25.4 C
Udupi
Monday, March 23, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 340

ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೩೪೦ ಮಹಾಭಾರತ

ಮಹಾಭಾರತ ಧರ್ಮಯುದ್ದದ ಎರಡನೆ ದಿನ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಇತ್ತಂಡಗಳೂ ಸಜ್ಜಾದವು. ಯೋಜನೆಯಂತೆ ವ್ಯೂಹಗಳು ಸೇನಾಪತಿಗಳಿಂದ ರಚಿಸಲ್ಪಟ್ಟವು. ಕ್ರೌಂಚವ್ಯೂಹವು ಪಾಂಡವರಿಂದ, ಸರ್ವತೋಭದ್ರವ್ಯೂಹ ಕೌರವರಿಂದ ಹೆಣೆಯಲ್ಪಟ್ಟಿದೆ. ಕೃಷ್ಣಾರ್ಜುನರು ಮೊದಲ ದಿನ ಸೇನಾರಕ್ಷಣೆಗಾಗಿ ವ್ಯೂಹದ ಹಿಂಭಾಗದಲ್ಲಿದ್ದರೆ, ಇಂದು ಮುನ್ನೆಲೆಯಲ್ಲಿ ನಿಂತು ಭೀಷ್ಮಾಚಾರ್ಯರನ್ನು ಎದುರಿಸಿದರೆ, ರಥರಕ್ಷಣಾ ಸೇನಾ ಪಡೆಯ ದ್ರೋಣಾಚಾರ್ಯರ ಜೊತೆ ದೃಷ್ಟದ್ಯುಮ್ನ ಯುದ್ದ ನಿರತನಾದನು. ಭೀಷ್ಮಾಚಾರ್ಯರರನ್ನು ದಿನಪೂರ್ತಿ ಪ್ರತಿಬಂಧಿಸಿ ಅರ್ಜುನ ರಣಭಯಂಕರನಾಗಿ ಕೃಷ್ಣಸಾರಥ್ಯದಲ್ಲಿ ವಿಜ್ರಂಭಿಸಿದನು. ಭೀಷ್ಮಾರ್ಜುನರು ಅತುಲ ವಿಕ್ರಮಿಗಳು. ಸಮರ ಮಧ್ಯೆ ಇತ್ತಂಡಗಳಿಂದ ಅನ್ಯ ಪರಾಕ್ರಮಿ ವೀರರು ತುಡುಕಿದಾಗ, ತಮ್ಮ ತಮ್ಮ ಸೇನೆಯ ಯೋಧರಿಗೆ ಆಪತ್ತು ಒದಗಿದಾಗ ಒದಗುವ ಕ್ಷಣಾರ್ಧದ ಕಿರು ಸಮಯದಲ್ಲಿ ಇವರೀರ್ವರೂ ವೈರಿ ಸೇನೆಯ ನಾಶವನ್ನು ಅವ್ಯಾಹತವಾಗಿ ಮಾಡ ತೊಡಗಿದರು. ಭೀಮಸೇನನಿಂದ ಕಳಿಂಗದೇಶದ ರಾಜ ಶ್ರುತಾಯು ವಧಿಸಲ್ಪಟ್ಟನು. ಕುರು ಪಾಂಡವ ಸೇನೆಯ ಬಹಳಷ್ಟು ಕ್ಷಾತ್ರ ವೀರರು ಮರಣವನ್ನಪ್ಪಿದರು. ಭೀಷ್ಮಾಚಾರ್ಯರು ಗೈದ ಶಪತದಂತೆ ಇಂದೂ ಕೂಡ ಬಹು ಸಹಸ್ರ ಮುಕುಟಧರ ರಾಜ ಶಿರಸ್ಸನ್ನು ಚೆಂಡಾಡಿದರು. ಆದರೂ ಎರಡನೆ ದಿನಾಂತ್ಯವಾಗುವ ಹೊತ್ತಿಗೆ ಅರ್ಜುನನಿಂದ ಕೌರವರ ಸೈನ್ಯ ಬಹಳಷ್ಟು ನಾಶವಾಗಿ ಈ ದಿನದ ಮೇಲುಗೈ ಪಾಂಡವರದ್ದು ಆಯಿತು.

