31.9 C
Udupi
Thursday, April 2, 2026
spot_img
spot_img
HomeBlogಮಹಾಭಾರತ

ಮಹಾಭಾರತ

spot_imgspot_img

ಭಾಗ 302

ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೩೦೨ ಮಹಾಭಾರತ

“ಹೀಗೆ ನಾನು ತಿಳಿದ ವಿಚಾರ ಹೇಳಬೇಕಾದವರಿಗೆ ಹೇಳದೆ ಇದ್ದರೆ ಸರಿಯಾಗದು. ಇಂದು ಸಮಯ ಕೂಡಿ ಬಂದಿದೆ. ಹಾಗಾಗಿ ನಿನ್ನನ್ನು ಇಲ್ಲಿಯವರೆಗೆ ಕರೆದು ತರಬೇಕಾಯಿತು. ನಿನ್ನ ಜನ್ಮದ ವಿಷಯವು ಸೂಕ್ಷ್ಮವೂ ಗೌಪ್ಯವೂ ಆಗಿರುವ ಕಾರಣ ಇಲ್ಲಿಯವರೆಗೆ ಯಾರಿಗೂ ತಿಳಿಯದೆ ಉಳಿದಿದೆ. ಪಾಂಡವರ ಮಾತೆ ಕುಂತಿದೇವಿ ಕನ್ಯಾವಸ್ಥೆಯಲ್ಲಿ ಇರುವಾಗಲೆ ದೂರ್ವಾಸರಿಂದ ಐದು ದಿವ್ಯ ಬೀಜ ಮಂತ್ರಗಳ ಉಪದೇಶ ಆಕೆಗಾಯಿತು. ಮಕ್ಕಳಾಟಿಕೆಯ ಪ್ರಾಯ ಬಾಲಿಶವಾದ ಕುತೂಹಲ ಕೆರಳಿದ ಕಾರಣದಿಂದ ಆಕೆ ಚಪಲತೆಗೆ ಒಳಗಾದಳು. ಸುಲಭದಲ್ಲಿ ಕಣ್ಣೆದುರಿಗೆ ಆಕಾಶದಲ್ಲಿ ಕಾಣಿಸಿದ ಸೂರ್ಯದೇವನನ್ನು ಮಂತ್ರದ ಮೂಲಕ ಪ್ರಸನ್ನೀಕರಿಸಿದಳು. ಪರಿಣಾಮವಾಗಿ ಸೂರ್ಯನ ಅನುಗ್ರಹದಿಂದ ಒಂದು‌ ಮಗನನ್ನು ಪಡೆದಳು. ಮದುವೆಗೆ ಮೊದಲೆ ಮಗುವನ್ನು ಪಡೆದ ಅಚಾತುರ್ಯಕ್ಕೆ ಮರುಗಿ ದುಃಖಿತಳೂ ಭಯಭೀತಳೂ ಆದ ಕುಂತಿದೇವಿ ಲೋಕಾಪವಾದಕ್ಕೆ ಅಂಜಿದಳು. ಯೋಚಿಸಿದಳು – ಜನಿಸಿದ ಮಗುವನ್ನು ತಾನು ತನ್ನೊಂದಿಗೆ ಒಯ್ದು ಬೆಳೆಸಿದರೆ ಮಗು ಯಾರದ್ದು ಎಂಬ ಪ್ರಶ್ನೆಗೆ ಉತ್ತರವಿಲ್ಲ ಎಂದು ತೀರ್ಮಾನಿಸಿ, ಎದುರಿನಲ್ಲಿ ಹರಿಯುತ್ತಿದ್ದ ಲೋಕ ಪಾವನೆ ಗಂಗಾ ದೇವಿಯನ್ನು ಸಂಪ್ರಾರ್ಥಿಸಿ ಮಗುವಿನ ರಕ್ಷಣೆ ಬೇಡಿಕೊಂಡು ಬುಟ್ಟಿಯಲ್ಲಿಟ್ಟು ವಾಹಿನಿಯಲ್ಲಿ ತೇಲಿ ಬಿಟ್ಟಳು. ಆ ಮಗು ಬೋರ್ಗರೆದು ಹರಿಯುವ ಗಂಗಾ ನದಿಯಲ್ಲಿ ಸುರಕ್ಷಿತವಾಗಿ ತೇಲುತ್ತಾ ಅದಿರಥನ ಕೈ ಸೇರಿತು. ಆ ಸೂರ್ಯ ನಂದನ – ಕುಂತಿಯ ಜೇಷ್ಠ ಪುತ್ರನೇ ನೀನು ಕರ್ಣಾ! ಪಾಂಡವರ ತಾಯಿ ಕುಂತಿಯೇ ನಿನ್ನ ತಾಯಿ ಎಂದು ತಿಳಿದ ಕ್ಷಣದಿಂದ ನನ್ನ ಮನಸ್ಸು ನಿನಗಾಗಿ ವ್ಯಥೆಗೊಂಡಿತ್ತು” ಎಂದು ಹೇಳಿ ಕರ್ಣನ ಮುಖವನ್ನು ನೋಡ ತೊಡಗಿದನು.

