಸ್ಥಿತಿ – ಕೃಷ್ಣಾರ್ಜುನರೆಂಬ ಹರಿಗೋಲಿಲ್ಲದ ದೋಣಿಯಂತೆ ನಿಯಂತ್ರಣ ಕಳಕೊಂಡಿದೆ. ಭಗದತ್ತ ಅಸದಳ ವಿಕ್ರಮಿ. ಸಹಸ್ರ ಗಜತ್ರಾಣಿ ರುದ್ರ ಭೀಮನಿಗೂ ನುಂಗಲಾರದ ತುತ್ತಾಗಿ ಬಿಟ್ಟಿದ್ದಾನೆ. ಸುಪ್ರತೀಕವೆಂಬ ಮದಗಜವನ್ನಡರಿ ಧೂಳೆಬ್ಬಿಸುತ್ತಾ ಮುನ್ನುಗ್ಗಿದಾಗ, ಭೀಮನೂ ಬಸವಳಿದನು. ಹರಸಾಹಸ ಪ್ರದರ್ಶಿಸಿದರೂ ಅಲುಗದೆ ಪ್ರತಿರೋಧ ನಿರತನಾದ ಭಗದತ್ತನಿಂದ ಭೀಮನೂ ಹಿಂಸಿಸಲ್ಪಡುತ್ತಿದ್ದಾನೆ.
ದಕ್ಷಿಣ ಭಾಗದಲ್ಲಿ ಸಂಶಪ್ತಕರೊಂದಿಗೆ ಯುದ್ದ ನಿರತನಾಗಿದ್ದ ಅರ್ಜುನ ಬೆಂಕಿಯ ಕಿಡಿಯೊಂದು ಮಿನುಗಿ, ಪ್ರಜ್ವಲಿಸುತ್ತಾ ಮಹಾರಣ್ಯವನ್ನು ವ್ಯಾಪಿಸಿ ಭಸ್ಮೀಭೂತಗೊಳಿಸುವಂತೆ ಸಂಶಪ್ತಕರನ್ನು ಹೋಮಿಸುತ್ತಿದ್ದಾನೆ. ದ್ರೋಣಾಚಾರ್ಯರ ತಂತ್ರದ ಅರಿವಿದ್ದ ಲೋಕಪಾಲಕ ಗೋಪಾಲಕೃಷ್ಣ ತನ್ನ ಆಜ್ಞಾಪಾಲಕ ಅರ್ಜುನನ್ನು ಎಚ್ಚರಿಸುತ್ತಾ, ಇಲ್ಲಿ ಬಹಳ ಹೊತ್ತು ನಾವು ಕಳೆದಿದ್ದೇವೆ. ಅತ್ತ ನಮ್ಮ ಪಕ್ಷದ ಸೇನೆ ದ್ರೋಣರಿಂದ ಅಧಃಪತನ ಗೊಳ್ಳುತ್ತಿದೆ. ಕ್ಷಣ ಕಾಲ ತ್ರಿಗರ್ತರನ್ನು ಹಾರಿಸಿ ಇಲ್ಲಿಂದ ಆ ಕಡೆ ಹೋಗಿ ಬರಬೇಕು ಎಂದು ನಿರ್ದೇಶನ ನೀಡಿದನು. ತಕ್ಷಣ ಹೃಷಿಕೇಶನ ಮಾತಿನ ಮರ್ಮ ಅರಿತ ಗುಡಾಕೇಶ, ಪ್ರತಿಕರ್ಮವಾಗಿ ಮಹಾಸ್ತ್ರ ಸಂಧಾನ ಮಾಡಿದ. ಚಿನ್ನದ ಅಲುಗುಳ್ಳ ಉತ್ತಮ ಶರವೊಂದನ್ನು ಶಿಂಜಿನಿಗೆ ಜೋಡಿಸಿ ವಜ್ರಾಯುಧ ಸದೃಶ ವಜ್ರಾಸ್ತ್ರವನ್ನು ಆಹ್ವಾನಿಸಿ ಪ್ರಯೋಗಿಸಿದನು. ಪರ್ವತವನ್ನು ಎತ್ತಿ ಹಾರಿಸಲ್ಪಟ್ಟಂತೆ ಸಮಗ್ರ ಸೇನೆಯನ್ನು ಅಮೂಲಾಗ್ರವಾಗಿ ಸಿಡಿಸಿದಾಗ ಸತ್ತವರೆಷ್ಟೋ, ಯೋಜನಾಂತರ ಎಸೆಯಲ್ಪಟ್ಟು ಬಿದ್ದು ಅಂಗವಿಕಲರಾದವರೆಷ್ಟೋ, ಬದುಕುಳಿದವರ್ಯಾರೋ?! ಒಮ್ಮೆಗೆ ತ್ರಿಗರ್ತರ ಸೇನೆ ಕಂಗೆಟ್ಟು ದಿಕ್ಕೆಟ್ಟು ದಿಕ್ಕಾಪಾಲಾಗಿ ಹಾರಿ ಚದುರಿ ಬಹುದೂರ ಬಿದ್ದಿದೆ. ರಣಕ್ಷೇತ್ರ ಮುಕ್ತವಾಗಿದೆ. ಮತ್ತೆ ತ್ರಿಗರ್ತರಿಗೆ ಮರು ಕ್ರೋಢೀಕರಣಗೊಂಡು ಸಮರ ಸಿದ್ಧರಾಗಲು ಬಹಳ ಹೊತ್ತು ಬೇಕಾದೀತು.
ಈ ಅವಕಾಶ ಬಳಸಿ, ಗಗನಚುಂಬಿಯಾಗಿ ವ್ಯಾಪಿಸಿದ ಧೂಳನ್ನು ಸೀಳುತ್ತಾ ಅರ್ಜುನನ ರಥ ಮಿಂಚಿನಂತೆ ತಿರುಗಿ ಕುರುಕ್ಷೇತ್ರದತ್ತ ಹಾರಿತು. ಗಾಂಡೀವಧಾರಿ ಅರ್ಜುನನಿಗೆ ಭಗದತ್ತ ಮೊದಲಾಗಿ ಇದಿರಾದನು. ಭಗದತ್ತನಿಗೂ – ಪಾರ್ಥನಿಗೂ ರಣಭಯಂಕರ ಸಂಗ್ರಾಮ ಸಾಗಿತು. ಭಗದತ್ತನಿಗೆ ಕೈಸೋಲಾಗ ತೊಡಗಿದಾಗ, ತಾನು ಮದಗಜವೇರಿದ್ದರೂ ಮದ್ದಾನೆಯಂತೆ ಏರಿ ಬರುತ್ತಿದ್ದ ಕಿರೀಟಿಯನ್ನು ನಿಗ್ರಹಿಸಲು ಇನ್ನು ವಿಳಂಬಿಸಬಾರದೆಂದು ನಿರ್ಧರಿಸಿದನು. ತನ್ನ ದಿವ್ಯಾಸ್ತ್ರ ವೈಷ್ಣವ ಅಂಕುಶವನ್ನು ಕೈಗೆತ್ತಿಕೊಂಡು ಪ್ರಯೋಗಿಸಲು ಸಿದ್ದನಾದನು. ವೈಷ್ಣವಾಂಕುಶಕ್ಕೆ ಇದಿರುಂಟೆ? ಮಹಾಪ್ರಳಯ ಸದೃಶವದು. ಈ ಕ್ಷಣ ಕುರು ಸೇನೆಯ ಮಹಾಸಂಭ್ರಮಕ್ಕೆ ಕಾರಣವಾಯಿತು. ಕಾರ್ಮೋಡ ಆವರಿಸಿ ಕೋಲ್ಮಿಂಚುಗಳೂ, ಸಿಡಿಲುಗಳೂ ವ್ಯೋಮದಲ್ಲಿ ಆರ್ಭಟಿಸುತ್ತಾ ಕುರು ಸೇನೆಯ ಸಂತಸದ ಜೊತೆ ಜೊತೆಯಾಗಿ ಮೊಳಗಿದವು. ಇನ್ನೇನು ಕ್ಷಣಾರ್ಧದಲ್ಲಿ ಪಾಂಡವ ಪಕ್ಷದ ಪಂಚಾಗ ಕುಸಿಯಲಿದೆ ಎಂಬ ಸ್ಥಿತಿ ನಿರ್ಮಾಣವಾಯಿತು. ದ್ರೋಣರ ಯೋಚನೆ – ಯೋಜನೆ ಎರಡೂ ಸಫಲ ಆಯಿತು ಎಂಬ ಸತ್ಯದರ್ಶನವಾಗುತ್ತಿದೆ. ದುರ್ಯೋಧನನ ತೆರೆದ ಕಣ್ಣು ಪಾರ್ಥನ ಪಾರ್ಥಿವ ಶರೀರ ಕಾಣುವ ಕನಸು ಕಾಣುತ್ತಿದೆ.
ಮುಂದುವರಿಯುವುದು…






