31.5 C
Udupi
Wednesday, March 11, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 348

ಭರತೇಶ ಶೆಟ್ಟಿ, ಎಕ್ಕಾರ್

ಲಕ್ಷೋಪಲಕ್ಷ ಮೃತ ಶರೀರಗಳ ಮಧ್ಯೆ ಕುರುಕ್ಷೇತ್ರದಲ್ಲಿ ಶರಶಯ್ಯೆಯಲ್ಲಿ ಜೀವಂತ ಶವದಂತೆ ಪವಡಿಸಿದ್ದ ಆಚಾರ್ಯ ಭೀಷ್ಮರನ್ನು ಕಂಡು ಕರ್ಣನಿಗೆ ಅಸಹನೀಯ ವೇದನೆಯೂ, ಅಪರಾಧಿ ಪ್ರಜ್ಞೆಯೂ, ಉದ್ದಟತನ ತೋರಿದ ತನ್ನ ಬುದ್ದಿಯನ್ನು ನೆನೆದು ಮಾನಸಿಕ ಯಾತನೆಯೂ ಜೊತೆಯಾಗಿ ಆಂತರಂಗಿಕವಾಗಿ ಅವನನ್ನು ಕುಗ್ಗಿಸಿ ಬಿಟ್ಟಿತು. ಮಹಾಮಹಿಮರನ್ನು ಕಂಡು “ಪ್ರಾರ್ಥಿಸುವ ಯೋಗ್ಯತೆ ನನಗಿಲ್ಲ. ಆದರೂ ಮನಶಾಂತಿಗಾಗಿ ತನ್ನ ಅಪರಾಧ ಮನ್ನಿಸಬೇಕು” ಎಂದು ಅಶ್ರುಧಾರೆ ಸುರಿಸುತ್ತಾ ಬೇಡಿದನು.

ಆಚಾರ್ಯರು ನಿಷ್ಕಲ್ಮಷ ಹೃತ್ಕಮಲದವರು, ಪವಿತ್ರ ಗಂಗೆಯ ಪುತ್ರ ಗಾಂಗೇಯ. ಕರ್ಣನ ವರ್ತನೆಯಿಂದ ತನಗೇನೂ ವ್ಯತ್ಯಾಸವೇ ಆಗಿಲ್ಲ ಎಂಬಂತೆ “ಕಂದಾ! ನಿನ್ನ ನಡೆಯ ಬಗ್ಗೆ ನನಗೇನೂ ಬೇಸರವಾಗಿಲ್ಲ. ಕ್ಷತ್ರಿಯನಾಗಿ ಸಮರೋತ್ಸಾಹ ತೋರಿರುವುದು ಶ್ರೇಷ್ಟ ಗುಣ ಆಗಿದೆ. ಆದರೆ ನಿಜವಾದ ಬೇಸರ ಆಗುತ್ತಿರುವುದು ವಂಶದ ಸಂರಕ್ಷಕನಾಗಿ ತಲೆಮಾರುಗಳನ್ನು ಕಂಡ ನಾನು ಬಿದ್ದು ದೇಹತ್ಯಾಗ ಮಾಡಬೇಕಾದ ಈ ಹೊತ್ತಿನಲ್ಲಿ ಕೊನೆಯ ಆಸೆಯೆಂಬಂತೆ ಸಂಧಿ ಮಾಡಿಕೊಳ್ಳಿ ಎಂದು ಹೇಳಿದರೂ ಕೇಳುವವರಿಲ್ಲದೆ ಸಮರವೆ ಸಾಗಬೇಕಾಗಿ ಬಂದಿದೆ. ನೀನೂ ಶ್ರೇಷ್ಟ ವಿಕ್ರಮಿ ಆಗಿರುವೆ. ನಿನ್ನ ಸಮಸ್ತ ಸಾಧನೆಗಳು, ದಾನಾದಿ ಸತ್ಕರ್ಮಗಳ ಬಗ್ಗೆ ನನಗೂ ಗೌರವಭಾವವಿದೆ. ಮಾತ್ರವಲ್ಲ ಅಸಾಧಾರಣವಾದ ಸ್ವಾಮಿ ಭಕ್ತಿಯನ್ನು ಹೊಂದಿರುವೆ. ನೀನು ಯಾರು, ನಿನ್ನ ಹುಟ್ಟು ಎಲ್ಲವನ್ನೂ ವೇದವ್ಯಾಸರಿಂದ ನಾನು ತಿಳಿದಿದ್ದೆ. ನಿನ್ನ ಬಗ್ಗೆ ಕಠಿಣ ಧೋರಣೆ ತಳೆಯಬೇಕಾಗಿ ಬಂದುದು ಏಕೆಂದರೆ ಹಸ್ತಿನೆಯ ರಕ್ಷಕನಾಗಿರುವ ನನಗೆ, ನಿನ್ನ ಮೇಲಿದ್ದ ಒಲವು ಮತ್ತು ಧೈರ್ಯ ಕೌರವನನ್ನು ದಾರಿ ತಪ್ಪಿಸುತ್ತಿದೆ ಎಂಬುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಪಾಂಡವ ವಿದ್ವೇಷ ಹೆಚ್ಚಾಗುವಲ್ಲಿ ಪ್ರಮುಖ ಆಧಾರ ನೀನಾಗಿದ್ದೆ. ನಿನ್ನ ಅಂತಹ ನಡತೆ ನನಗೆ ಇಷ್ಟವಾಗದೆ ಹೋಗಿತ್ತು. ಅದು ಏನೇ ಇರಲಿ ನಿನ್ನ ಬಗ್ಗೆ ನನಗೇನೂ ದ್ವೇಷವಿಲ್ಲ. ಸತ್ಪುರುಷನಾಗಿ ಯುದ್ದವನ್ನು ಮಾಡು. ವೀರತ್ವದಿಂದ ಸ್ವರ್ಗಕಾಮಿಯಾಗಿ ಅಭಿಯೋಗ ನಿರತನಾಗು. ನನ್ನ ಮೊಮ್ಮಕ್ಕಳ ಸಾಲಿನಲ್ಲಿ ನೀನೂ ಮೊಮ್ಮಗನೆಂದು ಭಾವಿಸಿ ಹರಸುತ್ತೇನೆ. ನಿನಗೆ ಶ್ರೇಯಸ್ಸಾಗಲಿ” ಎಂದು ಮನಸಾರೆ ಹರಸಿ ಆಶೀರ್ವದಿಸಿದರು.

ಹೀಗೆ ಭೀಷ್ಮಾಚಾರ್ಯರನ್ನು ಕಂಡು ಹಿಂದಿರುಗಿ ಬಿಡಾರದತ್ತ ಬರುತ್ತಿದ್ದ ಕರ್ಣನನ್ನು ಅರಸಿ ಬಂದವನಂತೆ ದುರ್ಯೋಧನ “ಮಿತ್ರಾ! ಪಿತಾಮಹರು ಇಚ್ಚಾಮರಣಿಯಾಗಿದ್ದರೂ, ರಣಭಯಂಕರ ಹೋರಾಟ ಮಾಡಿದರಾದರೂ ಏನೋ ನಡೆದು ಹೋಯಿತು. ಅವರ ಸೇನಾಧಿಪತ್ಯ ಅಂತ್ಯಗೊಂಡಿದೆ. ಇನ್ನು ನಮ್ಮ ಪಕ್ಷದ ನೇತೃತ್ವ ವಹಿಸಿಕೊಳ್ಳುವವರು ಯಾರು? ಆತ್ಮೀಯನಾದ ಕಾರಣ ಆಯ್ಕೆ ನಿನಗೆ ನೀಡುತ್ತಿರುವೆ” ಎಂದನು.

“ಕುರು ಶ್ರೇಷ್ಟನೇ, ನಾನು ನಿನ್ನ ಶ್ರೇಯಸ್ಸನ್ನು ಬಯಸಿ ಹೇಳುತ್ತಿದ್ದೇನೆ. ಈ ಸಮಯ ನಮ್ಮ ಪಕ್ಷದ ಒಗ್ಗಟ್ಟು ಬಹಳ ಅಗತ್ಯ. ಬಹುಮಂದಿ ಸೇನಾಪತಿತ್ವಕ್ಕೆ ಯೋಗ್ಯರಾದವರು ನಮ್ಮಲ್ಲಿ ಇದ್ದಾರೆ. ಒಬ್ಬರ ಆಯ್ಕೆ ಇನ್ನೊಬ್ಬರ ಮುನಿಸಿಗೆ ಕಾರಣವಾಗಬಾರದು. ಹಾಗಾಗಿ ಗುರುಗಳೂ, ವರ್ಣೋತ್ತಮರೂ, ಯೋಗ್ಯರೂ ಆಗಿರುವ ಶರಾದಪಿ ಶಾಪಾದಪಿ ದ್ರೋಣಾಚಾರ್ಯರು ಸೂಕ್ತ ಆಯ್ಕೆ” ಎಂದನು. ಕರ್ಣನ ಅಭಿಪ್ರಾಯ ದುರ್ಯೋಧನನಿಗೂ ಸರಿಯೆಂದೆನಿಸಿ ಸಮಾಲೋಚನೆಗಾಗಿ ಹೊರಟನು.

ಇತ್ತ ಹಸ್ತಿನಾವತಿಯಲ್ಲಿ “ಹತ್ತನೆಯ ದಿನದ ಈ ಯುದ್ದದಲ್ಲಿ ಇಚ್ಚಾಮರಣಿಯಾದ ಗಾಂಗೇಯ ಧರೆಗೊರಗಿದರೆಂದರೆ ನನಗೆ ನಂಬಲಾಗುತ್ತಿಲ್ಲ ಸಂಜಯಾ! ಅಲ್ಲಿ ಏನೇನಾಯಿತೋ ಅದನ್ನು ನನಗೆ ವಿವರಿಸಿ ಹೇಳು.” ಎಂದು ಧೃತರಾಷ್ಟ್ರ ಬೇಡಿಕೊಂಡನು.

ಆ ದಿನ ಕುರುಕ್ಷೇತ್ರದಲ್ಲಿ ಬಹಳಷ್ಟು ಸ್ವಾರಸ್ಯಕರ ಪ್ರಕರಣಗಳು ನಡೆದಿದ್ದವು. ಅವುಗಳನ್ನು ಸಂಜಯ ವಿವರಿಸಿ ಹೇಳತೊಡಗಿದನು. “ಭೀಷ್ಮಚಾರ್ಯರು ಶರಶಯ್ಯೆಗೆ ಒರಗಿದಾಕ್ಷಣ ಅವರ ತಾಯಿಯಾದ ಗಂಗಾಮಾತೆ, ಮರಣದ ಇಚ್ಚೆ ಬಯಸಲು ಸಕಾಲದ ಪ್ರತೀಕ್ಷೆ ಮಾಡುವ ಸೂಚನೆ ನೀಡಿ ಬನ್ನಿ ಎಂದು ಹಂಸರೂಪದಲ್ಲಿರುವ ಮಹರ್ಷಿಗಳನ್ನು ಕರೆದು ತನ್ನ ಪುತ್ರನ ಬಳಿ ಕಳುಹಿಸಿದ್ದಳು. ಮಾನಸ ಸರೋವರ ವಾಸಿಗಳಾಗಿದ್ದ ಹಂಸ ಸ್ವರೂಪಿ ಮಹರ್ಷಿಗಳು ಮಹಾವೇಗದಲ್ಲಿ ಹಾರಿ, ಕುರುಕ್ಷೇತ್ರ ಸೇರಿ ಗಾಂಗೇಯನನ್ನು ಕಂಡು ಆಕಾಶದಲ್ಲಿ ಪ್ರದಕ್ಷಿಣೆ ಹಾಕುತ್ತಾ “ಈಗ ದಕ್ಷಿಣಾಯಣ ಕಾಲ. ಮಹಾತ್ಮನಾಗಿರುವ ಭೀಷ್ಮಾಚಾರ್ಯ ಈ ಅಕಾಲದಲ್ಲಿ ಮರಣವನ್ನು ಇಚ್ಚೆ ಪಡಬಹುದೇ?” ಎಂದು ತಮ್ಮೊಳಗೆ ಸಮಾಲೋಚನೆ ಮಾಡಿಕೊಳ್ಳತೊಡಗಿದರು. ಈ ಸಂಭಾಷಣೆ ಗಗನ ಮುಖವಾಗಿ ಮಲಗಿದ್ದ ಭೀಷ್ಮಾಚಾರ್ಯರಿಗೆ ಕಾಣುತ್ತಾ ಕೇಳಿಸಿತು. ಬಳಿಕ ಯೋಚಿಸಿ, ಹಂಸ ಸ್ವರೂಪಿ ಮಹರ್ಷಿಗಳಿಗೆ ಉತ್ತರ ಹೇಳಿದರು “ಸೂರ್ಯನು ದಕ್ಷಿಣಾಯಣದಲ್ಲಿರುವಾಗ ಯಾವುದೇ ಕಾರಣದಿಂದಲೂ ಈ ದೇಹವನ್ನು ತೊರೆದು ಹೋಗಲಾರೆ. ಈ ವಿಚಾರ ನಾನು ತರ್ಕಿಸುತ್ತಿದ್ದೆ. ಅದೇ ಸಮಯ ನೀವೂ ಸೂಚನೆ ನೀಡಿದಿರಿ. ಸೂರ್ಯ ಉತ್ತರಾಯಣ ದ ಗತಿಯನ್ನು ಆರಂಭಿಸಿದ ನಂತರ ನಾನು ನನ್ನ ಸ್ಥಾನವೇನಿದೆಯೋ ಅದನ್ನು ಹೊಂದುತ್ತೇನೆ. ಹಂಸಗಳೇ, ನನ್ನ ಪಿತ ಶಂತನು ಚಕ್ರವರ್ತಿ ನನಗೆ ಅನುಗ್ರಹಿಸಿರುವ ಇಚ್ಚಾಮರಣದ ವರಬಲವನ್ನು ಬಳಸಿಕೊಂಡು ಆ ವರೆಗೆ ಉಪನಿಷತ್ತಿನ ಸಾರಭೂತವಾದ ಯೋಗದ ಆಶ್ರಯವನ್ನು ಹೊಂದಿ, ಚಿತ್ತವನ್ನು ಏಕಾಗ್ರದಲ್ಲಿರಿಸಿ ಪ್ರಣವ ಜಪನಿರತನಾಗಿ ಉತ್ತರಾಯಣ ಕಾಲದ ಪ್ರತೀಕ್ಷೆಯಲ್ಲಿರುವೆ” ಎಂದರು. ಹಂಸಸ್ವರೂಪಿ ಮಹರ್ಷಿಗಳು ಮರಳಿ ಹೋದರು.

ಇತ್ತ ಭೀಷ್ಮರು ಧರೆಗೊರಗಿದ ಸುದ್ದಿ ಕೇಳಿ ಓಡಿ ಬಂದ ದ್ರೋಣ, ದುರ್ಯೋಧನ ದುಶ್ಯಾಸನಾದಿಗಳು ಕಂಡು ಮರುಗಿದರು. ಆ ಕೂಡಲೆ ದುರ್ಯೋಧನ ತಮ್ಮ ದುಶ್ಯಾಸನನಿಗೆ ಮೆತ್ತನೆಯ ತಲೆದಿಂಬು ಮತ್ತು ಬಾಣಗಳನ್ನು ಹೊರತೆಗೆದು ಚಿಕಿತ್ಸೆ ನೀಡಬಲ್ಲ ವೈದ್ಯರ ತಂಡದ ವ್ಯವಸ್ಥೆ ತತ್‍ಕ್ಷಣದಲ್ಲಿ ಮಾಡುವಂತೆ ಆಜ್ಞೆ ಮಾಡಿದನು. ಬಳಿಕ ಪರಿಚಾರಕರನ್ನು ಕರೆದು ಬಹುವಿಧದ ಸುತ್ರಾಣವೀಯುವ ಭಕ್ಷ್ಯ, ಭೋಜ್ಯ, ಲೇಹ್ಯ, ಖಾದ್ಯ, ಪೇಯಗಳನ್ನು ತರುವಂತೆ ಆದೇಶ ನೀಡಿದನು. ಅಂತೆಯೆ ತಲೆದಿಂಬುಗಳನ್ನು ಭೀಷ್ಮಾಚಾರ್ಯರಿಗೆ ನೀಡಿದಾಗ, ಅವರು ಸ್ವೀಕರಿಸದೆ – “ನನಗೊದಗಿರುವ ಸರಳಮಂಚಕ್ಕೆ ಸಮವೂ ಅನುರೂಪವೂ ಆಗಿರುವ ವ್ಯವಸ್ಥೆಯಿಂದ ಶಿರಸ್ಸಿಗೆ ಆಧಾರವನ್ನು ಒದಗಿಸಿದರೆ ಸಾಕು. ಈ ಮೆತ್ತನೆಯ ದಿಂಬುಗಳು ನನಗೆ ಅನಗತ್ಯ. ಅರ್ಜುನಾ! ಶ್ರೇಷ್ಟ ಧನುರ್ಧರನಾದ ನೀನು ಅಂತಹ ವ್ಯವಸ್ಥೆ ಮಾಡಿಕೊಡು” ಎಂದು ಕೇಳಿಕೊಂಡರು. ಎರಡು ಶರಗಳನ್ನು ಕವಲಾಗಿ ಊರಿಕೊಳ್ಳುವಂತೆ ಪ್ರಯೋಗಿಸಿ ಶಿರಸ್ಸಿಗೆ ಆಧಾರದ ವ್ಯವಸ್ಥೆ ಮಾಡಿಸಿದನು. ವಿಧ ವಿಧ ಆಹಾರ್ಯಗಳನ್ನು ಸ್ವೀಕರಿಸುವಂತೆ ಕೇಳಿಕೊಂಡಾಗ ಪಿತಾಮಹರು ನಿರಾಕರಿಸಿ ” ನಾನೀಗ ಮನುಷ್ಯಲೋಕದಲ್ಲಿರುವ ನಿಮ್ಮಂತೆ ಭೂಸ್ಪರ್ಶದಲ್ಲಿಲ್ಲ. ಮನುಷ್ಯರಿಂದ ಪ್ರತ್ಯೇಕವಾಗಿರುವ ನಾನು ಸರಳುಗಳ ಮಧ್ಯೆ ಸಿಲುಕಿರುವೆ. ನಿಮ್ಮ ಭೋಗ್ಯ ವಸ್ತುಗಳಾವುದನ್ನು ಉಪಭೋಗಿಸಲಾರೆ” ಎಂದರು ಬಂದಂತಹ ವೈದ್ಯರು ಚಿಕಿತ್ಸೆ ನೀಡಲಾರಂಭಿಸಿ ಎಂದು ದುರ್ಯೋಧನ ಆದೇಶ ನೀಡಿದರೂ, ತಡೆದ ಪಿತಾಮಹ “ಕಂದಾ! ನನ್ನ ಶರೀರಕ್ಕೆ ಚಿಕಿತ್ಸೆ ಕ್ಷೇಮಕರವಾಗದು. ಇನ್ನು ಕೇವಲ ಕಾಲದ ಪ್ರತೀಕ್ಷೆ ಮಾತ್ರ ಉಳಿದಿದೆ. ಈ ಶರಗಳನ್ನು ಶರೀರದಿಂದ ಬೇರ್ಪಡಿಸಲಾಗದು. ಹಾಗಾಗಿ ಬಾಣಗಳ ನಡುವೆ ನಾನು ಜೋತು ಹಾಕಿಕೊಂಡು ಮಲಗಿ ಇರುವುದೇ ನನಗುಳಿದಿರುವ ದಾರಿ. ನನ್ನ ರಕ್ಷಣೆಗಾಗಿ ಧಾವಿಸಿ ಬಂದಿರುವಂತಹ ವೈದ್ಯರಿಗೆ ಹೇರಳವಾದ ದ್ರವ್ಯಗಳನ್ನಿತ್ತು ಸತ್ಕರಿಸಿ ಕಳುಹಿಸಿಬಿಡು.

ಇದೆಲ್ಲಾ ಆದ ಬಳಿಕ ಮಹಾರಾಜಾ, ನಿನ್ನ ಜೇಷ್ಟ ಪುತ್ರನಾದ ದುರ್ಯೋಧನನನ್ನು ಬಳಿ ಕರೆದು “ಸಂಧಾನವೊಂದೇ ನಿನಗುಳಿದಿರುವ ದಾರಿ. ಅಂತಹ ಸನ್ಮಾರ್ಗವನ್ನು ಅನುಸರಿಸದೆ ಹೋದರೆ ಧರ್ಮಾತ್ಮರಾದ ಪಾಂಡವರು ಕೈಗೊಂಡಿರುವ ಧರ್ಮ ಯಜ್ಞಕ್ಕೆ ನೀವೆಲ್ಲರೂ ಆಹುತಿಯಾಗುವಿರಿ. ಕಾರಣವನ್ನೂ ನಿನಗೆ ವಿವರಿಸಿ ಹೇಳುತ್ತೇನೆ ಕೇಳು. ಅರ್ಜುನನಿಗೆ ಸರಿ ಮಿಗಿಲಾದ ಯೋಧರ್ಯಾರು ನಿನ್ನ ಪಕ್ಷದಲ್ಲಿ ಇಲ್ಲ. ಈ ಲೋಕದಲ್ಲಿರುವ ಮಹತ್ತರವಾದ ಅಸ್ತ್ರಗಳಾದ ಆಗ್ನೇಯ, ವಾರುಣ, ಸೌಮ್ಯ, ವಾಯವ್ಯ, ವೈಷ್ಣವ, ಇಂದ್ರ, ಪಾಶುಪತ, ಬ್ರಾಹ್ಮ, ಪಾರಮೇಷ್ಠ್ಯ, ಪ್ರಾಜಪತ್ಯ, ಧಾತ್ರ, ತ್ವಾಷ್ಟ್ರ, ಸಾವಿತ್ರ, ವೈವಸ್ವತ ಈ ಎಲ್ಲಾ ಮಹಾಸ್ತ್ರಗಳೂ ಅರ್ಜುನನೊಬ್ಬನಲ್ಲಿಯೆ ಸಂಚಯವಾಗಿವೆ. ಆತನನ್ನು ಬಿಟ್ಟರೆ ಇವಿಷ್ಟರ ಉಪಶಮನ ತಿಳಿದಿರುವುದು ಶ್ರೀಕೃಷ್ಣನೊಬ್ಬನಿಗೆ ಮಾತ್ರ. ಆತನೂ ನಿನಗೆದುರಾಗಿ ಇದ್ದಾನೆ. ಈ ಕಾರಣದಿಂದ ಅರ್ಜುನೊಬ್ಬನನ್ನು ನಿನ್ನ ಸಮಸ್ತ ಸೇನೆ ಜಯಿಸಲಾಗದೆ ಸೋಲುತ್ತದೆ. ಈಗಾಗಲೆ ನಿನ್ನ ಪಕ್ಷದ ಎಲ್ಲ ಯೋಧರ ಸಹಿತ ವಿದೇಹರು, ಕ್ರೋಧಾಭಿಭೂತರು, ಕಲಿಂಗರು, ಬಾಹ್ಲಿಕರು, ದರದರು, ಪಾಶ್ಚಾತ್ಯ ಮಾದ್ರರು, ಔತ್ತರೇಯರು, ಮಾಲವರು, ಅಭಿಷಾಹರು, ಶೂರಸೇನರು, ಶಿಬಿಗಳು, ವಸಾತಿಗಳು, ಶಾಲ್ವರು, ಶಕರು, ತ್ರಿಗರ್ತರು, ಅಂಬಷ್ಠರು, ಕೇಕಯೆರಲ್ಲ ಸೇರಿ ಅರ್ಜುನ ಶಿಖಂಡಿಯನ್ನು ರಥಿಕನಾಗಿ ನನ್ನೆದುರು ಕರೆತರುವಾಗ ಆಕ್ರಮಿಸಿ ತಡೆಯುವ ಯತ್ನ ಮಾಡಿದರೂ ಬಿರುಗಾಳಿಗೆ ಸಿಕ್ಕ ತರಗೆಲೆಯಂತೆ ಹಾರಿಸಲ್ಪಟ್ಟು ಪರಾಜಿತರಾಗಿರುವುದನ್ನು ಕಂಡಿರುವೆ. ಭೀಮನೋ ರಣ ಭಯಂಕರನಾಗಿದ್ದಾನೆ. ರುದ್ರ ಸ್ವರೂಪನಾಗಿ ನಿಂತರೆ ಯಾರೂ ತಡೆಯಲಾಗದು. ನಕುಲ ಸಹದೇವರು ನಿನ್ನ ಸಮಸ್ತ ಸೇನೆಯನ್ನು ಸವರಬಲ್ಲಷ್ಟು ದಕ್ಷರಾಗಿದ್ದಾರೆ. ಇವರ್ಯಾರ ಬಗ್ಗೆಯೂ ನೀನು ತಲೆಗೆಡಿಸುತ್ತಿಲ್ಲವಾದರೆ ಧರ್ಮರಾಯನ ಬಗ್ಗೆ ತಿಳಿದುಕೋ. ಯುಧಿಷ್ಟಿರನಿಗೆ ಆಯುಧ ಅನಗತ್ಯ. ಸದಾ ಸ್ಥಿತ ಪ್ರಜ್ಞನೂ ಪ್ರಶಾಂತನೂ ಆಗಿದ್ದು, ತನ್ನೊಳಗೆ ಅದುಮಿಟ್ಟಿರುವ ಆತನ ಕ್ರೋಧವನ್ನು ಧರಿಸಿದರೆ ದೀಪ್ತವಾಗುವ ಆತನ ಕಣ್ಣುಗಳ ಪ್ರಖರತೆಯ ವೀಕ್ಷಣ ಮಾತ್ರದಿಂದ ನಿನ್ನ ಸಕಲ ಯೋಧರು, ಸೈನ್ಯ ಭಸ್ಮೀಭೂತವಾಗಿ ಅಪರಕ್ರಿಯೆಗೂ ಉಳಿಯದೆ ಹೋದೀತು. ಈಗಲೆ ಜಾಗೃತನಾಗಿ ಕುಂತೀಪುತ್ರರೊಡನೆ ಸಂಧಾನ ಮಾಡಿಕೊಂಡು ಅವರ ದಾಯಭಾಗವನ್ನಿತ್ತು ಸಖ್ಯ ಬೆಳೆಸಿಕೋ” ಎಂದು ಸವಿಸ್ತಾರವಾಗಿ ವಿವರಿಸಿ ಹೇಳಿದರೂ ನಿಮ್ಮ ಮಗ ಧೂರ್ತನಂತೆ ಕಿವುಡನಾಗಿ ಉದ್ದಾರವಾಗುವ ಯಾವ ಯೋಚನೆಯನ್ನೂ ಮಾಡದೆ ಹೊರಟು ಹೋಗಿದ್ದಾನೆ.”

ಭೀಷ್ಮಾಚಾರ್ಯರು ತನ್ನ ಕೊನೆಯ ಆಸೆಯನ್ನು ಕೇಳಿದರೂ ನಿಷ್ಪ್ರಯೋಜಕವಾದ ಬಳಿಕ ಶ್ರೀಕೃಷ್ಣನಿಗೆ ಮನಸಾ ನಮಿಸಿ, ತನ್ನ ವೈಯಕ್ತಿಕ ಅಂತಿಮ ಆಸೆಯನ್ನು ಕೇಳಿಕೊಂಡರು “ಸೂರ್ಯನು ತನ್ನ ಏಳು ಕುದುರೆಗಳಿಂದ ಯುಕ್ತವಾದ ರಥದಲ್ಲಿ ಪ್ರಜ್ವಲಿಸುತ್ತಾ ಯಮನ ದಿಕ್ಕಾಗಿರುವ ದಕ್ಷಿಣದಿಂದ ಕುಬೇರನ ದಿಕ್ಕಾದ ಉತ್ತರ ದಿಕ್ಕಿನತ್ತ ಹೊರಟ ಬಳಿಕ ನನ್ನ ನಿರ್ಧಾರ ಕೈಗೊಳ್ಳುವೆ. ಅಲ್ಲಿಯವರೆಗೆ ನಾನಿಲ್ಲೇ ಧ್ಯಾನಸ್ಥನಾಗಿರುವೆ. ನನ್ನ ಸುತ್ತಲೂ ನಾಲ್ಕು ದಿಕ್ಕುಗಳಲ್ಲೂ ಕಂದಕಗಳನ್ನು ತೋಡಿರಿ. ಈ ರೀತಿಯಲ್ಲಿ ಮಾಡಿದರೆ ನನ್ನ ಏಕಾಗ್ರತೆಗೆ ತೊಡಕಾಗದ ವ್ಯವಸ್ಥೆಯಾಗುತ್ತದೆ” ಎಂದರು.
ಅಜ್ಜನ ಅಪೇಕ್ಷೆಯಂತೆ ವ್ಯವಸ್ಥೆಗಳಾದವು. ಶರಶಯ್ಯೆಯಲ್ಲಿ ಮಲಗಿದ ಅವರು ಉತ್ತರಾಯಣದ ಪ್ರತೀಕ್ಷೆಯಲ್ಲಿದ್ದಾರೆ.

ಇತ್ತ ಕೌರವ ಬಿಡಾರದಲ್ಲಿ ದುರ್ಯೋಧನ, ದುಶ್ಯಾಸನ, ಶಕುನಿ, ಮುಂದಿನ ಸೇನಾಪತಿಯ ಆಯ್ಕೆ ಹಾಗು ಪದಗ್ರಹಣದ ಕುರಿತಾಗಿ ಚರ್ಚಿಸಿ, ಆಚಾರ್ಯ ದ್ರೋಣರ ಬಳಿ ಸಮಾಲೋಚನೆಗೆ ಹೊರಟಿದ್ದಾರೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page