ಭಾಗ 278
ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೨೭೯ ಮಹಾಭಾರತ
ಶತಾನಂದರು ಸವಿವರವಾಗಿ ಕೌರವ – ಪಾಂಡವ ದ್ವೇಷದ ವಿಚಾರ ಮಂಡಿಸಿ ತೀರ್ಮಾನವನ್ನು ಹಿರಿಯರ ಪಾಲಿಗೆ ಬಿಟ್ಟಾಗ ಭೀಷ್ಮಾಚಾರ್ಯರು ಎದ್ದು ನಿಂತು “ಭವಿಷ್ಯವನ್ನು ಚಿಂತನೆ ಮಾಡುತ್ತಾ ಸೂಕ್ತ ನಿರ್ಧಾರ ಕೈಗೊಳ್ಳಬೇಕಾದ ಸಮಯವಿದು. ಚಂದ್ರವಂಶದ ಏಳಿಗೆ ಮತ್ತು ಭವಿಷ್ಯವೀಗ ನಮ್ಮ ಕೈಯಲ್ಲಿದೆ. ಪರಿಸ್ಥಿತಿ ಕೈ ಮೀರಲು ಬಿಡದೆ ಪೂರ್ಣ ಪ್ರಮಾಣದ ನಿಯಂತ್ರಣ ಸಾಧಿಸುವ ಧೃಡ ನಿರ್ಧಾರ ಕೈಗೊಳ್ಳುವಲ್ಲಿ ಪಕ್ಷಪಾತ ಮಾಡದೆ, ನಮ್ಮ ಸಾಮ್ರಾಜ್ಯ, ವಂಶ, ಮತ್ತು ಭವಿಷ್ಯವನ್ನಷ್ಟೆ ಗಣನೆಗೆ ತೆಗೆದುಕೊಂಡು ನಿರ್ಣಯ ಪ್ರಕಟವಾಗಲಿ” ಎಂದರು.
ದ್ರೋಣಾಚಾರ್ಯರು ತನ್ನ ಅಭಿಪ್ರಾಯವಾಗಿ “ಈಗ ಪಾಂಡವರು ಮುಂದಾಗಿ ಪ್ರಸ್ತಾವನೆ ಕಳುಹಿಸಿರುವ ಕಾರಣ ನಿರ್ಧರಿಸುವ ಪೂರ್ಣಾಧಿಕಾರ ಮಹಾರಾಜರ ಕಕ್ಷೆಯಲ್ಲಿದೆ. ಈ ಅವಕಾಶವನ್ನು ಸದುಪಯೋಗ ಪಡಿಸದೆ, ಹಾಗೆಯೆ ಬಿಟ್ಟರೆ ಮಹಾ ಅನರ್ಥಕ್ಕೆ ಕಾರಣವಾದೀತು. ಹಾಗಾಗಿ ಉತ್ತರಾಧಿಕಾರಿಗಳಾಗಿರುವ ಈ ಎರಡೂ ವಿಭಾಗವನ್ನು ಸಂತೈಸಲು ಇದು ಸುವರ್ಣಾವಕಾಶ” ಎಂದರು.
ಕೃಪಾಚಾರ್ಯರು ಧ್ವನಿಗೂಡಿಸಿ “ಈಗ ಸಂಧಾನಕ್ಕೆ ಪಾಂಡವರು ನಮ್ಮ ಬಳಿ ಬಂದಿದ್ದಾರೆ. ಸಂಧಾನವೆ ಸೂಕ್ತ. ಸಂಗ್ರಾಮ ಸಿದ್ಧತೆ ನಡೆಸಿ ಸರ್ವನಾಶಕ್ಕೆ ಹೇತುವಾಗಬಲ್ಲ ನಡೆ ಹಸ್ತಿನಾವತಿಗೆ ಮಾರಕ. ನಮ್ಮ ಎದುರು ಹುಟ್ಟಿ ಬೆಳೆದ ಮಕ್ಕಳು ಅಧಿಕಾರ ಸ್ಥಾಪನೆಗಾಗಿ ಕಾದಾಡಿ ಸಾಯುವುದನ್ನು ಕಾಣುವ ಸ್ಥಿತಿ ತಲುಪಲು ಬಿಡದೆ ತಡೆಯುವ ಜಾಣತನ ಹಿರಿಯರಿಂದ ಪ್ರಕಟವಾಗಬೇಕು” ಎಂದರು.
ಮಂತ್ರಿ ವಿದುರ “ಜಗದ ನಿಯಮವೇನೆಂದರೆ ಯಾರು ಧರ್ಮ ಪಾಲಿಸುತ್ತಾರೊ ಅವರನ್ನು ಧರ್ಮವೆ ರಕ್ಷಿಸುತ್ತದೆ. ಯಾರು ಅಧರ್ಮ ಪಥ ಕ್ರಮಿಸುತ್ತಾರೊ ಅವರನ್ನು ಅದು ಆಕ್ರಮಿಸಿ ಅಂತ್ಯಗೊಳಿಸುತ್ತದೆ. ಹಾಗಾಗಿ ನಾವು ಧರ್ಮವನ್ನು ಪಾಲಿಸಲು ಮುಂದಾದರೆ ಕ್ಷೇಮ. ಪಾಂಡವರ ದಾಯಭಾಗ ಅವರಿಗೆ ನೀಡಿ ಸಂಭವನೀಯ ಮಹಾಸಂಗ್ರಾಮ ತಡೆಯಬೇಕು. ಇಲ್ಲವೆಂದಾದರೆ ಮುಂದೆ ಕ್ಷಣ ಕ್ಷಣ ನಮ್ಮ ತಪ್ಪು ನಿರ್ಣಯಕ್ಕಾಗಿ ಮರುಗಿ ಕೊರಗಿ ಸೊರಗುವಾಗ ಕಾಲ ಮುಂದೆ ಒದಗಿ ಮಹಾಕಾಲ ಸ್ವರೂಪ ಪಡೆದು ತನ್ನ ಫಲಿತಾಂಶ ತೋರುವುದು ನಿಸ್ಸಂಶಯ. ಸಕಾಲದಲ್ಲಿ ಸರಿಯಾದ ಸನ್ಮಾರ್ಗವನ್ನು ಸದ್ಬುದ್ಧಿಯಿಂದ ಸಾಧಿಸಿದರೆ ಸರ್ವರ ಸಂರಕ್ಷಣೆಯಾದೀತು. ವಿಪತ್ತನ್ನು ವಿಸ್ತಾರವಾಗಿ ವಿವರಿಸಿದರೂ, ವಿವಶರಾಗಿ ವಿವೇಚಿಸದೆ ವಿನಾಶಕಾರಿ ವಿಚಾರವನ್ನು ವಿಜ್ರಂಭಿಸಗೊಟ್ಟರೆ, ವಿಪರೀತವಾಗಿ ವಿದ್ರಾವಕ ವಿದ್ಯಮಾನಗಳಾದಾಗ ವಿಷಾದಪಡಬೇಕಾದೀತು. ಆದುದರಿಂದ ನ್ಯಾಯಯುತ ನಿರ್ಧಾರದಿಂದ ಸಾಮ್ರಾಜ್ಯವನ್ನು ಸಂರಕ್ಷಿಸುವ ಹೊಣೆಗಾರಿಕೆ ದಂಡಧರನಾದ ಮಹಾರಾಜ ನಿಮ್ಮ ಕೈಯಲ್ಲಿದೆ” ಎಂದನು.
ಇವರೆಲ್ಲರ ಮಾತುಗಳನ್ನು ಕೇಳುತ್ತಾ ಈ ವರೆಗೆ ಸುಮ್ಮನಿದ್ದ ಕರ್ಣನ ಸಹನೆ ಮೀರಿತು. ಎದ್ದು ನಿಂತು “ಏನು ನೀವೆಲ್ಲರೂ ಸೇರಿ ಪಾಂಡವ ಪಕ್ಷಪಾತಿಗಳಾಗಿ ವಾದ ಮಾಡುತ್ತಿದ್ದೀರಿ. ಹಸ್ತಿನಾವತಿಯಲ್ಲಿ ಸಮರ್ಥ ರಾಜನಿಲ್ಲದೆ ಅರಾಜಕತೆ ಬಂದಾಗ ಅನಿವಾರ್ಯತೆಗಾಗಿ ಮಹಾರಾಜ ಧೃತರಾಷ್ಟ್ರ ಬೇಕಾಗಿತ್ತು. ಈಗ ಅವರು ಮಹಾರಾಜರಾಗಿದ್ದಾರೆ. ಇನ್ನು ಮುಂದೆ ಕ್ರಮದಂತೆ ಅವರ ಮಕ್ಕಳು ಉತ್ತರಾಧಿಕಾರಿಗಳಾಗುತ್ತಾರೆ. ಹಾಗೂ ಪಾಂಡವರು ಸಮರ್ಥರು ಹೌದಾದಲ್ಲಿ ಸಾಧಿಸಿ ಅಧಿಕಾರ ಪಡೆಯಲಿ. ಯುದ್ದಕ್ಕೆ ಮುಂದಾಗುತ್ತಾರಾ? ಭಯವಿಲ್ಲ ನಾವೂ ಸಿದ್ಧರಾಗಿದ್ದೇವೆ, ಗೆದ್ದು ಸಾಮ್ರಾಜ್ಯ ಆಳುವ ವಿಶ್ವಾಸವಿದೆ” ಎಂದನು.
