ಭಾಗ 350
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೩೫೦ ಮಹಾಭಾರತ
ಧಾರ್ತರಾಷ್ಟ್ರರು ಹಾಗು ಪಾಂಡವರ ಪಕ್ಷದಿಂದ ವ್ಯೂಹ ರಚನೆಯಾಗಿದೆ. ಹನ್ನೊಂದನೆಯ ದಿನದ ಯುದ್ದಾರಂಭವಾಗುವುದಕ್ಕೆ ಕ್ಷಣಗಣನೆ ರಣ ರೋಚಕವಾಗುತ್ತಿದೆ. ಯೋಧರ ರಣೋತ್ಸಾಹ ಹೆಚ್ಚಿಸಲು ಇಕ್ಕೆಲಗಳಲ್ಲೂ ರಣವಾದ್ಯಗಳು ಮೊಳಗುತ್ತಿವೆ. ದ್ರೋಣಾಚಾರ್ಯರು ಸೇನಾಧಿಪತ್ಯ ವಹಿಸಿಕೊಂಡ ಬಳಿಕ ಭೀಷ್ಮಚಾರ್ಯರ ಶರಶಯ್ಯೆಯ ಕಾರಣ ಕಳಹೀನರಾಗಿ ನಿಸ್ತೇಜರಾಗಿದ್ದ ದುರ್ಯೋಧನನ ಪಕ್ಷ ಮತ್ತೆ ನವ ಚೇತನ ಪಡೆದಿದೆ. ಹುರುಪೇರಿಸಿಕೊಂಡು ಸನ್ನದ್ಧವಾಗಿದೆ. ದಶದಿಕ್ಕುಗಳಲ್ಲೂ ಪ್ರತಿಧ್ವನಿಸುವಂತೆ ರಣಭೇರಿಗಳ ವಾದನವಾದ ಬಳಿಕ ಯುದ್ದಾರಂಭವಾಗಿಯೆ ಬಿಟ್ಟಿತು. ಪಾಂಡವ ಪಕ್ಷದಲ್ಲಿ ಭೀಮ ದೃಷ್ಟದ್ಯುಮ್ನರು, ಕೃಷ್ಣಾರ್ಜುನರು ಮುಂಚೂಣಿಯಲ್ಲಿ ನಿಂತು ಆಕ್ರಮಿಸತೊಡಗಿದರು. ಅರ್ಜುನನು ತನ್ನ ಗುರುವರ್ಯ ದ್ರೋಣಾಚಾರ್ಯರಿಗೆ ರಣಕ್ಷೇತ್ರದಲ್ಲಿ ಪಾದಮೂಲಕ್ಕೆ ಜೋಡು ಶರಗಳನ್ನು ಪ್ರಯೋಗಿಸುವ ಮುಖೇನ ಅಭಿವಾದನ ಸಲ್ಲಿಸಿ, ನಮಿಸಿ ಸಮರಮುಖನಾದನು. ಇತ್ತ ಭೀಮಸೇನನೂ ಒಂದು ಗದೆಯನ್ನೆತ್ತಿ ದ್ರೋಣರತ್ತ ಎಸೆದನು. ನಿಂತು ಅವಲೋಕಿಸುತ್ತಿದ್ದ ದ್ರೋಣಾಚಾರ್ಯ ತನ್ನನ್ನು ಘಾತಿಸುವಂತೆ ಬರುತ್ತಿದ್ದ ಗದೆಯನ್ನು ನೇರವಾಗಿ ಕೈಯಿಂದ ತಡೆದು, ಆ ಬಳಿಕ ತೊಡಗಿ ನಾಲ್ಕು ಶರಗಳನ್ನು ಭೀಮನಿಗೆ ನಾಟುವಂತೆ ಪ್ರಯೋಗಿಸಿ ನೋಯುವಂತೆ ಗಾಯಗೊಳಿಸಿದರು. ಭೀಮನನ್ನು ಆವರಿಸಿ ರಕ್ಷಕ ಪಡೆ ಪ್ರತಿದಾಳಿ ನಡೆಸತೊಡಗಿತು. ಕೆರಳಿದ ಭೀಮನೂ, ಸಮರಕಲಿ ಅರ್ಜುನನೂ ಸೇರಿ, ಸಮಸ್ತ ಸೇನೆ ರಣಭಯಂಕರ ಸಂಗ್ರಾಮ ನಿರತರಾದರು. ದ್ರೋಣರ ನಾಯಕತ್ವದ ಕುರುಸೇನೆ ಹಿಮ್ಮೆಟ್ಟಲಾರಂಭವಾಯಿತು. ಅರ್ಜುನನಂತೂ ತನ್ನ ಕಲಿತನದ ಪ್ರದರ್ಶನ ಮುಖೇನ ಕುರುಪಾಳಯವನ್ನು ಇನ್ನಿಲ್ಲದಂತೆ ದಂಡಿಸುತ್ತಾ ಏರಿ ಬರತೊಡಗಿದನು. ಇಷ್ಟಾಗುತ್ತಲೆ ಇನ್ನು ಭೀಮಾರ್ಜುನರನ್ನು ಮುಂದುವರಿಯಬಿಟ್ಟರೆ ತನ್ನ ಸೈನ್ಯ ಒಂದೆಡೆಯಿಂದ ಪೂರ್ಣ ನಾಶವಾದೀತೆಂದು ಅರ್ಜುನ ಮತ್ತು ಭೀಮ ಈರ್ವರನ್ನೂ ಏಕಕಾಲದಲ್ಲಿ ಎದುರಿಸಿ ತಡೆಯುತ್ತಾ ಯುದ್ದ ಮಾಡತೊಡಗಿದರು. ಆದರೆ ಅರ್ಜುನನ ಪಾರಮ್ಯದೆದುರು ಗುರು ಆದರೂ ಕೈಸಾಗದೆ ಬಸವಳಿದು ಹೋದರು. ರಣಕ್ಷೇತ್ರದಲ್ಲಿ ದೃಷ್ಟದ್ಯುಮ್ನ, ದ್ರುಪದ, ಸಾತ್ಯಕಿ, ಯುಧಿಷ್ಠಿರ, ನಕುಲ ಸಹದೇವಾದಿಗಳು ಕರ್ಣ, ದುರ್ಯೋಧನ, ಅಶ್ವತ್ಥಾಮ, ಕೃಪಾದಿಗಳನ್ನು ವ್ಯಸ್ಥರಾಗಿಸಿ ಹೋರಾಡುತ್ತಿದ್ದಾರೆ. ದ್ರೋಣರು ರಣತಂತ್ರ ನಿಪುಣನಲ್ಲವೆ? ವಿಮುಖರಾಗಿ ರಥ ಓಡಿಸಿ ಧರ್ಮರಾಯನನ್ನು ಅರಸುತ್ತಾ ಯುದ್ದ ಮುಂದುವರಿಸತೊಡಗಿದರು. ಹೀಗೆ ಸಾಗುತ್ತಿದ್ದಾಗ ಧರ್ಮರಾಯನಿಗೆ ರಥರಕ್ಷಕನಾಗಿ ನಿಯೋಜಿತನಾಗಿದ್ದ ದ್ರುಪದ ಪುತ್ರ ಸತ್ಯಜಿತನು ಎದುರಾದನು. ಕೆಲಹೊತ್ತು ದ್ರೋಣಾಚಾರ್ಯರನ್ನು ತಡೆದು ವೀರಾವೇಶದಿಂದ ಹೋರಾಡಿದನಾದರೂ ಕೊನೆಗೆ ದ್ರೋಣಾಚಾರ್ಯರು ಸತ್ಯಜಿತನ ಸಾರಥಿಯ ಶಿರಚ್ಛೇದನಗೈದು ಕುದುರೆಗಳನ್ನೂ ಗಾಯಗೊಳಿಸಿ, ಆತನನ್ನೂ ಕೊಂದು ಕೆಡಹಿದರು. ಆದರೂ ಭಾರದ್ವಾಜ ಪುತ್ರ ಕುಂಭ ಸಂಭವ ದ್ರೋಣಾಚಾರ್ಯರಿಗೆ ಧರ್ಮರಾಯನ ಬಳಿ ಸಾಗಿ ಯುದ್ದ ಮಾಡುವ ಅವಕಾಶ ಒದಗಲಿಲ್ಲ. ಆ ದಿನದ ಸೂರ್ಯಾಸ್ಥಮಾನ ಆಗಿ ಬಿಟ್ಟಿತು. ಯುದ್ದ ನಿಲ್ಲಿಸಲಾಯಿತು. ಸಮಗ್ರವಾಗಿ ವಿವೇಚಿಸಿದರೆ ಈ ದಿನ ಪಾಂಡವ ಪಕ್ಷ ಕುರುಸೇನೆಯ ಮೇಲೆ ಮುನ್ನಡೆ ಸಾಧಿಸಿತ್ತು. ಘನಘೋರ ಸಂಗ್ರಾಮದಲ್ಲಿ ಕೌರವನ ಪಾಳಯ ಅರ್ಜುನ ಭೀಮಾದಿಗಳಿಂದ ಬಹಳಷ್ಟು ನಾಶಗೊಂಡಿತ್ತು. ಕರ್ಣನಿದ್ದರೂ ಮಹತ್ತರವಾದ ಯಶಸ್ಸು ಕೈಗೂಡಿರಲಿಲ್ಲ.
ಹನ್ನೊಂದನೆಯ ದಿನದ ರಾತ್ರಿ ಕೌರವ ಬಿಡಾರದಲ್ಲಿ ಗುರುಗಳಾಗಿದ್ದರೂ, ದ್ರೋಣಾಚಾರ್ಯರು ವಿಚಲಿತರಾಗಿದ್ದರು. ಕೌರವನೂ ಅಸಮಾಧಾನದಿಂದ ವರ್ತಿಸತೊಡಗಿದನು. ಧರ್ಮಯುದ್ದ ಸಾಗುತ್ತಿದೆ, ಆದರೆ ಧರ್ಮಾಧರ್ಮದ ವಿವೇಚನೆ ಮರೆತು ಹೇಗಾದರೂ ಗೆಲ್ಲ ಬೇಕೆಂಬ ರೀತಿ ಯೋಚಿಸುವಂತಹ ಸ್ಥಿತಿ ಅವರದ್ದಾಗಿತ್ತು. ತ್ರಿಗರ್ತದ ಸಂಶಪ್ತಕ ಸೋದರರನ್ನು ಕರೆದು ಸಮಾಲೋಚನೆ ಆರಂಭವಾಯಿತು. ನಾಳೆಯ ದಿನದ ಯುದ್ದದಲ್ಲಿ ಕೃಷ್ಣಾರ್ಜುನರು ರಣರಂಗದಿಂದ ಪ್ರತ್ಯೇಕಿಸಲ್ಪಟ್ಟರೆ ನಾನು ಮೊದಲ ಜಯವನ್ನು ಖಚಿತಪಡಿಸಬಲ್ಲೆ. ಪಾಂಡವರಲ್ಲಿ ಧರ್ಮರಾಜನನ್ನು ಬಂಧಿಸುವ ಯೋಜನೆ ನೆರವೇರಿಸಬಹುದು ಎಂದು ಸೇನಾಪತಿಯೂ ಆಗಿರುವ ಗುರುವರ್ಯ ತರ್ಕಿಸಿದರು.
ಮುಂದುವರಿಯುವುದು…






