25.1 C
Udupi
Friday, April 3, 2026
spot_img
spot_img
HomeBlogಮಹಾಭಾರತ

ಮಹಾಭಾರತ

spot_imgspot_img

ಭಾಗ – 301

ಭರತೇಶ ಶೆಟ್ಟಿ, ಎಕ್ಕಾರ್

ಬಳಿಕ ಕೃಷ್ಣ ಎಲ್ಲರನ್ನೂ ಒಮ್ಮೆ ತಿರುಗಿ ನೋಡಿ ಆಸ್ಥಾನದಿಂದ ಸಾತ್ಯಕಿಯೊಂದಿಗೆ ಹೊರ ನಡೆದನು. ಶ್ರೀಕೃಷ್ಣನು ರಥವನ್ನೇರಿಕೊಳ್ಳುತ್ತಿರುವಾಗ ಅಲ್ಲಿಗೆ ಬಂದ ಧೃತರಾಷ್ಟ್ರ “ಕೃಷ್ಣಾ! ನನ್ನ ಮಕ್ಕಳ ಮೇಲೆ ನನಗೆ ಪ್ರೀತಿಯಿದೆ ನಿಜ. ಆದರೆ ಪ್ರತಿಯಾಗಿ ನನ್ನ ಮೇಲೆ ಅವರಿಗೆ ಗೌರವವಿಲ್ಲ. ಹಾಗೆಂದು ಪಾಂಡವರ ಬಗ್ಗೆ ನನ್ನಲ್ಲಿ ಯಾವುದೇ ರೀತಿಯ ದುರುದ್ದೇಶವೂ ಇಲ್ಲ. ಶಾಂತಿ ಸಂಧಾನಕ್ಕಾಗಿ ನನ್ನಿಂದಾಗುವ ಸರ್ವ ಪ್ರಯತ್ನವನ್ನೂ ಮಾಡಿದೆ. ಮಾತು ಕೇಳದ ಮಕ್ಕಳ ತಂದೆಯಾದ ನಾನು ಸೋತು ಹೋದೆ” ಎಂದು ಮರುಕ ವ್ಯಕ್ತ ಪಡಿಸಿದನು. ಕೃಷ್ಣ ಭೀಷ್ಮಾಚಾರ್ಯರನ್ನು ನೋಡುತ್ತಾ, “ಕೌರವ ಪಾಂಡವ ಪಕ್ಷ ಎಂಬ ಭೇದವೆಣಿಸದೆ ಇಬ್ಬರಿಗೂ ಒಮ್ಮತವಾಗಿ ಸಮ್ಮತಿಸಬಹುದಾದ, ಚಂದ್ರವಂಶಕ್ಕೆ ಶ್ರೇಯಸ್ಕರವಾಗುವಂತಹ ಸಂಧಿಯನ್ನು ಮಾಡುವ ಪ್ರಯತ್ನ ಮಾಡಿದ್ದೇನೆ. ನೀವು ಪ್ರತ್ಯಕ್ಷವಾಗಿ ನೋಡಿದ್ದೀರಿ. ಇನ್ನೇನಿದ್ದರೂ ನೀವು ಯೋಚಿಸಿ ತೀರ್ಮಾನ ಮಾಡಬೇಕು. ಹಾಗೆಂದು ಲೋಕ ಕಲ್ಯಾಣಾರ್ಥವಾಗಿ ನೀವು ಕೈಗೊಳ್ಳುವ ಯಾವುದೆ ನಿರ್ಣಯವನ್ನು ಒಪ್ಪಿ ಸಂಧಾನ ಮಾಡಿಕೊಳ್ಳಲು ಪಾಂಡವರು ಸದಾ ಸಿದ್ದರಾಗಿದ್ದಾರೆ. ನಾನಿನ್ನು ಹೊರಡುತ್ತೇನೆ” ಎಂದು ಹೇಳಿ ವಿದುರನ ಮನೆಯತ್ತ ರಥ ನಡೆಸಲು ಹೇಳಿದನು.

