ಭಾಗ 308
ಭರತೇಶ ಶೆಟ್ಟಿ ,ಎಕ್ಕಾರ್

ಕರ್ಣ ಅಮ್ಮನನ್ನು ಸಂತೈಸುವ ಪ್ರಯತ್ನ ಮಾಡತೊಡಗಿದನು. ಆಗ ಕುಂತಿ ದುಃಖ ತಡೆಯಲಾಗದೆ ತಾನು ಮಾತು ಮುಂದುವರಿಸುತ್ತಾ “ಕಂದಾ ವಿಧಿ ಕೆಲವೊಮ್ಮೆ ಬದುಕಿನಲ್ಲಿ ವಿಚಿತ್ರ ಆಟವಾಡುತ್ತದೆ. ನಾನು ಹೆತ್ತ ತಾಯಿ ತಂದೆಯರ ಬದಲಾಗಿ ಬೆಳೆದದ್ದು ಸಾಕುತಾಯಿ ತಂದೆಯ ಆಸರೆಯಲ್ಲಿ. ನಿನ್ನಂತೆಯೆ ನನಗೂ ಹೆತ್ತವರ ಪೋಷಣೆ ಸಿಗಲಿಲ್ಲ. ವಿವಾಹವಾದರೂ, ಆ ಕೂಡಲೆ ಪಾಂಡು ಚಕ್ರವರ್ತಿ ಮಾದ್ರ ದೇಶದ ಮೇಲೆ ಆಕ್ರಮಣವಾದ ಕಾರಣ ಸಹಾಯ ಮಾಡಲು ಸೇನಾ ಸಮೇತರಾಗಿ ಹೋದರು. ಬರುವಾಗ ಮಾದ್ರಿಯನ್ನು ವರಿಸಿ ಬಂದರು. ನವ ವಧುವಾಗಿದ್ದ ನನಗೆ ಸವತಿಯೂ – ತಂಗಿಯೂ ಆಗಿ ಮಾದ್ರಿ ಬಂದಳು. ಜೊತೆಯಾಗಿ ಸತಿಪತಿಗಳು ವನವಿಹಾರಕ್ಕೆ ಹೊರಟರೆ ಅಲ್ಲೂ ದುರಂತವೆ ಕಾದಿತ್ತು. ಹರಿಣಗಳಾಗಿ ಹಗಲು ಹೊತ್ತು ಮಿಲನಾಕಾಂಕ್ಷಿಗಳಾಗಿದ್ದ ಕಿಂದಮ ಋಷಿ ಹಾಗು ಅವರ ಪತ್ನಿ ಪಾಂಡು ಚಕ್ರವರ್ತಿಗೆ ಬೇಟೆಯ ಮೃಗಗಳಾದದ್ದು ದೌರ್ಭಾಗ್ಯವೆ ಸರಿ. ಋಷಿಯಾಗಿ ನಿಯಮ ಮೀರಿದ ದೋಷಕ್ಕೆ ಕಿಂದಮರು ಚಕ್ರವರ್ತಿಯಿಂದ ದಂಡಿತರಾದರೋ ಇಲ್ಲ ನನ್ನ ದುರ್ದೆಸೆ ಹಾಗೆ ಮಾಡಿಸಿತ್ತೋ ನಾನರಿಯೆ. ಪರಿಣಾಮ ಋಷಿವರ್ಯ ಹತಪ್ರಾಣರಾಗುವ ಮೊದಲು ಪಾಂಡು ಚಕ್ರವರ್ತಿಯನ್ನು ಶಪಿಸಿಯೆ ಬಿಟ್ಟರು. ಹೆಣ್ಣಿನ ಶರೀರ ಸ್ಪರ್ಶಿಸಿದರೆ ಆ ಕೂಡಲೆ ನಿನಗೆ ಮರಣ ಒದಗಲಿ ಎಂದು. ನವ ವಿವಾಹಿತ ಪಾಂಡುವಿಗೆ ಎರಡೆರಡು ಪತ್ನಿಯರಿದ್ದರೂ ಶಾರೀರಿಕ ಸುಖವಿಲ್ಲ. ನಾನು ಕನ್ಯೆಯಾಗಿಯೆ ಉಳಿದು ವನವಾಸಿಯಾಗಿ ಬದುಕಬೇಕಾಯಿತು. ಪಾಂಡುವಿನ ಒಪ್ಪಿಗೆ ಪಡೆದು, ಮಹರ್ಷಿ ದೂರ್ವಾಸರಿತ್ತ ದಿವ್ಯ ಮಂತ್ರ ಬಲದಿಂದ ನಾನು ಧರ್ಮಜ, ಭೀಮ ಮತ್ತು ಅರ್ಜುನನನ್ನು ಪುತ್ರರಾಗಿ ಪಡೆದು ಒಂದು ಮಂತ್ರವನ್ನು ಮಾದ್ರಿಗೆ ಉಪದೇಶಿಸಿ ಆಕೆಗೂ ಅಶ್ವಿನಿ ಕುಮಾರರಿಂದ ನಕುಲ ಸಹದೇವರು ಮಕ್ಕಳಾಗಿ ಅನುಗ್ರಹಿತರಾದರು. ನಂತರ ಕೊನೆಗಳಿಗೆ ನಿಯಂತ್ರಣ ತಪ್ಪಿದ ಪಾಂಡು ಚಕ್ರವರ್ತಿ ಮಾದ್ರಿಯನ್ನು ಬಯಸಿ ಶಾಪ ವಾಕ್ಯದಂತೆ ಹತ ಪ್ರಾಣರಾದರು. ಮರಳಿ ಮಕ್ಕಳೊಂದಿಗೆ ಹಸ್ತಿನೆಗೆ ಬಂದ ಬಳಿಕವೂ ಮಕ್ಕಳ ದಾಯಾದ್ಯ ಕಲಹ ಎಳವೆಯಲ್ಲೆ ಚಿಗುರೊಡೆಯುತ್ತಾ ವ್ಯಥೆಗೆ ಕಾರಣವಾಯಿತು. ಅರಗಿನಾಲಯ ಪ್ರಕರಣದಿಂದ ಒಮ್ಮೆಗೆ ನಾವು ಸುಟ್ಟು ಹೋದೆವೆಂದು ಉತ್ತರಕ್ರಿಯೆಯೂ ಆಗಿ ಹೋಯಿತು. ನಮಗೆ ಮತ್ತೆ ವನವಾಸ ಭಿಕ್ಷಾನ್ನವೆ ಗತಿಯಾಯಿತು. ಪಾಂಚಾಲದ ಸ್ವಯಂವರದ ಘಟನೆಯ ಬಳಿಕದ ವಿಚಾರ ತಿಳಿದಿದೆ ತಾನೆ? ದ್ಯೂತ ದುರಂತ, ಮಕ್ಕಳು ವನವಾಸ ಅಜ್ಞಾತವಾಸ – ನನಗೆ ವಿದುರನ ಮನೆಯಲ್ಲಿ ಏಕಾಂತವಾಸ. ಈಗ ಮತ್ತೆ ಲೋಕ ನಾಶಕ ಸಂಗ್ರಾಮದ ಭಯ. ನನ್ನ ಬದುಕಿನಲ್ಲೂ ಸುಖವಿರಲಿಲ್ಲ ಮಗನೇ!” ಎಂದು ಒಮ್ಮೆಗೆ ಬದುಕನ್ನು ಅವಲೋಕಿಸಿದಳು.
“ಅಮ್ಮಾ! ನೀನು ದುಃಖಿಸಬೇಡ. ನಿನ್ನ ದುಃಖ ನೋಡಿ ಸಹಿಸುವ ಕಠೋರ ಹೃದಯ ನನ್ನಲ್ಲಿಲ್ಲ. ನನ್ನ ಹುಟ್ಟಿಗೆ ಸೂರ್ಯದೇವನ ಅನುಗ್ರಹವಿದ್ದರೂ ಮಾಧ್ಯಮವಾದವಳು ನೀನಲ್ಲವೆ ತಾಯೇ! ಹೆತ್ತ ತಾಯಿಯ ಋಣದಿಂದ ಮುಕ್ತವಾಗಲು ಯಾವ ಮಗನಿಗೂ ಸಾಧ್ಯವಿಲ್ಲ. ನನ್ನ ತಾಯಿಯ ಸಮ್ಮಿಲನವಾದದ್ದು ಪವಿತ್ರ ಗಂಗಾನದಿಯ ತೀರದಲ್ಲಿ. ಸೂರ್ಯದೇವನನ್ನು ಸ್ತುತಿಸಿದ ಸಮಯದಲ್ಲಿ. ಇಷ್ಟು ಹೊತ್ತಾದರೂ ನೀನು ಪರಿಶುದ್ದ ಮಾತೃ ವಾತ್ಸಲ್ಯದ ಧಾರೆ ನನಗೆರೆದೆಯಲ್ಲಾ.. ನನ್ನ ಪಾಲಿಗೆ ನನ್ನ ಬಾಳಿಗೆ ಇಂದು ಪರ್ವದಿನ. ಹೆತ್ತವರು ಮಕ್ಕಳ ಬಗೆಯಲ್ಲಿ ಬಹುವಾಗಿ ಕನಸು