ಭಾಗ – 315
ಭರತೇಶ್ ಶೆಟ್ಟಿ , ಎಕ್ಕಾರ್

ಆಹಾ ಕೃಷ್ಣಾರ್ಜುನರ ಆಗಮನದ ಸೊಬಗೇನು. ನೋಡಲು ಕಂಗಳೆರಡು ಸಾಲದು. ಎಲ್ಲವೂ ದಿವ್ಯ ಶ್ರೇಷ್ಠ ಉತ್ಕೃಷ್ಠ ಆಗಿರುವಂತಹುದು ಸಮಾಹಿತಗೊಂಡಿದೆ. ಅಗ್ನಿದತ್ತವಾದ ದಿವ್ಯ ರಥ, ಕಟ್ಟಿದ ನಾಲ್ಕು ಕುದುರೆಗಳು ಅತ್ಯಮೋಘ, ಪೀತಾಂಬರವನ್ನುಟ್ಟು, ತುಲಸಿಮಾಲೆ ಧರಿಸಿ, ಸರ್ವಾಲಂಕಾರ ಭೂಷಿತನಾಗಿ, ನವಿಲುಗರಿಯುಳ್ಳ ಮುಕುಟಧರ ಕುದುರೆಗಳ ವಾಘೆಯನ್ನು ಕೈಯಲ್ಲಿ ಹಿಡಿದು, ಯುದ್ದ ಭೂಮಿಯಾದರೂ ಮುಖದಲ್ಲಿ ನಸುನಗು ಬೀರುತ್ತಾ ಸುಪ್ರಸನ್ನನಾಗಿ ಕುಳಿತಿರುವ ವಾಸುದೇವ ಶ್ರೀಕೃಷ್ಣನ ಸೊಬಗಿನ ದರುಶನ ರಮಣೀಯವಾಗಿತ್ತು. ರಥಿಕನಾಗಿ ಪಾರ್ಥ – ಕವಚ ತೊಟ್ಟು, ದಿವ್ಯಾಸ್ತ್ರಗಳಾಗುವ ಅಸ್ತ್ರಗಳ ಅಕ್ಷಯ ತೂಣಿರ ಬಿಗಿದು, ದಿವ್ಯ ಧನುಸ್ಸು ಗಾಂಡೀವವನ್ನು ಧರಿಸಿ ನಿಂತ ಗಾಂಭೀರ್ಯದ ನಿಲುವು ವೈರಿಯಾದರೂ ನಿಬ್ಬೆರಗಾಗಿ ಕಾಣಿಸುವಂತಹ ವ್ಯಕ್ತಿತ್ವ. ರಥಾಗ್ರದಲ್ಲಿ ವಿರಾಜಿಸುವ ಕಪಿಧ್ವಜದಲ್ಲಿ ಸಾನಿಧ್ಯಗೊಂಡಿರುವ ರಾಮದಾಸ ಹನುಮ. ಹೀಗೆ ಅಡಿಯಿಂದ ಮುಡಿಯವರೆಗೆ ತೇರಿನಂತೆ ಕಂಗೊಳಿಸುತ್ತಿದೆ. ನಯನ ಮನೋಹರವೂ ಅಸದೃಶವೂ ಆಗಿರುವ ಈ ನೋಟ ಅತ್ಯಾಕರ್ಷಣಿಯವಾಗಿದೆ. ಯುದ್ದ ಮಾಡದೆ ಎದುರಾಳಿ ಮನ ಸೋತು ಶರಣಾಗುವಂತಹ ಸೆಳೆತ, ಸೌಂದರ್ಯ, ತೇಜಸ್ಸು ಒಗ್ಗೂಡಿ ಮೈಮರೆಯುವಂತೆ ಮಾಡಿಸುತ್ತಿದೆ.
