27 C
Udupi
Saturday, April 11, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 323

ಭರತೇಶ್ ಶೆಟ್ಟಿ, ಎಕ್ಕಾರ್

ಸೂರ್ಯನ ಉಪಾಸನೆಗೈಯುತ್ತಿರುವ ಸಮಯ ಅಕಾಲದಲ್ಲಿ ಮೋಡಗಳು ಕವಿಯಿತು. ಬಾನು ಕಪ್ಪೇರಿ ಕೋಲ್ಮಿಂಚು – ಸಿಡಿಲು ಅಬ್ಬರಿಸಿತು. ಕಲ್ಲಿನ ಮಳೆ ಸುರಿಯಿತು – ಭೂಮಿ ಕಂಪಿಸಿತು. ಹೀಗೆ ಅಪಶಕುನಕರ ಸೂಚನೆಗಳು ಪ್ರಕೃತಿಯಿಂದ ತೋರಲ್ಪಟ್ಟಾಗ ಭೀಷ್ಮಾಚಾರ್ಯರ ಮುಖ ಚಿಂತಾಕ್ರಾಂತವಾಯಿತು. ದುರ್ಯೋಧನ ಅಜ್ಜನ ಮುಖಚರ್ಯೆಯ ವ್ಯತ್ಯಾಸ ಗಮನಿಸಿದನು. ಅವನನ್ನು ನೋಡುತ್ತಾ ” ದುರ್ಯೋಧನಾ! ಪ್ರಾಕೃತಿಕವಾದ ಈ ಶಕುನಗಳು ಆಳುತ್ತಿರುವ ರಾಜ್ಯಾಧಿಕಾರಿಗೆ ಅಶುಭವನ್ನು ಸೂಚಿಸುತ್ತವೆ. ಹಾಗಾಗಿ ಕೆಲವು ಪ್ರಾಯಶ್ಚಿತ್ತ ಶಾಂತಿಗಳನ್ನು ಮಾಡಿಸಿ ಉಪಶಮನಕ್ಕೆ ಪ್ರಯತ್ನಿಸಬೇಕು” ಎಂದು ಅಜ್ಜ ಭೀಷ್ಮ ಹೇಳಿದರು. ಅಂತೆಯೆ ಭೀಷ್ಮಾಚಾರ್ಯರ ನಿರ್ದೇಶನದಲ್ಲಿ ಬ್ರಾಹ್ಮಣೋತ್ತಮರನ್ನು ಕರೆದು ಹೇರಳ ದಾನ ದಕ್ಷಿಣೆಗಳನ್ನಿತ್ತು ಪ್ರಾಯಶ್ಚಿತ್ತ ಕಾರ್ಯಗಳನ್ನು ಮಾಡಿಸಲು ದುರ್ಯೋಧನ ಆದೇಶ ನೀಡಿದನು.

ಭೀಷ್ಮಾಚಾರ್ಯರು ಕೌರವ ಸೇನೆಯನ್ನು ಹುರಿದುಂಬಿಸಿ ತನ್ನ ಭಯಂಕರ ಧ್ವನಿಯೆಬ್ಬಿಸಬಲ್ಲ ಶಂಖವನ್ನೆತ್ತಿ ರಣನಾದ ಗೈದನು. ರಣವಾದ್ಯಗಳೂ ಮೊಳಗಿದವು. ಕೌರವ ಪಕ್ಷದ ವೀರ ಮಹಾರಥಿಗಳೂ ಅನುಸರಿಸಿ ರಣಾರಂಭಕ್ಕೆ ಅನುಮೋದನೆಯಂತೆ ಶಂಖನಾದಗೈದರು. ಪ್ರತಿಯಾಗಿ ಪಾಂಡವ ಪಕ್ಷದಿಂದ ಶ್ರೀ ಕೃಷ್ಣ ತನ್ನ ಪಾಂಚಜನ್ಯ, ಅರ್ಜುನ ದೇವದತ್ತ, ಭೀಮನು ಪೌಂಡ್ರ, ಯುಧಿಷ್ಠಿರ ನು ಅನಂತ ವಿಜಯ, ನಕುಲ ಸಹದೇವರು ಸುಘೋಷ – ಮಣಿಪುಷ್ಪವೆಂಬ ದಿವ್ಯ ಶಂಖವನ್ನೂದಿ ರಣ ರೌರವಗೈದರು. ಸೇನಾಪತಿ ದೃಷ್ಟದ್ಯುಮ್ನನೂ ತನ್ನ ಶಂಖವನ್ನೂದಿ ಸಮರಾರಂಭವನ್ನು ಸೂಚಿಸಿದನು. ಇತ್ತಂಡಗಳಿಂದಲೂ ರಣಭೇರಿ, ವಾದ್ಯ, ನಗಾರಿ, ಡೋಲು ವಾದನಗಳು ಏಕಕಾಲದಲ್ಲಿ ಮೊಳಗಿ ಒಂದನ್ನೊಂದು ಮೀರಿಸುವಂತೆ ಇಕ್ಕೆಲಗಳಿಂದಲೂ ಪ್ರತಿಧ್ವನಿಸಿ ನಂತರ ನಿಲ್ಲಿಸಲ್ಪಟ್ಟವು.

ಇನ್ನೇನು ಯುದ್ದಾರಂಭ ಆಗಲಿದೆ ಎಂಬಷ್ಟರಲ್ಲಿ ಧರ್ಮರಾಯ ತನ್ನ ಕವಚವನ್ನು ಕಳಚಿ, ಧರಿಸಿದ ಆಯುಧಗಳನ್ನು ರಥದಲ್ಲಿರಿಸಿ ಕೆಳಗಿಳಿದು ನಡೆಯತೊಡಗಿದನು. ಎಲ್ಲರಿಗೂ ಆಶ್ಚರ್ಯ! ಏನಿದು ಯುಧಿಷ್ಠಿರನ ಈ ನಡೆ? ಯುದ್ದ ಮಾಡಬೇಕಾದ ಸಮಯದಲ್ಲಿ ನಿರಾಯುಧನಾಗಿ ಶತ್ರು ಸೇನೆಯೆಡೆ ಹೋಗುತ್ತಿದ್ದಾನೆ? ಪಾಂಡವ ಪಾಳಯದಲ್ಲಿ ಧರ್ಮಜ ಶರಣಾದನೆ? ಎಂಬ ಗೊಂದಲ. ಕೌರವ ಪಕ್ಷದಲ್ಲಿ ಇವನೇನು ಮಾಡ ಹೊರಟಿದ್ದಾನೆ ಈ ಹೊತ್ತು ಎಂಬ ಅಚ್ಚರಿ! ಹೀಗೆ ಆತಂಕ – ವಿಸ್ಮಯಗಳಿಂದ ನೋಡುತ್ತಿದ್ದಂತೆಯೆ, ಧರ್ಮಜ ಭೀಷ್ಮಾಚಾರ್ಯರ ಮುಂಭಾಗದಲ್ಲಿ ಬಂದು ನಿಂತು – ಕಂಬಣಿ ತುಂಬಿದ ಕಂಗಳಿಂದ ಮಂಜಾದ ದೃಷ್ಟಿಯಲ್ಲಿ ಅಜ್ಜನನ್ನು ನೋಡುತ್ತಾ ಕರ ಜೋಡಿಸಿ ನಮಿಸಿ ನಿಂತನು. ಅಜ್ಜ ಭೀಷ್ಮಾಚಾರ್ಯರಿಗೆ ಸದ್ಗುಣ ಸುಶೀಲ ಮೊಮ್ಮಗನನ್ನು ಕಾಣುವಾಗ ಕಣ್ಣೀರು ಧಾರೆಯಂತೆ ಹರಿದಿಳಿಯತೊಡಗಿತು. ಅಭಯ ಹಸ್ತವನ್ನೆತ್ತಿ ಆಶೀರ್ವದಿಸಿ “ಮಗನೇ, ನಿನ್ನ ಹೆಸರಿನಂತೆ ಧರ್ಮವನ್ನು ಉಸಿರಾಗಿಸಿರುವ ಹೋರಾಟದ ಬದುಕು ನಿನ್ನದಾಗಿಸಿದೆ. ಧರ್ಮಕುಮಾರಾ! ಪಡಬಾರದ ಕಷ್ಟಗಳ ಸರಮಾಲೆ ನಿನ್ನೆದುರು ಬಂದರೂ ಎಲ್ಲವನ್ನೂ ಸಹಿಸಿದೆ. ಸತ್ಯಸಂಧನಾಗಿ ಧರ್ಮವನ್ನು ತೊರೆಯದೆ ವ್ರತಸ್ಥನಂತೆ ಬಾಳಿದೆ. ನಿನ್ನ ಧರ್ಮ ಪಾಲಿತ ಜೀವನವನ್ನು ನೋಡಿದ್ದೇನೆ, ಕೇಳಿದ್ದೇನೆ. ಆದರೂ ಈ ಯುದ್ದವನ್ನು ತಡೆಯಲಾಗಲಿಲ್ಲ. ಈ ಕುರಿತಾಗಿ ವೇದನೆ ಪಡಬೇಡ. ನಿನ್ನದ್ದಾದ ಧರ್ಮವೇ ನಿನಗೆ ಶ್ರೀರಕ್ಷೆಯಾಗಲಿ. ದೇವರ ಇಚ್ಚೆ ಏನಿದೆಯೊ ಅದರಂತೆಯೆ ಆಗಲಿದೆ. ನಮ್ಮ ಕರ್ಮವನ್ನು ಪ್ರಾಮಾಣಿಕತೆಯಿಂದ ಮಾಡುವುದೂ ನಮಗೆ ಧರ್ಮವಾಗುತ್ತದೆ. ಹೋಗು ನಿನ್ನಂತವರಿಗೆ ಶ್ರೇಷ್ಟವಾದ ಧರ್ಮಕರ್ಮವನ್ನು ಮಾಡು. ದೇವರ ಪೂರ್ಣಾನುಗ್ರಹ ನಿನಗಿರಲಿ” ಎಂದರು ಭೀಷ್ಮಾಚಾರ್ಯರು. ಆಗ ಧರ್ಮರಾಯ “ಅಜ್ಜಾ! ಹಸ್ತಿನೆಯ ದ್ಯೂತ ಭವನದಿಂದ ವನವಾಸಕ್ಕೆ ಹೊರಡುವ ಕ್ಷಣ ನಿಮ್ಮನ್ನು ನೋಡಿದ್ದೆವು. ನಮ್ಮ ದುರಾದೃಷ್ಟ ಮತ್ತೆ ನಿಮ್ಮನ್ನು ನೋಡುವಂತಾದದ್ದು ಇಂದು ಈ ಸ್ಥಿತಿಯಲ್ಲಿ. ಮನಸ್ಸಿಗೆ ಅತೀವ ಯಾತನೆಯಾಗುತ್ತಿದೆ. ಅಜ್ಜಾ ಎತ್ತಿ ಆಡಿಸಿದ ನಿಮ್ಮನ್ನು ನೋಯಿಸಿ, ಕೈತುತ್ತು ಉಣಿಸಿದ ನಿಮ್ಮನ್ನು ವಿರೋಧಿಸಿ ಹೋರಾಡಿದರೆ ನಮಗೆ ಒಳಿತಾದೀತೆ? ಹೇಳಿ ಅಜ್ಜಾ? ಹಿರಿಯರಾದ ನಿಮ್ಮ ಆಜ್ಞೆ ಪಾಲಿಸಲು ನಾವು ಈಗಲೂ ಸಿದ್ಧರಿದ್ದೇವೆ. ನಮಗೆ ಬುದ್ದಿ ಹೇಳುವ ಸರ್ವಾಧಿಕಾರ ನಿಮಗಿದೆ ಅಜ್ಜಾ.. ಈ ಅನರ್ಥ ತಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಶಕ್ತಿ ಮೀರಿ ಮಾಡಿದರೂ ಬದಲಿಸಲಾಗದೆ ಹೋಯಿತು. ಅಜ್ಜಾ ನೀವೇ ದಾರಿ ತೋರಬೇಕು. ಹೇಳಿ… ನಾವೇನು ಮಾಡಬೇಕು? ನಿಮ್ಮ ವಚನವನ್ನು ಶಿರಸಾವಹಿಸಿ ಪಾಲಿಸಲು ಸಿದ್ಧನಾಗಿ ಬಂದಿದ್ದೇನೆ. ಆಜ್ಞೆಯಾಗಲಿ ಅಜ್ಜಾ” ಎಂದು ದುಃಖಿಸಿ ಬೇಡಿದನು.