ಕಂಡು ಮಹತ್ತರವಾದುದನ್ನು ಹರಸುತ್ತಾರೆ. ಆದರೆ ಮಕ್ಕಳ ಭಾಗ್ಯದಲ್ಲಿ ಎಷ್ಟಿದೆಯೋ ಅದಕ್ಕಿಂತ ಹೆಚ್ಚಿನದು ಲಭ್ಯವಾಗದು. ಹೆತ್ತವರಿಗೂ ಭಾಗ್ಯ ಬೇಕು. ಮಕ್ಕಳಿಗೂ ಯೋಗ ಬೇಕು. ಏನು ಮಾಡಲಿ ತಾಯೇ, ನನಗೂ ಅರ್ಜುನನಿಗೂ ಬದ್ದ ವೈರ ಬೆಳೆದು ಬಿಟ್ಟಿದೆ. ಪರಸ್ಪರ ಕೊಂದು ಕಳೆಯುವ ಪ್ರತಿಜ್ಞಾಬದ್ದರಾಗಿದ್ದೇವೆ. ಹಾಗಾಗಿ ಅರ್ಜುನ ಓರ್ವನನ್ನುಳಿದು ನಿನ್ನ ನಾಲ್ವರು ಪುತ್ರರ ಪ್ರಾಣ ಕಾಯುವೆ. ಒಂದೋ ಅರ್ಜುನ – ಇಲ್ಲಾ ಕರ್ಣ ಇಬ್ಬರಲ್ಲಿ ಒಬ್ಬರು ಉಳಿಯಬಲ್ಲರು. ಆಗಲೂ ಕುಂತಿಗೆ ಐವರು ಪುತ್ರರು. ಒಂದು ವೇಳೆ ಅರ್ಜುನನೇ ನನ್ನನ್ನು ಕೊಂದರೆ ಆಗ ಏನೇನೂ ವ್ಯತ್ಯಾಸವಾಗದು. ಹೇಗಿದ್ದರೂ ನಿನಗೆ ಐವರು ಮಕ್ಕಳ ಭಾಗ್ಯವೇ ಹೊರತು ಆರಾಗಲು ಸಾಧ್ಯವಿಲ್ಲ. ಚಿಂತೆ ಮಾಡಬೇಡ ತಾಯೇ, ನಿಶ್ಚಿಂತಳಾಗಿ ಹೋಗು” ಎಂದನು.
ಕರ್ಣನ ಖಂಡಿತ ವಾದದ ಮಾತು ಕೇಳಿ ಕುಂತಿಗೆ ಅತೀವ ದುಃಖ ಸಂಕಟ ಆದರೂ ಸ್ಥಿತಿಯನ್ನು ಒಪ್ಪಿಕೊಳ್ಳದೆ ನಿರ್ವಾಹವಿರಲಿಲ್ಲ. ಭಗವಂತ ನೀನೇ ಕಾಪಾಡಬೇಕೆಂದು ಮೊರೆಯಿಡುತ್ತಾ, ಪುತ್ರ ಕರ್ಣನನ್ನು ಬಿಗಿದಪ್ಪಿ ಮುದ್ದಿಸಿದಳು. ಕರ್ಣನ ಕಂಗಳ ಕಂಬಣಿಯನ್ನೊರೆಸಿ “ದೈವೇಚ್ಚೆ ಏನಿದೆಯೋ ಅದೇ ಆಗಲಿದೆ ಮಗನೇ, ನೀನಾಗಲಿ ನಾನಾಗಲಿ ಬದಲಿಸಲು ಸಾಧ್ಯವೇ ಹೇಳು!” ಎಂದು ದುಃಖತಪ್ತಳಾಗಿ ನುಡಿದು ಕ್ಷಣ ಹೊತ್ತು ಇಬ್ಬರೂ ಪರಸ್ಪರ ಕಣ್ತುಂಬ ನೋಡಿ ಮನತುಂಬಿಸಿ ತಮ್ಮ ತಮ್ಮ ದಾರಿ ಹಿಡಿದು ಹೊರಟರು.
ಇತ್ತ ಕೃಷ್ಣ ಉಪಪ್ಲಾವ್ಯ ಬಂದು ತಲುಪಿದ್ದಾನೆ. ಧರ್ಮರಾಯಾದಿಗಳು ಸಂಧಾನದ ವಿಚಾರ ಕೃಷ್ಣನ ಮುಖದಿಂದಲೆ ಕೇಳಿ ತಿಳಿಯಲು ಕಾತರರಾಗಿದ್ದಾರೆ…
ಮುಂದುವರಿಯುವುದು..



