ರಥ ಮುಂಬರಿದು ಬರುತ್ತಿದ್ದಂತೆ ಎದುರಾಗಿರುವ ವೈರಿ ಸೇನೆಯನ್ನು ಕಂಡು ಅರ್ಜುನ ತನ್ನ ಭಾವನೂ, ಮನದ ದೇವನೂ, ಬಂಡಿಯ ಭೋವನೂ ಆಗಿರುವ ವಾಸುದೇವ ಕೃಷ್ಣನನ್ನುದ್ದೇಶಿಸಿ “ಭಗವಂತಾ! ಯುದ್ದಾರಂಭಕ್ಕೆ ಮೊದಲಾಗಿ, ನಮ್ಮ ಹಾಗೂ ಕೌರವ ಸೇನೆಯ ವೀರಾಗ್ರಣಿ ಯೋಧರನ್ನು ಒಮ್ಮೆ ನೋಡುವ ಕಾತರ ಮನ ಮಾಡಿದೆ. ಸಮುದ್ರ ಮಂಥನ ಕಾಲದಲ್ಲಿ ಇತ್ತಂಡಗಳ ಮಧ್ಯೆಯಿದ್ದ ಮಂದರಾದ್ರಿ ಪರ್ವತದಂತೆ ನಮ್ಮ ರಥವನ್ನು ಎರಡೂ ಸೇನೆಗಳ ಮಧ್ಯದವರೆಗೆ ಒಯ್ದು ನಿಲ್ಲಿಸಬಹುದೆ ಕೃಷ್ಣಾ” ಎಂದು ಬೇಡಿಕೊಂಡನು. ಅರ್ಜುನನ ಈ ಬೇಡಿಕೆಯನ್ನು ಕೇಳಿದ ಕೃಷ್ಣ ತಿರುಗಿ ಪಾರ್ಥನನ್ನೊಮ್ಮೆ ನೋಡಿ ನಸು ನಕ್ಕನು. ಆಗ ಆತನ ಕಂಗಳಿಂದ ಸೂರ್ಯನ ಕಿರಣಗಳಂತೆ ಹೊಳಪೊಂದು ಮಿಂಚಿತು. ರಥ ನಡೆಸಿ ಎರಡೂ ಸೇನೆಗಳ ನಡು ಮಧ್ಯಕ್ಕೆ ತಂದು ನಿಲ್ಲಿಸಿದನು.
ಪಾರ್ಥ ಎರಡೂ ಸೇನೆಗಳನ್ನು ನಿಧಾನವಾಗಿ ಅವಲೋಕಿಸುತ್ತಾ, ಸೂಕ್ಚ್ಮವಾಗಿ ಗಮನಿಸತೊಡಗಿದನು. ರಣತಂತ್ರದಂತೆ ಪಾಂಡವ ಸೇನೆ ವಜ್ರವ್ಯೂಹ ಬೆಸೆದು ನಿಂತರೆ, ಕೌರವ ಸೇನೆ ಸರ್ವತೋಭದ್ರ ವ್ಯೂಹವಾಗಿ ರಚಿಸಲ್ಪಟ್ಟಿದೆ. ಎರಡೂ ಪಕ್ಷಗಳನ್ನು ಮೇಲಿಂದ ನೋಡುವಾಗ ಹಾರುತ್ತಿರುವ ರಥ ಪತಾಕೆಗಳಿಂದ ವರ್ಣರಂಜಿತ ಹೂ ದೋಟದಂತೆ ಕಾಣುತ್ತಿದೆ. ಹೂಂಕರಿಸುವ ಯೋಧರು ಹಾಯುವ ಗೂಳಿಯಂತೆ ಬುಸುಗುಟ್ಟುತ್ತಾ ಮುನ್ನುಗ್ಗಲು ಸಜ್ಜಾಗಿದ್ದಾರೆ. ನಾನಾ ವಿಧದ ಆಯುಧಗಳು ಇಕ್ಕೆಲಗಳಲ್ಲೂ ಝಳಪಿಸುತ್ತಿವೆ. ಇದೆಲ್ಲವನ್ನೂ ಗಮನಿಸುವಾಗ ವೀರನಾದ ಕ್ಷತ್ರಿಯ ಯಾರಾಗಿದ್ದರೂ ತನ್ನೊಳಗೆ ಸಮರದ ಸಂಕಲ್ಪ ಮೂಡಿ ಸೆಟೆದು ನಿಂತು ರಣೋತ್ಸಾಹ ತುಂಬಿ ತುಳುಕಿಸುವಂತಿದೆ. ಆದರೆ ಅರ್ಜುನ ಮಾತ್ರ ಸೂಕ್ಷ್ಮವಾಗಿ ನೋಡುತ್ತಾ ಇದ್ದಾನೆ. ಆಗ ಶ್ರೀ ಕೃಷ್ಣ “ಅರ್ಜುನಾ! ಅಧರ್ಮಿಗಳ ಪಕ್ಷ ಅಮಿತವಾಗಿದೆ. ನೀನು ವಿರಮಿಸದೆ ಸವರುತ್ತಾ ಸಾಗಿ, ವೀರಾದಿವೀರರನ್ನೆಲ್ಲಾ ನಿಗ್ರಹಿಸಿ ಅಣ್ಣ ಧರ್ಮರಾಯನಿಗೆ ಹಸ್ತಿನೆಯ ರಾಜ ಸಿಂಹಾಸನವನ್ನು ಸ್ಥಿರ ಗೊಳಿಸಿಕೊಡಬೇಕು. ನಿನ್ನ ಶಸ್ತ್ರಾಸ್ತ್ರ ಸಂಚಯದ ಸದ್ವಿನಿಯೋಗದಿಂದ ಯೋಗ್ಯತೆ ಪ್ರದರ್ಶಿಸಲು ಕಾಲ ಒದಗಿ ಬಂದಿದೆ. ಹಾಗೆ ಮಾಡಿ ನೀನು ಕೃತಾರ್ಥನಾಗಬೇಕು.” ಎಂದು ಎಚ್ಚರಿಸಿ ವಿವರಿಸಿದ.