ವಿದುರನ ಮನೆಗೆ ಬಂದು ಅತ್ತೆ ಕುಂತಿಯನ್ನು ಕಂಡು ನಡೆದ ವಿಚಾರ ತಿಳಿಸಿದನು. “ಅತ್ತೆ, ಇನ್ಯಾವುದೇ ರೀತಿಯ ಪ್ರಯತ್ನಕ್ಕೆ ಅನ್ಯ ಮಾರ್ಗವಿರುವಂತೆ ಕಾಣುತ್ತಿಲ್ಲ. ಉಳಿದಿರುವುದೊಂದು ಮಾತ್ರ – ಅದು ಯುದ್ದ. ಧರ್ಮ ಗೆಲ್ಲುವ ಸಂಗ್ರಾಮದಲ್ಲಿ ಧರ್ಮ ಪಾಲಕರಾದ ನಿನ್ನ ಮಕ್ಕಳು ಜಯಿಸಲಿದ್ದಾರೆ” ಎಂದನು. ಕೇಳಿಸಿಕೊಂಡ ಕುಂತಿ “ಕೃಷ್ಣಾ! ಧರ್ಮರಾಯನಲ್ಲಿ ಹೇಳು – ಇನ್ನೂ ಆತ ಧರ್ಮ ಪಾಲಕನಾಗಿಯೆ ಮುಂದುವರಿಯಬೇಕು. ಆದರೆ ಇನ್ನು ಪಾಲಿಸಬೇಕಾದದ್ದು ಕ್ಷತ್ರಿಯ ಧರ್ಮ. ಪರಾಕ್ರಮದ ಹೋರಾಟವೆ ಭೂಷಣ. ಪರಿಣಾಮವಾಗಿ ಅವರ ಮಾತೆ ಒಪ್ಪೊತ್ತಿನ ಊಟಕ್ಕಾಗಿ ಪರರ ಆಶ್ರಯದಿಂದ ಮುಕ್ತಿ ಪಡೆಯುವಂತಾಗಲಿ ಮತ್ತು ಅವರ ಪತ್ನಿ ತಲೆಯೆತ್ತಿ ಸಂತೋಷದಿಂದ ಹೂವನ್ನು ಮುಡಿಯುವಂತಾಗಲಿ. ಎಂದು ನಾನು ಹೇಳಿ ಕಳುಹಿದ್ದೇನೆ ಎಂದು ತಿಳಿಸು” ಎಂದು ಕೇಳಿಕೊಂಡಳು. ಬಳಿಕ “ವಾಸುದೇವಾ! ನನ್ನ ಮಕ್ಕಳನ್ನು ನೀನೆ ರಕ್ಷಿಸಬೇಕು” ಎಂದು ಪ್ರಾರ್ಥಿಸಿದಳು. ಪ್ರಯಾಣಕ್ಕೆ ಶುಭ ಹಾರೈಸಿದಳು. ಕೃಷ್ಣ ಅಲ್ಲಿಂದ ಹೊರಟನು.

ಭೀಷ್ಮ, ದ್ರೋಣ, ಕೃಪ, ಅಶ್ವತ್ಥಾಮಾದಿ ಆಚಾರ್ಯರು, ಕರ್ಣ, ವಿದುರಾದಿಗಳೂ ಸೇರಿ ಕೃಷ್ಣನನ್ನು ಬೀಳ್ಗೊಡಲು ಸಿದ್ದರಾಗಿದ್ದರು. ಕೃಷ್ಣ ಹೊರಟು ಬರುತ್ತಿದ್ದಂತೆ ಅನುಸರಿಸಿ ತುಸು ದೂರ ಜೊತೆಯಾಗಿಯೆ ಅವರೂ ಹಿಂಬಾಲಿಸಿದರು. ಕೃಷ್ಣ “ನಾನಿನ್ನು ಮುಂದುವರಿಯುವೆ” ಎಂದಾಗ ಅವರೆಲ್ಲರೂ “ನಾವು ಹಿಂದಿರುಗುತ್ತೇವೆ” ಎಂದರು. ಕೃಷ್ಣ ಕರ್ಣನತ್ತ ತಿರುಗಿ ಬಳಿ ಬರುವಂತೆ ಕಣ್ಸಣ್ಣೆಯಲ್ಲಿಯೆ ಆಮಂತ್ರಿಸಿದನು.

ಕರ್ಣನೊಬ್ಬನನ್ನು ಮಾತ್ರ ಬಳಿ ಕರೆದು ತಾನಿರುವ ರಥವೇರಲು ಹೇಳಿದನು. ಹಾಗೆಯೆ ಸಹರಥಿಯಾಗಿ ಕರ್ಣನೊಂದಿಗೆ ಪುರದ ಹೊರಭಾಗದವರೆಗೆ ಬಂದು ರಥ ನಿಲ್ಲಿಸಿದನು. ರಥದಿಂದಿಳಿದು ಕರ್ಣನ ಕೈ ಹಿಡಿದು ನಡೆಯುತ್ತಾ ಏಕಾಂತವಾದ ಒಂದು ಸುಸ್ಥಳದಲ್ಲಿ ಕರ್ಣನನ್ನು ಬರಸೆಳೆದು ತನ್ನ ತೊಡೆ ಸೋಂಕಿನಲ್ಲಿ ಕುಳ್ಳಿರಿಸಿದನು. ಕರ್ಣನಿಗೋ ಪರಮಾಶ್ಚರ್ಯ. “ವಾಸುದೇವಾ, ನನ್ನಂತಹವನನ್ನು ಇಷ್ಟೊಂದು ಆದರದಿಂದ ಕರೆತಂದು ಆತ್ಮೀಯತೆ ತೋರುತ್ತಿರುವ ನಿನ್ನ ಉದ್ದೇಶ ಅರಿಯದಾಗಿದ್ದೇನೆ. ಅದೂ ನಿನ್ನೊತ್ತಿನಲ್ಲಿ ಕುಳ್ಳಿರಿಸಿಕೊಂಡಿರುವೆ. ಇಷ್ಟೊಂದು ಮಾನ್ಯತೆ ಪಡೆಯುವ ಯೋಗ್ಯತೆ ನನಗಿದೆಯೊ ತಿಳಿಯದು. ಈ ರೀತಿಯ ನಿನ್ನ ವರ್ತನೆಯ ಹಿಂದೆ ಇರುವ ಕಾರ್ಯ ಗೌರವವನ್ನೂ ಅರಿಯದಾಗಿದ್ದೇನೆ” ಎಂದನು.