ಧೃತರಾಷ್ಟ್ರನಿಗೀಗ ಗೊಂದಲ ಉತ್ಪನ್ನವಾಯಿತು. ಒಂದೆಡೆ ಪಾಂಡವರ ಸಮರ್ಥನೆ, ಇನ್ನೊಂದೆಡೆ ತನ್ನ ಪುತ್ರಪ್ರೇಮ. ಮಹಾರಾಜನಾಗಿ ತನ್ನ ಆಪ್ತ ಸಂಜಯನನ್ನು ಕರೆದು “ಸಂಜಯಾ! ನೀನು ಪಾಂಡವರು ಇರುವಲ್ಲಿಗೆ ಹೋಗು. ನಾನು ಅವರಿಗೆ ಶುಭಾಶೀರ್ವಾದಗಳನ್ನು ಹರಸಿದ್ದೇನೆಂದು ಪಾಂಡವರಿಗೆ ತಿಳಿಸು. ಪಾಂಡು ಪುತ್ರರು ಪರಾಕ್ರಮಿಗಳೂ, ವಿನಯಶೀಲರೂ ಮೇಲಾಗಿ ಪರಮ ಧರ್ಮಿಷ್ಟರು. ಸ್ವಯಂ ಪಿತನಾಗಿ ನನಗೆ ನನ್ನ ಮಕ್ಕಳ ಮೇಲೆ ನಿಯಂತ್ರಣ ಸಾಧಿಸಲಾಗದೆ ಚಿಂತೆಗೊಳಗಾಗಿದ್ದೇನೆ. ನನ್ನ ಮಾತನ್ನು ಕೇಳಿ ಪಾಲಿಸಲು ಹಠವಾದಿಗಳಾದ ನನ್ನ ಪುತ್ರರು ತಯಾರಿಲ್ಲ. ಪ್ರಬುದ್ಧರೂ, ಚಂದ್ರವಂಶದ ಹಿತ ಚಿಂತಕರೂ ಆದ ಧರ್ಮರಾಯ ಮತ್ತು ಅವನ ಸಹೋದರರು ವಿವೇಚಿಸಲಿ. ಅವರಿಗೆ ಯಾವುದು ಉಚಿತ, ನಮ್ಮ ವಂಶಕ್ಕೆ ಶ್ರೇಯಸ್ಕರ ಎಂದು ಅನಿಸುವುದೋ ಅದರಂತೆ ಮುಂದುವರಿಯಲಿ ಎಂದು ನಾನು ಹೇಳಿ ಕಳುಹಿಸಿರುವೆ” ಎಂದು ತಿಳಿಸು ಎಂಬುವುದಾಗಿ ಆಜ್ಞೆ ಮಾಡಿದನು.
ಮಹಾರಾಜ ಧೃತರಾಷ್ಟ್ರನ ರಾಜಾಜ್ಞೆ ಮನ್ನಿಸಿ ಸಂಜಯ ಬರುತ್ತಾನೆ ಎಂಬ ಉತ್ತರ ಶತಾನಂದರಿಗೆ ನೀಡಿದರು. ಆದರೆ ಶತಾನಂದರು ಅಲ್ಲಿಯೆ ಉಳಿದಿದ್ದು ಹಿರಿಯರೊಡನೆ ಸಮಾಲೋಚನೆ ನಿರತರಾಗಿದ್ದರು. ಅವರ ಉದ್ದೇಶ ಕೌರವರ ಬೆಳವಣಿಗೆಯ ಅವಲೋಕನ ಆಗಿರಬಹುದು. ಅದೇ ಸಮಯ ರಾಯಭಾರಿಯಾಗಿ ಧೃತರಾಷ್ಟ್ರನ ಆದೇಶದಂತೆ ಸಂಜಯ
ಉಪಪ್ಲಾವ್ಯದತ್ತ ಹೊರಟಿದ್ದಾನೆ.
ಮುಂದುವರಿಯುವುದು…