27.8 C
Udupi
Sunday, February 1, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 313

ಭರತೇಶ ಶೆಟ್ಟಿ, ಎಕ್ಕಾರ್

“ಅಜ್ಜಾ! ನೀವು ಏನು ಬೇಕಾದರೂ ಕೇಳಿ, ನಿಮ್ಮ ಆಜ್ಞಾನುವರ್ತಿಯಾಗಿ ನಡೆಯಲು ಸಿದ್ಧನಿದ್ದೇನೆ. ಆದರೆ ಯುದ್ದದ ವಿಷಯದಲ್ಲಿ ಬದಲಾವಣೆ ಬಯಸಬೇಡಿ. ಪಾಂಡವ – ಕೌರವರಾದ ನಮ್ಮೊಳಗಿನ ವೈರತ್ವ ಬೆಳೆದು ಹೆಮ್ಮರವಾಗಿದೆ. ಪ್ರತಿಷ್ಟೆಯ ಪಣವಾಗಿ ನಿಂತಿದೆ. ಈ ಹೊತ್ತು ನಾನು ಹಿಂದಿರುಗಿ ಒಪ್ಪಂದಕ್ಕೆ ಬರುವ ಯೋಚನೆ ಇಲ್ಲ. ದಯವಿಟ್ಟು ನಿಮ್ಮ ಮಾತನ್ನು ತಿರಸ್ಕರಿಸುತ್ತಿದ್ದೇನೆ ಎಂದು ತಿಳಿಯಬಾರದು. ಈ ವಿಚಾರದಲ್ಲಿ ನಿಮ್ಮ ಮಾತು ಮಾತ್ರವಲ್ಲ ನನ್ನ ತಂದೆಯ ಮಾತನ್ನೂ ನಾನು ಸ್ವೀಕರಿಸಲಾರೆ. ಇನ್ನೇನಿದ್ದರೂ ಯುದ್ದ ಒಂದೇ – ಅದೇ ನಡೆಯುವುದು – ನಡೆಯಲಿರುವುದು ಕೂಡ. ನಿಮಗೀಗ ನನ್ನನ್ನು ಬೈಯುವ ಮನಸ್ಸಾಗಿರಬಹುದು. ಹಠಮಾರಿ, ಛಲವಾದಿ, ಅಧರ್ಮಿ, ಕುಲನಾಶಕ, ಪಾಪಿ, ದುಷ್ಟ, ವಿಕೃತ, ಕೆಟ್ಟವ ಹೀಗೆ ಏನು ಬೇಕಾದರೂ ಕರೆಯಿರಿ, ನನಗೆ ಬೇಸರವಿಲ್ಲ. ಅಂತಹ ಯಾವುದೂ ನನಗೆ ನಿಂದಾವಾಕ್ಯವಾಗಿ ಕಾಣದು. ಈ ದುರ್ಯೋಧನನಿಗೆ ಧರ್ಮ ಯಾವುದು – ಅಧರ್ಮ ಯಾವುದು? ನ್ಯಾಯ – ಅನ್ಯಾಯ ಏನು? ಉಚಿತಾನುಚಿತಗಳ್ಯಾವುದು ಎಂಬ ಸ್ಪಷ್ಟ ಜ್ಞಾನವಿದೆ. ನೀವು ಬಯಸುವ ಧರ್ಮ ಪಥದಲ್ಲಿ ಸಾಗುವ ಇಚ್ಚೆ ನನಗಿಲ್ಲ. ನಾನೇನು ಬಯಸಿದ್ದೇನೋ, ನನಗೆ ಹಿತವಾಗುವ ದಾರಿ ಕಂಡು ಕೊಂಡಿದ್ದೇನೋ ಅದರಲ್ಲಿಯೆ ಕ್ರಮಿಸುತ್ತೇನೆ. ಈಗಾಗಲೇ ನಾನು ಸಾಗುತ್ತಿರುವ ದಾರಿಯಲ್ಲಿ ಬಹುದೂರ ಬಂದಾಗಿದೆ. ಜೀವನ ಚಕ್ರಾಕಾರದಂತೆ ಎಂದು ಬಲ್ಲವರು ಹೇಳಿದ್ದಾರೆ. ಜೀವನ ಯಾನ ಆರಂಭದಲ್ಲಿ ನಾನು ಹೊರಟಿರುವುದು ವಿರುದ್ಧ ದಿಕ್ಕನ್ನು ಉಪಕ್ರಮಿಸಿ. ಇನ್ನು ಹಿಂದಿರುಗಿ ಹೋಗೋಣವೇ? ಅದು ಬಹುದೂರದ ಮಾತಾಗುತ್ತದೆ. ಹೀಗೆಯೆ ಮುಂದುವರಿದರೆ ನನ್ನ ಗುರಿ ಸಮೀಪದಲ್ಲಿದೆ. ಪಾಂಡವರಿಗೆ ನ್ಯಾಯ, ಧರ್ಮ ಪಾಲನೆಯ ಮುಖೇನ ಬದುಕುವ ಹುಚ್ಚು. ಸುಖ ಅನುಭವಿಸಬೇಕಾದ ಆಯುವನ್ನು ವ್ಯರ್ಥಗೊಳಿಸಿ ಧರ್ಮಕ್ಕಾಗಿ ಹೋರಾಡುತ್ತಾ ಸವೆಸಿದ್ದಾರೆ. ನಾನು ಹಾಗಲ್ಲ ಬಯಸಿದ ಸುಖ, ಸಾಮ್ರಾಜ್ಯ, ಅಧಿಕಾರದೊಂದಿಗೆ ಬದುಕಿದ್ದೇನೆ. ಇನ್ನೂ ಹಾಗೆಯೆ ಬದುಕುತ್ತೇನೆಯೆ ಹೊರತು ಶರಣಾಗಲಾರೆ. ಪಾಂಡವರಿಗೆ ಅಹಿಂಸೆ ಹಿತವಾದದ್ದು, ಈಗಲೂ ಅದನ್ನು ಬಯಸಿ ಒಂದು ಪಕ್ಷ ಅವರು ಏನಾದರು ಯುದ್ದ ತೊರೆಯುವ ನಿರ್ಧಾರಕ್ಕೆ ಬಂದರೂ ಬರಬಹುದು ಹೊರತು, ಈ ದುರ್ಯೋಧನ ಆ ಕುರಿತಾಗಿ ಕನಿಷ್ಟ ಕಲ್ಪನೆಯನ್ನೂ ಮಾಡಲಾರನು. ನಿಷ್ಪಾಂಡವ ಪೃಥ್ವಿಯ ಕನಸನ್ನು ಕೈಬಿಡಲಾರೆನು. ಒಂದು ವೇಳೆ ಅನ್ಯರು ಯಾರದ್ದಾದರೂ ವಿಚಾರದಿಂದ ಕಲಹ ಎದ್ದಿದ್ದರೆ ಸಂಧಾನಕ್ಕೆ ನೀವು ಮನ ಮಾಡಿ ಯಶಸ್ಸು ಕಾಣಬಹುದಿತ್ತು. ಆದರೆ ನನ್ನ ನಿರ್ಧಾರ ಧೃಡವಾಗಿದೆ ಅಜ್ಜಾ. ಹಸ್ತಿನಾವತಿಯ ಸಿಂಹಾಸನದ ರಕ್ಷಣೆಯ ಹೊಣೆ ಹೊತ್ತವರು ನೀವು ಎಂದು