ಕೃಷ್ಣನ ಮಾತುಗಳನ್ನು ಕೇಳುತ್ತಿದ್ದ ಕರ್ಣ ಯಾವುದೋ ಭಾವಲೋಕದಲ್ಲಿ ಮೈಮರೆತು ಮೌನ ತಳೆದಿದ್ದನು. ಕುಂತಿಯೇ ಹೆತ್ತ ಮಗ ನಾನೆಂದು ತಿಳಿದಾಗ, ಆ ಪುಣ್ಯಗರ್ಭೆಯ ಕಂದನೇ ನಾನು ಎಂಬ ಹೆಮ್ಮೆ ಮನಸ್ಸಿಗಾಯಿತು. ತಕ್ಷಣ ಮೊಲೆಯೂಡಿ ಸಾಕಿ ಸಲಹಿದ ರಾಧಾ ಮಾತೆಯೂ ಕಣ್ಮುಂದೆ ಸುಳಿದಳು. ಒಂದೆಡೆ ಸಂತಸ – ಒಂದೆಡೆ ದುಗುಡ, ಹೆಮ್ಮೆ – ತಿರಸ್ಕಾರ ಹೀಗೆ ಸಮ್ಮಿಶ್ರ ಭಾವಗಳು ಅಡಿಮೇಲಾಗುತ್ತಾ ಮನದಾಳದಿಂದ ಒರತೆಯಾಗಿ ಜರಿಯಂತೆ ಕಂಗಳಿಂದ ಅಶ್ರು ಧಾರೆಯಾಗಿ ಹರಿಯತೊಡಗಿತು. ಕರ್ಣನಿಗೆ ತನ್ನ ಕರುಳನ್ನು ಹಿಚುಕಿದಂತೆ – ಹೃದಯವನ್ನು ಹಿಂಡಿದಂತೆ, ಕೊರಳ ಸೆರೆಯನ್ನು ಅವುಕಿ ಒತ್ತಿದಂತೆ ಭಾಸವಾಗಿ ಮನಸ್ಸು ವಿಲವಿಲನೆ ಒದ್ದಾಡ ತೊಡಗಿತು. ನೋಡುತ್ತಿದ್ದ ಕೃಷ್ಣ, ಕರ್ಣನ ಎರಡೂ ಭುಜಗಳನ್ನು ಆವರಿಸಿ – ಆಧರಿಸಿ ಹಿಡಿದು ಅಲುಗಿ ಜಲ ತುಂಬಿ ಮಂಜಾಗಿದ್ದ ಕರ್ಣನ ಕಣ್ಣುಗಳನ್ನೂ, ಅದುರುತ್ತಿದ್ದ ಅಧರಗಳನ್ನೂ, ಬಿಸಿಯೇರಿದ್ದ ತನುವನ್ನೂ ಗಮನಿಸತೊಡಗಿದನು. ನೋಡುತ್ತಾ.. “ಕರ್ಣಾ! ನನ್ನ ಮಾತಿನ ಮೇಲೆ ವಿಶ್ವಾಸ ಇಲ್ಲವೇ ನಿನಗೆ?” ಎಂದು ಪ್ರಶ್ನಿಸಿದನು. ತೆರೆಯಲು ಒದ್ದಾಡುವ ತನ್ನ ಬಾಯಿ, ಸೆಳೆತಕ್ಕೆ ಹಿಡಿಯಲ್ಪಟ್ಟಿದ್ದ ನಾಲಗೆಯ ಮೇಲೆ ನಿಯಂತ್ರಣ ಸಾಧಿಸಲಾಗದೆ ತಲೆಯನ್ನು ಮೇಲೆ ಕೆಳಗೆ ಮಾಡುತ್ತಾ, ಕಣ್ಣುಗಳನ್ನು ಕಿರಿದುಗೊಳಿಸಿ, ತುಂಬಿದ್ದ ಕಣ್ಣೀರನ್ನೊಮ್ಮೆ ಇಳಿಯಗೊಡುತ್ತಾ, ತುಟಿಗಳನ್ನು ಕಚ್ಚಿ ಹಿಡಿದು “ಇದೆ” ಎಂಬಂತೆ ಆಂಗಿಕ ಭಾವದಲ್ಲಿ ಕರ್ಣ ಉತ್ತರಿಸಿದನು.