ಮುಂದುವರಿದು ಮೂರನೆ ದಿನದ ಯುದ್ದಾರಂಭವಾದಾಗ ಕುರುಸೇನೆ ಸೇನಾಧಿಪತಿ ಭೀಷ್ಮ ಹಾಗು ಗುರು ದ್ರೋಣರ ಸಮಾಲೋಚನೆಯಂತೆ ಗರುಡ ವ್ಯೂಹವಾಗಿಯೂ, ಪ್ರತಿಯಾಗಿ ಪಾಂಡವ ಸೇನೆ ಅರ್ಧ ಚಂದ್ರಾಕೃತಿಯ ಚಂದ್ರ ವ್ಯೂಹವಾಗಿಯೂ ರಚಿಸಲ್ಪಟ್ಟು ಯುದ್ದ ಸಾಗಿತು. ಈ ದಿನದ ಯುದ್ದಕ್ಕೆ ಮೊದಲು ದುರ್ಯೋಧನ ಎರಡನೆ ದಿನದ ಹಿನ್ನಡೆಯನ್ನು ಅವಲೋಕಿಸಿ ಪಿತಾಮಹ ಭೀಷ್ಮಾಚಾರ್ಯರನ್ನು ದೋಷಿಯಾಗಿ ಆರೋಪಿಸಿದ್ದನು. ಅಜ್ಜ ಭೀಷ್ಮ ಪಾಂಡವ ಪಕ್ಷಪಾತಿಯಾಗಿ ನೈಜ ಉಗ್ರ ಸಮರ ಸಾರಲಿಲ್ಲ ಎಂದು ಜರೆದು ತನ್ನ ಅಸಮಾಧಾನ ಪ್ರಕಟಿಸಿದ್ದನು. ಈ ವ್ಯಾಮೋಹದಿಂದಾಗಿಯೆ ಅರ್ಜುನ ನಮ್ಮ ಸೇನೆಯ ಧೂಳಿಪಟಗೈಯಲು ಅವಕಾಶ ನೀಡಿದಿರಿ ಎಂದು ದೂರಿಕೊಂಡಿದ್ದನು. ಭೀಷ್ಮಾಚಾರ್ಯರೂ, ದ್ರೋಣಾಚಾರ್ಯರು ತಡೆದು ನಿನ್ನ ಇಂತಹ ಮಾತು ಸರಿಯೂ ಅಲ್ಲ, ಸತ್ಯವೂ ಅಲ್ಲ. ಈ ಮೊದಲೆ ಸ್ಪಷ್ಟವಾಗಿ ಹೇಳಿದ್ದೇವೆ. ಪಾರ್ಥ ಅಜೇಯನಿದ್ದಾನೆ. ಆತನ ಶಸ್ತ್ರ ಸಂಚಯ, ಯುದ್ಧ ಸಿದ್ದತೆಯ ಬಲಾಬಲದ ಬಗ್ಗೆ ತಿಳಿಸಿದ್ದೇವೆ. ನಿನ್ನ ಉದ್ದಟತನ, ಹಠ ಬುದ್ದಿಯ ದೌರ್ಬಲ್ಯದ ಪರಿಣಾಮವನ್ನು ಮುಚ್ಚಿ ಹಾಕಲು ನಮ್ಮ ಯೋಗ್ಯತೆ ಪ್ರಶ್ನಿಸಬೇಡ. ದ್ರೋಹ ನಮಗೆ ತಿಳಿಯದ – ಮಾಡಲಾಗದ ವಿಚಾರ. ಕೃಷ್ಣಾರ್ಜುನರು ಜೊತೆಯಾಗಿರುವ ರಥ ನಿಯಂತ್ರಣ ಸಾಕ್ಷಾತ್ ಇಂದ್ರ ಪ್ರತ್ಯಕ್ಷನಾಗಿ ಬಂದರೂ ಅಸಾಧ್ಯ ಎಂದು ವಿವರಿಸಿ, ಭೀಷ್ಮ, ದ್ರೋಣ ಕೃಪಾದಿಗಳು ನಾವು ಪ್ರಾಮಾಣಿಕ ಪ್ರಯತ್ನದಿಂದ ಹೋರಾಡಿದುದರಿಂದ ನೀವೆಲ್ಲರೂ ಇಂದು ಜೀವಂತ ಉಳಿದಿದ್ದೀರಿ, ಸೈನ್ಯವೂ ರಕ್ಷಿಸಲ್ಪಟ್ಟಿದೆ ಎಂದು ಹೇಳಿದರು. ಕೌರವ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಇಂದು ಮಾತ್ರ ಭೀಷ್ಮಾಚಾರ್ಯರು ಗರುಡ ವ್ಯೂಹದ ಚಂಚಿನ ಸ್ಥಾನದಲ್ಲಿ ಮೂತಿಯಂತೆ, ತನಗಿದ್ದ ಸೇನಾಪತಿ ರಕ್ಷಾ ಪಡೆಯನ್ನೂ ತೊರೆದು ಎದುರು ಭಾಗದಲ್ಲಿ ನಿರ್ಭೀತರೂ ಉಗ್ರರೂ ಆಗಿ ಸ್ಥಿತರಾದರು. ಚಂದ್ರವ್ಯೂಹದ ಮಧ್ಯದಲ್ಲಿ ಭೀಷ್ಮಾಚಾರ್ಯರನ್ನು ತಡೆಯುವ ಯೋಜನೆಯಂತೆ ಕೃಷ್ಣಾರ್ಜುನರಿದ್ದರೂ ಪಿತಾಮಹನ ಆವೇಗ ಆವೇಶದೆದುರು ಅರ್ಜುನ ಮಂಕಾದನು. ಬಾಳೆತೋಟ ಹೊಕ್ಕ ಮದಗಜದಂತೆ ಪಾಂಡವ ಸೇನೆಯ ವೀರಾಧಿವೀರರನ್ನು ಹೆಕ್ಕಿ ಹಿಕ್ಕಿ ಗರುಡ ಕೊಕ್ಕಿನಲ್ಲಿ ಕುಕ್ಕಿ ಕೊಲ್ಲುವಂತೆ ಗಾಂಗೇಯನ ಪೌರುಷ ಮೆರೆಯಿತು. ಇತ್ತ ಶ್ರೀಕೃಷ್ಣ, “ಪಾರ್ಥಾ ನೀನು ಆಚಾರ್ಯ ತ್ರಯರನ್ನು ಇನ್ನೂ ಪೂಜನೀಯ ಭಾವದಲ್ಲಿ ಭಾವಿಸಿ ಖಂಡನೆಯಷ್ಟೆ ಮಾಡುತ್ತಿರುವೆ. ಇದು ರಣರಂಗ ಇಲ್ಲಿ ಬಾಂಧವ್ಯ ತೋರಲು ನಿನ್ನರಮನೆಯಲ್ಲ” ಎಂದು ಎಚ್ಚರಿಸಿದನು. ಮಾತು ಮುಂದುವರಿಸಿ “ಅರ್ಜುನಾ, ನೀನು ದಿವ್ಯಜ್ಞಾನದ ಗೀತಾಮೃತ ಸೇವಿಸಿಯೂ ಈ ರೀತಿ ದ್ವಂದ್ವ ಭಾವ ತಳೆಯುವೆಯಾದರೆ, ನನಗೆ ನಿನ್ನನ್ನು ಆಯುಧವಾಗಿಸಿ ಕಾಯುವ ಅಗತ್ಯವಿಲ್ಲ. ಲೋಕಕಲ್ಯಾಣಾರ್ಥವಾಗಿ ನಾನೇ ಚಕ್ರಧರನಾಗಿ ಕುರುಸೇನೆಯನ್ನು ಅರೆಕ್ಷಣದಲ್ಲಿ ಸವರಿ ಬಿಡುವೆ. ಅಸಮರ್ಥನಂತೆ ವಿಷಾದಭರಿತನಾದ ನಿನ್ನ ಮೇಲೆ ಇನ್ನೂ ಭರವಸೆ ಇಡಲಾದೀತೇ?” ಎಂದು ಸುದರ್ಶನವನ್ನು ಆಹ್ವಾನಿಸಲು ಮುಂದಾದನು. ರೋಷಭರಿತನಾದ ಅರ್ಜುನ ವೀರಾವೇಶದಿಂದ ಅಜ್ಜ ಭೀಷ್ಮಾಚಾರ್ಯರರನ್ನು ಕೇವಲ ಎದುರಾಳಿಯಾಗಿ ಭಾವಿಸಿ ಹೋರಾಡತೊಡಗಿದನು. ಚಲ್ಲಾಪಿಲ್ಲಿಯಾಗಿ ಚದುರಿದ್ದ ವ್ಯೂಹಕ್ಕೆ ಅರ್ಜುನನಿಂದ ರಕ್ಷಣೆ ಪ್ರಾಪ್ತವಾಯಿತು. ಬಿರುಸಿನಿಂದ ಭೀಷ್ಮಾರ್ಜುನರು ಮೂರನೆಯ ದಿನ ಸೆಣಸಾಡಿ ಸೂರ್ಯಾಸ್ತಮಾನ ಆಗುತ್ತಿದ್ದಂತೆ ಯುದ್ದ ನಿಲ್ಲಲ್ಪಟ್ಟಿತು. ಈ ದಿನ ಕುರು ಪಾಂಡವ ಎರಡೂ ಸೇನೆಗಳೂ ಸಮ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಹೇಳಬಹುದು.

ಮೂರನೆಯ ದಿನದ ಯುದ್ದದಲ್ಲಿ ಭೀಮನ ರೌದ್ರಾವತಾರ ಕುರುಸೇನೆಗೆ ಆರಂಭಿಕ ಹಿನ್ನಡೆ ಉಂಟುಮಾಡಿತು. ಕೌರವರ ಗಜ ಸೈನ್ಯದ ಮೇಲೆರಗಿದ ಸಹಸ್ರ ಗಜತ್ರಾಣಿ ಭೀಮ ಆನೆಗಳ ಸೊಂಡಿಲು ಹಿಡಿದೆಳೆದು ಬಗ್ಗಿಸಿ ಗಂಡಸ್ಥಳವನ್ನು ಗುರಿಯಾಗಿ ಗುದ್ದಿ ಮರ್ದಿಸಿ ನಾಶಗೈಯತೊಡಗಿದ್ದನು. ಭೀಮ ಪ್ರಹಾರ ಮೆರೆದಾಗ ಎದುರಾದವ ನರಕಾಸುರ ಪುತ್ರ ಭಗದತ್ತ. ಮಹಾಗಜವೇರಿ ಬಂದ ಭಗದತ್ತನೆದುರು ಭೀಮ ಅಸಾಮಾನ್ಯವಾಗಿ ಕಾದಾಡಿದರೂ, ಒಂದೊಮ್ಮೆಗೆ ಭೀಮಸೇನ ಮೂರ್ಛಿತನಾದನು. ಆ ಕ್ಷಣ ರಕ್ಷಣೆಗೆ ಧಾವಿಸಿದ ಘಟೋತ್ಕಚ ಭಗದತ್ತನನ್ನು ಹಿಮ್ಮೆಟ್ಟಿಸಿ ಪ್ರಳಯಾಂತಕನಾಗಿ ಎರಗಿ ನಿರ್ನಾಮಗೈಯತೊಡಗಿದಾಗ ಸೇನಾಪತಿ ಭೀಷ್ಮಾಚಾರ್ಯರೂ, ದ್ರೋಣಾಚಾರ್ಯರೂ ಜೊತೆಯಾಗಿ ಅತ್ತ ರಥ ಓಡಿಸಿ ಘಟೋತ್ಕಚನನ್ನು ಎದುರಿಸಿದರು. ಪರಿಣಾಮ ಅವರೀರ್ವರ ಎದುರು ಬಹುಹೊತ್ತು ಸೆಣಸಲಾಗದೆ ಭೀಮಪುತ್ರ ಹಿಂದೆ ಸರಿಯಬೇಕಾಯಿತು. ಈ ದಿನವೂ ಮಾರಣ ಹೋಮದಂತೆ ಇಕ್ಕೆಲಗಳಲ್ಲೂ ಬಹಳಷ್ಟು ಯೋಧರು ಹತರಾಗಿ ಕುರುಕ್ಷೇತ್ರದಲ್ಲಿ ರಕ್ತದೋಕುಳಿ ಹರಿಯತೊಡಗಿತ್ತು.

ಐದನೆಯ ದಿನ ಮತ್ತೆ ಯೋಜನೆಯಲ್ಲಿ ಬದಲಾವಣೆಗಳಾದವು. ಪಾಂಡವರು ಶ್ಯೇನ ವ್ಯೂಹ ಬಲಿದರೆ ಕೌರವ ಸೇನೆ ಮಕರವ್ಯೂಹವಾಗಿ ವಿರಚಿಸಲ್ಪಟ್ಟಿತು. ಇಂದು ಸಾತ್ಯಕಿಯ ಪೌರುಷ ಮೆರೆಯಿತು. ತನ್ನ ಹಗೆಯಾದ ಭೂರಿಶ್ರವನ ಹತ್ತು ಮಂದಿ ಮಕ್ಕಳನ್ನು ಸಾತ್ಯಕಿ ವಧಿಸಿದ. ಪಾರ್ಥನ ಪ್ರತಾಪವೂ ಅತಿ ಭಯಂಕರವಾಗಿ ಇಪ್ಪತ್ತೈದಕ್ಕಿಂತಲೂ ಅಧಿಕ ಮಹಾರಥಿಗಳೊಡನೆ ಹೋರಾಡಿ ಅವರೆಲ್ಲರನ್ನೂ ಕೊಂದು ಕಳೆದನು. ಅತ್ತ ಭೀಷ್ಮಾಚಾರ್ಯರ ರುದ್ರ ತಾಂಡವವೂ ಅತ್ಯುಗ್ರವಾಗಿತ್ತು. ಪ್ರತಿನಿತ್ಯ ಪಾಂಡವ ಸೇನೆಯ ದಶ ಸಹಸ್ರ ಕಿರೀಟಧಾರಿಗಳ ನಾಶಗೈಯುತ್ತ ಸೇನಾಧಿಪತಿಯಾಗುವ ಹೊತ್ತಿಗೆ ತಾನೊರೆದಿದ್ದ ವಚನ ಪಾಲನೆ ಮಾಡುತ್ತಾ ಬರುತ್ತಿದ್ದಾರೆ. ಹೀಗೆ ಸಮರ ಸಾಗುತ್ತಾ ಎಂಟು ದಿನಗಳಾಗುವ ಹೊತ್ತಿಗೆ ಕುರುಕ್ಷೇತ್ರ ರಣಧಾರುಣಿ ಹೆಣಗಳ ರಾಶಿ, ಗಜ ತುರಗಗಳ ಮೃತ ಕಾಯ, ಭಂಗಿಸಲ್ಪಟ್ಟ ರಥ, ಖಂಡಿಸಲ್ಪಟ್ಟಿದ್ದ ಆಯುಧಗಳಿಂದ ತುಂಬಿ ತುಳುಕಾಡುತ್ತಿದೆ. ಎಲ್ಲಿ ನೋಡಿದರೂ ಕಡಿದೆಸೆದ ಅಂಗಾಂಗಗಳು, ಹರಿಯುತ್ತಿರುವ ಕೆನ್ನೀರು. ಎಲ್ಲ ಸೇರಿ ಅಲ್ಲಲ್ಲಿ ರಕ್ತ ಸರೋವರಗಳು ನಿರ್ಮಿಸಲ್ಪಟ್ಟಿವೆ. ಕುರುಕ್ಷೇತ್ರದ ಪುಣ್ಯಭೂಮಿ ರುಧಿರಾಭಿಷೇಚಿತವಾಗಿ ಕೆಂಪು ಕೆಸರಾಗಿ ಹೋಗಿದೆ. ಭೀಭತ್ಸಕರವಾದ ಚಿತ್ರಣ, ಬುರುಡೆಗಳ ಆಗರವಾಗಿ ಯಾರನ್ನಾದರೂ ಭಯಭೀತಗೊಳಿಸುವಂತಿದೆ. ಇಷ್ಟಾದರೂ ಇನ್ನೂ ಸೋಲು ಗೆಲುವುಗಳ ನಿರ್ಣಯವಾಗಿಲ್ಲ. ಅಪಾರ ಸೇನೆ ಎರಡೂ ಪಕ್ಷಗಳಲ್ಲೂ ನಷ್ಟವಾಗಿದೆ.

ಒಂಭತ್ತನೆಯ ದಿನದ ಯುದ್ಧಾರಂಭವಾಗಿದೆ. ಭೀಷ್ಮಾಚಾರ್ಯರು ಲಯಕರ್ತ ಮಹಾದೇವನಂತೆ ಪಾಂಡವ ಸೇನೆಯ ನಾಶಗೊಳಿಸಲಾರಂಭಿಸಿದ್ದಾರೆ. ಇನ್ನೂ ಹೀಗೆಯೇ ಪಿತಾಮಹ ಭೀಷ್ಮಾಚಾರ್ಯರನ್ನು ಬಿಟ್ಟರೆ ಉಳಿಗಾಲವಿಲ್ಲ ಎಂದು ಶ್ರೀಕೃಷ್ಣ ಅರ್ಜುನನ ರಥವನ್ನು ಭೀಷ್ಮಾಚಾರ್ಯರ ಎದುರಿಗೆ ಹಾರಿಸಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page