ಭಾಗ -332
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೩೩೨ ಮಹಾಭಾರತ
“ಪಾರ್ಥಾ! ಈ ಜಗದಲ್ಲಿ ಇರುವ ಸಕಲವೂ ಪರಮಾತ್ಮನ ವ್ಯಾಪ್ತಿಯಲ್ಲಿಯೆ ಇರುವುದು. ಶರೀರ ಎಂಬ ರಥದ ಸಾರಥಿಯಂತೆ ಆತ್ಮ ಕಾರ್ಯ ನಿರ್ವಹಿಸುತ್ತದೆ. ಆತ್ಮಸಾಕ್ಷಿ, ಆತ್ಮ ವಿಶ್ವಾಸ, ಆತ್ಮಸ್ಥೈರ್ಯ, ಆತ್ಮ ನಿರ್ಭರತೆ, ಆತ್ಮೋನ್ನತಿ ಇತ್ಯಾದಿ ಆತ್ಮ ಸಂಬಂಧಿ ಗುಣಗಳ ಬಗ್ಗೆ ನೀನು ಕೇಳಿರಬಹುದು. ಇದೆಲ್ಲವೂ ಆತ್ಮದ ಪೂರಣ ಮತ್ತು ಪ್ರೇರಣ ಗುಣಗಳು. ಅನುಸರಿಸಿ ನಡೆಯುವುದು ಜೀವರುಗಳ ಮೇಲೆ ಅವಲಂಬಿತವಾಗಿರುತ್ತದೆ. ಇಲ್ಲಿ ಸಂಚಿತ ಮತ್ತು ಪ್ರಾರಬ್ಧ ಕರ್ಮಗಳು ಪೂರಕವಾಗಿರುತ್ತವೆ. ಜೀವರುಗಳಲ್ಲಿ ಪರಮಾತ್ಮನ ಅಂಶ ಹೆಚ್ಚಾಗಿದ್ದು ಜಾಗೃತವಾಗಿಯೆ ಇರುತ್ತದೆ. ಇನ್ನಿತರ ವಸ್ತುಗಳಲ್ಲಿ ಈ ಸ್ಥಿತಿ ಇರುವುದಿಲ್ಲ.”
ಅರ್ಜುನನ ಕುತೂಹಲ ಇನ್ನಷ್ಟು ಜಿಜ್ಞಾಸೆಯಾಗಿ ಬೆಳೆಯಿತು. “ವಾಸುದೇವಾ! ಆತ್ಮ ಆವಾಸವಾಗಿರುವ ಜೀವರುಗಳು ಪರಮಾತ್ಮನ ಅಂಶಗಳೆಂದು ಹೇಳಿರುವೆ. ಹಾಗಿದ್ದರೆ ಜೀವರಿಗೂ ದೇವರಿಗೂ ಇರುವ ಅಂತರ – ಭೇದವೇನು?”
“ಕೌಂತೇಯಾ! ಇದೇ ನಿಜವಾಗಿಯೂ ತಿಳಿಯಬೇಕಾಗಿರುವ ಸತ್ಯ. ಮಾತ್ರವಲ್ಲ ಗಹನವಾದ ವಿಚಾರವೂ ಆಗಿದೆ. ಚಿನ್ನದಂತೆ ಆತ್ಮ ಶ್ರೇಷ್ಟವೂ, ಅತ್ಯಮೂಲ್ಯವಾದುದೂ ಆಗಿದೆ. ಚಿನ್ನ ಪ್ರಕೃತಿಯಲ್ಲಿ ಭೂಮಿಯಡಿ ಮಣ್ಣಿನಂತೆಯೆ ಇರುತ್ತದೆ. ಶುದ್ಧಗೊಳ್ಳುವ ಪ್ರಕ್ರಿಯೆ ಕಠಿಣವಾದುದು. ಅನಂತರ ಸ್ಪುಟಕ್ಕಿಟ್ಟಾಗ ಅಪರಂಜಿಯಾಗುತ್ತದೆಯಲ್ಲವೇ? ಹಾಗೆಯೇ ಆತ್ಮಗಳೂ ದೇಹಾಂತರ್ಗತವಾಗಿದ್ದು, ಪಾವನಗೊಂಡು ಪರಮತ್ವ ಏರಿದಾಗ ಪರಮಾತ್ಮನಲ್ಲಿ ಲೀನವಾಗುತ್ತವೆ. ಅಲ್ಲಿಯವರೆಗೆ ಚಿನ್ನದ ಶುದ್ಧೀಕರಣ ಪ್ರಕ್ರಿಯೆಯಂತೆ ಜನ್ಮ ಜನ್ಮಾಂತರಗಳಲ್ಲಿ ಸಾಗುತ್ತಿರುತ್ತವೆ. ಜೀವನದಲ್ಲಿ ಎದುರಾಗುವ ಸಮಸ್ಯೆ, ಸವಾಲು, ನೋವು, ಸಂಕಷ್ಟಗಳೆಲ್ಲವೂ ಶುದ್ಧೀಕರಣದ ಹಂತಗಳು. ಇಲ್ಲಿ ಅಪಮಾನ, ಸೋಲು, ಬಾಧೆ, ಪೀಡನೆ, ವೇದನೆ, ನೋವು ಇತ್ಯಾದಿ ಉಂಟಾಗುತ್ತವೆ. ಕೋಪ, ಆಕ್ರೋಶ, ಹಗೆ, ಆಸೆ, ಲೋಭ, ಮಮಕಾರ, ಈರ್ಷೆ, ಮದ ಆದಿ ಭಾವಗಳೂ ಉತ್ಪನ್ನವಾಗುತ್ತವೆ. ಇವೆಲ್ಲವುಗಳನ್ನು ಸಮತೋಲನದಲ್ಲಿರಿಸಿ, ಧರ್ಮಪಥವನ್ನು ಅನುಸರಿಸಿ, ಕರ್ತವ್ಯಪಾಲನೆ ಮಾಡುತ್ತಾ ಸಾಗಿದರೆ ಆತ್ಮಶುದ್ಧಿಯಾಗುತ್ತಿರುತ್ತದೆ. ಆ ಬಳಿಕ ಜೀವರುಗಳ ಆತ್ಮ ಮೂಲ ಸ್ವರೂಪವನ್ನು ಹೊಂದುವ ಅರ್ಹತೆ ಪಡೆಯುತ್ತದೆ. ಪರಮ ಪಾವನ ಆತ್ಮವಾಗಿ ಪರಮಾತ್ಮನಲ್ಲಿ ಸಾನಿಧ್ಯವಾಗುತ್ತದೆ“.
“ಕೃಷ್ಣಾ! ನೀನೇನೋ ಈ ಪ್ರಕ್ರಿಯೆಯನ್ನು ವಿವರಿಸಿದೆ. ಆದರೆ ಜೀವರುಗಳು ಆ ಪರಮೋಚ್ಚ ಸ್ಥಿತಿ ತಲುಪಬೇಕಾದರೆ ಏನು ಮಾಡಬೇಕು? ಮತ್ತು ಹೇಗೆ? ನನಗೆ ತಿಳಿದುಕೊಳ್ಳುವ ಬಯಕೆಯಾಗಿದೆ”
“ಅರ್ಜುನಾ, ನೀನು ಶಾಸ್ತ್ರ ಅಧ್ಯಯನ ಮಾಡಿರುವೆ. ಮೋಕ್ಷದ ಬಗೆಯಲ್ಲೂ ತಿಳಿದಿರುವೆ. ಆದರೂ ಮತ್ತೊಮ್ಮೆ ನಿನಗಾಗಿ ಹೇಳುವೆ ಕೇಳು. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಇವು ಪುರುಷಾರ್ಥಗಳು. ಚತುರ್ವಿಧ ಪುರುಷಾರ್ಥಗಳಲ್ಲಿ ಮೋಕ್ಷ ಕೊನೆಯದು. ಮನುಷ್ಯನ ಮರಣ ಸಂಭವಿಸಿದಾಗ ದೇಹದೊಳಗಿನ ಆತ್ಮ ಮರುಹುಟ್ಟು ಪಡೆಯದೆ, ಮುಕ್ತವಾಗಿ ಪರಮಾತ್ಮನಲ್ಲಿ ಐಕ್ಯ ಹೊಂದುವುದು ಮೋಕ್ಷ. ಈ ಸ್ಥಿತಿ ಸ್ವರ್ಗಕ್ಕಿಂತಲೂ ಶ್ರೇಷ್ಟ. ಸ್ವರ್ಗ ಪ್ರಾಪ್ತಿ ಕೇವಲ ಮನುಷ್ಯನ ಪಾಪ ಪುಣ್ಯಗಳನ್ನು ಆಧರಿಸಿದ್ದು, ಪುಣ್ಯ ಮುಗಿದ ಮೇಲೆ ಕರ್ಮಾನುಸಾರ ಮರು ಹುಟ್ಟು ಪಡೆಯಬೇಕಾಗುತ್ತದೆ. ಆದರೆ ಮುಕ್ತಿ ಅಥವಾ ಮೋಕ್ಷದ ಸ್ಥಿತಿ ಅನಂತಕಾಲ ಆನಂದಾತಿಶಯದಲ್ಲಿ ಇರುವಂತಹ ಸ್ಥಿತಿ. ಹಾಗಾದರೆ ಪರಮೋಚ್ಚ ಸ್ಥಿತಿಯಾದ ಮೋಕ್ಷ ಸಾಧನೆ ಹೇಗೆ? ಪರಮಾತ್ಮನಲ್ಲಿ ಆತ್ಮ ಲೀನಗೊಳಿಸುವುದು ಯಾವ ವಿಧಾನದಿಂದ ಎಂಬ ಕೌತುಕ ನಿನ್ನಲ್ಲಿ ಮನ ಮಾಡಿದೆಯಲ್ಲವೆ? ಕೇಳು, ಪುರುಷಾರ್ಥಗಳಾದ ಧರ್ಮ – ಧರ್ಮಯುಕ್ತವಾಗಿಯಲ ಜೀವನ ಸಾಗಿಸಬೇಕು. ಆ ಜೀವನಕ್ಕೆ ಬೇಕಾಗುವ ಆರ್ಥಿಕ ವ್ಯವಸ್ಥೆಯೆ ಅರ್ಥ. ಅಂತಹ ಸಂಪಾದನೆಯನ್ನೂ ಧರ್ಮಯುಕ್ತವಾಗಿ ಸಂಪಾದಿಸಬೇಕು. ಮನದಲ್ಲಿ ಆಸೆಗಳು ಮೂಡುವುದು ಸಹಜ – ಇವುಗಳೆ ಕಾಮನೆಗಳು. ಇಂತಹ ಕಾಮ ವನ್ನು ಧರ್ಮದೃಷ್ಟಿಯಿಂದ ವಿವೇಚಿಸಿ, ಉಚಿತಾನುಚಿತಗಳನ್ನು ಅರಿತು, ಯಾವುದು ಅನುಚಿತವೊ – ನಿಷಿದ್ಧವೊ ಅಂತಹವುಗಳನ್ನು ತ್ಯಜಿಸಬೇಕು. ಯಾವುದು ಉಚಿತವೊ ಧರ್ಮವೊ ಅವುಗಳನ್ನು ಯಾವ ಸಂಕಷ್ಟ ಬಂದರೂ ಪಾಲಿಸಿ ಹೊಂದಬೇಕು. ಮೊದಲ ಮೂರು ಪುರುಷಾರ್ಥಗಳಲ್ಲಿ ಸಾರ್ಥಕ್ಯ ಸಾಧಿಸಿದರೆ ಮುಂದೆ ಅದೇ ಮೋಕ್ಷಕ್ಕೆ ದಾರಿ ತೋರುತ್ತದೆ. ಎಲ್ಲಾ ಆಸೆ, ಆಕಾಂಕ್ಷೆಗಳು ತೊಲಗಿಹೋದಾಗ ಕರ್ಮದ ಲೋಪವೂ ತೊಳೆಯಲ್ಪಡುತ್ತದೆ. ಚತುರ್ಥ ಪುರುಷಾರ್ಥವಾದ ಮೋಕ್ಷ ಪ್ರಾಪ್ತಿಯಾಗುತ್ತದೆ. ಇಲ್ಲಿ ನಿಯಂತ್ರಣ ಮತ್ತು ಅನುಸರಣೆಯೆ ಪ್ರಧಾನ. ಧರ್ಮ ಪಥವನ್ನು ಅರಿತಿದ್ದರೂ ಅನುಸರಿಸಲಾಗದೆ ಹೋದರೆ ಕರ್ಮದ ಲೋಪವಾಗುತ್ತದೆ. ಆ ಲೋಪದ ಲೇಪ ಶುದ್ದವಾಗಲು ಮತ್ತೆ ಜೀವರುಗಳ ಜನ್ಮಾಂತರ ಚಕ್ರ ತಿರುಗಲಾರಂಭಿಸುತ್ತದೆ.”
“ಕೇಶವಾ! ಹಾಗಿದ್ದರೆ ಕರ್ಮದ ಲೋಪವೆ ಮೋಕ್ಷದ ಹಾದಿಗೆ ತೊಡಕಲ್ಲವೆ? ಆ ಸುಳಿಯಿಂದ ಮುಕ್ತನಾಗಲು ಕರ್ಮಗಳೆಲ್ಲವುಗಳನ್ನೂ ತೊರೆದು, ಆಸೆಗಳನ್ನೂ ತ್ಯಾಗ ಮಾಡಿ ಸನ್ಯಾಸಿಯಾದರೆ ಮೋಕ್ಷದ ಹಾದಿ ಸುಲಭವಾಗುವುದಿಲ್ಲವೆ?
ಮುಂದುವರಿಯುವುದು…



















