ಶ್ರೀ ಕೃಷ್ಣನು “ಕರ್ಣಾ, ಕಾರಣವಿದ್ದೇ ನಿನ್ನನ್ನು ಜೊತೆಯಲ್ಲಿ ಕರೆ ತಂದಿದ್ದೇನೆ. ಮನಬಿಚ್ಚಿ ನಿನ್ನಲ್ಲಿ ಮಾತನಾಡಲಿಕ್ಕಿದೆ. ಈ ಪ್ರಪಂಚವೆ ಒಂದು ನಿಗೂಢ ರಹಸ್ಯ. ಇದರೊಳಗೆ ಎಷ್ಟೋ ರಹಸ್ಯಗಳು ಅಡಗಿವೆ. ಹಾಗೆಯೆ ನಿನ್ನ ಜನ್ಮವೂ ಒಂದು ಮಹಾನ್ ರಹಸ್ಯವನ್ನೇ ಹೊಂದಿದೆ. ನೀನು ಅನ್ಯಥಾ ಭಾವಿಸಲಾರೆ ಎಂದಾದರೆ ಒಂದು ವಿಚಾರ ನಿನ್ನಲ್ಲಿ ಕೇಳುವುದಕ್ಕೂ – ಹೇಳುವುದಕ್ಕೂ ಇದೆ. ಕರ್ಣಾ ನಿನ್ನ ನಿಜ ತಂದೆ ತಾಯಿಗಳು ಯಾರು? ಲೋಕವೂ ಈ ಸತ್ಯವನ್ನು ಇನ್ನೂ ತಿಳಿದಿಲ್ಲ. ನನಗೆ ಈ ವಿಚಾರದಲ್ಲಿ ಕುತೂಹಲ ಉಂಟಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ಕೆಲವೊಮ್ಮೆ ಹೀಗಾಗುವುದೂ ಉಂಟು! ನನ್ನ ಜೀವನದಲ್ಲಿ ಕೂಡ ನಿನ್ನಂತೆಯೆ ಇಂತಹ ಘಟನೆ ನಡೆದಿದೆ. ಕಂಸನ ವಧೆಯಾಗುವವರೆಗೂ ನಾನು ಯಶೋದ ನಂದಗೋಪರ ಮಗನಾಗಿದ್ದೆ. ಆ ನಂತರವಷ್ಟೆ ಲೋಕಮುಖಕ್ಕೆ ಸತ್ಯ ಪ್ರಕಟವಾದದ್ದು, ದೇವಕಿ ವಸುದೇವರ ಪುತ್ರ ನಾನು ಎಂದು. ಪ್ರಕೃತಿಯ ಮಡಿಲಲ್ಲೂ ಇಂತಹ ಕೌತುಕ ನಡೆಯುತ್ತದೆ. ಕೋಗಿಲೆ ಮೊಟ್ಟೆ ಇಡುವುದು ಕಾಗೆಯ ಗೂಡಲ್ಲಿ. ಕಾಗೆಯ ಮರಿಗಳ ಜೊತೆ ಮರಿಯಾಗಿ ಬೆಳೆಯುವ ಕೋಗಿಲೆ, ನಂತರ ತನ್ನದಾದ ಲಕ್ಷಣ ಗುಣ ವಿಶೇಷಗಳಿಂದ ಅದು ಕಾಗೆಯಲ್ಲ ಕೋಗಿಲೆ ಎಂಬ ಸತ್ಯ ಪ್ರಕಟವಾಗುತ್ತದೆ. ನಿನ್ನ ತೇಜಸ್ಸು, ವಿದ್ಯಾ ಬಲ, ಶೌರ್ಯ ವಿಕ್ರಮಗಳನ್ನು ಕಾಣುವಾಗಲೆ ನೀನೋರ್ವ ಸೂತ ಪುತ್ರ ಹೌದೋ ? ಎಂಬ ಪ್ರಶ್ನೆ ಉದ್ಭವಿಸುತ್ತಿತ್ತು. ಅಧಿರಥ ರಾಧೇಯರ ಪುತ್ರನಲ್ಲ. ಅವರ ಸಾಕು ಮಗ ನೀನು. ಅವರ ಪ್ರೀತಿ ವಾತ್ಸಲ್ಯದಲ್ಲಿ ಬೆಳೆದ ನೀನೂ ಸೂತ ಕುಲ ಪ್ರಸೂತನಂತೆ ಸೂತ ಪುತ್ರನೆಂದು ಕರೆಯಲ್ಪಟ್ಟೆ. ಆದರೆ ನಿನ್ನಲ್ಲಿ ಅಡಕವಾಗಿರುವ ಪ್ರಭೆ, ಕ್ಷಾತ್ರ ಲಕ್ಷಣಗಳು, ಸಾಹಸ ವಿಕ್ರಮಗಳನ್ನು ಕಾಣುವಾಗ ಒಂದಂತೂ ಸುಸ್ಪಷ್ಟ – ನೀನು ಯಾರೊ ಕ್ಷತ್ರಿಯಾಣಿ ಪುಣ್ಯಗರ್ಭೆಯ ಸುತ ಹೊರತು ನಿಜ ಸೂತನಲ್ಲ. ಪಾಂಡವರು ಹೇಗೆ ಹುಟ್ಟಿದರು? ದೂರ್ವಾಸರು ಒಲಿದು ಉಪದೇಶಿಸಿದ ದಿವ್ಯ ಮಂತ್ರ ಬಲದಿಂದ ಪಾಂಡು ಚಕ್ರವರ್ತಿಗೆ ಕ್ಷೇತ್ರಜ ಪುತ್ರರಾಗಿ ಹುಟ್ಟಿ ಪಾಂಡವರೆಣಿಸಿಕೊಂಡರು. ಪಾಂಡವ ಕೌರವರ ಶಸ್ತ್ರ – ಶಾಸ್ತ್ರ ವಿದ್ಯಾರ್ಜನೆ ಮುಗಿದು ಪರೀಕ್ಷಾ ರಂಗದಲ್ಲಿ ಆರ್ಜಿತ ವಿದ್ಯಾ ಕೌಶಲ ಏರ್ಪಡುವ ಸಮಯ ನೀನು ಪ್ರಕಟನಾದೆ. ಏಕಮೇವ ಧನುರ್ಧರ ಎಂದು ಅರ್ಜುನನ್ನು ಗುರು ದ್ರೋಣರು ಸಂಭೋದಿಸಿದ ಕಾಲದಲ್ಲಿ ಒಪ್ಪದ ನೀ‌ನು ಆಕ್ಷೇಪಿಸುತ್ತಾ ರಂಗ ಪ್ರವೇಶಿಸಿದೆ. ಪ್ರಕರಣ ಮುಂದುವರಿದು ನಿನಗೂ ಅರ್ಜುನನಿಗೂ ಇನ್ನೇನು ದ್ವಂದ್ವ ಏರ್ಪಡಲಿದೆ ಎಂದಾಗುವಷ್ಟರಲ್ಲಿ ಪ್ರದರ್ಶನ ನೋಡಲು ಪುರದ ಮಹಿಳೆಯರ ಜೊತೆ ಬಂದಿದ್ದ ಪಾಂಡವ ಮಾತೆ ಮೂರ್ಛೆ ತಪ್ಪಿ ಬಿದ್ದಳಂತೆ. ನಂತರವೂ ಕರ್ಣಾರ್ಜುನರಿಗೆ ಬೆಳೆಯತೊಡಗಿದ ದ್ವೇಷದ ಕುರಿತ ವಿಚಾರಗಳು ಮುನ್ನೆಲೆಗೆ ಬಂದಾಗ ಕುಂತಿ ಅತೀವ ದುಃಖಿತಳಾಗಿ ಚಿಂತೆಗೊಳಗಾಗುತ್ತಿದ್ದಳಂತೆ. ಎಂದೂ ಆಕೆ ನೀವೀರ್ವರ ನಡುವೆ ಯುದ್ದ ನಡೆಯಬಾರದೆಂದು ಬಯಸುತ್ತಿದ್ದಳು. ಈ ವೃತ್ತಾಂತಗಳನ್ನೂ ಸೂಕ್ಷ್ಮವಾಗಿ ಅರ್ಥೈಸಿ ಏನೊ ರಹಸ್ಯವಿದೆಯೆಂದು ಪರಿಶೀಲನೆಗೆ ಮುಂದಾದಾಗ ಸತ್ಯ ಸಂಗತಿ ತಿಳಿದು ಬಂತು.”

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page