ನನಗೆ ತಿಳಿದಿದೆ. ನಿಮಗೆ ಪಾಂಡವ ಕೌರವ ಎಂಬ ಭೇದವಿಲ್ಲ. ಇತ್ತಂಡಗಳೂ ನಿಮಗೆ ಸಮಾನ ಎಂದು ಹೇಳುತ್ತಿರುವಿರಿ. ಪಾಂಡವರಿಗೆ ಆ ಕೃಷ್ಣನ ಸರ್ವರಕ್ಷೆ ಇದೆ ಎಂದೂ ತಿಳಿದಿರುವಿರಿ. ಹಾಗಿದ್ದರೆ ನಿಮಗೆ ಸಮಾನ ಭಾವವಿರುವ ನೀವು ಹೇಳಿ, ಕೌರವರಾದ ನಮ್ಮ ರಕ್ಷಣೆ ಮಾಡುವವರು ಯಾರು ಅಜ್ಜಾ? ನೀವೋ ಕೃಷ್ಣನನ್ನು ದೇವನೆಂದು ಪೂಜಿಸುವ ಪರಮ ಭಕ್ತರು. ಮಾತ್ರವಲ್ಲ ನಿಮ್ಮ ಮರಣ ನಿಮ್ಮ ಇಚ್ಚೆಯೊಳಗಿದೆ. ಸ್ವೇಚ್ಛಾ ಮರಣಿಯಾದ ನೀವಿರುವವರೆಗೆ ಕೌರವರಾದ ನಮಗೆ ಭದ್ರತೆಯಿದೆ. ‘ಮಮ ಪ್ರಾಣಹಿ ಪಾಂಡವಃ’ ಎಂದು ಹೇಳಿ ಪಾಂಡವರೈವರು ನನ್ನ ಪಂಚ ಪ್ರಾಣಗಳು ಎಂದಿರುವ ಕೃಷ್ಣ ಅವರ ರಕ್ಷಣೆ ಮಾಡುತ್ತಾನೆ. ನೀವು ಹೇಳಿದಂತೆ ಪಾಂಡವ ಕೌರವರು ನಿಮಗೆ ಸಮಾನರು ಆಗಿದ್ದರೆ, ಇತ್ತಂಡಗಳಲ್ಲಿ ಯುದ್ದಕ್ಕೆ ನಿಂತಿರುವ ನಮ್ಮನ್ನು ಎಳವೆಯಲ್ಲಿ ನೀವು ಎತ್ತಿ ಆಡಿಸಿ ಬೆಳೆಸಿದವರಲ್ಲವೆ? ಕೃಷ್ಣನ ರಕ್ಷಣೆಯಲ್ಲಿ ಪಾಂಡವರಿದ್ದಾರೆ, ನಮಗೆ ಯಾರ ರಕ್ಷಣೆಯೂ ಇಲ್ಲದೆ ರಣಧಾರುಣಿಯಲ್ಲಿ ಮಾರಿಗೌತಣವಾಗುವ ಕ್ಷಣ ನಿಮಗಿಷ್ಟವಿದ್ದರೆ ಹಾಗೆಯೆ ಆಗಲಿ. ನನ್ನ ಪ್ರಾರ್ಥನೆ ಮನ್ನಿಸಿ ಸೇನಾಧಿಪತ್ಯ ವಹಿಸಿ ನಮ್ಮ ರಕ್ಷಕರಾದರೆ ಬಹು ಸಂತೋಷ. ಹಾಗೂ ನೀವು ಒಪ್ಪದೆ ಹಿಂದುಳಿದರೂ ಯುದ್ದ ಆಗಿಯೆ ಆಗುತ್ತದೆ. ಮುಂದಿಟ್ಟ ಅಡಿ ಹಿಂದಿಡುವ ಯೋಚನೆ ನನಗಿಲ್ಲ. ಪಾಂಡವ ಕೌರವರ ಮಧ್ಯೆ ಬಾಲ್ಯದಿಂದಲೂ ಜಗಳ ಆಗುತ್ತಲೆ ಬಂದಿದೆ. ಆಗಲೂ ಪಾಂಡವರು ನಮ್ಮನ್ನು ಬೆಂಬತ್ತಿ ಹೊಡೆಯುವಾಗ ತಡೆದು ರಕ್ಷಿಸಿದವರು ನೀವು. ಈಗ ಪಾಂಡವರು ನಮ್ಮನ್ನು ಘಾತಿಸಲು ಮುಂದಾಗುವಾಗ ನಿಮಗೆ ಸಹಿಸಿ ಕೂರಲು ಸಾಧ್ಯವಾಗುವುದಾದರೆ ನನಗೆ ಆಕ್ಷೇಪವಿಲ್ಲ. ನನ್ನ ಅಪ್ಪ ಜನ್ಮಾಂಧನಾಗಿ ಹುಟ್ಟಿದ್ದು ನಮ್ಮ ರಕ್ಷಕನಾಗಿ ರಣರಂಗಕ್ಕೆ ಬರಲಾರನು. ಅಜ್ಜನಾದ ನೀವೂ ಪಕ್ಷಪಾತಿಯಾಗಿ ವ್ಯವಹರಿಸಿ ನಮ್ಮನ್ನು ಅನಾಥರಾಗಿಲು ಬಯಸಿದರೆ ಅದು ನಮ್ಮ ವಿಧಿ ಎಂದು ಮುಂದುವರಿಯುವೆ. ಆದರೂ ನನ್ನ ಅಂತರ್ಯ ಹೇಳುತ್ತಿದೆ, ಪಿತಾಮಹ ಭೀಷ್ಮಾಚಾರ್ಯರು ಕರ್ತವ್ಯದಿಂದ ವಿಮುಖರಾಗಿ ಬದುಕಿದವರಲ್ಲ – ಬದುಕಲಾರರು. ಹಾಗಾಗಿ ನೀವೇ ನಮ್ಮ ಸೇನೆಯ ನೇತಾರನಾಗಿ ನಿಂತು ರಕ್ಷಣೆಯ ಭಾರ ತನ್ನದಾಗಿಸುವಿರಿ ಎಂದು ವಿಶ್ವಾಸ ಹೊಂದಿದವನಾಗಿ ನಂಬಿದ್ದೇನೆ. ಅಂತಿಮವಾಗಿ ನಿಮ್ಮಲ್ಲಿ ಮತ್ತೆ ಬೇಡುತ್ತಿದ್ದೇನೆ. ಅಜ್ಜಾ, ನಮ್ಮನ್ನು ನೀವೇ ರಕ್ಷಿಸಿ ಉದ್ಧರಿಸಬೇಕು” ಎಂದು ಹೇಳುತ್ತಾ ಪ್ರಾರ್ಥಿಸಿದನು.

ಭೀಷ್ಮಾಚಾರ್ಯರು ಮೊಮ್ಮಗನ ಮಾತು ಕೇಳಿ “ಮಗನೇ, ಈ ಮರ್ತ್ಯಲೋಕದಲ್ಲಿ ಜನಿಸಿದ ಯಾರೂ – ಯಾವುದೂ ಮೃತ್ಯುವಿನಿಂದ ಬಾಹಿರನಾಗಲಾಗದು. ತುಸು ಹೆಚ್ಚು ಕಡಿಮೆ ಹೊರತು ಜನನ ಪಡೆದ ಪ್ರತಿಯೊಂದು ಮರಣದಲ್ಲಿ ಪರ್ಯಾವಸಾನಗೊಳ್ಳಲೇ ಬೇಕು. ನೀನೆಂದಂತೆ ನಾನು ಇಚ್ಚಾಮರಣದ ವರ ಹೊಂದಿರುವೆ. ಅಂದರೆ ಇಚ್ಚೆಯಿಂದಲಾದರೂ ನನಗೆ ಮರಣ ಎಂಬುವುದು ಇದೆ. ಅದನ್ನು ಇಚ್ಚಿಸುವ ಅವಕಾಶವೂ ನನ್ನದೇ ಆಗಿದೆ. ಇರಲಿ ಸಮಯ ಬಂದಾಗ ಇಚ್ಚೆ ಅವರವರ ಭಾವದಂತೆ ಮೂಡಿ ಬರುತ್ತದೆ. ಜೀವನಚಕ್ರದ ಬಗ್ಗೆ ನೀನು ವಿವರಿಸಿದೆ. ಹಾಗೆಯೆ ಕಾಲ ಚಕ್ರವೂ ತಿರುಗುತ್ತಿದೆ. ಕಾಲನ ಲೀಲೆಯೊಳಗೆ ಎಲ್ಲವೂ ಲೀನವಾಗುತ್ತಾ ಹೋಗುತ್ತಿರಬೇಕು. ನಿನಗೆ ನಾನು ಬುದ್ದಿವಾದ ಹೇಳುವ ಈ ಪ್ರಯತ್ನ ಮಾಡಲು ಶ್ರೀ ಕೃಷ್ಣನೇ ಕಾರಣ. ನನ್ನ ಬದುಕಿನಲ್ಲಿ ದೇವನಾಗಿ ಕಂಡ ಆತನಲ್ಲಿ ಪ್ರಳಯಸ್ವರೂಪದ ಸಂಭವನೀಯ ಯುದ್ಧವನ್ನು ತಡೆಯುವಂತೆ ಬೇಡಿಕೊಂಡೆ. ಆಗ ಶ್ರೀ ಕೃಷ್ಣ ‘ನಿರ್ಣಯ – ನಿರ್ಧಾರ ಎರಡೂ ನಿಮ್ಮಲ್ಲಿಯೆ ಇದೆ. ನೀವೇನು ನಿರ್ಣಯಿಸಿ ನಿರ್ಧರಿಸಿದರೂ ಪಾಂಡವರಿಗೆ ಅದು ಸಮ್ಮತವಾಗಲಿದೆ. ಹಾಗಿರುತ್ತಾ ನೀವು ಮಗದೊಮ್ಮೆ ನಿಮ್ಮ ಮೊಮ್ಮಗನಿಗೆ ನೀತಿಯ ಮಾತು ಹೇಳಿ, ಭೀತಿಯ ಯುದ್ಧವನ್ನು ತಡೆಯುವ ಪ್ರಯತ್ನ ಮಾಡಿ ನೋಡಿ. ನಿಮ್ಮ ಮಾತು ಕೇಳಿ ಕೌರವ ಒಪ್ಪಿದರೆ ಪಾಂಡವರೂ ಬಯಸುತ್ತಿರುವಂತೆ ಯುದ್ದವಾಗದೆ ಕ್ಷೇಮವಾಗಲಿದೆ’ ಎಂದು ಹೇಳಿ ಅಚ್ಯುತ ಆತನಿಗೆ ಚ್ಯುತಿ ಬಾರದಂತೆ ಹೊಣೆಯನ್ನು ನನ್ನ ಹೆಗಲೇರಿಸಿ ಹೋಗಿದ್ದಾನೆ. ಅಸಾಧ್ಯವೆಂದು ತಿಳಿದಿದ್ದರೂ ಮನಸ್ಸು ಕೇಳದೆ ಸೋತು ನಿನ್ನಲ್ಲಿ ಆತ್ಮ ನಿವೇದನೆ ಮಾಡಿಕೊಂಡಿದ್ದೇನೆ. ಆಗಲಿ, ನಿನಗೆ ಕೇವಲ ಯುದ್ದವೇ ಬೇಕಾಗಿರುವುದು. ಪರಿಣಾಮದ ಬಗ್ಗೆ ವಿವೇಚಿಸುವ ವ್ಯವಧಾನ ನಿನಗಿಲ್ಲವಾಗಿ ಹೋಗಿದೆ ದುರ್ಯೋಧನಾ! ನಿನಗೆ ಬೇಕಾಗಿರುವುದು ನನ್ನ ಸೇನಾಧಿಪತ್ಯವಷ್ಟೇ ಅಲ್ಲವೆ? ಅದೂ ನಿನ್ನ ಸ್ವಾರ್ಥದ ಹಠ ಸಾಧನೆಗಾಗಿ. ಅದರಿಂದ ಏನಾದೀತು ಎಂಬ ಯೋಚನೆಯನ್ನೂ ನೀನು ಮಾಡಲಾರೆ. ಪಾರ್ಥಸಾರಥಿಯಾಗಿ ಕೃಷ್ಣ – ಗಾಂಡೀವಧಾರಿಯಾಗಿ ಅರ್ಜುನ ದಿವ್ಯ ರಥವೇರಿ ಬಂದರೆ ತಡೆದು ನಿಲ್ಲಿಸಲು ಯಾರಿಂದಲಾದರೂ ಸಾಧ್ಯವಿದೆಯೆ? ಸಕಲ ಜಯಗಳೂ, ಶ್ರೇಯಸ್ಸುಗಳೂ ನದಿಯಂತೆ ಹರಿದು ಕೃಷ್ಣಾರ್ಜುನರೆಂಬ ಸಾಗರದತ್ತ ಧಾವಿಸಿ ಹರಿಯಲಿದೆ ಎನ್ನುವುದು ಗಂಗಾಪುತ್ರನಾದ ನನಗೆ ಸುಸ್ಪಷ್ಟವಾಗಿ ಗೋಚರಿಸುತ್ತಿದೆ. ನನಗೀಗ ಅರ್ಥವಾಗದೆ ಉಳಿದಿರುವುದೇನೂ ಇಲ್ಲ. ಆದರೆ ಒಂದು ಮಾತ್ರ ಇನ್ನೂ ಗೊತ್ತಾಗುತ್ತಿಲ್ಲ. ಅದೇನೆಂದರೆ ಏನಾಗುತ್ತದೆ ಎಂದು ಗೊತ್ತಿದ್ದೂ ಅದನ್ನೇ ಮಾಡಲು ಹೊರಟಿರುವ ನಿನ್ನ ಉದ್ದೇಶವೇನು? ಸಾಧಿಸಲಿಕ್ಕಿರುವುದೇನು? ಮಹಾ ಮಾರಣ ಹೋಮಕ್ಕೆ ಸುವಸ್ತುಗಳನ್ನು ಕ್ರೋಢೀಕರಿಸಿ ಸಮಿಧೆಗಳನ್ನು ಒಗ್ಗೂಡಿಸಿ ಯಾಜ್ಞಿಗೆ ಸಹಕರಿಸುವ ಸೇವಂತಿಯಂತೆ (ಸೇವಂತಿ ಎಂದರೆ ಯಾಗ ಮಾಡುವವನ ಸಹಾಯಕ) ವ್ಯವಹರಿಸುತ್ತಿರುವ ನಿನ್ನ ಗುರಿ ಯಾವುದು? ಛೇ!!! ನಾನು ಮರುಳನಂತೆ ತರ್ಕಿಸುತ್ತಿದ್ದೇನೆ. ಯಾವುದಕ್ಕೂ ತಲೆಗೆಡಿಸದ ನಿನ್ನಲ್ಲಿ ಜಿಜ್ಞಾಸೆಯೆ! ನಾನೂ ಸಮರ್ಪಣೆ ಸಿದ್ಧನಾಗಿ ಸಮಿಧೆಯಾಗುವೆ. ಆದರೆ ಒಂದು ಮಾತು ಕೃಷ್ಣಾರ್ಜುನರು ಜೊತೆಯಾಗಿ ಬಂದರೂ ಹಸ್ತಿನಾವತಿಯ ಸಂರಕ್ಷಕನಾಗಿ ನಾನು ಆಯುಧಧಾರಿಯಾಗಿ ಇರುವವರೆಗೆ ಮೊಮ್ಮಕ್ಕಳಾದ ಪಾಂಡವರನ್ನು ಕೊಲ್ಲದೆ – ಕೌರವರಾದ ನಿಮ್ಮನ್ನು ಕೊಲ್ಲಲು ಬಿಡದೆ ರಕ್ಷಿಸುವ ಸರ್ವ ಪ್ರಯತ್ನ ಮಾಡುವೆ. ಏನು ಆಗಬೇಕೊ ಅದು ಆಗಲಿದೆ – ಆಗುತ್ತದೆಯೂ ಕೂಡ. ಹಾಗಾಗಿ ಇನ್ನು ಯೋಚಿಸಿ ಫಲವಿಲ್ಲ. ದೈವೇಚ್ಚೆಯಂತೆ ಎಲ್ಲವೂ ನಡೆಯಲಿ. ನಿನಗೆ ಯುದ್ದವೇ ಬೇಕು, ಅರ್ಥ – ಸ್ವಾರ್ಥದ ದಾಸನಾಗಿ ಕೈಗೊಂಡಿರುವ ಅನರ್ಥ ಯುದ್ದ ನಡೆಯಲಿ. ನೀನಿನ್ನು ಹೊರಡು – ಹೋಗು. ನಾಳೆ ಸೂರ್ಯೋದಯ ಕಾಲಕ್ಕೆ ಆಸ್ಥಾನಕ್ಕೆ ನಾನು ಬರುತ್ತೇನೆ. ಸ್ವಯಂ ನಾನೇ ಮೊದಲ ಸೇನಾಧಿಪತಿಯಾಗುತ್ತೇನೆ. ಇಂದಿನ ಉಳಿದ ನಿಶೆಯ ಭಾಗವನ್ನು ನಿಶ್ಚಿಂತನಾಗಿ ಕಳೆದುಕೋ” ಎಂದರು.

ದುರ್ಯೋಧನನು ಸಂತೋಷದಿಂದ “ಆಗಲಿ ಅಜ್ಜಾ! ನಿಮ್ಮಿಂದ ಪರಮಾನುಗ್ರಹವಾಯಿತು. ನೀವು ನಿಂತು ಹೋರಾಡಿದರೆ ಕೌರವರಾದ ನಮ್ಮನ್ನು ಕೃಷ್ಣನಿದ್ದರೂ ಆ ಪಾಂಡವರು ಏನೂ ಮಾಡಲಾಗದು, ಕೃತಾರ್ಥನಾದೆ” ಎಂದು ಪಾದಗಳನ್ನು ಮುಟ್ಟಿ ನಮಸ್ಕರಿಸಿ ಹೊರಟು ಹೋದನು.

ದುರ್ಯೋಧನ ಹೊರಟು ಹೋದ ಮೇಲೆ ಭೀಷ್ಮಾಚಾರ್ಯರಿಗೆ ಎಲ್ಲವೂ ಶೂನ್ಯವಾದಂತೆ ಭಾಸವಾಯಿತು. ಪುರುಷ ಪ್ರಯತ್ನದಿಂದ ಸರ್ವ ತ್ಯಾಗ – ಸಮರ್ಪಣೆಯಿಂದ ಹಿರಿಯರ ಸಾಮ್ರಾಜ್ಯವನ್ನು ಉಳಿಸಿ ಬೆಳೆಸಿದ ತನ್ನ ಪರಿಶ್ರಮ ತನ್ನ ಕಣ್ಮುಂದೆಯೆ ನೀರ ಮೇಲಣ ಹೋಮದಂತೆ ಕಾಣತೊಡಗಿತು. ಮನಸ್ಸು ಬಹುದೂರ ತನ್ನ ಹಿಂದಿನ ದಿನಗಳತ್ತ ಸರಿಯತೊಡಗಿತು.

ಮುಂದುವರಿಯುವುದು…

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page