ಭಾಗ 305
ಭರತೇಶ್ ಶೆಟ್ಟಿ, ಎಕ್ಕಾರ್

ಶ್ರೀ ಕೃಷ್ಣ ಹಸ್ತಿನಾವತಿಗೆ ಸಂಧಾನಕ್ಕಾಗಿ ಬಂದು ಶತ ಪ್ರಯತ್ನ ಮಾಡಿದರೂ, ಸಂಗ್ರಾಮವೆ ಪರಿಹಾರ ಎಂದು ನಿರ್ಣಯಗೊಂಡು ಉಪಪ್ಲಾವ್ಯಕ್ಕೆ ಮರಳಿದ ಸುದ್ದಿ ತಿಳಿದ ಕುಂತಿದೇವಿ ಚಿಂತೆಗೀಡಾಗಿದ್ದಾಳೆ. ವಿದುರನೊಡನೆ ಸಮಾಲೋಚನೆ ಮಾಡಿದಾಗ ಭೀಷ್ಮ, ದ್ರೋಣಾಚಾರ್ಯರು ಕೌರವ ಪಕ್ಷದಿಂದಲೆ ಯುದ್ದ ಮಾಡುತ್ತಾರೆಂಬ ವಿಚಾರ ತಿಳಿಯಿತು. ಅವರೀರ್ವರೂ ಅಜೇಯರಾದರೂ ಪಾಂಡವರ ಬಗ್ಗೆ ಒಲವುಳ್ಳವರು. ಆದರೆ ಕುಂತಿಗೆ ತನ್ನ ಪುತ್ರನಾದ ಕರ್ಣನ ಬಗ್ಗೆಯೆ ಭಯ. ಅರ್ಜುನನನ್ನು ಕೊಲ್ಲುವೆನೆಂಬ ಪ್ರತಿಜ್ಞೆಯನ್ನೂ ಮಾಡಿದ್ದಾನೆ. ಕರ್ಣ – ಅರ್ಜುನ ಇಬ್ಬರೂ ನನ್ನ ಮಕ್ಕಳೇ ಹೌದು. ಯಾರು ಯಾರಿಂದ ಸತ್ತರೂ ನನಗೆ ಪುತ್ರ ವಿಯೋಗದ ದುಃಖ ಸಮಾನವಾಗಿ ಕಾಡಲಿದೆ. ಎಂತಹ ಸಂದಿಗ್ಧ ಪರಿಸ್ಥಿತಿ ಬಂದೊದಗಿದೆ. ಮಾತೆಯಾಗಿ ಯೋಚಿಸಿದರೆ ಪರಿಹರಿಸಲಾದೀತೆ? ಕರ್ಣನ ಬಳಿ ಹೋಗಿ ಸತ್ಯ ತಿಳಿಸಿ ಇಬ್ಬರನ್ನೂ ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಒಂದು ವೇಳೆ ಕರ್ಣ ಒಡಂಬಡದಿದ್ದರೇನು ಮಾಡಲಿ? ದೇವಾ! ಪರಿಣಾಮ ಎಂತಹ ಅನರ್ಥ ಕಾರ್ಯವಾದೀತು? ಛೇ! ರಾಜಮಾತೆಯಾಗಿ, ಹಸ್ತಿನೆಯ ಬಗ್ಗೆ ಯೋಚಿಸಬೇಕಾದ ಹೊಣೆಯಿದೆ. ಧರ್ಮಾಧರ್ಮದ – ನ್ಯಾಯಾನ್ಯಾಯದ ಕುರಿತಾಗಿ ತರ್ಕಿಸುವುದಾದರೆ ಪಾಂಡವರು ಗೆಲ್ಲಬೇಕು. ಕರ್ಣನನ್ನು ಇದಿರಿಸಲು ಅರ್ಜುನ ಸರ್ವ ಸಮರ್ಥನು ಹೌದಾದರೂ ಸೂರ್ಯ ಪುತ್ರ ಕರ್ಣನೂ ಅಪ್ರತಿಮ ವಿಕ್ರಮಿಯೇ ಹೌದು. ಧರ್ಮ ರಕ್ಷಣೆಗಾಗಿ ಅರ್ಜುನ ಉಳಿಯಬೇಕು. ಹಾಗಾಗಿ ನನ್ನಿಂದಾಗಬಹುದಾದ ಪ್ರಯತ್ನ ಮಾಡಬೇಕಾಗಿದೆ. ಹೀಗೆ ತರ್ಕಿಸುತ್ತಾ ಇದ್ದ ಕುಂತಿ ಕರ್ಣ ಏಕಾಂತದಲ್ಲಿ ಮಾತಿಗೆಲ್ಲಿ ಸಿಗಬಹುದು ಎಂದು ಯೋಚಿಸುತ್ತಿದ್ದಳು. ಸೂರ್ಯ ದೇವನಿಗೆ ಅರ್ಘ್ಯವೀಯಲು ನಿತ್ಯ ಗಂಗಾ ತೀರಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಹೋಗುತ್ತಾನೆ, ಅರ್ಘ್ಯವಿತ್ತು ಬ್ರಾಹ್ಮಣರಿಗೆ ದಾನ ನೀಡುವುದು ಕರ್ಣನ ದಿನಚರಿ ಎಂದು ತಿಳಿದ ಕುಂತಿ ನೇರವಾಗಿ ಮುಂಜಾನೆ ಅದೇ ಸಮಯಕ್ಕೆ ಗಂಗಾ ತೀರಕ್ಕೆ ನಡೆದಳು.