“ಮಗಾ ಯುಧಿಷ್ಠಿರಾ! ನಿರಪರಾಧಿಯಾದ ನೀನೇಕೆ ಮರುಗುವೆ? ನೀವು ಮಾತ್ರವಲ್ಲ, ನಾವೆಲ್ಲರೂ ಸೇರಿ ಯುದ್ಧ ಬೇಡ, ಸರ್ವ ನಾಶಕ್ಕೆ ಕಾರಣವಾದೀತು. ಖಂಡಿತಾ ನಿನಗೆ ಶ್ರೇಯಸ್ಸಾಗದು ಎಂದು ದುರ್ಯೋಧನನಿಗೆ ಸಾಮರ್ಥ್ಯ ಮೀರಿ ಹೇಳುವ – ಸರಿದಾರಿ ತೋರುವ ಪ್ರಯತ್ನ ಮಾಡಿದೆವು. ಅರ್ಥೈಸದೆ – ಒಪ್ಪಿಕೊಳ್ಳದೆ ಪರಿಸ್ಥಿತಿಯನ್ನು ಈ ರೀತಿ ಬೆಳೆಯುವಂತೆ ಮಾಡಿದ್ದಾನೆ. ದುರ್ಯೋಧನ ಮತ್ತು ನೀನು ಇಬ್ಬರೂ ನನಗೆ ಸಮಾನರು – ಮೊಮ್ಮಕ್ಕಳು ಆಗಿದ್ದೀರಿ. ನಿನ್ನಂತೆಯೆ ನನಗೂ ವೇದನೆಯಾಗುತ್ತಿದೆ. ಧರ್ಮಾತ್ಮರಾದ ಪಾಂಡುಪುತ್ರರು ನೀವು, ನನ್ನ ಮೊಮ್ಮಕ್ಕಳೂ ಹೌದು – ನಿಮ್ಮನ್ನು ಸಮರಮುಖದಲ್ಲಿ ವಿರೋಧಿಸಿ ಹೋರಾಟವೆ? ಇದಕ್ಕಾಗಿಯೊ ನಾನು ಈ ತನಕ ಬದುಕಿ ಉಳಿದಿರುವುದು? ಎಂಬಷ್ಟರ ಮಟ್ಟಿಗೆ ಮಾನಸಿಕ ವೇದನೆ ನನಗೂ ಆಗುತ್ತಿದೆ. ಈಗ ನೀನಾಗಲಿ ನಾನಾಗಲಿ ಚಿಂತೆ – ವ್ಯಥೆ ಮಾಡಿ ಪ್ರಯೋಜನವಿಲ್ಲ. ಯುದ್ಧ ನಿರ್ಣಯವಾಗಿದೆ. ರಣಭೇರಿ ಶಂಖನಾದಗೈದಾಗಿದೆ. ನಿನ್ನ ಅಜ್ಜ ನಾನಾದರೂ, ಇಲ್ಲಿ ನಿನ್ನ ವಿರೋಧಿ ಸೇನೆಯ ಸೇನಾಪತಿ. ಮೊಮ್ಮಗನೆಂದು ಕರುಣೆ ತೋರುವುದು ನನಗೂ ಧರ್ಮವಲ್ಲ. ವಿರೋಧಿಯ ಎದುರು ಬಂದು ಈ ರೀತಿ ವ್ಯವಹರಿಸುವುದು ನಿನಗೂ ಕ್ಷಾತ್ರ ಧರ್ಮವಲ್ಲ. ಹೋಗು ಧರ್ಮಾತ್ಮನಾಗಿ ನಿನ್ನ ಕರ್ತವ್ಯದಂತೆ ಯುದ್ದ ಮಾಡು. ಪಾಂಡವರು ನೀವು ಐದು ಮಂದಿ, ಕೌರವರು ನೂರು ಮಂದಿ ಒಟ್ಟು ನೂರೈದು ರಾಜಕುಮಾರರೂ ನನಗೆ ಮೊಮ್ಮಕ್ಕಳೇ ಆಗಿರುವಿರಿ. ನಾನು ಸೇನಾಧಿಕಾರದಲ್ಲಿ ಇರುವವರೆಗೆ ನೀವು ನೂರೈವರಿಗೂ ಯಾವ ವಿಧದ ನೋವಾಗಲಿ – ಕೇಡಾಗಲಿ ಆಗದಂತೆ ಸಂರಕ್ಷಿಸುತ್ತಾ ಹೋರಾಡುತ್ತೇನೆ. ಮೇಲಾಗಿ ನೀನು ಭಯಪಡಬೇಕಾಗಿಲ್ಲ, ವಾಸುದೇವ ಶ್ರೀ ಕೃಷ್ಣನ ಪೂರ್ಣ ರಕ್ಷೆ ನಿಮಗಿದೆ. ನಾವು ಗೈಯಲಿರುವ ಈ ಕರ್ಮದ ಫಲಾಫಲಗಳು ದೈವೇಚ್ಚೆಯಂತೆ ನಿರ್ಣಯವಾಗಲಿದೆ. ನಿನಗೆ ಶುಭವಾಗಲಿ ಶ್ರೇಯಸ್ಸಾಗಲಿ” ಎಂದು ಹರಸಿ ಧರ್ಮರಾಜನನ್ನು ಕಳುಹಿಸಿದರು.

ಧರ್ಮರಾಯನು ವಂದಿಸಿ ಗುರು ದ್ರೋಣರತ್ತ ನೋಡಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page