ಭಾಗ – 317
ಭರತೇಶ್ ಶೆಟ್ಟಿ , ಎಕ್ಕಾರ್

ವಾಸುದೇವ ಅರ್ಜುನನ ಅಸಹನೆಯ ದೃಷ್ಟಿಯಿಂದ ಅರ್ಥೈಸಿಕೊಂಡು ರುಕ್ಮನಿಗೆ ಉತ್ತರ ನೀಡುವ ಮನ ಮಾಡಿದನು. “ಅಯ್ಯಾ ರುಕ್ಮ ಭೂಪತಿ, ನಿನ್ನ ಬಗ್ಗೆ ನೀನೆ ಹೇಳಿ ಕೊಂಡು ಪ್ರಚಾರ ಮಾಡಿ ತಿಳಿಸುವ ಅಗತ್ಯವೇನಿದೆ? ನಿನ್ನ ತಂಗಿಯಾಗಿದ್ದ ರುಕ್ಮಿಣಿಯನ್ನು ಆಕೆಯ ಪ್ರೀತಿಗೆ ಸಂಪ್ರೀತನಾಗಿ ಸ್ವ ಸಾಮರ್ಥ್ಯದಿಂದ ನಾನು ವರಿಸಿದೆ. ತಡೆಯುವುದಕ್ಕಾಗಿ ಹೊರಟು ಬರುವಾಗ ನೀನು ” ಕೃಷ್ಣನನ್ನು ಕೊಂದು ಹಗೆ ತೀರಿಸದೆ ಮರಳಿ ಅರಮನೆ ಪೊಗಲಾರೆ” ಎಂದು ಪ್ರತಿಜ್ಞೆ ಮಾಡಿ ನನ್ನನ್ನೆದೆರಿಸಲು ಬಂದಿದ್ದೆ. ಆದರೆ ಅಸಮರ್ಥನಾಗಿ ಸೋತು ಅಪಮಾನಿತನಾದ ನಿನ್ನ ಅಂತ್ಯ ಅಸಾಧ್ಯವೇನೂ ಆಗಿರಲಿಲ್ಲ. ಆದರೂ ನಿನ್ನ ತಂಗಿ ರುಕ್ಮಿಣಿಯ ಬೇಡಿಕೆಯ ಪ್ರಾರ್ಥನೆಗೆ ಮಣಿದು ನಿನಗೆ ಬದುಕಿ ಉಳಿಯುವ ಅವಕಾಶ ಸಿಕ್ಕಿತ್ತು. ಆ ನಂತರದಲ್ಲಿ ಪ್ರತಿಜ್ಞೆಗೈದು ಬಂದಿದ್ದರಿಂದ ನಿನ್ನ ಶಪತ ಸಾಧಿಸಲಾಗದ ನಿನಗೆ ಮರಳಿ ಪುರ ಸೇರಲು ಆಗಲಿಲ್ಲ. ಅದಕ್ಕೆ ಬದಲಾಗಿ ನೀನೆಲ್ಲಿ ವಾಸಿಸಿದೆಯೋ ಆ ಪ್ರದೇಶಕ್ಕೆ ‘ಭೋಜಕಟಕ’ವೆಂದು ಹೆಸರಿಟ್ಟು ಆಳುತ್ತಿರುವ ವಿಚಾರವೂ ತಿಳಿದಿದೆ. ನೀನೇ ಪ್ರತಿಜ್ಞೆಗೈದು ಕೊಲ್ಲುವುದಕ್ಕಾಗಿ ಕಾಲದ ಪ್ರತೀಕ್ಷೆಯಲ್ಲಿದ್ದ ನಿನಗೀಗ ಆ ಅವಕಾಶ ಕೂಡಿ ಬಂದಿದೆ. ಹಾಗಾಗಿ ನಿನ್ನ ವೈರಿಯಾದ ಕೃಷ್ಣನಿರುವ ಪಕ್ಷವನ್ನು ಸೇರುವ ಬದಲು ನಿನ್ನ ಶ್ರೇಷ್ಟ ಧನುಸ್ಸು, ಸೈನ್ಯ, ಅತಿ ಭಯಂಕರ ಬಾಣಗಳನ್ನು ಬಳಸಿ ನಿನ್ನ ಪ್ರತಿಜ್ಞೆ ಪೂರೈಸಿಕೊಳ್ಳಲು ಕೌರವರ ಪಕ್ಷ ಸೇರಿಕೋ. ಇಲ್ಲಿ ನಮಗೆ ನಿನ್ನ ಅವಶ್ಯಕತೆ ಇಲ್ಲ. ಹಾಗೂ ದಾಕ್ಷಿಣ್ಯಕ್ಕೆ ನಿನಗೇನಾದೂ ಕೆಲಸ ನೀಡೋಣವೆಂದರೂ ಎಲ್ಲಾ ಕಾರ್ಯಗಳಿಗೂ ನಿಯುಕ್ತಿ ಆಗಿ ಆಗಿದೆ. ಇನ್ನು ನೀನಿಲ್ಲಿ ನಿಂತರೂ ಪ್ರಯೋಜನವಿಲ್ಲ” ಎಂದು ವ್ಯಂಗ್ಯವಾಗಿ, ಕಟು ಮಾತಿನಲ್ಲಿ ರುಕ್ಮನಿಗೆ ಉತ್ತರಿಸಿದನು. ಕೃಷ್ಣನ ಮಾತು ಕೇಳಿದ ಪಾಂಡವ ಪಕ್ಷದವರಿಗೆ ಕೆಲವರಿಗೆ ಆಶ್ಚರ್ಯ, ಇನ್ನುಳಿದವರಿಗೆ ಕುತೂಹಲ, ಪ್ರಾಜ್ಞರಾದವರಿಗೆ ಸಮಾಧಾನವಾಯಿತು .
ರುಕ್ಮನು ಕ್ರೋಧದಿಂದ ಬುಸುಗುಟ್ಟುತ್ತಾ, ತನ್ನ ಸೈನ್ಯ ಸಹಿತನಾಗಿ ಕೌರವರ ಬಿಡಾರದತ್ತ ಧಾವಿಸಿದನು. ದುರ್ಯೋಧನನ್ನು ಕಂಡು “ದುರ್ಯೋಧನಾ ನಿನಗೆ ಪ್ರಣಾಮಗಳು. ನಿಮಗೆ ಪಾಂಡವರ ಜೊತೆ ಯುದ್ದ ನಿಶ್ಚಯವಾದ ಸುದ್ಧಿ ತಿಳಿದು ಸಹಾಯಕ್ಕಾಗಿ ನಾನು ಸೇನಾ ಸಹಿತನಾಗಿ ಬಂದಿದ್ದೇನೆ. ನಿನ್ನ ಬದ್ಧ ವೈರಿಗಳಾದ ಆ ಪಾಂಡವರನ್ನು ಕೊಂದು ಕಳೆಯುವ ಚಿಂತೆ ನಿನಗಿದ್ದರೆ ಇನ್ನು ನಿಶ್ಚಿಂತನಾಗು. ನಿಮಿಷ ಮಾತ್ರದಲ್ಲಿ ಪಾಂಡವ ಸೇನೆಯನ್ನು ಧೂಳೀ ಪಟ ಮಾಡಬಲ್ಲೆ. ನನ್ನ ಬಳಿ ” ವಿಜಯ” ಎಂಬ ಶ್ರೇಷ್ಟ ಧನುಸ್ಸಿದೆ. ಇದು ಪಾರ್ಥನ ಗಾಂಡೀವಕ್ಕಿಂತಲೂ ಮಿಗಿಲಾದುದು. ನಾನು ಆ ಗಾಂಡೀವಿಗಿಂತಲೂ ಶ್ರೇಷ್ಟನಾಗಿರುವೆ. ನಿನಗೆ ಪಾಂಡವರ ಮೇಲೆ ವೈರವಾದರೆ, ನನಗೆ ನನ್ನ ತಂಗಿಯನ್ನು ಅಪಹರಿಸಿ ಮದುವೆಯಾದ ಆ ಕೃಷ್ಣ ಶತ್ರುವಾಗಿದ್ದಾನೆ. ಶತ್ರುವಿನ ಶತ್ರು ಮಿತ್ರ ಎಂಬ ಸೂತ್ರದಂತೆ ಸ್ನೇಹ ಬಯಸಿ ಬಂದಿದ್ದೇನೆ.” ಎಂದನು. ರುಕ್ಮನ ಮಾತನ್ನು ಕೇಳಿಸಿಕೊಂಡ ಭೀಷ್ಮಾಚಾರ್ಯರು ” ದುರ್ಯೋಧನಾ! ಈತ ಮೊದಲು ಪಾಂಡವರ ಪಕ್ಷ ಸೇರಲು ಹೋಗಿ ಇದೇ ರೀತಿ ಅಲ್ಲಿ ಕೌರವರ ಸೇನೆ ನಾಶ ಪಡಿಸುವ ಉದ್ದೇಶ ಹೊಂದಿದವನಂತೆ ಮಾತನ್ನಾಡಿದ್ದ. ತಿರಸ್ಕೃತನಾಗಿ ಹೊರ ಕಳುಹಿಸಲ್ಪಟ್ಟಾಗ ಇಲ್ಲಿ ಬಂದು ನಮ್ಮ ಜೊತೆ ತದ್ವಿರುದ್ದ ಮಾತುಗಳನ್ನಾಡುತ್ತಿದ್ದಾನೆ. ಇಂತಹ ದೂರ್ತನನ್ನು ನಾವು ನಮ್ಮ ಪಕ್ಷಕ್ಕೆ ಸೇರಿಸಿ ಕೊಳ್ಳಲಾಗದು. ಮೊದಲು ಇಲ್ಲಿಂದ ಹೊರ ಕಳುಹಿಸು” ಎಂದು ಆಜ್ಞೆ ಮಾಡಿದರು. ದುರ್ಯೋಧನನು “ರುಕ್ಮನನ್ನು ಉದ್ದೇಶಿಸಿ ” ಅಯ್ಯಾ ಅತಿ ಪರಾಕ್ರಮಿಯೇ! ನೀನು ಬಹಳ ದೊಡ್ಡವನು, ದೊಡ್ಡತನದ ಮಾತುಗಳನ್ನು ಆಡಿರುವೆ. ನಿನ್ನಂತಹ ದೊಡ್ಡವನ ಅಗತ್ಯ ನಮಗೆ ಸದ್ಯಕ್ಕಿಲ್ಲ. ನಮಗೆ ಬೇಕಾಗುವಷ್ಟು ಸೇನೆ ಮತ್ತು ವಿಕ್ರಮಿಗಳು ನಮ್ಮಲ್ಲಿ ಇದ್ದಾರೆ. ಹಾಗಾಗಿ ನೀನಿನ್ನು ಹೋಗಬಹುದು. ಹೋಗದಿದ್ದರೆ ನಮ್ಮ ರಕ್ಷಾ ಪಡೆ ನಿನಗೆ ದಾರಿ ತೋರಿಸುವ ವ್ಯವಸ್ಥೆ ಮಾಡುತ್ತದೆ.” ಎಂದು ಸಿಟ್ಟಿನಿಂದ ಹೂಂಕರಿಸುತ್ತಾ ಎಚ್ಚರಿಸಿದನು. ರುಕ್ಮನಿಗೆ ಇಲ್ಲೂ ಅಪಮಾನ ಆಗಿ ನಿಲ್ಲಲಾಗದೆ ಬಂದ ದಾರಿಯಲ್ಲಿ ಹಿಂದುರುಗಿ ಹೋಗ ಬೇಕಾಯಿತು. ಹೀನ ಮನೋಪ್ರವೃತ್ತಿಯ ರುಕ್ಮನಿಗೆ ಧರ್ಮ ಯುದ್ದದಲ್ಲಿ ಭಾಗಿಯಾಗುವ ಅವಕಾಶ ಸಿಗದೆ ಹೊರಟು ಹೋದನು.
ಇತ್ತ ಹಸ್ತಿನಾವತಿಯಲ್ಲಿ ಧೃತರಾಷ್ಟ್ರ ಭಯ, ವ್ಯಥೆ, ಆತಂಕಕ್ಕೆ ಒಳಗಾಗಿದ್ದಾನೆ. ಜನ್ಮತಃ ಅಂಧತ್ವ ಒದಗಿ ಅಸಹಾಯಕನಾಗಿ ಆಸ್ಥಾನದಲ್ಲಿ ಉಳಿಯಬೇಕಾದ ಅನಿವಾರ್ಯತೆ ಆತನದ್ದು. ಈಗ ಯುದ್ಧದ ವಾರ್ತೆಗಳನ್ನು ಕೇಳದೆ, ತನ್ನ ಮಕ್ಕಳು ಏನಾದರೊ ಎಂಬ ಭೀತಿ ಮನವನ್ನಾವರಿಸಿತ್ತು. ನನಗೆ ಕುರುಕ್ಷೇತ್ರದ ಸುದ್ದಿಗಳನ್ನು ತಿಳಿಸುವವರು ಯಾರು ಎಂದು ಯೋಚಿಸುತ್ತಿದ್ದನು. ಆಗ ವಿದುರ ಮತ್ತು ಸಂಜಯ ಜೊತೆಯಾಗಿ ಬಂದು, ಧೃತರಾಷ್ಟ್ರನ ಕಡು ದುಃಖ ಕಂಡು ಮರುಗಿದರು. ಧೃತರಾಷ್ಟ್ರನನ್ನು ಸಂತೈಸುವ ಪ್ರಯತ್ನ ಮಾಡತೊಡಗಿದರು. “ವಿದುರಾ! ನೀನೇನೊ ಹೇಳುತ್ತಿರುವೆ. ನಮ್ಮ ಪಕ್ಷದಲ್ಲಿ ಪೌರುಷದ ಕೊರತೆ ಇಲ್ಲ. ಭೀಷ್ಮಾಚಾರ್ಯರು, ದ್ರೋಣಾದಿಗಳು ಅಸದಳ ವೀರರು ಹೌದು. ಆದರೂ ದೈವಬಲವಿಲ್ಲದೊಡೆ ಜಯ ಒಲಿದು ಬಂದೀತೆ? ದುರ್ಮಾರ್ಗಿಯಾದ ನನ್ನ ಮಗನನ್ನು ಸರಿದಾರಿಗೆ ತರುವ ಯಾವ ಪ್ರಯತ್ನವೂ ಕೈಗೂಡದೆ ಈ ಸ್ಥಿತಿ ನಿರ್ಮಾಣವಾಗಿದೆ. ಅವನು ಸಮೀಪದಲ್ಲಿದ್ದಾಗ ಏನಾದರೊಂದು ಮಾಡಿ ನನ್ನನ್ನೂ ಪುತ್ರ ವ್ಯಾಮೋಹದ ಬಲೆಗೆ ಸಿಲುಕಿಸಿ ಬಿಡುತ್ತಿದ್ದ. ಆತನ ಕೈಗೊಂಬೆಯಾಗುತ್ತಿದ್ದ ನನ್ನ ಬುದ್ದಿಗೆ ಅದ್ಯಾವ ಮಂಕು ಕವಿಯುತ್ತಿತ್ತೊ! ಈಗ ಅವನು ಅರಮನೆ ತೊರೆದು ರಣಧಾರುಣಿ ಸೇರಿದ ಸಮಯ ನನ್ನ ಬುದ್ದಿಯನ್ನು ನೆನೆದು ಅತೀವ ದುಃಖವೂ, ಪಶ್ಚಾತ್ತಾಪವೂ ಆಗುತ್ತಿದೆ. ಆ ದುರ್ಯೋಧನ ಒಬ್ಬನಿಂದಾಗಿ ನನಗೆ ನೂರು ಮಕ್ಕಳಿದ್ದರೂ ಕುರುಕ್ಷೇತ್ರದ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಾರೊ ಎಂಬ ಭಯವಾಗುತ್ತಿದೆ. ಮಾತ್ರವಲ್ಲ ಸದ್ಗುಣಶೀಲ ಭೀಷ್ಮರು, ಜ್ಞಾನ ಸಿಂಧು ಗುರು ದ್ರೋಣರು ಇನ್ನೂ ಅನೇಕ ನಿರಪರಾಧಿ ವೀರಾಧಿವೀರರು, ಸೇನೆ ಎಲ್ಲವೂ ಆಹುತಿಯಾಗಲಿದೆಯೋ ಎಂಬ ಆತಂಕ ನನ್ನನ್ನು ಸುಡುತ್ತಿದೆ. ಅತ್ತ ಪಾಂಡವರು ಮಹಾಮಹಿಮ ವಾಸುದೇವನ ಜೊತೆಯಾಗಿ ಬೃಹತ್ ಸೇನೆಯ ಜೊತೆ ಕುರುಕ್ಷೇತ್ರದಲ್ಲಿ ಸನ್ನಿಹಿತರಾಗಿದ್ದಾರಂತೆ. ಅಯ್ಯೋ ಪುಣ್ಯಭೂಮಿ ಆ ಕುರುಕ್ಷೇತ್ರ. ಚಂದ್ರ ವಂಶಜರಿಂದ ಅದೆಷ್ಟೊ ಮಹಾಯಜ್ಞಗಳು ನೆರವೇರಿದ ದಿವ್ಯ ಭೂಮಿಯದು. ಇಂದು ರಣಯಜ್ಞ – ಮಾರಣ ಹೋಮವೋ ಎಂಬಂತೆ ಸಾಗಲಿರುವ ಈ ಸಮರಕ್ಕೆ ಕ್ಷೇತ್ರವಾದದ್ದು ದುರಂತವಲ್ಲವೆ? ಅಲ್ಲೀಗ ಏನಾಗುತ್ತಿದೆಯೋ! ನನಗೆ ನೋಡುವ ಭಾಗ್ಯವಿಲ್ಲ, ಕೇಳಿಯಾದರೂ ತಿಳಿಯೋಣ ಎಂದರೆ ಆ ಯೋಗವೂ ಇಲ್ಲದಾಗಿದೆ. ಯಾರಿಂದ ತಿಳಿದುಕೊಳ್ಳಲಿ?” ಎಂದು ತನ್ನ ಮನದಾಳದ ತೊಳಲಾಟವನ್ನು ಬಿಚ್ಚಿ ಮುಕ್ತವಾಗಿ ಹೇಳಿಕೊಂಡನು. ಆಗ ವಿದುರನು “ಮಹಾರಾಜಾ! ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ಏನು ಆಗಬೇಕಿತ್ತೊ ಅದನ್ನು ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅದು ಆಗಿಯೆ ಆಗಲಿಕ್ಕಿದ್ದದ್ದು ಮತ್ತು ಆಗಿಯೆ ಆಗುತ್ತದೆ ಕೂಡ. ಹಾಗಾಗಿ ಅಪರಾಧಿ ಭಾವ ಹೊಂದುವ ಅಗತ್ಯವಿಲ್ಲ. ಮತ್ತೂ ಹೇಳುವುದಾದರೆ ಅವರವರ ಪ್ರಾರಬ್ಧ ಕರ್ಮದ ಫಲ ಏನಿದೆಯೊ ಅದನ್ನು ಅನುಭವಿಸದೆ ವಿಧಿಯಿಲ್ಲ. ಈಗ ನಿನ್ನ ಮನಸ್ಸನ್ನು ಧೃಢಗೊಳಿಸಿ ಏನಾದರೂ ಅದನ್ನು ಅರಗಿಸಿಕೊಳ್ಳುವ ಮನೋಬಲ ಒಗ್ಗೂಡಿಸಿ ಪ್ರಬಲನಾಗಿ ಸಿದ್ಧನಾಗಿರು. ನಿಯತಿಯ ನಿಯಮದಂತೆ ನಾವೆಲ್ಲ ವ್ಯವಹರಿಸಿದ್ದೇವೆ ಎಂದಷ್ಟೆ ನಾನು ಹೇಳಬಲ್ಲೆ. ಇನ್ನು ನಿನ್ನ ಬಯಕೆಯಾದ ರಣರಂಗದ ವಾರ್ತೆಯ ಕುರಿತಾಗಿ ಯೋಚಿಸಿ ದಾರಿ ಕಂಡುಕೊಳ್ಳೋಣ” ಎಂದನು.






















