ಗಂಗಾತೀರಕ್ಕೆ ಅವಸರವಸರವಾಗಿ ಬಂದು ನೋಡಿದರೆ ಕರ್ಣ ಅರ್ಘ್ಯವೆತ್ತಿ, ಸೂರ್ಯನಿಗೆ ವಂದಿಸುತ್ತಾ ಸ್ಥಂಭದಂತೆ ನಿಂತಿದ್ದಾನೆ. ಧ್ಯಾನಸ್ಥನಾಗಿರುವ ಕರ್ಣನ ಹಿಂದೆ ತುಸು ದೂರದಲ್ಲಿ ನಿಂತಳು ಮಾತೆ. ಈಗ ಮುಂದೆ ಪಿತ, ಹಿಂದೆ ಮಾತೆ, ಮಧ್ಯೆ ಸುತನಾದ ಕರ್ಣ ನಿಂತಿದ್ದಾನೆ. ಗಂಗಾ ನದಿ ನಿರರ್ಗಳವಾಗಿ ಹರಿಯುತ್ತಿದೆ. ಕರ್ಣನೂ ನಿರಂತರ ಧ್ಯಾನದಲ್ಲಿ ತೊಡಗಿದ್ದಾನೆ. ಗಳಿಗೆಗಳು ಕೆಲವು ಸಂದರೂ ಕರ್ಣ ವಿಚಲಿತನಾಗದೆ, ಬಹಿರ್ಮುಖನೂ ಆಗದೆ ಧ್ಯಾನಸ್ಥನಾಗಿದ್ದಾನೆ. ಹೊತ್ತು ಏರುತ್ತಿದೆ. ಎಳೆ ಬಿಸಿಲ ಝಳ ಶಾಖವೇರಿಸುತ್ತಿದೆ. ಇತ್ತ ಕುಂತಿಯ ಮನದ ತುಮುಲ – ದುಗುಡವೂ ತಳಮಳಿಸುತ್ತಾ ಮನದೊಳಗೆ ತಾಪವಾಗಿ ಸುಡುತ್ತಿದೆ. ಬಹು ವರ್ಷದ ಹಿಂದೆ ಇದೇ ಗಂಗಾ ನದಿಯ ತೀರ ಪ್ರದೇಶದಲ್ಲಿ, ತನ್ನ ಪಿತ ಕುಂತಿ ಭೋಜನ ರಾಜ್ಯದಲ್ಲಿ ತಾನು ಹೆತ್ತ ಎಳೆ ಶಿಶುವನ್ನು ಲೋಕಪವಾದಕ್ಕೆ ಹೆದರಿ ತೊರೆದಿದ್ದಳು. ಹರಿದು ಹಿರಿದಾಗುತ್ತಾ ಬಂದ ನದಿಯಂತೆ ಇಂದು ಬೆಳೆದು ನಿಂತ ಮಗನೂ ಸಾಧಿಸಿ ಮಹಾಬಲಯುತನಾಗಿದ್ದಾನೆ. ಈ ಬೆಳವಣಿಗೆಯ ನಡುವೆ ಮಗನ ಹುಟ್ಟಿನ ಬಗ್ಗೆ ಎಲ್ಲಿ ಅನ್ಯರಿಗೆ ತಿಳಿಯುವುದೋ ಎಂಬ ಭಯ ಒಂದೆಡೆಯಾದರೆ, ಮಗನ ಬದುಕು ಏನಾಗಿದೆಯೊ? ಹೇಗಿದೆಯೊ? ಎಂಬ ವ್ಯಥೆಯೂ ಸೇರಿ ಸಮ್ಮಿಳಿತವಾಗಿ ಮನವನ್ನು ಕಲಕುತ್ತಿತ್ತು. ಹೇಗೊ ಹಿಡಿದಿಟ್ಟುಕೊಂಡು ಸಂಭಾಳಿಸಿ ಬದುಕು ಸಾಗಿಸಿದ ಕುಂತಿಗೆ ಇಂದು ತನ್ನ ತಪ್ಪಿನ ಶಿಕ್ಷೆಯೆಂಬಂತೆ ಮನೋ ವೇದನೆಯಾಗಿ ಹೊಸ ರೂಪ ತಳೆದಿದೆ. ತನ್ನ ಬಾಲಿಶ ಬುದ್ದಿಯ ಪ್ರಮಾದ ಈ ರೀತಿ ಬೆಳೆದು ಬಾಧಿಸಬಹುದೆಂಬ ಕಲ್ಪನೆಯೂ ಆ ಕಾಲದಲ್ಲಿ ಆಕೆಗಿರಲಿಲ್ಲ. ಆದರೂ ಈಗ ಉತ್ಪನ್ನವಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೆ ಬೇಕೆಂದು ಸುತ್ತ ತಿರುಗಿ ಯಾರಾದರೂ ನೋಡುವರೊ ಎಂದು ಭಯಗೊಳ್ಳುತ್ತಾ ಕಾಯತೊಡಗಿದಳು.
ಸೂರ್ಯನೂ ಕುಂತಿಯ ಅಪರಾಧಕ್ಕೆ ಮುನಿದಿದ್ದಾನೊ ಎಂಬಂತೆ ಬಿಸಿಲ ತಾಪ ಉರಿಯೇರಿ ಸುಡುತ್ತಿದೆ. ಮಗ ಕರ್ಣ ಇನ್ನೂ ಕದಲದೆ ಧ್ಯಾನ ನಿರತ ಆಗಿದ್ದಾನೆ. ಇವರಿಬ್ಬರ ಮನದ ತೊಳಲಾಟ ವಿಭಿನ್ನವಾದರೂ ಒಂದೇ ವಿಷಯದ ಎರಡು ಮಗ್ಗುಲುಗಳಂತಿದೆ. ಮಾತೆ ಮತ್ತು ಸುತನನ್ನು ಕಂಡು ಅವರ ಪರಿಸ್ಥಿತಿಗೆ ಗಂಗೆ ನಗುತ್ತಿದ್ದಾಳೊ ಎಂಬಂತೆ ಕುಲು ಕುಲು – ಗುಳು ಗುಳು ನಾದಗೈಯುತ್ತಾ ಹರಿಯುತ್ತಿದ್ದಾಳೆ. ಇತ್ತ ಧ್ಯಾನನಿರತ ಕರ್ಣನ, ಮತ್ತವನ ನಿರೀಕ್ಷೆಯಲ್ಲಿರುವ ಮಾತೆ ಕುಂತಿಯ ಇಬ್ಬರ ಕಂಗಳಲ್ಲೂ ಅಶ್ರುಧಾರೆ ಮತ್ತು ಸೂರ್ಯನ ಕಿರಣದುರಿಗೆ ಜೀವ ಜಲ ಬೆವರಾಗಿ ಇಳಿಯುತ್ತಾ ಗಂಗೆಯ ತಡಿಯಲ್ಲಿ ಸೇರುತ್ತಿದೆ. ಗಂಗೆಯ ಪ್ರವಾಹ ವೇಗದಿಂದ ಸಾಗುತ್ತಿದೆ.
ಬಹಳಷ್ಟು ಹೊತ್ತು ಕಳೆದು ಕರ್ಣ ತನ್ನ ಧ್ಯಾನ ಸಂಪನ್ನಗೊಳಿಸಿ ಸೂರ್ಯದೇವನಿಗೆ ಅರ್ಘ್ಯವಿತ್ತನು. ಬಳಿಕ ಪವಿತ್ರ ಗಂಗಾಜಲದಲ್ಲಿ ಮುಖ ತೊಳೆದು, ಒರೆಸಿಕೊಳ್ಳುತ್ತಾ ಹಿಂದಿರುಗಿ ನೋಡಿದರೆ ಕುಂತಿದೇವಿ ನಿಂತಿದ್ದಾಳೆ. ಈ ವರೆಗೆ ಪಾಂಡವರ ಮಾತೆಯಾಗಿದ್ದ ಆಕೆ ತನ್ನ ಹೆತ್ತಬ್ಬೆ ಎಂಬ ಸತ್ಯ ತಿಳಿದ ಬಳಿಕ ಮೊದಲ ದರ್ಶನ. ಕರ್ಣನಿಗೆ ತನ್ನನ್ನು ತಾನು ನಿಯಂತ್ರಿಸಲು ಕಷ್ಟವಾಗತೊಡಗಿತು. ಭಿನ್ನ ವಿಭಿನ್ನ ಭಾವನೆಗಳು ಮನದಾಳದಿಂದ ಅಪ್ಪಳಿಸುತ್ತಾ, ಹೃದಯವನ್ನು ಹಿಂಡತೊಡಗಿದವು. ಗಂಟಲು ಅಮುಕಿದಂತೆ ಉಸುರು ಗಟ್ಟುವ ರೀತಿ ನೋಯತೊಡಗಿತು. ಆದರೂ ಕ್ಷಾತ್ರ ವೀರನಲ್ಲವೆ, ಸೈರಿಸಿಕೊಳ್ಳುವ ಸರ್ವ ಪ್ರಯತ್ನ ಮಾಡುತ್ತಾ ಕುಂತಿಯ ಸನಿಹ ಬಂದು ನಿಂತನು. “ಪೂಜನೀಯ ಪಾಂಡವ ಮಾತೆಗೆ ರಾಧೇಯನ ಪ್ರಣಾಮಗಳು” ಎಂದು ಹೇಳಿ ನಮಸ್ಕರಿಸಿದನು. ಕರ್ಣನ ಮಾತುಗಳು ಆತನಿಗೆ ಪರಶುರಾಮರಿತ್ತ ಕಾಲಪೃಷ್ಟ ಧನುಸ್ಸಿನಿಂದ ಸೆಳೆದೆಳೆದು ಬಿಟ್ಟ ಶರಪುಂಜಗಳಂತೆ ಕುಂತಿಯನ್ನು ಚುಚ್ಚಿದವು. ತನ್ನವರಿಂದ ನೋವಾದರೆ ಅದರ ತೀವ್ರತೆ ಬಹುಪಾಲು ದ್ವಿಗುಣವಾಗುತ್ತದೆ. ಕುಂತಿಗೂ ಈಗ ಅದೇ ರೀತಿಯ ವೇದನೆಯಾಗುತ್ತಾ ಸಾವಿರ ಚೇಳುಗಳು ಏಕಕಾಲದಲ್ಲಿ ಕುಕ್ಕಿ ಕಡಿದಂತಾಗುತ್ತಿದೆ. ಕೈ ಕಾಲುಗಳು ನಡುಗಿದವು. ಕಂಠವು ಬಿಗಿದು ಕೊರಳ ಸೆರೆ ಹಿಗ್ಗಿದವು. ತುಟಿಗಳು ಅದುರತೊಡಗಿದವು. ಕಣ್ಣರೆಪ್ಪೆಗಳು ವಿಲವಿಲನೆ ಒದ್ದಾಡಿದವು. ಕಂಗಳು ಮಂಜಾದವು, ನಾಲಗೆ ಸ್ತಬ್ಧವಾಯಿತು. ಆದರೂ ಸಾವರಿಸಿಕೊಳ್ಳುತ್ತಾ ತನ್ನನ್ನು ತಾನು ನಿಯಂತ್ರಿಸಿಕೊಂಡಳು. ಗದ್ಗದಿತವಾದ ಸ್ವರದಲ್ಲಿ ಬಾಗಿ ನಮಿಸಿ ನಿಂತಿದ್ದ ತನ್ನ ಜೇಷ್ಠ ಪುತ್ರನ ಭುಜ ಆವರಿಸಿ ಎಬ್ಬಿಸಿದಳು.
ಮುಂದುವರಿಯುವುದು…






















