ವಾಸುದೇವ ಕೃಷ್ಣ ಮುಂದುವರಿಸುತ್ತಾ “ಅಯ್ಯಾ ಕರ್ಣಾ! ನೀನು ಭಾಗ್ಯವಂತನೇ ಹೌದು. ಧರ್ಮಜ್ಞರಾದ ಪಾಂಡವರಿಗೆ ಜೇಷ್ಠನೂ ಶ್ರೇಷ್ಟನೂ ಆಗಿರುವೆ. ಪ್ರಥಾದೇವಿಯ (ಕುಂತಿಯ) ಹಿರಿಯ ಮಗನೂ, ಸಕಲ ಶಾಸ್ತ್ರ, ವ್ಯಾಕರಣ ಅಧಿದೇವನೂ, ಸಕಲ ಶಕ್ತಿಗಳಿಗೆ ಮೂಲ ಸ್ವರೂಪನೂ, ಜಗದ ಬೆಳಕೂ ಆಗಿರುವ ಸೂರ್ಯ ದೇವನ ನಂದನನಾಗಿರುವೆ. ನೀನೂ ಕೂಡ ಸಕಲ ವೇದ ವೇದಾಂಗ, ಶಾಸ್ತ್ರಗಳನ್ನು ಭಾರ್ಗವರ ಮುಖೇನ ಅಧ್ಯಯನ ಮಾಡಿರುವ ಜ್ಞಾನ ಸಂಪನ್ನನಾಗಿರುವೆ. ಅನುಪಮವಾದ ಬುದ್ದಿಶಕ್ತಿ, ವಿಶಿಷ್ಟವಾದ ವಿಕ್ರಮ, ಧೀ ಶಕ್ತಿ ನಿನ್ನಲ್ಲೂ ಅಂತರ್ಗತವಾಗಿ ಇದೆ. ಹಾಗಾಗಿ ನಾನು ಹೇಳುವ ವಿಚಾರ ನಿನಗೆ ತಿಳಿದೇ ಇರುವಂತಹುದು – ಏನೆಂದರೆ, ಓರ್ವ ಕನ್ಯೆಯಲ್ಲಿ ಆಕೆಯ ವಿವಾಹ ಪೂರ್ವದಲ್ಲಿ ಬೇರೊಬ್ಬನಿಂದ ಜನಿಸುವ ಮಗನಿಗೆ ‘ಕಾನೀನ’ ಎನ್ನುತ್ತಾರೆ. ಓರ್ವ ಕನ್ಯೆಗೆ ಮದುವೆಯಾದವನಿಂದ ಹುಟ್ಟುವ ಮಗನಿಗೆ ‘ಸುಹೋಢ’ ಎನ್ನುತ್ತಾರೆ. ಈ ಇಬ್ಬರು ಪುತ್ರರಿಗೂ ಔರಸ ಪುತ್ರರಂತೆಯೆ ತಂದೆಯದ್ದಾದ ವಸ್ತುಗಳ ಮೇಲೆ ಸಮಾನ ಹಕ್ಕು ಬಾಧ್ಯತೆಗಳು ಇರುತ್ತವೆ. ಕ್ಷೇತ್ರಜ ಪುತ್ರರಿಗೆ ಒದಗಿ ಬರುವ ಈ ಅಧಿಕಾರವನ್ನು ಎಲ್ಲಾ ಶಾಸ್ತ್ರಗಳೂ – ಶಾಸ್ತ್ರಜ್ಞರೂ ಒಪ್ಪುತ್ತಾರೆ. ಆದುದರಿಂದ ಕಾನೀನನಾಗಿ ಕುಂತಿಯಲ್ಲಿ ಹುಟ್ಟಿದ ನಿನಗೆ ಪಾಂಡುವೆ ಪಿತನಾಗುತ್ತಾನೆ. ಯಾಕೆಂದರೆ ಕುಂತಿಯ ಕ್ಷೇತ್ರಜ ಪುತ್ರ ಪಾಂಡುವಿಗೂ ಸಮಾನ ಸಂಬಂಧಿ ಆಗುವೆ. ಅದರಂತೆ ಪಾಂಡವರು ನಿನಗೆ ಸೋದರರು. ಮಾತ್ರವಲ್ಲ ಈಗ ಪಾಂಡವ ಕೌರವ ಇಬ್ಭಾಗಗಳಿಗೂ ನೀನು ಜೇಷ್ಠನಾಗುವೆ. ಪಾಂಡುವಿನ ಸಾಮ್ರಾಜ್ಯಕ್ಕೆ ಕೌಂತೇಯರಲ್ಲಿ ಹಿರಿಯನಾದ ನೀನು ಹಕ್ಕುಳ್ಳವನಾಗುವೆ. ಅದು ನಿನಗೆ ಸೇರಬೇಕಾದದ್ದು. ತಂದೆಯ ಸಂಬಂಧದಿಂದ ಪಾಂಡವರೂ, ತಾಯಿಯ ಸಂಬಂಧದಿಂದ ವೃಷ್ಣಿಗಳು, ಯಾದವರು ನಿನ್ನವರಾಗುತ್ತಾರೆ. ಅಂದರೆ ಚಂದ್ರವಂಶ – ಯಾದವ ವಂಶ ಎರಡೂ ನಿನ್ನ ಬಾಂಧವರು. ನೀನು ನಮಗ್ಯಾರಿಗೂ ಅನ್ಯನಾಗದೆ ಆತ್ಮೀಯ ಬಂಧುವಾಗುವೆ. ಕರ್ಣಾ, ನೀನು ನನ್ನೊಂದಿಗೆ ಬಂದು ಬಿಡು. ಈ ಸತ್ಯವನ್ನು ಪಾಂಡವರ ಸಮಕ್ಷದಲ್ಲಿ ನಾನೇ ಹೇಳುವೆ. ಧರ್ಮರಾಜಾದಿ ಪಾಂಡವರೈವರೂ ನಿನಗೆ ತಮ್ಮಂದಿರಾಗಿ ಆದರದಿಂದ ನಿನ್ನನ್ನು ಅಣ್ಣನಾಗಿ ಸ್ವೀಕರಿಸುತ್ತಾರೆ. ನೀನು ಚಂದ್ರವಂಶದ ಸಿಂಹಾಸನ ಏರಿ ಎಡ ಬಲದಲ್ಲಿ ಪಾಂಡವ ಕೌರವರನ್ನು ಆಸ್ಥಾನಿಕರಾಗಿ ರಾಜಸಭೆ ನಡೆಸಬಲ್ಲ ಯೋಗ್ಯತಾವಂತನೂ – ಭಾಗ್ಯಶಾಲಿಯೂ ಆಗುವೆ. ನಾನೇ ನಿನಗೆ ಪಟ್ಟಾಭಿಷೇಕ ಮಾಡಿಸುವ ವ್ಯವಸ್ಥೆ ಮಾಡಿಸುವೆ. ಪಾಂಡವರು, ಪಾಂಚಾಲರು, ವೃಷ್ಣಿ ಕುಲದ ಯಾದವರು ಎಲ್ಲರೂ ಸೇರಿದ ಸಭೆಯಲ್ಲಿ ನೀನು ತಾರಾ ಮಂಡಲದಲ್ಲಿ ಶೋಭಿಸುವ ಪೂರ್ಣಿಮೆಯ ಚಂದ್ರನಂತೆ ಚಂದ್ರಾನ್ವಯದ ಮಹಾರಾಜನಾಗಿ ಶೋಭಿಸುವೆ. ನನಗೂ, ನಿನ್ನ ಇಷ್ಟ ಮಿತ್ರರಿಗೂ, ಮಾತೆ ಕುಂತಿಗೂ, ಅದಿರಥ – ರಾಧೆಗೂ, ಹೀಗೆ ಎಲ್ಲರಿಗೂ ಮಹದಾನಂದವೇ ಆಗಲಿದೆ” ಎಂದನು ಶ್ರೀ ಕೃಷ್ಣ.

ಕೃಷ್ಣನಿಂದ ಹೇಳಲ್ಪಟ್ಟ ಸಮಸ್ತ ವಿಚಾರಗಳನ್ನು ಗಹನವಾಗಿ ಯೋಚಿಸುತ್ತಾ, ಕರ್ಣ ಸುಮ್ಮನೆ ಸ್ಥಂಭದಂತೆ ನಿಂತಿದ್ದಾನೆ… ತನ್ನೊಳಗೆ ತರ್ಕಿಸತೊಡಗಿದನು…

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page