ಆದರೆ ಯುದ್ದಕ್ಕೆ ರೋಷದಿಂದ ಬಂದಿದ್ದ ಅರ್ಜುನ ತಾನು ಯಾರ ಜೊತೆಗೆಲ್ಲಾ ಹೋರಾಡಬೇಕು ಎಂದು ಕ್ಷತ್ರಿಯನಾಗಿ ಯೋಚಿಸಿ ಎದುರಾಳಿಗಳನ್ನು ಒಬ್ಬೊಬ್ಬರನ್ನಾಗಿಯೆ ನೋಡತೊಡಗಿದನು. ರೋಷದ ಆವೇಶ ತಣಿಯಿತು – ಉದ್ವೇಗ ಮಣಿಯಿತು. ಅಂತಃಕರಣ ಕರಗಿತು. ಅರ್ಜುನನು ದೈನ್ಯತೆಯಿಂದ ನಿಸ್ತೇಜನಾದಂತೆ ವರ್ತಿಸುವುದನ್ನು ಕಂಡು ಶ್ರೀಕೃಷ್ಣ ಮತ್ತೆ ಪಾರ್ಥನನ್ನು ಜಾಗೃತಗೊಳಿಸುತ್ತಾ”ಹೇ ಅರ್ಜುನಾ, ಇನ್ನು ತಡ ಮಾಡಬೇಡ. ಗಾಂಡೀವದ ಹೆದೆಯೇರಿಸು – ಸಮರವೀಣೆಯ ಶ್ರುತಿಯನ್ನೆಬ್ಬಿಸು. ಧನುಷ್ಟೇಂಕಾರದ ಧ್ವನಿ ಚತುರ್ದಿಕ್ಕುಗಳಲ್ಲೂ ಪ್ರತಿಧ್ವನಿಸಲಿ. ಎದುರಾಳಿಗಳ ಎದೆ ನಡುಗಿಸುವಂತಾಗಲಿ” ಎಂದನು.
“ಕೃಷ್ಣಾ! ಯಾಕಾಗಿ ಈ ಯುದ್ದ ಎಂದು ಮನಸ್ಸು ವ್ಯಥೆಗೊಳಗಾಗುತ್ತಿದೆ. ನಾನು ಹೋರಾಡಿ ಗೆಲ್ಲಬೇಕಾಗಿರುವುದು – ಕೊಲ್ಲ ಬೇಕಾಗಿರುವುದು ಯಾರನ್ನು? ಎತ್ತಿ ಆಡಿಸಿ ಬೆಳೆಸಿದ ಪ್ರೀತಿಯ ಅಜ್ಜ ಭೀಷ್ಮಾಚಾರ್ಯರನ್ನೋ? ತನ್ನ ಮಗನಿಗಿಂತಲೂ ಮಿಗಿಲಾದ ಪ್ರೀತಿ ಮಮತೆಯಿಂದ ವಿದ್ಯಾದಾನ ಮಾಡಿದ ಗುರು ದ್ರೋಣಾಚಾರ್ಯರನ್ನೋ? ಅಲ್ಲ ಗುರು ಕೃಪಾಚಾರ್ಯರನ್ನೋ? ಮಾತ್ರವಲ್ಲ ಮಾವ ಶಲ್ಯ ಭೂಪತಿಯನ್ನು ಹೇಗೆ ದಂಡಿಸಲಿ? ಇನ್ನು ದುರ್ಯೋಧನಾದಿ ಕೌರವರು ಯಾರು? ದೊಡ್ಡಪ್ಪನ ಮಕ್ಕಳು – ನನ್ನ ಸಹೋದರರು. ಬಂಧುಗಳು ಆಗಿರುವ ಇವರೆಲ್ಲರನ್ನೂ ಕೊಂದರೆ ಏನು ಸುಖ ಒದಗೀತು? ಬಂಧು ಹತ್ಯಾ ದೋಷ ಬಾರದೆ ಪರಮಾತ್ಮ? ನಶ್ವರವಾದ ಈ ಮಾನವ ಜನುಮದಲ್ಲಿ ಹುಟ್ಟಿರುವ ನಾನು ರಕ್ತದಲ್ಲಿ ಕೈ ತೊಳೆಯಬೇಕೆ? ಈ ಬಂಧುಗಳ ಪರಿವಾರ ಅನಾಥವಾಗಲು ಕಾರಣನಾಗಿ, ವಿಯೋಗದ ಬೇಗೆಯಲ್ಲಿ ಬೇಯುವ ಆ ಸಂಸಾರಗಳ ಕಣ್ಣೀರ ಶಾಪಕ್ಕೆ ಗುರಿಯಾಗಲಾರೆನೆ? ಕೃಷ್ಣಾ! ಯಾಕೋ ನನ್ನ ಶರೀರ ಕಂಪಿಸುತ್ತಿವೆ. ಕರಗಳು ದುರ್ಬಲವಾಗಿ ನಡುಗುತ್ತಾ ಗಾಂಡೀವ ಎತ್ತಲಾಗದೆ ಜಾರುತ್ತಿದೆ. ಕಾಲುಗಳು ನಿತ್ರಾಣವಾಗಿ ಶರೀರವನ್ನೆತ್ತಿ ನಿಲ್ಲಿಸಿರಲೂ ಅಸಾಧ್ಯವಾಗುತ್ತಿದೆ. ಹೃದಯ ಹಿಂಡಿದಂತೆ ವೇದನೆಯಾಗುತ್ತಿದೆ. ನಮ್ಮ ಪೋಷಕರು, ಪಾಲಕರು, ಬಂಧುಗಳೂ ಆಗಿರುವ ಈ ಸೇನೆಯನ್ನು ಹೇಗೆ ವೈರಿಗಳೆಂದು ಭ್ರಮಿಸಲಿ? ಈ ಆತ್ಮೀಯರನ್ನು ಕೊಂದರೆ ನನಗೇನು ಪ್ರಾಪ್ತವಾಗಲಿದೆ? ಪಾತಕವೇ? ಮಹಾಪಾಪವೇ? ಬೇಡ ಕೃಷ್ಣಾ ನನಗೆ ಈ ಯುದ್ದವೇ ಬೇಡ. ಈ ಯುದ್ಧ ಮುಖೇನ ಸಾಧಿಸಲಿರುವ ಸಾಮ್ರಾಜ್ಯವೂ ಬೇಡ, ಸಂಪತ್ತೂ ಬೇಡ. ಇಂತಹ ಅಧಿಕಾರ ಪ್ರಾಪ್ತಿಗಾಗಿ ನಮ್ಮ ಬಂಧುಗಳನ್ನು ನಾನು ಕೊಲ್ಲಲಾರೆ ಕೃಷ್ಣಾ.. ಸರ್ವಥಾ ಕೊಲ್ಲಲಾರೆ” ಎಂದು ಕಣ್ಣೀರ್ಗರೆಯುತ್ತಾ ಗಾಂಡೀವವನ್ನು ಕೆಳಗಿರಿಸಿ ಮಂಡಿಯೂರಿ ಕುಳಿತನು ಅರ್ಜುನ. ಕೃಷ್ಣನಿಗೆ ಕೈ ಜೋಡಿಸಿ ಮುಗಿಯುತ್ತಾ “ಕೃಷ್ಣಾ! ನಾನು ನನ್ನ ಬಂಧುಗಳನ್ನು ಕೊಲ್ಲಲಾರೆ ಕೃಷ್ಣಾ…!” ಎಂದು ಮಮ್ಮಲ ಮರುಗಿ, ಬಸವಳಿದು ಬೇಡತೊಡಗಿದನು.
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರ್



















